ಸಾಮಗ್ರಿ : 3-4 ಕಪ್ ಕಾರ್ನ್ ಫ್ಲೇಕ್ಸ್, 5-6 ಎಸಳು ಕರಿಬೇವು, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ಕೊಬ್ಬರಿ ತುಂಡು, ಕಡಲೆಬೀಜ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್ ಮಸಾಲ, ಅಮ್ಚೂರ್ ಪುಡಿ, ಅರಿಶಿನ, ಸಕ್ಕರೆ, ಇಂಗು, ಇತ್ಯಾದಿ.
ವಿಧಾನ : ಒಂದು ನಾನ್ ಸ್ಟಿಕ್ ಬಾಣಲೆಯಲ್ಲಿ ಮೊದಲು ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆಯಿರಿ. ನಂತರ ಇದರಲ್ಲಿ ಕಡಲೆಬೀಜ, ಕೊಬ್ಬರಿ ತುಂಡುಗಳನ್ನೂ ಹುರಿದು ತೆಗೆಯಬೇಕು. ಆಮೇಲೆ ಕರಿಬೇವು ಹುರಿದು ತೆಗೆಯಿರಿ. ನಂತರ ಅದೇ ಬಾಣಲೆಗೆ ಕಾರ್ನ್ ಫ್ಲೇಕ್ಸ್, ಇಂಗು, ಉಳಿದ ಮಸಾಲೆ, ಉಪ್ಪು ಹಾಕಿ ಕೆದಕಿ, ಕೊನೆಯಲ್ಲಿ ಮೊದಲೇ ಹುರಿದುಕೊಂಡಿದ್ದ ಎಲ್ಲಾ ಪದಾರ್ಥ ಸೇರಿಸಿ ಬೆರೆಸಿಕೊಳ್ಳಿ. ಇದನ್ನು ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಸಂಜೆ ಕಾಫಿ-ಟೀ ಜೊತೆ ಸವಿಯಲು ಕೊಡಿ.

ಡ್ರೈ ಫ್ರೂಟ್ಸ್ ಕಟ್ ಲೆಟ್
ಮೂಲ ಸಾಮಗ್ರಿ : ಮಧ್ಯಮ ಗಾತ್ರದ 2 ಬೀಟ್ ರೂಟ್, 200 ಗ್ರಾಂ ಬೇಯಿಸಿ ಮಸೆದ ಆಲೂ, 4-5 ಬ್ರೆಡ್ ಪೀಸ್, 4-5 ಚಮಚ ಕಾರ್ನ್ ಫ್ಲೋರ್, 3-4 ಚಮಚ ಕಡಲೆಹಿಟ್ಟು, ಕರಿಯಲು ರೀಫೈಂಡ್ ಎಣ್ಣೆ.
ಹೂರಣ ಸಾಮಗ್ರಿ : ಅರ್ಧ ಕಪ್ ನೈಲಾನ್ ಎಳ್ಳು, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಖರ್ಜೂರ, ಅಂಜೂರದ ಚೂರು (ಒಟ್ಟಾರೆ 1 ಕಪ್), 2 ಚಮಚ ಗೋಡಂಬಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ತುರಿದ ಪನೀರ್, ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಬಾಣಲೆಯಲ್ಲಿ 4 ಚಮಚ ಎಣ್ಣೆ ಬಿಸಿ ಮಾಡಿ ನೀಟಾಗಿ ತುರಿದ ಬೀಟ್ ರೂಟ್ ಹಾಕಿ ಬಾಡಿಸಿ ಕೆಳಗಿಳಿಸಿ. ಇದಕ್ಕೆ ಮಸೆದ ಆಲೂ, ಬ್ರೆಡ್ ಪೀಸ್, ಕಾರ್ನ್ ಫ್ಲೋರ್, ಕಡಲೆಹಿಟ್ಟು, ತುಸು ಉಪ್ಪು ಹಾಕಿ, ತುಸು ನೀರು ಚಿಮುಕಿಸಿ ಮಿಶ್ರಣ ಕಲಸಿಡಿ. ಗೋಡಂಬಿ, ಎಳ್ಳು ಹೊರತುಪಡಿಸಿ ಉಳಿದೆಲ್ಲ ಹೂರಣದ ಸಾಮಗ್ರಿಯನ್ನು ಒಂದು ಬೇಸನ್ನಿಗೆ ಹಾಕಿ ಮಿಶ್ರಣ ಮಾಡಿ. ನಂತರ ಆಲೂ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ಬೇರೆ ಮಾಡಿ. ಪ್ರತಿ ಉಂಡೆಯನ್ನೂ ಒತ್ತಿ ಚಪ್ಪಟೆ ಮಾಡಿ, ಅದರಲ್ಲಿ 1-2 ಚಮಚ ಡ್ರೈ ಫ್ರೂಟ್ಸ್ ಮಿಶ್ರಣ ತುಂಬಿಸಿ, ಮತ್ತೆ ಪೂರ್ತಿ ಕವರ್ ಮಾಡಿ, ಚಿತ್ರದಲ್ಲಿರುವಂತೆ ರೆಡಿ ಮಾಡಿ. ಇದನ್ನು ಎಳ್ಳಿನಲ್ಲಿ ಹೊರಳಿಸಿ, ಮೇಲೆ 1-1 ಗೋಡಂಬಿ ಸಿಗಿಸಿಡಿ. ಇವನ್ನು ಕಾದ ಎಣ್ಣೆಯಲ್ಲಿ ಕರಿದು, ಬಿಸಿಯಾಗಿ ಇರುವಂತೆಯೇ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಟೋಸ್ಟ್
ಸಾಮಗ್ರಿ : ಒಂದಿಷ್ಟು ಬ್ರೆಡ್ ಸ್ಲೈಸ್, 1-2 ಪ್ಯಾಕೆಟ್ ಶುಗರ್ ಫ್ರೀ, ತುಸು ಶುಗರ್ ಫ್ರೀ ಪೀನಟ್ ಬಟರ್, 2-3 ಮಾಗಿದ ಚುಕ್ಕೆ ಬಾಳೆಹಣ್ಣು, 2 ಚಿಟಕಿ ಏಲಕ್ಕಿ ಪುಡಿ.
ವಿಧಾನ : ಮೊದಲು ಬ್ರೆಡ್ ಗೆ ತುಪ್ಪ ಸವರಿ, ತವಾ ಮೇಲೆ ಹಾಕಿ ಎರಡೂ ಬದಿ ಬಿಸಿ ಮಾಡಿ. ಇದನ್ನು ಕೆಳಗಿಳಿಸಿ ಶುಗರ್ ಫ್ರೀ ಉದುರಿಸಿ ನಂತರ ಬಾಳೆ ಹಣ್ಣಿನ ಬಿಲ್ಲೆಗಳನ್ನು ಬ್ರೆಡ್ ಮೇಲಿರಿಸಿ, ಮೇಲೆ ಏಲಕ್ಕಿಪುಡಿ ಉದುರಿಸಿ. ಇದೀಗ ಬ್ರೆಡ್ ಟೋಸ್ಟ್ ಸವಿಯಲು ಸಿದ್ಧ.

ಮ್ಯಾಕ್ರೋನಿ ಸಲಾಡ್
ಮೂಲ ಸಾಮಗ್ರಿ : 2 ಪ್ಯಾಕೆಟ್ ಮ್ಯಾಕ್ರೋನಿ, ಸಣ್ಣಗೆ ಹೆಚ್ಚಿದ 1 ಸಣ್ಣ ಸೌತೇಕಾಯಿ, 2-3 ಈರುಳ್ಳಿ, 1 ಸಣ್ಣ ಅನಾನಸ್, 1-2 ತಾಜಾ ಕ್ಯಾರೆಟ್, ತಲಾ 1-1 ಹಸಿರು, ಕೆಂಪು, ಹಳದಿ ಕ್ಯಾಪ್ಸಿಕಂ.
