ದಕ್ಷಿಣ ಕನ್ನಡದ ಕುಗ್ರಾಮದಿಂದ ಮುಂಬೈ ಮಹಾನಗರಿಯ ನಿವಾಸಿಯಾದ ಅನಿತಾ ಪೂಜಾರಿ ತಾಕೋಡೆಯವರು ಏನೆಲ್ಲಾ ಗಣನೀಯ ಸಾಧನೆ ಮಾಡಿದ್ದಾರೆ ಎಂಬುದನ್ನು ವಿವರಾಗಿ ತಿಳಿಯೋಣವೇ……?
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ನಾಣ್ಣುಡಿ. ಹಾಗಾದರೆ ಯಶಸ್ವಿ ಮಹಿಳೆಯ ಹಿಂದೆ…? ಹೌದು, ಅಲ್ಲೂ ಇರುತ್ತಾರೆ. ಅದು ಆಕೆಯ ತಂದೆ, ಸಹೋದರ ಅಥವಾ ಕೈ ಹಿಡಿದ ಗಂಡ ಕೂಡ ಆಗಿರಬಹುದು. ಚಿಕ್ಕ ವಯಸ್ಸಿನಿಂದ ಯಾವುದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದಂಥ ಬಹಳಷ್ಟು ಮಹಿಳೆಯರಲ್ಲಿ ಮನೆಮಾಡಿರುವ ಅನಿಸಿಕೆಗಳಲ್ಲಿ ಒಂದು `ತಾನು ಸಾಧನೆ ಮಾಡುವುದು ಇನ್ನೂ ಬಹಳಷ್ಟಿದೆ. ಮದುವೆಯಾದರೆ ಗಂಡ, ಗಂಡನ ಮನೆಯವರು ಸಾಧನೆಗೆ ಪ್ರೋತ್ಸಾಹ ನೀಡದಿದ್ದರೆ…?’ ಎಂಬ ಹಿಂಜರಿಕೆ.
ಈ ಅಳುಕಿನಿಂದಲೇ ಬಹಳಷ್ಟು ಮಂದಿ ಮದುವೆಯೇ ಆಗದೆ ಉಳಿದಿರುವ ಉದಾಹರಣೆಗಳಿವೆ. ಆದರೆ ತನ್ನ ಬಾಲ್ಯವನ್ನು ಕಡುಬಡತನದಲ್ಲಿ ಕಳೆದರೂ, ಚಿಕ್ಕ ವಯಸ್ಸಿನಿಂದಲೂ ಸಾಹಿತ್ಯಾಸಕ್ತಿ ಬೆಳೆಸಿಕೊಂಡು, ಮದುವೆಯ ನಂತರ ದೂರದ ಮುಂಬೈನಲ್ಲಿ ಬದುಕು ಕಟ್ಟಿಕೊಂಡರೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಮಹಿಳೆಯೊಬ್ಬರ ಕಥೆ ಇಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲಿಯ ಮೂಡಬಿದಿರೆ ಸಮೀಪದ ತಾಕೋಡೆ ಎಂಬ ಕುಗ್ರಾಮದಲ್ಲಿ ಭವಾನಿ ಪೂಜಾರಿ ಮತ್ತು ಶ್ರೀನಿವಾಸ ಪೂಜಾರಿ ದಂಪತಿಗಳ ಐವರು ಮಕ್ಕಳಲ್ಲಿ ಅನಿತಾ ಪಿ. ತಾಕೋಡೆ ಮೊದಲನೆಯವರು. ಅವರು ತಮ್ಮ ಬಾಲ್ಯದ ದಿನಗಳನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ.
ಬೋಳುಗುಡ್ಡದ ಮೇಲೊಂದು ಸೂರು, ಸೋಗೆಯ ಮಾಡು, ಕಲ್ಪವೃಕ್ಷದ ಗರಿಗಳಿಂದ ಹೆಣೆದ ಗೋಡೆ, ಮಣ್ಣಿನ ನೆಲ, ಮೂಲೆಯಲ್ಲಿ ಹರಿದಾಡುವ ಹುಳು ಹುಪ್ಪಡಿಗಳು. ಆಗೊಮ್ಮೆ ಈಗೊಮ್ಮೆ ಬೆಚ್ಚಿ ಬೀಳಿಸುವಂತೆ ಮಾಡಿನ ಸಂದಿಯಲ್ಲಿ ಹರಿದಾಡುವ ಕೇರೆ ಹಾವುಗಳು. ಯಾಕಾಗಿ ಈ ಮಳೆ ಬರುತ್ತದೋ ಎನಿಸುವಂತೆ ಮಾಡುತ್ತವೆ. ಮಾಡಿನ ಅಂಚಿನಿಂದ ನೀರು ಸೋರುವಾಗ ಅಲ್ಲಲ್ಲಿ ಪಾತ್ರವೇ ಇಟ್ಟು ಉಳಿದ ಜಾಗದಲ್ಲಿ ಮುದುಡಿಕೊಂಡು, ರಾತ್ರಿ ಎಲ್ಲಿ ಇಲಿಗಳು ಕಚ್ಚಿ ಬಿಡುತ್ತಿವೆ ಎಂದು ಮೈ ತುಂಬಾ ಹೊದ್ದು ಮಲಗುತ್ತಿದ್ದ ಆ ದಿನಗಳು!
ಬಾಲ್ಯದ ಮರೆಯಲಾಗದ ದಿನಗಳು
ಕಷ್ಟದಲ್ಲೂ ಇಷ್ಟಪಟ್ಟು ಬದುಕುತ್ತಿದ್ದ ಅಂದಿನ ಬಾಲ್ಯದ ಆ ದಿನಗಳನ್ನು ನೆನೆಸಿಕೊಂಡಾಗ ಈಗ ಆ ದಿನಗಳೇ ಎಷ್ಟೊಂದು ಮಧುರ ಅನಿಸುವುದಿದೆ. ಬರೀ ಬಿಸಿ ಅನ್ನವನ್ನು ಉಂಡೆ ಕಟ್ಟಿ ಉಣಿಸುತ್ತಿದ್ದ ಅಮ್ಮನ ಕೈ ತುತ್ತಿನ ಸವಿ, ಅಮ್ಮನ ಮನದಾಳದ ಇಂಗಿತವನ್ನರಿತು `ಬರೀ ಗಂಜಿ ಉಪ್ಪಿನಕಾಯಿ ಕೊಡು ಅದೇ ನನಗಿಷ್ಟ,’ ಅಂತ ಕಣ್ಮುಚ್ಚಿ ತಿಂದ ಆ ದಿನಗಳು, ಬಡತನದಲ್ಲೂ ಏನೋ ಒಂದು ತೆರನಾದ ಹಿತವಿತ್ತು. ನಿರೂಪಣೆ ಕಾವ್ಯಮಯವಾಗಿ ಕಂಡರೂ ವೈಭವದ ಜೀವನದಲ್ಲಿ ತೇಲಾಡುವ ನಗರವಾಸಿಗಳ ಕಲ್ಪನೆಗೂ ನಿಲುಕದ ಈ ವಿವರಣೆ ಕಡು ಬಡತನದಲ್ಲಿ ಬೆಳೆದವರ ಬಾಲ್ಯದ ದಿನಗಳು ಹೇಗಿರುತ್ತವೆ ಎಂಬುದನ್ನು ಕಣ್ಣಿಗೆ ಕಟ್ಟಿದಂತಿದೆ.
