ಊರ ಹೊರಗಿನ ಬಡಾವಣೆಯ ಒಂಟಿ ಮನೆಯಲ್ಲಿದ್ದ ಲೇಖಕಿಯ ಮನೆಗೆ ಎದುರಾಗಿ ಯಾರೋ ಶ್ರೀಮಂತರು ಆಕಸ್ಮಿಕವಾಗಿ ಬಾಡಿಗೆಗೆ ಬಂದಿಳಿದಾಗ, ಆ ಮನೆಯ ವಿಚಿತ್ರ ಪರಿಸ್ಥಿತಿ ಇವರಿಗೆ ಕುತೂಹಲ ಮೂಡಿಸಿತು. ಆ ಮನೆಯ ಸೊಸೆ ಸದಾ ಮುಚ್ಚಿದ ಕೋಣೆಯಲ್ಲಿ ಅಡಗಿರಬೇಕು ಏಕೆ….? ಈ ರಹಸ್ಯ ಕೊನೆಗೆ ಬಯಲಾದದ್ದು ಹೇಗೆ………?
ಹೊರಲಯದ ಬಡಾವಣೆ, ಸುತ್ತಮುತ್ತಲೂ ಎತ್ತೆತ್ತಲೂ ಇನ್ನು ಒಂದು ಮನೆಯೂ ಹುಟ್ಟಿಕೊಳ್ಳದೆ, ಅಕ್ಷರಶಃ ಕಾಡಿನಂತಿತ್ತು ಆ ಜಾಗ. ಒಳ್ಳೊಳ್ಳೆ ಬಡಾವಣೆಯಲ್ಲಿ ಅನೇಕ ಸೈಟುಗಳು ಮಾರಾಟಕ್ಕಿದ್ದವು. ಆದರೆ ಅವುಗಳ ಬೆಲೆ ನಮ್ಮ ಕೈಗೆ ಎಟುಕುವಂತಿರಲಿಲ್ಲ. ತುಸು ಹೊರಲಯದಲ್ಲಾದರೂ ಪರವಾಗಿಲ್ಲ, ಎಂದು ದಲ್ಲಾಳಿಯ ಮುಂದೆ ಹೇಳಿಕೊಂಡೆವು.
ಕೈಗೆಟುಕು ದರದಲ್ಲಿ ಮೈಸೂರಿನ ಹೊರಲಯದಲ್ಲಿ ದಲ್ಲಾಳಿ ತೋರಿಸಿದ ಅನೇಕ ಸೈಟುಗಳ ಪೈಕಿ 30 x 40ರ ಈ ಸೈಟು ಒಪ್ಪಿಗೆ ಆಗಿ ವಾಸ್ತು ಪ್ರಕಾರ ಡ್ಯೂಪ್ಲೆಕ್ಸ್ ಮನೆಯೊಂದನ್ನು ನಿರ್ಮಿಸಿಕೊಂಡು ಒಳ ಪ್ರವೇಶ ಮಾಡಿದ್ದಾಯ್ತು.
ನಮ್ಮಂಥ ಮಧ್ಯಮ ವರ್ಗದವರಿಗೆ ಕೈಗೆಟುಕುವ ಬಾಡಿಗೆಗೆ ಮನೆಗಳು ಸಿಗುತ್ತಿದ್ದವು. ಹಾಗಾಗಿ ಬಾಡಿಗೆ ಮನೆಯಲ್ಲಿರುವುದು ಇಲ್ಲಿಯವರೆಗೂ ನಮಗೇನು ಸಮಸ್ಯೆಯಾಗಿ ಕಾಡಿರಲಿಲ್ಲ. ಮೇಂಟೆನೆನ್ಸ್ ನ ಜಂಜಾಟದ ತಲೆನೋವು ಬಾಡಿಗೆ ಮನೆಯವರಿಗೆ ಇರುವುದಿಲ್ಲ ಅಂತ ನೆಮ್ಮದಿಯಾಗಿ ಮೈಸೂರಿಗೆ ಬಂದ ಮೇಲೆ ಕಳೆದ ಏಳು ವರ್ಷಗಳಿಂದ ಬಾಡಿಗೆ ಮನೆಗಳನ್ನೇ ಆಶ್ರಯಿಸಿದ ನಮಗೆ ಐಟಿ ಕಂಪನಿಗಳು ಮೈಸೂರಿನತ್ತ ಧಾವಿಸಿ ಬಂದು ಹೊಡೆತ ಕೊಟ್ಟವು. ದಿನ ಬೆಳಗಾಗುವುದರೊಳಗೆ ಮನೆಬಾಡಿಗೆ ದುಪ್ಪಟ್ಟಾಗಿಬಿಟ್ಟಿತು. ದುಪ್ಪಟ್ಟು ಬಾಡಿಗೆ ಕೊಟ್ಟು ಇರಿ, ಇಲ್ಲಾಂದ್ರೆ ಮನೆ ಖಾಲಿ ಮಾಡಿ ಎಂದು ಮನೆಯ ಮಾಲೀಕ ದಿನ ಮನೆ ಮುಂದೆ ಬಂದು ಪೀಡಿಸತೊಡಗಿದ. ಅವನು ಹೇಳಿದ ಬಾಡಿಗೆ ನಮಗೆ ದುಬಾರಿ ಎನಿಸಿದಾಗ ನಮಗೆ ನಮ್ಮದೇ ಆದ ಒಂದು ಸೂರು ಮಾಡಿಕೊಳ್ಳುವ ಯೋಚನೆ ಬಂದಿತು.
ಬಾಲ ಸುಟ್ಟ ಬೆಕ್ಕಿನ ಹಾಗೆ ಆ ಮನೆ ಈ ಮನೆ ಅಂತ ಬದಲಾಯಿಸುವ ಗೋಜು ತಾಪತ್ರಯ ಯಾವುದೂ ಇರುವುದಿಲ್ಲ. ಬಾಡಿಗೆಗೆ ಕಟ್ಟುವ ಹಣವನ್ನೇ ಸಾಲದ ಕಂತಾಗಿ ಕಟ್ಟಬಹುದಲ್ಲ, ಎಂಬ ಐಡಿಯಾವನ್ನು ಕಾರ್ಯರೂಪಕ್ಕಿಳಿಸಿ ಈ ಮನೆ ಕಟ್ಟಿದ್ದಾಯ್ತು. ಆದರೆ ಅರೇ ಕಾಡಿನಲ್ಲಿ ಒಂಟಿ ಮನೆ ಎಂಬಂತಾಗಿತ್ತು. ತೀರ ಹತ್ತಿರದಲ್ಲಿ ನಮಗೇನು ಸಿಗುತ್ತಿರಲಿಲ್ಲ. ಪ್ರತಿಯೊಂದಕ್ಕೂ ಎರಡು ಕಿ.ಮೀ. ದೂರದ ವಿವೇಕಾನಂದ ಸರ್ಕಲ್ ಗೆ ಹೋಗಬೇಕಾಗುತ್ತಿತ್ತು.
ಇವರು ಕೆಲಸದಿಂದ ಬರುವಾಗಲೇ ಮನೆಗೆ ಬೇಕಾಗುವ ಸಾಮಾನುಗಳನ್ನು ತಂದು ಬಿಡುತ್ತಿದ್ದರಿಂದ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಇನ್ನು ಏಕಾಂತ ಪ್ರಿಯಳಾದ ನನಗೆ ನನ್ನ ಸುತ್ತಮುತ್ತಲೂ ಯಾವುದಾದರೂ ಮನೆ ಇರಬೇಕಿತ್ತು, ಎಂದು ನನಗೆ ಅನಿಸಿರಲೇ ಇಲ್ಲ. ನಾನು ಒಂಟಿಯಾಗಿ ಇರಬಲ್ಲವಳಾಗಿದ್ದೆ, ನನಗದು ಪ್ರಿಯ ಅನಿಸಿತ್ತು.
ಇನ್ನು ಮನೆಯ ಪಕ್ಕ ಹಾದು ಹೋಗಿರುವ ರಸ್ತೆಯಾಚೆಗೆ ಕೆರೆ ಇತ್ತು. ಕೆರೆಯ ಏರಿಯ ಮೇಲೆ ಜನ ಎರಡು ಹೊತ್ತು ವಾಕಿಂಗ್ ಗೆ ಬರುತ್ತಿದ್ದರು. ಹಾಗೆ ಬರುತ್ತಿದ್ದರ ಕುತೂಹಲದ ದೃಷ್ಟಿ, ನೋಟ ನಮ್ಮ ಮನೆಯತ್ತಲೇ ಇರುತ್ತಿತ್ತು. ಅವರು ತಮ್ಮ ತಮ್ಮೊಳಗೆ ಏನೇನೋ ಮಾತನಾಡಿಕೊಳ್ಳುತ್ತಾ ಹೋಗುತ್ತಿದ್ದರು. ನಮ್ಮ ಮನೆ ಅವರೊಳಗೆ ಯಾವ ತರಹದ ಭಾವನೆಯನ್ನು ಮೂಡಿಸುತ್ತಿತ್ತೋ ತಿಳಿಯದು. ಆದರೆ ನನ್ನಲ್ಲಿ ಕುತೂಹಲ ಇರುತ್ತಿತ್ತು.
ಕೆಲವೊಮ್ಮೆಯಂತೂ ಕುತೂಹಲ ತಣಿಯದ ಕೆಲವು ದಾರಿಹೋಕರು ಏರಿ ಇಳಿದು ನಮ್ಮ ಮನೆ ಹತ್ತಿರ ಬಂದು, “ರೀ, ಕಾಡಿನ ಹಾಗಿರುವ ಈ ಪರಿಸರದಲ್ಲಿ ನೀವೊಬ್ಬರೇ ಮನೆ ಕಟ್ಟಿಕೊಂಡು ಅದು ಹೇಗೆ ವಾಸಿಸುತ್ತಿರುವಿರಿ….? ನಿಮಗೆ ಇಲ್ಲಿ ಭಯ ಅನಿಸೋದಿಲ್ವೇ…..?” ಇತ್ಯಾದಿಯಾಗಿ ಪ್ರಶ್ನಿಸುತ್ತಿದ್ದರು.
ಅವರ ಪ್ರಶ್ನೆಗಳಿಗೆ ನನ್ನ ಮುಗುಳ್ನಗುವೆ ಉತ್ತರವಾಗಿರುತ್ತಿತ್ತು. ಜೀವನದ ಅನಿವಾರ್ಯತೆಯ ಮುಂದೆ ಯಾವ ಭಯ ಅಂಜಿಕೆಯೂ ದೊಡ್ಡದೆನಿಸಲಾರದು ಎನ್ನುವ ಅನಿಸಿಕೆ ನನ್ನದಾಗಿತ್ತು. ಆದರೆ ಕೇಳುಗರಿಗೆ ಹಾಗೇ ಹೇಳಲು ಆಗುವುದಿಲ್ಲವಲ್ಲ…. ಹೇಳಿದರೆ ಅದೊಂದು ಅಹಂಕಾರ, ಜಂಭದ ಹೇಳಿಕೆ ಆಗಬಹುದು. ಹಾಗಂತ ನನಗೆ ಭಯವಾಗುವುದೇ ಇಲ್ಲ ಅಂತೇನೂ ಇರಲಿಲ್ಲ. ನನಗೂ ಅಲ್ಲಿ ಒಬ್ಬಳೇ ಇಡೀ ದಿನ ಇರಲು ಭಯ ಆಗುತ್ತಿತ್ತು. ನಮ್ಮ ಬದುಕಿನ ಅನಿವಾರ್ಯತೆಗೆ ಧೈರ್ಯದ ಮುಖವಾಡ ಅತ್ಯವಶ್ಯಕ.
ಅದೊಂದು ಶುಭ ಮುಹೂರ್ತದಲ್ಲಿ ನಮ್ಮನೆ ಎದುರಿನ ಖಾಲಿ ಸೈಟಿನ ಎಡ ಪಕ್ಕದಲ್ಲಿರುವ ಸೈಟಿನಲ್ಲಿ ಭೂಮಿ ಪೂಜೆ ನಡೆಯಿತು. ಅವರು ಸೇಟು ಜನ. ಅವರು ತೊಟ್ಟ ವೇಷಭೂಷಣದಿಂದಲೇ ಅವರು ಭಾರೀ ಶ್ರೀಮಂತರಿರಬಹುದು ಎಂದು ಊಹಿಸಬಹುದಿತ್ತು. ಕೇವಲ ಭೂಮಿ ಪೂಜೆಗೆ 25-30 ಮಂದಿ ನೆರೆದಿದ್ದರು. ಒಬ್ಬ ಪುರೋಹಿತ, ಒಬ್ಬ ಎಂಜಿನಿಯರ್ ನಾವು ಗಂಡ ಹೆಂಡತಿ, ನಮ್ಮ ಮಗ ಇಷ್ಟೇ ಜನ ಸೇರಿ ಭೂಮಿ ಪೂಜೆಯ ಶಾಸ್ತ್ರ ಮುಗಿಸಿದ್ದು ನೆನಪಿಗೆ ಬಂದಿತು. ಆದರೆ ಇಂದು ಈ ಸೇಟು ಕುಟುಂಬದವರ ಭೂಮಿ ಪೂಜೆಗೆ ಅಷ್ಟೊಂದು ಜನ ಸೇರಿದ್ದು, ನನಗೆ ಆಶ್ಚರ್ಯವನ್ನು ಉಂಟು ಮಾಡಿತು. ಬಂದವರೆಲ್ಲ ಒಂದೆರಡು ತಾಸಿನವರೆಗೂ ಗಲಗಲ ಎಂದು ಮಾತನಾಡುತ್ತಾ, ನಗುನಗುತ್ತಾ ಅಂತೂ ಭೂಮಿ ಪೂಜೆಯ ಶಾಸ್ತ್ರ ನೆರವೇರಿಸಿ ಹೋದರು.

