ಮಾಹಿತಿ ಅಭಾವದ ಕಾರಣ, ನೀವು ಮಗುವಿಗಾಗಿ ಖರೀದಿಸುವ ಬೇಬಿ ಸ್ಕಿನ್ ಕೇರ್ ಪ್ರಾಡಕ್ಟ್ಸ್ ನಲ್ಲಿ ಎಷ್ಟೋ ಅನಗತ್ಯ ವಸ್ತುಗಳೂ ಸೇರಿಕೊಳ್ಳಬಹುದು. ಇದು ಮಗುವಿನ ನಾಜೂಕು ತ್ವಚೆಗೆ ಎಷ್ಟು ಹಾನಿಕರ ಎಂದು ನಿಮಗೆ ಗೊತ್ತೇ…..?
ಮೊದಲ ಸಲ ತಾಯಿ ತಂದೆ ಆಗುವ ಅನುಭವ ಎಲ್ಲಕ್ಕಿಂತ ಹಿರಿದು, ಹೆಮ್ಮೆ ಎನಿಸುತ್ತದೆ. ಮನೆಯಲ್ಲಿ ಮಗುವಿನ ಆಗಮನದಿಂದ ತಾಯಿ ತಂದೆಗೆ ಮಗುವೇ ಅವರ ಲೋಕವಾಗುತ್ತದೆ. ಮಗುವಿನ ಅಗತ್ಯಗಳ ಕಡೆ ಗಮನ ಹರಿಸುವುದು, ಅದಕ್ಕೆ ಸದಾ ಖುಷಿ ನೀಡುತ್ತಾ ಬೇಕಾದ್ದನ್ನು ಒದಗಿಸುವುದು, ಹೊಸ ತಾಯಿ ತಂದೆಯರ ಮುಖ್ಯ ಗುರಿ ಆಗುತ್ತದೆ. ಅದಕ್ಕಾಗಿ ಅತಿ ಉತ್ತಮ ಬಟ್ಟೆಬರೆ, ಆಟಿಕೆ, ಡೈಪರ್, ಸ್ಕಿನ್ ಕೇರ್ ಪ್ರಾಡಕ್ಟ್ಸ್ ಇತ್ಯಾದಿ ಕೊಳ್ಳಲು ಹಣ ಖರ್ಚು ಮಾಡಲು ಹಿಂಜರಿಯದೆ ಉತ್ತಮ ಗುಣಮಟ್ಟ ಮಾತ್ರ ನೋಡುತ್ತಾರೆ.
ಆದರೆ ಮಾಹಿತಿಯ ಅಭಾವದ ಕಾರಣ, ಅವರು ಕೊಳ್ಳುವ ಬೇಬಿ ಕೇರ್ ಪ್ರಾಡಕ್ಟ್ಸ್ ಎಷ್ಟೋ ಸಲ ಮಗುವಿನ ಕೋಮಲ ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಮಾರುಕಟ್ಟೆಯಲ್ಲಿ ಅಗ್ಗದ ದರಕ್ಕೆ ಇಂಥ ಪ್ರಾಡಕ್ಟ್ಸ್ ಮಾರಾಟ ಮಾಡುವ ದೊಡ್ಡ ಪೈಪೋಟಿಯೇ ಇರುತ್ತದೆ. ಹೀಗಾಗಿ ಲಾಭ ಬಾಚಿಕೊಳ್ಳುವ ತರಾತುರಿಯಲ್ಲಿ ಮಗುವಿನ ಇಂಥ ಪ್ರಾಡಕ್ಟ್ಸ್ ಗೂ ಹಾರ್ಶ್ ಕೆಮಿಕಲ್ಸ್ ಬೆರೆಸಿ ಎಳೆ ಮಕ್ಕಳ ಚರ್ಮದ ಜೊತೆ ಆಟವಾಡುತ್ತಾರೆ. ಅದರಿಂದ ಮಕ್ಕಳಿಗೆ ಹಾನಿ ತಪ್ಪಿದ್ದಲ್ಲ. ಹೀಗಾಗಿ ಇಂಥ ಪ್ರಾಡಕ್ಟ್ಸ್ ಕೊಳ್ಳುವಾಗ ಯಾವುದು ಹಾನಿಕರ, ಯಾವುದನ್ನು ಕೊಳ್ಳಬಾರದು ಎಂದು ತಿಳಿದಿರಬೇಕು.