ಮುಂದುವರಿದು, ಅಂತಹ ಕಡು ಬಡತನದಲ್ಲೂ, ಓದಿ ಏನನ್ನಾದರೂ ಸಾಧಿಸಬೇಕು ಎಂಬ ಛಲದಿಂದ ಕಳೆದಂತಹ ತಮ್ಮ ಬಾಲ್ಯದ ದಿನಗಳನ್ನು ಹೀಗೆ ವಿವರಿಸುತ್ತಾರೆ. ನಾನು ಶ್ರಮ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಳು. ಮನೆಯಲ್ಲಿ ಹಿರಿಯರು ಬೀಡಿ ಕಟ್ಟುವುದು, ಕಾಡಿಗೆ ಕಟ್ಟಿಗೆ ತರಲು ಹೋಗುವುದು, ಬೇಸಾಯದ ಕೆಲಸ, ಕೃಷಿ ಕೆಲಸ. ಹೀಗೆ ಎಲ್ಲರೂ ಎಲ್ಲದರಲ್ಲೂ ಪರಿಣತಿ ಹೊಂದಿದ್ದರು. ನಾನು ಹಿರಿಯ ಮಗಳಾಗಿದ್ದರಿಂದ ಎಲ್ಲ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತಿದ್ದರು.
ನಾನು ಎರಡನೇ ತರಗತಿಯಲ್ಲಿ ಇರುವಾಗ ದೊಡ್ಡಪ್ಪ ನನ್ನ ಅಪ್ಪನನ್ನು ಕೇರಳಕ್ಕೆ ಕರೆದುಕೊಂಡು ಹೋದರು. ಆನಂತರ ನನ್ನ ಅಮ್ಮ ಮತ್ತು ತಂಗಿ ಮುಲ್ಕಿಯ ಪುನಾರೂರಿನ ಮನೆಯಿಂದ ತಾಕೋಡೆಗೆ ವಾಪಸ್ ಬಂದು ಅಲ್ಲಿ ಚಿಕ್ಕದೊಂದು ಗುಡಿಸಲು ನಿರ್ಮಿಸಿ ವಾಸಿಸಲು ಆರಂಭಿಸಿದೆ. ಎರಡನೇ ತರಗತಿಯಿಂದಲೇ ಅಮ್ಮ ಬೀಡಿ ಕಟ್ಟುವಾಗ ನೂಲು ಹಾಕಿ ಕೊಡುತ್ತಿದ್ದೆ, ಬೀಡಿ ಕಟ್ಟು ಹಿಡಿಯುತ್ತಿದ್ದೆ. ನಾಲ್ಕನೇ ತರಗತಿಯಿಂದ ನಾನೇ ಸ್ವತಂತ್ರವಾಗಿ ಬೀಡಿ ಕಟ್ಟಲಾರಂಭಿಸಿದೆ. 5ನೇ ತರಗತಿಯಲ್ಲಿ ಇರುವಾಗ ಕಟ್ಟಿದ ಬೀಡಿಯನ್ನು ಒಪ್ಪವಾಗಿ ಕಟ್ಟು ತಿರುಗಿಸಲು ಕಲಿತೆ.
ಬೆಳಗ್ಗೆ 8.30ಕ್ಕೆ ಶಾಲೆಗೆ ಹೊರಡುವುದಾದರೆ ನನ್ನ ಗೆಳತಿಯರು ಬರುವವರೆಗೂ ಅಮ್ಮನ ಪಕ್ಕದಲ್ಲಿ ಕುಳಿತು ಬೀಡಿಗೆ ಸಹಕರಿಸುತ್ತಿದ್ದೆ. ಬೀಡಿ ಜಾಸ್ತಿ ಕಟ್ಟಿದರೆ ವಾರದಲ್ಲಿ ಹೆಚ್ಚಿನ ಹಣ ಸಿಗುತ್ತಿತ್ತು. ವಾರಕ್ಕೊಮ್ಮೆ ಅಮ್ಮ ಶುಕ್ರವಾರ ಸಂತೆಗೆ ಹೋಗಿ ನಮಗೆ ತಿಂಡಿ, ಕಿವಿಯೋಲೆ, ಬಳೆಗಳನ್ನು ತರುತ್ತಿದ್ದ ನೆನಪು ಇಂದಿಗೂ ಹಸಿರಾಗಿದೆ.
ತಂದೆ ಕೇರಳದಲ್ಲಿ ಇದ್ದ ಅವರ ಅಣ್ಣನ ಹೋಟೆಲ್ ನಲ್ಲಿ ಕೆಲಸಕ್ಕಿದ್ದು, ಆರು ತಿಂಗಳಿಗೊಮ್ಮೆ ಮಾತ್ರ ಊರಿಗೆ ಬಂದು, ಕೆಲವೇ ದಿನ ಇದ್ದು ವಾಪಸ್ ಹೋಗುತ್ತಿದ್ದರು. ಮನೆಯ ಹಿರಿಮಗಳು ನಾನಾಗಿದ್ದುದರಿಂದ ನನಗೆ ಜವಾಬ್ದಾರಿಗಳು ಹೆಚ್ಚಿದ್ದವು. ಸಾಕಷ್ಟು ಕೆಲಸ ಇತ್ತು. ಏಳನೇ ತರಗತಿ ತೇರ್ಗಡೆ ಹೊಂದಿ ಹೈಸ್ಕೂಲ್ ಸೇರುವ ಹಂತದಲ್ಲಿದ್ದಾಗ ಅಮ್ಮನಿಗೆ ಕ್ಷಯ ರೋಗ ಆವರಿಸಿತ್ತು. ಅವರು ತುಂಬಾ ಕೃಷರಾಗಿದ್ದರು.

ಅಮ್ಮನೊಂದಿಗೆ ಹೆಚ್ಚಿನ ಒಡನಾಟ
ಅಮ್ಮನ ಸುದೀರ್ಘ ಕಾಯಿಲೆಗೆ 90 ಇಂಜೆಕ್ಷನ್ ಕೊಡಿಸಬೇಕಿತ್ತು. ಪ್ರತಿದಿನ ನನ್ನ ಸೋದರಮಾವ ಅವರನ್ನು ಒಂದೂವರೆ ಕಿ.ಮೀ. ದೂರದಲ್ಲಿದ್ದ ಅಂಗನವಾಡಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿಗೆ ಸರ್ಕಾರಿ ವೈದ್ಯರು ಬಂದು ಚುಚ್ಚುಮದ್ದು ನೀಡುವ ವ್ಯವಸ್ಥೆ ಇತ್ತು. ಅಮ್ಮನಿಗೆ ಏನಾಗಿ ಬಿಡುತ್ತದೋ ಎನ್ನುವ ಭಯ ನನಗೆ ಒಂದೆಡೆಯಾದರೆ, ವಿದ್ಯಾಭ್ಯಾಸದ ಜೊತೆಗೆ ಒಡಹುಟ್ಟಿದ ನಾಲ್ವರ ಜವಾಬ್ದಾರಿಯೂ ನನ್ನ ಮೇಲಿತ್ತು. ಮನೆ ಕೆಲಸದ ಜವಾಬ್ದಾರಿ ಎಲ್ಲವನ್ನೂ ನಾನೇ ವಹಿಸಿಕೊಳ್ಳುವ ಅನಿವಾರ್ಯತೆ ಒಂದೆಡೆ, ತಮ್ಮಂದಿರು ಆಗಿನ್ನೂ ಚಿಕ್ಕವರು. ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವಂತಿರಲಿಲ್ಲ. ಅಜ್ಜಿಯೇನೋ ಸ್ವಲ್ಪ ಮಟ್ಟಿಗೆ ಸಹಕರಿಸುತ್ತಿದ್ದರು. ಅವರ ವಯಸ್ಸಿನ ಕಾರಣದಿಂದ ಅವರಿಂದಲೂ ಅಷ್ಟೇನು ಉಪಯೋಗ ಆಗುತ್ತಿರಲಿಲ್ಲ. ಇಂತಹ ಒತ್ತಡಗಳ ನಡುವೆ ಸಮಾಧಾನ ತಂದ ವಿಷಯವೆಂದರೆ, ಅಮ್ಮನ ಚಿಕಿತ್ಸೆ ಮುಗಿದು, ದೇವರ ದಯದಿಂದ ಅಮ್ಮ ಗುಣಮುಖರಾದರು.