ಡೆಸ್ಸಿಂಗ್ ಗಾಗಿ ಸಾಮಗ್ರಿ : ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ವಿನಿಗರ್, ಮಿಕ್ಸ್ಡ್ ಹರ್ಬ್ಸ್, ಪೈನ್ ಆ್ಯಪಲ್ ಸಿರಪ್, ಆಲಿವ್ ಎಣ್ಣೆ, ಜಜ್ಜಿದ ತುಸು ಶುಂಠಿ-ಬೆಳ್ಳುಳ್ಳಿ.
ವಿಧಾನ : ಒಂದು ಸ್ಟೀಲ್ ಪಾತ್ರೆಯಲ್ಲಿ ಮ್ಯಾಕ್ರೋನಿ ಮುಳುಗುವಷ್ಟು ನೀರು, ತುಸು ಆಲಿವ್ ಎಣ್ಣೆ, ಚಿಟಕಿ ಉಪ್ಪು ಹಾಕಿ ಬೇಯಿಸಿ, ನೀರು ಬಸಿದಿಡಿ. ಇದನ್ನು ಒಂದು ಬೇಸನ್ನಿಗೆ ಹರಡಿ, ಮೇಲಿನ ಎಲ್ಲಾ ಸಾಮಗ್ರಿಗಳನ್ನು ಇದರ ಮೇಲೆ ಉದುರಿಸುತ್ತಾ, ನೀಟಾಗಿ ಮಿಶ್ರಣ ಮಾಡಿ. ಇದನ್ನು ಅರ್ಧ ಗಂಟೆ ಫ್ರಿಜ್ ನಲ್ಲಿರಿಸಿ ನತರ ಸವಿಯಲು ಕೊಡಿ.

ಸ್ಪೆಷಲ್ ಆಲೂ ಟಿಕ್ಕಿ
ಮೂಲ ಸಾಮಗ್ರಿ : 250 ಗ್ರಾಂ ಆಲೂ ಬೇಯಿಸಿ, ಸಿಪ್ಪೆ ಸುಲಿದು, ಮಸೆದಿಡಿ. 4-5 ಚಮಚ ಆರಾರೂಟ್ ಪೌಡರ್, 2-3 ಚಮಚ ಅಕ್ಕಿಹಿಟ್ಟು, 1 ಕಪ್ ಬ್ರೆಡ್ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು-ಖಾರ, ಕರಿಯಲು ರೀಫೈಂಡ್ ಎಣ್ಣೆ.
ಹೂರಣದ ಸಾಮಗ್ರಿ : ಅರ್ಧ ಕಪ್ ಹೆಸರುಬೇಳೆ, 4 ಚಮಚ ಹಸಿ ಬಟಾಣಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ತುಪ್ಪದಲ್ಲಿ ಹುರಿದಿಡಿ), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಜೀರಿಗೆ ಪುಡಿ, ಧನಿಯಾ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1-2 ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ಚಾಟ್ ಮಸಾಲ, ಅರ್ಧ ಸೌಟು ತುಪ್ಪ, 4-5 ಚಮಚ ಕಡಲೆಹಿಟ್ಟು.
