ಹಬ್ಬ ಅಂದ್ರೆ ಎಲ್ಲೆಲ್ಲೂ ಉಲ್ಲಾಸ, ಉತ್ಸಾಹ, ಸಡಗರ, ಸಂಭ್ರಮಗಳ ಆಚರಣೆ! ಒಡಹುಟ್ಟಿದವರು, ಆಪ್ತರು, ಇಷ್ಟರು, ಮಿತ್ರರು ಸೇರಿ ಆಚರಿಸುವ ಹಬ್ಬಗಳ ಸಂದರ್ಭದಲ್ಲಿ ಎಲ್ಲರೂ ಮನ ತೆರೆದು ಸಂತೋಷ ಹಂಚಿಕೊಳ್ಳೋಣ……!

ಅಂದು ಮೀರಾ ಲೈಟ್‌ ಬ್ಲೂ ಬಣ್ಣದ ಬ್ಯೂಟಿಫುಲ್ ಡಿಸೈನರ್‌ ಸೂಟ್‌ ಧರಿಸಿದ್ದಳು, ಹಲವಾರು ಅಂಗಡಿಗಳನ್ನು ಹತ್ತಿಳಿದು ಕೊನೆಗೂ ತನಗೆ ಅತಿ ಆಪ್ತವಾದ ಈ ಡ್ರೆಸ್‌ ಆರಿಸಿದ್ದಳು. ಇದಕ್ಕಾಗಿ ಅವಳ ಬಜೆಟ್‌ ಕೇವಲ 2 ಸಾವಿರ ಆಗಿತ್ತು. ಹೀಗಾಗಿ ಅವಳು ಬಹಳ ಚೌಕಾಸಿ ಮಾಡಿ, ಕೊನೆಗೂ 1800ಕ್ಕೆ ಆ ಡ್ರೆಸ್‌ ಕೊಂಡಿದ್ದಳು. ಉಳಿದ ಹಣದಲ್ಲಿ ಮ್ಯಾಚಿಂಗ್‌ ಸ್ಯಾಂಡಲ್ಸ್ ಖರೀದಿಸಿದಳು.

ಅವಳು ಇದನ್ನೆಲ್ಲ ಧರಿಸಿ, ತನ್ನ ಗೆಳತಿ ಮಾಲತಿಯ ಮನೆಗೆಂದು ನವರಾತ್ರಿಯ ಗೊಂಬೆ ನೋಡಲೆಂದು ಸಂಭ್ರಮದಿಂದ ಹೊರಟಳು. ಇವಳ ಎದುರು ಅಲ್ಲಿ ಬಂದಿದ್ದ ಉಳಿದ ಗೆಳತಿಯರಾದ ಅನುಪಮಾ, ವಿಶಾಖಾರ ಕಣ್ಣು ಕೋರೈಸುವ ಗ್ಲಾಮರಸ್‌ ಡ್ರೆಸ್‌ ಇನ್ನಷ್ಟು ಮಿರಿಮಿರಿ ಮಿಂಚುತ್ತಿತ್ತು!

