ಬೆಂಗಳೂರಿನ ಬಸವನಗುಡಿಯಲ್ಲಿ ಐತಿಹಾಸಿಕ ಹಬ್ಬ ಕಡಲೆಕಾಯಿ ಪರಿಷೆ ಸೋಮವಾರದಿಂದ (ನ.17) ಪ್ರಾರಂಭವಾಗಲಿದೆ. ಪ್ರತಿ ವರ್ಷ 2 ದಿನಗಳ ಕಾಲ ನಡೆಸುತ್ತಿದ್ದ ಪರಿಷೆಯನ್ನು ಈ ಬಾರಿ 5 ದಿನಗಳಿಗೆ ವಿಸ್ತರಿಸಲಾಗಿದೆ.
ಮೊದಲ ಬಾರಿಗೆ 2 ದಿನಗಳ ಪರಿಷೆಯನ್ನು 5 ದಿನಗಳಿಗೆ ವಿಸ್ತರಿಸಲಾಗಿದ್ದು, ಪರಿಷೆಯನ್ನು ವಿಜೃಂಭಣೆಯಿಂದ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಪಾರಂಪರಿಕ ಜಾತ್ರೆ ಬಸವನಗುಡಿಯ ಕಡಲೆಕಾಯಿ ಪರಿಷೆ ಆಚರಿಸಿಕೊಂಡು ಬರಲಾಗುತ್ತಿದೆ. ಕಾರ್ತಿಕ ಮಾಸದ ಕೊನೆಯ ದಿನವಾದ ನ.17ರಿಂದ ಬಸವನಗುಡಿ ಕಡ್ಲೆಕಾಯಿ ಪರಿಷೆ ಆರಂಭವಾಗಲಿದ್ದು, 21 ರವರೆಗೆ ನಡೆಯಲಿದೆ. ಕಳೆದ ವರ್ಷ 5 ಲಕ್ಷಕ್ಕೂ ಅಧಿಕ ಜನರು ಪರಿಷೆಯಲ್ಲಿ ಸೇರಿದ್ದರು. ಈ ವರ್ಷವೂ 10 ಲಕ್ಷಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ.
ಬೆಳಗ್ಗೆ 10:30 ಕ್ಕೆ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಹಾಗೂ ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸ್ಥಳೀಯ ಶಾಸಕರು ಪರಿಷೆಯನ್ನು ಉದ್ಘಾಟಿಸಲಿದ್ದಾರೆ.
ಈ ಬಾರಿ ಶುಲ್ಕ ರಹಿತವಾಗಿ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದು, ಸಾವಿರಾರು ಅಂಗಡಿಗಳನ್ನು ಈಗಾಗಲೇ ಹಾಕಲಾಗಿದೆ. ಕಳೆದ ವರ್ಷ ಅಂದರೆ 2024ರಲ್ಲಿ ನಡೆದ ಕಡಲೆ ಕಾಯಿ ಪರಿಷೆಯಲ್ಲಿ ಸುಮಾರು 5 ಲಕ್ಷ ಜನ ಭಾಗವಹಿಸಿದ್ದರು. ಅಲ್ಲದೇ ಪ್ಲಾಸ್ಟಿಕ್ ಮುಕ್ತ ಪರಿಷೆ ಆಚರಿಸಲಾಗಿತ್ತು. ಅಂತೆಯೇ ಈ ವರ್ಷವೂ ಪ್ಲಾಸ್ಟಿಕ್ ಮುಕ್ತವಾದ ಪರಿಷೆಯಾಗಲಿದೆ. ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡಿದರೆ ಎತ್ತಡಂಗಿ ಮಾಡುವ ಎಚ್ವರಿಕೆಯನ್ನೂ ನೀಡಲಾಗಿದೆ.
ಈಗಾಗಲೇ ದೊಡ್ಡ ಬಸವಣ್ಣಗೆ ಹೂವಿನ ಅಲಂಕಾರ ಮಾಡಲಾಗಿದೆ. ಬಸವನಗುಡಿ ಸುತ್ತಮುತ್ತಲಿನ 9 ರಸ್ತೆಗಳಿಗೆ ದೀಪಾಂಲಕಾರ ಮಾಡಲಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಲಕ್ಷಾಂತರ ಜನ ಸೇರುವ ನಿರೀಕ್ಷೆಯಿಂದ 900 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.





