ಕುಟುಂಬದ ಕೇಂದ್ರಬಿಂದುವಾದ ಗೃಹಿಣಿ ಯಾವ ರೀತಿ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮನೆಯವರೊಂದಿಗೆ ತನ್ನನ್ನೂ ಸರ್ತೋಮುಖವಾಗಿ ಗಮನಿಸಿಕೊಳ್ಳಬೇಕು ಎಂದು ತಿಳಿಯೋಣವೇ…….?
`ಗೃಹಿಣಿ ಗೃಹ ಮುಚ್ಯತೆ’ ಎಂಬ ಸಂಸ್ಕೃತ ನಾಣ್ಣುಡಿಯಂತೆ ಮನೆಗೆ ಗೃಹಿಣಿಯೇ ಭೂಷಣ. ಒಂದು ಮನೆ ಉತ್ತಮ ಗೃಹ ಎನಿಸಿಕೊಳ್ಳಬೇಕಾದರೆ ಆ ಮನೆಯಲ್ಲಿ ಶಾಂತಿ ನೆಮ್ಮದಿ ಪ್ರೀತಿ ಇರಬೇಕು. ಇದಕ್ಕೆ ಮಹಿಳೆಯ ಕೊಡುಗೆ ಹೆಚ್ಚಾಗಿರುತ್ತದೆ. ಒಂದು ಕುಟುಂಬದ ಆರೋಗ್ಯ ಕಾಪಾಡುವುದರಲ್ಲಿ ಮಹಿಳೆಯ ಪಾತ್ರ ಅಧಿಕವಾಗಿರುತ್ತದೆ. ಮನೆಯ ಎಲ್ಲಾ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆ, ತನ್ನನ್ನು ತಾನು ಮರೆತೇ ಬಿಟ್ಟಿರುತ್ತಾಳೆ. ಮಹಿಳೆಯರು ತಮ್ಮ ಕುಟುಂಬ ಕೆಲಸ ಹಾಗೂ ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸುತ್ತ ತಮ್ಮ ಆರೋಗ್ಯದ ಬಗ್ಗೆ, ಬೇಕು ಬೇಡಗಳ ಬಗ್ಗೆ ಗಮನ ಹರಿಸುವುದಿಲ್ಲ. ಮಹಿಳೆಯರು ನಿತ್ಯ ಸ್ವಲ್ಪ ಸಮಯವನ್ನು ತಮಗಾಗಿ ತಮ್ಮ ಆರೋಗ್ಯದ ಆರೈಕೆಗಾಗಿ ಮೀಸಲಿಟ್ಟರೆ, ಮನೆ ಜವಾಬ್ದಾರಿ ಹಾಗೂ ಕೆಲಸಗಳ ನಿರ್ವಹಣೆಯ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲು ಸಾಧ್ಯವಾಗುತ್ತದೆ.
ಆಕಾಶದ ನೀಲಿಯಲ್ಲಿ ಚಂದ್ರ ತಾರೆ
ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ
ಎಂದು ಹಿರಿಯ ಕವಿ ಜಿ.ಎಸ್. ಶಿವರುದ್ರಪ್ಪ ತಮ್ಮ ಕವನದ ಮೂಲಕ ಮಹಿಳೆಯ ಶಕ್ತಿ ಸೂಕ್ಷ್ಮತೆಗಳನ್ನು ವಿವರಿಸಿದ್ದಾರೆ. ಮಹಿಳೆಯು ತನ್ನ ಜೀವನದ ಪ್ರತಿಯೊಂದು ಘಟ್ಟದಲ್ಲಿ ಮಗಳಾಗಿ, ಅಕ್ಕ, ತಂಗಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಹೀಗೆ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ.

ಕುಟುಂಬದ ಚುಕ್ಕಾಣಿ
ಈಕೆ ತನ್ನ ಸಂಸಾರದ ಸದಸ್ಯರಿಗೋಸ್ಕರ ವೈದ್ಯೆಯಂತೆ, ಶಿಕ್ಷಕಿಯಂತೆ, ಸಲಹೆಗಾರಳಂತೆ, ಸಹಾಯಕಳಂತೆ, ಕಾನೂನಿನ ಸಲಹೆಗಾರ್ತಿಯಂತೆ, ಸೇವಕಳಂತೆ ಹೀಗೆ ಬಹು ಕಾರ್ಯ ಪರಿಣತೆಯಾಗಿ ಒಬ್ಬಳೇ ಎಲ್ಲಾ ಕಾರ್ಯವನ್ನೂ ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾಳೆ. ತಾಳ್ಮೆ ಸಹನೆ ಸಂಬಂಧಗಳ ಮೌಲ್ಯಗಳನ್ನು ಹೆಚ್ಚಿಸುವ ಶಕ್ತಿ ಮಹಿಳೆಗೆ ಮಾತ್ರ ಇರುವುದು ಎಂದು ಹೇಳಿದರೆ ಅತಿಶಯೋಕ್ತಿ ಆಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಮಹಿಳೆಯು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮನವಾಗಿ ಸಾಧನೆಗೈಯುತ್ತಿದ್ದಾಳೆ. ಮನೆಯ ಹೊರಗೂ ಒಳಗೂ ದುಡಿಯುವ ಮಹಿಳೆಗೆ ಸಹಜವಾಗಿ ಒತ್ತಡ ಆತಂಕ ಹೆಚ್ಚಾಗಿರುತ್ತದೆ. ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕಾದುದು ಅಗತ್ಯ.
