ಯೂರಿನರಿ ಟ್ರಾಕ್ಟ್ ಇನ್ಫೆಕ್ಷನ್ಸಮಸ್ಯೆಯನ್ನು ಆದಷ್ಟು ಬೇಗ ಗುರುತಿಸಿ, ಚಿಕಿತ್ಸೆ ಪಡೆಯದಿದ್ದರೆ, ಮುಂದೆ ಇದು ಹಲವು ರೋಗಗಳಿಗೆ ಮೂಲವಾದೀತು…….!

ಹೆಂಗಸರನ್ನು ವೈಯಕ್ತಿವಾಗಿ ಕಾಡುವ ಮೂತ್ರದ ಸೋಂಕು ಅಥವಾ ಯೂರಿನರಿ ಟ್ರಾಕ್ಟ್ ಇನ್‌ ಫೆಕ್ಷನ್‌ (UTI) ಬಹಳ ಹಿಂಸಕಾರಕವೇ ಸರಿ. ಮೂತ್ರಪಥದ ಮೂಲಕ ಬ್ಯಾಡ್‌ ಬ್ಯಾಕ್ಟೀರಿಯಾ ಹೆಣ್ಣಿನ ದೇಹ ಪ್ರವೇಶಿಸಿದಾಗ ಈ ಸೋಂಕು ತಗುಲುತ್ತದೆ. ಇದರಿಂದ ಅಸಹಜ ಲಕ್ಷಣ, ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. UTI ಸಮಸ್ಯೆಗೆ ಖಂಡಿತಾ ಚಿಕಿತ್ಸೆ ಇದೆ. ಆದರೆ ಇದನ್ನು ಮೊದಲೇ ನಿಯಂತ್ರಿಸಬೇಕಾದುದು ಬಹಳ ಮುಖ್ಯ. UTI ಸಮಸ್ಯೆಗೆ ಏನು ಮಾಡಬೇಕು, ಏನು ಮಾಡಬಾರದು ಎಂದು ಗಮನಿಸೋಣ :

UTI ನಿಯಂತ್ರಣಕ್ಕೆ ಏನು ಮಾಡಬೇಕು?

ಸದಾ ಹೈಡ್ರೇಟೆಡ್ಆಗಿರಿ : ಇದನ್ನು ನಿಯಂತ್ರಿಸಲು ಎಲ್ಲಕ್ಕಿಂತ ಸರಳ, ಸುಲಭ, ಪ್ರಭಾವಿ ಮಾರ್ಗ ಎಂದರೆ ಧಾರಾಳವಾಗಿ ಆಗಾಗ ನೀರು ಕುಡಿಯುತ್ತಿರುವುದು. ಧಾರಾಳ ನೀರು ಸೇವನೆ, ಮೂತ್ರಪಥದಿಂದ ಬ್ಯಾಕ್ಟೀರಿಯಾ ಹೊರ ಹೋಗಲು ಸಹಾಯವಾಗುತ್ತದೆ. ಇದರಿಂದ ಮೂತ್ರ ಬಲು ತೆಳುವಾಗಿ, ಸೋಂಕಿನ ಬಾಧೆ ಎಷ್ಟೋ ತಪ್ಪುತ್ತದೆ. ನೀವು ಜಿಮ್ ವರ್ಕ್‌ ಇತ್ಯಾದಿ ಮಾಡುವ ಸಕ್ರಿಯರಾಗಿದ್ದು, ಹೆಚ್ಚಿನ ಉಷ್ಣ ಪ್ರದೇಶದಲ್ಲಿದ್ದರೆ, ಪ್ರತಿದಿನ 8-10 ಗ್ಲಾಸ್‌ ನೀರು ಕುಡಿಯಿರಿ.

ಸದಾ ಸ್ವಚ್ಛತೆ ಶುಭ್ರತೆಗೆ ಆದ್ಯತೆ ನೀಡಿ : UTI ನೀಗಿಸಲು ಉತ್ತಮ ಸ್ವಚ್ಛತೆ ಶುಭ್ರತೆಗಳ ಕಡೆ ಸದಾ ಗಮನ ಕೊಡಿ. ಶೌಚಾಲಯ ಉಪಯೋಗಿಸುವಾಗ, ಗುದದಿಂದ ಬ್ಯಾಕ್ಟೀರಿಯಾ ಮೂತ್ರ ಮಾರ್ಗ ತಲುಪುವುದನ್ನು ತಡೆಯುವುದಕ್ಕಾಗಿ, ಸದಾ ಮುಂಭಾಗದಿಂದ ಹಿಂಭಾಗದ ಕಡೆ ತೊಳೆದು ಶುಚಿ ಮಾಡಬೇಕು. ಜೊತೆಗೆ ಗುಪ್ತಾಂಗಗಳನ್ನು ಸದಾ ಶುಚಿಯಾಗಿಟ್ಟು, ನಿಯಮಿತವಾಗಿ ಪ್ರತಿದಿನ ಸ್ನಾನ ಮಾಡಿ.

