ಸಾಧಾರಣ ರಂಗೋಲಿಯಿಂದ ಆರಂಭಿಸಿ ಚಿತ್ರಕಲೆಯಲ್ಲಿ ಅದ್ಭುತ ಪ್ರಾವೀಣ್ಯತೆ ಸಾಧಿಸಿದ ಕಲಾವಿದೆ ಹೇಮಾ ವಿನಾಯಕ್ ಪಾಟೀಲರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ…..?
`ಎಂಥಾ ಶ್ರೀಮಂತಾನಂತೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ…..’ ಹಿನ್ನೆಲೆಯಲ್ಲಿ ಸುಶ್ರಾವ್ಯವಾದ ಹಾಡು, ಎದುರಿಗೆ ಚಕಚಕನೆ ಈ ಹಾಡಿನ ರಚನೆಕಾರ, ದಾಸವರೇಣ್ಯರಲ್ಲಿ ಪ್ರಮುಖರಾದ ಪ್ರಸನ್ನ ವೆಂಕಟೇಶ ದಾಸರ ಚಿತ್ರ ಥ್ರೆಡ್ ಪೇಂಟಿಂಗ್ ನಲ್ಲಿ ಮೂಡತೊಡಗಿದೆ.
ನೋಡ ನೋಡುತ್ತಿದ್ದಂತೆ ದಾಸರೇ ತನ್ಮಯದಿಂದ ಹಾಡುತ್ತಿರುವರೇನೋ ಎಂದು ಭ್ರಮಿಸುವಂಥ ಚಿತ್ರ! ಕಲಾ ರಸಿಕರಿಗೆ ಉಣಿಸಿದ್ದ ಕಲಾವಿದೆಯ ಮೊಗದಲ್ಲೊಂದು ತೃಪ್ತ ಭಾವ!
ಹಿಂದೆಯೇ `ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನ……’ ಜಾನಪದ ಗೀತೆಗೆ ತಲೆದೂಗುತ್ತಿರುವಂತೆ ಬಳೆಗಳ ರಾಶಿ ಹೆಗಲಿಗೆ ಧರಿಸಿ ಹೆಣ್ಣುಮಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಬಳೆಗಾರನ ಚಿತ್ರ ಬಿಳೀ ಹಾಳೆಯಲ್ಲಿ ಮೂಡಿ ಸಭಿಕರ ಮನ ಗೆದ್ದಿತ್ತು. ಬೆಂಗಳೂರಿನ ನಯನ ಸಭಾಂಗಣ, ಕನ್ನಡ ಭವನದಲ್ಲಿ ಹೀಗೊಂದು ಕಲಾ ಪ್ರದರ್ಶನ!
ಕೆಲವೇ ನಿಮಿಷಗಳಲ್ಲಿ ದಾರದಿಂದ ಚಿತ್ರ ಬಿಡಿಸುವ ವಿಶೇಷ ಕೌಶಲ್ಯದಿಂದ ಕನ್ನಡ ತಾಯಿ ಭುವನೇಶ್ವರಿ, ಭಾರತಾಂಬೆಯ ದೇವರು ದೇವತೆಗಳು, ಪ್ರಕೃತಿ ಸೌಂದರ್ಯ ಇತ್ಯಾದಿ ಪ್ರಕಾರಗಳು ಹಾಡನ್ನು ಅಂದಿಸುತ್ತಲೇ ಚಿತ್ರಗಳನ್ನು ಬಿಡಿಸುವ ಅದ್ಭುತ ಕಲಾವಿದೆ ಹೇಮಾ ವಿನಾಯಕ ಪಾಟೀಲ್.
ತಾವು ಕಲಿತಿರುವ ವಿದ್ಯೆಯನ್ನು ಇತರರಿಗೂ ಕಲಿಸುತ್ತಾ, ಹುದುಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತ ಸಾಗಿರುವ ಕಲಾ ದರ್ಪಣ ಆರ್ಟ್ ರೆಫ್ಲೆಕ್ಟ್ಸ್ ಸಂಸ್ಥೆಯ ಸಂಸ್ಥಾಪಕಿ. ಇವರ ಕಲಾ ಸಾಧನೆಯ ಹಾದಿಯನ್ನು ಅವರ ಮಾತುಗಳಲ್ಲೇ ಕೇಳೋಣ…..

