ರಾಘವೇಂದ್ರ ಅಡಿಗ ಎಚ್ಚೆನ್.

ನಟನಾಗಿ ಹೆಸರಾಗಿದ್ದ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಎಂಬ ಸಿನಿಮಾ ನಿರ್ದೇಶನ ಮಾಡುವ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದರು. ಅದಾದ ನಂತರ ಬಂದಿದ್ದ ಎರಡನೇ ಆವೃತ್ತಿಯೂ ಗೆದ್ದಿತ್ತು. ಆ ಗೆಲುವಿನ ಪ್ರಭೆಯಲ್ಲಿ ಲವ್ ಮಾಕ್ಟೇಲ್ ೩ ಚಿತ್ರಕ್ಕೆ ಚಾಲನೆ ನೀಡಿದ್ದ ಡಾರ್ಲಿಂಗ್ ಕೃಷ್ಣ, ಇತ್ತೀಚೆಗಷ್ಟೇ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದರು.
ಈ ಮೂಲಕ ಮೂರನೇ ಆವೃತ್ತಿ ನವಿರಾದ ಕುತೂಹಲವೊಂದಕ್ಕೆ ಚಾಲನೆ ನೀಡಿತ್ತು. ಇದೀಗ ಹೊಸ ವರ್ಷದ ಉಡುಗೊರೆ ಎಂಬಂತೆ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಡಾಲಿಂಗ್ ಕೃಷ್ಣ ಘೋಷಿಸಿದ್ದಾರೆ. ಇದರೊಂದಿಗೆ ಲವ್ ಮಾಕ್ಟೇಲ್ 3 ಪ್ರೇಕ್ಷಕರ ಮುಂದೆ ಬರಲು ಇದೇ ಏಪ್ರಿಲ್ 10ರಂದು ಬರುವ ಸೂಚನೆ ನೀಡಿದ್ದಾರೆ.
2020ರಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿದ್ದ ಲವ್ ಮಾಕ್ಟೇಲ್ ಚಿತ್ರ ತೆರೆಗಂಡಿತ್ತು. ನವಿರು ಪ್ರೇಮದೊಂದಿಗೆ ಹೊಸೆದುಕೊಂಡಿದ್ದ ಸೂಕ್ಷ್ಮ ಕಥನದ ಮೂಲಕ ಗೆದ್ದ ನಂತರ, ಲವ್ ಮಾಕ್ಟೇಲ್2 ಚಿತ್ರವನ್ನು ಕೃಷ್ಣ ರೂಪಿಸಿದ್ದರು. ಇದೀಗ ತೆರೆಗಾಣಲು ಸಜ್ಜಾಗಿರುವ ಲವ್ ಮಾಕ್ಟೇಲ್೩ ಈ ಹಿಂದಿನ ಎರಡು ಆವೃತ್ತಿಗಳಿಗಿಂತಲೂ ಭಿನ್ನವಾಗಿರಲಿದೆ ಎಂಬ ವಿಚಾರವನ್ನಷ್ಟೇ ಕೃಷ್ಣ ಹಂಚಿಕೊಂಡಿದ್ದಾರೆ.
ಕಥೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ಲವ್ ಮಾಕ್ಟೇಲ್೩ ಹೊಸ ಅನುಭೂತಿ ಕೊಡಲಿದೆ ಎಂಬ ಭರವಸೆ ಕೃಷ್ಣ ಅವರದ್ದು. ಅಂದಹಾಗೆ, ಈ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲ ಈ ಚಿತ್ರಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ,  ಮುಂತಾದವರ ತಾರಾಗಣವಿದೆ. ಇದೀಗ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡಿರುವ ಚಿತ್ರತಂಡ, ಬೇಸಿಗೆ ರಜೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ ೧೦ರಂದು ಪ್ರೇಕ್ಷಕರ ಮುಂದೆ ಬರಲು ತೀರ್ಮಾನಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