ಎಷ್ಟೇ ಕಷ್ಟವಾದರೂ ವಿದ್ಯಾರ್ಜನೆಯ ನನ್ನ ಹಂಬಲ ಜೀವಂತವಾಗಿತ್ತು. ಅಂತೂ ಇಂತೂ ಹೈಸ್ಕೂಲ್ ಮೆಟ್ಟಿಲು ಹತ್ತಿದೆ. ಹೈಸ್ಕೂಲ್ ಅಂದಾಗ ಹಿಮಾಲಯ ಪರ್ವತದ ನೆನಪು! ಪ್ರತಿ ದಿನ ಅದನ್ನೇರುವುದು ನಮ್ಮ ಪಾಲಿಗೆ ಒಂದು ಸಾಹಸವೇ ಸರಿ. ಮನೆಯಿಂದ ಸುತ್ತು ಬಳಸಿನ ದಾರಿ ಮಾತ್ರವಲ್ಲದೆ, ಏರಿಕೆಯ ದಾರಿಯಲ್ಲೇ ಒಂದೂವರೆ ಕಿ.ಮೀ.ನಷ್ಟು ನಡೆದ ಮೇಲೆ ಶಾಲೆಯ ಆವರಣ ಸಿಗಬೇಕಾದರೆ 127 ಮೆಟ್ಟಿಲು ಹತ್ತಬೇಕಿತ್ತು. ಇಂತಹ ದುರ್ಗಮ ದಾರಿ ವಾಸಿಸುವುದರ ಜೊತೆಗೆ 9 ಮತ್ತು 10ನೇ ತರಗತಿ ಇಡೀ ವರ್ಷ ಎರಡು ಬ್ಯಾಗ್ ಗಳ ಭಾರ ಬೇರೆ ಹೆಗಲ ಮೇಲಿರುತ್ತಿತ್ತು.
ಶಾಲೆಯಲ್ಲಿನ ಚಟುವಟಿಕೆಗಳು
ಆಟ, ಓಟ, ಪಾಠ, ಹಾಡು, ಕುಣಿತ ಎಲ್ಲವೂ ಬೇಕು. ನಾನೇ ಮುಂದಿರಬೇಕು ಎನ್ನುವ ಹಟ. ಶಾಲೆಯ ಎಲ್ಲಾ ಅಧ್ಯಾಪಕಿಯರಿಗೆ ನಾನೆಂದರೆ ಅಚ್ಚುಮೆಚ್ಚು. ನನ್ನ ಜೊತೆಗೆ ಸ್ನೇಹಿತೆಯರ ಒಂದು ಬಳಗವಿತ್ತು. ಬೇಸಿಗೆ ಬಂದರೆ ಮುಗಿಯಿತು, ಸಂಜೆ ಹೊತ್ತು ನಮ್ಮ ದಂಡು ನದಿಯ ತೀರದಲ್ಲಿ ಕಟ್ಟಿಗೆ ಕಡಿದು ಅದನ್ನು ಹೊರೆಯಾಗಿ ಕಟ್ಟಿಟ್ಟು, ನದಿಯಲ್ಲೇ ಸ್ನಾನ ಮುಗಿಸಿ, ಬಟ್ಟೆ ಒಗೆದು ಹಾಕುವಷ್ಟರಲ್ಲಿ ತಾಳಲಾರದ ಹಸಿವು. ನದಿ ತೀರದಲ್ಲಿ ಇದ್ದ ಹಲಸಿನ ಮರದಿಂದ ಹಣ್ಣು ಕಿತ್ತು ಅದನ್ನು ತಿನ್ನುತ್ತಿದ್ದ ಆ ದಿನಗಳು ಅವಿಸ್ಮರಣೀಯ!
ಬೇಸಿಗೆ ರಜೆಯಲ್ಲಿ ಕಟ್ಟಿಗೆ ತರಲು ಮೂರು ಮೈಲಿಗಳಷ್ಟು ಹೋಗುವುದು ತ್ರಾಸದಾಯಕ ಎನಿಸುತ್ತಿರಲಿಲ್ಲ. ಕಟ್ಟಿಗೆಗಾಗಿ ಅಲೆದಾಟ, ಜೊತೆಗೆ ಗೆಳತಿಯರ ಒಡನಾಟದ ಗಮ್ಮತ್ತಿನಲ್ಲಿ ಬಸವಳಿಕೆ ಮರೆಸುತ್ತಿತ್ತು. ಸಾಗುವಳಿ ಸಮಯದಲ್ಲಿ ಗದ್ದೆಯಲ್ಲಿ ದಿನ ರಾತ್ರಿ ಇಡೀ ಕೆಲಸ. ಆದರೆ ಕಥೆ, ಸಂಗೀತ, ಪಾಡ್ದನ ಇವುಗಳಿಂದ ದಣಿವಿನ ಅರಿವೇ ಆಗುತ್ತಿರಲಿಲ್ಲ. ಮಾಡಿದ ಕೆಲಸಕ್ಕೆ ಸಂಬಳದ ಬದಲಾಗಿ ಅಕ್ಕಿಯನ್ನು ತಂದು ಅಮ್ಮನ ಕೈಗಿತ್ತಾಗ, ಖುಷಿಯಿಂದ ಆಕೆಯ ಕಂಗಳು ತುಂಬಿ ಬರುತ್ತಿತ್ತು.
ದಿನಾ ರೇಶನ್ ಅಂಗಡಿಯಲ್ಲಿ ಸಿಗುವ ಬಿಳಿ ಅಕ್ಕಿ ಅನ್ನ ಉಂಡು ಬೇಜಾರಾಗಿ ಎಲ್ಲರ ಮನೆಗೆ ಗದ್ದೆ ಕೆಲಸಕ್ಕೆ ಹೋಗುತ್ತಿದ್ದುದು ಕೇವಲ ಕಜೆ ಅಕ್ಕಿ ಸಿಗುವ ಆಸೆಯಿಂದ. ಶಾಲಾ ರಜಾ ದಿನಗಳಲ್ಲಿ ಗೆಳತಿಯರೊಂದಿಗೆ ಪಂಥ ಕಟ್ಟಿ ಅಮ್ಮನಿಂದ ಮೆಚ್ಚುಗೆ ಪಡೋದಂದ್ರೆ ನನಗಂತೂ ತುಂಬಾನೆ ಇಷ್ಟ.
ಬಾಲ್ಯದ ಸಿಹಿ ನೆನಪುಗಳನ್ನು ಮಡಿಲಲ್ಲಿ ತುಂಬಿಕೊಂಡು ವಿದ್ಯಾರ್ಜನೆ ಮುಂದುರಿಸುವ ತುಡಿತ ಹೇಗಿತ್ತು ಎಂಬುದನ್ನು ಅನಿತಾ ತಮ್ಮ ಕಾಲೇಜು ವಿದ್ಯಾರ್ಜನೆ ದಿನಗಳನ್ನು ಮೆಲುಕು ಹಾಕಿದ್ದು ಹೀಗೆ.
