ಕಾಂಕ್ರೀಟ್ ಕಾಡಾಗಿರುವ ನಮ್ಮ ಉದ್ಯಾನ ನಗರಿ ಬೆಂಗಳೂರಿಗೆ ಮತ್ತೆ ಅದೇ ಹೆಸರು ಬರಬೇಕಾದರೆ, ಎಲ್ಲೆಲ್ಲೂ ಹಸಿರನ್ನು ತುಂಬಿಸಿದರೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಏನೆಲ್ಲಾ ಮಾಡಬಹುದು ಎಂದು ವಿವರವಾಗಿ ಗಮನಿಸೋಣವೇ……?
ಬೆಂಗಳೂರು ಈಗ ಗಾರ್ಡನ್ ಸಿಟಿ ಅಲ್ಲಾ…. ಗಾರ್ಬೇಜ್ ಸಿಟಿ ಆಗಿಬಿಟ್ಟಿದೆ. ಕಾಮ್ ಸಿಟಿ ಅಲ್ಲಾ…. ಟ್ರಾಫಿಕ್ ಸಿಟಿ, ಪಬ್ ಸಿಟಿ ಆಗಿಬಿಟ್ಟಿದೆ. ಈ ರೀತಿ ಮಾತುಗಳು ಸರ್ವೇ ಸಾಮಾನ್ಯ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು ಅಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣವಾಗಿದೆ. ಬಿಡದೆ ಮಳೆ ಸುರಿದು ಬೆಂಗಳೂರಿನ ಭರ್ತಿ ಕೆರೆಗಳಂತಾಗಿದೆ. ಐಷಾರಾಮಿ ಕಟ್ಟಡಗಳಲ್ಲಿ ನೀರು ತುಂಬಿದೆ. ಬೆಂಗಳೂರನ್ನು ಬೈಯ್ಯಲು ಹಲವು ಅವಕಾಶಗಳು ಸಿಗುತ್ತವೆ.
ಒಟ್ಟಾರೆ ಬಹಳಷ್ಟು ಜನರಿಗೆ ಉದ್ಯೋಗ, ವ್ಯಾಪಾರ, ಜೀವನವನ್ನು ಕಲ್ಪಿಸಿದ ಬೆಂಗಳೂರನ್ನು ಎಲ್ಲರೂ ನಿಂದಿಸುವಂತಾಗಿದೆ. ಆದರೆ ಅಲ್ಲಲ್ಲಿ ಹಸಿರನ್ನು ಕಂಡಾಗ, ಇವರು ಸ್ಥಳದಲ್ಲಿ ಹಸಿರನ್ನು ತುಂಬಿಸಿರುವ ಮನೆಗಳನ್ನು ಕಂಡಾಗ ಮನದಲ್ಲಿ ಆಶಾಭಾವ ಚಿಗುರುತ್ತದೆ. ಮತ್ತೆ ನಮ್ಮ ಬೆಂಗಳೂರನ್ನು ಒಂದಿಷ್ಟಾದರೂ ಉದ್ಯಾನ ನಗರಿಯನ್ನಾಗಿ ಮಾಡಬಹುದೇನೋ ಎನ್ನುವ ಆಶಾಭಾವ ಮೂಡುತ್ತದೆ.
ಕಾಲು ಹಾದಿ ಅರ್ಥಾತ್ ಫುಟ್ ಪಾತಿನ ಪಕ್ಕಕ್ಕೆ ಉದ್ದಕ್ಕೂ ಮಿಂಚುತ್ತಿರುವ ತಿಳಿ ಹಸಿರಿನ ಗಿಡಗಳ ಸಾಲು, ಕಾಂಪೌಂಡನ್ನು ಪೂರ್ಣವಾಗಿ ಆವರಿಸಿರುವ ಹಸಿರು, ಅಲ್ಲಲ್ಲಿ ಕಳಸವಿಟ್ಟ ಹಾಗೆ ತಿಳಿ ಹಸಿರಿನ ಬಳ್ಳಿ ಹೊಯ್ದಾಟ. ಕಾಂಪೌಂಡಿನ ಮೇಲೆ ಜೋಡಿಸಿರುವ ಹೂವಿನ ಕುಂಡಗಳು, ಒಳಭಾಗದಲ್ಲಿ ಬೆಳೆಸಿರುವ ಮರಗಿಡಗಳು, ಒಂದಿಷ್ಟೂ ಸ್ಥಳವನ್ನೂ ವ್ಯರ್ಥ ಮಾಡದೇ ತುಂಬಿಸಿರುವ ಹಸಿರು ಮನೆಯವರಿಗೆ ಖಂಡಿತ ಶುದ್ಧ ಗಾಳಿಯನ್ನು ಕೊಡುವುದಂತೂ ನಿಜವೇ ಸರಿ.
ಮೊದಲು ಈ ಮನೆಯ ಪಾರ್ಶ್ವ ನೋಟವನ್ನು ಗಮನಿಸೋಣ. ಕಾಂಪೌಂಡಿನ ಮೇಲ್ಭಾಗದ ಗಿಡಗಳು ಇನ್ನೂ ವರ್ಣರಂಜಿತವಾಗಿ ಶೋಭಿಸುತ್ತದೆ.
ಇಲ್ಲೊಂದು ವಿಭಿನ್ನ ರೀತಿಯಲ್ಲಿ ಗಿಡಗಳನ್ನು ಬೆಳೆಸಿದ್ದಾರೆ. ಇಟ್ಟಿಗೆಗಳಲ್ಲಿ ಕಟ್ಟಿದ ಕಾಂಪೌಂಡಿನ ಮಧ್ಯೆ ಮಧ್ಯೆ ಸಾಲಾಗಿ ಕಲ್ಲುಹಾಸುಗಳನ್ನು ಜೋಡಿಸಿದಂತೆ ರೂಪಿಸಿ ಅದಕ್ಕೊಂದು ವಿಭಿನ್ನ ರೂಪವನ್ನು ಕೊಟ್ಟಿದ್ದಾರೆ. ಕಾಂಪೌಡಿನ ಮುಂದೆ ಕೆಳಭಾಗದಲ್ಲಿ ಮತ್ತು ಕಾಂಪೌಂಡಿನ ಮೇಲ್ಭಾಗದಲ್ಲೂ ಗಿಡಗಳ ಕುಂಡಗಳನ್ನು ತುಂಬಿಸಲಾಗಿದೆ. ಹಲವಾರು ಗಿಡಗಳ ಸಂಗಮವೇ ಅಲ್ಲಿದೆ. ಮತ್ತೊಂದೆಡೆ ನೂರಾರು ಕುಂಡಗಳನ್ನು ಪೇರಿಸಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹಸಿರನ್ನು ತುಂಬಿಸಿದ್ದಾರೆ.
ಚಿಕ್ಕ ಚೊಕ್ಕ ಹಸಿರು
ಕೆಲವು ಕಡೆ ಮನೆಯ ಮುಂದೆ ಇವರು ಚಿಕ್ಕ ಸ್ಥಳದಲ್ಲಿಯೇ ಸುಂದರವಾಗಿ ಒಂದು ಪುಟ್ಟ ಹಸಿರು ಲಾನ್, ಅದರ ಬಣ್ಣ ಬಣ್ಣದ ಹೂವಿನ ಗಿಡಗಳು ಮತ್ತು ಮೈ ತುಂಬಾ ಎಲೆಗಳನ್ನು ತುಂಬಿಸಿಕೊಂಡ ಗಿಡಗಳು, ಅವುಗಳನ್ನೂ ಸಹ ಆಗಾಗ ನಿರ್ವಹಣೆ ಮಾಡದಿದ್ದರೆ ಆ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಗುವುದಿಲ್ಲ.