ವಿಧಾನ : ಮೊದಲು ಕುಕ್ಕರಿನಲ್ಲಿ ಬೇಳೆಯನ್ನು ಚೆನ್ನಾಗಿ ಬೇಯಿಸಿ. ಇದರ ನೀರು ಬಸಿದು ಬೇರ್ಪಡಿಸಿ. ಒಂದು ನಾನ್ ಸ್ಟಿಕ್ ಪ್ಯಾನಿನಲ್ಲಿ ತುಸು ತುಪ್ಪ ಬಿಸಿ ಮಾಡಿ, ಮೊದಲು ಕಡಲೆಹಿಟ್ಟು ಹಾಕುತ್ತಾ ಕದಡಿಕೊಳ್ಳಿ. ನಂತರ ಇದಕ್ಕೆ ಬೇಳೆ ಬೆರೆಸಿರಿ. ನಂತರ ಹೂರಣಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಒಂದೊಂದಾಗಿ ಬೆರೆಸುತ್ತಾ, ಮಂದ ಉರಿಯಲ್ಲಿ ಕೈಯಾಡಿಸಿ. ಇದನ್ನು 5 ನಿಮಿಷ ಕೆದಕಿ ಕೆಳಗಿಳಿಸಿ. ಒಂದು ಬೇಸನ್ನಿಗೆ ಮಸೆದ ಆಲೂ, ಅಕ್ಕಿಹಿಟ್ಟು, ಆರಾರೂಟ್ ಪೌಡರ್, ತುಸು ಉಪ್ಪು, ಖಾರ ಹಾಕಿ ಮಿಶ್ರಣ ಕಲಸಿಡಿ. ಇದನ್ನು ದೊಡ್ಡ ನಿಂಬೆ ಗಾತ್ರದ ಉಂಡೆಗಳಾಗಿಸಿ. ಇದನ್ನು ಮಧ್ಯೆ ಅದುಮಿ ಹಳ್ಳ ಮಾಡಿ, 1-2 ಚಮಚ ಹೂರಣ ತುಂಬಿಸಿ, ನೀಟಾಗಿ ಕವರ್ ಮಾಡಿ. ಹೀಗೆ ಪ್ರತಿಯೊಂದನ್ನೂ ಸಿದ್ಧಪಡಿಸಿಕೊಂಡು, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಇದನ್ನು ಬಟ್ಟಲುಗಳಿಗೆ ಹಾಕಿ, ಮೇಲೆ ಹುಳಿಸಿಹಿ ಚಟ್ನಿ, ಗಟ್ಟಿ ಮೊಸರು, ತುಸು ಖಾರದ ಮಿಕ್ಸ್ ಚರ್ ಇತ್ಯಾದಿಗಳಿಂದ ಅಲಂಕರಿಸಿ, ಬಿಸಿ ಬಿಸಿ ಕಾಫಿ-ಟೀ ಜೊತೆ ಸವಿಯಲು ಕೊಡಿ.

ಹೆಲ್ದಿ ಜಿಂಜರ್ ಪಿಕಲ್
ಸಾಮಗ್ರಿ : 250 ಗ್ರಾಂ ತಾಜಾ ಹಸಿ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಜೀರಿಗೆ, ಮೆಂತ್ಯ, ಕಾಳು ಮೆಣಸು, ಸೋಂಪು, ಓಮ, ಇಂಗು, (ಅಜವಾನ), ನಿಂಬೆ ರಸ, ಎಳ್ಳೆಣ್ಣೆ.
ವಿಧಾನ : ಮೊದಲು ಶುಂಠಿಯನ್ನು ನೀಟಾಗಿ ತೊಳೆದು, ಚೆನ್ನಾಗಿ ಒರೆಸಿ, ಫ್ಯಾನಿನಡಿ ಪಂಚೆ ಮೇಲೆ ಹರಡಿ ತುಸು ಒಣಗಿಸಿ. ನಂತರ ಇದನ್ನು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಎಲ್ಲಾ ಮಸಾಲೆ ಹಾಕಿ ಕೆದಕಬೇಕು. 1 ನಿಮಿಷ ಬಿಟ್ಟು ಶುಂಠಿ ಹಾಕಿ ಮಂದ ಉರಿಯಲ್ಲಿ ಹದನಾಗಿ ಬಾಡಿಸಿ. ನಂತರ ಉಪ್ಪು, ಖಾರ ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ನಿಂಬೆರಸ ಬೆರೆಸಿ ಕೆಳಗಿಳಿಸಿ. ಚೆನ್ನಾಗಿ ಗಾಳಿಗೊಡ್ಡಿ ಆರಲು ಬಿಡಿ. ನಂತರ ಗಾಳಿಯಾಡದ ಡಬ್ಬಕ್ಕೆ ತುಂಬಿಸಿಟ್ಟು, 1 ವಾರದ ನಂತರ ಸವಿಯಲು ಕೊಡಿ.

