ಪ್ರ : ನನಗೀಗ 35ರ ವಯಸ್ಸು. ನನಗೆ ಸತತ ಕೂದಲು ಉದುರುತ್ತಲೇ ಇರುತ್ತದೆ. ಇದಕ್ಕೆ ಏನಾದರೂ ಪರಿಹಾರ ತಿಳಿಸುವಿರಾ?
ಉ : ಹೇರ್ ಲಾಸ್ ಆಗಲು ಹಲವಾರು ಕಾರಣಗಳಿವೆ. ಅದರ ಮೂಲಕಾರಣ ನಿಮ್ಮ ಆಹಾರಕ್ಕೆ ಸಂಬಂಧಿಸಿದೆ. ನಿಮ್ಮ ಆಹಾರದಲ್ಲಿ ಏನೆಲ್ಲ ಅಂಶ ಬೆರೆಸಿಕೊಳ್ಳುತ್ತೀರಿ ಎಂಬುದು ಇಲ್ಲಿ ಬಲು ಮುಖ್ಯ. ಕೂದಲಿನ ಬೆಳವಣಿಗೆಗೆ ಎಲ್ಲಕ್ಕಿಂತ ಮುಖ್ಯವಾದುದು ಪ್ರೋಟೀನ್. ನಿಮ್ಮ ದೇಹದಲ್ಲಿ ಪ್ರೋಟೀನ್ ನ ಕೊರತೆ ಇದ್ದರೆ, ನಿಮ್ಮ ಆಹಾರದಲ್ಲಿ ಅಗತ್ಯವಾಗಿ ಹೆಚ್ಚಿನ ಪ್ರೋಟೀನ್ ಅಂಶ ಸೇರಿಸಿಕೊಳ್ಳಿ. ಇದಕ್ಕಾಗಿ ಹೆಚ್ಚಾಗಿ ಮೊಳಕೆ ಕಟ್ಟಿದ ಕಾಳು, ಡೇರಿ ಪ್ರಾಡಕ್ಟ್ಸ್ ಬಳಸಿರಿ. ಆರೋಗ್ಯಕರ ಕೂದಲಿಗಾಗಿ ಬಾದಾಮಿ, ಹೂಕೋಸು, ಅಣಬೆ, ಮೊಟ್ಟೆ, ಮೀನು, ತಾಜಾ ಹಸಿರು ಸೊಪ್ಪು ಇತ್ಯಾದಿ ಬಳಸಿಕೊಳ್ಳಿ. ಹೆಚ್ಚಾಗಿ ಕರಿಬೇವು ಬಳಸಿರಿ. ಇದರಲ್ಲಿನ ಬಯೋಟಿನ್ ಎಂಬ ವಿಟಮಿನ್ ಕೂದಲು ಉದುರುವಿಕೆಯನ್ನು ತಡೆಯಲು ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರ ಸತತ ಸೇವನೆಯಿಂದ ನಿಮಗೆ ಹೆಚ್ಚಿನ ಲಾಭವಿದೆ. ಎಲ್ಲಾ ಬಗೆಯ ಬೇಳೆ, ಕಾಳು, ಬಟಾಣಿ, ಗೋಡಂಬಿ ಇತ್ಯಾದಿಗಳನ್ನು ದೈನಂದಿನ ಆಹಾರದಲ್ಲಿ ಬಳಸಿರಿ. ಇದರಿಂದ ಕಬ್ಬಿಣಾಂಶ ಹೆಚ್ಚುತ್ತದೆ. ಇದರ ಕೊರತೆಯಿಂದಾಗಿಯೇ, ಕೂದಲು ಹೆಚ್ಚಾಗಿ ಉದುರುವುದು. ವಿಟಮಿನ್ಸ್ ನಿಂದ ಕೂದಲಿನ ಬೆಳವಣಿಗೆ, ಹೊಳಪಿಗೆ ಹೆಚ್ಚು ಸಹಕಾರಿ. ಹೀಗಾಗಿ ನೀವು ವಿಟಮಿನ್ ಗಳಿಸಲು ಕ್ಯಾರೆಟ್, ಸಿಹಿಗೆಣಸು, ಕುಂಬಳ, ಹಸಿರು ಸೊಪ್ಪು, ಹಾಲು ಮೊಸರು ಇತ್ಯಾದಿ ಎಲ್ಲವನ್ನೂ ಬಳಸಿಕೊಳ್ಳಿ. ವಿಟಮಿನ್ ಸಿ ಗಾಗಿ ನಿಂಬೆ, ದ್ರಾಕ್ಷಿ, ದಾಳಿಂಬೆ, ನೆಲ್ಲಿಕಾಯಿ, ಸೀಬೆ, ಸ್ಟ್ರಾಬೆರಿ ಇತ್ಯಾದಿ ಬಳಸಿರಿ.