ಪಂಜರದ ಗಿಳಿಯಂತೆ ಒಬ್ಬಂಟಿಯಾಗಿದ್ದ ನನಗೆ ಎಷ್ಟೋ ದಿನಗಳ ಮೇಲೆ ಅಷ್ಟೊಂದು ಮನುಷ್ಯ ಧ್ವನಿ ಕೇಳಿ ಪುಳಕಿತಳಾಗಿದ್ದೆ. ಹೊರಗಡೆ ಯಾರೋ ಬಾಗಿಲು ತಟ್ಟಿದಂತಾಯ್ತು. ಹೋಗಿ ಬಾಗಿಲು ತೆರೆದೆ, ಎದುರಿಗೆ ಭೂಮಿ ಪೂಜೆ ಮಾಡಿಸಿದ ಸೇಟೂ ಮತ್ತವನ ಅರ್ಧಾಂಗಿ ಮುಗುಳ್ನಗುತ್ತಾ ನಿಂತಿದ್ದರು. ನನ್ನನ್ನು ನೋಡಿ, “ನಮಸ್ತೆ ಬೆಹನ್ ಜೀ,” ಎಂದರು ಒಟ್ಟಿಗೆ. ಅವರ ಕೈಯಲ್ಲಿ ಸಿಹಿಯ ಪೊಟ್ಟಣವಿತ್ತು.
“ಇವತ್ತು, ನಮ್ದೂಕೀ…. ಸೈಟಿನ ಪೂಜಾ ಇತ್ತು. ಅದಕ್ಕೆ ನಿಮ್ದೂಕೆ ಸ್ವೀಟ್ ಕೊಟ್ಟು ಹೋಗೋಣ ಅಂತ ಬಂದ್ವಿ…..” ಎಂದು ಹೇಳಿದರಾಕೆ.
ಒಂದು ತುಂಡು ಸಿಹಿಯನ್ನು ತೆಗೆದುಕೊಳ್ಳವೆಂದು ಕೈ ಹಾಕಿದೆ. ಅವರು ಪೂರ್ತಿ ಪೊಟ್ಟಣವನ್ನೇ ನನ್ನ ಕೈಯಲ್ಲಿಡುತ್ತಾ, “ಇಷ್ಟೂ ನಿಮ್ದೂಕೆ… ಇದೆ,” ಎನ್ನುತ್ತಾ ನಾನು ಎಷ್ಟು ಬೇಡವೆಂದರೂ ಇಡೀ ಪೊಟ್ಟಣವನ್ನು ನನ್ನ ಕೈಯಲ್ಲಿಟ್ಟು, “ನಮಸ್ತೆ, ನಮ್ದು ಬರ್ತೀವಿ,” ಎನ್ನುತ್ತಾ ಹೊರಟುಹೋದರು.
ಬಾಗಿಲೆಳೆದು ಒಳಬರುತ್ತಾ, `ಅತಿ ವಿನಯಂ ಧೂರ್ತ ಲಕ್ಷಣಂ….’ ಎಂಬಂತೆ ಎಲ್ಲೆಲ್ಲಿಂದಲೋ ಬಂದು ಇಲ್ಲಿ ನೆಲೆಯೂರಿ ಸ್ಥಳೀಯರನ್ನೇ ಕೆಲಸಕ್ಕಿಟ್ಟುಕೊಂಡು ಅಧಿಕಾರ ಚಲಾಯಿಸುವ ಇವರುಗಳ ಬುದ್ಧಿ ಬಗ್ಗೆ ನನಗಿರುವ ಅಸಹನೆ ಮನದೊಳಗೆ ಸುಳಿದುಹೋಯಿತು. ದುಡ್ಡಿರುವವರು, ಮುಂದೆ ಐದಾರು ತಿಂಗಳುಗಳೊಳಗಾಗಿ ಆ ಸೈಟಿನಲ್ಲಿ ಭದ್ರವಾದ ಭವ್ಯ ಮನೆಯೊಂದು ಎದ್ದಿತು. ಸೇಟುಗಳು ಅಂದಮೇಲೆ ಕೇಳಬೇಕೇ…. ಲಕ್ಷ್ಮಿ ಅವರ ಮನೆಯಲ್ಲಿ ಕಾಲು ಮುರಿದುಕೊಂಡು ನೆಲೆ ನಿಂತಿರುತ್ತಾಳೆ.
ಆ ಸೇಟುವಿನ ಭವ್ಯ ಬಂಗಲೆಯೇನೋ ಮೇಲೆದ್ದಿತ್ತು. ಆದರೆ ಅವನಿಗೆ ಈಗಾಗಲೇ ಕುವೆಂಪು ನಗರದಲ್ಲಿ ಮನೆಯಿತ್ತೆಂದು ಅಲ್ಲಿಯ ಕೆಲಸಗಾರರು ಮಾತಾಡುವುದು ಕಿವಿಗೆ ಬಿದ್ದಿತು. ಅಂದಮೇಲೆ ಇದೊಂದು ಅವನ ಬೇನಾಮಿ ಆಸ್ತಿ ಆಗಿರಬಹುದೆಂದು ಊಹಿಸಿದೆ. ಮನೆ ಕಟ್ಟಿದ ತಿಂಗಳೊಪ್ಪತ್ತಿನಲ್ಲಿ ಆ ಮನೆಗೆ ಕುಟುಂಬವೊಂದು ಬಾಡಿಗೆಗೆ ಬಂದಿತು. ಸಂಜೆ ಏಳರ ಸಮಯ ನಾನು ಅಡುಗೆಮನೆಯಲ್ಲಿ ಕುಕ್ಕರ್ ಇಡುವ ತಯಾರಿಯಲ್ಲಿದ್ದೆ. ಮನೆಯ ಮುಂದೆ ಲಾರಿಯೊಂದು ಬಂದು ನಿಂತಂತಾಯಿತು. ಈ ಹೊತ್ತಿನಲ್ಲಿ ನಮ್ಮ ಮನೆಯ ಮುಂದೆ ಲಾರಿಯಾ…? ಎಂಬ ಅಚ್ಚರಿಯೊಂದಿಗೆ ಮುಂಬಾಗಿಲು ತೆರೆದು ನೋಡಿದೆ. ಲಾರಿ ತುಂಬಾ ಬೆಲೆ ಬಾಳುವ ಸಾಮಾನು ಸರಂಜಾಮುಗಳಿದ್ದವು. ಲಾರಿ ಡ್ರೈವರ್ ಕೆಳಗಿಳಿದು ಅದೇ ಲಾರಿಗೆ ಒರಗಿಕೊಂಡು ಯಾರೊಂದಿಗೊ ಮಾತಾಡುತ್ತಿದ್ದ. ಆ ಮನೆಗೆ ಯಾರು ಬಂದಿರಬಹುದು? ಎಂಬ ಕುತೂಹಲದಿಂದ ನೋಡುತ್ತಾ ನಿಂತಿದ್ದೆ. ಲಾರಿ ಡ್ರೈವರ್ ಫೋನ್ ನಲ್ಲಿನ ಮಾತು ಮುಗಿಸಿ ಇತ್ತ ತಿರುಗಿದ ಕೂಡಲೇ ನಂಗೆ ಹೆದರಿಕೆಯಾಗಿ ಬಾಗಿಲೆಳೆದು ಒಳಬಂದೆ.
ಅದೆಷ್ಟೋ ಹೊತು ಲಾರಿ ನಿಂತಲ್ಲೇ ನಿಂತಿತ್ತು. `ಕಹೋ ನಾ ಪ್ಯಾರ್ ಹೈ’ ಸಿನಿಮಾದ ಟೈಟಲ್ ಹಾಡನ್ನು ಜೋರಾಗಿ ಹಾಕಿಕೊಂಡು, ಬೀಡಿ ಸೇದುತ್ತಾ ಲಾರಿ ಡ್ರೈವರ್ ಮತ್ತು ಅವನೊಂದಿಗೆ ಇನ್ನಿಬ್ಬರು ಇದ್ದರು. ನಿಶ್ಶಬ್ದ ವಾತಾವರಣದಲ್ಲಿ ಒಮ್ಮೆಲೆ ಕರ್ಕಶ ಶಬ್ದ ಉಂಟಾಗಿದ್ದರಿಂದಲೇ ಅಥವಾ ಅಪರಿಚಿತರನ್ನು ಕಂಡಿದ್ದರಿಂದಲೋ ಬಡಾವಣೆಯಲ್ಲಿದ್ದ ಏಳೆಂಟು ನಾಯಿಗಳು ಒಟ್ಟುಗೂಡಿ ಹಾಡಿಗೆ ತಮ್ಮದೇ ರಾಗ ಎಂಬಂತೆ `ಬೌ… ಬೌ…..’ ಎಂದು ಬೊಗಳತೊಡಗಿದ.
“ಹೊಯ್….. ಚ್…. ಚ್…..” ಎನ್ನುತ್ತಾ ಮಾಲಿಯೊಬ್ಬ ನಾಯಿಯತ್ತ ಕಲ್ಲು ಬೀಸಿದ. ಅವು `ಕುಂಯ್ ಕುಂಯ್’ ಎನ್ನುತ್ತಾ ಅಲ್ಲಿಂದ ಓಡಿ ದೂರದಲ್ಲಿ ನಿಂತು ಮತ್ತೆ ತಮ್ಮ ರಾಗವನ್ನು ಮುಂದುವರಿಸಿದ. ಹೊರಗಡೆ ಕತ್ತಲೆ ಇದ್ದರೂ ಲಾರಿಯ ಹೆಡ್ ಲೈಟಿನ ಬೆಳಕಲ್ಲಿ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿತ್ತು.
ಆದರೆ ಹೊರಗಡೆ ಅವರು ಸೇದುತ್ತಿದ್ದ ಬೀಡಿಯ ಘಾಟು ವಾಸನೆ ತಣ್ಣನೆಯ ಹೊತ್ತಿನಲ್ಲಿ ಅಲೆ ಅಲೆಯಾಗಿ ಹರಿದು ಅಡುಗೆಮನೆಯ ಕಿಟಿಕಿ ಮೂಲಕ ಒಳಸೇರಿ ನನಗೆ ಕಿರಿಕಿರಿ ಎನಿಸತೊಡಗಿತು. ನನಗೆ ಸಹಿಸಲಾಗದೆ ಹಾಲಿಗೆ ಬಂದು ಟಿವಿ ಹಾಕಿಕೊಂಡು ನೋಡುತ್ತಾ ಕುಳಿತೆ. ಹೊರಗಡೆ ಕಾರು ನಿಂತ ಸದ್ದು, ಜೊತೆಗೆ ಜೋರು ದ್ವನಿಯಲ್ಲಿ ಮಾತುಗಳು ಕೇಳತೊಡಗಿದವು.
ಓಹ್…. ಬಹುಶಃ ಆ ಮನೆಗೆ ಬಾಡಿಗೆಗೆ ಬಂದವರ ಕಾರಿರಬಹುದು. ಬಂದವರು ಯಾರಿರಬಹುದು? ಹೇಗಿರಬಹುದು? ಎಂದು ಬಾಗಿಲು ಸ್ವಲ್ಪ ಓರೆ ಮಾಡಿ ಹೊರಗಡೆ ನೋಡುತ್ತಾ ನಿಂತೆ. ಆ ಮನೆಯ ಬೆಳಕಿನಲ್ಲಿ ಬಂದವರು ಸ್ಪಷ್ಟವಾಗಿ ಕಾಣಿಸಿದರು. ಸುಮಾರು 30-35 ವರ್ಷ ವಯಸ್ಸಿನ ಒಬ್ಬ ಗಂಡಸು, 60-65ರ ಒಬ್ಬ ಹೆಂಗಸು, ಇನ್ನೊಬ್ಬಳು 27-28ರ ಆಸುಪಾಸಿನ ಹೆಂಗಸು. ಅಷ್ಟು ದೊಡ್ಡ ಮನೆಗೆ ಬಂದವರು ಕೇವಲ ಮೂರೇ ಮಂದಿ? 60ರ ಆಸುಪಾಸಿನ ಹೆಂಗಸು ಆತನ ಅಥವಾ ಆಕೆಯ ತಾಯಿಯಾಗಿದ್ದಿರಬಹುದು. ಹಿರಿಯ ಹೆಂಗಸು ಮತ್ತು ಆತ ಚೆನ್ನಾಗಿ ಮೈ ಕೈ ತುಂಬಿಕೊಂಡು ಆರೋಗ್ಯವಾಗಿ ಕಳೆ ಕಳೆಯಾಗಿದ್ದರು. ಆ ಹುಡುಗಿ ಮಾತ್ರ ಸರಿಯಾಗಿ ನಿಲ್ಲಲೂ ಕೂಡ ಆಗದಷ್ಟು ಕೃಶಳಾಗಿ ಆನಾರೋಗ್ಯ ಪೀಡಿತಳಾಗಿದ್ದಂತೆ ಕಂಡಳು. ಬಹುಶಃ ಆಕೆಯ ಆರೋಗ್ಯ ಸರಿ ಇಲ್ಲದಿರಬಹುದು ಎಂದುಕೊಳ್ಳುತ್ತಾ ಬಾಗಿಲು ಮುಚ್ಚಿದೆ.
ಇವರು ಮೂರು ಮಂದಿಗೆ ಇಷ್ಟು ದೊಡ್ಡ ಬಂಗಲೆಯೇ? ಅದು ಊರ ಹೊರಲಯದಲ್ಲಿರುವ ಈ ಮನೆ….? ಮೇಲ್ನೋಟಕ್ಕೆ ಸಾಕಷ್ಟು ಸ್ಥಿತಿವಂತರಂತೆ ಕಾಣುತ್ತಿದ್ದಾರೆ. ಇವರು ಕೊಡುವ ಬಾಡಿಗೆಗೆ ಸಿಟಿಯಲ್ಲೇ ಒಳ್ಳೊಳ್ಳೆ ಮನೆಗಳು ಸಿಗುತ್ತವೆ. ನಮ್ಮ ಹಾಗೆ ಸ್ವಂತ ಮನೆ ಎಂಬ ಅನಿವಾರ್ಯತೆ ಇಲ್ಲ. ಹಾಗಿದ್ದ ಮೇಲೂ ಏನೂ ಸಿಗದಿರುವಂತಹ ಈ ಬಡಾವಣೆಯಲ್ಲಿ ಏಕೆ ಮನೆ ಬಾಡಿಗೆಗೆ ಹಿಡಿದಿದ್ದಾರೆ? ಹೀಗೆ ಮನದಲ್ಲಿ ಪ್ರಶ್ನೆಗಳ ಸರಮಾಲೆ. ಇಡೀ ಒಂದೂವರೆ ವರ್ಷ ಒಂಟಿ ಮನೆಯಿರುವ ಬಡಾವಣೆಯಲ್ಲಿ ಜಂಟಿ ಮನೆ ಎಂದು ಸೇರಿದ್ದಕ್ಕೆ ಸಂತೋಷವಾಯಿತೊ, ಇಲ್ಲಾ ಅಸೂಯೆ ಎನಿಸಿತೊ ತಿಳಿಯಲಿಲ್ಲ.
