ಚಿಕ್ಕಮಗಳೂರಿನ ರಮ್ಯ ರಮಣೀಯ ತಾಣವಾದ ಮುಳ್ಳಯನಗಿರಿಯ ದೃಶ್ಯ ವೈಭವಗಳನ್ನು ಈ ಪ್ರವಾಸ ಕಥನದ ಮೂಲಕ ಕಣ್ತುಂಬಿಕೊಳ್ಳೋಣವೇ…..?
ಶಾಲೆಗೆ ರಜೆ ಬಂದು ಹತ್ತಾರು ದಿವಸಗಳು ಕಳೆದಿವೆ. ರಜೆಗೆ ಎಲ್ಲಿಗೆ ಹೋಗಬೇಕು ಅಂತ ಯೋಚಿಸುತ್ತಿರುವವರಿಗೆ ಒಂದು ಸುಂದರ ಸ್ಥಳದ ಬಗ್ಗೆ ತಿಳಿಸುತ್ತೇನೆ. ಈ ಸಲದ ಬಿಸಿಲು ಎಲ್ಲರನ್ನೂ ಸುಸ್ತು ಮಾಡಿದೆ. ಈಗ ಸುಂದರ ಗಿರಿ ಶಿಖರಗಳ ಕಡೆಗೆ ಹೋದರೆ, ಅಲ್ಲಿನ ಪ್ರಾಕೃತಿಕ ರಮಣೀಯ ದೃಶ್ಯಗಳು ಮನಸ್ಸಿಗೆ ಕಣ್ಣಿಗೆಗೆ ಹರುಷ ತರುವುದರಲ್ಲಿ ಎರಡು ಮಾತಿಲ್ಲ.
ಶಾಲಾ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ ನಮ್ಮ ಕರ್ನಾಟಕದ ಅತ್ಯಂತ ಎತ್ತರದ ಶಿಖರವೆಂದು ಓದಿದ್ದೆ. ನೋಡುವ ಅವಕಾಶ ಇರಲಿಲ್ಲ. ಡಿಸೆಂಬರ್ ನಲ್ಲಿ ವೆಹಿಕಲ್ಸ್ ಮಾಡಿಕೊಂಡು ಭಾವ ಮತ್ತು ಅಕ್ಕಂದಿರ ಜೊತೆ ಹೋದೆವು.
ಚಿಕ್ಕಮಗಳೂರು ತಲುಪುವಾಗ ಹತ್ತೂವರೆ ಆಗಿತ್ತು. ಕೆಮ್ಮಣ್ಣು ಗುಂಡಿ ರಸ್ತೆ ಸರಿ ಇಲ್ಲ, ಮುಳ್ಳಯ್ಯನಗಿರಿಗೆ ಹೋಗೋಣ ಎಂದರು ನಾಗರಾಜ್. ಮೊದಲು 20 ಕಿಮೀ. ದೂರದಲ್ಲಿದ್ದ ಶೀತಾಳಯ್ಯನ ಗಿರಿ ನೋಡೋಣ ಎಂದು ಅಲ್ಲಿಗೆ ಹೊರಟೆವು. ಇದು ಪಶ್ಚಿಮ ಘಟ್ಟದಲ್ಲಿರುವ ಸುಂದರ ಗಿರಿ.

ಈ ಬೆಟ್ಟಗಳು ಒಂದೊಂದು ಸಲ ಒಂದೊಂದು ತರಹ ತಮ್ಮ ಸೊಬಗಿನಿಂದ ಕಂಗೊಳಿಸುತ್ತವೆ. ಇಲ್ಲಿ ಶಿವನ ದೇವಾಲಯವಿದೆ. ಒಳಗೆ ಕಾಲಿಟ್ಟೊಡನೆ ಮಂಜುಗಡ್ಡೆಯ ಮೇಲೆ ಕಾಲಿಟ್ಟ ಹಾಗೆ ಆಯಿತು, ಅಷ್ಟು ಶೀತಲವಾಗಿತ್ತು. ಅದಕ್ಕೆ ಶೀತಾಳಯ್ಯನ ಗಿರಿ ಅಂತ ಹೆಸರಿರಬಹುದು.