ಕಾಲೇಜಿನ ವಾತಾವರಣ
ಹೊಸ ವಾತಾವರಣ, ಹೊಸ ಗೆಳತಿಯರು, ಹೈಸ್ಕೂಲ್ ಸಮವಸ್ತ್ರವಿಲ್ಲದೆ ಬಣ್ಣ ಬಣ್ಣದ ಉಡುಪು! ಹೊಸ ಮೇಷ್ಟ್ರು, ಎಲ್ಲ ಹೊಸದೇ. ಆದರೂ ಹೊಸ ಪರಿಸರಕ್ಕೆ ಬೇಗನೇ ಹೊಂದಿಕೊಂಡೆ. ಅಲ್ಲೂ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿನಿಯಾದೆ. ಆಗಲೇ ನನ್ನಲ್ಲಿ ಸಾಹಿತ್ಯಾಸಕ್ತಿ ಮೂಡಿದ್ದು. ಗೆಳತಿಯರೊಂದಿಗೆ ಒಂದೊಂದು ರೂಪಾಯಿ ಸೇರಿಸಿ ಪ್ರಸಿದ್ಧ ವಾರ ಪತ್ರಿಕೆಗಳನ್ನು ಓದಲಾರಂಬಿಸಿದೆ. ಮೊದ ಮೊದಲು ಕೇವಲ ಓದುಗಳಾಗಿದ್ದ ನನಗೆ ಅದರಲ್ಲಿನ ಕಥೆ, ಕವಿತೆಗಳನ್ನು ನೋಡಿ ನಾನೇಕೆ ಬರೆಯಬಾರದು ಎಂಬ ಅನಿಸಿಕೆ ಮೊಳಕೆ ಒಡೆಯಿತು.
ಒಂದು ಕವನ ಬರೆದು ಪ್ರಸಿದ್ಧ ಪತ್ರಿಕೆಯ ವಿಳಾಸಕ್ಕೆ ಕಳುಹಿಸಿ ಕೊಟ್ಟೆ. ನಾನು ಬರೆದ ಮೊದಲ ಕವನ ಪತ್ರಿಕೆಯ ಕವನ ಸಂಕಲನದಲ್ಲಿ ಪ್ರಕಟವಾಯಿತು. ಆದರೆ ನನ್ನ ಸಾಹಿತ್ಯಾಸಕ್ತಿಗೆ ಚಿಕ್ಕದೊಂದು ತಡೆ ಬೀಳುವ ಘಟನೆ ನನ್ನ ಬದುಕಿನಲ್ಲಿ ನಡೆದುಹೋಯಿತು. ಅದೆಂದರೆ, ಪಿಯುಸಿ ಮುಗಿಯುವುದರೊಳಗೆ ನೆಂಟಸ್ತಿಕೆ ಕುದುರಿ, ಮದುವೆ ನಿಗದಿಯಾಗಿತ್ತು. ಹುಡುಗ ಸಂಬಂಧಿಕನೇ.
ಮದುವೆಯ ಬಂಧನ
ಆ ಕಾಲದಲ್ಲಿ ವರದಕ್ಷಿಣೆ ಪಿಡುಗು ಜೋರಾಗಿಯೇ ಇತ್ತು. ಆದರೂ ಅದೃಷ್ಟವಶಾತ್ ಯಾವುದೇ ವರದಕ್ಷಿಣೆ ಇಲ್ಲದೆ ಮದುವೆಯ ಮಾತುಕತೆ ಮುಗಿದು, ಮದುವೆಯೂ ಆಯಿತು. ಪಿಯುಸಿಯಲ್ಲಿ ಒಳ್ಳೆಯ ಅಂಕಗಳು ಬಂದರೂ, ಅನಿವಾರ್ಯವಾಗಿ ಶಿಕ್ಷಣವನ್ನು ಅಲ್ಲಿಗೇ ನಿಲ್ಲಿಸಿ, ಬದುಕಿನ ಪ್ರಮುಖ ತಿರುವಿಗೆ ಹೊರಳುವಂತಾಯಿತು. ಮದುವೆ ಮುಗಿದು, ದೂರದ ಮುಂಬೈ ಮಹಾನಗರಕ್ಕೆ ಕಾಲಿಟ್ಟೆ.
ಅಲ್ಲಿಂದ ಮುಂದೆ ಬದುಕಿನ ಎರಡನೇ ಅಧ್ಯಾಯದಲ್ಲಿ ಅವರು ಎದುರಿಸಿದ ಸವಾಲುಗಳನ್ನು ವಿವರಿಸಿದ್ದು ಹೀಗೆ.
ಮೊದಲ ಬಾರಿ ಮುಂಬೈ ಮಹಾನಗರಿಗೆ ಕಾಲಿಟ್ಟೆ. ಹೊಸ ಪ್ರಪಂಚ, ಹೊಸ ಅನುಭವ! ನನ್ನದು ಇನ್ನೂ ಎಳೆ ವಯಸ್ಸು. ಮನೆ ತುಂಬಾ ಮಂದಿ, ನೆಂಟರಿಷ್ಟರು. ಒಂದು ರೀತಿಯಲ್ಲಿ ಖುಷಿ ಕೊಡುತ್ತಿತ್ತು. ಅದೇ ವೇಳೆ ಮನೆ ಕೆಲಸ ಬೆಳಗ್ಗೆಯಿಂದ ರಾತ್ರಿಯವರೆಗೂ ಬೇಕಾದಷ್ಟಿತ್ತು. ಆ ವಯಸ್ಸಿಗೇ ಸುಸ್ತಾಗುತ್ತಿತ್ತು. ಅದೇ ವೇಳೆ ಗರ್ಭದೊಳಗೆ ಮತ್ತೊಂದು ಜೀವದ ಉಸಿರು ಬೆಳೆಯುತ್ತಿತ್ತು. ಮರಳಿ ತವರಿಗೆ ಸೇರಿದೆ. ಹೆಣ್ಣು ಮಗುವಿನೊಂದಿಗೆ ಮತ್ತೆ ಮುಂಬೈಗೆ ಬಂದೆ.

ಸ್ವಾವಲಂಬನೆಗೆ ನಾಂದಿ
ಮಗುವಿನ ಕಿಲಕಿಲ ನಗು, ಸತಾಯಿಸುವ ಅಳು ಇವೆಲ್ಲ ಮನೆ ಮನಗಳನ್ನು ತುಂಬಿತ್ತು. ನೋಡು ನೋಡುತ್ತಿದ್ದಂತೆ ವರುಷ ಉರುಳುತ್ತಿತ್ತು. ಸ್ವಾವಲಂಬಿಯಾಗಿ ಬದುಕಬೇಕೆಂಬ ಆಸೆ ಮತ್ತೆ ಗರಿಗೆದರಿತ್ತು. ಮನೇಲೇ ಕೂತು ಏನಾದರೊಂದು ಮಾಡಬೇಕೆಂಬ ಛಲ ಮನದಲ್ಲಿ ಮನೆ ಮಾಡಿತ್ತು. ಆಗ ಹೊಳೆದಿದ್ದು `ಇಡ್ಲಿ.’ ಹೌದು ಊರಿನ ರೀತಿಯಲ್ಲಿ ಇಡ್ಲಿ ತಯಾರಿಸಲು ಆರಂಭಿಸಿದೆ. ನನ್ನ ಪತಿ ಕ್ಯಾಂಟೀನ್ ಗಳಿಗೆ ಒಯ್ದು ಕೊಡುತ್ತಿದ್ದರು.