ಮೂತ್ರ ತಡೆಹಿಡಿಯದೆ ಬೇಗ ವಿಸರ್ಜಿಸಲು ದಾರಿ ಹುಡುಕಿ : ಬ್ಯಾಕ್ಟೀರಿಯಾ ಜಮೆಗೊಳ್ಳದಂತೆ ತಡೆಯಲು, ಬ್ಲಾಡರ್‌(ಮೂತ್ರಕೋಶ)ನ್ನು ನಿಯಮಿತವಾಗಿ ಖಾಲಿ ಮಾಡುತ್ತಿರಬೇಕು. ಯಾವುದೋ ನೆಪವಾಗಿ ಬಹಳ ಹೊತ್ತು ಮೂತ್ರ ವಿಸರ್ಜಿಸದೆ ಇರಬೇಡಿ. ಇದರಿಂದ ಆ ಭಾಗದಲ್ಲಿ ಬ್ಯಾಕ್ಟೀರಿಯಾ ಬೇಗ ಬೇಗ ಹೆಚ್ಚಾಗುತ್ತದೆ. ಮೂತ್ರ ವಿಸರ್ಜಿಸಬೇಕು ಅನಿಸಿದ ತಕ್ಷಣ ಆ ಕೆಲಸ ಮಾಡಿ, ಅನಗತ್ಯವಾಗಿ ಅದನ್ನು ಮುಂದೂಡಬೇಡಿ.

ಸಮಾಗಮಕ್ಕೆ ಮೊದಲು ಮತ್ತು ನಂತರ ಮೂತ್ರ ವಿಸರ್ಜನೆ ಕಡ್ಡಾಯ : ಸಂಗಾತಿ ಜೊತೆ ಸಮಾಗಮಕ್ಕೆ ಮೊದಲು ಮತ್ತು ನಂತರ, ಮೂತ್ರ ವಿಸರ್ಜಿಸುವುದರಿಂದ ಬ್ಯಾಕ್ಟೀರಿಯಾ ಹೊರದೊಬ್ಬಲು ಅನುಕೂಲವಾಗುತ್ತದೆ. ಹೀಗೆ ಮಾಡುವುದರಿಂದ ಸಮಾಗಮದ ಸಂದರ್ಭದಲ್ಲಿ ಮೂತ್ರ ಮಾರ್ಗದಲ್ಲಿ ಬ್ಯಾಕ್ಟೀರಿಯಾ ಪ್ರವೇಶಿಸಲಾರದು. ಹೆಂಗಸರು ಇದನ್ನು ನಿರ್ಲಕ್ಷಿಸಬಾರದು. ಅವರ ಮೂತ್ರದ್ವಾರ ಚಿಕ್ಕದಾಗಿದ್ದು, ಇದರಿಂದ ಬ್ಯಾಕ್ಟೀರಿಯಾ ಹೊರಹೋಗುವ ಪ್ರಕ್ರಿಯೆ ಕಡಿಮೆ ಎಂದೇ ಹೇಳಬೇಕು. ಇದರ ಜೊತೆಗೆ ಸುರಕ್ಷಿತ (ಬಹು ಸಂಗಾತಿಗಳಲ್ಲದ) ಸೆಕ್ಸ್ ನಡೆಸುವುದರಿಂದ UTI ಅಪಾಯವನ್ನು ಮತ್ತಷ್ಟು ತಗ್ಗಿಸಬಹುದು.

ಬ್ರೀದೆಬಲ್ ಅಂಡರ್ಗಾರ್ಮೆಂಟ್ಸ್ ಧರಿಸಿರಿ : ಸದಾ ಬ್ರೀದೆಬಲ್ ವಸ್ತ್ರಗಳ ಅಂಡರ್‌ ಗಾರ್ಮೆಂಟ್ಸ್ ಮಾತ್ರ ಧರಿಸಿರಿ, ಅಂದ್ರೆ 100% ಕಾಟನ್‌ ಪ್ಯಾಂಟಿ. ಇದರಿಂದ ಗುಪ್ತಾಂಗಕ್ಕೆ ಗಾಳಿ ಸಿಗಲು ಅನುಕೂಲವಾಗುತ್ತದೆ, ಜೊತೆಗೆ ಅದು ಡ್ರೈ ಆಗಿಯೂ ಉಳಿಯುತ್ತದೆ. ಟೈಟ್‌ ಫಿಟಿಂಗ್ಸ್ ನ ಬಟ್ಟೆ, ಸಿಂಥೆಟಿಕ್‌ ಮೆಟೀರಿಯಲ್ಸ್ ಆದ ಟೆರಿಲಿನ್‌, ಟೆರಿಕಾಟ್‌, ಜಾರ್ಜೆಟ್‌ ಇತ್ಯಾದಿಗಳ ಪ್ಯಾಂಟಿ ಧರಿಸದಿರಿ, ಏಕೆಂದರೆ ಇದರಿಂದ ಬೆವರಿನ ಕಾಟ ಹೆಚ್ಚಿ, ಬ್ಯಾಕ್ಟೀರಿಯಾ ಅಲ್ಲೇ ಉಳಿದುಬಿಡುತ್ತದೆ.