ಅಲ್ಲಿಂದ ನಮ್ಮ ಪಯಣ ಮುಳ್ಳಯ್ಯನಗಿರಿ ಕಡೆಗೆ ಮುಂದುವರಿಯಿತು. ಅದು ಆಗಲೇ ಪ್ರವಾಸಿಗಳಿಂದ ತುಂಬಿ ಹೋಗಿತ್ತು. ಮೋಡಗಳ ಚೆಲ್ಲಾಟ, ಬಾನು ಭೂಮಿಯನ್ನು ಒಂದು ಮಾಡಿದ ಹಾಗೆ ನೀಲಿ ಹಸಿರಿನ ಎರಚಾಟ, ಆ ನೈಸರ್ಗಿಕ ಸೌಂದರ್ಯ ನೋಡಿ ಮೂಕರಾದೆವು. ಇನ್ನು ಮೇಲೆ ಕಾರು ಹೋಗಲ್ಲ, ಗಿರಿ ಹತ್ತುವುದಾದರೆ ಹತ್ತಿ ಇಲ್ಲವೇ ಸುತ್ತ ಕಾಣುವ ಸೌಂದರ್ಯ ಸವಿಯಿರಿ ಅಂದಾಗ ಕೆಳಗೆ ಇಳಿದೆವು.
ಸುಮಾರು 500 ಮೆಟ್ಟಿಲು ಇರಬಹುದು. ಹತ್ತಲು ಆಗುತ್ತಾ ಇಲ್ಲಾ ಅಂತಿರುವಾಗ, ಅಕ್ಕಾ ನನಗೆ ಆಗಲ್ಲ, ನಾನು ಇಲ್ಲಿಂದಲೇ ನೋಡ್ತೀನಿ ಅಂದಳು. ಇನ್ನೊಬ್ಬ ಅಕ್ಕಾ, ನಾನು ಹತ್ತಲು ಹೊರಟೆವು. ಎಷ್ಟು ಮೆಟ್ಟಿಲು ಹತ್ತಲು ಆಗುತ್ತೋ, ಅಷ್ಟು ಹತ್ತೋಣ ಅಂತ ಮೆಟ್ಟಿಲು ಏರುತ್ತಾ ಸುತ್ತಲಿನ ರಮಣೀಯ ಸೌಂದರ್ಯ ಸವಿಯುತ್ತಾ, ಫೋಟೋ ತೆಗೆಯುತ್ತಾ ಮೊದಲೇ ಬಂದಿದ್ದರೆ ಇಷ್ಟು ಸುಸ್ತಾಗುತ್ತಿರಲಿಲ್ಲ, ಅಂತ ಅಲ್ಲಲ್ಲಿ ಕುಳಿತುಕೊಳ್ಳುತ್ತಾ ಅಂತೂ ಕೊನೆಗೆ ಗಿರಿಯ ತುಟ್ಟ ತುದಿ ತಲುಪಿದಾಗ ಹಿಮಾಲಯ ಪರ್ವತ ಏರಿದಷ್ಟು ರೋಮಾಂಚನವಾಗಿತ್ತು.