ಕ್ರಮೇಣ ಸಮಾರಂಭಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಬರಲಾರಂಭಿಸಿತು. ಶ್ರಮಕ್ಕೆ ತಕ್ಕ ಪ್ರತಿಫಲ ದಕ್ಕಿತು. ಹತ್ತು ವರ್ಷ ಅದೇ ಕೆಲಸ ಮುಂದುವರಿಯಿತು. ದಿನಪೂರ್ತಿ ಅಕ್ಕಿ ಹಿಟ್ಟು ರುಬ್ಬಿ, ಇಡ್ಲಿ ಬೇಯಿಸಿ ಮುಗಿಸುವ ಹೊತ್ತಿಗೆ ನಡುರಾತ್ರಿ ಎರಡೂವರೆ ಗಂಟೆಯಾಗುತ್ತಿತ್ತು. ಮಗಳನ್ನು ಬೆಳಗ್ಗೆ ಶಾಲೆಗೆ ಕಳುಹಿಸಲು ಪುನಃ 5.30ಕ್ಕೆ ಏಳಬೇಕಾಗಿತ್ತು. ನಿದ್ರೆ ಸಾಲದೆ ಆರೋಗ್ಯ ಕೆಡಲಾರಂಭಿಸಿತು.
`ಆರೋಗ್ಯ ಬೇಕಾದರೆ ಇಡ್ಲಿ ಕೆಲಸ ಬಿಟ್ಬಿಡು. ಹೆಣ್ಣುಮಕ್ಕಳನ್ನು ದೇವರು ಕೋಮಲವಾಗಿ ಸೃಷ್ಟಿಸಿದ್ದಾನೆ. ಪುರುಷನಷ್ಟು ಗಟ್ಟಿಯಾಗಿ ಅಲ್ಲ. ಯೋಚನೆ ಮಾಡು,’ ಎಂದು ವೈದ್ಯರು ಕಟುವಾಗಿ ನುಡಿದರು.
ಆಗ 10 ವರ್ಷದ ಇಡ್ಲಿ ತಯಾರಿಸುವ ಕೆಲಸಕ್ಕೆ ತಿಲಾಂಜಲಿ ನೀಡಬೇಕಾದ ಅನಿವಾರ್ಯತೆ ಬಂದಿತು. ಆದರೆ ದಿನವಿಡೀ ಕೆಲಸದಲ್ಲಿ ತೊಡಗಿಸಿಕೊಂಡು ಅಭ್ಯಾಸವಾಗಿದ್ದ ನನಗೆ ಸುಮ್ಮನಿರಲು ಸಾಧ್ಯವಿರಲಿಲ್ಲ. ಬ್ಯೂಟಿ ಪಾರ್ಲರ್ ಬೇಸಿಕ್ ಕೋರ್ಸ್ ಮಾಡಿದೆ, ಟೈಲರಿಂಗ್ ತರಬೇತಿ ಪಡೆದೆ. ಮನೆಯಲ್ಲಿಯೇ ಹೊಲಿಯಲಾರಂಭಿಸಿದೆ. ಒಂದಷ್ಟು ಹಣ ಸಂಪಾದನೆಯಾಗುತ್ತಿತ್ತು. ಎಳವೆಯಿಂದ ಮನದಾಳದಲ್ಲಿ ಮನೆ ಮಾಡಿಕೊಂಡಿದ್ದ ಸಾಹಿತ್ಯಾಸಕ್ತಿ ಕ್ರಮೇಣ ಮೆಲ್ಲಗೆ ಚಿಗುರತೊಡಗಿತು.
ಸಾರಸ್ವತ ಲೋಕದತ್ತ ಪಯಣ
ಬದುಕು ಕಟ್ಟಿಕೊಳ್ಳಲು ಹುಟ್ಟೂರಿನಿಂದ ಸಾವಿರಾರು ಮೈಲಿ ದೂರದ ಊರಿಗೆ ಬಂದು ಸಾಹಿತ್ಯಾಸಕ್ತಿ ಉಳಿಸಿಕೊಂಡು ಬೆಳೆಸುವುದು ಸುಲಭದ ಮಾತಲ್ಲ. ಮರಾಠಿ ಪ್ರಾಬಲ್ಯದ ಮುಂಬೈನಲ್ಲಿ ಕನ್ನಡ ಪತ್ರಿಕೆಗಳು ಸಿಗುವುದೇ ಕಷ್ಟ. ಇಂತಹ ವಾತಾವರಣದಲ್ಲೂ ಬರವಣಿಗೆ ಮುಂದುರಿಸುವ ಇಚ್ಛಾಶಕ್ತಿಗೆ ಪತಿಯ ಬೆಂಬಲ, ಜೊತೆಗೆ ಹಲವಾರು ಖ್ಯಾತ ಸಾಹಿತಿಗಳ ಪ್ರೋತ್ಸಾಹ ದೊರೆಯಿತು. ಆರಂಭದಲ್ಲಿ ಇಡ್ಲಿ ಮಾಡಿ ಕ್ಯಾಂಟೀನ್ ಗೆ ಕೊಡುವ ಮೂಲಕ ಸಾಂಸಾರಿಕ ಜವಾಬ್ದಾರಿಗಳಿಗೆ ಹೆಗಲಾಗಿದ್ದ ಮಹಿಳೆಯ ಬರವಣಿಗೆಯ ವೇಗಕ್ಕೆ ಆಪ್ತ ವಲಯದವರು ದಂಗಾಗಿದ್ದು ಸುಳ್ಳಲ್ಲ. ತನ್ನ ಪಾಲಿಗೆ ಒದಗಿ ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುತ್ತಿರುವ ಅನಿತಾರ ಸಾರಸ್ವತ ಲೋಕದ ಪಯಣದ ಒಂದು ಪಕ್ಷಿನೋಟ ಇಲ್ಲಿದೆ.

ಕೃತಿಗಳ ಪ್ರಕಟಣೆ
`ಕಾಯುತ್ತಾ ಕವಿತೆ’ (2013) ಇವರ ಚೊಚ್ಚಲ ಕವನ ಸಂಕಲನ. `ಅಂತರಂಗದ ಮೃದಂಗ’ ಕವನ ಸಂಕಲನದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ ಮುಂಬೈ ವತಿಯಿಂದ `ಶ್ರೀಮತಿ ಸುಶೀಲಾ ಎಸ್. ಶೆಟ್ಟಿ ಸ್ಮಾರಕ ಕಾವ್ಯ’ ಪ್ರಶಸ್ತಿ (2016) ಲಭಿಸಿದೆ. ಜನಸ್ಪಂದನ ಟ್ರಸ್ಟ್ (ರಿ) ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ ಕೊಡ ಮಾಡುವ `ಅಲ್ಲಮ ಸಾಹಿತ್ಯ’ ಪ್ರಶಸ್ತಿ (2018), `ಕನ್ನಡ ಕಲರ್’ ಮತ್ತು `ಅವ್ವ ಪುಸ್ತಕಾಲಯ`ದ ವತಿಯಿಂದ `ಸೃಜನಶೀಲ ಸಾಹಿತಿ’ ಪ್ರಶಸ್ತಿ 2020 ಕೂಡ ಈ ಕೃತಿಗೆ ಲಭಿಸಿದೆ. ತುಳು ಕವನ ಸಂಕಲನ `ಮರಿಯಲದ ಮದಿಮಾಲ್’ (2017).ಎಂ.ಎ. ಸಮಗ್ರ ಪ್ರಬಂಧ `ಸವ್ಯಸಾಚಿ ಸಾಹಿತಿ’ (ಡಾ. ಜನಾರ್ಧನ್ ಭಟ್ ರ ಜೀವನ, ಸಾಹಿತ್ಯ ಸಾಧನೆಗಳು) ಹೆಸರಾಂತ ರಂಗನಟ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಮೋಹನ್ ಮರ್ನಾಡ್ ಜೀವನ ಸಾಧನೆಯ ಕುರಿತು ರಚಿಸಿದ ಕೃತಿ `ಮೋಹನ ತರಂಗ’ ಈ ಕೃತಿಗೆ 2019-20ನೇ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 25 ಸಾವಿರ ರೂಪಾಯಿ ನಗದು ಪುರಸ್ಕಾರ ಲಭಿಸಿದೆ. ಕಥಾ ಸಂಕಲನ `ನಿವಾಳಿಸಿ ಬಿಟ್ಟ ಕೋಳಿ’ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡ ಮಾಡುವ 2022ನೇ ಸಾಲಿನ ಕೆ. ವಾಸುದೇವಾಚಾರ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಮಾಣಿಕ್ಯ ಪ್ರಕಾಶನ ಸಂಸ್ಥೆ ಕೊಡ ಮಾಡುವ ಪದ್ಮಾವತಿ ವೆಂಕಟೇಶ ದತ್ತಿ ಪುರಸ್ಕಾರ ಲಭಿಸಿದೆ.
