ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿಕಾಂತ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದ್ದ  ​ನಿರ್ದೇಶಕ ಸುಂದರ್​ ಸಿ ಚಿತ್ರದಿಂದ ಹಿಂದೆ ಸರಿದಿದ್ದಾರೆ.

ಕೆಲ ಭಿನ್ನಾಭಿಪ್ರಾಯಗಳಿಂದ ಅವರು ತಲೈವಾ 173 ಸಿನಿಮಾದಿಂದ ಹೊರ ಬಂದಿರುವುದಾಗಿ ಘೋಷಿಸಿದ್ದು, ಈ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ. ಯಾವುದೇ ಕಾರಣ ಹೇಳದೇ ಇಂತಾದೊಂದು ಅವಕಾಶ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕೋರಿದ್ದಾರೆ.

ಸುಂದರ್ ಸಿ. ಈ ಹಿಂದೆ ಕೆಲ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ರಜನಿಕಾಂತ್ ನಟನೆಯ ‘ಅರುಣಾಚಲಂ’ ಚಿತ್ರವನ್ನು ದಶಕಗಳ ಹಿಂದೆ ಕಟ್ಟಿಕೊಟ್ಟು ಯಶಸ್ವಿಯಾಗಿದ್ದರು. ಹಾಗಾಗಿ ಸಹಜವಾಗಿಯೇ ತಲೈವಾ 173 ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಮೂಡಿತ್ತು. ಕಮಲ್ ಹಾಸನ್ ತಮ್ಮ ರಾಜ್‌ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ಅಧಿಕೃತವಾಗಿ ಸಿನಿಮಾ ಘೋಷಿಸಿದ್ದರು. “ಭಾರವಾದ ಹೃದಯದಿಂದ ನಾನು ನಿಮ್ಮೊಂದಿಗೆ ಕೆಲವು ಪ್ರಮುಖ ಸುದ್ದಿ ಹಂಚಿಕೊಳ್ಳುತ್ತಿದ್ದೇನೆ. ಅನಿರೀಕ್ಷಿತ ಮತ್ತು ಅನಿವಾರ್ಯ ಸಂದರ್ಭಗಳಿಂದಾಗಿ, ಪ್ರತಿಷ್ಟಿತ ತಲೈವಾ 173 ಸಿನಿಮಾದಿಂದ ನಾನು ಹಿಂದೆ ಸರಿಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ಸುಂದರ್ ಸಿ ತಮ್ಮ ಪತ್ರ ಆರಂಭಿಸಿದ್ದಾರೆ.

“ದಂತಕಥೆಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ಸಿನಿಮಾ ನಿಜಕ್ಕೂ ನನಗೆ ಒಂದು ಕನಸು ನನಸಾದಂತೆ ಆಗಿತ್ತು. ಜೀವನದಲ್ಲಿ, ನಮ್ಮ ಕನಸುಗಳಿಂದ ಭಿನ್ನವಾಗಿದ್ದರೂ ಸಹ, ನಮಗಾಗಿ ನಿಗದಿಪಡಿಸಿದ ಮಾರ್ಗವನ್ನು ನಾವು ಅನುಸರಿಸಬೇಕಾದ ಕ್ಷಣಗಳಿವೆ. ಇವರಿಬ್ಬರ ಒಡನಾಟವು ಬಹಳ ಹಿಂದಿನದು. ನಾನು ಅವರನ್ನು ಯಾವಾಗಲೂ ಅತ್ಯುನ್ನತ ಗೌರವದಿಂದ ಕಾಣುತ್ತೇನೆ. ಕಳೆದ ಕೆಲವು ದಿನಗಳಿಂದ ನಾವು ಹಂಚಿಕೊಂಡ ವಿಶೇಷ ಕ್ಷಣಗಳನ್ನು ನಾನು ಶಾಶ್ವತವಾಗಿ ಪಾಲಿಸುತ್ತೇನೆ. ಅವರು ನನಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದ್ದಾರೆ. ನಾನು ಈ ಅವಕಾಶದಿಂದ ಹಿಂದೆ ಸರಿಯುತ್ತಿದ್ದರೂ, ನಾನು ಅವರ ಮಾರ್ಗದರ್ಶನವನ್ನು ಪಡೆಯುತ್ತಲೇ ಇರುತ್ತೇನೆ. ಈ ಮಹೋನ್ನತ ಕೃತಿಗಾಗಿ ನನ್ನನ್ನು ಪರಿಗಣಿಸಿದ್ದಕ್ಕಾಗಿ ಅವರಿಬ್ಬರಿಗೂ ಧನ್ಯವಾದಗಳು” ಎಂದು ಸುಂದರ್ ತಿಳಿಸಿದ್ದಾರೆ.

ಇಂತಹದೊಂದು ಚಿತ್ರಕ್ಕಾಗಿ ಕಾಯುತ್ತಿದ್ದವರಿಗೆ ಈ ಸುದ್ದಿ ನಿರಾಸೆ ಮೂಡಿಸುತ್ತಿರುವುದಕ್ಕೆ ಕ್ಷಮಿಸಿ ಎಂದು ಮನವಿ ಮಾಡಿದ್ದಾರೆ. ಒಂದೇ ವಾರಕ್ಕೆ ನಿರ್ದೇಶಕ ಚಿತ್ರದಿಂದ ಹೊರಬರಲು ಕಾರಣ ಏನು? ಎನ್ನುವ ಚರ್ಚೆ ಆರಂಭವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸದ್ಯ ಸುಂದರ್ ಸಿ. ‘ಮೂಕುಟ್ಟಿ ಅಮ್ಮನ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ನಟ ದುನಿಯಾ ವಿಜಯ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