ಹಸಿಮೆಣಸಿನ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ತಾಜಾ ಹಸಿ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ, ಜೀರಿಗೆ, ಇಂಗು, ಸೋಂಪು, ಮೆಂತ್ಯ, ಅರಿಶಿನ, ಓಮ, ನಿಂಬೆರಸ, ಎಳ್ಳೆಣ್ಣೆ.
ವಿಧಾನ : ಮೊದಲು ಬಾಣಲೆಯಲ್ಲಿ ಎಲ್ಲಾ ಮಸಾಲೆ ಹಾಕಿ ತುಸು ಎಣ್ಣೆ ಬೆರೆಸಿ, ಹುರಿದು, ನೀಟಾಗಿ ಪುಡಿ ಮಾಡಿ. ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸುವೆ ಒಗ್ಗರಣೆ ಕೊಡಿ. ನಂತರ ಸೀಳಿದ ಉದ್ದನೆ ಮೆಣಸಿನಕಾಯಿಗಳನ್ನು ಇದಕ್ಕೆ ಹಾಕಿ ಬಾಡಿಸಿ. ನಂತರ ಒಟ್ಟಿಗೆ ಎಲ್ಲಾ ಮಸಾಲೆ ಪುಡಿ ಹಾಕಿ ಕೆದಕಬೇಕು. ಕೆಳಗಿಳಿಸಿ ಆರಲು ಬಿಟ್ಟು, ಧಾರಾಳ ನಿಂಬೆ ರಸ ಬೆರೆಸಿ, ತಕ್ಷಣ ಊಟದ ಜೊತೆಗೆ ಸವಿಯಲು ಕೊಡಿ.

ಬಟಾಣಿ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ಹಸಿ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುಡಿಮೆಣಸು, ವಿನಿಗರ್, ನಿಂಬೆರಸ, ಸಾಸುವೆ, ಜೀರಿಗೆ, ಮೆಂತ್ಯ, ಓಮ, ಸೋಂಪು, ಅರಿಶಿನ, ಅಮ್ಚೂರ್ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2 ಸೌಟು ಎಣ್ಣೆ.
ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಬಟಾಣಿ ಹಾಕಿ ಹದನಾಗಿ ಬೇಯಿಸಿ. ನಂತರ ಉಪ್ಪು, ಖಾರ, ಉಳಿದ ಮಸಾಲೆ ಪೂರ್ತಿ ಹಾಕಿ ಚೆನ್ನಾಗಿ ಮಿಶ್ರಗೊಳಿಸಿ. 2 ನಿಮಿಷ ಬಿಟ್ಟು ಕೆಳಗಿಳಿಸಿ. ಚೆನ್ನಾಗಿ ಆರಿದ ಮೇಲೆ ವಿನಿಗರ್, ನಿಂಬೆರಸ ಬೆರೆಸಿ ಕದಡಿಕೊಳ್ಳಿ. ಇದೀಗ ಉಪ್ಪಿನಕಾಯಿ ರೆಡಿ! ದಿನಾ ಬಳಸುತ್ತಾ, ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಫ್ರಿಜ್ ನಲ್ಲಿಡಿ. 2-3 ವಾರ ಕೆಡದೆ ಉಳಿಯುತ್ತದೆ.

ನೆಲ್ಲಿ–ಶುಂಠಿಯ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ಬೆಟ್ಟದ ನೆಲ್ಲಿಕಾಯಿ, 100 ಗ್ರಾಂ ತಾಜಾ ಹಸಿ ಶುಂಠಿ, (ಅಗತ್ಯವೆನಿಸಿದರೆ ಸೀಳಿದ 7-8 ಹಸಿಮೆಣಸಿನಕಾಯಿ), 2 ಸೌಟು ಎಳ್ಳೆಣ್ಣೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸಾಸುವೆ, ಜೀರಿಗೆ, ಮೆಂತ್ಯ, ಕಾಳುಮೆಣಸು, ಉಪ್ಪು, ಖಾರ, ಗರಂಮಸಾಲೆ, ಅರಿಶಿನ, ಇಂಗು.