ಸುವರ್ಣಯುಗ (ಅನನ್ಯ ದ್ರಷ್ಟಾರ ಜಯ ಸಿ. ಸುವರ್ಣರ ಜೀವನ ಕಥನ) (ಪಿ.ಎಚ್.ಡಿ ಕೋರ್ಸ್ ವರ್ಕ್ ನ ಸಲುವಾಗಿ ಸಿದ್ಧಪಡಿಸಿದ ಸಮಗ್ರ ಪ್ರಬಂಧ) ಇದಕ್ಕೆ ಮುಂಬೈ ವಿಶ್ವವಿದ್ಯಾಲಯ ಸಂಶೋಧಕಿ ಡಾ. ಲೀಲಾ ಬಿ. ಕೊಡ ಮಾಡುವ ಶೋಧಸಿರಿ ಪುರಸ್ಕಾರ ಲಭಿಸಿದೆ. ಅಂಕಣ ಬರಹಗಳ ಸಂಕಲನ `ಲೋಕಲ್ ಟ್ರೈನ್’ ಇವರ ಮತ್ತೊಂದು ಕೃತಿ.
ಪ್ರಶಸ್ತಿಗಳ ವಿವರ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಇವರು ಏರ್ಪಡಿಸಿದ ಕೆ.ಎಸ್.ನ. ನೆನಪಿನ ಪ್ರೇಮ ಕಾವ್ಯ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರೇಮ ಕಾವ್ ಪುರಸ್ಕಾರ (2011, 2015) ಹಾಗೂ 2017ರಲ್ಲಿ `ವಿಶ್ವ ಕವಿ ಕುವೆಂಪು ಕಾವ್ಯ ಪುರಸ್ಕಾರ’ ಲಭಿಸಿದೆ.
ಮಹಾರಾಷ್ಟ್ರ ನವಚಿಂತನ ಸಂಸ್ಥೆಯಿಂದ ಕವಿರತ್ನ ಪುರಸ್ಕರ (2012-13), ಮುಂಬೈ ಕಲಾಜಗತ್ತು ಸಂಸ್ಥೆಯ ವತಿಯಿಂದ `ದಿ ಗೋಪಾಲಕೃಷ್ಣ ಸ್ಮಾರಕ’ ಪ್ರಶಸ್ತಿ (2013), ದಿಯೊಂಬಿಲಿ ತುಳು ಕೂಟ ವತಿಯಿಂದ `ತುಳುಸಿರಿ’ ಪ್ರಶಸ್ತಿ (2013), ಕವಿವಾಣಿ ಪತ್ರಿಕಾ ಬಳಗದ ವತಿಯಿಂದ `ಕಾವ್ಯಸಿರಿ’ ಪ್ರಶಸ್ತಿ (2019), ಕಲಾ ಸೌರಭ ಮುಂಬೈ (ರಿ) ವತಿಯಿಂದ `ಅಮೃತ ಸೌರಭ’ ಪುರಸ್ಕಾರ (2022), `ಶ್ರೀಕೃಷ್ಣ ವಿಠ್ಠಲ’ ಪ್ರಶಸ್ತಿ 2022 ಲಭಿಸಿದೆ.
2019ರಲ್ಲಿ ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಸ್ವರಚಿತ ಕವಿತೆಯನ್ನು ವಾಚಿಸಿ ಮೆಚ್ಚುಗೆಯನ್ನು ಗಳಿಸಿದ್ದಾರೆ.
ಮಹಾರಾಷ್ಟ್ರದ ರಾಜಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೋಶಿಯಾರವರಿಂದ ಗೌರವಿಸಲ್ಪಟ್ಟಿದ್ದಾರೆ (2021).
ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ `ಅಪ್ಪ ನೆಟ್ಟ ಸೀತಾಫಲದ ಮರ’ ಕಥೆಗೆ ಸಂಕ್ರಮಣ ಸಾಹಿತ್ಯ ಮೊದಲ ಬಹುಮಾನ ಲಭಿಸಿದೆ (2017). `ಜಾಗಟೆ ಪ್ರತಿಷ್ಠಾನ ಬೆಂಗಳೂರು’ ಇವರು ವಿಶ್ವದ ಎಲ್ಲಾ ಕನ್ನಡಿಗರಿಗಾಗಿ ಏರ್ಪಡಿಸಿದ ಕುವೆಂಪು ಆನ್ ಲೈನ್ ಕವನ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಲಭಿಸಿದೆ (2016).
ದ.ರಾ ಬೇಂದ್ರೆ ಕಾವ್ಯ ಕೂಟ ಬೆಂಗಳೂರು ಇವರು ಏರ್ಪಡಿಸಿದ ದ.ರಾ.ಬೇಂದ್ರೆ ಸ್ಮೃತಿ ಕವನ ರಚನಾ ಸ್ಪರ್ಧೆಯಲ್ಲಿ `ಗಾಜಿನ ಲೋಟ’ (2017) ಹಾಗೂ 2018 ರಲ್ಲಿ `ಮಣ್ಣುಟ್ಟ ಪುಟ್ಟ ಬೀಜ’ ಕವನಕ್ಕೆ ಪ್ರಥಮ ಬಹುಮಾನ ದೊರೆತಿದೆ.
`ಈ ಹೊತ್ತಿಗೆ’ ಬೆಂಗಳೂರು ಐದನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ `ಬೈರಪ್ಪ ಗುಡ್ಡ ಮತ್ತು ಕೌಜುಗ ಹಕ್ಕಿ’ (2017) ಕಥೆಗೆ ಎರಡನೇ ಬಹುಮಾನ ಲಭಿಸಿದೆ.
ಜಯದೇವಿ ತಾಯಿ ಲಿಗಾಡೆ ಕಾವ್ಯ ಸ್ಪರ್ಧೆಯಲ್ಲಿ ಎರಡು ಬಾರಿ, ಡಾ. ಜಿ.ಡಿ. ಜೋಷಿ ಪ್ರತಿಷ್ಠಾನ ಏರ್ಪಡಿಸಿದ ಸ್ಪರ್ಧೆಯಲ್ಲಿ ಒಂದು ಪ್ರವಾಸ ಕಥನಕ್ಕೆ ಬಹುಮಾನ ದೊರೆತಿದೆ.

