ದೇಶಾದ್ಯಂತ ಇಂಡಿಗೋ ಏರ್ಲೈನ್ ರದ್ದುಗೊಳಿಸಿದ ಪರಿಣಾಮ ಇತ್ತೀಚೆಗಷ್ಟೇ ಮದುವೆಯಾಗಿದ್ದ ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ದಂಪತಿ, ಆರತಕ್ಷತೆ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಿಕೊಂಡ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಮೇಘಾ ಕ್ಷೀರಸಾಗರ ಹಾಗೂ ಒಡಿಶಾ ಮೂಲದ ಸಂಗಮ ದಾಸ್ ಅವರ ಮದುವೆ ನ.23ರಂದು ಭುವನೇಶ್ವರದಲ್ಲಿ ನಡೆದಿತ್ತು. ವಧುವಿನ ಊರು ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಡಿ.3ರಂದು ಆರತಕ್ಷತೆ ಆಯೋಜಿಸಲಾಗಿತ್ತು.
ಪೈಲಟ್ ಸೇರಿದಂತೆ ಸಿಬ್ಬಂದಿ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಯಿಂದ ಇಂಡಿಗೋ ಏರ್ಲೈನ್ ಹಾರಾಟವನ್ನು ರದ್ದುಗೊಳಿಸಿತ್ತು. ಹೀಗಾಗಿ ಭುವನೇಶ್ವರದಲ್ಲೇ ಉಳಿಯುವ ಅನಿವಾರ್ಯತೆ ವಧು-ವರರಿಗೆ ಒದಗಿತ್ತು.
ಮತ್ತೊಂದೆಡೆ ಡಿ.3ರಂದು ಆರತಕ್ಷತೆಗಾಗಿ ಕಲ್ಯಾಣ ಮಂಟಪ ಕೂಡಾ ಬುಕ್ ಮಾಡಲಾಗಿತ್ತು. ಅದರಂತೆ ಸಬಂಧಿಕರು ಆಗಮಿಸಿದಾಗ ವಧುವಿನ ಪೋಷಕರಿಗೆ ದಿಕ್ಕು ತೋಚದಂತಾಯಿತು. ಕೊನೆಗೆ ನವದಂಪತಿಗಳನ್ನು ವರ್ಚುವಲ್ ಮೂಲಕ ಆರತಕ್ಷತೆ ಕಾರ್ಯ ಮುಗಿಸಿದರು. ಸಂಬಂಧಿಕರು ಕೂಡಾ ವರ್ಚುವಲ್ ಮೂಲಕವೇ ವಧು-ವರರನ್ನು ಆಶೀರ್ವದಿಸಿ, ವಧು-ವರರಿಗೆ ತಂದಿದ್ದ ಗಿಫ್ಟ್ನ್ನು ಪೋಷಕರಿಗೆ ನೀಡಿ ತೆರಳಿದರು.