ವಿಧಾನ : ಶುಂಠಿ, ಹಸಿಮೆಣಸು, ನೆಲ್ಲಿಗಳನ್ನು ಉದ್ದುದ್ದಕ್ಕೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ, ಇಂಗಿನ ಒಗ್ಗರಣೆ ಕೊಡಿ. ನಂತರ ಉಳಿದೆಲ್ಲ ಮಸಾಲೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಶುಂಠಿ, ನೆಲ್ಲಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಎಲ್ಲಾ ಹಾಕಿ ನೀಟಾಗಿ ಕೆದಕಬೇಕು. ನೆಲ್ಲಿ ಹದನಾಗಿ ಬೆಂದಿದೆ ಎನಿಸಿದಾಗ ಕೆಳಗಿಳಿಸಿ. ಇದು ಚೆನ್ನಾಗಿ ಆರಿದ ನಂತರ ಗಾಳಿಯಾಡದ ಡಬ್ಬಕ್ಕೆ ತುಂಬಿಸಿಟ್ಟು, ಬೇಕಾದಾಗ ಸವಿಯಿರಿ.

ಕೆಂಪಾದ ಹಣ್ಣು ಹಸಿಮೆಣಸಿನ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ಮಾಗಿದ ಕೆಂಪಾದ ಹಣ್ಣು ಹಸಿಮೆಣಸಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುಡಿ ಮಾಡಿದ ಬೆಲ್ಲ, ಹುರಿದು ಪುಡಿ ಮಾಡಿದ ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ಕಾಳುಮೆಣಸು, ಅರಿಶಿನ, ಇಂಗು, ವಿನಿಗರ್, ನಿಂಬೆರಸ, ಎಳ್ಳೆಣ್ಣೆ.
ವಿಧಾನ : ಕೆಂಪು ಮೆಣಸಿನಕಾಯಿಗಳನ್ನು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ, ಇಂಗಿನ ಒಗ್ಗರಣೆ ಕೊಡಿ. ನಂತರ ಇದಕ್ಕೆ ಮೆಣಸಿನಕಾಯಿ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಉಪ್ಪು, ಉಳಿದೆಲ್ಲ ಮಸಾಲೆ ಹಾಕಿ ಕೆದಕಬೇಕು. ಕೊನೆಯಲ್ಲಿ ವಿನಿಗರ್, ನಿಂಬೆರಸ, ಬೆಲ್ಲ ಹಾಕಿ ಕೆದಕಿ ಕೆಳಗಿಳಿಸಿ. ಇದು ಚೆನ್ನಾಗಿ ಆರಿದ ನಂತರ, ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಫ್ರಿಜ್ ನಲ್ಲಿಟ್ಟು 2-3 ವಾರಗಳಲ್ಲಿ ಖಾಲಿ ಮಾಡಿ.

ಟೇಸ್ಟಿ ಟೇಸ್ಟಿ ಬಿರಿಯಾನಿ
ಸಾಮಗ್ರಿ : 2 ಕಪ್ ಬಾಸುಮತಿ ಅಕ್ಕಿ, ಅರ್ಧ ಕಪ್ ತುಪ್ಪ, ತುಸು ಜೀರಿಗೆ, ಸೋಂಪು, ಲವಂಗ, ಚಕ್ಕೆ, ಮೊಗ್ಗು, ಜಾಪತ್ರೆ, ಜಾಯಿಕಾಯಿ, 8-10 ಎಸಳು ಕೇಸರಿ (ಹಾಲಲ್ಲಿ ನೆನೆಸಿಡಿ), 4-5 ಕೆಂಪು ಒಣಮೆಣಸಿನಕಾಯಿ, 2-3 ಚಿಟಕಿ ಏಲಕ್ಕಿ ಪುಡಿ, ತುಸು ಶುಂಠಿ-ಬೆಳ್ಳುಳ್ಳಿ ಪೇಸ್ಟ್, 8-10 ಪಲಾವ್ ಎಲೆ, ಅರ್ಧ ಚಮಚ ಕಾಳುಮೆಣಸು, 500 ಗ್ರಾಂ ಹೆಚ್ಚಿದ ತರಕಾರಿ (ಬೀನ್ಸ್, ನವಿಲುಕೋಸು, ಆಲೂ, ಬಟಾಣಿ, ಕ್ಯಾರೆಟ್, 3 ಬಗೆಯ ಕ್ಯಾಪ್ಸಿಕಂ, ಡಬಲ್ ಬೀನ್ಸ್, ಹೂಕೋಸು), ಹೆಚ್ಚಿದ 4-5 ಹುಳಿ ಟೊಮೇಟೊ, ಅರ್ಧ ಕಂತೆ ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಜೀರಿಗೆ ಪುಡಿ, ಗರಂಮಸಾಲ, ತುಸು ಹುಳಿ ಮೊಸರು, ಅರಿಶಿನ.