ಮಹಿಳೆಯು ತನ್ನ ಕುಟುಂಬದ ಎಲ್ಲಾ ಸದಸ್ಯರಿಗೂ ಅವರವರ ರುಚಿಗೆ ತಕ್ಕಂತೆ ಅಡುಗೆ ಮಾಡಿ ಬಡಿಸುತ್ತಾಳೆ. ಊಟದಲ್ಲಿ ಕೆಲವರಿಗೆ ಖಾರ, ಕೆಲವರಿಗೆ ಸಿಹಿ, ಮಕ್ಕಳಿಗೆ ಸಪ್ಪೆ ಹೀಗೆ ಎಲ್ಲರೂ ಇಷ್ಟಪಡುವಂತೆ ಅಡುಗೆಯನ್ನು ಮಾಡುತ್ತಾ ತನ್ನ ಇಷ್ಟವನ್ನೇ ಮರೆತಿರುತ್ತಾಳೆ. ಎಲ್ಲರಿಗೂ ಪೌಷ್ಟಿಕಾಂಶವುಳ್ಳ ಆಹಾರವನ್ನು ತಯಾರಿಸಿ ಕೊಟ್ಟು, ತಾನು ಮಾತ್ರ ಉಳಿದಿರುವ ಆಹಾರವನ್ನು ಸೇವಿಸಿ ಸುಮ್ಮನಾಗುತ್ತಾಳೆ. ಆಕೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ.
ಮಹಿಳೆಗೆ ಆರೋಗ್ಯದ ಅರಿವು
ಮಹಿಳೆಯರಿಗೆ ಆರೋಗ್ಯದ ಬಗ್ಗೆ ಅರಿವು ಇರುವುದು ಅವಶ್ಯಕವಾಗಿದೆ. ಬಹಳಷ್ಟು ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಆರೈಕೆಯನ್ನು ಮಾಡುತ್ತಾ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ.
ಸಾಮಾನ್ಯವಾಗಿ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಕಾಲಿಟ್ಟ ಸಂದರ್ಭದಲ್ಲಿ ಹಾರ್ಮೋನ್ ಗಳ ವ್ಯತ್ಯಯದಿಂದಾಗಿ ಅವರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಅವರು ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥವನ್ನು ಸೇವಿಸಿದರೆ ಈ ಬದಲಾವಣೆಯನ್ನು ಎದುರಿಸುವಲ್ಲಿ ಶಕ್ತರಾಗುತ್ತಾರೆ. ಅಪೌಷ್ಟಿಕತೆಯಿಂದಾಗಿ ಮಹಿಳೆಯರು ಕಡಿಮೆ ತೂಕದ ಸಮಸ್ಯೆ, ಅಧಿಕ ತೂಕದ ಸಮಸ್ಯೆ ಹಾಗೂ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಮಹಿಳೆಯರ ನಿಯಮಿತ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ.
ಮಹಿಳೆಯರು ಕೆಲಸ ಹಾಗೂ ಇತರ ಜವಾಬ್ದಾರಿಗಳ ಗುಂಗಿನಿಂದಾಗಿ ತಮ್ಮ ನಿತ್ಯದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸುವುದಿಲ್ಲ. ಅದು ನಿಧಾನವಾಗಿ ಅಸಿಡಿಟಿ, ಹೊಟ್ಟೆ ಉಬ್ಬರ ಇನ್ನಿತರ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಹಾಗಾಗಿ ಮಹಿಳೆಯರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ನಿದ್ರೆಯು ಕೂಡ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಮಹಿಳೆಯರು ಸೂಕ್ತ ಸಮಯಕ್ಕೆ ಮಲಗಿ, ಸೂಕ್ತ ಸಮಯಕ್ಕೆ ಏಳುವುದು ಉತ್ತಮ.

