ಉದ್ಯೋಗಸ್ಥ ವನಿತೆ ತನ್ನ ಬಿಝಿ ದಿನಚರ್ಯೆಯಿಂದಾಗಿ, ಬಯಸಿದರೂ ಸಹ ತಾನು ಹೆಚ್ಚು ಹೊತ್ತು ಮಗುವಿನ ಜೊತೆ ಕಳೆಯಲಾರಳು. ಅಂಥ ಒಂದು ಗಿಲ್ಟ್ ಫೀಲಿಂಗ್ನಿಂದ ಹೊರಬರುವುದು ಹೇಗೆ……?

ನೀವು ಉದ್ಯೋಗಸ್ಥ ವನಿತೆಯಾಗಿದ್ದು, ಸಣ್ಣ ಮಗುವನ್ನು ಕ್ರೀಚ್‌ ನಲ್ಲಿ ಬಿಟ್ಟು ಬಂದು, ತಾನು ಅದಕ್ಕೆ ಹೆಚ್ಚು ಸಮಯ ನೀಡುತ್ತಿಲ್ಲ ಎಂಬ ಹೀನಭಾವನೆಗೆ ಒಳಗಾಗಿದ್ದರೆ, ತಾನು ಮಗುವನ್ನು ಸರಿಯಾಗಿ ಸಾಕುತ್ತಿಲ್ಲವೇನೋ ಎಂದೆನಿಸಿದರೆ, ಮನಸ್ಸಿನಲ್ಲಿ ಸದಾ ಕಿರಿಕಿರಿ ತುಂಬಿಕೊಳ್ಳುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ `ಮಾಮ್ ಗಿಲ್ಟ್’ ಎನ್ನುತ್ತಾರೆ. ಇದರಿಂದ ಹೊರಬರುವುದು ಹೇಗೆ ಎಂದು ವಿವರವಾಗಿ ತಿಳಿಯೋಣ.

ಇಲ್ಲಿ ತಾಯಿ ಹೀಗೆ ಭಾವಿಸುವುದು ಅವಳ ಕೋಮಲ ಭಾವನಾತ್ಮಕತೆಯ ಪ್ರತಿರೂಪ. ಇದನ್ನೇ ಆಧುನಿಕವಾಗಿ `ಮಾಮ್ ಗಿಲ್ಟ್’ ಎನ್ನುತ್ತಾರೆ. ಇಂದಿನ ವರ್ಕಿಂಗ್‌ ಮದರ್‌ ಈ ಸ್ಥಿತಿಯನ್ನು ಎದುರಿಸಲೇ ಬೇಕಾಗುತ್ತದೆ. ಅವಳ ಬಳಿ ಸದಾ ಸಮಯದ ಅಭಾವ ತುಂಬಿರುತ್ತದೆ. ಹೀಗಾಗಿ ಅವಳು ತನ್ನ ಕುಟುಂಬ, ಮಕ್ಕಳಿಗಾಗಿ ಸಮಯ ಮಾಡಿಕೊಳ್ಳುವುದು ತ್ರಾಸದಾಯಕವೇ ಸರಿ. ಇದರ ನೇರ ಪರಿಣಾಮ ಮಗುವಿನ ಮೇಲಾಗುತ್ತದೆ.

ಈ ಕಾರಣದಿಂದೋ ಏನೋ…. ತಾಯಿಮಗುವಿನ ಬಾಂಧವ್ಯ ಹಿಂದಿನಷ್ಟು ಮಧುರವಾಗಿಲ್ಲ ಎಂದೇ ಹೇಳಬಹುದು. ಮಕ್ಕಳು ಕ್ರಮೇಣ ತಾಯಿ ಬಳಿ ತಮ್ಮ ಎಲ್ಲಾ ವಿಷಯ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಅವರು ಸದಾ ಮೊಬೈಲ್ ‌ಗೆ ಅಂಟಿಕೊಂಡಿರಲು ಬಯಸುತ್ತಾರೆ.

ಸ್ಥಿತಿ ಎದುರಾಗಿದೆ ಎಂದು ಗುರುತಿಸುವುದು ಹೇಗೆ?

ನಾನೊಬ್ಬ ಕೆಟ್ಟ ತಾಯಿ ಅನಿಸ ತೊಡಗಿದಾಗ.