ನಿಮ್ಮ ಕೂದಲಿನಲ್ಲಿ ಹೊಟ್ಟು ಹೆಚ್ಚಾಗಿ ಸೇರಿಕೊಂಡಿದೆಯೇ ಎಂದು ಪರೀಕ್ಷಿಸಿ. ಅದು ಹೆಚ್ಚಾಗಿದ್ದರೆ, ಅದನ್ನು ದೂರ ಮಾಡಲು, ಕೂದಲಿಗೆ ಅಗತ್ಯವಾಗಿ ಆ್ಯಂಟಿ ಡ್ಯಾಂಡ್ರಫ್ ಶ್ಯಾಂಪೂ ಹಚ್ಚಿರಿ. ನಿಮ್ಮ ಕೂದಲಿನ ಸಾಧನಗಳಾದ ಬಾಚಣಿಗೆ, ಮಲಗುವ ದಿಂಬಿನ ಕವರ್, ಟವೆಲ್ ಇತ್ಯಾದಿಗಳನ್ನು ಆ್ಯಂಟಿಸೆಪ್ಟಿಕ್ ಲೋಶನ್ ನಲ್ಲಿ ನೆನೆಸಿ, ನಂತರ ಬಳಸಿರಿ. ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ನಂತರ ಬಳಸಿಕೊಳ್ಳಿ.
ಕೂದಲಿನ ಉತ್ತಮ ಬೆಳವಣಿಗೆಗಾಗಿ, 1 ದೊಡ್ಡ ಚಮಚ ಆ್ಯಲೋವೆರಾ ಜೆಲ್ ಗೆ 1 ಸಣ್ಣ ಚಮಚ ವಿನಿಗರ್, ಅರ್ಧ ಚಮಚ ರೆಡ್ ಆನಿಯನ್ ಸೀಡ್ಸ್ ಆಯಿಲ್ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಅರ್ಧ ಗಂಟೆ ಹಾಗೇ ಬಿಟ್ಟು, ನಂತರ ಬಿಸಿ ನೀರಿನಿಂದ ತಲೆ ತೊಳೆಯಿರಿ. ಕೂದಲು ಉದುರುವಿಕೆಗೆ ಅತಿಯಾದ ಚಿಂತೆ, ಟೆನ್ಶನ್ ಸಹ ಒಂದು ಪ್ರಧಾನ ಕಾರಣ. ಇದರಿಂದ ನಿಮ್ಮ ಕೂದಲು ಬೇಗ ತುಂಡರಿಸುತ್ತದೆ. ಹೀಗಾಗಿ ಟೆನ್ಶನ್ ಬಿಟ್ಟು ಆದಷ್ಟೂ ಮೆಡಿಟೇಶನ್ ಕಡೆ ಗಮನ ಕೊಡಿ.
ಪ್ರ : ನಾನು 20ರ ತರುಣಿ. ಬೇಸಿಗೆ ಬಂದಂತೆ ನನ್ನ ಮುಖದಲ್ಲಿ ಆ್ಯಕ್ನೆ, ಮೊಡವೆ ಹೆಚ್ಚುತ್ತದೆ. ಮನೆಯಿಂದ ಹೊರಗೆ ಓಡಾಡಲು ಬಹಳ ಮುಜುಗರವಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಮಾರ್ಗ ಹೇಗೆ?