ಪ್ಯಾರಾಬೀನ್ ಇದೊಂದು ತರಹ ಕೆಮಿಕಲ್ ಕಾಂಪೌಂಡ್ ಆಗಿದ್ದು, ಬೇಬಿ ಕಾಸ್ಮೆಟಿಕ್ ಪ್ರಾಡಕ್ಟ್ಸ್ ದೀರ್ಘಕಾಲ ಬಾಳಿಕೆ ಬರಲೆಂದು ಅದರಲ್ಲಿ ಇದನ್ನು ಬೆರೆಸುತ್ತಾರೆ. ಆದರೆ ಇದು ಸಣ್ಣ ಮಕ್ಕಳ ನಾಜೂಕು ತ್ವಚೆಗೆ ಹಾನಿಕಾರಕ ಆಗಿದೆ. ಇದು ಶಿಶುವಿನ ಚರ್ಮ ಪ್ರವೇಶಿಸಿದರೆ, ಇಮ್ಯೂನ್ ಸಿಸ್ಟಮ್ ಗೆ ಕೆಟ್ಟ ರೀತಿಯಲ್ಲಿ ಡ್ಯಾಮೇಜ್ ಮಾಡುತ್ತದೆ. ಹೀಗಾಗಿ ಬೇಬಿಗಾಗಿ ಸ್ಕಿನ್ ಕೇರ್ ಪ್ರಾಡಕ್ಟ್ಸ್ ಖರೀದಿಸುವಾಗ ಇದನ್ನು ಮರೆಯದೆ ಚೆಕ್ ಮಾಡಿ, ಪ್ಯಾರಾಬೀನ್ ಅಂಶವಿರುವ ಪ್ರಾಡಕ್ಟ್ ಕೊಳ್ಳಲೇಬೇಡಿ!
ಅನಿಮಲ್ ಆಯಿಲ್
ಬೇಬಿ ಸ್ಕಿನ್ ಕೇರ್ ಪ್ರಾಡಕ್ಟ್ಸ್ ನಲ್ಲಿ ಎಷ್ಟೋ ಸಲ ಮಾಯಿಶ್ಚರೈಸೇಷನ್ ಗಾಗಿ ಅನಿಮಲ್ ಆಯಿಲ್ ಬೆರೆಸಲಾಗುತ್ತದೆ. ಇದು ಶಿಶುಗಳ ಸೆನ್ಸಿಟಿವ್ ತ್ವಚೆಗೆ ಹಾನಿಕಾರಕ ಆಗಿದೆ. ಇದರ ಬಳಕೆಯಿಂದ ಶಿಶುಗಳಿಗೆ ಸ್ಕಿನ್ ಅಲರ್ಜಿ, ರಾಶೆಸ್, ಕೆಂಪು ದದ್ದು ಇತ್ಯಾದಿ ಕಾಡಬಹುದು.
ಮಿನರಲ್ ಆಯಿಲ್
ಲಿಕ್ವಿಡ್ ಯಾ ಕ್ರೀಮೀ ಸ್ಕಿನ್ ಕೇರ್ ಪ್ರಾಡಕ್ಟ್ಸ್ ನಲ್ಲಿ ಮಿನರಲ್ ಆಯಿಲ್ ಬೆರೆಸಲಾಗುತ್ತದೆ. ಆದರೆ ಇದು ಮಗುವಿನ ಕೋಮಲ ಚರ್ಮಕ್ಕೆ ಹಾನಿಕರ. ಅದರ ರೋಮಛಿದ್ರಗಳನ್ನು ಬ್ಲಾಕ್ ಮಾಡಿಬಿಡುತ್ತದೆ. ಇದರಿಂದ ಮಗುವಿನ ಸಾಫ್ಟ್ ಸ್ಕಿನ್ ಗೆ ಹೊರಗಿನ ಆಮ್ಲಜನಕದ ಪೂರೈಕೆ ಆಗುವುದೇ ಇಲ್ಲ. ಹೀಗಾಗಿ ಮಗುವಿನ ಸ್ಕಿನ್ ಕೇರ್ ಪ್ರಾಡಕ್ಟ್ಸ್ ನಲ್ಲಿ ಮಿನರಲ್ ಆಯಿಲ್ ಇಲ್ಲದೆ ಇರುವಂಥದ್ದನ್ನೇ ಖರೀದಿಸಿ.
