ಬೆಂಗಳೂರಿನ ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಹಳಿ ಮೇಲೆ ಹಾರಿದ ಎಂಜಿನಿಯರ್ ಶಾಂತನಗೌಡ ಪಾಟೀಲ್ (39) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ವಿಜಯಪುರದ ದೇವರಹಿಪ್ಪರಗಿಯ ಶಾಂತನಗೌಡ ಪಾಟೀಲ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಏಳು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿದ್ದು, ಕುಟುಂಬವು ಕೆಂಗೇರಿ ಸಮೀಪದ ದೊಡ್ಡಬೆಲೆಯ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿತ್ತು.
ಶುಕ್ರವಾರ ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿದ ಶಾಂತನಗೌಡ, ಸುಮಾರು 8.10ರ ಸುಮಾರಿಗೆ ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಏಕಾಏಕಿ ಹಳಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣ ಹಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಹಳಿಯ ಮೇಲೆ ಬಿದ್ದಿದ್ದ ಶಾಂತನಗೌಡನನ್ನು ರಕ್ಷಿಸಲು ದೌಡಾಯಿಸಿದ್ದಾರೆ. ಅಷ್ಟರಲ್ಲಾಗಲೇ ಶಾಂತನಗೌಡ ಮೃತಪಟ್ಟಿದ್ದರು.
ಶಾಂತನಗೌಡ ಅವರ ಜೇಬಿನಲ್ಲಿದ್ದ ಆಧಾರ್ ಕಾರ್ಡ್ ವಿಳಾಸ ನೋಡಿ ಸಂಬಂಧಿಕರನ್ನು ಪತ್ತೆಹಚ್ಚಲಾಯಿತು. ರಾಜರಾಜೇಶ್ವರಿನಗರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯಿತು ಎಂದು ಕೆಂಗೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟ: ಶಾಂತನಗೌಡ ಪಾಟೀಲ್ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕೆಲದಿನಗಳ ಹಿಂದಷ್ಟೇ ಬಿಡದಿ ಸಮೀಪದ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆ ಸೇರಿದ್ದರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದರಿಂದಾಗಿ ಆತ್ಮಕತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.
ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಶಾಂತನಗೌಡ ಪಾಟೀಲ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸುಮಾರು 45 ನಿಮಿಷಗಳ ಕಾಲ ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. 9.40ರ ಬಳಿಕ ಪುನಃ ಮಾರ್ಗದಲ್ಲಿ ಸಂಚಾರ ಎಂದಿನಂತೆ ಆರಂಭವಾಯಿತು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ವೈಟ್ಫೀಲ್ಡ್ನಿಂದ ಚಲ್ಲಘಟ್ಟಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಮೈಸೂರು ರಸ್ತೆಯಲ್ಲಿಯೇ ಇಳಿದು ಬಸ್ ಹಾಗೂ ಆಟೋ ಸೇರಿದಂತೆ ಪರ್ಯಾಯ ವಾಹನಗಳಲ್ಲಿ ತೆರಳಬೇಕಾಯಿತು. ವೈಟ್ಫೀಲ್ಡ್ಗೆ ಹೋಗಬೇಕಾದ ಪ್ರಯಾಣಿಕರು ಸಹ ಮೈಸೂರು ರಸ್ತೆಗೆ ಬಂದು ಪುನಃ ಮೆಟ್ರೋದಲ್ಲಿ ಪ್ರಯಾಣಿಸುವ ಸಂಕಷ್ಟ ಅನುಭವಿಸಿದರು.