ಕಲೆ ಬೆಳೆದ ಪರಿ
ಚಿಕ್ಕಂದಿನಲ್ಲಿ ಗೌರಿ ಗಣೇಶನ ಹಬ್ಬಗಳಂದು ಮಣ್ಣಿನಲ್ಲಿ ಗಣೇಶನನ್ನು ಮಾಡುವುದು, ಇಟ್ಟಿಗೆಯ ಮೇಲೆ ಗೌರಿ, ಮದುವೆ ಮನೆಗಳಲ್ಲಿ ಅಲಂಕಾರಿಕವಾಗಿ ದೊಡ್ಡ ದೊಡ್ಡ ರಂಗೋಲಿಗಳನ್ನು ಬಿಡಿಸುತ್ತಿದ್ದೆ. ಬಾಲ್ಯದಲ್ಲಿ ಚಿತ್ರಕಲೆಯನ್ನು ಕಲಿಯುವ ಆಸಕ್ತಿ ಇತ್ತು. ಇದರಲ್ಲಿ ಹೇಳಿಕೊಳ್ಳುವಂಥ ಅವಕಾಶವಿಲ್ಲ, ಪ್ರಯೋಜನವಿಲ್ಲ, ಎಂದು ಅನೇಕರು ತಣ್ಣೀರೆರಚುವ ಮಾತುಗಳಾಡಿದ ಮಾತುಗಳಿಂದ ಅದು ಕಮರಿ ಹೋಗಿತ್ತು.
ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೆ ಮನೆ ಮುಂದೆ ಹಾಕುತ್ತಿದ್ದ ರಂಗೋಲಿ, ಭಾರತ ಮಾತೆ, ಕನ್ನಡ ತಾಯಿ ಭುವನೇಶ್ವರಿ ಇತ್ಯಾದಿ ನಾನು ಬಿಡುಸುತ್ತಿದ್ದ ಚಿತ್ರಗಳನ್ನು ನೋಡಿ ನೆರೆಹೊರೆಯವರು ತಮ್ಮ ಮಕ್ಕಳಿಗೂ ಡ್ರಾಯಿಂಗ್ ಕಲಿಸಿ ಎಂಬ ಕೋರಿಕೆ ಇಟ್ಟಾಗ ಹೊಸ ಉತ್ಸಾಹ ಮೂಡಿತ್ತು.

ಗುರುಗಳ ಪ್ರೋತ್ಸಾಹ
ಸಾಂಪ್ರದಾಯಿಕವಾಗಿ ಕಲಿತಿರದ ಕಾರಣ, ಒಂದಷ್ಟು ದಿನ ಯಾರ ಬಳಿಯಲ್ಲಾದರೂ ಕಲಿಯುವುದು ಎಂದು ನಿರ್ಧರಿಸಿ, ಗುರುವಿಗಾಗಿ ಹುಡುಕಾಟ ನಡೆಸಿದೆ. ಆ ಸಮಯದಲ್ಲಿ ನನ್ನ ಪೆನ್ಸಿಲ್ ಸ್ಕೆಚ್ ಗಳನ್ನು ನೋಡಿದ ಹಿರಿಯ ಕಲಾವಿದರಾದ, ರವೀಂದ್ರ ಎಸ್ ಹಾಲಿಜೋಳ, `ನೀವು ಎಕ್ಸಿಬಿಷನ್ ವರೆಗೆ ಹೋಗಬಹುದು, ಚೆನ್ನಾಗಿ ಮಾಡಿದ್ದೀರಿ,’ ಎಂದು ಮೆಚ್ಚುಗೆಯಿಂದ ಹೇಳಿದರು.
ಅವರು ಹಾಗೆ ಹೇಳಿದಾಗ, ಎಕ್ಸಿಬಿಷನ್ ಎಂದರೇನು ಎಂಬ ಅರಿವು ಸಹ ಇರಲಿಲ್ಲ. ಆದರೆ ಏನಾದರೂ ಸಾಧನೆ ಮಾಡಬೇಕು ಎಂಬ ಸ್ಛೂರ್ತಿ ಹುಟ್ಟಿತು. ಮಿತ್ರರೊಂದಿಗೆ ಚಿತ್ರಸಂತೆಗೆ ಒಮ್ಮೆ ಹೋಗಿ ಬನ್ನಿ. ನಿಮಗೊಂದು ಐಡಿಯಾ ಸಿಗುತ್ತದೆ ಎಂದು ಸಲಹೆ ನೀಡಿದರು. ಅಲ್ಲಿಗೆ ಭೇಟಿ ನೀಡಿದೆ. ಅಂದು ಅಲ್ಲಿ ನಡೆಯಲಿದ್ದ ಪೇಂಟಿಂಗ್ ಕಾಂಪಿಟಿಷನ್ ಬಗ್ಗೆ ತಿಳಿದು ನಾನೂ ಭಾಗವಹಿಸಿ, ಬಹುಮಾನ ಗಳಿಸಿದೆ.