ಮುಟ್ಟಿನ ಸಮಯದ ಸಮಸ್ಯೆಗಳು
ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಹಾರ್ಮೋನ್ ಗಳ ಸಮಸ್ಯೆಯಿಂದಾಗಿ ಖಿನ್ನತೆ, ಆಸ್ಟಿಯೋಪೊರೋಸಿಸ್, ನಿದ್ರಾಹೀನತೆ, ಸುಸ್ತು, ಹಿಮೋಗ್ಲೋಬಿನ್ ಕೊರತೆ ಹೀಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಉತ್ತಮ ಪೌಷ್ಟಿಕ ಆಹಾರ, ಹಾಲು, ಹಣ್ಣಿನ ಜ್ಯೂಸ್, ವಿಟಮಿನ್, ಕ್ಯಾಲ್ಶಿಯಂ ಹಾಗೂ ಉತ್ತಮ ನಾರಿನಂಶ ಇರುವ ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಸೇವಿಸಬೇಕು. ಮುಂಜಾನೆ ಅಥವಾ ಸಂಜೆ ಮಹಿಳೆಯರು ನಿಯಮಿತವಾಗಿ ವ್ಯಾಯಾಮ, ನಡಿಗೆ, ಯೋಗ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರುತ್ತದೆ.

ಗರ್ಭಾವಸ್ಥೆಯಲ್ಲಿ ಆರೋಗ್ಯದ ಕಾಳಜಿ
ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರು ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಮತ್ತು ವಿಶ್ರಾಂತಿಯನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು. ಇಲ್ಲವಾದರೆ ರಕ್ತಹೀನತೆಯಂತಹ ಸಮಸ್ಯೆ ಉಂಟಾಗಿ ತನ್ನ ಒಡಲಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಸವದ ನಂತರ ಮಹಿಳೆಯರನ್ನು ಬಹಳ ಮುತುವರ್ಜಿಯಿಂದ ನೋಡಿಕೊಳ್ಳಬೇಕು. ಆ ಸಮಯದಲ್ಲಿ ಮಹಿಳೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಶಕ್ತಳಾಗಿರುತ್ತಾಳೆ.
ಹಾಗಾಗಿ ಅವಳಿಗೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡುವುದರ ಜೊತೆಗೆ, ಪ್ರೀತಿ ಅಕ್ಕರೆಯಿಂದ ಅವಳನ್ನು ಆರೈಕೆ ಮಾಡಬೇಕು. ಇಲ್ಲವಾದರೆ ಅವಳು ಖಿನ್ನತೆಗೆ ಜಾರುವ ಸಂಭವ ಹೆಚ್ಚಾಗಿರುತ್ತದೆ.

40+ ನಂತರ ಮುಂದೇನು….?
40 ವರ್ಷದ ನಂತರ ಋತುಬಂಧಕ್ಕೆ ಒಳಗಾದ ಮಹಿಳೆಯರು ಹೆಚ್ಚು ಕ್ಯಾಲ್ಶಿಯಂ ಮತ್ತು ವಿಟಮಿನ್ ಇರುವ ಆಹಾರವನ್ನು ಸೇವಿಸಬೇಕು. ಋತುಸ್ರಾವದ ನಂತರ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಹಾರ್ಮೋನ್ ಗಳ ಸ್ರವಿಸುವಿಕೆ ಕಡಿಮೆಯಾಗಿ ಮೂಳೆ ಸಮಸ್ಯೆ, ಸ್ತನ ಕ್ಯಾನ್ಸರ್, ಗರ್ಭಕೋಶ ಮತ್ತು ಗರ್ಭಕಂಠದ ಕ್ಯಾನ್ಸರ್, ರಕ್ತದೊತ್ತಡ ಕಾಣಿಸಿಕೊಳ್ಳಬಹುದು. ಆದ್ದರಿಂದ ಎಲ್ಲಾ 40 ವರ್ಷ ಮೇಲ್ಪಟ್ಟ ಮಹಿಳೆಯರು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಇವುಗಳಿಗೆ ಸಂಬಂಧಿಸಿದ ತಪಾಸಣೆಯನ್ನು ತಪ್ಪದೆ ಮಾಡಿಸಿಕೊಳ್ಳಬೇಕು.
