ಯೂರಿನರಿ ಟ್ರಾಕ್ಟ್ ಇನ್ ಫೆಕ್ಷನ್ ಸಮಸ್ಯೆಯನ್ನು ಆದಷ್ಟು ಬೇಗ ಗುರುತಿಸಿ, ಚಿಕಿತ್ಸೆ ಪಡೆಯದಿದ್ದರೆ, ಮುಂದೆ ಇದು ಹಲವು ರೋಗಗಳಿಗೆ ಮೂಲವಾದೀತು.......!
ಹೆಂಗಸರನ್ನು ವೈಯಕ್ತಿವಾಗಿ ಕಾಡುವ ಮೂತ್ರದ ಸೋಂಕು ಅಥವಾ ಯೂರಿನರಿ ಟ್ರಾಕ್ಟ್ ಇನ್ ಫೆಕ್ಷನ್ (UTI) ಬಹಳ ಹಿಂಸಕಾರಕವೇ ಸರಿ. ಮೂತ್ರಪಥದ ಮೂಲಕ ಬ್ಯಾಡ್ ಬ್ಯಾಕ್ಟೀರಿಯಾ ಹೆಣ್ಣಿನ ದೇಹ ಪ್ರವೇಶಿಸಿದಾಗ ಈ ಸೋಂಕು ತಗುಲುತ್ತದೆ. ಇದರಿಂದ ಅಸಹಜ ಲಕ್ಷಣ, ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. UTI ಸಮಸ್ಯೆಗೆ ಖಂಡಿತಾ ಚಿಕಿತ್ಸೆ ಇದೆ. ಆದರೆ ಇದನ್ನು ಮೊದಲೇ ನಿಯಂತ್ರಿಸಬೇಕಾದುದು ಬಹಳ ಮುಖ್ಯ. UTI ಸಮಸ್ಯೆಗೆ ಏನು ಮಾಡಬೇಕು, ಏನು ಮಾಡಬಾರದು ಎಂದು ಗಮನಿಸೋಣ :
UTI ನಿಯಂತ್ರಣಕ್ಕೆ ಏನು ಮಾಡಬೇಕು?
ಸದಾ ಹೈಡ್ರೇಟೆಡ್ ಆಗಿರಿ : ಇದನ್ನು ನಿಯಂತ್ರಿಸಲು ಎಲ್ಲಕ್ಕಿಂತ ಸರಳ, ಸುಲಭ, ಪ್ರಭಾವಿ ಮಾರ್ಗ ಎಂದರೆ ಧಾರಾಳವಾಗಿ ಆಗಾಗ ನೀರು ಕುಡಿಯುತ್ತಿರುವುದು. ಧಾರಾಳ ನೀರು ಸೇವನೆ, ಮೂತ್ರಪಥದಿಂದ ಬ್ಯಾಕ್ಟೀರಿಯಾ ಹೊರ ಹೋಗಲು ಸಹಾಯವಾಗುತ್ತದೆ. ಇದರಿಂದ ಮೂತ್ರ ಬಲು ತೆಳುವಾಗಿ, ಸೋಂಕಿನ ಬಾಧೆ ಎಷ್ಟೋ ತಪ್ಪುತ್ತದೆ. ನೀವು ಜಿಮ್ ವರ್ಕ್ ಇತ್ಯಾದಿ ಮಾಡುವ ಸಕ್ರಿಯರಾಗಿದ್ದು, ಹೆಚ್ಚಿನ ಉಷ್ಣ ಪ್ರದೇಶದಲ್ಲಿದ್ದರೆ, ಪ್ರತಿದಿನ 8-10 ಗ್ಲಾಸ್ ನೀರು ಕುಡಿಯಿರಿ.
ಸದಾ ಸ್ವಚ್ಛತೆ ಶುಭ್ರತೆಗೆ ಆದ್ಯತೆ ನೀಡಿ : UTI ನೀಗಿಸಲು ಉತ್ತಮ ಸ್ವಚ್ಛತೆ ಶುಭ್ರತೆಗಳ ಕಡೆ ಸದಾ ಗಮನ ಕೊಡಿ. ಶೌಚಾಲಯ ಉಪಯೋಗಿಸುವಾಗ, ಗುದದಿಂದ ಬ್ಯಾಕ್ಟೀರಿಯಾ ಮೂತ್ರ ಮಾರ್ಗ ತಲುಪುವುದನ್ನು ತಡೆಯುವುದಕ್ಕಾಗಿ, ಸದಾ ಮುಂಭಾಗದಿಂದ ಹಿಂಭಾಗದ ಕಡೆ ತೊಳೆದು ಶುಚಿ ಮಾಡಬೇಕು. ಜೊತೆಗೆ ಗುಪ್ತಾಂಗಗಳನ್ನು ಸದಾ ಶುಚಿಯಾಗಿಟ್ಟು, ನಿಯಮಿತವಾಗಿ ಪ್ರತಿದಿನ ಸ್ನಾನ ಮಾಡಿ.
