ಪ್ರ : ನಾನು 42ರ ಹರೆಯದ ಗಂಡಸು. ನಾನು ನನ್ನ ಪತ್ನಿ ಕೆಲಸದಲ್ಲಿದ್ದೇವೆ, ಮಗ ನಗರದ ಹಾಸ್ಟೆಲ್ ನಲ್ಲಿ ದೂರದಲ್ಲಿದ್ದು ಕಲಿಯುತ್ತಿದ್ದಾನೆ. ಸಮಸ್ಯೆ ನನ್ನ ವೃದ್ಧ ತಂದೆಯರ ಕುರಿತಾಗಿದೆ. ಅವರು ಎಲ್ಲರಂತೆ ಸುಲಭವಾಗಿ ಮನೆಮಟ್ಟಿಗೆ ಬಾತ್ ರೂಂವರೆಗೆ ಸಹ ನಡೆದಾಡಲಾರರು. ಅವರನ್ನು ಸದಾ 24 x 7 ಜೊತೆಯಲ್ಲೇ ಇದ್ದು, ವಿಶೇಷವಾಗಿ ಗಮನಿಸಿಕೊಳ್ಳಬೇಕು. ಸಮಯದ ಕೊರತೆಯಿಂದ ನಾವಿಬ್ಬರೂ ಸದಾ ಅವರ ಸೇವೆ ಮಾಡಲಾರದೇ ಹೋಗುತ್ತಿದ್ದೇವೆ. ಇವರನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸುವುದು ಸರಿಯೇ? ಅಂಥ ವೃದ್ಧಾಶ್ರಮಗಳ ಕುರಿತು ಮಾಹಿತಿ ನೀಡುವಿರಾ?
ಉ : ಅವೆಲ್ಲದರ ಬದಲು ನಿಮ್ಮ ತಂದೆಯವರನ್ನು ಗಮನಿಸಿಕೊಳ್ಳಲು ಮನೆಯಲ್ಲೇ ಒಬ್ಬ ಮೇಲ್/ಫೀಮೇಲ್ ಕೇರ್ ಟೇಕರ್ ರನ್ನು ನಿಯಮಿಸಿಕೊಳ್ಳಿ. ವಯಸ್ಸಿನ ಈ ಘಟ್ಟದಲ್ಲಿ ವೃದ್ಧರಿಗೆ ಕೇವಲ ಆರ್ಥಿಕ ಮಾತ್ರವಲ್ಲದೆ, ದೈಹಿಕ, ಮಾನಸಿಕ ನೆರವು ಬೇಕಾಗುತ್ತದೆ. ಬೆಳಗ್ಗೆ, ಸಂಜೆ ಹಾಗೂ ರಜಾ ದಿನಗಳಲ್ಲಿ ನೀವೇ ಸ್ವಯಂ ಅವರ ಸೇವೆಗೆ ತೊಡಗಿಕೊಳ್ಳಬಹುದು. ಯಾವುದೋ ವೃದ್ಧಾಶ್ರಮ ಸೇರಿಸಿ ನೀವು ನಿಶ್ಚಿಂತರಾದರೂ, ಅವರಿಗೆ ಅದರಿಂದ 100% ಮನಶ್ಶಾಂತಿ ಹಾಳಾಗುತ್ತದೆ. ಹೀಗಾಗಿ ಮನೆಯಲ್ಲೇ ನೀವು ಇಂಥ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.
ಪ್ರ : ನಾನು 29ರ ಹರೆಯದ, 2 ಮಕ್ಕಳ ತಾಯಿ. ನಾವು ಮುಂದೆ ಮಕ್ಕಳನ್ನು ಬಯಸುತ್ತಿಲ್ಲ. ಇದಕ್ಕಾಗಿ ನನ್ನ ಪತಿ ವ್ಯಾಸೆಕ್ಟಮಿ ಆಪರೇಷನ್ ಮಾಡಿಸಿಕೊಳ್ಳ ಬಯಸುತ್ತಾರೆ. ಇದರಿಂದ ಮುಂದೆ ನಮ್ಮ ದಾಂಪತ್ಯ ಸುಖಕ್ಕೆ ಏನೂ ಅಡ್ಡಿ ಇಲ್ಲ ತಾನೇ?