ಆರ್ಟ್ರೆಫ್ಲೆಕ್ಟ್ಸ್ ಸಂಸ್ಥೆ
ಚಿತ್ರಕಲೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ನಿರ್ಧರಿಸಿ, ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಫೌಂಡೇಶನ್ ಕೋರ್ಸ್ ಗೆ ಸೇರಿ, ಅಡ್ವಾನ್ಸ್ ಚಿತ್ರಕಲಾ ತರಬೇತಿಯನ್ನು ಪಡೆದೆ. ಅಲ್ಲಿ ಕಲಿಯುತ್ತಲೇ ಮಕ್ಕಳಿಗೂ ಮನೆಯಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದೆ. ಇದರಿಂದ ನನ್ನಲ್ಲಿದ್ದ ಕಲೆ ಇನ್ನಷ್ಟು ಹೊಳಪು ಕಂಡಿತು. ಇದರ ಬುನಾದಿಯಲ್ಲಿ ಶುರುವಾದದ್ದೇ ಕಲಾ ದರ್ಪಣ `ಆರ್ಟ್‌ರೆಫ್ಲೆಕ್ಟ್ಸ್ ಸಂಸ್ಥೆ!’ ಎಂದು ವಿವರಿಸಿದರು.
ಚಿತ್ರಕಲಾ ಪರಿಷತ್ತಿನಲ್ಲಿ ಮುಂದೆ 2-3 ರ್ಷಗಳಲ್ಲಿ ನೂರಾರು ಪೇಂಟಿಂಗ್ ಗಳನ್ನು ಮಾಡಿದ ಹೇಮಾ, 2018ರಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ 64 ಚಿತ್ರಗಳ ಏಕ ವ್ಯಕ್ತಿ ಪ್ರದರ್ಶನ, 5 ಬಾರಿ ಸಮೂಹ ಪ್ರದರ್ಶನ, ಚಿತ್ರಸಂತೆಯಲ್ಲಿ ಏಳು ಬಾರಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ, ರಂಗೋಲಿ ಮೆಟ್ರೋ ಆರ್ಟ್ ಸೆಂಟರ್, ಮೆಗಾ ಸಿಟಿ ಮಾಲ್ ಇತ್ಯಾದಿ ಹತ್ತು ಹಲವು ಕಡೆ ಇವರ ಚಿತ್ರಕಲೆಗಳು ಪ್ರದರ್ಶಿತಗೊಂಡಿವೆ. ಜೊತೆಗೆ ಖಾಸಗಿ ಟಿವಿ ವಾಹಿನಿಯಲ್ಲಿ ಪೇಂಟಿಂಗ್ ಕುರಿತಾದ ಹದಿನೇಳು ಸಂಚಿಕೆಗಳು ಬಿತ್ತರಗೊಂಡಿವೆ.

ವಿವಿಧ ಕಲಾ ಪ್ರದರ್ಶನಗಳು
ದಾರದ ಚಿತ್ರಕಲಾ ಪ್ರದರ್ಶನ, ಕರ್ನಾಟಕ ಚಿತ್ರಕಲಾ ಪರಿಷತ್ತು, ಖಾಸಗಿ ವಾಹಿನಿ, ಶಾಲಾ ಕಾಲೇಜು ವೇದಿಕೆಗಳಲ್ಲಿ ಬೆಳಕು ಕಂಡಿವೆ. ಚಾರ್ಕೋಲ್ ಪೇಂಟಿಂಗ್, ಬ್ಲೇಡ್ ಪೇಂಟಿಂಗ್, ವಾರ್ಲಿ ಆರ್ಟ್, ಆಯಿಲ್ ಪೇಸ್ಟ್ ಆರ್ಟ್, ವಾಟರ್ ಕಲರ್, ಅಕ್ರಿಲಿಕ್ ಪೇಂಟಿಂಗ್, ಟೆಕ್ಷರ್ ಪೇಂಟಿಂಗ್, ಪೆನ್ಸಿಲ್ ಡ್ರಾಯಿಂಗ್ ಗಳ ನೂರಾರು ಚಿತ್ರಪಟಗಳು ಇವರ ಕೈಚಳಕದಲ್ಲಿ ಅರಳಿವೆ.