ರಾತ್ರಿ ಹೊತ್ತು ಸಿನಿಮಾ ಮುಗಿಸಿ ಬರುವಾಗ ಕಂಡುಬರುವ ತೋಳ, ಕಾಡುಹಂದಿ, ಹಗಲು ಹೊತ್ತಿನಲ್ಲಿ ತಿರುಗಾಡುವ ನಾಯಿ, ಬೆಕ್ಕುಗಳು, ಮಳೆ ಬಂದಾಗ ಆಗಾಗ ಅಲ್ಲಲ್ಲಿ ಕಂಡುಬರುವ ಹಾವು, ಚೇಳುಗಳು, ಇನ್ನು ರಸ್ತೆಯಲ್ಲಿ ಕಾಲಿಡಲು ಜಾಗವಿಲ್ಲದಂತೆ ರಸ್ತೆ ತುಂಬ ತೆವಳುವ ಬಸವನ ಹುಳುಗಳು ಹೀಗೆ….. ಇವೆಲ್ಲ ಜೀವಜಂತುಗಳ ಮಧ್ಯದಲ್ಲಿ ಕಾಡಿನ ರಾಣಿಯಂತೆ, ಹಾಯಾಗಿದ್ದ ನನಗೆ ಈಗ ಬಂದಿರುವ ಮನುಷ್ಯ ಪ್ರಾಣಿಗಳಿಂದ ನನ್ನ ನೆಮ್ಮದಿಗೆ ಅದೆಲ್ಲಿ ಭಂಗ ಬರುವುದೊ ಎಂಬ ಆತಂಕ ಅಸಮಾಧಾನ ನನ್ನಲ್ಲಿ ಉಂಟಾಯಿತು.
ನಾವು ಈ ಮನೆಗೆ ಬಂದ ಹೊಸದರಲ್ಲಿ `ಸಿಸಿ ಟಿವಿ’ ಎಂಬ ಮೂರನೇ ಮಾಯಾವಿ ಕಣ್ಣು ಅದೇ ತಾನೇ ಇಂಡಿಯಾಕ್ಕೆ ಕಾಲಿಟ್ಟಿತ್ತು. “ನಿಮ್ಮ ಮನೆಗೆ ಸಿಸಿ ಟಿವಿ ಹಾಕಿಸಿಕೊಳ್ಳಿ ಮ್ಯಾಡಂ. ಇಂತಹ ಜಂಗಲ್ ನಲ್ಲಿ ಮನೆ ಕಟ್ಟಿಸಿಕೊಂಡವರಿಗೆ ಅದರ ಅಗತ್ಯ ಬಹಳ ಇರುತ್ತೆ. ದಿನವಿಡೀ ಮನೆಯಲ್ಲಿ ಒಬ್ಬರೇ ಇರ್ತೀರಾ….!? ಯಾವ ಟೈಮ್ ನಲ್ಲಿ ಯಾರೂ ಬಂದ್ರು ಹೋದರೂ ಅಂತ ನೀವು ಒಳಗಿನಿಂದಲೇ ನೋಡ್ಬಿಟ್ಟು ಬಾಗಿಲು ತೆಗೆಯಬಹುದಲ್ವಾ….” ಎಂದು ಒಬ್ಬ ಸೇಲ್ಸ್ ಮನ್ ಭವಿಷ್ಯ ನುಡಿಯುವ ಹಾಗೆ ನನ್ನ ದುಂಬಾಲು ಬಿದ್ದಿದ್ದ.
“ನಾನು ನನ್ನ ಮನೆಯವರನ್ನು ಕೇಳಿ ಹೇಳ್ತೀನಿ,” ಅಂತ ಅವನನ್ನು ಸಾಗ ಹಾಕಿದ್ದೆ.
ಅವನು ಹೋದ ಮೇಲೆ ನನಗೂ ಹೌದು ಎನಿಸಿತು. ಅದನ್ನು ಇವರ ಕಿವಿಗೆ ಹಾಕಿದೆ. ಸಿಸಿಟಿವಿಯ ಬಗ್ಗೆ ಇವರಿಗಿರುವ ಅಜ್ಞಾನದಿಂದ, “ನೋಡು ಸಿಸಿಟಿವಿಯರು ತಮ್ಮ ಆಫೀಸ್ ನಲ್ಲಿ ಕುಳಿತೇ ನಮ್ಮ ಮನೆಯಲ್ಲಿನ ಚಲನವಲನಗಳನ್ನೆಲ್ಲಾ ನೋಡುತ್ತಾರೆ, ಗಮನಿಸುತ್ತಾರೆ. ಆಮೇಲೆ ಅವರು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿದ್ರೂ ಮಾಡಬಹುದು….” ಎಂದು ಹೇಳಿ ಅಂಜಿಸಿ, ಬೆದರಿಸಿ ಬಾಯಿ ಮುಚ್ಚಿಸಿದ್ದರು.
ನನ್ನ ದೂರದೃಷ್ಟಿ, ಚಾಣಾಕ್ಷ ಬುದ್ಧಿ ಮತ್ತು ಚುರುಕಿನ ಕಣ್ಣುಗಳು ಯಾವ ಸಿಸಿಟಿವಿಗೂ ಕಡಿಮೆ ಇರಲಿಲ್ಲ. ನಮ್ಮ ಮೇಲೆ ನಮಗೆ ಭರವಸೆ, ವಿಶ್ವಾಸ ಮತ್ತು ಮೈತುಂಬಾ ಎಚ್ಚರಿಕೆಯಿಂದಿದ್ದರೆ, ಯಾವ ಸಮಸ್ಯೆಯೂ ಬರಲಾರದು ಎಂಬ ಭಂಡ ಧೈರ್ಯ ನನ್ನಲ್ಲಿತ್ತು. ಇದುವರೆಗೂ ನನಗಿಲ್ಲಿ, ಯಾವ ತೊಂದರೆಯೂ ಕೂಡ ಆಗಿರಲಿಲ್ಲ.
ಬೆಳಗ್ಗೆ ಗಂಡ, ಮಗನಿಗೆ ಬೈ ಹೇಳಿ ನಾನು ನನ್ನ ಕೆಲಸದಲ್ಲಿ ತೊಡಗಿದ್ದಾಗ, ಹೊರಗಡೆ ಕಾಲಿಂಗ್ ಬೆಲ್ ಸದ್ದಾಯಿತು. ಸಾಮಾನ್ಯವಾಗಿ ಅಷ್ಟು ಹೊತ್ತಿನಲ್ಲಿ ಯಾರೂ ಬರುತ್ತಿರಲಿಲ್ಲ. ‘ಯಾರು ಬಂದಿರಬಹುದು…?’ ಎಂದುಕೊಂಡು ಹೋಗಿ ಕಿಟಕಿಯಲ್ಲಿ ಇಣುಕಿದೆ. ಬಂದಾಕೆ ಎದುರು ಮನೆಗೆ ಹೊಸದಾಗಿ ಬಾಡಿಗೆಗೆ ಬಂದಿರುವ ಹಿರಿಯ ಹೆಂಗಸು.
ಅಬ್ಬಾ…..! ಅವಳದ್ದು ಎಂತಹ ಸೌಂದರ್ಯ, ಕಣ್ಣು ಕುಕ್ಕುವಂತಿತ್ತು. ಹಾಲು ಬಿಳುಪಿನ ಮೈ ಬಣ್ಣ, ಸಂಪಿಗೆಯಂತಹ ನೀಳ ನಾಸಿಕ, ತಿದ್ದಿ ತೀಡಿದಂತಹ ತುಟಿಗಳು ಅದಕ್ಕೆ ಗಾಢವಾಗಿ ಲೇಪಿಸಿರುವ ಲಿಪ್ ಸ್ಟಿಕ್. ಮುಖದಲ್ಲಿ ಮಾಸದ ಮಂದಹಾಸ ಮತ್ತು ಆಕೆಯ ಅಗಾಧ ಪರ್ಸನಾಲಿಟಿಯನ್ನು ನೋಡಿ ದಂಗಾದೆ.
ಬಾಗಿಲು ತೆಗೆದು ಔಪಚಾರಿಕವಾಗಿ ಮಾತನಾಡಿದೆ. ಬಂದಾಕೆ ಹಿಂದಿಯಲ್ಲಿ ತಮಗೊಬ್ಬ ಮನೆ ಕೆಲಸದವಳು, ಹಾಲು ಹಾಕುವವರು ಬೇಕು. ನಿಮಗೆ ಗೊತ್ತಿದ್ದರೆ ನಮ್ಮ ಮನೆಗೆ ಕಳುಹಿಸಿ ಎಂದು ಕೇಳಿಕೊಂಡಳು. ನಾನು ಆಗಲಿ ಎಂಬಂತೆ ತಿ
ತಲೆಯಾಡಿಸಿದೆ.
ಬಡಾವಣೆಯ ಮುಖ್ಯ ರಸ್ತೆಯ ಎಡಕ್ಕೆ ಒಂದು ಬಾಳೆ ತೋಟವಿತ್ತು. ಅದು ಯಾರದೋ ಗೊತ್ತಿಲ್ಲ. ಆ ತೋಟದ ಕಾವಲಿಗೆಂದು ಮಾದೇವಿಯ ಚಿಕ್ಕ ಸಂಸಾರ ಅಲ್ಲಿತ್ತು. ಇವರು ಜಮೀನುಗಳನ್ನು ಸೈಟುಗಳನ್ನಾಗಿ ಪರಿವರ್ತಿಸಿ, ಅಲ್ಲಿ ಮನೆ ನಿರ್ಮಾಣಗಳು ಶುರುವಾದ ಮೇಲೆ ಮಾದೇವಿ ಮತ್ತು ಅವಳ ಗಂಡ ಕಟ್ಟಡಗಳಿಗೆ ನೀರುಣಿಸುವ, ಸಿಮೆಂಟು, ಇಟ್ಟಿಗೆ ಮತ್ತು ಗಾರೆ ಸಾಮಾನುಗಳನ್ನು ಕಾಯುವ ಕೆಲಸ ಮಾಡುತ್ತಿದ್ದರು.
ಮಾದೇವಿ ಬಲು ವಾಚಾಳಿ ಹೆಂಗಸು. ನನ್ನ ಸ್ವಭಾವಕ್ಕೆ ಆಕೆ ಸರಿಹೊಂದುತ್ತಿರಲಿಲ್ಲ. ಆದ್ದರಿಂದ ನಾನು ಆಕೆಯನ್ನು ಸೇರಿಸಿಕೊಂಡಿರಲಿಲ್ಲ. ಮನೆಯ ಎಲ್ಲಾ ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತಿದ್ದೆ. ಎದುರು ಮನೆಯಾಕೆಯ ಬೇಡಿಕೆಯನ್ನು ಮಾದೇವಿ ಮುಂದಿಟ್ಟಾಗ, ಅವಳು ಖುಷಿಯಿಂದಲೇ ಒಪ್ಪಿಕೊಂಡು ಹೋಗತೊಡಗಿದಳು. ದೊಡ್ಡ ಮನೆಯ ಕೆಲಸ ಒಂದಿಷ್ಟು ಜಾಸ್ತಿ ಎನಿಸಿದರೂ ಅವರು ಕೊಡುವ ಸಂಬಳ ಅವಳ ಬಾಯಿ ಮುಚ್ಚಿಸಿತ್ತು. ಭಾಷೆ ಬರದ ಸಮಸ್ಯೆ ಅವಳನ್ನು ಕಾಡುತ್ತಿತ್ತು. ಆದರೂ ಬರೀ ಕೈಸನ್ನೆ ಬಾಯಿ ಸನ್ನೆಯಿಂದಲೇ ಅವರ ಮನೆಯ ಮಾಹಿತಿಯನ್ನು ತಿಳಿದುಕೊಂಡು ಒಂದಕ್ಕೆರಡು ಸೇರಿಸಿ ವರ್ಣರಂಜಿತವಾಗಿ ವರ್ಣಿಸುವ ಕಲೆ ಅವಳಿಗೆ ಸಿದ್ಧಿಸಿತ್ತು.
ಮೇಲ್ವರ್ಗದವರ ಜೀವನದ ಬಗ್ಗೆ ಕೆಳವರ್ಗದವರಿಗೆ ಇರುವ ಕುತೂಹಲ, ಜೊತೆಗೆ ಒಂದಿಷ್ಟು ಬಾಯಿ ಚಪಲ. ತಾನು ಸಂಗ್ರಹಿಸಿದ ವಿಷಯಗಳನ್ನು ಯಾರ ಮುಂದಾದರೂ ಹೇಳಿಕೊಂಡ ಮೇಲೆಯೇ ಅವಳಿಗೆ ಸಮಾಧಾನ. ಆಗ ಅವಳು ನನ್ನನ್ನು ಅರಸಿ ಬರುತ್ತಿದ್ದಳು. ಅದೇ ಕಾರಣದಿಂದ ನಾನು ಯಾವಾಗಲೂ ಅವಳಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವಂತೆ ನಾನು ಸಂಜೆ ಮನೆಯ ಮುಂದೆ ವಾಕಿಂಗ್ ಮಾಡುವುದನ್ನೇ ಕಾಯುತ್ತಿದ್ದ ಅವಳು ನನ್ನ ಬಳಿ ಓಡೋಡಿ ಬರುತ್ತಿದ್ದಳು.