ಮೂತ್ರ ತಡೆಹಿಡಿಯದೆ ಬೇಗ ವಿಸರ್ಜಿಸಲು ದಾರಿ ಹುಡುಕಿ : ಬ್ಯಾಕ್ಟೀರಿಯಾ ಜಮೆಗೊಳ್ಳದಂತೆ ತಡೆಯಲು, ಬ್ಲಾಡರ್(ಮೂತ್ರಕೋಶ)ನ್ನು ನಿಯಮಿತವಾಗಿ ಖಾಲಿ ಮಾಡುತ್ತಿರಬೇಕು. ಯಾವುದೋ ನೆಪವಾಗಿ ಬಹಳ ಹೊತ್ತು ಮೂತ್ರ ವಿಸರ್ಜಿಸದೆ ಇರಬೇಡಿ. ಇದರಿಂದ ಆ ಭಾಗದಲ್ಲಿ ಬ್ಯಾಕ್ಟೀರಿಯಾ ಬೇಗ ಬೇಗ ಹೆಚ್ಚಾಗುತ್ತದೆ. ಮೂತ್ರ ವಿಸರ್ಜಿಸಬೇಕು ಅನಿಸಿದ ತಕ್ಷಣ ಆ ಕೆಲಸ ಮಾಡಿ, ಅನಗತ್ಯವಾಗಿ ಅದನ್ನು ಮುಂದೂಡಬೇಡಿ.
ಸಮಾಗಮಕ್ಕೆ ಮೊದಲು ಮತ್ತು ನಂತರ ಮೂತ್ರ ವಿಸರ್ಜನೆ ಕಡ್ಡಾಯ : ಸಂಗಾತಿ ಜೊತೆ ಸಮಾಗಮಕ್ಕೆ ಮೊದಲು ಮತ್ತು ನಂತರ, ಮೂತ್ರ ವಿಸರ್ಜಿಸುವುದರಿಂದ ಬ್ಯಾಕ್ಟೀರಿಯಾ ಹೊರದೊಬ್ಬಲು ಅನುಕೂಲವಾಗುತ್ತದೆ. ಹೀಗೆ ಮಾಡುವುದರಿಂದ ಸಮಾಗಮದ ಸಂದರ್ಭದಲ್ಲಿ ಮೂತ್ರ ಮಾರ್ಗದಲ್ಲಿ ಬ್ಯಾಕ್ಟೀರಿಯಾ ಪ್ರವೇಶಿಸಲಾರದು. ಹೆಂಗಸರು ಇದನ್ನು ನಿರ್ಲಕ್ಷಿಸಬಾರದು. ಅವರ ಮೂತ್ರದ್ವಾರ ಚಿಕ್ಕದಾಗಿದ್ದು, ಇದರಿಂದ ಬ್ಯಾಕ್ಟೀರಿಯಾ ಹೊರಹೋಗುವ ಪ್ರಕ್ರಿಯೆ ಕಡಿಮೆ ಎಂದೇ ಹೇಳಬೇಕು. ಇದರ ಜೊತೆಗೆ ಸುರಕ್ಷಿತ (ಬಹು ಸಂಗಾತಿಗಳಲ್ಲದ) ಸೆಕ್ಸ್ ನಡೆಸುವುದರಿಂದ UTI ಅಪಾಯವನ್ನು ಮತ್ತಷ್ಟು ತಗ್ಗಿಸಬಹುದು.
ಬ್ರೀದೆಬಲ್ ಅಂಡರ್ ಗಾರ್ಮೆಂಟ್ಸ್ ಧರಿಸಿರಿ : ಸದಾ ಬ್ರೀದೆಬಲ್ ವಸ್ತ್ರಗಳ ಅಂಡರ್ ಗಾರ್ಮೆಂಟ್ಸ್ ಮಾತ್ರ ಧರಿಸಿರಿ, ಅಂದ್ರೆ 100% ಕಾಟನ್ ಪ್ಯಾಂಟಿ. ಇದರಿಂದ ಗುಪ್ತಾಂಗಕ್ಕೆ ಗಾಳಿ ಸಿಗಲು ಅನುಕೂಲವಾಗುತ್ತದೆ, ಜೊತೆಗೆ ಅದು ಡ್ರೈ ಆಗಿಯೂ ಉಳಿಯುತ್ತದೆ. ಟೈಟ್ ಫಿಟಿಂಗ್ಸ್ ನ ಬಟ್ಟೆ, ಸಿಂಥೆಟಿಕ್ ಮೆಟೀರಿಯಲ್ಸ್ ಆದ ಟೆರಿಲಿನ್, ಟೆರಿಕಾಟ್, ಜಾರ್ಜೆಟ್ ಇತ್ಯಾದಿಗಳ ಪ್ಯಾಂಟಿ ಧರಿಸದಿರಿ, ಏಕೆಂದರೆ ಇದರಿಂದ ಬೆವರಿನ ಕಾಟ ಹೆಚ್ಚಿ, ಬ್ಯಾಕ್ಟೀರಿಯಾ ಅಲ್ಲೇ ಉಳಿದುಬಿಡುತ್ತದೆ.





