ಇಂಡಿಗೋ ವಿಮಾನಗಳ ಸಂಚಾರದಲ್ಲಿ ಸತತ ನಾಲ್ಕನೇ ದಿನವೂ ವ್ಯತ್ಯಯವಾಗಿದ್ದು, ಬೆಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ವಿಮಾನಗಳ ಸಂಚಾರ ದಿಢೀರ್ ರದ್ದಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಸಾವಿರಾರು ವಿಮಾನಗಳ ಸಂಚಾರ ರದ್ದಾಗಿದ್ದು, ಸಿಬ್ಬಂದಿಯ ಕೊರತೆಯಿಂದಾಗಿ ಇಂಡಿಗೋ ದೇಶೀಯ, ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಿದೆ. ಇದರಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ​ ಒಂದರಲ್ಲೇ ಒಟ್ಟು 300ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಕಳೆದ ನಾಲ್ಕು ದಿನಗಳಿಂದ ಸಮಸ್ಯೆಯಾಗುತ್ತಿದ್ದು, ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.

ಕನ್ನಡಿಗರ ಪರದಾಟ: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವಿಳಂಬ ಆಗಿದ್ದರಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಪರದಾಡಿದರು. ಬೆಂಗಳೂರಿಗೆ ಬರಲಾಗದೇ ಗಂಟೆಗಟ್ಟಲೇ ವಿಮಾನ ನಿಲ್ದಾಣದಲ್ಲೇ ಕಾದು ಕುಳಿತ ದೃಶ್ಯಗಳು ಕಂಡುಬಂದಿವೆ.

ವಿಮಾನದೊಳಗೆ ಲಾಕ್! : ಅನೇಕ ಪ್ರಯಾಣಿಕರನ್ನು ವಿಮಾನಕ್ಕೆ ಹತ್ತಿಸಿಕೊಂಡ ಬಳಿಕ ಪ್ರಯಾಣ ವಿಪರೀತ ವಿಳಂಬ ಮಾಡಿದ ಘಟನೆಯೂ ನಡೆಯಿತು, ವಿಮಾನದೊಳಗೆ ಲಾಕ್ ಆದ ಪ್ರಯಾಣಿಕರು, ಇಂಡಿಗೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಯ ಹಾಳು ಮಾಡುತ್ತಿದ್ದಾರೆ. ಮತ್ತೊಂದೆಡೆ, ತಾವು ಪ್ರಯಾಣಿಸಬೇಕಿದ್ದ ವಿಮಾನ ರದ್ದಾದ ಬಗ್ಗೆ ಮೊದಲೇ ಮಾಹಿತಿ ನೀಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಿಮಾನಗಳು ರದ್ದಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಖನೌ ಏರ್​ಪೋರ್ಟ್​​ನಲ್ಲಿ ಘೋಷಣೆ ಕೂಗಿದ್ದಾರೆ. ಪುಣೆ, ದಿಲ್ಲಿ ಸೇರಿದಂತೆ ಅನೇಕ ಕಡೆ ಪ್ರಯಾಣಿಕರು ಏರ್​ಲೈನ್ಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.ರದ್ದಾಗಲು ಕಾರಣವೇನು?: ಇಂಡಿಗೋ ವಿಮಾನಗಳು ರದ್ದಾಗಲು ಮುಖ್ಯ ಕಾರಣ, ಏರ್​ಲೈನ್ ಸಂಸ್ಥೆಯು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಯ ತೀವ್ರ ಕೊರತೆ ಎದುರಿಸುತ್ತಿರುವುದು. ಅನೇಕ ಕಾರ್ಯಾಚರಣೆಯ ಸವಾಲುಗಳನ್ನೂ ಎದುರಿಸುತ್ತಿದೆ ಎನ್ನಲಾಗಿದೆ. ಕೆಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನ ಎದುರಿಸುತ್ತಿರುವುದರಿಂದಲೂ ಹಾರಾಟ ವಿಳಂಬವಾಗುತ್ತಿದೆ ಎನ್ನಲಾಗಿದೆ.

ದಿಢೀರ್ ಕೊರತೆ ಆಗಿದ್ದೇಕೆ?: ನಾಗರಿಕ ವಿಮಾನಯಾನ ನಿರ್ದೇಶನಾಲಯ ನ. 1 ರಂದು ವಿಮಾನ ಕರ್ತವ್ಯ ಸಮಯದ ಮಿತಿಗೆ ಸಂಬಂಧಿಸಿದ ಪರಿಷ್ಕೃತ ಮಾನದಂಡಗಳನ್ನು ಬಿಡುಗಡೆ ಮಾಡಿತ್ತು. ಅದರಂತೆ, ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ಸಮಯ ನೀಡುವುದು ಕಡ್ಡಾಯವಾಗಿದೆ. ಅಲ್ಲದೆ, ಪೈಟಲ್​ಗಳ ಆಯಾಸ ಕಡಿಮೆ ಮಾಡಿ ಸುರಕ್ಷತೆ, ದಕ್ಷತೆಯನ್ನು ಸುಧಾರಿಸಲು ರಾತ್ರಿಯ ಕಾರ್ಯಾಚರಣೆಗಳನ್ನು ಮಿತಿಗೊಳಿಸಬೇಕಿದೆ. ಇದರಿಂದಾಗಿ ಏಕಾಏಕಿ ಪೈಲಟ್ ಕೊರತೆ ಎದುರಿಸುವಂಥ ಅನಿವಾರ್ಯತೆ ಸೃಷ್ಟಿಯಾಯಿತು ಎಂದೂ ಕೂಡಾ ಹೇಳಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