ಒಂದಲ್ಲ ಒಂದು ಸುದ್ದಿ ಅವಳಲ್ಲಿ ಇದ್ದೇ ಇರುತ್ತಿತ್ತು. ನಾನೊಂದು ತರಹದ ಭಾವನಾಜೀವಿ, ನನಗೆ ವಿಷಯಗಳಿಗಿಂತ ಭಾವನೆಗಳು, ವಾಸ್ತಕ್ಕಿಂತಲೂ ಕಲ್ಪನೆಗಳು ಮುಖ್ಯ ಎನಿಸುತ್ತಿದ್ದವು. ನಾನು ಹೆಚ್ಚಾಗಿ ನನ್ನ ಕಲ್ಪನೆ ಮತ್ತು ಭಾವನೆಗಳಲ್ಲಿಯೇ ಜೀವಿಸಲು ಬಯಸುತ್ತಿದ್ದೆ. ಹಾಗಾಗಿ ಕಳೆದ ಒಂದೂವರೆ ವರ್ಷದಿಂದಲೂ ನನಗೆ ಯಾರೂ ಕೂಡ ಜೊತೆ ಬೇಕು ಎಂದು ಎನಿಸಿರಲೇ ಇಲ್ಲ. ನಮ್ಮ ಮನೆಗೆ ಹಾಲು ಹಾಕುವ ಹುಡುಗ ರವಿಯನ್ನು, “ಎದುರು ಮನೆಯವರು ಹಾಲಿನವರು ಬೇಕು ಎಂದಿದ್ದಾರೆ. ನೀನು ಅವರಿಗೂ ಹಾಲು ಹಾಕ್ತೀಯಾ….” ಎಂದು ಕೇಳಿದೆ.
ಅವನು ಆಯಿತೆಂದು ಒಪ್ಪಿಕೊಂಡ. ನಾವು ಸರಸ್ವತಿಪುರಂನಲ್ಲಿ ಬಾಡಿಗೆಗೆ ಇರುವಾಗಲೇ ಈ ರವಿ ಹಾಲು ಹಾಕುತ್ತಿದ್ದ. ನಾವು ಹೊಸ ಮನೆಗೆ ಬಂದ ಮೇಲೂ ಹಾಲು ಕೊಡುವುದನ್ನು ಮುಂದುವರಿಸಿದ್ದ. ರವಿ ಒಳ್ಳೆಯ ಹುಡುಗ. ಅನುಬಂಧ ಬೆಳೆಯಲು ಸಂಬಂಧವೇ ಆಗಬೇಕು ಎಂದೇನಿಲ್ಲ. ಗುಣ ಸ್ವಭಾವಗಳು ನಮಗೆ ಇಷ್ಟವಾದರೆ ನಮಗೆ ಹೊಂದಾಣಿಕೆ ಆಗುವ ಯಾರಾದರೂ ಸೈ. ಅವರ ಬಗ್ಗೆ ನಮಗೆ ಪ್ರೀತಿ ಮಮತೆ ಅನುಬಂಧ ತಾನೇ ತಾನಾಗಿ ಉಂಟಾಗಿಬಿಡುವುದು.
ರವಿ ಹೆಚ್ಚು ಕಮ್ಮಿ ನನ್ನ ಮಗನ ವಯಸ್ಸಿನವನೇ. ಆದರೆ ಹುಡುಗ ಶ್ರಮಜೀವಿ. ಬೆಳಗ್ಗೆ ನಾಲ್ಕಕ್ಕೇ ಎದ್ದು ಎಲ್ಲರ ಮನೆಗಳಿಗೂ ಪೇಪರ್ ಹಾಕಿ ಆಮೇಲೆ ವರ್ತನೆ ಮನೆಗಳಿಗೆ ಹಾಲು ಹಾಕಲು ಬರುತ್ತಿದ್ದ. ಗಿಣ್ಣು ಹಾಲೆಂದರೆ ನನಗೆ ತುಂಬಾ ಇಷ್ಟ ಎಂದು ಯಾವುದೋ ಸಂದರ್ಭದಲ್ಲಿ ಅವನ ಮುಂದೆ ಹೇಳಿದ್ದೆ. ಅದನ್ನು ಅವನು ಗಮನದಲ್ಲಿ ಇಟ್ಟುಕೊಂಡು ಪ್ರತಿಬಾರಿ ತನ್ನ ಮನೆಯಲ್ಲಿ ಹಸು ಕರು ಹಾಕಿದಾಗ, ಗಿಣ್ಣು ಹಾಲನ್ನು ತಪ್ಪದೆ ತಂದುಕೊಡುತ್ತಿದ್ದ. ನಾನು ಕೂಡ ಮನೆಯಲ್ಲಿ ಮಾಡಿದ ಸಿಹಿ ತಿಂಡಿಗಳನ್ನು ಅವನಿಗೋಸ್ಕರ ತೆಗೆದಿರಿಸಿ ಅವನು ಬಂದಾಗ ಕೊಡುತ್ತಿದ್ದೆ.
ಬರಿಯ ವ್ಯವಹಾರ ನಡೆಯುವಲ್ಲಿ ಒಂದು ರೀತಿಯ ಅನುಬಂಧ ನಮ್ಮಿಬ್ಬರ ನಡುವೆ ಬೆಳೆದಿತ್ತು. ನನ್ನ ಮಗ ಮತ್ತು ರವಿ ಹೆಚ್ಚೂ ಕಡಿಮೆ ಒಂದೇ ವಯಸ್ಸಿನವರಾಗಿದ್ದರೂ ಕೂಡ ನನ್ನ ಮಗ ಭಾರಿ ಹೈಟು. ದಿನದಿಂದ ದಿನಕ್ಕೆ ಎತ್ತರೆತ್ತರ ಬೆಳೆಯುತ್ತಿದ್ದವನ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಗಳು ಬಲು ಬೇಗನೆ ಗಿಡ್ಡವಾಗಿ ಬಿಡುತ್ತಿದ್ದವು. ಅವುಗಳನ್ನು ಮನೆಯಲ್ಲಿ ಇಟ್ಟುಕೊಂಡು ಮಾಡುವುದೇನು? ಎಂದುಕೊಂಡು ಯಾವಾಗಲೂ ಒಂದೇ ಪ್ಯಾಂಟ್ ಶರ್ಟ್ ಹಾಕಿಕೊಂಡು ಬರುತ್ತಿದ್ದ ರವಿಗೆ ಕೊಡುತ್ತಿದ್ದೆ. ಆಗ ಅವನ ಕಣ್ಣುಗಳಲ್ಲಿ ಹೊಳಪು ಮತ್ತು ಧನ್ಯತಾ ಭಾವವನ್ನು ಕಂಡು ನನ್ನ ಮನಸ್ಸಿಗೆ ಅಪೂರ್ವ ಆನಂದ ಉಂಟಾಗುತ್ತಿತ್ತು. ಅಂದಿನಿಂದ ಇಂದಿನವರೆಗೂ ಅದು ಹಾಗೆ ಮುಂದುವರಿದುಕೊಂಡು ಬಂದಿತ್ತು. ಹಾಗಾಗಿ ಮನೆ ಹುಡುಗನಂತಿದ್ದ ರವಿ, ನಾನು ಹೇಳಿದೊಡನೆ ಹ್ಞೂಂ ಎಂದು ಹೇಳಿ ಮಾರನೇ ದಿನದಿಂದಲೇ ಅವರ ಮನೆಗೂ ಹಾಲು ಹಾಕತೊಡಗಿದ. ಸಂಸಾರದಲ್ಲಿ ದಿನನಿತ್ಯ ಎದುರಾಗುವ ದೊಡ್ಡ ಸಮಸ್ಯೆಗಳೆರಡು ಎದುರು ಮನೆಯವರಿಗೆ ನೀಗಿದ್ದವು.
ಸಂಜೆ ಮನೆಯ ಮುಂದೆ ವಾಕಿಂಗ್ ಮಾಡುವಾಗ, ಅಪ್ರಯತ್ನಪೂರ್ವಕವಾಗಿ ನನ್ನ ಕಣ್ಣುಗಳು ಎದುರು ಮನೆಯತ್ತ ಹೊರಳಿದವು. ಆ ಮನೆಯವರು ಯಾರೂ ಕಾಣಿಸಲಿಲ್ಲ. ಮನೆಗೆ ತಕ್ಕ ಹಾಗೆ ಗೇಟೂ ಎತ್ತರ ಇದ್ದುದರಿಂದ ಮುಂಬಾಗಿಲು ಕೂಡ ಕಾಣಿಸುತ್ತಿರಲಿಲ್ಲ. ನಾನು ಹೊರಗಡೆ ವಾಕಿಂಗ್ ಮಾಡುತ್ತಿರುವುದನ್ನು ನೋಡಿ ಮಾದೇವಿ ಓಡು ನಡಿಗೆಯಲ್ಲಿ ನನ್ನತ್ತ ಬಂದಳು. ಅಯ್ಯೋ ಇನ್ನಿವಳ ಕೈಲಿ ಸಿಕ್ಕಿಕೊಂಡೆ ಅಂತ ಹೌಹಾರಿದೆ. ಕಿರುಗಣ್ಣಿನಿಂದ ನೋಡುತ್ತಿದ್ದಂತೆಯೇ, ತೀರ ಸನಿಹ ಬಂದಳು.
ಬಂದವಳೇ, ಕೈ ಬಾಯಿ ತಿರುಗಿಸುತ್ತಾ, ಏನೋ ಗುಟ್ಟು ಹೇಳುವವಳಂತೆ ಕಿವಿ ಹತ್ತಿರ ಬಾಗಿ, “ಅಕ್ಕಾ… ನಿಮಗೆ ವಿಷ್ಯ ಗೊತ್ತೇ….?” ಎಂದು ಪ್ರಶ್ನಿಸಿ ತಾನೇ ಉತ್ತರವಾಗಿ, “ಅಕ್ಕಾ….. ಆ ಸೇಟೂ ಮನೆಗೆ ಬಂದ್ರಲ್ಲಾ…. ಆಯಮ್ಮನ ಸೊಸೆಯ ತಲೆ ಸರಿಯಿಲ್ವಂತೆ…” ಎನ್ನುತ್ತಾ ತನ್ನ ಹಣೆಯ ಪಕ್ಕ ಬೆರಳಿನಿಂದ ಸ್ಕ್ರೂ ತಿರುಗಿಸು ಹಾಗೆ ನಟನೆ ಮಾಡಿ ತೋರಿಸಿದಳು.
ಮಾದೇವಿಯ ಮಾತನ್ನು ನಿರಾಕರಿಸುವ ನಿಟ್ಟಿನಲ್ಲಿ ನಾನು, “ಏಯ್ ಹೋಗೇ…. ನೀನು ಅವರ ಭಾಷೆಯ ಗಂಧವೇ ತಿಳಿಯಲ್ಲಾಂತ ಗೋಳಾಡ್ತಿ…. ಅಂತದ್ರಲ್ಲಿ ಅವರ ಸೊಸೆಯ ತಲೆ ಸರಿಯಿಲ್ಲದ್ದು ಮಾತ್ರ ತಿಳಿಯುತ್ತಾ…. ಹಾಗೆಲ್ಲಾ ಬೇರೆಯವರ ಮನೆ ಹೆಣ್ಮಕ್ಕಳಿಗೆ ಈ ರೀತಿಯ ಅಪವಾದ ಕೊಡಬಾರದು. ಮಾದೇವಿ, ನೀನು ಹೇಳೋ ವಿಷಯ ಎಲ್ಲಾ ಕೇಳ್ತೀನಿ ಅಂತ ಏನೇನೋ ಹೇಳೋಕೆ ಬರಬೇಡಾ…..” ಎಂದು ಅವಳನ್ನು ಗದರಿಸಿದೆ.
“ಅಯ್ಯೋ…. ನಾನ್ಯಾಕಕ್ಕಾ ಸುಳ್ಳು ಹೇಳಲಿ? ಅಪವಾದ ಹೊರಿಸಲಿ…. ಆ ಹೆಂಗಸೇ ತನ್ನ ಸೊಸೆಯ ಕುರಿತು ಹೀಗೆ ಮಾಡಿ ತೋರ್ಸೋದು,” ಎಂದು ಮಾದೇವಿ ಮತ್ತೊಮ್ಮೆ ಅದೇ ರೀತಿ ನಟಿಸಿ ತೋರಿಸುತ್ತಾ, “ಅವಳ ರೂಮಿನ ಬಾಗ್ಲು ಯಾವಾಗಲೂ ಹಾಕೇ ಇರುತ್ತಕ್ಕಾ…. ಅದೊಂದು ರೂಮು ಬಿಟ್ಟು ಇಡೀ ಮನೆ ಗುಡಿಸಿ, ಒರೆಸಿ ಬರ್ತೀನಿ. ನಂಗ್ಯಾಕೆ ಬೇಕು ಹುಚ್ಚಿಯ ಸಾವಾಸ ಅಲ್ವಾ ಅಕ್ಕಾ….” ಎಂದಳು.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಗಾದೆ ಮಾತಿದೆ. ಅಂತಹದರಲ್ಲಿ ಒಂದಿನ ಆ ಮನೆಯ ಸೊಸೆಯನ್ನು ನೋಡದೆ ಆಕೆಗೆ ಹುಚ್ಚಿ ಪಟ್ಟ ಕಟ್ಟಿದ್ದಳು ಮಾದೇವಿ. ಅವಳ ತಪ್ಪಾದರೂ ಏನಿತ್ತು? ಅವರೇನೂ ಹೇಳಿದರೋ ಅದನ್ನೇ ನಂಬಿದ್ದಳು ಮಾದೇವಿ. ಆದರೆ ಅವಳು ಹೇಳಿದ್ದು ಕೇಳಿ ಮನಸ್ಸಿಗೆ ಬೇಸರವಾಯಿತು. ಅತ್ತೆ ಮನೆ ಸೊಸೆ ಹಣೆಬರಹವೇ ಇಷ್ಟು. ಗಂಡನೆಂಬ ಪ್ರಾಣಿಯಾದ್ರೂ ಕೊನೆ ಪಕ್ಷ ಕಟ್ಟಿಕೊಂಡವಳ ಪರವಿದ್ದರೆ, ಹೆಣ್ಣು ಇಡೀ ಜಗತ್ತನ್ನೇ ಎದುರಿಸಬಲ್ಲಳು. ನಾನು ಕೂಡ ನನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಇಷ್ಟು ದೂರ ಬರಬೇಕಾಯಿತು. ಅಲ್ಲೇ ಇದ್ದಿದ್ದರೆ ನನಗೆ ಸಿಕ್ಕುತ್ತಿದ್ದುದು ಬರೀ ಹುಚ್ಚಿಯ ಪಟ್ಟವಲ್ಲ, ಹುಚ್ಚೇ ಹಿಡಿದು ಬಿಡುತ್ತಿತ್ತು ಎಂದು ಹಿಂದಕ್ಕೋಡಿದ ಮನದಲ್ಲಿ ವಿಷಾದ ಮೂಡಿತು.
