ಗುಂಡ : ನಿನ್ನ ಹೆಂಡತಿಗೆ ರೋಸ್ ಕೊಡು.
ತಿಮ್ಮ : ಯಾಕೆ?
ಗುಂಡ : ಶಿಕ್ಷಕರ ದಿನಾಚರಣೆ ಕಣಪ್ಪ.
ತಿಮ್ಮ : ಗೊತ್ತು, ನನ್ನ ಹೆಂಡತಿ ಟೀಚರ್ ಅಲ್ವಲ್ಲ!
ಗುಂಡ : ಅದು ನನಗೂ ಗೊತ್ತು! ನಿನ್ನ ಹೆಂಡತಿಯಿಂದ ನೀನು ಪಾಠ ಕಲಿತಷ್ಟು ಬೇರೆ ಯಾರಿಂದಲೂ ಕಲಿತಿರಲು ಸಾಧ್ಯವೇ ಇಲ್ಲ!
ಟೀಚರ್ : ನೋಡಿ ಸ್ಟೂಡೆಂಟ್ಸ್…. ನೀವು ಯಾರೂ ನನ್ನ ತರಗತಿಯಲ್ಲಿ ನಿದ್ದೆ ಮಾಡಲು ಸಾಧ್ಯವಿಲ್ಲ.
ಸೀನ : ಗೊತ್ತಿದೆ ಮೇಡಂ. ಆದರೆ…..?
ಟೀಚರ್ : ಏನು ಆದರೆ…..?
ಸೀನ : ನೀವು ಸ್ವಲ್ಪ ಮೆತ್ತಗೆ ಪಾಠ ಮಾಡಿದರೆ, ಹಿಂದಿನ ಬೆಂಚಿನವರಾದ ನಾವು ಸ್ವಲ್ಪ ಹಾಯಾಗಿ ಗೊರಕೆ ಹೊಡೆಯಬಹುದು.
ಟೀಚರ್ : ಇವತ್ತು ಬೆಳಗ್ಗೆ ಅರ್ಧ ದಿನ ಮಾತ್ರ ಕ್ಲಾಸಸ್ ಇರುತ್ತೆ, ಯಾಕಂದ್ರೆ ಇವತ್ತು ಟೀಚರ್ಸ್ ಡೇ!
ವಿದ್ಯಾರ್ಥಿಗಳು : ಹುರ್ರೇ….. ಟೀಚರ್ಸ್ ಡೇ ಪ್ರತಿ ತಿಂಗಳೂ ಬಂದ್ರೆ ಚೆನ್ನಾಗಿರುತ್ತದೆ!
ಟೀಚರ್ : ಲಂಚ್ ಅವರ್ ಮುಗಿದ ಮೇಲೆ ಮಧ್ಯಾಹ್ನದ ಕ್ಲಾಸೆಸ್ ಎಂದಿನಂತೆ ಇರುತ್ತದೆ.
ವೆಂಕ : ಟೀಚರ್ಸ್ ಗೆ ಕೊಡುತ್ತಿರುವ ಸಂಬಳ ಜಾಸ್ತಿ ಆಯ್ತು ಅಂತ ಮಕ್ಕಳ ಪೋಷಕರಿಗೆ ಅನಿಸುವುದು ಯಾವಾಗ?
ನಾಣಿ : ದಸರಾ, ಕ್ರಿಸ್ಮಸ್ ರಜೆ ಮತ್ತು ಬೇಸಿಗೆಯ ಸುದೀರ್ಘ ರಜೆ ಬಂದಾಗ!
ಕೆಲವು ಮಕ್ಕಳು ತಮ್ಮ ಕ್ಲಾಸ್ ಟೀಚರ್ ಬಗ್ಗೆ ಪ್ರಿನ್ಸಿಪಾಲ್ ರಿಗೆ ದೂರು ನೀಡುತ್ತಾರೆ.
ಪ್ರಿನ್ಸಿಪಾಲ್ : ಮಕ್ಕಳೇ, ಏನು ನಿಮ್ಮ ಸಮಸ್ಯೆ?
ಮಕ್ಕಳು : ನಮ್ಮ ಕ್ಲಾಸ್ ಟೀಚರ್ ಬಗ್ಗೆ ಕಂಪ್ಲೇಂಟ್ ಮಾಡಬೇಕಿತ್ತು.
ಪ್ರಿನ್ಸಿಪಾಲ್ : ಏನದು?