ಸಾಹಿತ್ಯ ಕೃಷಿಯ ಬೆಳವಣಿಗೆ
ಇವರ ಬರವಣಿಗೆ. ಹ್ಯಾಸಕ್ಕೆ ಪ್ರೋತ್ಸಾಹ ನೀಡಿದರ ಬಗ್ಗೆ ಹೇಳುವುದಾದರೆ, ಮುಂಬೈನ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಅಂಕಣ ಬರಹಗಳು ಪ್ರಕಟವಾಗಿವೆ. ಕಥೆ, ಕವನ, ಲೇಖನ, ಪ್ರವಾಸ ಕಥನ ಸಂದರ್ಶನ ಲೇಖನಗಳು ಒಳನಾಡು ಮತ್ತು ಹೊರನಾಡಿನ ಪ್ರಮುಖ ಪತ್ರಿಕೆಗಳಲ್ಲಿ ನಿರಂತರ ಪ್ರಕಟವಾಗುತ್ತಿವೆ. ಮುಂಬೈ ಮತ್ತು ಮಂಗಳೂರು ಆಕಾಶವಾಣಿಯಲ್ಲಿ ಹಲವಾರು ಕಥೆ, ಭಾವಗೀತೆ ಮತ್ತು ಕವನಗಳು ಪ್ರಸಾರಗೊಂಡಿವೆ.
ಅನಿತಾ ತಾಕೋಡೆಯವರ ಸಾಹಿತ್ಯ ಕೃಷಿಯನ್ನು ಗುರುತಿಸಿ ಪ್ರಶಸ್ತಿಗಳ ಜೊತೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಅಖಿಲ ಭಾರತ ಹೊರನಾಡು ಸಮ್ಮೇಳನ, ವಿಶ್ವವಿಖ್ಯಾತ ಮೈಸೂರು ದಸರಾ, ಕಟೀಲಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ (2015), ಮುಂಬೈನಲ್ಲಿ 2020ರಲ್ಲಿ ನಡೆದ ವಿಶ್ವ ತುಳು ಸಮ್ಮೇಳನ, ಎಸ್.ಎಲ್. ಭೈರಪ್ಪನವರಿಗೆ ಅರ್ಪಿತಗೊಂಡ `ಶತಮಾನದ ಶತನಮನ’ (ಮಂಗಳೂರಿನಲ್ಲಿ 2020ರಲ್ಲಿ ನಡೆದ ಕವಿಗೋಷ್ಠಿ), ಅಖಿಲ ಭಾರತ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ನುಡಿ ಸಾಮ್ರಾಜ್ಯದ ಸ್ವರಾಜ್ಯ ಸಮ್ಮೇಳನದ ಕವಿಗೋಷ್ಠಿ, ಹೀಗೆ ಹೊರನಾಡು ಮತ್ತು ಒಳನಾಡಿನ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಮುಂಬೈ ವಿಶ್ವವಿದ್ಯಾಲಯ, ಬ್ರಹ್ಮ ಶ್ರೀ ಗುರುನಾರಾಯಣ ಸಂಘ ಕುಳಾಯಿ, ಕರ್ನಾಟಕ ಸಂಘ ದೊಂಬಿಲಿ, ಬಿಲ್ಲವ ಅಸೋಸಿಯೇಶನ್ ದೊಂಬಿಲಿ, ಕರ್ನಾಟಕ ಸಂಗ ಮಾತುಂಗ, ಗುಜರಾತಿನ (ಬರೋಡ) ಬಿಲ್ಲ ಸಂಘ, ಮುಂಬೈ ಕನ್ನಡ ಸಂಘ, ಸೂರತ್‌ಕನ್ನಡ ಸಂಘ ಮುಂತಾದ ಸಂಘ ಸಂಸ್ಥೆಗಳು ಇವರ ಸಾಹಿತ್ಯ ಸಾಧನೆಗಾಗಿ ಗೌರವಿಸಿ ಸನ್ಮಾನಿಸಿವೆ.
ಕವಿಗೋಷ್ಠಿಗಳಲ್ಲಿ ಭಾಗಹಿಸುವಿಕೆ
50ಕ್ಕಿಂತಲೂ ಹೆಚ್ಚಿನ ಭಾವಗೀತೆಯನ್ನು ಬರೆದಿರುವ ಅನಿತಾ ಮಂಗಳೂರು ಆಕಾಶವಾಣಿಯಲ್ಲಿ ಭಾವಗೀತೆ ಪ್ರಸಾರವಾದುದನ್ನು ನೆನಪಿಸಿಕೊಳ್ಳುತ್ತಾರೆ. `ನಮ್ಮ ಕುಡ್ಲ’ ವಾರ್ತಾ ವಾಹಿನಿಯಲ್ಲಿ ಪ್ರಸಾರವಾದ ಕಾವ್ಯಗಾಯನ ಚಿತ್ರೀಕರಣದಲ್ಲಿ ಭಾಗಹಿಸಿದ್ದಾರೆ.
2019ರಲ್ಲಿ ಮೈಸೂರು ಅರಮನೆಯಲ್ಲಿ ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಗಣ್ಯರ ಸಮ್ಮುಖದಲ್ಲಿ ಸನ್ಮಾನವನ್ನು ಪಡೆದ ಗರಿಮೆ ಇವರದ್ದು. ಗುಜರಾತಿನ ಬರೋಡದಲ್ಲಿ, ದೊಂಬಿಲಿ ಕರ್ನಾಟಕ ಸಂಘದಲ್ಲಿ, ಶಿವಮೊಗ್ಗ ಸಾಹಿತ್ಯ ಸಂಸ್ಥೆ ಏರ್ಪಡಿಸಿದ ಆನ್ ಲೈನ್ ಕಾರ್ಯಕ್ರಮದಲ್ಲಿ ನಾರಾಯಣ ಗುರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ. ಕನ್ನಡ ಲೇಖಕಿಯರ ಸಂಘ ಬೆಂಗಳೂರು ಇವರು ಏರ್ಪಡಿಸಿದ ವಿಚಾರ ಸಂಕಿರಣ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕೆಲವು ಸಂಸ್ಥೆಗಳ ಕೂಡುವಿಕೆಯಲ್ಲಿ ಆಯೋಜಿಸಿದ `ಗೇನ ಪೊಲಬುದ ಪರಪು’ (ತುಳು ಸಾಹಿತ್ಯ ಸಾಧ್ಯತೆ ಮತ್ತು ಸವಾಲುಗಳು) ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದಾರೆ.
ಒಳನಾಡು ಮತ್ತು ಹೊರನಾಡಿನ ಹಲವಾರು ಸಾಹಿತಿಗಳ, ಸಹೃದಯಿ ಓದುಗರ, ಪ್ರೋತ್ಸಾಹ ಮತ್ತು ಪ್ರೀತಿಯನ್ನು ಅನಿತಾ ಸದಾ ನೆನೆಯುತ್ತಾರೆ. ಮುಂಬೈನಲ್ಲಿ ತಾನು ಗಳಿಸಿದ್ದು ತುಳು ಕನ್ನಡಿಗರ ಪ್ರೀತಿ. ಅದುವೇ ನನ್ನ ಜೀವನದ ನಿಜವಾದ ಆಸ್ತಿ ಎಂದು ಧನ್ಯತೆಯಿಂದ ಹೇಳುತ್ತಾರೆ.
ಇವರ ಬರಹಗಳು ಕರ್ನಾಟಕದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಹೊರ ರಾಜ್ಯಗಳ ಬಹಳಷ್ಟು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡ ಹೆಗ್ಗಳಿಕೆ ಇವರದ್ದು. ಮಾತೃಭಾಷೆ ತುಳುವಿನಲ್ಲಿ ಇವರ ಹಿಡಿತ ನಿರೀಕ್ಷೆಗೂ ಮೀರಿದ್ದು. ಕನ್ನಡದ ಜೊತೆಗೆ ಅದೆಷ್ಟೋ ತುಳು ಕವಿತೆಗಳು ಕೂಡ ಓದುಗರನ್ನು ತಲುಪಿವೆ, ತಲುಪುತ್ತಲೇ ಇವೆ.