ಮಾದೇವಿ ಮನೆಯಲ್ಲಿ ಕೆಲಸ ಇದೆಯೆಂದು ಅತ್ತ ನಡೆದಳು. ನಾನು ತೋಟದವರೆಗೂ ಹೋಗಿ ವಾಪಸ್ ಮನೆಯತ್ತ ಹೆಜ್ಜೆ ಹಾಕಿದೆ. ನನ್ನ ಗಮನ ಪುನಃ ಆ ಮನೆಯತ್ತ ಹೋಯಿತು. ಯಾರೂ ಕಾಣಿಸಲಿಲ್ಲ. ಒಂದೆರಡು ಬಾರಿ ಮಾತ್ರ ಆಕೆಯ ಮಗ ಸಿಗರೇಟು ಸೇದುತ್ತಾ ಮೇಲಿನ ಬಾಲ್ಕನಿಯಲ್ಲಿ ನಿಂತಿದ್ದು ನೋಡಿದ್ದೆ ಅಷ್ಟೆ. ಆಕೆಯ ಮಗನೂ ಆ ಹಿರಿಯ ಹೆಂಗಸಿನಂತೆ ತುಂಬಾ ಸ್ಛುರದ್ರೂಪಿ. ಎದುರು ಮನೆ ಒಂದು ಭೂತ ಬಂಗಲೆಯಂತೆ ಗೋಚರಿಸುತ್ತಾ, ಏನೋ ನಿಗೂಢತೆಯನ್ನು ತನ್ನೊಳಗೆ ಅಡಗಿಸಿಕೊಂಡಂತೆ ಭಾಸವಾಗುತ್ತಿತ್ತು.
ಒಂದು ವೇಳೆ ಮಾದೇವಿ ಹೇಳಿದ್ದು ನಿಜವಿರಬಹುದೆ…..? ಎದುರು ಮನೆಯಾಕೆಯ ಸೊಸೆಯ ತಲೆ ನಿಜವಾಗಿಯೂ ಸರಿಯಿಲ್ಲವೇ….? ಅಥವಾ ಹಾಗೆಂದು ಕಥೆ ಕಟ್ಟಿ ಹೊರಗಿನವರು ನಂಬುವಂತೆ ಬಿಂಬಿಸುತ್ತಿದ್ದಾರೆಯೇ…?! ಇದರಿಂದ ತಮ್ಮ ಅಂತರಂಗವನ್ನು ಮುಚ್ಚಿಡುವ ಪ್ರಯತ್ನ ಇರಬಹುದೇ….? ಒಂದು ವೇಳೆ ನಿಜವಾಗಿಯೂ ಆಕೆಯ ತಲೆ ಸರಿಯಿಲ್ಲದಿದ್ದರೆ ಆಕೆಯನ್ನು ಅವಳ ತವರು ಮನೆಗೆ ಕಳುಹಿಸದೇ ಹೊರ ಪ್ರಪಂಚಕ್ಕೂ ತೋರಿಸದೇ ರೂಮಿನಲ್ಲಿ ಕೂಡಿ ಹಾಕಿರುವ ಉದ್ದೇಶವಾದರೂ ಏನು…?
ಯಾವ ಅತ್ತೆ ಮನೆಯವರು ತಲೆ ಸರಿಯಿಲ್ಲದ ಹೆಣ್ಣನ್ನು ಮನೆಯಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ….? ಆಕೆಯ ತವರಿನವರಿಗೆ ತಮ್ಮ ಮಗಳ ಮನಸ್ಥಿತಿ ಬಗ್ಗೆ ತಿಳಿದಿಲ್ಲವೇ….? ಅಥವಾ ಇವರು ತಿಳಿಸಿಯೇ ಇಲ್ಲವೇ…..? ಹೋಗಲಿ, ಅವಳ ಮನಸ್ಥಿತಿ ಹಾಗಾಗಲು ಕಾರಣವಾದರೂ ಏನಿರಬಹುದು…..? ಏನಾದರೂ ಒಂದು ಕಾರಣ ಇರಲೇಬೇಕಲ್ಲವೇ…..? ಶ್ರೀಮಂತಿಕೆಯನ್ನು ತೋರುವ, ಮನ್ಮಥನಂಥ ಗಂಡ ಆಕೆಯನ್ನು ಇನ್ನೂ ತಮ್ಮ ಮನೆಯಲ್ಲೇ ಇರಿಸಿಕೊಂಡಿರುವುದನ್ನು ನೋಡಿದ್ರೇ…. ಇಲ್ಲಿ ತೋರಿಕೆಯ ಮೇಲೆ ಕಾಣುವ ಶ್ರೀಮಂತಿಕೆ ತಾಯಿ ಮಗನಲ್ಲಿಲ್ಲ. ಬಹುಶಃ ಅವಳಲ್ಲಿದೆ. ಬಹುತೇಕ ಅವರ ಪಾಲಿಗೆ ಅವಳು ಚಿನ್ನದ ಮೊಟ್ಟೆ ಇಡುವ ಕೋಳಿ. ಇವರಿಬ್ಬರು ಆಕೆಯನ್ನು ಕೂಡಿಟ್ಟು ವರದಕ್ಷಿಣೆ ಕಿರುಕುಳ ಕೊಡುತ್ತಿರಬಹುದೆ….? ಸತ್ಯವೋ, ಅಸತ್ಯವೋ ಅದು ಗೊತ್ತಿಲ್ಲ. ಆದರೂ ಆ ಅಮಾಯಕ ಆಗಂತುಕ ಹೆಣ್ಣಿಗಾಗಿ ಅದೇಕೋ ಮನಸ್ಸು ಮಿಡಿಯಿತು.
ಕತ್ತಲಾಗಿತ್ತು, ಹಾಲಿನ ಲೈಟ್ ಹಾಕಿ ಯಜಮಾನರ ಮಗನ ನಿರೀಕ್ಷೆಯಲ್ಲಿ ಕಾದಂಬರಿ ಒಂದನ್ನು ಹಿಡಿದು ಕುಳಿತೆ. ಕಣ್ಣುಗಳು ಅಕ್ಷರಗಳ ಮೇಲೆ ಓಡುತ್ತಿದ್ದರೂ ಒಂದಕ್ಷರ ತಲೆಯಲ್ಲಿ ಇಳಿಯದೆ ಮನಸ್ಸಿನ ತುಂಬಾ ಎದುರು ಮನೆಯ ಸೊಸೆಯೆಂಬ ಅನಾಮಿಕಳ ಯೋಚನೆಯೇ ತುಂಬಿಕೊಂಡಿತ್ತು.
ಮತ್ತೆ ಮತ್ತೆ ಮಾದೇವಿ ಹೇಳಿದ ವಿಷಯವನ್ನೇ ಮನಸ್ಸು ಮಥಿಸುತ್ತಿತ್ತು. ಹೌದು! ಅವಳ ಗಂಡ ಮತ್ತು ಅತ್ತೆಗೆ, ಹೆಂಡತಿ ಮತ್ತು ಸೊಸೆ ಎಂಬ ಪ್ರೀತಿ ಮಮತೆ ಎಂಬ ಅಂತಃಕರಣ ಇದ್ದಿದ್ದರೆ, ಯಾವುದಾದರೂ ಒಳ್ಳೆಯ ಸೈಕ್ರಿಯಾಟ್ರಿಸ್ಟ್ ಬಳಿ ಅವಳನ್ನು ಕರೆದೊಯ್ದು ತೋರಿಸುತ್ತಿದ್ದರಲ್ಲವೇ….? ಅದು ಬಿಟ್ಟು ಮನೆ ಕೆಲಸದಾಳಿನ ಮುಂದೆ ಮನೆ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದರೆ….? ಬೇಕೆಂದೇ ಹೊರ ಜಗತ್ತಿಗೆ ಈ ರೀತಿಯಾಗಿ ಬಿಂಬಿಸುತ್ತಿದ್ದರೆ….? ಎಲ್ಲ ಗೋಜಲು ಗೋಜಲಾಗಿರುವ ಹಾಗೆ ಅನಿಸಿತು. ಗಂಡ ಅತ್ತೆ, ಮನೆಯಲ್ಲಿ ಮೂರು ಹೊತ್ತೂ ಅವಳನ್ನು ಮನೆಯಲ್ಲಿ ಕೂಡಿಟ್ಟರೆ, ಆಕೆ ಸುಮ್ಮನೆ ಬಾಯಿ ಮುಚ್ಚಿಕೊಂಡು ಇರಲು ಸಾಧ್ಯವೇ….? ಕಿರುಚಿ ಅರಚಿ ರಂಪ ರಾಮಾಯಣ ಮಾಡಿರೋಳು. ಖಂಡಿತವಾಗಿ ಆಕೆ ಹಾನಿಕಾರಕಳಲ್ಲಾ….. ಆಕ್ರಮಣಕಾರಿಯೂ ಆಗಿರಲಿಕ್ಕಿಲ್ಲ. ಬದಲಾಗಿ ಅವಳೇ ಇವರಿಂದ ಪೀಡಿತಳಾಗಿರಬಹುದು. ತಾಯಿ ಮಗನ ಕುಟಿಲತನದ ಬಲಿಪಶು ಆಗಿರಬಹುದೇ…..? ಹೌದು, ನನ್ನ ಅನುಮಾನ ಆ ತಾಯಿ ಮಗನ ಸುತ್ತಲೇ ಸುಳಿಯುತ್ತಿತ್ತು. ಊರ ಹೊರಗಿನ ಮನೆ, ಬೇರೆ ಏನೂ ಗೊತ್ತಾಗುವುದಿಲ್ಲ ಎಂಬ ಅನಿಸಿಕೆ ಅವರದಾಗಿರಬಹುದು. ನನ್ನ ಮನ ಆ ಅನಾಮಿಕಳಿಗೆ ಮುಂದೆ ಯಾವುದೋ ಅಪಾಯ ಕಾದಿದೆ ಎಂದು ಊಹಿಸಿತು.
ನಮ್ಮ ಬೆಡ್ ರೂಮಿನ ಎಡಭಾಗದ ಕಿಟಕಿಯಲ್ಲಿ ಎದುರು ಮನೆಯ ಬಲಭಾಗ ಸ್ಪಷ್ಟವಾಗಿ ಕಾಣುತ್ತಿತ್ತು. ಮೇಲೊಂದು ದೊಡ್ಡ ಬೆಡ್ ರೂಮ್ ಇತ್ತು. ಆ ಎದುರು ಮನೆಯ ಯುವಕ ಒಂದೆರಡು ಬಾರಿ ಅಲ್ಲಿ ಸಿಗರೇಟು ಸೇದುತ್ತಾ ನಿಂತಿರುವುದನ್ನು ಕಂಡಿದ್ದೆ. ನನಗೆ ಸಿಗರೇಟ್ ಮತ್ತು ಪೆಟ್ರೋಲಿನ ವಾಸನೆ ಎಂದರೆ ಆಗುತ್ತಿರಲಿಲ್ಲ. ಆತ ಸೇದುತ್ತಿದ್ದ ಸಿಗರೇಟಿನ ಹೊಗೆ ಸುರುಳಿ ಸುರುಳಿಯಾಗಿ ಗಾಳಿಯಲ್ಲಿ ತೇಲಿಕೊಂಡು ಬರುತ್ತಿತ್ತು. ಆದರೀಗ ಚೈನ್ ಸ್ಮೋಕರ್ ಒಬ್ಬ ಎದುರು ಮನೆಯಲ್ಲೇ ವಾಸಿಸುವಾಗ ನಾನೇನು ತಾನೇ ಮಾಡಲು ಸಾಧ್ಯ…..?