ಕೇರಳದ ಪ್ರವಾಸಿಗರೇ ಹೆಚ್ಚು ಬಂದ ಹಾಗೇ ಇತ್ತು. ಮೆಟ್ಟಿಲುಗಳು ಅಗಲವಾಗಿದ್ದರೂ ಬಿಸಿಲಿಗೆ ಹತ್ತಲು ಕಷ್ಟವಾಗುತ್ತಿದ್ದರೂ ಹತ್ತಲೇ ಬೇಕು ಎನ್ನುವ ಮನೋಭಾವ ನಮ್ಮನ್ನು ತುಟ್ಟ ತುದಿಗೆ ಏರಿಸಿತು. ಅಲ್ಲೇ ಇದ್ದ ಮುಳ್ಳಯ್ಯನ ದರ್ಶನ ಪಡೆದು, ಸುತ್ತಲಿನ ಪ್ರಕೃತಿಯ ವಿಸ್ಮಯಕ್ಕೆ ವಾವ್ ಅಂದುಕೊಂಡು, ಹತ್ತುವವರಿಗೆ ಹೀಗೆ ಬನ್ನಿ ಹಾಗೆ ಬನ್ನಿ ಎಂದು ಹತ್ತಲಾಗದವರನ್ನು ಹುರಿದುಂಬಿಸುತ್ತಾ, ಮಂಜು ಮುಸುಕಿದ ವಿಭಿನ್ನ ಬಣ್ಣಗಳ ಗಿರಿಯ ಸೊಬಗನ್ನು ಆಹ್ಲಾದಿಸುತ್ತಾ ನಾವಿರುವ ಎತ್ತರ ಏರಬಲ್ಲೆವು ಎಂದು ಕೇಳಿದ ಗಿರಿಯ ಸಾಲು ಸ್ವೀಕರಿಸಿ ಕಂದಕಕ್ಕೆ ಜಾರದಂತೆ ನಿಧಾನವಾಗಿ ಏರಿಹೋದಾಗ ಶಿಖರದ ಮುಂದೆ ನಾವೆಷ್ಟು ಕುಬ್ಜರು ಎನಿಸಿ ಅದಕ್ಕೆ ತಲೆಬಾಗಿ ನಿನ್ನ ನೋಡಿದ ನಾವೇ ಪುಣ್ಯವಂತರು ಎಂದು ಕೈ ಮುಗಿದೆ.
ಮನಸು ಮಾಡಿದರೆ ಯಾವುದು ಅಸಾಧ್ಯವಲ್ಲ ಅಲ್ಲಾ ಕೊನೆಗೂ ಏರೇ ಬಿಟ್ಟೆ. ಸೋಲಾ ಕಾಡುಗಳ ಮೂಲಕ ನಡೆದು ಹೋಗಬಹುದು. ಚಾರಣಪ್ರಿಯರಿಗಂತೂ ಇದು ತುಂಬಾ ಇಷ್ಟಾದ ತಾಣವೆಂದರೆ ತಪ್ಪಾಗದು. ಅಲ್ಲಿಂದ ಬಾಬಾಬುಡನ್ ಗಿರಿಯತ್ತ ಹೊರಟೆವು. ಇಲ್ಲಿಯ ಪ್ರಕೃತಿ ಸೌಂದರ್ಯ ಅದ್ಭುತ. ಇಲ್ಲಿ ದತ್ತ ಪಾದಗಳ ದತ್ತ ಪೀಠ ಮತ್ತು ಮುಸ್ಲಿಂ ಸಂತರ ಸಮಾಧಿಗಳು ಎರಡೂ ಅಕ್ಕಪಕ್ಕ ಇದೆ. ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣವಾಗಿದೆ.
ನೈಸರ್ಗಿಕ ಚೆಲುವನ್ನು ಸವಿಯಬೇಕು ನಿಮ್ಮನ್ನು ನೀವು ಮರೆಯಬೇಕು ಅಂದರೆ ಈ ತಾಣಗಳನ್ನು ಭೇಟಿಯಾಗಿ, ಹೊಸ ಬದುಕನ್ನು ಅನುಭವಿಸಿ. ಬಸ್ಸುಗಳ ಸೌಕರ್ಯ ಬೆಟ್ಟದ ತಪ್ಪಲಿನ ತನಕವಿದೆ. ಆಮೇಲೆ ಅಲ್ಲಿರುವ ಜೀಪು, ಕಾರುಗಳ ಸೌಕರ್ಯ ಬಳಸಿಕೊಳ್ಳಬಹುದು. ಈ ಪ್ರವಾಸ ನಿಮಗೆ ಹೊಸ ಜಗತ್ತನ್ನು ತೋರಿಸುತ್ತದೆ.
– ಭಾರತಿ ಹೆಬ್ಬಾರ್





