– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಐಶ್ವರ್ಯಾ ಸಾಲಿಮಠ ಇದೀಗ ತಾಯಿಯಾಗಿದ್ದು, ಅವರ ಮನೆಗೆ ಡಬಲ್ ಸಂಭ್ರಮ ಬಂದಿದೆ.
‘ರಾಮಾಚಾರಿ’ ಧಾರಾವಾಹಿಯಲ್ಲಿ ವಿಲನ್ ವೈಶಾಖ ಪಾತ್ರದ ಮೂಲಕ ಗಮನಸೆಳೆದಿದ್ದ ಐಶ್ವರ್ಯಾ, ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಐಶ್ವರ್ಯಾ ಹಾಗೂ ಪತಿ ವಿನಯ್ ದಂಪತಿ ಈ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾಯಿ ಹಾಗೂ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಕುಟುಂಬದವರು ನೀಡಿದ್ದಾರೆ. ಈ ಖುಷಿಯ ಕ್ಷಣವನ್ನು ಹಂಚಿಕೊಂಡಿರುವ ಐಶ್ವರ್ಯಾ, “ನಾವು ಪ್ರಾರ್ಥಿಸಿದ್ದು ಒಂದು ಮಗುವಿಗೆ… ಆದರೆ ದೇವರು ಕರುಣಿಸಿದ್ದು ಎರಡು. ಕೆಲವೊಮ್ಮೆ ಪವಾಡಗಳು ಜೋಡಿ ರೂಪದಲ್ಲಿ ಬರುತ್ತವೆ. ನಾವೀಗ ನಾಲ್ವರು… ಅವಳಿ ಮಕ್ಕಳ ಹೆಮ್ಮೆಯ ಪೋಷಕರು” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ ಮೂಲಕ ಮನೆಮಾತಾಗಿರುವ ಐಶ್ವರ್ಯಾ, ಈ ಹಿಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲೂ ಅಭಿನಯಿಸಿದ್ದರು. ಜೊತೆಗೆ ರಾಜಾ ರಾಣಿ ಹಾಗೂ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋಗಳಲ್ಲೂ ಸ್ಪರ್ಧಿಸಿದ್ದರು.

ಇತ್ತೀಚೆಗೆ ಐಶ್ವರ್ಯಾ ಅವರ ಸೀಮಂತ ಸಮಾರಂಭವೂ ಅದ್ಧೂರಿಯಾಗಿ ನಡೆದಿತ್ತು. ಬಾಲಕೃಷ್ಣ ಥೀಮ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪತಿ ವಿನಯ್ ವಿಶೇಷವಾಗಿ ಗಮನ ಸೆಳೆದಿದ್ದರು. ಐಶ್ವರ್ಯಾ-ವಿನಯ್ ಕುಟುಂಬದಲ್ಲೇ ಅವಳಿ ಮಕ್ಕಳ ಇತಿಹಾಸವೂ ಇರುವುದರಿಂದ ಈ ಸಂತಸ ಮತ್ತಷ್ಟು ವಿಶೇಷವಾಗಿದೆ.
ವಿನಯ್ ಮೂಲತಃ ಹುಬ್ಬಳ್ಳಿಯವರಾಗಿದ್ದು, ಮಹಾಸತಿ, ಜೀವನದಿ, ಮಹಾದೇವಿ, ಕನ್ನಡತಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ವಿನಯ್ಶಾ ಖಾಹಾರಿ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದಾರೆ. ಪ್ರೀತಿಸಿ ಮದುವೆಯಾದ ಬಳಿಕ ಐಶ್ವರ್ಯಾ-ವಿನಯ್ ದಂಪತಿ ‘ರಾಜಾ ರಾಣಿ’ ಶೋನಲ್ಲಿ ಫೈನಲಿಸ್ಟ್ಗಳಾಗಿದ್ದರು. ಇದೀಗ ಅವಳಿ ಮಕ್ಕಳೊಂದಿಗೆ ಪೋಷಕರಾಗಿ ಹೊಸ ಅಧ್ಯಾಯ ಆರಂಭಿಸಿರುವ ದಂಪತಿಗೆ ಅಭಿಮಾನಿಗಳು ಹಾಗೂ ಕಿರುತೆರೆ ಕಲಾವಿದರು ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.