ಮಕ್ಕಳು : ನಮ್ಮ ಟೀಚರ್ ಗೆ ಏನೂ ಗೊತ್ತಿಲ್ಲ ಸಾರ್. ಎಲ್ಲದಕ್ಕೂ ನಮಗೇ ಆ್ಯನ್ಸರ್ ಹೇಳಿ…. ಆ್ಯನ್ಸರ್ ಹೇಳಿ…. ಮಗ್ಗಿ ಹೇಳಿ…. ಅಂತೆಲ್ಲ ಪೀಡಿಸುತ್ತಲೇ ಇರುತ್ತಾರೆ!
ಸೀನ : ಲೋ, ಬೇಗ ನನಗೆ ಉರ್ಲ್ ಕಳಿಸಿಕೊಡೋ!
ನಾಣಿ : ಯಾಕೋ….? ಏನಾಯ್ತು ನಿನಗೆ? ಮದುವೆ ಆಗಿ 10 ವರ್ಷ ಆಗಿದೆ ಅಷ್ಟೆ, ಇಷ್ಟು ಬೇಗ ಉರುಲು ಹಾಕಿಕೊಳ್ಳುವಂಥದ್ದು ಏನಾಯಿತಪ್ಪ ನಿನಗೆ…..?
ಸೀನ : ಬಾಯಿ ಮುಚ್ಚಿಕೊಂಡು ನನಗೆ ಉರ್ಲ್ ಕಳಿಸು, ಅಂದ್ರೆ ಮೇಲ್ ಮಾಡು ಅಂತಿದ್ದೀನಿ. ನಾನು ಎಂಪಿ3 ಡೌನ್ ಲೋಡ್ ಮಾಡಿಕೊಳ್ಳಬೇಕು, ನಿನ್ನ ಹೊಸ ವೆಬ್ ಸೈಟ್ ನ ಉರ್ಲ್ ಕಳಿಸು.
ನಾಣಿ : ಅಯ್ಯೋ ಮಂಗ! ಅದು ಉರ್ಲ್ ಅಲ್ಲ ಕಣೋ, ್ತ್ಯ್ಸ್ರ… ನಿನ್ನ ಮುಸುಡಿಗೆ ಅರ್ಥ ಆಯ್ತಾ!
ಮೋಹನ್ ಗುಂಡು ಪಾರ್ಟಿ ಮುಗಿಸಿಕೊಂಡು ತಡರಾತ್ರಿ 2 ಗಂಟೆಗೆ ಮನೆ ತಲುಪಿದ. ಮರು ದಿನ ಅವನು ದವಡೆ ಊದಿಸಿಕೊಂಡು ಆಫೀಸಿಗೆ ಬಂದಾಗ, ಸಹೋದ್ಯೋಗಿ ರಾಜೇಶ್ ಅದೇ ವಿಚಾರಾಗಿ ಅವನನ್ನು ಪ್ರಶ್ನಿಸಿದ.
ಅದಕ್ಕೆ ಉತ್ತರಿಸಿದ ಮೋಹನ್, “ಇಲ್ಲ… ಇಲ್ಲ… ಅಂಥ ವಿಶೇಷ ಏನೂ ಇಲ್ಲ. ಮೇಲಿನ 2 ಹಲ್ಲು ಮೊನ್ನೆ ಗಾಡಿಯಿಂದ ಕೆಳಗೆ ಬಿದ್ದಾಗಲೇ ಮುರಿದು ಹೋಗಿತ್ತು!” ಎಂದ.
ಪ್ರಕಾಶ್ ಒಂದು ಹೊಸ ಕಾರ್ ಖರೀದಿಸಿದ. ಹೆಂಡತಿಗೆ ಆ ವಿಚಾರವನ್ನು ಒಂದು ಸರ್ ಪ್ರೈಸ್ ಆಗಿ ಹೇಳೋಣ ಎಂದು ನಿರ್ಧರಿಸಿದ. ಹೀಗಾಗಿ ಮನೆಗೆ ಬಂದೊಡನೆ ಹೆಂಡತಿಗೆ ಕೂಗಿ ಹೇಳಿದ, “ಡಾರ್ಲಿಂಗ್, ನಿನ್ನ ಹಲವು ವರ್ಷಗಳ ಕನಸು ನನಸಾಗಿದೆ…. ಬೇಗ ಬಂದು ನೋಡು!”
ಅಡುಗೆಮನೆಯಿಂದ ಓಡಿ ಬಂದ ಅವನ ಹೆಂಡತಿ ಸೆರಗಿಗೆ ಕೈ ಒರೆಸಿಕೊಳ್ಳುತ್ತಾ ಹಾಗೇ ಕೇಳಿದಳು, “ಅಯ್ಯೋ ಪಾಪ….! ಏನ್ರಿ ಆಯ್ತು ನಿಮ್ಮಮ್ಮನಿಗೆ….?”