ಪ್ರತಿಭೆ, ದೃಢಸಂಕಲ್ಪ ಮತ್ತು ಪ್ರೋತ್ಸಹ ಇವೆಲ್ಲ ಮೇಳೈಸುವುದು ಅಪರೂಪ. ಆದರೆ ಅನಿತಾರ ವಿಷಯದಲ್ಲಿ ಇದೆಲ್ಲ ಆಗಿದೆ. ಅವರಿಗಿದ್ದ ಜನ್ಮಜಾತ ಪ್ರತಿಭೆ, ಸಾಧಿಸಬೇಕೆಂಬ ದೃಢಸಂಕಲ್ಪ ಮತ್ತು ಅವರ ಪತಿ ಮತ್ತು ಮಗಳು ತಮ್ಮ ಸಾಧನೆಗೆ ಬೆಂಬಲವಾಗಿ ನಿಂತಿರುವುದರಿಂದ ಈ ಹಂತಕ್ಕೆ ಬರಲು ಸಾಧ್ಯವಾಯಿತು ಎಂದು ನೆನೆಯುತ್ತಾರೆ.
ಶೈಕ್ಷಣಿಕ ಸಾಧನೆ
ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ವಿವಾಹದ ನಂತರ ತಮ್ಮ ಕರ್ಮಭೂಮಿ ಮುಂಬೈಗೆ ಸ್ಥಳಾಂತರಗೊಳ್ಳುವ ಅನಿವಾರ್ಯತೆ ಬಂದರೂ ಅನಿತಾ ಅಲ್ಲಿಯೂ ಶಿಕ್ಷಣವನ್ನು ಮುಂದುವರಿಸಿರುವುದು ಇನ್ನೊಂದು ರೀತಿಯ ಸಾಧನೆ. ಕೆ.ಎಸ್.ಓ.ಯು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ. ಪದವಿ (2013-16)ಪಡೆದು, ಮುಂಬೈ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ಎಂ.ಎ. ಪದವಿ ಪಡೆದು ಎಂ.ಬಿ. ಕುಕ್ಯಾನ್ ಬಂಗಾರದ ಪದಕದ ಅರ್ಹತೆಯೊಂದಿಗೆ ಸಾಧಿಸಿದ್ದಾರೆ (2017-19).ಇದೀಗ ಡಾ. ಜಿ.ಎನ್. ಉಪಾಧ್ಯರ ಮಾರ್ಗದರ್ಶನದಲ್ಲಿ ಮುಂಬೈ ವಿಶ್ವವಿದ್ಯಾಲಯದಲ್ಲಿ `ಮುಂಬೈ ಬಿಲ್ಲವರ ಸಾಂಸ್ಕೃತಿಕ ಅಧ್ಯಯನ’ ವಿಷಯದ ಕುರಿತು ಪಿ.ಎಚ್.ಡಿ ಅಧ್ಯಯನದಲ್ಲಿ ನಿರತರಾಗಿದ್ದಾರೆ.
ಇಷ್ಟೆಲ್ಲಾ ಸಾಧನೆ ಮಾಡಿರುವ ಅನಿತಾ, ಮದುವೆ ಸಂಸಾರ ಇವೆಲ್ಲ ಬಂಧನದಂತೆ, ಮದುವೆಯು ನಂತರದ ಸಾಧನೆಗೆ ಅಡ್ಡಿಯಾಗುತ್ತದೆ, ಎನ್ನುವವರಿಗೆ ಒಂದಿಷ್ಟು ಕಿವಿಮಾತು ಹೇಳಿದ್ದು ಹೀಗೆ : ಜೀವನದಲ್ಲಿ ಅಡ್ಡಿಯೆಂದು ನಾವು ತಿಳಿದುಕೊಂಡು ನಮಗೆ ನಾವೇ ಬೇಲಿ ಹಾಕಿಕೊಳ್ಳುತ್ತೇವೆ. ನಮಗೆ ಸ್ವಾತಂತ್ರ್ಯ ಕೊಡುವುದಿಲ್ಲ ಎಂದು ಮನೆಯವರ ಮೇಲೆ ಅಪವಾದ ಹೊರಿಸುತ್ತೇವೆ. ಆದರೆ ನಮ್ಮ ಸ್ವಾತಂತ್ರ್ಯ ನಮ್ಮ ಕೈಯಲ್ಲೇ ಇದೆ, ಬೇರೆಯವರಲ್ಲಿ ಅಲ್ಲ. ಅದನ್ನು ಸಮರ್ಥವಾಗಿ ಕಂಡುಕೊಳ್ಳುವ ಜಾಣ್ಮೆ, ಆಸಕ್ತಿ, ಹುಮ್ಮಸ್ಸು ನಮ್ಮಲ್ಲಿರಬೇಕು. ನಾವು ಮಾಡುವ ಕೆಲಸದ ಮೇಲೆ ಭರವಸೆ ಇರಬೇಕು. ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವೆ ಎನ್ನುವ ಆತ್ಮವಿಶ್ವಾಸ ಇರಬೇಕು.
ಸಮಾಜದ ಮಾತಿಗೆ ಕಿವಿಕೊಡಬಾರದು : ಒಳ್ಳೆಯವರನ್ನು ಕೆಟ್ಟವರನ್ನಾಗಿ ಮಾಡುವುದು ಸಮಾಜದ ಸಹಜ ಗುಣ. ಉತ್ತಮ ಅವಕಾಶಗಳು, ಒದಗಿ ಬಂದಾಗ ಅದನ್ನು ಸದುಪಯೋಗ ಪಡಿಸಿಕೊಳ್ಳುವುದು, ನಮ್ಮ ಬದುಕು ಏನಿದ್ದರೂ ನಮ್ಮ ಸ್ವಾತಂತ್ರ್ಯವನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದನ್ನು ಅವಲಂಬಿಸಿರುತ್ತದೆ. ಹೊಂದಾಣಿಕೆ ಪರಸ್ಪರ ಗೌರವ ಇವೆಲ್ಲವನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದೇ ಯಶಸ್ಸಿನ ಸೂತ್ರಗಳು. ಇದನ್ನು ಸರಿಯಾಗಿ ಪಾಲಿಸಿದರೆ ಎಲ್ಲ ಸುಸೂತ್ರ.
ಮುಗಿಸುವ ಮುನ್ನ : ಹೆಂಗಸರ ವಯಸ್ಸು ಕೀಳಬಾರದಂತೆ (ಬಹುಶಃ ಹೆಚ್ಚಿನವರು ಫೇಸ್ ಬುಕ್ ನಲ್ಲೂ ಇದೇ ಕಾರಣಕ್ಕೆ ಹುಟ್ಟಿದ ವರ್ಷ ನಮೂದಿಸುವುದಿಲ್ಲ). ಆದರೆ ಅನಿತಾ ಇನ್ನೂ ಚಿಕ್ಕವರೇ, ಏಕೆಂದರೆ 2016ರಲ್ಲಿ ಪ್ರಸಿದ್ಧ ದೈನಿಕದಲ್ಲಿ ಏರ್ಪಡಿಸಿದ್ದ `ಪ್ರೇಮಪತ್ರ’ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದರಂತೆ! ಇದನ್ನು ತಮಾಷೆಗೆ ಹೇಳಿದರೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವುದು ಯುವ ಬರಹಗಾರರಿಗೆ ಮಾದರಿ ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ.
– ಮೋಹನದಾಸ ಕಿಣಿ





