ಸರಸ್ವತಿ *

ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ – ಮೇಘ ಶೆಟ್ಟಿ ನಾಯಕ – ನಾಯಕಿಯಾಗಿ ಅಭಿನಯಿಸಿರುವ “ಗ್ರಾಮಾಯಣ” ಚಿತ್ರದ “ಬೆಂಕಿ” ಹಾಡನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅನಾವರಣ ಮಾಡಿದರು. ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲೆಂದು ಶಿವಣ್ಣ ಹಾರೈಸಿದರು. ಗೀತಾ ಶಿವರಾಜಕುಮಾರ್ ಅವರು ಉಪಸ್ಥಿತರಿದ್ದರು. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರುವ ಈ ಹಾಡನ್ನು ಕಪಿಲ ಕಪಿಲನ್ ಹಾಗೂ ಐರಾ ಉಡುಪಿ ಹಾಡಿದ್ದಾರೆ. ಇದು ಶಿವರಾಜಕುಮಾರ್ ಅಭಿನಯಿಸಿದ್ದ “ಮನ ಮೆಚ್ಚಿದ ಹುಡುಗಿ” ಚಿತ್ರದ “ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೇನು” ಹಾಡಿನ ರೀಮಿಕ್ಸ್ ಆಗಿದೆ. ಉಪೇಂದ್ರ ಕುಮಾರ್ ಸಂಗೀತ ಸಂಯೋಜಿಸಿದ್ದ ಈ ಹಾಡನ್ನು ಚಿ.ಉದಯಶಂಕರ್ ಬರೆದಿದ್ದರು. ಎಸ್.ಪಿ.ಬಿ ಹಾಗೂ ಎಸ್ ಜಾನಕಿ ಹಾಡಿದ್ದರು. ಈಗ ಇದೇ ಹಾಡನ್ನು “ಗ್ರಾಮಾಯಣ” ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಹಾಡಿನ ಅನಾವರಣದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಲಹರಿ ಸಂಸ್ಥೆಯ ಮುಖ್ಯಸ್ಥ ಮನೋಹರ್ ನಾಯ್ಡು ಅವರ ಉಪಸ್ಥಿತಿಯಲ್ಲಿ ಮಾತನಾಡಿದ ನಿರ್ಮಾಪಕ ಲಹರಿ ವೇಲು, “ಗ್ರಾಮಾಯಣ” ನಮ್ಮ ಲಹರಿ ಸಂಸ್ಥೆ ನಿರ್ಮಾಣದ ಒಂಭತ್ತನೇ ಚಿತ್ರ. ದೇವನೂರು ಚಂದ್ರು ಒಂದೊಳ್ಳೆ ಗ್ರಾಮೀಣ ಸೊಗಡಿನ‌ ಚಿತ್ರ ಮಾಡಿಕೊಂಡಿದ್ದಾರೆ. ವಿನಯ್ ರಾಜಕುಮಾರ್, ಮೇಘ ಶೆಟ್ಟಿ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. “ಮನ ಮೆಚ್ಚಿದ ಹುಡುಗಿ” ಚಿತ್ರದ ಮೂಲ ಹಾಡು ನಮ್ಮ ಲಹರಿ ಸಂಸ್ಥೆಯಿಂದ ಬಿಡುಗಡೆಯಾಗಿತ್ತು. ಈಗ ರೀಮಿಕ್ಸ್ ಹಾಡು ಕೂಡ ನಮ್ಮ ಸಂಸ್ಥೆಯಿಂದಲೇ ಬಿಡುಗಡೆಯಾಗುತ್ತಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದ ಎಂದರು.