ಆಲ್ಕೋಹಾಲ್
ಮಕ್ಕಳ ಅನೇಕ ಸ್ಕಿನ್ ಕೇರ್ ಪ್ರಾಡಕ್ಟ್ಸ್ ನಲ್ಲಿ ಆಲ್ಕೋಹಾಲ್ ಬಳಕೆ ಇದ್ದೇ ಇರುತ್ತದೆ. ಇದರ ಬಳಕೆಯಿಂದ ಇಂಥ ಪ್ರಾಡಕ್ಟ್ಸ್ ಚರ್ಮದಲ್ಲಿ ಬೇಗ ವಿಲೀನವಾಗಿ, ಮೇಲೆ ಒಣಗಿದಂತೆ ಕಾಣುತ್ತದೆ. ಆದರೆ ಇಂಥ ಪ್ರಾಡಕ್ಟ್ಸ್ ನ್ನು ಸುದೀರ್ಘ ಕಾಲ ಬಳಸುದರಿಂದ, ಇದರಲ್ಲಿನ ಆಲ್ಕೋಹಾಲ್ ನ ಅಂಶ ಶಿಶುಗಳ ನಾಜೂಕು ತ್ವಚೆಗೆ ಬಲು ಹಾನಿಕಾರಕ ಎಂಬುದು ನಿಜ. ಈ ಕಾರಣದಿಂದಲೇ ಮಕ್ಕಳಿಗೆ ಡಿಯೋ ಯಾ ಪರ್ಫ್ಯೂಮ್ ಬಳಸಲೇಬಾರದು. ಇವುಗಳಲ್ಲಿ ಆಲ್ಕೋಹಾಲ್ ಅಂಶ ಇರುವುದು ಎಲ್ಲರಿಗೂ ತಿಳಿದ ಸಂಗತಿ. ಆದ್ದರಿಂದ ಮಗುವಿಗಾಗಿ ನೀವು ಸ್ಕಿನ್ ಕೇರ್ ಪ್ರಾಡಕ್ಟ್ಸ್ ಕೊಳ್ಳುವಾಗ ಅದರಲ್ಲಿ ಆಲ್ಕೊಹಾಲ್ ಅಂಶ ಇಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ.
ಪೌಡರ್ ನಲ್ಲಿರುವ ಟಾಲ್ಕಂ
ಸಾಮಾನ್ಯವಾಗಿ ತಾಯಂದಿರು ಇಡೀ ದಿನ ಮಗು ತಾಜಾ ಆಗಿರಲಿ ಹಾಗೂ ಡೈಪರ್ ರಾಶಸ್ ನಿಂದ ಮುಕ್ತಿ ಸಿಗಲಿ ಎಂದು, ಬೇಬಿ ಟಾಲ್ಕಂ ಪೌಡರ್ ನ್ನು ಧಾರಾಳವಾಗಿ ಬಳಸುತ್ತಾರೆ. ಆದರೆ ಇದು ಬೇಬಿಯ ಚರ್ಮಕ್ಕೆ ಬಲು ಹಾನಿಕರ. ಸಾಮಾನ್ಯವಾಗಿ ಬೇಬಿ ಪೌಡರಿನಲ್ಲಿ ಟಾಲ್ಕಂ ಎಂಬ ಪದಾರ್ಥ ಬೆರೆಸಿರುತ್ತಾರೆ. ಇದರ ಸುದೀರ್ಘ ಕಾಲದ ಬಳಕೆಯಿಂದ ಕ್ಯಾನ್ಸರ್ ಗೆ ದಾರಿ ಆದೀತು ಎಂಬುದು ಇತ್ತೀಚಿನ ಆಧುನಿಕ ಸಂಶೋಧನೆಗಳಿಂದ ತಿಳಿದುಬಂದಿದೆ. ಆದ್ದರಿಂದ ಈ ಟಾಲ್ಕಂ ಅಂಶ ಇರುವಂಥದ್ದನ್ನು ಬಿಟ್ಟು ಉಳಿದ ಬೇಬಿ ಪೌಡರ್ ಮಾತ್ರ ಕೊಳ್ಳಿರಿ.
ಶಿಶುವಿನ ಸ್ಕಿನ್ ಕೇರ್ ಪ್ರಾಡಕ್ಟ್ಸ್ ಕೊಳ್ಳುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು :
ಯಾವುದೇ ಪ್ರಾಡಕ್ಟ್ಸ್ ಖರೀದಿಸುವ ಮೊದಲು ಅದರ ಘಟಕಗಳನ್ನು ಆಮೂಲಾಗ್ರವಾಗಿ ಚೆಕ್ ಮಾಡಿ. ಆ ಪ್ರಾಡಕ್ಟ್ಸ್ ನ ಬಳಕೆಯಿಂದ ಮಗುವಿಗೆ ಅಲರ್ಜಿ ಆಗಬಹುದು ಎಂದು ನಿಮಗೆ ಲೇಶ ಮಾತ್ರವೂ ಸಂದೇಹ ಬಂದರೂ, ಅಂಥ ಬೇಬಿ ಪ್ರಾಡಕ್ಟ್ಸ್ ಕೊಳ್ಳಲೇಬೇಡಿ. ಶಿಶುಗಳಿಗಾಗಿಯೇ ವಿಶೇಷವಾಗಿ ತಯಾರಿಸಲಾಗುವಂಥ ಬೇಬಿ ಪ್ರಾಡಕ್ಟ್ಸ್ ಮಾತ್ರ ಕೊಳ್ಳಿರಿ. ಇಂಥ ಪ್ರಾಡಕ್ಟ್ಸ್ ನಿಮ್ಮ ಮಗುವಿನ ಚರ್ಮದಲ್ಲಿನ Ph ಲೆವೆಲ್ ಮೇಂಟೇನ್ ಮಾಡಲು ಸಹಕಾರಿ. ಹೀಗಾಗಿ ಮಗುವಿನ ಚರ್ಮಕ್ಕೆ ಯಾವುದೇ ಬಗೆಯ ತುರಿಕೆ, ಕಡಿತ, ನೋವು, ನವೆ ಇತ್ಯಾದಿಗಳ ಕಾಟ ಇರುವುದಿಲ್ಲ.