ಉ : ಇಂದು ಸರ್ಕಾರ ಎಲ್ಲೆಡೆ ಗಂಡಸರ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಸತತ ಪ್ರಚಾರ ನಡೆಸುತ್ತಾ ಕಂಗಾಲಾಗಿರುವಾಗ, ನಿಮ್ಮ ಪತಿ ತಾವಾಗಿ ಮುಂದೆ ಬಂದು ಇದಕ್ಕಾಗಿ ಸಿದ್ಧರಾಗಿರುವುದು, ಅವರು ನಿಮ್ಮನ್ನು ಎಷ್ಟು ಪ್ರೇಮಿಸುತ್ತಾರೆ ಎಂಬುದರ ಸಂಕೇತವಾಗಿದೆ. ಸಾಮಾನ್ಯವಾಗಿ ಗಂಡಸರ ಇಂಥ ಆಪರೇಷನ್ ಕುರಿತು ಜನಸಾಮಾನ್ಯರಲ್ಲಿ ಇರುವ ತಪ್ಪು ಗೊಂದಲ ಎಂದರೆ, ಅವರು ಯಾವ ಹೆಣ್ಣಿಗೂ ಮುಂದೆ ದಾಂಪತ್ಯ ಸುಖ ನೀಡಲಾರರು ಎಂಬುದು. ಈ ಕಾರಣದಿಂದಲೇ ನಮ್ಮ ದೇಶದಲ್ಲಿ ಇಂಥ ವ್ಯಾಸೆಕ್ಟಮಿ ಆಪರೇಷನ್ ಗೆ ಒಪ್ಪುವ ಗಂಡಸರ ಸಂಖ್ಯೆ ಬಹಳ ಬಹಳ ಕಡಿಮೆ!
ಅಸಲಿಗೆ, ವ್ಯಾಸೆಕ್ಟಮಿ ಆಪರೇಶನ್ ನಿಂದ ಗಂಡಸರಿಗೆ ಸಂತಾನ ನೀಡುವ ಶಕ್ತಿ ಹರಣವಾಗುತ್ತದೆಯೇ ಹೊರತು, ಅವರು ದಾಂಪತ್ಯ ಸುಖ ಹೊಂದಲು ಯಾವುದೇ ಅಡ್ಡಿ ಆಗುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಗಂಡಿನ ಶಿಶ್ನದ ಬಳಿ ನರ ಕತ್ತರಿಸಿ, ವೀರ್ಯಾಣು ತನ್ನ ಶಕ್ತಿ ಕಳೆದುಕೊಳ್ಳುವಂತೆ ಮಾಡುತ್ತಾರೆಯೇ ಹೊರತು, ಶಿಶ್ನಕ್ಕಿರುವ ಆ ಸಾಮರ್ಥ್ಯಕ್ಕೆ ಏನೇನೂ ತೊಂದರೆ ಆಗದು.
ಇದು ಬಹು ಸುಲುಭದ, ಅಗ್ಗದ ದರದಲ್ಲಿ ಮಾಡಬಹುದಾದ ಅತಿ ಚಿಕ್ಕ ಆಪರೇಷನ್. ಈ ಆಪರೇಷನ್ ಮುಗಿದ 2-3 ದಿನಗಳಲ್ಲೇ, ಗಂಡಸರು ಎಂದಿನ ತಮ್ಮ ಮಾಮೂಲಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು, ಸೈಕ್ಲಿಂಗ್, ಫುಟ್ ಬಾಲ್ ಇತ್ಯಾದಿ ಅತಿ ಚಟುವಟಿಕೆ ತುಂಬಿದ ಆಟೋಟಗಳಲ್ಲೂ ಪಾಲುಗೊಳ್ಳಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ. ನೀವಿಬ್ಬರೂ ಈ ಬಗ್ಗೆ ನಿಧಾನವಾಗಿ ಚರ್ಚಿಸಿ, ಆರೋಗ್ಯಕರ ನಿರ್ಣಯ ಕೈಗೊಳ್ಳಿ, ಏನೂ ಆತಂಕವಿಲ್ಲ.