ಉ : ಬೇಸಿಗೆಯಲ್ಲಿ ಚರ್ಮದಲ್ಲಿ ಸೀಬಂ ಸೋರಿಕೆ ಹೆಚ್ಚುತ್ತದೆ. ಇದರಿಂದ ಚರ್ಮ ಹೆಚ್ಚು ಆಯ್ಲಿ ಆಗುತ್ತದೆ. ಈ ತರಹ ಜಿಡ್ಡುಜಿಡ್ಡಾದ ಚರ್ಮಕ್ಕೆ ಬಲು ಬೇಗ ಧೂಳು, ಮಣ್ಣು ಸೇರಿಕೊಂಡು ಸ್ಕಿನ್ ಪೋರ್ಸ್ ನ್ನು ಕ್ಲೋಸ್ ಮಾಡಿಬಿಡುತ್ತವೆ. ಎಲ್ಲಕ್ಕಿಂತ ಮೊದಲು ನೀವು ನಿಮ್ಮ ಚರ್ಮದ ವಿಧ ಯಾವುದು ಎಂದು ತಿಳಿದುಕೊಳ್ಳಿ. ಅಗತ್ಯಕ್ಕಿಂತ ಹೆಚ್ಚಾಗಿ ಮುಖಕ್ಕೆ ಸೋಪ್, ಫೇಸ್ ವಾಶ್ ಇತ್ಯಾದಿ ಬಳಸಬೇಡಿ, ಏಕೆಂದರೆ ಓವರ್ ಕ್ಲೀನಿಂಗ್ ನಿಂದ ಚರ್ಮ ಡ್ರೈ ಆಗುತ್ತದೆ. ಇದರಿಂದಲೂ ಸೀಬಂ ಸೆಕ್ರಿಯೇಶನ್ ಹೆಚ್ಚಾಗುತ್ತದೆ, ಆ್ಯಕ್ನೆ ಕಾಟ ಹೆಚ್ಚುತ್ತದೆ. ಆ್ಯಕ್ನೆ, ಮೊಡವೆ ದೂರ ಮಾಡಲು, ಬೇವಿನ ಕೆಲವು ಎಲೆಗಳನ್ನು ತೊಳೆದು ಅದಕ್ಕೆ ತುಸು ಅರಿಶಿನ, ತೇವಾಂಶಕ್ಕಾಗಿ ತುಸು ಹಾಲು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ.
ಈ ಪೇಸ್ಟ್ ನ್ನು ಮೊಡವೆಗಳ ಭಾಗಕ್ಕೆ ನಿಧಾನವಾಗಿ ಸವರಬೇಕು. 10 ನಿಮಿಷ ಬಿಟ್ಟು ನೀರಿನಿಂದ ಮುಖ ತೊಳೆಯಿರಿ. ಇದರಿಂದ ಚರ್ಮ ಸ್ಮೂಥ್ ಆಗುವುದರ ಜೊತೆ, ಆ್ಯಕ್ನೆಫ್ರೀ ಸಹ ಆಗುತ್ತದೆ. ಇವಕ್ಕೆ ಯಾವುದೇ ಬಗೆಯ ಸ್ಕ್ರಬ್ ಬಳಸದಿರಿ. ಇವುಗಳ ನಿವಾರಣೆಗೆ ಉತ್ತಮ ಕಾಸ್ಮೆಟಿಕ್ ಕ್ಲಿನಿಕ್ ಗೆ ಹೋಗಿ ಚಿಕಿತ್ಸೆ ಪಡೆಯಿರಿ. ಆ್ಯಕ್ನೆ, ಮೊಡವೆಗಳಿಗೆ ಈ ಚಿಕಿತ್ಸೆ ಬಲು ಪರಿಣಾಮಕಾರಿ. ಇದರಿಂದ ಸಮಸ್ಯೆ ಸುಲಭವಾಗಿ ನಿವಾರಣೆ ಆಗುತ್ತದೆ, ಮರಳಿ ಬರುವುದಿಲ್ಲ