ಅನುಪಮಾ ಬ್ಲ್ಯಾಕ್‌ ಕಲರ್‌ ನ ಸಿಂಗಲ್ ಶೋಲ್ಡರ್ಡ್‌ ಮಿಡಿ ಧರಿಸಿದ್ದರೆ, ಅದರಲ್ಲಿನ ಸಿಲ್ವರ್‌ ಕಸೂತಿ ಕಣ್ಸೆಳೆಯುವಂತಿತ್ತು. ಅತ್ತ ವಿಶಾಖಾ ಗೋಲ್ಡನ್‌ ವರ್ಕ್‌ ನ ಮೆರೂನ್‌ ಬಣ್ಣದ ಡಿಸೈನರ್‌ ಗೌನಿನಲ್ಲಿ ಬಹಳ ಬ್ಯೂಟಿಫುಲ್ ಎನಿಸಿದ್ದಳು. ಅವರ ಉಡುಗೆಗಳನ್ನು ಕಂಡ ಮೀರಾಳಿಗೆ ತನ್ನ ಡ್ರೆಸ್‌ ಬಲು ಸಿಂಪಲ್ ಓಲ್ಡ್ ಫ್ಯಾಷನ್‌ ದು ಎನಿಸಿತು. ಅವಳಿಗೆ ಅವರಿಬ್ಬರ ವೈಭವ ಕಂಡು ಮನದಲ್ಲೇ ಮತ್ಸರ ಮೂಡಿತು. ಅವರಿಬ್ಬರ ಗಂಡಂದಿರು ಶ್ರೀಮಂತ ಮನೆತನಕ್ಕೆ ಸೇರಿದರು. ಅವರ ಬಳಿ ದುಡ್ಡುಕಾಸಿಗೆ ಏನೇನೂ ಕೊರತೆ ಇರಲಿಲ್ಲ. ಅದೆಲ್ಲ ದೌಲತ್ತು ಅವರ ಉಡುಗೆತೊಡಗೆ, ಹಾವಭಾವಗಳಲ್ಲಿ ಇಣುಕುತ್ತಿತ್ತು. ಇದರಿಂದ ಮೀರಾಳ ಮುಖದಲ್ಲಿದ್ದ ಹಬ್ಬದ ಖುಷಿ ಅಲ್ಲೇ ನೆಲಸಮ ಆಯ್ತು. ಅವಳು ಕಾರಣವಿಲ್ಲದೆ ಸಿಡುಕುತ್ತಾ ಅಸಹನೆ ಪ್ರದರ್ಶಿಸುವಂತಾದಳು.

ಶಾಲಿನಿ ಅಂದು ಬೆಳಗ್ಗಿನಿಂದ ನಾದಿನಿ ನಿರ್ಮಲಾಳ ಫೋನ್‌ ಕಾಲ್ ‌ಗಾಗಿ ಕಾಯುತ್ತಿದ್ದಳು. 2 ತಿಂಗಳ ಹಿಂದೆಯೇ ನಿರ್ಮಲಾ ಅತ್ತಿಗೆಗೆ ಫೋನ್‌ ಮಾಡಿ, ತವರಿನ ಮನೆಯವರೆಲ್ಲರೂ ಈ ಸಲದ ಆಯುಧಪೂಜೆ, ವಿಶಯದಶಮಿ ಹಬ್ಬಗಳನ್ನು ತಮ್ಮ ಮನೆಯಲ್ಲೇ ಆಚರಿಸಬೇಕಾಗಿ ಆಹ್ವಾನಿಸಿದ್ದಳು. ಹಾಗಾಗಿ ಈ ಸಲದ ದಸರಾ ಹಬ್ಬ ಬಲು ಗ್ರಾಂಡಾಗಿ ಜರುಗಲಿದೆ ಎಂದು ಶಾಲಿನಿ ಉತ್ಸಾಹದಿಂದ ಕಾಯುತ್ತಿದ್ದಳು. ಶಾಲಿನಿಯ ಗಂಡನಿಗೆ ಇಬ್ಬರು ತಮ್ಮಂದಿರು, ಒಬ್ಬಳೇ ತಂಗಿ ನಿರ್ಮಲಾ. ಹಾಗಾಗಿ ನಿರ್ಮಲಾ ಎಲ್ಲರನ್ನೂ ಬೆಂಗಳೂರಿನ ತಮ್ಮ ಮನೆಗೆ ಬರಲೆಂದು ಬಯಸಿದ್ದಳು. ಶಾಲಿನಿಯ ಮನೆ, ಮೈದುನರದೂ ಕೂಡಿ ಎಲ್ಲರೂ ಮೈಸೂರಲ್ಲೇ ಇದ್ದರು. ಆ ಕುರಿತಾಗಿ ನಿರ್ಮಲಾ ಕಾಲ್ ‌ಮಾಡಿ ಹಬ್ಬಕ್ಕೆ ಬರಲು ವಿಷಯ ಕನ್ಫರ್ಮ್ ಮಾಡಬಹುದು, ವಿಜಯದಶಮಿಗೆ ಕೇವಲ 4 ದಿನ ಮಾತ್ರ ಉಳಿದಿದೆ ಎಂದು ಶಾಲಿನಿ ಕಾಯತೊಡಗಿದಳು.