ಅವಳ ಹಲವು ವರ್ಷಗಳ ಕನಸು ಏನೆಂದು ಆಗ ಅವರಿಗಾಗಿ ಪ್ರಕಾಶ್ ಅಲ್ಲೇ ಮೂರ್ಛೆ ಹೋದ!
ಪುಢಾರಿ ಪುಟ್ಟಸ್ವಾಮಿಯ ಹೆಂಡತಿ ಕೈಗೆ ಹೊಸ ಕ್ಯಾಮೆರಾ ಬಂದೊಡನೆ ಗಂಡನ ಫೋಟೋ ತೆಗೆದದ್ದೂ ತೆಗೆದದ್ದೇ!
“ಇದೇನೇ ನಿನ್ನ ಹೊಸ ಅವತಾರ?” ಎಂದು ಅವನು ವಿಚಾರಿಸಿದ.
“ಏನಿಲ್ಲ ರೀ… ಇವತ್ತು `ಅನಿಮಲ್ ಪ್ಲಾನೆಟ್’ ಚಾನೆಲ್ ನಲ್ಲಿ ವೈಲ್ಡ್ ಲೈಫ್ ಫೋಟೋಗ್ರಫಿಗಾಗಿ ಸ್ಪರ್ಧೆ ಏರ್ಪಡಿಸಿದ್ದಾರೆ. ನಿಮ್ಮದೂ ಒಂದಿಷ್ಟು ಫೋಟೋ ಕಳುಹಿಸೋಣ ಅಂತ….” ಎಂದು ಆಕೆ ಹೇಳಿಬಿಡುವುದೇ?
ರಾಗಿಣಿ : ನನ್ನ ಮುಖದಲ್ಲಿ ಒಂದು ಮೊಡವೆ ಇತ್ತು. ನಿನ್ನೆ ನಾನು ಅದನ್ನು ಚಿವುಟಿಬಿಟ್ಟೆ. ಆಮೇಲೆ ಏನಾಯ್ತು ಗೊತ್ತೇ?
ರೋಹಿಣಿ : ಏನಾಯ್ತು?
ರಾಗಿಣಿ : ಇವತ್ತು ಅದು ತನ್ನ ಇಡೀ ಪರಿವಾರವನ್ನೇ ಕರೆದುಕೊಂಡು ಬಂದು ನನ್ನ ಮುಖವನ್ನು ಆಕ್ರಮಿಸಿದೆ, ನೋಡು ನನ್ನ ಮುಖ ಹೇಗಾಗಿದೆ….!
ಪತಿ : ಅಕಸ್ಮಾತ್ ಮುಂದೊಂದು ದಿನ ನಾನು ಕಣ್ಮರೆಯಾಗಿ ತಪ್ಪಿಸಿಕೊಂಡು ಬಿಟ್ಟರೆ, ಆಗ ಏನು ಮಾಡ್ತೀಯಾ?
ಪತ್ನಿ : ತಕ್ಷಣ ಪೇಪರ್ ನಲ್ಲಿ ಜಾಹೀರಾತು ಕೊಡ್ತೀನಿ.
ಪತಿ : ವಾಹ್…. ಏನಂತ ಕೊಡ್ತೀಯಾ?
ಪತ್ನಿ : ಗಂಡ ಬೇಕಾಗಿದ್ದಾನೆ!
ಪತಿ : ನಮಗೆ ಮದುವೆಯಾಗಿ 2 ವರ್ಷ ಆಯ್ತು. ಆದರೂ ಗಾಯದ ಮೇಲೆ ಉಪ್ಪೆರಚುವ ನಿಮ್ಮಪ್ಪನ ಸ್ವಭಾವ ಇನ್ನೂ ಬದಲಾಗಿಲ್ಲ ನೋಡು!
ಪತ್ನಿ : ಅದ್ಯಾಕ್ರೀ? ಅವರೇನು ಹೇಳಿದರು?
ಪತಿ : ವೊನ್ನೆ ಅಪರೂಪಕ್ಕೆ ಮಾರ್ಕೆಟ್ ನಲ್ಲಿ ಸಿಕ್ಕಿದಾಗ, “ಅಳಿಯಂದ್ರೆ, ನನ್ನ ಮಗಳ ಜೊತೆ ನಿಮ್ಮ ಜೀವನ ಸುಖವಾಗಿ ನಡೆಯುತ್ತಿದೆ ತಾನೇ? ಎಂದು ವ್ಯಂಗ್ಯವಾಗಿ ಕೇಳುವುದೇ…..? ”
ಶಾಲೆಯ ಹೊರಗೆ ಬೋರ್ಡಿನಲ್ಲಿ ಮಕ್ಕಳಿಗೆಂದು ಹೀಗೆ ಒಂದು ಸೂಚನೆ ನೀಡಲಾಗಿತ್ತು.