ಸದಾ ನೀವು ಟೆನ್ಶನ್‌ ನಲ್ಲೇ ಕಳೆಯುತ್ತಾ, ನೀವು ಸಂಪೂರ್ಣ ನೆಮ್ಮದಿ ಕಳೆದುಕೊಳ್ಳುವಂತೆ ಆದಾಗ.

ನಿಮ್ಮ ಮಾನಸಿಕ ಆರೋಗ್ಯ ಕ್ರಮೇಣ ಹದಗೆಡತೊಡಗಿದಾಗ.

ಸದಾ ಸೋಶಿಯಲ್ ಮೀಡಿಯಾಗೆ ಅಂಟಿಕೊಂಡು ಈ ಲೋಕವೇ ಬೇಡ ಅನಿಸಿದಾಗ.

ಮಗುವನ್ನು ಕ್ರೀಚ್‌ ಗೆ ಬಿಡುವಾಗ ಹಿಂಸೆ ಎನಿಸಿದರೆ.

ನಕಾರಾತ್ಮಕತೆ ಹೆಚ್ಚ ತೊಡಗಿದಾಗ.

ಇದರಿಂದ ಹೊರಬರಲು ನೀವು ಈ ಕೆಳಗಿನ ಸಲಹೆಗಳನ್ನು ಅಗತ್ಯ ಅಳವಡಿಸಿಕೊಳ್ಳಿ :

ನಿಮಗೆ ನೀವು ಬ್ರೇಕ್ಮಾಡಿ : ಮಗುವಿಗೆ ನಿಮ್ಮ ಅಗತ್ಯ ತುಂಬಾ ಇದೆ, ಬಹಳ ದಿನಗಳಿಂದ ನೀವು ಮಕ್ಕಳ ಜೊತೆ ಹೆಚ್ಚು ಕಾಲ ಕಳೆದಿಲ್ಲ ಎನಿಸಿದಾಗ, ಅವರಿಗೆ ಶಾಲೆಯಿಂದ ಬಿಡುವು ದೊರಕುವ ಸಮಯದಲ್ಲಿ ಅಥವಾ ಅವರಿಗೆ ಪರೀಕ್ಷೆ ಇರುವ ಸಂದರ್ಭದಲ್ಲಿ ನೀವು ಆಫೀಸ್‌ ನಿಂದ ಕೆಲವು ದಿನ ಬ್ರೇಕ್‌ ಪಡೆಯಿರಿ. ಆಗ ಮಕ್ಕಳಿಗೆ ಒಂಟಿತನ ಕಾಡುವುದಿಲ್ಲ, ನೀವು ಅವರಿಗೆ ಹೆಚ್ಚು ಸಪೋರ್ಟ್‌ ಮಾಡಿದಂತೆ ಆಗುತ್ತದೆ.

ಮಕ್ಕಳ ಜೊತೆ ಕ್ವಾಲಿಟಿ ಟೈಂ ಕಳೆಯರಿ : ರಾತ್ರಿ ಮಲಗುವ ಮುನ್ನ, ತುಸು ಹೆಚ್ಚು ಹೊತ್ತು ಮಕ್ಕಳ ಜೊತೆ ಕಳೆಯಿರಿ. ಅವರ ಆ ದಿನ ಹೇಗೆ ಕಳೆಯಿತು? ಶಾಲೆಯಲ್ಲಿ ಏನೇನು ಮಾಡಿದರು? ಅವರಿಗೆ ಆ ದಿನ ಇಷ್ಟವಾದದ್ದು ಏನು? ಅವರಿಗೆ ಯಾವುದರಿಂದ ಬೇಸರವಾಯಿತು? ಇಂಥ ಪ್ರಶ್ನೆಗಳಿಗೆ ಅವರಿಂದ ಉತ್ತರ ಪಡೆಯುವುದರಿಂದ ಅವರ ತೊಂದರೆಗಳು ಏನೇನು ಎಂದು ನಿಮಗೆ ಅರಿವಾಗುತ್ತದೆ, ಅದನ್ನು ಸರಿಪಡಿಸಲು ನೀವು ಸಹಾಯ ಮಾಡಬಹುದು. ಈ ರೀತಿ ನೀವು ಅವರ ಜೀವನದಲ್ಲಿ ಎಷ್ಟು ಪ್ರಧಾನ ಪಾತ್ರ ವಹಿಸುತ್ತೀರಿ ಎಂಬುದು ಇದರಿಂದ ಅವರಿಗೆ ಸ್ಪಷ್ಟವಾಗುತ್ತದೆ.