gramayana 1

ಕಾರಣಾಂತರದಿಂದ ನಿಂತು‌ ಹೋಗಿದ್ದ “ಗ್ರಾಮಾಯಣ” ವನ್ನು ನಿರ್ಮಾಣ ಮಾಡಿ ಫೆಬ್ರವರಿಯಲ್ಲಿ ಅದ್ದೂರಿ ಬಿಡುಗಡೆ ಮಾಡಲು ಮುಂದಾಗಿರುವ ನಿರ್ಮಾಣ ಸಂಸ್ಥೆಯಾದ ಲಹರಿ ಫಿಲಂಸ್ ಗೆ ಅನಂತ ಧನ್ಯವಾದ. ಕೆ.ಪಿ.ಶ್ರೀಕಾಂತ್ ಅವರಿಗೂ ಆಬಾರಿ. ಇನ್ನೂ ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಈವರೆಗೂ ನೀವು ನೋಡಿರದ ವಿನಯ್ ರಾಜಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಮೇಘಶೆಟ್ಟಿ, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ, ಸೀತಾ ಕೋಟೆ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸಿದ್ದಾರೆ. ಸಂತೋಷ್ ರೈ ಪಾತಾಜೆ ಅವರಂತೂ ನಿಗದಿತ ಸಮಯಕ್ಕೂ ಮುಂಚೆಯೇ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರಂತೂ ಇಂದು ಬಿಡುಗಡೆಯಾಗಿರುವ “ಬೆಂಕಿ” ಹಾಡು ಸೇರಿದಂತೆ ಸುಮಧುರ ಹಾಡುಗಳನ್ನು ನೀಡಿದ್ದಾರೆ. ಒಟ್ಟಾರೆ ಇಡೀ ತಂಡದ ಶ್ರಮದಿಂದ “ಗ್ರಾಮಾಯಣ” ಒಂದೊಳ್ಳೆ ಚಿತ್ರವಾಗಿ ನಿಮ್ಮ ಮುಂದೆ ಬರಲಿದೆ ಎಂದರು ನಿರ್ದೇಶಕ ದೇವನೂರು ಚಂದ್ರು.

ಲಹರಿ ಸಂಸ್ಥೆಯ 50ನೇ ವರ್ಷದ ಸಂದರ್ಭದಲ್ಲಿ “ಗ್ರಾಮಾಯಣ” ಚಿತ್ರ ಬರುತ್ತಿರುವುದು ತುಂಬಾ ಸಂತೋಷವಾಗಿದೆ. ಎಲ್ಲರೂ ನನ್ನ ನಟನೆ ಚೆನ್ನಾಗಿದೆ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕರು. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಸಿನಿಮಾದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಪೂರ್ಣಚಂದ್ರ ತೇಜಸ್ವಿಯವರ ಹಾಡುಗಳೇ ‘ಗ್ರಾಮಾಯಣ” ಏನೆಂದು ಹೇಳಲಿದೆ. ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಸಿಕ್ತ್ ಸೆನ್ಸ್ ಸೀನ ನನ್ನ ಪಾತ್ರದ ಹೆಸರು. ಇನ್ನೂ, ಇಂದು ಬಿಡುಗಡೆಯಾದ “ಬೆಂಕಿ” ಹಾಡನ್ನು ಬಿಡುಗಡೆ ಮಾಡಿಕೊಟ್ಟ ನಾನು ಹೆಚ್ಚಾಗಿ ಪ್ರೀತಿಸುವ ಹಾಗೂ ಗೌರವಿಸುವ ದೊಡ್ಡಪ್ಪ, ದೊಡ್ಡಮ್ಮ ಅವರಿಗೆ ಧನ್ಯವಾದ ಎಂದು ನಾಯಕ ವಿನಯ್ ರಾಜಕುಮಾರ್ ಹೇಳಿದರು.

ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಕುಸುಮ ನನ್ನ ಪಾತ್ರದ ಹೆಸರು. ಯಾವುದಕ್ಕೂ ಹೆದರದ ಗಂಡು ಹುಡುಗನ ಹಾಗೆ ವರ್ತಿಸುವ ಹಠಮಾರಿ ಹೆಣ್ಣಿನ ಪಾತ್ರ ನನ್ನದು ಎಂದು ನಾಯಕಿ ಮೇಘ ಶೆಟ್ಟಿ ತಿಳಿಸಿದರು.

ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹಾಗೂ ಚಿತ್ರದಲ್ಲಿ ನಟಿಸಿರುವ ಅರುಣ್ ಸಾಗರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದ ಚಿತ್ರತಂಡದ ಸದಸ್ಯರು “ಗ್ರಾಮಾಯಣ”ದ ಬಗ್ಗೆ ಮಾತನಾಡಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