ಪ್ರ : ನಾನು 23ರ ಅವಿವಾಹಿತ ಯುವಕ. ಇಬ್ಬರು ಮೂವರು ಹೆಂಗಸರೊಂದಿಗೆ ಕಾಂಡೋಮ್ ಧರಿಸದೆ, ಸಮಾಗಮ ಹೊಂದಿದ್ದೇನೆ. ಇತ್ತೀಚೆಗೆ ಕೆಲವು ದಿನಗಳಿಂದ ನನ್ನನ್ನು ಒಂದು ಸಮಸ್ಯೆ ಕಾಡುತ್ತಿದೆ. ಹೀಗೆ ಸಮಾಗಮ ಹೊಂದಿದ ನಂತರ ನನ್ನ ಗುಪ್ತಾಂಗದಲ್ಲಿ ಬಹಳ ಉರಿ ಕಾಡುತ್ತಿದೆ. ಆ ಕಡೆ ಒಳಭಾಗದ ಚರ್ಮವೆಲ್ಲ ಕೆಂಪು ಕೆಂಪಾಗಿ ಹಿಂಸೆ ಆಗುತ್ತಿದೆ. ಇದರಿಂದ ತೀವ್ರ ನವೆ ಆಗಿ ಸದಾ ಕೆರೆಯುತ್ತಾ ಇರುತ್ತೇನೆ, ಹೊರಗೆ ಹೋದಾಗ ಬಹಳ ಮುಜುಗರ ಆಗುತ್ತದೆ. ಇದರಿಂದ ಪಾರಾಗುವ ಬಗೆ ಹೇಗೆ?
ಉ : ಇಂದಿನ ಆಧುನಿಕ ಜೀವನಶೈಲಿಯಲ್ಲಿ ಸುರಕ್ಷಿತ ಸೆಕ್ಸ್ ಸಂಬಂಧ ಅತಿ ಅತ್ಯಗತ್ಯ. ಇದರ ಸರಳ, ಅಗ್ಗದ ವಿಧಾನ ಎಂದರೆ ಕಾಂಡೋಮ್ ಬಳಸುವಿಕೆ. ಅದನ್ನು ಧರಿಸಿ ಸಮಾಗಮ ಹೊಂದುವುದರಿಂದ, ಯಾವುದೇ ಸೋಂಕಿನ ಸಮಸ್ಯೆ ಇರುವುದಿಲ್ಲ. ನೀವು ಹೇಳಿದಂತೆ ಇಬ್ಬರು ಮೂವರೊಂದಿಗೆ ನೀವು ಈಗಾಗಲೇ ಹೀಗೆ ಅಸುರಕ್ಷಿತ ವಿಧಾನದಲ್ಲಿ ಕೂಡಿರುವುದರಿಂದ, ನಿಮಗೆ ಪ್ರೋಸ್ಟೇಟ್ ಸೋಂಕು ಅಥವಾ ಇನ್ನಿತರ ಫಂಗಲ್ ಇನ್ ಫೆಕ್ಷನ್ ಖಂಡಿತಾ ಆಗಿರುತ್ತದೆ.
ನೀವು ಇನ್ನೂ ತಡ ಮಾಡದೆ ನುರಿತ ಯೂರಾಲಜಿಸ್ಟ್ ರ ಬಳಿ ತಪಾಸಣೆ ಮಾಡಿಸಿ. ಹ್ಞಾಂ, ಮುಂದೆ ಮದುವೆ ಆಗುವವರೆಗೂ ಇಂಥವರ ಸಹವಾಸಕ್ಕೆ ಹೋಗದಿರಿ. ಹಾಗೊಮ್ಮೆ ಅನಿವಾರ್ಯ ಪರಿಸ್ಥಿತಿ ಎದುರಾದರೆ, ಸಾಧ್ಯವಾದಷ್ಟೂ ಸುರಕ್ಷಿತ ಸೆಕ್ಸ್ ಬಗ್ಗೆ ಜಾಗ್ರತೆ ವಹಿಸಿರಿ. ಇದು ಗರ್ಭನಿರೋಧಕ ಸಾಧನ ಮಾತ್ರವಲ್ಲದೆ, ಇಂಥ ಸೋಂಕು ತಗುಲದೆ ಇರಲಿಕ್ಕೂ ನೆರವಾಗುತ್ತದೆ.