ಅವರಿಷ್ಟದ ಊಟತಿಂಡಿ ಇರಲಿ : ಒಂದು ಇಡೀ ದಿನ ಮಕ್ಕಳು ಬಯಸುವಂತೆ ಅವರೊಂದಿಗೆ ಜಾಲಿಯಾಗಿ ಕಳೆಯಿರಿ. ಅವರು ಬಯಸುವ ಊಟತಿಂಡಿ ಮಾಡಿಕೊಡಿ. ಅವರಿಗೆ ಆಗಾಗ ಸರ್‌ ಪ್ರೈಸ್‌ ಗಿಫ್ಟ್ ಕೊಡಿ. ಅವರು ನಿಮಗೆ ಎಷ್ಟು ಮುಖ್ಯವೋ, ಅವರಿಗಾಗಿ ನೀವು ಏನೆಲ್ಲ ಮಾಡಲು ಸಿದ್ಧ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ. ಅಡುಗೆ ಮಾಡುವಾಗ, ಅದನ್ನು ಡೈನಿಂಗ್‌ ಟೇಬಲ್ ಮೇಲೆ ಜೋಡಿಸಲು ಮಕ್ಕಳ ಸಹಾಯ ಪಡೆಯಿರಿ. ತರಕಾರಿ ತೊಳೆಯುವುದು, ಬೇಕಾದ ಸಾಮಗ್ರಿ ಹುಡುಕಿಕೊಡುವುದು, ಡೈನಿಂಗ್‌ ಟೇಬಲ್ ಮೇಲೆ ನೀಟಾಗಿ ತಟ್ಟೆ ಲೋಟ ಜೋಡಿಸುವುದು ಇತ್ಯಾದಿ ಎಲ್ಲದರಲ್ಲೂ ಅವರಿಗೆ ಮಹತ್ವ ಕೊಡಿ.

ಅವರ ಜೊತೆ ಹೆಚ್ಚಿನ ಚಟುವಟಿಕೆ ಇರಲಿ : ಮಕ್ಕಳ ಎಲ್ಲಾ ಆಸಕ್ತಿಕರ ಚಟುವಟಿಕೆಗಳು ಅಂದ್ರೆ ಡ್ರಾಯಿಂಗ್‌, ಪೇಂಟಿಂಗ್‌, ಕ್ರಾಫ್ಟ್, ಪ್ರಾಜೆಕ್ಟ್ ಇತ್ಯಾದಿಗಳಲ್ಲಿ ನೀವು ಶಾಮೀಲಾಗಿ. ಜೊತೆಗೆ ಮನೆಯಲ್ಲಿ ಅವರಿಗಿಷ್ಟವಾಗುವಂಥ ಒಳಾಂಗಣ ಆಟಗಳಾದ ಕೇರಂ, ಚೆಸ್‌ (ಚದುರಂಗ), ಲೂಡೋ, ಹಾವುಏಣಿ ಆಟ, ಅಳಿಗುಳಿ ಮಣೆಯಾಟ, ಬೋರ್ಡ್‌ ಗೇಮ್ಸ್ ಅಥವಾ ಹೊರಾಂಗಣ ಆಟಗಳಲ್ಲೂ ಅವರ ಜೊತೆ ಇದ್ದು ಪ್ರೋತ್ಸಾಹಿಸಿ. ಜೊತೆಗೆ ಅವರ ರಜಾ ದಿನಗಳಲ್ಲಿ ಬೋರಾಗದೆ ಇರಲು ಅವರನ್ನೂ ಸೇರಿಸಿಕೊಂಡು ಅವರಿಗಿಷ್ಟವಾದ ಡಿಶ್‌ ಅಂದ್ರೆ ಕೇಕ್‌, ಕುಕೀಸ್‌, ಚಾಕಲೇಟ್‌, ಪಿಜ್ಜಾ ಇತ್ಯಾದಿ ತಯಾರಿಸಿ. ತಾವೇ ಮಾಡಿದ್ದು ಎಂಬ ಸಂಭ್ರಮದಲ್ಲಿ ಅವರು ಹೆಚ್ಚಿನ ಉತ್ಸಾಹದಿಂದ ಸವಿಯುತ್ತಾರೆ. ನಿಧಾನವಾಗಿ ಅವರಿಗೆ ಒಂದೊಂದೇ ಮನೆಗೆಲಸ ಸಹ ಕಲಿಸಿರಿ.