ಮನೆಯೊಳಗೇ ಹಸಿರು
ನಗರದ ನಿವೇಶನಗಳು ಬಹಳ ದುಬಾರಿ. ಹೀಗಾಗಿ ಎಲ್ಲರಿಗೂ ಮನೆಯ ಮುಂದೆ ಹಸಿರು ತೋಟ ಮಾಡುವ ಭಾಗ್ಯ ಇರುವುದಿಲ್ಲ. ಆದರೂ ಸಾಧ್ಯವಿರು ಕಡೆಗಳೆಲ್ಲಾ ಹಸಿರನ್ನು ರೂಪಿಸುವುದು ನಮ್ಮ ಕರ್ತವ್ಯ. ಮನೆಯೊಳಗೇ ಬೆಳೆಯುವಂತಹ ಕೆಲವು ಸಸ್ಯಗಳನ್ನಿಡಲೂಬಹುದು. ಅದಕ್ಕೂ ಒಂದು ವಿಭಿನ್ನ ರೂಪವನ್ನು ನೀಡಬಹುದು. ಒಟ್ಟಾರೆ ಮನಸ್ಸು ಮಾಡಿದರೆ ನಮಗೆ ಅಗತ್ಯವಿರುವ ಶುದ್ಧ ಗಾಳಿಯನ್ನು ನಾವು ಬೆಳೆಸುವ ಹಸಿರಿನಿಂದಲೇ ಪಡೆಯಬಹುದು.