ವಿಧಾನ : ಕುಕ್ಕರ್ ಗೆ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಚಕ್ಕೆ ಲವಂಗ ಇತ್ಯಾದಿ ಇಡಿಯಾದ ಮಸಾಲೆ ಪದಾರ್ಥ ಹಾಕಿ ಚಟಪಟಾಯಿಸಿ. ನಂತರ ಹೆಚ್ಚಿದ ಎಲ್ಲಾ ತರಕಾರಿ ಹಾಕಿ ಹದನಾಗಿ (ಮಂದ ಉರಿಯಲ್ಲಿ) ಬಾಡಿಸಬೇಕು. ಕೊನೆಯಲ್ಲಿ ಟೊಮೇಟೊ ಸಹ ಹಾಕಿ ಕೆದಕಬೇಕು. ಆಮೇಲೆ ಹುಳಿ ಮೊಸರು ಬೆರೆಸಿ ಕೈಯಾಡಿಸಿ. ನಂತರ ಉಪ್ಪು, ಖಾರ, ಉಳಿದ ಪುಡಿ ಮಸಾಲೆ ಪೂರ್ತಿ ಹಾಕಿ ಕೆದಕಬೇಕು. ನಂತರ ಹೆಚ್ಚಿದ ಪುದೀನಾ ಹಾಕಿ ಬಾಡಿಸಿ. ನಂತರ ಮೊದಲೇ ನೀರಲ್ಲಿ ನೆನೆಸಿದ್ದ ಅಕ್ಕಿ ಹಾಕಿ ಕೆದಕಬೇಕು. ಇದರ ಮೇಲೆ ಆಗಾಗ ತುಪ್ಪ ಹಾಕುತ್ತಾ, ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಆಮೇಲೆ ಹಾಲಲ್ಲಿ ನೆನೆದ ಕೇಸರಿ ಬೆರೆಸಬೇಕು. ಕೊನೆಯಲ್ಲಿ ಅನ್ನ ಉದುರುದುರು ಬರುವಷ್ಟು ನೀರು ಬೆರೆಸಿ, ಮುಚ್ಚಳ ಮುಚ್ಚಿರಿಸಿ. 2 ಸೀಟಿ ಕೂಗಿಸಿ. ಅದನ್ನು ಕೆಳಗಿಳಿಸಿ ಆರಲು ಬಿಡಿ. ಬಿಸಿ ಚೆನ್ನಾಗಿ ತಣಿದ ಮೇಲೆ ಮುಚ್ಚಳ ತೆರೆದು, ಎಲ್ಲವೂ ಬೆರೆತುಕೊಳ್ಳುವಂತೆ ಮತ್ತೆ ತುಪ್ಪ ಹಾಕಿ ಮಿಕ್ಸ್ ಮಾಡಿ. ಹಬೆಯಾಡುತ್ತಿರುವ ಇದನ್ನು ಈರುಳ್ಳಿ, ಸೌತೇಕಾಯಿ, ಟೊಮೇಟೊ ಬೆರೆತ ರಾಯ್ತಾ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.