`ಉಗುರುಗಳನ್ನು ಕಚ್ಚಬಾರದು, ಕತ್ತರಿಸಬೇಕು!’
ಇದರಿಂದ ಆರೋಗ್ಯ ದೃಷ್ಟಿಯಲ್ಲಿ ವಿದ್ಯಾರ್ಥಿಗಳಲ್ಲಿ ಅಖಂಡ ಸುಧಾರಣೆ ಆಗಲಿದೆ ಎಂದೇ ಶಾಲಾ ಮಂಡಳಿ ನಿರ್ಧರಿಸಿತು.
ಆದರೆ ಕಿಡಿಗೇಡಿ ವಿದ್ಯಾರ್ಥಿಯೊಬ್ಬ ಆ ಪದದಲ್ಲಿನ ಮೊದಲ ಅಕ್ಷರವನ್ನು ಅಳಿಸಿಬಿಡುವುದೇ?
ವಿಮಲಮ್ಮ ಸೀರೆ ಕೊಳ್ಳಲೆಂದು ಅಂಗಡಿಗೆ ಹೋದರು. ಸೇಲ್ಸ್ ಮ್ಯಾನ್ ಎಂಥ ಸೀರೆ ತೋರಿಸಿದರೂ ಅವರು ಬಡಪಟ್ಟಿಗೆ ಒಪ್ಪುತ್ತಿರಲಿಲ್ಲ.
ಸೇಲ್ಸ್ ಮ್ಯಾನ್ : ಮೇಡಂ, ಮತ್ತೆ ನಿಮಗೆಂಥ ಸೀರೆ ತಾನೇ ತೋರಿಸಲಿ, ನೀವೇ ಹೇಳಿ?
ವಿಮಲಮ್ಮ : ಅದನ್ನು ನಾನು ಉಟ್ಟುಕೊಂಡು ಹೊರಗೆ ಬಂದು ನಿಂತ ತಕ್ಷಣ, ಅಕ್ಕಪಕ್ಕದ ಮನೆಯವಳು ಹೊಟ್ಟೆಕಿಚ್ಚಿಗೆ ಎದೆಯೊಡೆದು ಸಾಯಬೇಕು….. ಅಂಥದ್ದನ್ನು ತೋರಿಸಿ!
ಅಜಿತ್ : ಒಂದು ಪಕ್ಷ ಅವಳಿ ಸಹೋದರಿಯರಲ್ಲಿ ಒಬ್ಬಳ ಜೊತೆ ನಿನ್ನ ಮದುವೆ ಆಯಿತು ಅಂತಿಟ್ಟುಕೊ. ನೀನು ಹಬ್ಬಕ್ಕೆ ಮಾನ ಮನೆಗೆ ಹೋಗಿರ್ತಿಯಪ್ಪ, ಅಪರೂಪಕ್ಕೆ ಅಕ್ಕ ತಂಗಿ ಒಂದೇ ತರಹದ ಸೀರೆ ಉಟ್ಟಿರುತ್ತಾರೆ. ಆಗ ನಿನ್ನ ಹೆಂಡತಿಯನ್ನು ನೀನು ಹೇಗೆ ಗುರುತಿಸುತ್ತೀಯಾ?
ಸುಜಿತ್ : ಅದು ಬಹಳ ಸುಲಭ, ನಾನು ಒಬ್ಬಳನ್ನು ಹಿಂದಿನಿಂದ ತಬ್ಬಿಕೊಳ್ತೀನಿ. ಆಗ ಅವಳು ಗಲಾಟೆ ಮಾಡದೆ ನಾನು ಕೇಳಿದ್ದಕ್ಕೆ ಉತ್ತರಿಸುತ್ತಿದ್ದರೆ ಅವಳೇ ನನ್ನ ಹೆಂಡತಿ. ಒಂದು ಪಕ್ಷ ಅವಳ ತಂಗಿಯನ್ನು ಹಿಡುಕೊಂಡೆ ಅನ್ಕೊ, ಆಗಲೂ ತೊಂದರೆಯಿಲ್ಲ. ಅವಳನ್ನು ತಬ್ಬಿದ ಮರುಕ್ಷಣದಲ್ಲೇ ನನ್ನ ಹೆಂಡತಿ ಕಾಳಿಯಂತೆ ಧುತ್ತೆಂದು ಪಕ್ಕದಲ್ಲೇ ಅವತರಿಸುತ್ತಾಳೆ. `ಓ ನೀನಾ….’ ಅಂತ ನಾನು ಇವಳ ಕಡೆ ತಿರುಗ್ತೀನಿ!