ನಗರದಲ್ಲಿನ ಉದ್ಯಾನವನಗಳು
ಇವೆಲ್ಲದರ ಜೊತೆ ಬೆಂಗಳೂರಿನಲ್ಲಿ ಬಹಳಷ್ಟು ಉದ್ಯಾನವನಗಳು ಇವೆ. ಅಲ್ಲದೆ, ಬಹಳಷ್ಟನ್ನು ನವೀಕರಣಗೊಳಿಸಲಾಗುತ್ತಿದೆ. ಇವರು ಸ್ಥಳದಲ್ಲಿಯೇ ಪಾರ್ಕಿನ ಮಧ್ಯ ಭಾಗಕ್ಕೊಂದು ಕುಳಿತುಕೊಳ್ಳಲು ತಾಣವನ್ನು ರೂಪಿಸಲಾಗಿರುತ್ತದೆ. ಅದರ ಸುತ್ತಲೂ ಹಸಿರು ಕಂಗೊಳಿಸುತ್ತಿರುತ್ತದೆ. ಸುಂದರ ನೋಟವನ್ನು ನೀಡಿ ನೋಡುಗರಿಗೆ ಆನಂದದ ಜೊತೆ ಶುದ್ಧ ಮತ್ತು ತಂಪಾದ ಗಾಳಿಯನ್ನು ನೀಡುತ್ತದೆ.
ಗಿಡಗಳ ಬಣ್ಣದ ಚದುರಂಗ
ಗಿಡಗಳೆಲ್ಲ ಹಸಿರೇ, ಆದರೂ ಅದರಲ್ಲೂ ವಿಭಿನ್ನತೆ ಇದೆ. ಆ ವಿಭಿನ್ನತೆಯನ್ನು ಸರಿಯಾಗಿ ಬಳಸಿಕೊಂಡಾಗ ಸೌಂದರ್ಯ ಮೂಡಿಸುವುದು ಸಾಧ್ಯ. ಉದಾ: ತಿಳಿ ಹಸಿರಿನ ಪಕ್ಕ ದಟ್ಟ ಹಸಿರು, ಅದರೊಂದಿಗೆ ತಿಳಿ ಗುಲಾಬಿ ಬಣ್ಣದ ಎಳೆಗಳ ಗಿಡಗಳು. ಅಲ್ಲಲ್ಲಿ ಸುಂದರ ಬೆಳ್ಳನೆಯ ಹೂಗಳನ್ನು ತನ್ನೊಡಲೊಳಗೆ ತುಂಬಿಕೊಂಡ ಎತ್ತರದ ಹೂ ಗಿಡಗಳು. ಈ ರೀತಿ ಇರುವ ಸ್ಥಳದಲ್ಲಿ ಕಣ್ಣು ತುಂಬಿಕೊಳ್ಳುವಂತೆ ಮಾಡುವ ಹಸಿರು ರಾಶಿ, ಜೊತೆಗೆ ನಡೆದು ಆಯಾಸವಾದವರಿಗೆ ದಣಿವಾರಿಸಿಕೊಳ್ಳಲು ಕಲ್ಲಿನ ಬೆಂಚುಗಳು. ಈ ಬೆಂಚುಗಳು ಅದೆಷ್ಟು ಕಥೆಗಳಿಗೆ ಸಾಕ್ಷಿಯಾಗಿವೆಯೋ ಏನೋ, ಅಂತೂ ನಗರೀಕರಣವಾಗಿ ನಗರದ ತುಂಬಾ ಎತ್ತರದ ಕಟ್ಟಡಗಳು ತುಂಬಿಕೊಂಡ ಮೇಲೆ ಎಲ್ಲಿ ಹಸಿರನ್ನು ನೋಡಿದರೂ ಕಣ್ಣು ತುಂಬಿಕೊಳ್ಳುವಂತೆ ಆಗುತ್ತದೆ.