ಸಂಜೆ 4 ಗಂಟೆ ಎಫ್.ಎಂ. ಕೇಳುತ್ತಾ ಬೆಡ್ ರೂಮಿನ ಕಿಟಕಿಯ ಪಕ್ಕ ಕುಳಿತು ಸೀರೆಗೆ ಫಾಲ್ ಹಾಕುತ್ತಿದ್ದೆ. ಹಾಗೆಯೇ ನನ್ನ ದೃಷ್ಟಿ ಎದುರು ಮನೆಯತ್ತ ಹೋಯಿತು. ಅರೇ….! ಆ ಮನೆಯ ಸೊಸೆ ಬಾಲ್ಕನಿಯಲ್ಲಿ ಬಂದು ನಿಂತಿದ್ದಳು. ನನಗೆ ಸಖೇದಾಶ್ಚರ್ಯವಾಯಿತು…..! `ಅರೇ…. ಅದು ಹೇಗೆ ಇವಳು ಹೊರಬಂದಳು? ಮನೆಯಲ್ಲಿ ಯಾರೂ ಇಲ್ವೇ…? ಏನೇ ಆಗಿರಲಿ ಇದೊಂದು ರೀತಿಯಲ್ಲಿ ಒಳ್ಳೆಯದೇ…. ಅಂತೂ ಹೊರಗಿನ ಪ್ರಪಂಚಕ್ಕೆ ಆಕೆ ತೆರೆದುಕೊಂಡಳಲ್ಲ…. ಅಷ್ಟು ಸಾಕು,’ ಎಂದುಕೊಂಡು ಅವಳನ್ನೇ ದಿಟ್ಟಿಸಿದೆ. ಅವಳ ನೋಟ ನನ್ನತ್ತಲೇ ಇತ್ತು. ನನ್ನ ನೋಟದಲ್ಲಿ ಆಶ್ಚರ್ಯವಿದ್ದರೆ, ಅವಳ ನೋಟದಲ್ಲಿ ನೋವಿತ್ತೋ ಅಥವಾ ಏನೋ ಹೇಳುವ ತವಕ, ತಲ್ಲಣ ಚಡಪಡಿಕೆಯಿತ್ತೋ…. ಏನೋ ಬೇಡಿಕೆ ಕೋರಿಕೆಯ ಹಂಬಲವಿತ್ತೋ…. ಅಥವಾ ನನಗೆ ಹಾಗೆನಿಸಿತೋ ತಿಳಿಯಲಿಲ್ಲ. ಇವಳು ಕೂಡ ಸುಂದರಿಯೇ. ಅವಳತ್ತೆಯಂತೆ ಮಾದಕ ಸೌಂದರ್ಯ ಇವಳಲ್ಲಿ ಇರಲಿಲ್ಲವಾದರೂ ಸ್ನಿಗ್ಧ ಸೌಂದರ್ಯವಿತ್ತು. ಮೈಕೈ ತುಂಬಿಕೊಂಡು ಆರೋಗ್ಯವಾಗಿ ಇರಬೇಕಾಗಿದ್ದವಳು ಅಗತ್ಯಕ್ಕಿಂತ ಹೆಚ್ಚು ಕೃಶಳಾಗಿದ್ದಂತೆ ಅನಿಸಿತು. ಅತ್ತೆ ಮನೆ ಸೊಸೆ ಹೊತ್ತು ಹೊತ್ತಿಗೆ ಊಟ ತಿಂಡಿಯಾದರೂ ಸಿಗುತ್ತಿತ್ತೋ ಇಲ್ವೋ…? ಏಕೆಂದರೆ ನಾನೂ ಕೂಡ ಆ ದಾರಿಯಲ್ಲಿ ನಡೆದುಬಂದವಳೇ……… ಪತಿಯೆಂಬ ಪ್ರಾಣಿ ಕೈ ತುಂಬಾ ಸಂಪಾದಿಸುತ್ತಿದ್ದರೂ ಹೊಟ್ಟೆ ತುಂಬಾ ಊಟ ಸಿಗುವ ಭರವಸೆ ಇರಲಿಲ್ಲ. ಪ್ರತಿದಿನ ಒಂದಲ್ಲ ಒಂದು ಸವಾಲು ಕಣ್ಮುಂದೆ ಬಂದು ನಿಲ್ಲುತ್ತಿತ್ತು. ಹೋಗಲಿ ಈಗೇಕೆ ಆ ಮಾತು…. ಈಗ ಇವಳೇ ಒಂದು ಸವಾಲಾಗಿ ನನ್ನ ಮುಂದೆ ಬಂದು ನಿಂತಂತಿದೆ. ಅವಳ ಮುಖದಲ್ಲಿನ ನೋವಿನ ಆತಂಕದ ಗೆರೆಗಳು ಅವಳ ಸಹಜ ಅಂದಚೆಂದವನ್ನು ಮರೆಮಾಚಿದ್ದವು. ತಿರುವಿನಲ್ಲಿ ಕಾರಿನ ಹಾರ್ನ್ ಸದ್ದು ಕೇಳಸಿತು. ಸೊಸೆ ಪುಸಕ್ಕನೆ ಒಳಗೆ ಹೋಗಿ ಕದವಿಕ್ಕಿದಳು. ತಾಯಿ ಮಗ ಇಬ್ಬರೂ ಕಾರಿನಿಂದ ಇಳಿದರು. ಇಬ್ಬರ ಕೈಯಲ್ಲೂ ಶಾಪಿಂಗ್ ಮಾಡಿರುವ ಬ್ಯಾಗ್ ಗಳಿದ್ದವು. ಇಬ್ಬರೂ ಏನೋ ಹೇಳಿಕೊಂಡು ನಗುತ್ತಿದ್ದರು. ನನ್ನ ಮುಖದಲ್ಲಿ ವಿಷಾದ ಮೂಡಿತು. ಹ್ಞೂಂ….! ಒಬ್ಬರ ನಗುವಿನಲ್ಲಿ ಇನ್ನೊಬ್ಬರ ನೋವು ಮರೆಮಾಚಿದೆ ಎಂದೆನಿಸಿತು.
`ಜಗತ್ತಿನಲ್ಲಿ ಎಂತೆಂಥ ವಿಚಿತ್ರವಾದ ಕ್ರೂರವಾದ ಮತ್ತು ದುರ್ಬುದ್ಧಿಯ ಮನಃಸ್ಥಿತಿಯವರು ಇರುತ್ತಾರಲ್ಲವೇ…..?’ ಎಂದು ನೆನೆಸಿ ಬೇಸರವಾಯಿತು. 11.30 ಸುಮಾರಿಗೆ ಕಾಲಿಂಗ್ ಬೆಲ್ ಸದ್ದಾಯಿತು. ಬಂದವರು ಯಾರೆಂದು ಬಾಗಿಲು ಪಕ್ಕದ ಕಿಟಕಿಯಲ್ಲಿ ಬಗ್ಗಿ ನೋಡಿದಾಗ, ಕೊರಿಯರ್ ಹುಡುಗ ಕೈಯಲ್ಲೊಂದು ಪಾರ್ಸೆಲ್ ಪ್ಯಾಕೆಟ್ ಹಿಡಿದು ನಿಂತಿರುವುದು ಕಾಣಿಸಿತು. ಅವನಿಂದ ಪಾರ್ಸೆಲ್ ತೆಗೆದುಕೊಂಡೆ. ಅದರ ಮೇಲೆ ನೇಹಾ ಶರ್ಮಾ ಎಂದು ಹೆಸರಿರುವುದನ್ನು ನೋಡಿ ಅದನ್ನು ಅವನಿಗೆ ಹಿಂತಿರುಗಿಸುತ್ತಾ, “ಇದು ನಮ್ಮ ಪಾರ್ಸೆಲ್ ಅಲ್ಲ….. ಎದುರು ಮನೆಯವರದಿರಬಹುದು ಅಲ್ಲಿ ಕೊಡಿ,” ಎಂದು ಎದುರು ಮನೆಯತ್ತ ಕೈ ತೋರಿಸಿದೆ.
ಆ ಹುಡುಗ ನನ್ನ ಕೈಯಲ್ಲಿದ್ದ ಪಾರ್ಸೆಲ್ ತೆಗೆದುಕೊಳ್ಳಲು ನಿರಾಕರಿಸುತ್ತಾ, “ಅಯ್ಯೋ ಮೇಡಂ, ಇದು ನಿಮ್ಮದಲ್ಲವೆಂದು ನನಗೂ ಗೊತ್ತಿದೆ. ಅದೆಷ್ಟೇ ಬೆಲ್ ಒತ್ತಿದರೂ ಆ ಮನೆಯವರು ಬಾಗಿಲು ತೆಗೆಯಲಿಲ್ಲ…..! ಅದಕ್ಕೆ ನಿಮಗೆ ಕೊಡೋಣಾಂತ ಬಂದೆ,” ಎಂದ.
ನಾನು ಮುಖದಲ್ಲಿ ಅಚ್ಚರಿ ವ್ಯಕ್ತಪಡಿಸುತ್ತಾ, “ಅರೇ….! ಇದೊಳ್ಳೆ ಕಥೆ ಆಯ್ತಲ್ಲಾ….? ಪಾರ್ಸೆಲ್ ಬಂದಿರೋದು ಅವರಿಗೆ, ಅದನ್ನು ನಾನ್ಯಾಕೆ ತೆಗೆದುಕೊಳ್ಳಲಿ? ಅದೂ ಅವರು ಮನೇಲಿ ಇರುವಾಗ್ಲೇ…..! ಅದೂ ಸರಿ ನಮ್ಮನೆಯಲ್ಲಿ ಯಾರಿದಾರೆ, ಇದನ್ನು ಅವರಿಗೆ ಕೊಡಲು…. ಬೇಡ ನೀನೇ ಕೊಡು…..” ಎನ್ನುತ್ತಾ ಬಾಗಿಲು ಮುಚ್ಚಲು ಪ್ರಯತ್ನಿಸಿದೆ.
ಆ ಕೊರಿಯರ್ ಹುಡುಗ, “ಪ್ಲೀಸ್ ಮೇಡಂ, ನೀವು ಎದುರು ಮನೇಲೇ ಇರ್ತಿರಲ್ಲಾ….. ದಯವಿಟ್ಟು ತಲುಪಿಸಿ. ಹಳ್ಳಿಯಲ್ಲಿರುವ ನನ್ನ ಹೆಂಡ್ತಿಗೆ ಹುಷಾರಿಲ್ಲ ಬೇಗ ಬಾ…. ಅಂತ ಫೋನ್ ಬಂದಿದೆ, ಒಂದು ಗಂಟೆ ಬಸ್ಸಿಗೆ ನಾನು ಊರಿಗೆ ಹೋಗಬೇಕು. ಇರುವುದು ಅದೊಂದೆ ಬಸ್ಸು. ನಾನಿನ್ನು ಎರಡು ಮನೆಗೆ ಹೋಗಬೇಕು. ಲೇಟಾದ್ರೆ ಬಸ್ ಮಿಸ್ ಆಗಿ ಭಾರಿ ಕಷ್ಟ ಆಗುತ್ತೆ ಮೇಡಂ ಪ್ಲೀಸ್….. ” ಎಂದು ಆತ ತನ್ನ ಸಮಸ್ಯೆ ಹೇಳಿಕೊಳ್ಳುತ್ತಾ ಅಳು ಮಟ್ಟಿಗೆ ಬಂದನಾತ.
ಭೂಮಿ ಮೇಲೆ ಇರುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಷ್ಟ ತಪ್ಪಿದ್ದಲ್ಲ ಅನಿಸಿ, “ಆಯ್ತು, ಕೊಡಿ ನಾನು ತಲುಪಿಸ್ತೀನಿ,” ಎಂದು ಮಾದೇವಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪಾರ್ಸೆಲ್ ನ್ನು ಅವನಿಂದ ತೆಗೆದುಕೊಂಡು ಇವರ ಕಣ್ಣಿಗೆ ಬೀಳದಂತೆ ಮಂಚದಡಿಗೆ ತಳ್ಳಿದೆ.
ವಾಡಿಕೆಯಂತೆ ಮಧ್ಯಾಹ್ನ ಹಾಗೆ ಅಡ್ಡವಾಗಲೆಂದು ಬೆಡ್ ರೂಮಿಗೆ ಬಂದು ಹೊರಳಿದೆ. ಮತ್ತೆ ನನ್ನ ಕಣ್ಣೋಟ ಅನಾಯಾಸವಾಗಿ ಆ ಮನೆಯತ್ತ ಹೋಯಿತು. ಅಲ್ಲಿಯ ದೃಶ್ಯ ಕಂಡು ಗಾಬರಿಯಿಂದ ಹೌಹಾರಿದೆ. ಕೂಡಲೇ ಎದ್ದು ದಡದಡನೇ ಹೊರಗೋಡಿ ಬಂದು ಅಂಗಳದಲ್ಲಿ ನಿಂತೆ. ನನ್ನೆದೆ ಭಯದಿಂದ ನಗಾರಿಯಂತೆ ಹೊಡೆದುಕೊಳ್ಳುತ್ತಿತ್ತು.
ಅಲ್ಲಿ ಎದುರು ಮನೆಯ ಅನಾಮಿಕ ಮೇಲಿನ ಅಟ್ಯಾಚ್ಡ್ ಬಾತ್ ರೂಮಿನ ಕಮೋಡ್ ಮೇಲೆ ನಿಂತು ವೆಂಟಿಲೇಟರ್ ನ ಗಾಜಿನ ಫಲಕವನ್ನು ಸರಿಸಲು ಹಣಿಸುತ್ತಿದ್ದಳು. ಅದೆಲ್ಲಿತ್ತೋ ಆ ಶಕ್ತಿ? ಅಷ್ಟು ದಿನ ಅವಳಲ್ಲಿ ಮಡುಗಟ್ಟಿದ ನೋವು ಸಂಕಟವೇ ಅವಳನ್ನು ಈ ರೀತಿ ರೊಚ್ಚಿಗೇಳುವಂತೆ ಮಾಡಿತ್ತು. ಆದಿಗೊಂದು ಅಂತ್ಯ ಇರಲೇಬೇಕಲ್ಲವೇ? ಅಂತೂ ಸತತ ಪ್ರಯತ್ನಿಸಿ ಒಂದು ಫಲಕವನ್ನು ಸಮಾನಾಂತರ ಸ್ಥಿತಿಗೆ ತರುವಲ್ಲಿ ಯಶಸ್ವಿಯಾದಳು. ಅಲ್ಲಿಂದ ಕೈ ಹೊರ ಹಾಕಿ ಬಿಳಿ ಉಂಡೆಯಂತಿದ್ದ ಏನನ್ನೋ ಹೊರಗೆಸೆದು ನನ್ನತ್ತ ದೈನ್ಯವಾಗಿ ನೋಡಿ ಅತ್ತ ಕೈ ಮಾಡಿ ತೋರಿಸಿದಳು.