ಅಂತೂ ಸಂಜೆ ಹೊತ್ತಿಗೆ ನಿರ್ಮಲಾ, ಶಾಲಿನಿಗೆ ಮೆಸೇಜ್‌ ಮಾಡಿ ಹಬ್ಬಕ್ಕೆ ಎಲ್ಲರೂ ಬೆಂಗಳೂರಿಗೆ ಬರಬೇಕೆಂದು ಖಾತ್ರಿಪಡಿಸಿದಳು. ಸರಸ್ವತಿ ಸಪ್ತಮಿ, ದುರ್ಗಾಷ್ಟಮಿ, ಮುಗಿಸಿ ಅಂದು ಸಂಜೆ ಎಲ್ಲರೂ ಬೆಂಗಳೂರಿಗೆ ಹೊರಡುವುದೆಂದು ಶಾಲಿನಿ ತಯಾರಿ ನಡೆಸತೊಡಗಿದಳು. ಅತ್ತಿಗೆಯಾದ ತನಗೆ ನೇರವಾಗಿ ಕಾಲ್ ‌ಮಾಡಿ ಕರೆಯದೆ, ನಾದಿನಿ ಕೇವಲ ಮೆಸೇಜ್‌ ಮಾಡಿದ್ದು ಯಾಕೋ ಶಾಲಿನಿಗೆ ಹೆಚ್ಚಿನ ಇರಿಸುಮುರಿಸು ತರಿಸಿತ್ತು.

ಹಬ್ಬಗಳ ಆನಂದ

ಅಷ್ಟರಲ್ಲಿ ಶಾಲಿನಿಯ ಓರಗಿತ್ತಿ ಲತಾಳ ಕಾಲ್ ‌ಬಂತು. ನಿರ್ಮಲಾ ತಮ್ಮೆಲ್ಲರನ್ನೂ ಹಬ್ಬಕ್ಕೆ ಬೆಂಗಳೂರಿಗೇ ಬರಬೇಕೆಂದು ಒತ್ತಾಯಿಸಿ ಬೆಳಗ್ಗೆ ಕಾಲ್ ‌ಮಾಡಿ ಕರೆದಳೆಂದು ತಿಳಿಸಿದಳು. ತಕ್ಷಣ ಶಾಲಿನಿ ತನ್ನ ಕಿರಿಯ ಓರಗಿತ್ತಿ ಶೀಲಾಳಿಗೆ ಫೋನ್‌ ಮಾಡಿ, ನಾದಿನಿ ನಿರ್ಮಲಾ ಕರೆ ಮಾಡಿದಳೇ ಅಥವಾ ಮೆಸೇಜ್‌ ಮಾಡಿದ್ಧಳೇ ಎಂದು ವಿಚಾರಿಸಿಕೊಂಡಳು. ಶೀಲಾ ಸಹ, ನಿರ್ಮಲಾ ತಮ್ಮನ್ನು ಹಬ್ಬಕ್ಕೆ ಬರಬೇಕೆಂದು ಫೋನ್‌ ಮಾಡಿ ಆಗ್ರಹಿಸಿದ್ದಳು ಎಂದಾಗ ಶಾಲಿನಿಯ ಮುಖದ ಬಣ್ಣ ಇಳಿದು ಬಿಳಚಿಕೊಂಡಿತು! ಹಿರಿಯ ಅತ್ತಿಗೆಯಾದ ತಾನು ಬಡವಿ ಎಂದು ನಿರ್ಮಲಾ ಬೇಕೆಂದೇ ತನ್ನನ್ನು ಕಡೆಗಣಿಸಿ, ಕಿರಿಯ ಅತ್ತಿಗೆಯರನ್ನು ಮಾತ್ರ ಕರೆದಿದ್ದಾಳೆ ಎಂದು ನೊಂದುಕೊಂಡಳು. ಬೇಕೆಂದೇ ಎದ್ದಿರೋ ಮಾತು ಬಿದ್ದಿರಲಿ ಎಂದು ತನಗೊಂದು ಮೆಸೇಜ್‌ ಹಾಕಿದ್ದಾಳೆ ಎಂದುಕೊಂಡಳು. ಏನೇ ಆದರೂ ಹಿರಿಯ ಅಣ್ಣ ಅತ್ತಿಗೆ ಎನಿಸಿಕೊಂಡ ತಾವು, ಬೀಗರ ಮನೆಯಿಂದ ಕರೆ ಬಂದಾಗ ಹೋಗದೇ ಇರಬಾರದು ಎಂಬ ದಾಕ್ಷಿಣ್ಯಕ್ಕಾಗಿ ಪತಿ ಜೊತೆ ಶಾಲಿನಿ ನಾದಿನಿ ಮನೆಗೆ ಹಬ್ಬಕ್ಕೆ ಬಂದಳಾದರೂ ಅಸಮಾಧಾನದಿಂದ ಅವಳು ಹಬ್ಬ ಎಂಜಾಯ್‌ ಮಾಡಲೇ ಇಲ್ಲ. ನಾದಿನಿ ನಿರ್ಮಲಾ ಬಗ್ಗೆ ಅವಳ ಅಸಮಾಧಾನ ಹಾಗೇ ಉಳಿಯಿತು.