ವಿದೇಶಗಳಲ್ಲಿ ಹಸಿರು
ಕೆಲವು ದೇಶಗಳಲ್ಲಿ ಸ್ಥಳಕ್ಕೆ ಯಾವುದೇ ಮಿತಿ ಇರುವುದಿಲ್ಲ. ಆದರೆ ಅಲ್ಲೂ ಕೆಲವು ಕಡೆ ನಿವೇಶನಗಳು ಬಹಳ ದುಬಾರಿ. ಉದಾಹರಣೆಗೆ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಿವೇಶನಗಳು ಬಹಳ ದುಬಾರಿ. ಆದರೂ ಅಲ್ಲಿಯೂ ಸಹ ಮನೆಯ ಮುಂದೆ ಹಸಿರು ಮತ್ತು ಹಿಂದೆ ನಮ್ಮ ಹಿತ್ತಲಿದ್ದಂತೆ ಮನೆಯ ಸುತ್ತಲಲ್ಲಿ ಎಲ್ಲಿ ಸಾಧ್ಯವೋ ಅಲ್ಲಿ ಚಿಕ್ಕದೊಂದು ಹೂದೋಟವನ್ನು ರೂಪಿಸಿರುತ್ತಾರೆ. ಯೂರೋಪಿನಲ್ಲೂ ಅಷ್ಟೆ. ಕೆಲವು ಮನೆಗಳ ಮುಂದೆ ಪುಟ್ಟದೊಂದು ತೋಟವನ್ನು ಮಾಡಿರುತ್ತಾರೆ. ಅಲ್ಲಿಯೂ ಹಸಿರು ಲಾನ್ ನಿಂದ ಹಿಡಿದು ಸಾಧ್ಯವಾದಷ್ಟು ಗಿಡಗಳನ್ನು ಅತ್ಯಂತ ಸುಂದರವಾಗಿ ರೂಪಿಸಿರುತ್ತಾರೆ.
ಇರುವುದೆಲ್ಲವ ಬಿಟ್ಟು……
ಅಂತೂ ಮಾನವ ಸ್ವಭಾವವೇ ಹಾಗೆ, ಇರುವುದೆಲ್ಲವನ್ನೂ ಬಿಟ್ಟು ಕಡೆಗಣಿಸಿ ನಂತರ ಅದನ್ನು ಮತ್ತೆ ಹುಡುಕುವುದು. ಒಟ್ಟಾರೆ ಈ ಹುಡುಕಾಟ ತಡಕಾಟದಲ್ಲಿ ಮನುಜನಿಗೆ ನಿರಾಳವಾಗಿ ಉಸಿರಾಡುವಷ್ಟು ಶುದ್ಧ ಗಾಳಿ ದೊರೆತರೆ ಸಾಕು. ಇದರ ನಿರಂತರ ಪ್ರಯತ್ನವೇ ಮರ, ಗಿಡ, ಕಾಡುಗಳನ್ನು ರಕ್ಷಿಸಿ ಸಾಧ್ಯವಾದಷ್ಟೂ ನಮ್ಮ ಸುತ್ತಮುತ್ತ ಹಸಿರನ್ನು ಮೂಡಿಸುವುದು. ನಮ್ಮ ಮುಂದಿನ ಜನಾಂಗಕ್ಕೆ ಶುದ್ಧ ಗಾಳಿಯನ್ನಾದರೂ ದೊರಕುವಂತೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ.
– ಮಂಜುಳಾ ರಾಜ್




 
  
         
    




 
                
                
                
                
                
               