ಅವಳು ಹೊರಗೆಸೆದ ವಸ್ತು ಏನೆಂದು ನೋಡಲು ಅತ್ತ ಹೋಗಬೇಕು ಎನ್ನುವಷ್ಟರಲ್ಲಿ ತಿರುವಿನಲ್ಲಿ ಕಾರಿನ ಹಾರ್ನ್ ಶಬ್ದ ಕೇಳಿಸಿತು. ನಾನು ಹೌಹಾರಿ ವೆಂಟಿಲೇಟರ್ ನತ್ತ ನೋಡಿದೆ. ಆಕೆ ಅಲ್ಲಿಂದ ಮರೆಯಾಗಿದ್ದಳು. ಅಂತೂ ಅನಾಮಿಕಳಿಗೆ ಧೈರ್ಯ ಬಂದು ಆ ತಾಯಿ ಮಗನ ಕಪಿಮುಷ್ಟಿಯಿಂದ ಪಾರಾಗುವ ಸಮಯ ಬಂದಿದೆ ಅನಿಸಿ ಸಮಾಧಾನದ ನಿಟ್ಟುಸಿರು ಬಿಟ್ಟೆ. ಅವಳು ಎಸೆದಿದ್ದು ಏನೆಂದು ನೋಡಲು ಕೂಡ ಆಗದಂತೆ ಕಾರು ಮನೆಯ ಮುಂದೆ ನಿಂತಿತು. ಕಾರಿನಿಂದ ಇಳಿದ ಆ ಹಿರಿಯ ಹೆಂಗಸು ನನ್ನ ಕಡೆ ನೋಡಿ ಮುಗುಳ್ನಕ್ಕಳು. ನಾನು ಪ್ರತಿಯಾಗಿ ನಕ್ಕೆ.
ಅಬ್ಬಾ….! ಈ ತಾಯಿ ಮಗ ಅದೆಷ್ಟೋ ಅಂದಗಾರರು. ಆದರೆ ಮನೆಯ ಸೊಸೆಯ ಬಾಳನ್ನು ಮಾತ್ರ ಅಂಧಕಾರದಲ್ಲಿ ಮುಳುಗಿಸಿದ್ದಾರೆ ಎಂದುಕೊಳ್ಳುತ್ತಾ ಆ ಸೊಸೆಗಾಗಿ ಮರುಗಿದೆ. ಅವರಿಬ್ಬರು ಒಳಹೋದರು. ತದನಂತರ ನಾನು ಅನಾಮಿಕಳು ಹೊರಗೆಸೆದ ವಸ್ತುವನ್ನು ಹುಡುಕಲು ಅವರ ಮನೆಯ ಪಕ್ಕದ ಖಾಲಿ ಸೈಟಿನತ್ತ ಹೆಜ್ಜೆ ಹಾಕಿದೆ. ಅದು ಖಾಲಿ ಸೈಟಿನಲ್ಲಿ ಬಿದ್ದಿತ್ತು.
ಆಕೆ ಕಿಟಕಿಯ ಬಳಿ ಕುಳಿತು ಯಾವಾಗಲೂ ತನ್ನ ಮನೆಯತ್ತ ನೋಡುತ್ತಿರುವುದನ್ನು ಗಮನಿಸಿ ಇಂತಹ ಸಾಹಸಕ್ಕೆ ಇಳಿದಿದ್ದಳೇ…..? ಗೊತ್ತಿಲ್ಲ. ಆ ಜಾಗದಲ್ಲೆಲ್ಲಾ ಗಿಡಗಂಟಿ ಬೆಳೆದು ಕೈಯ್ಯಾಡಿಸಿ ಹುಡುಕುವುದು ಬಲು ಕಷ್ಟದ ಕೆಲಸವಾಗಿತ್ತು. ನಾಗರಿಕ ಪ್ರಜ್ಞೆ ಎಂದು ಹೆಣ್ಣಿನ ಕಷ್ಟಕ್ಕೆ ಕೈ ಜೋಡಿಸುವಂತೆ ಮಾಡಿತೋ ಅಥವಾ ಅನಾಮಿಕಳ ಮೇಲಿನ ಕರುಣೆ, ಕನಿಕರ ನನ್ನನ್ನು ಅಲ್ಲೆಲ್ಲ ಕೈ ಹಾಕಿ ಹುಡುಕುವಂತೆ ಪ್ರೇರೇಪಿಸಿತೋ, ಅಂತೂ ಆಕೆ ಎಸೆದ ವಸ್ತುವಿನ ಹುಡುಕಾಟ ನಡೆಸಿದೆ.
5-10 ನಿಮಿಷ ಅಲ್ಲೇ ಹುಡುಕಾಡಿದರೂ ಏನೂ ಸಿಗಲಿಲ್ಲ, ನಿರಾಸೆಯಾಯಿತು. ಜೊತೆಗೆ ಬೇಸರವೂ ಆಯಿತು. ಅನಾಮಿಕಳ ಶ್ರಮವೆಲ್ಲ ವ್ಯರ್ಥವಾಯಿತೆ ಎನಿಸಿ ನೊಂದುಕೊಂಡೆ. ಅದೇ ಹೊತ್ತಿಗೆ ನನ್ನ ದೃಷ್ಟಿ ಅವರ ಮನೆಯ ಕಾಂಪೌಂಡಿನ ಪಕ್ಕ ಹರಿಯಿತು. ಅಲ್ಲಿ ಬಿಳಿ ಕಾಗದದ ಉಂಡೆಯೊಂದು ಬಿದ್ದಿತ್ತು. ಅದನ್ನೆತ್ತಿಕೊಂಡೆ, ಅದು ಟಾಯ್ಲೆಟ್ ನ ಟಿಶ್ಯೂ ಪೇಪರಾಗಿತ್ತು. ಅದರೊಳಗೆ ಅರ್ಧ ಬಳಸಿದ ಸಾಬೂನಿನ ತುಂಡಿತ್ತು. ಟಿಶ್ಯೂ ಪೇಪರ್ ಕಾಂಪೌಂಡ್ ನ ಆಚೆ ಬೀಳಲು ಸಹಾಯವಾಗುವಂತೆ ಒಳಗೆ ಸಾಬೂನಿನ ತುಂಡು ಇಟ್ಟು ಎಸೆದಿದ್ದಳು. ಅಲ್ಲಿಂದ ಮುಕ್ತಿ ಪಡೆಯಲು ಆಕೆ ಉಪಯೋಗಿಸಿದ ಯುಕ್ತಿ ಮೆಚ್ಚುಗೆ ಆಯಿತು. ಪೇಪರ್ ನ್ನು ಬಿಡಿಸಿ ನೋಡಿದ ತಕ್ಷಣ ನನಗೆ ಗಾಬರಿಯಾಯಿತು. ಅಲ್ಲಿ ಆಕೆ ತನ್ನ ರಕ್ತದಿಂದ ಕಷ್ಟಪಟ್ಟು ಅಂಕುಡೊಂಕಾಗಿ ಬರೆದಿದ್ದುದು ಕಂಡಿತು. ಇದೊಂದು ರಕ್ತಚರಿತ್ರೆ ಆಯಿತೇ…? ಎನಿಸಿ ಹುಬ್ಬು ಮೇಲೇರಿದವು. ಚೀಟಿಯಲ್ಲಿ ಎರಡೇ ಎರಡು ಸಾಲಿದ್ದ. `ಮುಜೆ, ಯಹಾಂಸೇ, ನಿಕ್ ನೇ ಕೇಲಿಯೇ, ಹೆಲ್ಪ್ ಕರಿಯೇ… ಪ್ಲೀಸ್…..’ ಅಷ್ಟು ಬರೆಯಲು ಆಕೆ ಅದೆಷ್ಟು ಕಷ್ಟಪಟ್ಟಿರಬಹುದು. ಅದೆಷ್ಟು ರಕ್ತ ಸುರಿಸಿ ನೋವನ್ನು ಅನುಭವಿಸಿರಬಹುದು. ಅದನ್ನು ನೋಡಿ ಮೈಯಲ್ಲಿಯ ರೋಮವೆಲ್ಲ ನಿಮಿರಿದವು.
ಒಳಬಂದು ಸೋಫಾದ ಮೇಲೆ ಕುಸಿದು ಕುಳಿತೆ. ನನಗೇ ಏನೋ ಆದ ಹಾಗೆ ಮನದ ತುಂಬಾ ಚಡಪಡಿಕೆ, ಆತಂಕ, ಕಳವಳ ಏನೂ ಮಾಡಲಿ….? ಏನು ಮಾಡಲಿ…. ಎಂಬ ಚೀತ್ಕಾರ ಹೊರಬಿದ್ದಿತು ಅದರೊಂದಿಗೆ ಯೋಚನೆಯೊಂದು ಹೊಳೆಯಿತು.
ಮಂಚದಡಿಯಲ್ಲಿ ಪಾರ್ಸೆಲ್ ಇತ್ತಲ್ಲ, ಅದನ್ನು ಈಚೆಗೆ ಎಳೆದು ಅದರಲ್ಲಿರುವ ನಂಬರ್ ಗೆ ಫೋನಾಯಿಸಿದೆ. ಸ್ವಲ್ಪ ಹೊತ್ತಿಗೆ ಗಂಡು ದನಿಯೊಂದು “ಹಲೋ…”ಎಂದಿತು.
“ನೇಹಾ ಶರ್ಮಾ ಅಪ್ಕೋ ಕ್ಯಾ ಲಗ್ತಿ ಹೈ….” ಎಂದು ಆತನನ್ನು ಕೇಳಿದೆ.
ನನ್ನ ದನಿಯಲ್ಲಿನ ಆತಂಕವನ್ನು ಸೂಕ್ಷ್ಮವಾಗಿ ಗಮನಿಸಿದ ಆತ ದುಗುಡದಿಂದ, “ನೇಹಾ ಮೇರಿ ಬೆಹೆನ್ ಹೈ. ಕ್ಯೂಂ….. ಕ್ಯಾ ಹುವಾ ಹೈ ಉಸೆ…..?” ಎಂದಾತ ಪ್ರಶ್ನಿಸಿದ.
ನಾನು ಇದುವರೆಗೂ ನಡೆದಿದ್ದೆಲ್ಲವನ್ನೂ ಕೂಲಂಕಶವಾಗಿ ವಿವರಿಸಿ ಹೇಳಿದೆ. ಅತ್ತಲಿಂದ ಆತ ಗಾಬರಿಯಂದ “ಹ್ಞಾಂ….. ಹ್ಞೂಂ…” ಎಂದಷ್ಟೇ ಹೇಳಿ ಪೋನಿಟ್ಟುಬಿಟ್ಟ. ನಂತರ ನನ್ನ ಮನಸ್ಸಿಗೆ ಕೊಂಚ ನಿರಾಳತೆ ಆಯಿತು.
ಮಾರನೇ ದಿನ ಸಂಜೆ ಹೊತ್ತಿಗೆ ನೇಹಾಳ ತಾಯಿ ಮತ್ತು ಅವಳಣ್ಣ ಪೊಲೀಸರೊಂದಿಗೆ ಬಂದು ನೇಹಾಳ ಅತ್ತೆ ಮತ್ತು ಗಂಡನೊಂದಿಗೆ ಜಗಳವಾಡಿ ತಮ್ಮ ಮಗಳನ್ನು ಪೊಲೀಸರ ಸಹಾಯದಿಂದ ತಮ್ಮೊಂದಿಗೆ ಕರೆದೊಯ್ದರು. ಪೊಲೀಸರು ತಾಯಿ ಮಗನಿಗೆ ಛೀಮಾರಿ ಹಾಕಿ, ನಿಮ್ಮ ವಿರುದ್ಧ ವರದಕ್ಷಿಣೆ ಮತ್ತು ಅನಧಿಕೃತವಾಗಿ ಅವರ ಮಗಳನ್ನು ಕೂಡಿ ಹಾಕಿದ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ನಾಳೆ ಸ್ಟೇಷನ್ ಗೆ ಬನ್ನಿ ಅಂತ ಹೇಳಿ ಹೊರಟುಹೋದರು. ಪೊಲೀಸರು ಅತ್ತ ಹೋಗಿದ್ದೆ ತಡ ರಾತ್ರೋರಾತ್ರಿ ಆ ತಾಯಿ ಮಗ ಮನೆ ಖಾಲಿ ಮಾಡಿ ತಲೆಮರೆಸಿಕೊಂಡಿದ್ದರು.
ಮಾದೇವಿ ನನ್ನ ಬಳಿ ಬಂದವಳೇ, “ಅಯ್ಯೋ ಅಕ್ಕಾ…. ನಂಗೆ ಮೊದ್ಲೆ ಗೊತ್ತಿತ್ತು. ಆ ತಾಯಿ ಮಗ ನೆಟ್ಟಗಿಲ್ಲ. ಬೋ ಫಟಿಂಗ್ರೂಂತ. ನಮಗ್ಯಾಕೆ ದೊಡ್ಡೋರ ಸಾವಾಸಾ ಅಂತ ಸುಮ್ನಿದ್ದೆ,” ಎಂದಳು.
ಎಲುಬಿಲ್ಲದ ನಾಲಿಗೆ ಹೇಗ್ಬೇಕೋ ಹಾಗೆ ಹೊರಳುತ್ತೆ ಅಂತನೆಸಿ ಮನಸ್ಸಿಗೆ ಕೆಡುಕೆನಿಸಿತು. ಮಾರನೇ ದಿನ ಹಾಲು ಹಾಕಲು ಹೋದ ರವಿ ತಿರುಗಿ ಬಂದು, “ಆಂಟಿ, ಆ ಮನೇಲಿ ಯಾರು ಇಲ್ಲ. ಮನೆ ಬೀಗ ಹಾಕಿದೆ,” ಎಂದ.
“ರವಿ ಇನ್ಮುಂದೆ, ಎದುರು ಮನೆಗೆ ಹಾಲು ಹಾಕೋ ಅವಶ್ಯಕತೆ ಇಲ್ಲ ಬಿಡು,” ಎಂದೆ.
