ರಾಘವೇಂದ್ರ ಅಡಿಗ ಎಚ್ಚೆನ್.

2026ರ ಬಹುನಿರೀಕ್ಷಿತ ‘ಟಾಕ್ಸಿಕ್​​: ಎ ಫೇರಿಟೇಲ್​ ಫಾರ್​ ಗ್ರೋನ್​​ಅಪ್ಸ್’ ಚಿತ್ರದ ಟೀಸರ್​​​ ನಾಯಕ ನಟ ರಾಕಿಂಗ್​ ಸ್ಟಾರ್​ ಯಶ್​ ಜನ್ಮದಿನದಂದು ಅದ್ಧೂರಿಯಾಗಿ ಅನಾವರಣಗೊಂಡಿತು. 24 ಗಂಟೆಯಲ್ಲಿ ಬರೋಬ್ಬರಿ 200 ಮಿಲಿಯನ್​ ವೀಕ್ಷಣೆಯಾದ ಟೀಸರ್​ ವಿರುದ್ಧ ಇದೀಗ ದೂರು ದಾಖಲಾಗಿದೆ.

ಸ್ಯಾಂಡಲ್​ವುಡ್​ ರಾಕಿಂಗ್ ಸ್ಟಾರ್ ಖ್ಯಾತಿಯ ಯಶ್ ಮುಖ್ಯಭೂಮಿಕೆಯ ಹಾಗೂ ಮಲಯಾಳಂ ಮಹಿಳಾ ನಿರ್ದೇಶಕಿ ಗೀತು ಮೋಹನ್​​ದಾಸ್ ನಿರ್ದೇಶನದ ‘ಟಾಕ್ಸಿಕ್’ ಟೀಸರ್ ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಸದ್ಯ ರಿಲೀಸ್ ಆಗಿರುವ ಟೀಸರ್​​ನಲ್ಲಿರುವ ಬೋಲ್ಡ್​​ ದೃಶ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಟುಂಬದ ಜೊತೆ ಕುಳಿತು ವೀಕ್ಷಿಸಲು ಸಾಧ್ಯವಿಲ್ಲ ಎಂಬ ಕಾಮೆಂಟ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ವ್ಯಕ್ತವಾಗಿವೆ.

toxic-1-768x403

ಕೆಲ ದಿನಗಳ ಹಿಂದೆ ವಕೀಲರೋಬ್ಬರು ಬೋಲ್ಡ್​​ ಸೀನ್ಸ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ, ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದೆ. ಈ ಚಿತ್ರದಲ್ಲಿ ಬರುವ ಅಶ್ಲೀಲ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆಸುವಂತೆ ಒತ್ತಾಯಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಮಾತನಾಡಿ, ಈ ಟೀಸರ್​ನಲ್ಲಿರುವ ಅಶ್ಲೀಲ ಹಾಗೂ ಪ್ರೌಢ ದೃಶ್ಯಗಳು ಹೆಂಗಸರು ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಯಾವುದೇ ವಯಸ್ಸಿನ ಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೇ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿದ್ದು, ಕನ್ನಡದ ಐತಿಹಾಸಿಕ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ತೀವ್ರ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Toxic-Teaser

ಸಮಾಜದ ಮೇಲೆ ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ಇದು ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತಿದೆ. ರಾಜ್ಯ ಮಹಿಳಾ ಆಯೋಗವು ಈ ಕೂಡಲೇ ಮಧ್ಯ ಪ್ರವೇಶಿಸಬೇಕು ಹಾಗೂ ಈ ಟೀಸರ್ ಅನ್ನು ಕೂಡಲೇ ರದ್ದುಗೊಳಿಸಲು ಮತ್ತು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ರಾಜ್ಯ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ನಮ್ಮ ನಾಡಿನ ಮಹಿಳೆಯರ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಂವಿಧಾನಿಕ ಕರ್ತವ್ಯಕ್ಕೆ ಬದ್ಧವಾಗಿರುವ ಮಹಿಳಾ ಆಯೋಗವು ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಸರ್ಕಾರವು ಸಹ ಈ ಬಗ್ಗೆ ಕಠಿಣವಾದಂತಹ ಕಾನೂನುಗಳನ್ನು ರೂಪಿಸಬೇಕು ಎಂದು ಉಷಾ ಮೋಹನ್ ಆಗ್ರಹಿಸಿದರು.

ರಾಕಿಂಗ್​ ಸ್ಟಾರ್​ನ 40ನೇ ಹುಟ್ಟುಹಬ್ಬದ ಅಂಗವಾಗಿ ಅನಾವರಣಗೊಂಡ ಗ್ಲಿಂಪ್ಸ್​​​ನಲ್ಲಿ ಯಶ್ ರಾಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬರ್ತ್​​ಡೇ ಸ್ಪೆಷಲ್​ ಆಗಿ ರಿಲೀಸ್​ ಆದ್ರಿಂದ ಕೇವಲ ನಾಯಕ ನಟನನ್ನು ಪರಿಚಯಿಸಲಾಗಿದೆ. ಯಶ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿಯ ಹೆಸರು (Beatriz Taufenbach). ಮೂಲತಃ ಬ್ರೆಜಿಲ್ ದೇಶದ ನಟಿ ಮತ್ತು ಮಾಡೆಲ್. ಉಳಿದಂತೆ, ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರ, ರುಕ್ಮಿಣಿ ವಸಂತ್‌, ತಾರಾ ಸುತಾರಿಯಾ, ಹುಮಾ ಖುರೇಶಿ ನಟಿಸಿದ್ದು, ಪೋಸ್ಟರ್ಸ್ ಅನಾವರಣಗೊಂಡಿದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