UTI ತಡೆಗಾಗಿ ಏನು ಮಾಡಬಾರದು?

ಮೂತ್ರ ವಿಸರ್ಜನೆ ತಡೆಯಬೇಡಿ : ಬಹಳ ಹೊತ್ತು ಮೂತ್ರ ವಿಸರ್ಜಿಸದೆ ಹಾಗೇ ಇದ್ದುಬಿಟ್ಟರೆ, ಯೂರಿನರೀ ಸ್ಟೇಸಿಸ್‌ (ಮೂತ್ರ ಸಂಬಂಧ ಸಮಸ್ಯೆ) ಉಂಟಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಮತ್ತಷ್ಟು ಹೆಚ್ಚಾಗುತ್ತದೆ. ನಿಮಗೆ ಮೂತ್ರ ವಿಸರ್ಜಿಸಬೇಕು ಅಂತ ಅನಿಸಿದ ತಕ್ಷಣ, ಆ ಕೆಲಸ ಮಾಡಿ, ಅನಗತ್ಯವಾಗಿ ಅದನ್ನು ಮುಂದೂಡುತ್ತಾ ಬೇರೆ ಕೆಲಸಗಳಲ್ಲಿ ಮುಳುಗಬೇಡಿ.

ಬಹಳ ಹೆಚ್ಚಿನ ಹಾರ್ಶ್‌ (ಕೆಮಿಕ್ಸ್ಯುಕ್ತ) ಪರ್ಸನಲ್ ಹೈಜೀನ್ಪ್ರಾಡಕ್ಟ್ಸ್ ಬಳಸದಿರಿ : ನಿಮ್ಮ ಗುಪ್ತಾಂಗದ ಶುಚಿತ್ವಕ್ಕಾಗಿ ಎಂದೂ ಹಾರ್ಶ್‌ (ಕೆಮಿಕ್ಸ್‌ಯುಕ್ತ) ಸೋಪು, ಸುಗಂಧಿತ ಪ್ರಾಡಕ್ಟ್ಸ್ ಬಳಸಲೇಬೇಡಿ. ಈ ಪ್ರಾಡಕ್ಟ್ಸ್ ಬ್ಯಾಕ್ಟೀರಿಯಾದ ನ್ಯಾಚುರಲ್ ಬ್ಯಾಲೆನ್ಸ್ ನ್ನು ಕೆಡಿಸುವ ಸಾಧ್ಯತೆಗಳೇ ಹೆಚ್ಚು, ಇದರಿಂದ ಮೂತ್ರ ಮಾರ್ಗದಲ್ಲಿ ತೊಂದರೆ ತಪ್ಪಿದ್ದಲ್ಲ. ಇದರಿಂದ UTI ಸಮಸ್ಯೆ ತೀವ್ರ ಹೆಚ್ಚುತ್ತದೆ. ಇಂಥ ಪ್ರಾಡಕ್ಟ್ಸ್ ಬದಲು ಉತ್ತಮ ಗುಣಮಟ್ಟದ ಲೈಟ್‌ ಆಗಿರುವ, ಸುವಾಸನೆ ರಹಿತ, ಹರ್ಬಲ್ ಕ್ಲೆನ್ಸರ್ಸ್‌ ನ್ನೇ ಬಳಸಿರಿ. ಹೆಚ್ಚಿನ ಸ್ಕ್ರಬಿಂಗ್‌ ಸಹ ಬೇಡ.

ಇರಿಟೇಟಿಂಗ್ಗರ್ಭನಿರೋಧಕ ಸಾಧನಗಳನ್ನು ಸಹ ಬಳಸದಿರಿ : ಸ್ಪರ್ಮ್ ಸೈಡ್‌(ವೀರ್ಯಾಣು ನಾಶಕ) ಅಥವಾ ಡಯಾಫಾಮ್ ನಂಥ ಕೆಲವು ಗರ್ಭನಿರೋಧಕಗಳನ್ನು ಬಳಸುವುದರಿಂದ UTI ಸಮಸ್ಯೆ ಹೆಚ್ಚು ಅವಕಾಶಗಳಿವೆ. ನೀವು UTI ಪೀಡಿತರಾಗಿದ್ದರೆ, ಇಂಥವುಗಳ ಬದಲು ಬೇರೆ ಸರಳ ಗರ್ಭನಿರೋಧಕ (ಕಾಂಡೋಮ್) ಬಳಸುವ ಮಾರ್ಗ ನೋಡಿ. ನಿಮ್ಮ ವೈದ್ಯರ ಸಲಹೆಯಂತೆ, ನಿಮಗೆ ಯಾವುದು ಹೆಚ್ಚು ಒಪ್ಪುತ್ತದೋ ಅಂಥದೇ ಸಾಧನ ಬಳಸಿರಿ.

