– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಸೂರ್ಯ
ನಿರ್ಮಾಣ: ಬಸವರಾಜ ಬೆಣ್ಣೆ, ರವಿ ಬೆಣ್ಣೆ
ನಿರ್ದೇಶನ: ಸಾಗರ್
ತಾರಾಂಗಣ: ಪ್ರಶಾಂತ್, ಹರ್ಷಿತಾ, ಪ್ರಮೋದ್ ಶೆಟ್ಟಿ, ಶ್ರುತಿ, ಆರ್ಮುಗಂ ರವಿಶಂಕರ್, ಟಿ.ಎಸ್. ನಾಗಾಭರಣ ಮುಂತಾದವರು
ರೇಟಿಂಗ್: 3/5
ಉತ್ತರ ಕರ್ನಾಟಕ ಭಾಗದ ಅದರಲ್ಲೂ ಮುಖ್ಯವಾಗಿ ಬೆಳಗಾವಿ ಮೂಲದ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ನಿರ್ಮಾಣ ಮಾಡಿದ “ಸೂರ್ಯ” ಸಿನಿಮಾ ಇಂದು ( ಜ.೧೬) ತೆರೆಗೆ ಬಂದಿದೆ.ನಂದಿ ಸಿನಿಮಾಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಮಾಸ್ ಲವ್ ಸ್ಟೋರಿ ಒಳಗೊಂಡ ಚಿತ್ರ ಇದಾಗಿದೆ. ಸ್ಲಂನಲ್ಲಿ ಬೆಳೆದ ಯುವಕನೊಬ್ಬ ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಏನೆಲ್ಲ ಹೋರಾಟ, ಸಾಹಸ ಮಾಡುತ್ತಾನೆ ಎಂಬುದೇ ಒನ್ ಲೈನ್ ಸ್ಟೋರಿ. ಹಾಗಾದ್ರೆ ಈ ಸಿನಿಮಾ ಹೇಗಿದೆ ತಿಳಿಯಲು ಇಲ್ಲಿ ಓದಿ…
ಸೂರ್ಯ (ಪ್ರಶಾಂತ್) ಒಬ್ಬ ಅನಾಥ, ಸ್ಲಮ್ ನಲ್ಲಿ ಬೆಳೆದರೂ ಕಾಲೇಜಿನಲ್ಲಿ ಟಾಪರ್. ಅವನಿಗೆ ಭೂಮಿ (ಹರ್ಷಿತಾ) ಜೊತೆ ಲವ್ ಆಗುತ್ತದೆ. ಆ ಪ್ರೀತಿ ಪ್ರಯಾಣ ಸೂರ್ಯನ ಜೀವನಕ್ಕೆ ಮಾರಿ ( ರವಿಶಂಕರ್) ಪ್ರವೇಶ ಆಗುವ ಹಾಗೆ ಮಾಡುತ್ತದೆ. ಮುಂದೆ ಸೂರ್ಯ ಹೇಗೆ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾನೆ ಎಂದು ತಿಳಿಯಲು ನೀವು ಚಿತ್ರಮಂದಿರಗಳಲ್ಲಿ ” ಸೂರ್ಯ” ನನ್ನ ನೋಡಬೇಕಿದೆ.

ನಿರ್ದೇಶಕ ಸಾಗರ್ ಪಾಲಿಗೆ ಇದು ಚೊಚ್ಚಲ ಚಿತ್ರ. ಆದರೂ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ಕಥೆ ಬಹುತೇಕ ಹಳೆಯ ಶೈಲಿಯಲ್ಲಿ ಇದ್ದು ಹೊಸತನದ ಕೊರತೆ ಇದೆ. ಹಾಡುಗಳ ಪೈಕಿ “ಕೆಂಪಾನ ಗಲ್ಲದ ಹುಡುಗಿ” ಹೊರತು ಪಡಿಸಿದರೆ ಯಾವುದು ಮನಸ್ಸಿಗೆ ನಿಲುಕುವುದಿಲ್ಲ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಸಾಧಾರಣ ಆಗಿದೆ. ಚಿತ್ರದ ಆಕ್ಷನ್ ದೃಶ್ಯಗಳಲ್ಲಿ ನಾಯಕ ಉತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆ ಹುಟ್ಟಿಸಿದ್ದಾರೆ. ನಾಯಕಿ ಹರ್ಷಿಕಾ ತಮಗೆ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಇನ್ನೊಬ್ಬ ನಾಯಕಿ ನಟಿ ಕೆಲವು ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಮಾರಿ ಪಾತ್ರದಲ್ಲಿ ಆರ್ಮುಗಂ ರವಿಶಂಕರ್ ಅಬ್ಬರಿಸಿದ್ದಾರೆ. ಇಡೀ ಸಿನಿಮಾ ನಾಯಕನ ಹೊರತಾಗಿ ಇವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ.
ಇನ್ನು ಡಾಕ್ಟರ್ ಮಮತ ಪಾತ್ರದಲ್ಲಿ ಶ್ರುತಿ ನಾಜೂಕಿನ ಜೊತೆ ಕೆಲವು ದೃಶ್ಯದಲ್ಲಿ ರೆಬೆಲ್ ಆಗಿ ಸಹ ಅಭಿನಯಿಸುವ ಮೂಲಕ ತಮ್ಮ ಅನುಭವೀ ನಟನೆ ಪ್ರದರ್ಶಿಸಿದ್ದಾರೆ. ಈ ಇಬ್ಬರ ಜೊತೆ ವಾಂಡ್ ಬಸು ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಪೋಲೀಸ್ ಅಧಿಕಾರಿಯಾಗಿ ಟಿ.ಎಸ್. ನಾಗಾಭರಣ ಸಹ ಚಿತ್ರಕಥೆಗೆ ಪೂರಕ ಅಭಿನಯ ಕೊಟ್ಟಿದ್ದಾರೆ.