ನನ್ನ ಒಗಟು ಮಾತು ತಿಳಿಯದೆ ರವಿ ತಲೆ ಆಡಿಸುತ್ತಾ ಹೊರಟುಹೋದ. ನೇಹಾಳ ಅಣ್ಣ ಮತ್ತು ತಾಯಿ ಅವಳನ್ನು ಕರೆದೊಯ್ದಾದ ಮೇಲೂ ನಾನಿನ್ನೂ ಅದೇ ಗುಂಗಿನಲ್ಲಿದ್ದೆ. ರಾತ್ರೋರಾತ್ರಿ ಮನೆ ಬಿಟ್ಟು ಪಲಾಯನಗೈದ ತಾಯಿ ಮಗನ ಯೋಚನೆಯೂ ಬಂತು. ಥೂ…. ಎಂಥ ನೀಚ ಜನ. ದುಡ್ಡಿನಾಸೆಗೆ ಇನ್ನೊಬ್ಬರ ಮನೆಯ ಹೆಣ್ಣುಮಕ್ಕಳಿಗೆ ಚಿತ್ರಹಿಂಸೆ ನೀಡುವುದು ಯಾವ ನ್ಯಾಯ? ಹೆಣ್ಣು ಅಬಲೆಯಲ್ಲ, ಸಬಲೆ! ಎಲ್ಲಾ ಕ್ಷೇತ್ರದಲ್ಲೂ ಇಂದು ಹೆಣ್ಣುಮಕ್ಕಳು ಮುಂದುವರಿಯುತ್ತಿದ್ದಾರೆ ಎಂದುಕೊಳ್ಳುತ್ತಾ ಅದೇ ಸಮಾಜದ ಇನ್ನೊಂದು ಮುಖವಾಡದ ಹಿಂದೆ ಅನೇಕ ಅಬಲೆಯರು ಅಮಾಯಕ ಹೆಂಗಸರು ತಮ್ಮ ಮನೆಯವರಿಂದ ಇಂತಹ ವರದಕ್ಷಿಣೆಯ ದಾಹದಿಂದ ನರಳುವುದು, ಬಲಿಯಾಗುವುದು ಅವ್ಯಾಹತವಾಗಿ ನಡೆದೇ ಇದೆ.
ಬೆಡ್ ರೂಮಿಗೆ ಬಂದಾಗ ಅನಾಯಸವಾಗಿ ಮತ್ತೆ ನನ್ನ ದೃಷ್ಟಿ ಎದುರು ಮನೆಯತ್ತ ಹೋಯಿತು. ಎದುರುಮನೆ ಈಗ ಗಂಡ ಕಳೆದುಕೊಂಡ ಮುಂಡೆಯ ಹಾಗೆ ಬೋಳು ಬೋಳೆನಿಸಿತು. ಅನಾಮಿಕ ಅಲ್ಲಲ್ಲ…. ನೇಹಾಳನ್ನು ಜ್ಞಾಪಿಸಿಕೊಂಡೆ ಈಗ ಹೇಗಿರುವಳೋ ಏನೋ… ಹೇಗಾದರೂ ಇರಲಿ, ಒಟ್ಟಿಗೆ ತನ್ನವರೊಟ್ಟಿಗೆ ಇದ್ದಾಳಲ್ಲ ಎನಿಸಿ, ದೀರ್ಘವಾಗಿ ನೆಮ್ಮದಿಯ ಉಸಿರೆಳೆದುಕೊಂಡೆ. ಅದೇ ಹೊತ್ತಿಗೆ ಮೊಬೈಲ್ ರಿಂಗಾಯಿತು. ಯಾವುದೋ ಹೊಸ ನಂಬರ್ ಆಗಿತ್ತು. ಫೋನ್ ಎತ್ತಿಕೊಂಡು, “ಹಲೋ….,” ಎಂದೆ.
ಅತ್ತಲಿಂದ “ಹಲೋ…. ನಾನು ನೇಹಾಳ ತಾಯಿ ಮಾತಾಡ್ತಿದೀನಿ,” ಎಂದು ಆಕೆ ನುಡಿದರು.
ನಾನು ಕಾತುರಳಾಗಿ, “ನೇಹಾ… ನೇಹಾ… ಈಗ ಹೇಗಿದ್ದಾಳೆ…?” ಎಂದು ಆತಂಕದಿಂದ ಕೇಳಿದೆ.
ನೇಹಾ ಚೆನ್ನಾಗಿದ್ದಾಳೆ. ಅವಳನ್ನು ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿರುವುದಾಗಿ ಈಗ ಸಾಕಷ್ಟು ಸುಧಾರಿಸಿಕೊಂಡಿರುವುದಾಗಿ ಹೇಳಿ, “ನೀವು ನೇಹಾಳಿಗೆ ಮರುಜನ್ಮ ನೀಡಿದ ದೇವತೆ!” ಎಂದರು.
“ನೇಹಾಳ ಅತ್ತೆ ಮತ್ತು ಗಂಡ ಇಂತಹ ಶ್ರೀಮಂತ ಮನೆತನದ ಒಬ್ಬಳೇ ಮಗಳಿರುವ ಹುಡುಗಿಯನ್ನು ಮದುವೆಯಾಗಿ ವರದಕ್ಷಿಣೆಗಾಗಿ ಹಿಂಸಿಸಿ ಅವಳ ಮನೆಯವರಿಂದ ಸಾಕಷ್ಟು ಗಿಟ್ಟಿಸಿಕೊಂಡು ಹುಡುಗಿಯ ತಲೆ ಸರಿ ಇಲ್ಲವೆಂದು ಬಿಂಬಿಸಿ, ಅವಳನ್ನು ಕೊಲೆಗೈದು ತಲೆ ಸರಿಯಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿರುವಂತೆ ರೂಪಿಸುತ್ತಾ ಮತ್ತೊಂದು ಶ್ರೀಮಂತ ಮನೆಯ ಒಬ್ಬಳೇ ಮಗಳಿರುವ ಹುಡುಗಿಗೆ ಪ್ರೇಮಜಾಲ ಬೀಸುವುದೇ ತಾಯಿ ಮಗನ ಕಸುಬು ಎಂದು ಇದೀಗ ಪೊಲೀಸರಿಂದ ತಿಳಿಯಿತು.
“ನಮ್ಮ ಮಗಳು ಇಂಥವನ ಬಲೆಗೆ ಬಿದ್ದು, ಮದುವೆಯಾದರೆ ಇವನನ್ನೇ. ಇಲ್ಲದಿದ್ದರೆ ಸಾವೇ ಗತಿ ಎಂದು ಹೆದರಿಸಿದಾಗ, ಮಗಳ ಇಚ್ಛೆಗೆ ಎದುರಾಡದೆ ನಾವು ಹ್ಞೂಂಗುಟ್ಟಬೇಕಾಯಿತು. ಅವರ ಪೂರ್ವಾಪರ ತಿಳಿಯದೆ ಮಗಳ ಹಠಕ್ಕೆ ಮಣಿದೆವು,” ಅತ್ತ ಕಡೆಯಿಂದ ಅವಳು ಕ್ಷಣ ಹೊತ್ತು ಮೌನ. ನಂತರ ಮೌನ ಮುರಿದ ಆಕೆ, “ಬೇಟಿ ಎರಡು ತಿಂಗಳಿಂದ ಅಲ್ಲಿಯ ಮನೆಗೆ ಬಾಡಿಗೆ ಕಟ್ಟಿಲಿಲ್ಲವೆಂದು ಆ ಮನೆಯ ಓನರ್ ನಮಗೆ ಫೋನ್ ಮಾಡಿದ್ದ. ಆ ಮನೆಯಲ್ಲಿರುವ ಸಾಮಾನುಗಳನ್ನೆಲ್ಲಾ ನೀವೇ ಇಟ್ಟುಕೊಳ್ಳಿ ಅಂತ ಅವರಿಗೆ ಹೇಳಿದ್ದೇವೆ. ಸದ್ಯ ನಮ್ಮ ಮಗಳು ನಮಗೆ ಜೀವಂತವಾಗಿ ಸಿಕ್ಕಳು. ಅಷ್ಟು ಸಾಕು. ಮತ್ತೊಮ್ಮೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಅಂದು ನೀವು ಧೈರ್ಯ ಮಾಡದಿದ್ದರೆ, ನಮ್ಮ ಮಗಳ ಮುಖವನ್ನು ಜೀವಂತವಾಗಿ ನೋಡುತ್ತಿರಲಿಲ್ಲ,” ಎಂದು ನೋವಿನಿಂದ ನುಡಿದರು.
“ಬಿಡಿ ಆಂಟಿ…. ಏನೋ ನನಗೆ ತೋಚಿದ್ದು ನಾನು ಮಾಡಿದೆ. ನೇಹಾ ಕಡೆಗೂ ಧೈರ್ಯ ತಂದುಕೊಂಡು ನನಗೆ ಸೂಚನೆ ಕೊಟ್ಟಿದ್ದರಿಂದಲೇ ನಿಮಗೆ ತಿಳಿಸಲು ನನಗೂ ಸಹಾಯವಾಯಿತು. ಅವಳು ಬೇಗ ಹುಷಾರಾಗಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ,” ಎಂದು ಅವರಿಗೆ ಸಮಾಧಾನ ಹೇಳಿ ಫೋನ್ ಇಟ್ಟೆ.
ಇದುರೆಗೂ ಎದುರು ಮನೆಯಲ್ಲಿ ನಡೆದ ಹಗರಣ ಯಾವುದೂ ನನ್ನ ಯಜಮಾನರಿಗೆ ತಿಳಿದೇ ಇರಲಿಲ್ಲ. ಅವರು ಒಂಥರಾ ವಿಕ್ಷಿಪ್ತ ವ್ಯಕ್ತಿ. ಪ್ರೀತಿ ಪ್ರೇಮ, ಸರಸ ಸಲ್ಲಾಪ ಒಂದೂ ಅವರಲ್ಲಿ ಇರಲಿಲ್ಲ. ಗೊಂಬೆಯಾಟದಂತೆ ಗಂಡಹೆಂಡತಿಯ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವಷ್ಟೆ. ಹಾಗಾಗಿ ಎದುರು ಮನೆಯವರ ಬಗ್ಗೆ ಒಂದೇ ಒಂದೂ ಸುಳಿವನ್ನು ನಾನು ಬಿಟ್ಟುಕೊಟ್ಟಿರಲಿಲ್ಲ ಏನೋ ಬಾಯ್ತಪ್ಪಿ ಹೇಳಲು ಹೋಗಿ ಮನೆ ಮುಂದೆ ಮಾಡುವ ನಾಲ್ಕು ಹೆಜ್ಜೆ ವಾಕಿಂಗೂ ಅದೆಲ್ಲಿ ತಪ್ಪಿಸಿ ಬಿಡುವರೋ…. ಎಂಬ ಅಂಜಿಕೆಯ ಭಯವಿತ್ತು ನನಗೆ.
ಮನಸ್ಸಿಗೆ ಅದೇನೋ ಅಪೂರ್ವ ಆನಂದವಾಯಿತು. ಅಂತೂ ನನ್ನ ಪ್ರಯತ್ನ ಫಲಿಸಿತಲ್ಲ ಎಂದು ಥಟ್ಟನೆ ಅಂದು ಕೊರಿಯರ್ ಹುಡುಗ ಕೊಟ್ಟು ಹೋಗಿದ್ದ ಪಾರ್ಸೆಲ್ ನೆನಪಾಯಿತು. ಅಯ್ಯೋ, ನೇಹಾಳ ತಾಯಿಗೆ ಹೇಳುವುದನ್ನೇ ಮರೆತುಬಿಟ್ಟೆನಲ್ಲಾ, ಎಂದು ಹಣೆ ಚಚ್ಚಿಕೊಂಡೆ. ಮರುಕ್ಷಣವೇ ಮಾದೇವಿಯನ್ನು ಕರೆದು, “ಓನರ್ ಸೇಟೂ ಬಂದ್ರೆ, ಇದನ್ನು ಕೊಟ್ಬಿಡೆ….” ಎಂದು ಹೇಳಿ ಪಾರ್ಸೆಲ್ ನ್ನು ಅವಳ ಕೈಗಿತ್ತೆ.
ಅವಳು ಏನೋ ಕೇಳಲು ಬಾಯಿ ತೆರೆಯುತ್ತಿದ್ದವಳನ್ನು ತಡೆದು, “ನನಗೆ ಕೆಲಸವಿದೆ ಕಣೇ…. ನಿನ್ನ ಜೊತೆ ಸಂಜೆ ಮಾತಾಡ್ತೀನಿ,” ಎನ್ನುತ್ತಾ ಅವಳನ್ನು ಸಾಗ ಹಾಕಿ ಬಾಗಿಲು ಮುಚ್ಚಿದೆ.
ಅಹಂಭಾವದಿಂದ ಮೆರೆಯುವ ನನ್ನ ಯಜಮಾನರು, ದುರಾಸೆಯಿಂದ ದುಡ್ಡು ಮಾಡುವ ದುರ್ಮಾರ್ಗಕ್ಕಿಳಿದ ನೇಹಾಳ ಗಂಡ, ವಯಸ್ಸಿನಲ್ಲಿ ಚಿಕ್ಕವನಾದರೂ ತನಗಿರುವ ಜವಾಬ್ದಾರಿಯೆಂಬ ಚುಕ್ಕಾಣಿಯನ್ನು ಬದುಕಿನ ಕಷ್ಟವನ್ನು ಎದುರಿಸುವ ಗುರಾಣಿಯಾಗಿಸಿಕೊಂಡು ತನ್ನ ಕುಟುಂಬದವರನ್ನು ಯೋಗ್ಯ ರೀತಿಯಲ್ಲಿ ಮುನ್ನಡೆಸುತ್ತಿರು ರವಿ, ತನ್ನ ಹೆಂಡತಿಯ ಹೆರಿಗೆಯ ಹೊತ್ತಿನಲ್ಲಿ ತಾನವಳ ಬಳಿಯಲ್ಲಿ ಇರಬೇಕೆಂದು ಬಯಸುವ ಒಬ್ಬ ಕೊರಿಯರ್ ಹುಡುಗ….. ಇವರೆಲ್ಲ ನನ್ನ ಕಣ್ಮುಂದೆ ಗಿರಗಟ್ಟಲೆಯಂತೆ ಸುತ್ತತೊಡಗಿದರು.