`100% ನೈಸರ್ಗಿಕ’ ಲೇಬಲ್ ವುಳ್ಳ ಪ್ರಾಡಕ್ಟ್ಸ್ ಸದಾ ಹಾನಿಕಾರಕ ಕೆಮಿಕಲ್ಸ್ ಹೊಂದಿರುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ! ಯಾವುದೇ ಪ್ರಾಡಕ್ಟ್ಸ್ ನ ಲೇಬಲ್ ಮೇಲೆ ಒದಗಿಸಲಾಗಿರುವ ಅಪರಿಚಿತ ಅಂಶಗಳ ಬಗ್ಗೆ, ಅದು ನವಜಾತ ಶಿಶುವಿಗೆ ಹಾನಿಕಾರಕವಲ್ಲ ತಾನೇ ಎಂದು 2-2 ಬಾರಿ ಚೆಕ್ ಮಾಡಿ ಖಾತ್ರಿಪಡಿಸಿಕೊಳ್ಳಿ.
ಬೇಬಿ ಮಾಯಿಶ್ಚರೈಸರ್
ಶಿಶುವಿನ ತ್ವಚೆಯನ್ನು ಸದಾ ಮಾಯಿಶ್ಚರೈಸ್ಡ್ ಆಗಿಡಲು ಇಂದಿನ ಮಾರುಕಟ್ಟೆಯಲ್ಲಿ ಹಲವು ಬೇಬಿ ಪ್ರಾಡಕ್ಟ್ಸ್ ಲಭ್ಯ. ಆದರೆ ಇದರಿಂದ ನಿಮ್ಮ ಮಗುವಿಗೆ ಎಗ್ಸಿಮಾದಂಥ ರೋಗ ತಗುಲಬಹುದು. ಆದ್ದರಿಂದ ಸದಾ ಪ್ರಾಪಲೀನ್ ಗ್ಲೈಕಾಲ್, ಓಲಿಕ್ ಆ್ಯಸಿಡ್, ಸ್ಟಿಯಾರಿಕ್ ಆ್ಯಸಿಡ್, ಐನೋಪ್ರಾಪಿಲ್ ಪಾಮಿಟೇಟ್, ಸಾರ್ಬಿಟನ್ ಸ್ಟಿಯರೇಟ್, ಬಿನ್ ಝೀನ್, ಸೋಡಿಯಂ ಹೈಡ್ರಾಕ್ಸೈಡ್ ಇತ್ಯಾದಿ ಅಂಶಗಳ ರಹಿತ ಮಾಯಿಶ್ಚರೈಸರ್ ನ್ನೇ ಆರಿಸಬೇಕು.
ಹಿರಿಯರಿಗಾಗಿ ಬಳಸಲಾಗುವ ಸಾಬೂನು ಮಕ್ಕಳ ತ್ವಚೆಗೆ ಹಾನಿಕಾರಕ ಆದೀತು. ಇಂಥ ಸೋಪುಗಳಲ್ಲಿ ಫ್ಯಾಟ್‌ಆಲ್ಕೊಹಾಲ್ ಅಂಶಗಳ ಮಿಶ್ರಣವಿರುತ್ತದೆ. ಹೀಗಾಗಿ ಶಿಶುವಿಗೆ ಇದರ ಬಳಕೆ ಬೇಡ. ಈ ಕಾರಣದಿಂದಲೇ ಶಿಶುವಿನ ನಾಜೂಕು ತ್ವಚೆಗಾಗಿ ಬೇಬಿ ಸೋಪ್ ಬರುತ್ತದೆ. ಸದಾ ಅಂಥದ್ದನ್ನೇ ಬಳಸಿರಿ. ಅದೇ ತರಹ ಶಿಶುವಿಗೆ ಲಿಕ್ವಿಡ್ ಸೋಪ್ ಯಾ ಶ್ಯಾಂಪೂ ಖರೀದಿಸುವಾಗ ಸಹ, ಅದರಲ್ಲಿ ಫಾರ್ಮಾಲ್ಡಿ ಹೈಡ್‌ರಿಲೀಸರ್ಸ್ ಇಲ್ಲ ತಾನೇ ಎಂದು ಖಚಿತಪಡಿಸಿಕೊಳ್ಳಿ. ಇಂಥವುಗಳಿಂದ ಮಕ್ಕಳಿಗೆ ಹಾನಿ ತಪ್ಪಿದ್ದಲ್ಲ.