ಕನ್ನಡ ನಾಡಿನ ಹಿರಿಯ ಗಣ್ಯರಲ್ಲಿ ಒಬ್ಬರಾದ ಹೆಮ್ಮೆಯ ಸುಧಾ ಮೂರ್ತಿ, ಇತ್ತೀಚೆಗೆ ರಾಜ್ಯಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡುತ್ತಾ, ಮಹಿಳೆಯರ ಆರೋಗ್ಯ ಮತ್ತು ಅದರ ಮಹತ್ವ ಇದರ ಬಗ್ಗೆ ಪ್ರಸ್ತಾಪಿಸಿ ದೀರ್ಘಾವಧಿಯಲ್ಲಿ ಮಹಿಳೆಯರನ್ನು ಕಾಡುತ್ತಿರುವ ಸರ್ವೈಕಲ್ ಕ್ಯಾನ್ಸರ್ ನ್ನು ತಡೆಗಟ್ಟಲು 9-14 ವರ್ಷದ ಹೆಣ್ಣುಮಕ್ಕಳಿಗೆ ಕೊಡಬಹುದಾದ ಲಸಿಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರ ಬಗ್ಗೆ ಸರ್ಕಾರದ ಗಮನ ಸೆಳೆದು ಮಹಿಳೆಯರ ಆರೋಗ್ಯ ಹಾಗೂ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಅವರ ಭಾಷಣ ಹಾಗೂ ಸಾಮಾಜಿಕ ಕಳಕಳಿ ಇಲ್ಲಿ ಸಮಯೋಚಿತವಾಗಿದೆ.
ಸುಧಾ ಮೂರ್ತಿಯಂತಹ ಮೇರು ಚೇತನರು ರಾಜ್ಯಸಭೆಯಲ್ಲಿ ಇರುವುದು ಸಭೆಯ ಶೋಭೆಯನ್ನೂ ಹೆಚ್ಚಿಸಿದೆಯಲ್ಲದೆ, ಸಾಮಾಜಿಕವಾಗಿ ಸಕ್ರಿಯವಾಗಿರುವ ಸುಧಾ ಅಮ್ಮನವರ ಅನುಭವ ಮಹಿಳಾ ಆರೋಗ್ಯದಂತಹ ಮುಖ್ಯ ವಿಚಾರಕ್ಕೆ ಆರೋಗ್ಯ ಇಲಾಖೆಯನ್ನು ಕ್ರಿಯಾಶೀಲಗೊಳಿಸುವ ಟಾನಿಕ್ ಆಗಲಿದೆ.

ಸಕಾಲಿಕ ಎಚ್ಚರಿಕೆ
ಇದೆಲ್ಲದರ ಜೊತೆಗೆ ಮಧುಮೇಹಿಗಳು ಕಾಲಕಾಲಕ್ಕೆ ರಕ್ತ ಪರೀಕ್ಷೆ, ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸುವುದು ಉತ್ತಮ. ಈ ರೀತಿಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಮುಂದೆ ಎದುರಾಗುವ ದೊಡ್ಡ ಸಮಸ್ಯೆಗಳನ್ನು ಇಂದೇ ತಡೆಗಟ್ಟಲು ಸಹಾಯವಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ನಂತಹ ಸಮಸ್ಯೆಗಳು ಪ್ರಾಥಮಿಕ ಹಂತದಲ್ಲೇ ತಿಳಿದರೆ ಔಷಧೋಪಚಾರದ ಮೂಲಕ ನಿವಾರಿಸಲು ಸಹಾಯವಾಗುತ್ತದೆ.
ಉತ್ತಮ ಆಹಾರ ಸೇವನೆ, ವ್ಯಾಯಾಮ, ಹಿತವಾದ ಸಂಗೀತ, ಯೋಗ, ಸದ್ವಿಚಾರದ ಚಿಂತನೆ, ಭಗವಂತನ ಜ್ಞಾನ, ಭಜನೆಗಳಿಂದ ಒತ್ತಡಗಳನ್ನು ಕಡಿಮೆ ಮಾಡಿಕೊಂಡು ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಂಡರೆ, ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಂಡು ಗುಳಿಗೆ ಮಾತ್ರೆಗಳನ್ನು ನುಂಗುವುದು ತಪ್ಪುತ್ತದೆ. ಬದುಕನ್ನು ನೆಮ್ಮದಿಯಿಂದ ಸಾಗಿಸಲು ಅನುವಾಗುತ್ತದೆ.
ಆರೋಗ್ಯಂ ಪರಮಂ ಭಾಗ್ಯಂ,
ಸಂತೋಷಂ ಪರಮಂ ಸುಖಂ
ಅನ್ಯಾಯ ವೃತ್ತಿತಃ ನಾಶಃ, ಧರ್ಮೇಣಾಯುರ್ನ ಬಧ್ಯತೇ!
– ಚೇತನಾ ಭಾರ್ಗವ್