ಸಮಾಗಮದ ನಂತರ ಮೂತ್ರ ವಿಸರ್ಜನೆ ತಡೆಯುವುದು ಬೇಡ : ಸೆಕ್ಸ್ ನಂತರ ಮೂತ್ರ ವಿಸರ್ಜಿಸಲು ತಡ ಮಾಡಬಾರದು. ಸೆಕ್ಸ್ ಕಾರಣ ಮೂತ್ರಪಥದಲ್ಲಿ ಪ್ರವೇಶಿಸುವ ಬ್ಯಾಕ್ಟೀರಿಯಾವನ್ನು ತಕ್ಷಣ ಹೊರದಬ್ಬುವುದು ಅನಿವಾರ್ಯ. ಸೆಕ್ಸ್ ನ ನಂತರದ 30 ನಿಮಿಷಗಳ ಒಳಗಾಗಿ, ಮೂತ್ರ ವಿಸರ್ಜನೆ ಮಾಡುವುದರಿಂದ UTI ಬಾಧೆ ಎಷ್ಟೋ ತಗ್ಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್ಸ್ ಸೇವಿಸಬೇಡಿ : UTI ಚಿಕಿತ್ಸೆಗಾಗಿ ಆ್ಯಂಟಿಬಯೋಟಿಕ್ಸ್ ಸೇವನೆ ಅತ್ಯಗತ್ಯ. ಆದರೆ ಇದರ ಅಧಿಕ ಪ್ರಮಾಣದ ಅನಾವಶ್ಯಕ ಸೇವನೆ, ಆ್ಯಂಟಿಬಯೋಟಿಕ್‌ ರೆಝಿಸ್ಟೆನ್ಸ್ ಹುಟ್ಟುಹಾಕಬಹುದು. ಹೀಗಾಗಿ ನೀವೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ. ಸರಿಯಾದ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸೂಕ್ತ ಸ್ತ್ರೀರೋಗ ತಜ್ಞರ ಸಲಹೆ ಪಡೆಯಿರಿ. ನಿಮ್ಮಲ್ಲಿನ ಸೋಂಕಿಗೆ ತಕ್ಕಂಥ ಬ್ಯಾಕ್ಟೀರಿಯಾ ನಿವಾರಣೆಗಾಗಿ ಉಪಯುಕ್ತ ಮೈಲ್ಡ್ ಆ್ಯಂಟಿಬಯೋಟಿಕ್‌ ಸೂಚಿಸುತ್ತಾರೆ.

ರೋಗ ಬಂದ ಮೇಲೆ ಅದಕ್ಕೆ ಚಿಕಿತ್ಸೆ ಪಡೆಯುವ ಬದಲು, ಅದು ಬಾರದಂತೆ ನಿಯಂತ್ರಣ ವಹಿಸುವುದೇ ಮೇಲು. ಇಲ್ಲಿನ ಎಲ್ಲಾ ಸಲಹೆಗಳನ್ನು ಅನುಸರಿಸುತ್ತಾ, ನೀವು UTI ತಗುಲದಂತೆ ಎಚ್ಚರವಹಿಸಿ. ನಿಮಗೆ ಉರಿಮೂತ್ರ, ಯೋನಿ ಭಾಗದಲ್ಲಿ ನೋವು, ಮತ್ತೆ ಮತ್ತೆ ಮೂತ್ರ ವಿಸರ್ಜನೆಯ ಹಿಂಸೆ, ಮೂತ್ರ ತಿಳಿಯಾಗಿರದೆ ದಟ್ಟ ಬಣ್ಣ ಹೊಂದುವಿಕೆ….. ಇತ್ಯಾದಿ ಲಕ್ಷಣ ಗಮನಿಸಿದಲ್ಲಿ ತಕ್ಷಣ ನಿಮ್ಮ ವೈದ್ಯರ ಬಳಿ ಯೂರಿನ್‌ ಟೆಸ್ಟ್ ರಿಪೋರ್ಟಿನೊಂದಿಗೆ ಭೇಟಿಯಾಗಿ. ಆಗ ಮಾತ್ರ ನೀವು ಈ ತೊಂದರೆಯಿಂದ ಪಾರಾಗುವಿರಿ.

ಡಾ. ಋತು

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