ಮಕ್ಕಳ ಮಸಾಜ್ ಗಾಗಿ ಸದಾ ಕ್ಲಿನಿಕಲಿ ಮೈಲ್ಡ್ ಸರ್ಟಿಫೈಡ್ ಮಸಾಜ್ ಆಯಿಲ್ ನ್ನೇ ಆರಿಸಬೇಕು. ಅದು ಜಿಡ್ಡು ಜಿಡ್ಡಾಗಿ ಇರಬಾರದೆಂಬುದು ಅತಿ ಮುಖ್ಯ. ಆಗ ಮಾತ್ರವೇ ಅದು ಶಿಶುವಿನ ಚರ್ಮದಲ್ಲಿ ಸುಲಭವಾಗಿ ವಿಲೀನಗೊಳ್ಳಲು ಸಾಧ್ಯ.
ಪ್ಲಾಸ್ಟಿಕ್ ಬಾಟಲಿ ಬೇಡ
ಶಿಶುವಿಗೆ ಹಾಲೂಡಿಸಲು ಪ್ಲಾಸ್ಟಿಕ್ ಬಾಟಲಿ ಖಂಡಿತಾ ಬೇಡ. ಏಕೆಂದರೆ ಪ್ಲಾಸ್ಟಿಕ್ ಬಾಟಲ್ ಬ್ಯಾಕ್ಟೀರಿಯಾ ಪ್ರೋವ್ ಆಗಿರುತ್ತದೆ ಹಾಗೂ ದೀರ್ಘಕಾಲದ ಇದರ ಬಳಕೆಯಿಂದಾಗಿ, ಮಗುವಿಗೆ ಹಾನಿ ತಪ್ಪಿದ್ದಲ್ಲ. ಪ್ಲಾಸ್ಟಿಕ್ ಬಾಟಲಿ ಬದಲಿಗೆ ಗಾಜು ಅಥವಾ ಸ್ಟೇನ್ ಲೆಸ್ ಸ್ಟೀಲ್ ಬಾಟಲಿ ಉಪಯೋಗಿಸಿ. ಇದನ್ನು ಕ್ಲೀನ್ ಮಾಡಿ, ಬ್ಯಾಕ್ಟೀರಿಯಾಫ್ರೀ ಆಗಿರಿಸುವುದು ಸುಲಭ.
ಶಿಶುವಿನ ತ್ವಚೆ ಅತಿ ನಾಜೂಕು ಆಗಿರುವುದರಿಂದ, ನೀವು ಡೈಪರ್ ಕೊಳ್ಳುವಾಗ, ಅದು ಬಯೋಡೀಗ್ರೇಡೆಬಲ್ ತಾನೇ ಎಂದು ಖಚಿತಪಡಿಸಿಕೊಳ್ಳಿ. ಇದು ಮಗುವಿನ ಚರ್ಮ ಸದಾ ಕೋಮಲ ಆಗಿರಲು ಸಹಾಯಕ.
ನಿಮ್ಮ ಮಗುವಿನ ಸುರಕ್ಷತೆಗಾಗಿ ನೀವು ಆರಿಸಬೇಕಾದ ಬೇಬಿ ಪ್ರಾಡಕ್ಟ್ಸ್ ನಲ್ಲಿ ಕೊಬ್ಬರಿ ಎಣ್ಣೆ, ಶಿಯಾ ಬಟರ್, ನ್ಯಾಚುರಲ್ ವಿಟಮಿನ್, ಆ್ಯಲೋವೆರಾ, ಬಾದಾಮಿ ಎಣ್ಣೆ, ಆಲಿವ್ ಆಯಿಲ್ ಮುಂತಾದ ನೈಸರ್ಗಿಕ ಪದಾರ್ಥಗಳು ಸಮೃದ್ಧವಾಗಿರಬೇಕು. ಇವು ನಿಮ್ಮ ಮಗುವಿನ ಕೋಮಲ ತ್ವಚೆಗೆ ಪೂರಕ, ದೀರ್ಘ ಬಳಕೆಯಿಂದಲೂ ಹಾನಿ ಇಲ್ಲ.
ಶಿಶುವಿನ ತ್ವಚೆಗೆ ಆರ್ದ್ರತೆ, ಪೋಷಣೆಯ ಅಗತ್ಯವಿರುತ್ತದೆ. ಏಕೆಂದರೆ ಮೊದಲ 4 ತಿಂಗಳಲ್ಲಿ ಹೊಸ ಪ್ರಾಡಕ್ಟ್ಸ್ ಬಳಕೆಯಿಂದಾಗಿ ಆರ್ದ್ರತೆ ತಗ್ಗಬಹುದು. ಹೀಗಾಗಿ ಈ ಅಂಶಗಳನ್ನು ಒದಗಿಸಿ, ಮಗುವಿನ ತ್ವಚೆಯನ್ನು ಸುರಕ್ಷಿತವಾಗಿಡುವಂಥ ಬೇಬಿ ಪ್ರಾಡಕ್ಟ್ಸ್ ನ್ನೇ ಆರಿಸಿಕೊಳ್ಳಿ. ಇಂಥ ಪ್ರಾಡಕ್ಟ್ಸ್ ಗ್ಲೋಬಲ್ ಯಾ ಇಂಟರ್ ನ್ಯಾಶನಲ್ ಸ್ಟಾಂಡರ್ಡ್ಸ್ ಗೆ ತಕ್ಕಂತಿದೆಯೇ ಎಂಬುದನ್ನು ಅಗತ್ಯ ಚೆಕ್ ಮಾಡಿ.
ನೀವು ಆರಿಸುವ ಪ್ರಾಡಕ್ಟ್ 100% ಜೆಂಟಲ್ ಕೇರ್ ಗ್ಯಾರಂಟಿ ನೀಡುತ್ತಿದೆ ತಾನೇ ಎಂದು ಖಚಿತಪಡಿಸಿಕೊಳ್ಳಿ. ಇದರಲ್ಲಿ ಅತಿ ಪರಿಶುದ್ಧ ಘಟಕಗಳನ್ನು ಮಾತ್ರ ಬಳಸಿದ್ದಾರೆ ತಾನೇ ಎಂದು ನೋಡಿಕೊಳ್ಳಿ. ಇದರಿಂದ ನಿಮ್ಮ ಮಗುವಿಗೆ ಆಗಬಹುದಾದ ಸ್ಕಿನ್‌ಪ್ರಾಬ್ಲಮ್ಸ್ ಎಷ್ಟೋ ತಗ್ಗಿಹೋಗುತ್ತವೆ.
ಸದಾ ಬ್ರಾಂಡೆಡ್ ಪ್ರಾಡಕ್ಟ್ಸ್ ಕೊಳ್ಳಿರಿ
ನವಜಾತ ಶಿಶುವಿನ ನಾಜೂಕು ತ್ವಚೆ ನಿಧಾನವಾಗಿ ಸಶಕ್ತಗೊಳ್ಳುತ್ತದೆ. ಹಾಗಾಗಿ ನೀವು ಕೊಳ್ಳುವ ಪ್ರಾಡಕ್ಟ್ಸ್ ವಾರದ ಮಗುವಿಗೆ ತಕ್ಕುದೇ ಎಂದು ಕೇಳಿ ತಿಳಿಯಿರಿ. ಇವೆಲ್ಲ ಮಾಹಿತಿ ಪ್ರಾಡಕ್ಟ್ಸ್ ಮೇಲಿರುತ್ತದೆ, ಅವುಗಳತ್ತ ಗಮನ ಹರಿಸಬೇಕು, ಅಷ್ಟೆ.
ಯಾವದೇ ಉತ್ಪನ್ನ ಕೊಂಡರೂ ಅದು ಮಗುವಿನ ಕಂಗಳಿಗೆ ಜೆಂಟಲ್ ಆಗಿರುತ್ತದೆ ತಾನೇ ಎಂದು ಗಮನಿಸಿ. ಏಕೆಂದರೆ ಅದರ ಬಳಕೆಯಿಂದ ಮಗುವಿನ ಕಣ್ಣಿಗೆ ಉರಿ ತಗುಲಬಾರದು, ಅಕಸ್ಮಾತ್ ಕಣ್ಣಿಗೆ ತಗುಲಿದರೂ ಮಗುವಿಗೆ ಏನೂ ಹಾನಿ ಆಗಬಾರದು. ಅಂಥ ಉತ್ಪನ್ನಗಳಲ್ಲಿ ಬಣ್ಣಗಳ ಬಳಕೆ ನಿಯಂತ್ರಿತ ಪ್ರಮಾಣದಲ್ಲಿದೆಯೇ ಎಂದು ಗಮನಿಸಿ.
ಬೇಬಿಗೆ ಅಲರ್ಜಿ ಉಂಟು ಮಾಡುವ ಯಾವ ಅಂಶವೂ ಇಂಥ ಉತ್ಪನ್ನಗಳಲ್ಲಿ ಇರಬಾರದು. ಉತ್ಪನ್ನದ ಮೇಲೆ ಹೈಪೋ ಅಲರ್ಜೆನಿಕ್ ಬರೆದಿದ್ದರೆ, ಅದು ಮಾತ್ರವೇ ಮಗುವಿಗೆ ಅಲರ್ಜಿ ಉಂಟು ಮಾಡುವುದಿಲ್ಲ ಎಂದರ್ಥ.
ಇಂಥ ಉತ್ಪನ್ನಗಳಲ್ಲಿ ಮೈಕ್ರೋಬ್ಸ್ ಯಾ ಫಂಗಸ್ ಯಾ ಬ್ಯಾಕ್ಟೀರಿಯಾ ಅಂಶ ಇರಬಾರದು. ಹೀಗಾಗಿ ಇದರಲ್ಲಿ ಧಾರಾಳ ಪ್ರಿಸರ್ವೇಟಿಲ್ಸ್ ಬಳಸಲಾಗುತ್ತದೆ. ಬೇಬಿ ಪ್ರಾಡಕ್ಟ್ಸ್ ನಲ್ಲಿ ಪ್ಯಾರಾಬೇನ್, ಸಲ್ಫೇಟ್ ನಂಥ ಕೆವುಲ ಅಂಶಗಳನ್ನು ಅತಿ ನಿಯಂತ್ರಿತ ಪ್ರಮಾಣದಲ್ಲಷ್ಟೇ ಬಳಸಬೇಕು. ಹೀಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಬ್ರಾಂಡ್ ಗಳ ಪ್ರಾಡಕ್ಟ್ಸ್ ಹೋಲಿಸಿ ನೋಡಿ. ಅದರಲ್ಲಿನ ಘಟಕಗಳು ಎಷ್ಟು ಸೇಫ್ ಎಂದು ಗಮನಿಸಿ ತಿಳಿಯಿರಿ.
ಶ್ಯಾಂಪೂ ಆಯ್ಕೆ
ಬೇಬಿ ಕೇರ್ ಪ್ರಾಡಕ್ಟ್ಸ್ ನಲ್ಲಿ ಸುವಾಸನೆ ತುಂಬುವುದರಿಂದ, ಮಗುವಿನ ಮೂಡ್ ಸುಧಾರಿಸುತ್ತದೆ, ಅದರ ಸ್ವಸ್ಥ ಬೆಳವಣಿಗೆಗೆ ಇದು ಪೂರಕ. ಆದರೆ ಸುವಾಸನೆ ಬೇಬಿ ಪ್ರಾಡಕ್ಟ್ಸ್ ಗೆ ಬೇಕೇ ಬೇಡವೇ ಎಂಬುದೇ ದೊಡ್ಡ ಪ್ರಶ್ನೆ. ಉತ್ಪನ್ನದಲ್ಲಿ ಬಳಸಲಾಗಿರುವ ಫ್ರಾಗ್ರೆನ್ಸ್, ಮೆಟೀರಿಯಲ್ ಸಂಸ್ಥೆಯಿಂದ ಸರ್ಟಿಫೈಡ್ ಆಗಿರಬೇಕು. ಅಂದ್ರೆ ಇಂಟರ್ ನ್ಯಾಷನಲ್ ಫ್ರಾಗ್ರೆನ್ಸ್ ಅಸೋಸಿಯೇಶನ್ ಮೂಲಕ.
ಪ್ರತಿ ಮಗುವಿನ ಸ್ಕಿನ್ ವಿಭಿನ್ನವಾಗಿರುತ್ತದೆ. ಹೀಗಾಗಿ ಮಗುವಿಗೆ ಬೇಕಾಗುವ ಶ್ಯಾಂಪೂ ಆರಿಸುವ ಮುನ್ನ, ಅದರ ಸ್ಕಿನ್ ಬಗ್ಗೆ ತಿಳಿದುಕೊಳ್ಳಿ. ಬಹುತೇಕ ನವಜಾತ ಮಕ್ಕಳ ಸ್ಕಾಲ್ಪ್ ನಲ್ಲಿ ಫ್ಲಾಕ್ಸ್ ಇರುತ್ತದೆ. ಪೇರೆಂಟ್ಸ್ ಇದನ್ನು ಡ್ಯಾಂಡ್ರಫ್ ಎಂದು ಭಾವಿಸುತ್ತಾರೆ. ಹೀಗಾಗಿ ಅವಸರದಲ್ಲಿ ಅವರು ಆ್ಯಂಟಿ ಡ್ಯಾಂಡ್ರಫ್ ಶ್ಯಾಂಪೂ ಬಳಸಲು ಆರಂಭಿಸಿಯೇ ಬಿಡುತ್ತಾರೆ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಹೀಗಾಗಿ ಮಗುವಿಗಾಗಿ ಮಾಯಿಶ್ಚರೈಸಿಂಗ್ ಗುಣಗಳಿರುವಂಥ ಶ್ಯಾಂಪೂವನ್ನೇ ಆರಿಸಿ. ಜೊತೆಗೆ ಆ ಶ್ಯಾಂಪೂನಲ್ಲಿ ನೈಸರ್ಗಿಕ ಘಟಕಗಳು ಮಾತ್ರವೇ ಅಡಗಿರಬೇಕು ಎಂಬುದನ್ನು ಗಮನಿಸಿ. ಹೀಗಾಗಿ ಕೃತಕ ಸುವಾಸನೆ ಬೆರೆತ ಶ್ಯಾಂಪೂ ಆರಿಸಬಾರದು ಎಂದು ನೆನಪಿಡಿ.
– ಪ್ರತಿನಿಧಿ
ಒಂದಿಷ್ಟು ಕಿವಿಮಾತು
ಮಕ್ಕಳ ಚರ್ಮ ಹಿರಿಯರಿಗಿಂತ ಅತಿ ಕೋಮಲ. ಹೀಗಾಗಿ ಅವುಗಳ ಚರ್ಮ, ಡ್ರೈನೆಸ್ ಹಾಗೂ ಇತರ ಸಮಸ್ಯೆಗಳಿಗೆ ಬೇಗ ಈಡಾಗುತ್ತದೆ. ಬೇಬಿ ಸ್ಕಿನ್ Ph ಲೆವೆಲ್ .5 ಇರುತ್ತದೆ. ಹಾಗಾಗಿ ಮಗುವಿಗೆ ಶ್ಯಾಂಪೂ ಕೊಳ್ಳುವಾಗ, ಅದರ Ph ಲೆವೆಲ್ ಅಗತ್ಯ ಗಮನಿಸಿ. ಹೀಗಾಗಿ ಮಗುವಿನ ಶ್ಯಾಂಪೂ Ph ಲೆವೆಲ್ 55.6 ನಡುವೆ ಇರಬೇಕು.
ಸಣ್ಣ ಮಕ್ಕಳ ಬಟ್ಟೆ ತೊಳೆಯಲು ಮಾಮೂಲಿ ಡಿಟರ್ಜೆಂಟ್ ಬಳಸುವ ಬದಲು, ಬೇಬಿ ಲಾಂಡ್ರಿ ಡಿಟರ್ಜೆಂಟ್ ಪೌಡರ್ ಮಾತ್ರ ಬಳಸಿರಿ. ಇದರಲ್ಲಿ ಪರ್ಫ್ಯೂಮ್ ಯಾ ಡೈ ಬಳಸಿರುವುದಿಲ್ಲ. ನಾರ್ಮಲ್ ಡಿಟರ್ಜೆಂಟ್ ಮಗುವಿನ ಚರ್ಮವನ್ನು ಡ್ರೈಗೊಳಿಸಿ, ನವೆ, ತುರಿಕೆ ತರಿಸುತ್ತದೆ. ಜೊತೆಗೆ ಅದರಲ್ಲಿನ ಇತರ ಕೆಮಿಕಲ್ಸ್, ಮಗುವಿನ ತ್ವಚೆಗೆ ಬಲು ಹಾನಿಕಾರಕ. ಹೀಗಾಗಿ ಮಗುವಿಗೆ ಸಂಬಂಧಿಸಿದ ತೊಡಿಸುವ, ಹೊದಿಸುವ, ಹಾಸು ಎಲ್ಲಾ ಬಟ್ಟೆಗಳನ್ನೂ ಇಂಥ ಬೇಬಿ ಲಾಂಡ್ರಿ ಡಿಟರ್ಜೆಂಟ್ ಪೌಡರ್ ನಿಂದಲೇ ಒಗೆಯಿರಿ.
ಯಾವುದೇ ಬೇಬಿ ಪ್ರಾಡಕ್ಟ್ಸ್ ಕೊಳ್ಳುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿ ನಂತರ ಕೊಳ್ಳಿರಿ. ತಾಯಿ ತಂದೆಯರಿಗೆ ಆಸ್ತಮಾ ಯಾ ಇನ್ನಿತರ ಅಲರ್ಜಿಗಳಿದ್ದರೆ, ಮಗುವಿಗೆ ಬೇಕಾಗುವ ಸಾಮಗ್ರಿ ಕೊಳ್ಳುವಾಗ 2 ಪಟ್ಟು ಎಚ್ಚರ ವಹಿಸಬೇಕು.