ಇತ್ತೀಚೆಗೆ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯೋತ್ಸವ ಸಮಾರಂಭಗಳಿಗೆ ವಿಶೇಷ ಆಹ್ವಾನಿತರಾಗಿ, ತಮ್ಮ ಚಿತ್ರಗಳಿಂದ ಸಭಿಕ ಸಹೃದಯಿಗಳ ಮನ ಗೆದ್ದಿದ್ದಾರೆ.
ತಮ್ಮಂತೆ ಬೇರೆಯವರು ಅವಕಾಶ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಲಾ ದರ್ಪಣ ಸಂಸ್ಥೆಯನ್ನು ಹುಟ್ಟುಹಾಕಿ, ಕಳೆದ ಏಳೂವರೆ ವರ್ಷಗಳಿಂದ ಶ್ರದ್ಧೆಯಿಂದ ನಿರಂತರವಾಗಿ, ಯಾವುದೇ ಸರ್ಕಾರಿ ನೆರವಿಲ್ಲದೆ, ಸಾವಿರಾರು ಮಕ್ಕಳು ಮತ್ತು ಮಹಿಳೆಯರಿಗೆ ವೇದಿಕೆ ಕಲ್ಪಿಸಿ ಕಲಾಪೋಷಣೆ ಮಾಡುವುದರ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯವೇ ಸರಿ!

ವೈವಿಧ್ಯಮಯ ಸ್ಪರ್ಧೆಗಳು
ಸ್ವಾತಂತ್ರ್ಯೋತ್ಸವ, ಗೌರಿ ಗಣೇಶ್, ರಾಜ್ಯೋತ್ಸವ, ಹೊಸ ವರ್ಷ….. ಇತ್ಯಾದಿ ಹಬ್ಬ ಹರಿದಿನಗಳ ಸಂಭ್ರಮವನ್ನು, ರಾಜ್ಯ ಮಟ್ಟದಲ್ಲಿ, ಸಾರ್ವಜನಿಕರಿಗೆ ಕಲಾ ದರ್ಪಣ ಆರ್ಟ್ ರೆಫ್ಲೆಕ್ಟ್ಸ್ ಸಂಸ್ಥೆಯ ವತಿಯಿಂದ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಡ್ರಾಯಿಂಗ್, ಪೇಂಟಿಂಗ್, ಗಾಯನ, ನೃತ್ಯ, ರಂಗೋಲಿ ಇತ್ಯಾದಿ ವಿಭಾಗಗಳಲ್ಲಿ ಸ್ಪರ್ಧೆ ನಡೆಸುವುದೇ ಅಲ್ಲದೆ, ಭಾಗವಹಿಸುವ ಸ್ಪರ್ಧಿಗಳಿಗೆಲ್ಲ ಬಹುಮಾನ ಕೊಟ್ಟು ಪ್ರೋತ್ಸಾಹಿಸುವುದು ಇನ್ನೊಂದು ವಿಶೇಷ.
ಅಂಡರ್ ಪ್ರಿವಿಲೆಜ್ಡ್ ವರ್ಗಕ್ಕೂ ಸೇರಿದಂತೆ ಹಲವಾರು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯ ಮಕ್ಕಳಿಗೆ ಡ್ರಾಯಿಂಗ್, ಪೇಂಟಿಂಗ್ ಸ್ಪರ್ಧೆಗಳನ್ನು ನಡೆಸಿದ್ದಾರೆ. ವಿವಿಧ ಪ್ರಕಾರಗಳ ಕಲೆಗಳನ್ನು ಹಂಚಿಕೊಳ್ಳುವ ಸದುದ್ದೇಶದಿಂದ ರಜಾಕಾಲದಲ್ಲಿ ಕ್ಯಾಂಪ್, ವರ್ಕ್ ಶಾಪ್ ಗಳನ್ನು ಹಮ್ಮಿಕೊಳ್ಳುತ್ತಾರೆ. ಈಗಲೂ ನೇರ ಮತ್ತು ಆನ್ ಲೈನ್ ನಲ್ಲಿ ವಿವಿಧ ಪೇಂಟಿಂಗ್ ಕ್ಲಾಸ್ ಗಳನ್ನು ನಡೆಸುತ್ತಿದ್ದಾರೆ. ಪ್ರತಿಭೆಗಳನ್ನು ಗುರುತಿಸಿ, ವೇದಿಕೆ ಒದಗಿಸಿ ಗೌರವಿಸುವುದು ಇವರ ಧ್ಯೇಯವಾಗಿದೆ.
– ಕೆ.ವಿ. ರಾಜಲಕ್ಷ್ಮಿ