ಡಿಜಟಲ್ ಮೀಡಿಯಾಗೆ ಸೀಮಿತ ಸಮಯ ಕೊಡಿ : ಸಂಜೆ ಇರುವುದರಲ್ಲಿ ತುಸು ಬಿಡುವು ಮಾಡಿಕೊಂಡು ಅವರ ಹೋಂವರ್ಕ್ ಕೆಲಸಗಳಲ್ಲಿ ನೆರವಾಗಿ. ಮಕ್ಕಳ ಜೊತೆ ಯಾವಾಗ ಸಮಯ ಕಳೆದರೂ ಸರಿ, ಆಗ ನಿಮ್ಮ ಕೈಲಿ ವಾಟ್ಸ್ ಆ್ಯಪ್‌,  FB‌, ಇನ್‌ಸ್ಟಾಗ್ರಾಂಗಳಿಗಾಗಿ ಮೊಬೈಲ್ ‌ಇರುವುದು ಬೇಡ! ಮಕ್ಕಳು ಅದನ್ನು ಹಿಡಿದು ಕುಳಿತರೂ, ನಯವಾಗಿ ತಿಳಿಹೇಳುತ್ತಾ, ಅದನ್ನು ಅವರ ಕೈಯಿಂದ ಬಿಡಿಸಿರಿ. ಆಗ ಅವರು ನಿಮ್ಮ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಂಡು, ನಿಮ್ಮ ಆದೇಶದಂತೆ ನಡೆದುಕೊಳ್ಳಲಿ. ಈ ರೀತಿ ಮಕ್ಕಳ ಜೊತೆ ಹೆಚ್ಚು ಹೊತ್ತು ಉತ್ತಮ ಸಮಯ ಕಳೆಯಿರಿ. ಮಕ್ಕಳ ಭವಿಷ್ಯ ಸುಂದರವಾಗಿರಲು ಈಗಿನಿಂದಲೇ ಅವರು ಶಿಸ್ತಿನ ಜೀವನ ನಡೆಸುವಂತಾಗಲಿ.

ಮಕ್ಕಳನ್ನು ನಿಮ್ಮ ಫ್ರೆಂಡ್ಸ್ ಆಗಿಸಿಕೊಳ್ಳಿ : ಪ್ರೌಢಶಾಲೆಯ ಹಂತಕ್ಕೆ ತಲುಪಿದ ನಿಮ್ಮ ಗಂಡು/ಹೆಣ್ಣುಮಕ್ಕಳನ್ನು ನಿಮ್ಮ ಫ್ರೆಂಡ್ಸ್ ತರಹವೇ ಟ್ರೀಟ್‌ ಮಾಡಿ. ಆಗ ಅವರು ನಿಮ್ಮಲ್ಲೇ ಫ್ರೆಂಡ್‌, ಫಿಲಾಸಫರ್‌, ಗೈಡ್‌ ನ್ನು ಕಂಡುಕೊಳ್ಳುತ್ತಾರೆ. ಇದಕ್ಕಾಗಿ ಅವರ ಜೊತೆ ಅವರ ಎಲ್ಲಾ ಚಟುವಟಿಕೆಗಳಲ್ಲೂ ಸುಲಭವಾಗಿ ಪಾಲ್ಗೊಳ್ಳಿ. ಆಟೋಟ, ವಾಕಿಂಗ್‌, ಜಾಗಿಂಗ್‌, ಜಿಮ್, ಸಂಜೆಯ ತಿರುಗಾಟ….. ಒಟ್ಟಾರೆ ಅವರಿಗಿಷ್ಟವಾದದ್ದು ಎಲ್ಲವನ್ನೂ ಮಾಡಿ. ಅದೇ ತರಹ ಅವರ ಫ್ರೆಂಡ್ಸ್ ನ್ನು ಆಗಾಗ ಮನೆಗೆ ಆಹ್ವಾನಿಸಿ ಯಾವುದೋ ನೆಪದಲ್ಲಿ ಪಾರ್ಟಿ ಏರ್ಪಡಿಸಿ. ಅವರ ಫ್ರೆಂಡ್ಸ್ ಕಷ್ಟ ಸುಖಗಳಲ್ಲಿ ಪಾಲ್ಗೊಳ್ಳುತ್ತಾ, ಅವರನ್ನೂ ನಿಮ್ಮ ಮಕ್ಕಳಂತೆಯೇ ಆದರಿಸಿ. ಇದರಿಂದ ನಿಮ್ಮ ಮಕ್ಕಳಿಗೆ ನಿಮ್ಮ ಬಗ್ಗೆ ಹೆಚ್ಚಿನ ಗೌರವಾದರ ಮೂಡುತ್ತದೆ.

ರಜೆ ದಿನಗಳಲ್ಲಿ ಮಕ್ಕಳೊಂದಿಗೆ ಹೊರಗೆ ಸುತ್ತಾಡಿ : ಶನಿವಾರ, ಭಾನುವಾರಗಳಲ್ಲಿ ಬಿಡುವಿದ್ದಾಗ ಅಥವಾ ಅವರಿಗೆ ಶಾಲೆಯಿಂದ ರಜೆ ದೊರೆತಾಗ, ಅವರನ್ನು ಕರೆದುಕೊಂಡು ಅವರಿಷ್ಟದ ಪಿಕ್ನಿಕ್‌ ಸ್ಟಾಟ್‌ ಗೆ ಹೊರಡಿ, ಈ ಸಮಯದಲ್ಲಿ ತೀರ್ಥಯಾತ್ರೆ ಖಂಡಿತಾ ಬೇಡ. ಮಕ್ಕಳು ಅವರ ಫ್ರೆಂಡ್ಸ್ ಜೊತೆಗೆ ನೀವಿಬ್ಬರು…. ಈ ಸವಿಘಳಿಗೆ ಅನುಭವಿಸಿದಾಗ ಮಾತ್ರ ಗೊತ್ತಾಗುತ್ತದೆ. ಜೊತೆಗೆ ಅವರ ತಾಯಿ ತಂದೆಯರೂ ಸೇರಿಕೊಂಡರೆ ಮಜಾ ಇನ್ನಷ್ಟು ಹೆಚ್ಚುತ್ತದೆ. ಅವರಿಗಿಷ್ಟವಾದ ಫಾಲ್ಸ್, ನದಿ ನೀರಿನ ಜಾಗ, ಟ್ರೆಕ್ಕಿಂಗ್‌, ಕಾಡಿನ ರೋಮಾಂಚಕಾರಿ ಅಲೆದಾಟಗಳಲ್ಲಿ ಪಾಲ್ಗೊಳ್ಳಿ.

ಜೊತೆ ಜೊತೆಯಲ್ಲಿ ಊಟ ತಿಂಡಿ : ಇಡೀ ದಿನದಲ್ಲಿ ಕನಿಷ್ಠ ಒಂದು ಹೊತ್ತಿನ ಊಟವನ್ನು ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಮಾಡುವಂತೆ ವ್ಯವಸ್ಥೆ ಮಾಡಿಕೊಳ್ಳಿ. ರಜಾ ದಿನಗಳಲ್ಲಿ ಇದು 3 ಹೊತ್ತಿರಲಿ. ಅವರಿಗಿಷ್ಟವಾದ ಊಟ ತಿಂಡಿ ಮಾಡಿ ಬಡಿಸಿ, ಅವರೊಂದಿಗೆ ಮನ ಬಿಚ್ಚಿ ಮಾತನಾಡಿ. ಇದರಿಂದ ತಾಯಿ ತಂದೆಯರ ಜೊತೆ ಅವರ ಬಾಂಧ್ಯ ಮಧುರವಾಗುತ್ತದೆ.

`ಎ ಹ್ಯಾಪಿ ಫ್ಯಾಮಿಲಿ ಈಸ್‌ ದಿ ಫ್ಯಾಮಿಲಿ ದಟ್‌ ಆಲ್ವೇಸ್‌ ಈಟು ಗೆದರ್‌’ ಎಂಬ ಆಂಗ್ಲ ನಾಣ್ಣುಡಿಯಂತೆ ಯಾವಾಗಲೂ ಸಹಭೋಜನಕ್ಕೆ ಆದ್ಯತೆ ನೀಡಿ!

ಶೋಭಾ ಕುಮಾರ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