ಅಂದು ಆಫೀಸಿನಲ್ಲಿ ಯಾವುದೋ ಪಾರ್ಟಿಯ ನಿಮಿತ್ತ, ಕಾನ್ಫರೆನ್ಸ್ ಹಾಲ್ ‌ನಲ್ಲಿ ಎಲ್ಲ ಸಿಬ್ಬಂದಿ ಸಭೆ ಸೇರಿದ್ದರು. ಉತ್ತಮ ಪರ್ಫಾರ್ಮೆನ್ಸ್ ಗಾಗಿ ಕಂಪನಿಯಿಂದ ಆಗ ತಾನೇ ಪ್ರಭಾಳಿಗೆ ಅವಾರ್ಡ್‌ ಬಂದಿತ್ತು. ಆಕೆಯ ಒಂದು ಲೇಖನ, ನಾಡಿನ ಹೆಸರಾಂತ ಒಂದು ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅವಳ ಯೂಟ್ಯೂಬ್‌ ಚಾನೆಲ್ ‌ವಿಡಿಯೋ ಸಹ ಎಲ್ಲೆಡೆ ವೈರಲ್ ಆಗಿ ಉತ್ತಮ ಹೆಸರು ಸಿಕ್ಕಿತ್ತು. ಒಟ್ಟಾರೆ ಸಾರಾಂಶ, ಪ್ರಭಾಳ ಕೆಲಸಗಳು ಎಲ್ಲೆಡೆ ಹೆಚ್ಚಿನ ಪ್ರಶಂಸೆ ಗಳಿಸಿದ್ದವು. ಅವಳ ಗೆಳತಿ, ಸಹೋದ್ಯೋಗಿ ಮಾನಸಿ ಪ್ರಭಾಳ ಕುರಿತಾಗಿ ಈ ಬಗ್ಗೆ ಎಲ್ಲರ ಬಳಿ ಹೆಮ್ಮೆಯಿಂದ  ಹೇಳಿಕೊಳ್ಳುತ್ತಿದ್ದಳು.

ಅಂದು ಸಹ ಅವಳ ಆಫೀಸಿನ ಪಾರ್ಟಿಯಲ್ಲಿ ಮಾನಸಿ ಜೊತೆಯೇ ಇದ್ದಳು. ಮತ್ತೊಂದು ವಿಭಾಗದ ಹೊಸ ಹುಡುಗಿ ವಿಭಾಳಿಗೆ ಮಾನಸಿ ಪ್ರಭಾಳನ್ನು ಪರಿಚಯಿಸುತ್ತಾ, ಅವಳಿಗೆ ಸಿಕ್ಕ ಅವಾರ್ಡ್ಸ್, ಅವಳ ಪ್ರತಿಭೆ ಕುರಿತು ಮುಕ್ತವಾಗಿ ಹೊಗಳಿದಳು. ಅವಳಿನ್ನೂ ಏನೋ ಹೇಳುವುದರಲ್ಲಿದ್ದಳು, ಅಷ್ಟರಲ್ಲಿ ವಿಭಾ, ಓಕೆ ನೈಸ್‌ ಎಂದು ಅಲ್ಲಿಂದ ಮುಂದೆ ಸರಿದು ಇತರರ ಜೊತೆ ಹರಟ ತೊಡಗಿದಳು. ವಿಭಾಳ ಈ ರೀತಿಯ ಆ್ಯಟಿಟ್ಯೂಡ್‌ ಪ್ರಭಾಳಿಗೆ ಒಂದಿಷ್ಟೂ ಹಿಡಿಸಲಿಲ್ಲ. ಪ್ರಭಾಳತ್ತ ಯಾವ ದೊಡ್ಡ ಆದರ ಭಾವ ತೋರದೆ, ಉಡಾಫೆಯಿಂದ ಅವಳನ್ನು ನಿರ್ಲಕ್ಷಿಸಿದ್ದಳು. ಆದರೆ ಆಫೀಸಿನ ಬೇರೆ ಜನ ಮನಸ್ಸು ಬಿಚ್ಚಿ ಅವಳನ್ನು ಧಾರಾಳ ಹೊಗಳುತ್ತಿದ್ದರು. ಅದಾದ ಮೇಲೆ ಪ್ರಭಾಳ ಮುಖದಿಂದ ಮಂದಹಾಸ ಮಾಯವಾಯಿತು. ಅವಳು ಮುಂದೆ ವಿಭಾಳೊಂದಿಗೆ ಕಾಂಟ್ಯಾಕ್ಟ್ ಮಾಡುವಾಗೆಲ್ಲ ಸಿಡಿಮಿಡಿ ಎಂದೇ ಸಿಡುಕುತ್ತಿದ್ದಳು.

ಕಿರಿಕಿರಿ ಆಗದಂತೆ ನೋಡಿಕೊಳ್ಳಿ

ಅಂದು ಬೆಳಗ್ಗೆ  ನಮ್ರತಾ ತನ್ನ ಗಂಡನೊಂದಿಗೆ ವಿನಾಕಾರಣ ಜಗಳವಾಡಿದ್ದಳು. ದಸರಾ ಹಬ್ಬಕ್ಕೆ ಲಾಂಗ್‌ ಲೀವ್ ‌ಬಂದಿತ್ತು. ಅದಕ್ಕಾಗಿ ಹೊರಗೆಲ್ಲಾದರೂ ಪ್ರವಾಸ ಹೊರಡಬೇಕೆಂದು ಮೊದಲಿನಿಂದ ಇಬ್ಬರೂ ಲೆಕ್ಕ ಹಾಕಿದ್ದರು. ಆದರೆ ಅನಗತ್ಯದ ಜಗಳದಿಂದಾಗಿ ಈಗ ಏನು ಮಾಡುವುದೆಂದ ತಿಳಿಯದೆ ಕಸಿವಿಸಿಗೆ ಒಳಗಾದರು. ಒಂದು ಬದಲಾವಣೆಗಾಗಿ ಅವಳ ಗಳೆತಿಯ ಮನೆ ಅಥವಾ ಅವನ ಫ್ರೆಂಡ್‌ ಮನೆಗೆ ಹೋಗುವುದೋ ಬಿಡುವುದೋ ಅದೂ ತಿಳಿಯದಾಯಿತು.

ಅಸಲಿಗೆ ನಮ್ರತಾಳ ಗೆಳತಿ ದಸರಾಕ್ಕೆ ವಾರದ ಮೊದಲೇ ಇವರಿಬ್ಬರನ್ನೂ ತನ್ನ ಮನೆಗೆ ಹಬ್ಬಕ್ಕೆ ಬರಬೇಕೆಂದು ಆಹ್ವಾನ ನೀಡಿದ್ದಳು. ಅದರ ಮಾರನೇ ದಿನ, ನಮ್ರತಾ ಗಂಡನ ಫ್ರೆಂಡ್‌ ಸಹ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದ. ಜಗಳದ ಕಾರಣ ಪ್ರವಾಸ ಅಂತೂ ರದ್ದಾಯಿತು, ಈಗ ಯಾರ ಫ್ರೆಂಡ್‌ ಮನೆಗೆ ಹೋಗುವುದು, ಬಿಡುವುದು ಎಂಬುದೇ ದೊಡ್ಡ ಸಮಸ್ಯೆಯಾಯಿತು. ಇಬ್ಬರೂ ತಮ್ಮ ಫ್ರೆಂಡ್ಸ್ ನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಹೀಗಾಗಿ ಇವರಿಬ್ಬರ ಮಧ್ಯೆ ಮಾತುಕಥೆ ನಿಂತುಹೋಗಿ, ಹಬ್ಬದ ವಾತಾವರಣವೇ ಹದಗೆಟ್ಟಿತು.

ಹಬ್ಬಗಳ ಸಂದರ್ಭದಲ್ಲಿ ಹೀಗೆ ಎಷ್ಟೋ ಸಲ ಆಗುವುದುಂಟು. ಅದು ಗೌರಿ ಗಣೇಶ, ನವರಾತ್ರಿ, ದೀಪಾವಳಿಯಂತಹ ದೊಡ್ಡ ಹಬ್ಬಗಳ ಸಂದರ್ಭದಲ್ಲಿ ಮನಸ್ತಾಪಕ್ಕೆ ಕಾರಣವಾದರೆ, ಹಬ್ಬದ ಮಜಾ ಎಲ್ಲಿಂದ ಬರಲು ಸಾಧ್ಯ? ಇಂಥ ಅನಗತ್ಯ ಜಗಳ ಹಬ್ಬದ  ಮೂಡ್‌ ಹಾಳು ಮಾಡುತ್ತದೆ, ಟೆನ್ಶನ್‌ ಹೆಚ್ಚುತ್ತದೆ. ಆದರೆ ಇವೆಲ್ಲದರಿಂದ ನಾವು ಸಾಧಿಸುವುದೇನು? ಕೇವಲ ಇಬ್ಬರ ಮನದಲ್ಲೂ ಅಶಾಂತಿ, ಕೋಪ, ಕ್ಷೋಭೆ, ಸಿಟ್ಟು, ಉದಾಸೀನತೆ ಹೆಚ್ಚುತ್ತದಷ್ಟೆ. ಈ ರೀತಿ ನಾವಾಗಿ ಹಬ್ಬದ ವಾತಾವರಣ ಹಾಳು ಮಾಡಿಕೊಳ್ಳಬಾರದು. ನಮ್ಮವರೊಂದಿಗೇ ನಾವು ಜಗಳವಾಡಿಕೊಂಡರೆ, ಶಾಂತಿಸಮಾಧಾನದಿಂದ ಹಬ್ಬ ಆಚರಿಸಲು ಸಾಧ್ಯವೇ?

ನಿಮಗಿದು ಗೊತ್ತೇ?

ವಿಶ್ವದ ಅತಿ ಸುಖೀ ದೇಶಗಳಲ್ಲಿ ಭಾರತ ಒಂದಾಗಿಲ್ಲ. ಇತ್ತಚೆಗೆ ಬಂದ ವರ್ಲ್ಡ್ ಹ್ಯಾಪಿನೆಸ್‌ ರಿಪೋರ್ಟ್‌ ನಿಂದ ತಿಳಿದ ಅಂಶವೆಂದರೆ ಫಿನ್‌ ಲೆಂಡ್‌, ಡೆನ್ಮಾರ್ಕ್‌, ಐಸ್‌ ಲೆಂಡ್‌, ಸ್ವೀಡನ್‌, ನಾರ್ವೆ ಮುಂತಾದ ದೇಶಗಳು ವಿಶ್ವದ ಅತಿ ಹ್ಯಾಪಿ ದೇಶಗಳೆನಿಸಿವೆ. ಇಂಟರ್‌ ನ್ಯಾಷನಲ್ ಹ್ಯಾಪಿನೆಸ್‌ ಡೇ ಸಂದರ್ಭದಲ್ಲಿ ಜಾರಿಗೊಂಡ ಆ ಆ್ಯನ್ಯುಯೆಲ್ ‌ಹ್ಯಾಪಿನೆಸ್‌ ರಿಪೋರ್ಟ್‌ ನಲ್ಲಿ ಭಾರತಕ್ಕೆ 125ನೇ ಸ್ಥಾನ ಸಿಕ್ಕಿದೆ!

ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ್‌ (108), ಮ್ಯಾನ್ಮಾರ್‌ (72), ನೇಪಾಳ (78), ಬಾಂಗ್ಲಾದೇಶ (102) ಹಾಗೂ ಚೀನಾ (64)ರ ಸ್ಥಾನಗಳಲ್ಲಿವೆ. ಅಂದ್ರೆ ನಮಗಿಂತಲೂ ನಮ್ಮ ನೆರೆ ರಾಷ್ಟ್ರಗಳು ಹೆಚ್ಚು ಖುಷಿಯಾಗಿದ್ದಾರೆ ಎಂದಾಯಿತು. ವಿಶ್ವದ ಅತಿ ಸುಖೀ ದೇಶಗಳಲ್ಲಿ ಯೂರೋಪಿಯನ್‌ ದೇಶಗಳು ಮುಂದಿವೆ. ಮೊದಲ 20 ದೇಶಗಳ ಪಟ್ಟಿಯಲ್ಲಂತೂ ಏಷ್ಯಾ ಖಂಡದ ಒಂದು ದೇಶ ಇಲ್ಲ!

ವರ್ಲ್ಡ್ ಹ್ಯಾಪಿನೆಸ್‌ ನ ಈ ರಿಪೋರ್ಟ್‌ ಗ್ಯಾಲಪ್‌ ವರ್ಲ್ಡ್ ಪೋಲ್ ‌ನ ಆಧಾರದಿಂದ ತಯಾರಾಗಿದೆ. ಈ ರಿಪೋರ್ಟ್‌ ನ್ನು ತಯಾರಿಸುವಾಗ ವಿಭಿನ್ನ ದೇಶಗಳ ಜನರ ಲೈಫ್‌ ಸ್ಟೈಲ್‌, ಅಲ್ಲಿನ  ಸೋಶಿಯಲ್ ಸಪೋರ್ಟ್‌, ಭ್ರಷ್ಟಾಚಾರದ ಪ್ರಮಾಣ, ಪರಸ್ಪರರತ್ತ ತೋರುವ ಪ್ರೀತಿವಾತ್ಸಲ್ಯ…. ಇತ್ಯಾದಿಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ.

ಯೋಚಿಸಿ ನೋಡಿ

ನಾೀಕೆ ಖುಷಿ ಖುಷಿಯಾಗಿ ಹ್ಯಾಪಿಯಾಗಿರಲು ಸಾಧ್ಯವಿಲ್ಲ? ನಮ್ಮಲ್ಲಿ ಈ ಕೋಪ, ತಾಪ, ಅಸಹನೆ, ಸಿಟ್ಟು ಸೆಡವು ಇವೆಲ್ಲ ಹೆಚ್ಚಲು ಕಾರಣವೇನು? ನಾವು ಸದಾ ವ್ಯಗ್ರರಾಗಿ, ಚಿಂತೆಗಳಿಂದ ಕೂಡಿ, ದುಃಖ, ಟೆನ್ಶನ್‌ ನಲ್ಲಿ ಏಕೆ ಕಾಲ ಕಳೆಯುತ್ತೇವೆ? ಸಣ್ಣಪುಟ್ಟ ವಿಷಯಗಳಿಗೂ ಏಕೆ ಕಿತ್ತಾಡುತ್ತೇವೆ? ನೆಂಟರಿಷ್ಟರನ್ನು ಭೇಟಿ ಮಾಡಲು ಹಿಂಜರಿಯುತ್ತೇವೆ. ಈ ನಿಟ್ಟಿನಲ್ಲಿ ಜೀವನದ ಖುಷಿಯಿಂದ ದೂರ ಇರುತ್ತೇವೆ. ಇದಕ್ಕೆ ಕಾರಣವಾದರೂ ಏನು? ಇತರ ದೇಶಗಳಿಗೆ ಹೋಲಿಸಿದಾಗ ನಮ್ಮ ಹ್ಯಾಪಿನೆಸ್‌ ಇಂಡೆಕ್ಸ್ ಇಷ್ಟೇಕೆ ಕೆಳಮಟ್ಟದಲ್ಲಿದೆ?

ಇದು ಎಲ್ಲಿಯೋ ನಮ್ಮ ದೇಶದ ಹವಾಮಾನದಲ್ಲಿ ಬೆರೆತಿದೆಯೇ? ನಮ್ಮ ಸಾಮಾಜಿಕ, ಧಾರ್ಮಿಕ, ಜಾತೀಯ ಭೇದಭಾವಗಳು ಇವೆಲ್ಲದರ ಪರಿಣಾಮ ಆಗಿದೆ. ನಾವು ಸಮಾಜದಲ್ಲಿ ಎಲ್ಲರನ್ನೂ ಒಂದೇ ಎಂದು ಭಾವಿಸುವುದಿಲ್ಲ. ಅಸ್ಪೃಶ್ಯತೆ, ಭೇದಭಾವದ ದೃಶ್ಯಗಳು ಎಲ್ಲಾ ಕಡೆ ಸಿಗುತ್ತವೆ. ಸರ್ಕಾರ ಇದಕ್ಕೆ ಕುಮ್ಮಕ್ಕು ಕೊಡುತ್ತದೆ. ಸರ್ಕಾರ ಸಾಮಾನ್ಯ ಜನತೆಗೆ ತಲುಪಬೇಕಾದ ಸರಳ ಸೌಲಭ್ಯಗಳನ್ನೂ ಕಲ್ಪಿಸುವುದಿಲ್ಲ. ಎಲ್ಲೆಡೆ ದಟ್ಟ ಜನಸಂದಣಿ ಇರುತ್ತದೆ, ಆದರೆ ಮ್ಯಾನೇಜ್‌ ಮೆಂಟ್‌ ಸರಿ ಇರುವುದಿಲ್ಲ. ಎಲ್ಲಿ ನೋಡಿದರೂ ಟ್ರಾಫಿಕ್‌ ಜ್ಯಾಮ್ ತಾಂಡವ! ಹೊರಗೆ ಹೊರಟರೆ ವಾಪಸ್ಸು ಮನೆ ತಲುಪಲು ಹಲವು ಘಂಟೆಗಳೇ ಬೇಕು. ಎಲ್ಲಿ ನೋಡಿದರೂ ಪಿಕ್‌ ಪಾಕೆಟ್‌, ಮೋಸ, ದಗಾ, ವಂಚನೆ, ಭ್ರಷ್ಟಾಚಾರ, ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ. ಎಲ್ಲೆಡೆ ದುಬಾರಿ ಬೆಲೆ, ನಿರುದ್ಯೋಗದ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿಯೇ ನಮ್ಮ ದೇಶದಲ್ಲಿ ಖುಷಿ ಹೆಚ್ಚಾಗಿಲ್ಲ. ಸಂಬಂಧಗಳಲ್ಲಿ ಪ್ರೀತಿವಿಶ್ವಾಸ ದಿನೇದಿನೇ ಕಡಿಮೆ ಆಗುತ್ತಿದೆ.

ಹೀಗಿರುವಾಗ ಹಬ್ಬಗಳು ಸಹ ಯಾಂತ್ರಿಕ ಆಗಿಹೋಗಿವೆ. ಅದರಲ್ಲಿ ಉಲ್ಲಾಸ, ಉತ್ಸಾಹ, ಸಡಗರ, ಸಂಭ್ರಮಗಳನ್ನು ನಾವೇ ಕಂಡುಕೊಳ್ಳಬೇಕಷ್ಟೆ. ಈ ಹಬ್ಬಗಳ ದೆಸೆಯಿಂದ ನಾವು ದೂರ ದೂರ ಇರುವ ನಮ್ಮ ಒಡಹುಟ್ಟಿದವರು, ಬಂಧು ಬಾಂಧವರು, ಆಪ್ತೇಷ್ಟರೊಂದಿಗೆ ಒಂದೇ ಕಡೆ ಸೇರಿ ಎಲ್ಲರೂ ಒಂದಾಗಿ ನಕ್ಕು ನಲಿದು ಎಂಜಾಯ್‌ ಮಾಡಲು ಅವಕಾಶ ಕಲ್ಪಿಸುತ್ತದೆ. ಹಬ್ಬದಿಂದಾಗಿ ನಾವು ಪರಸ್ಪರರನ್ನು ಕೇರ್‌ ಮಾಡುವ ಹಾಗಾಗಿದೆ. ನಮ್ಮ ಜೀವನದಲ್ಲಿ ಬೇರೆಯವರ ಪ್ರಾಮುಖ್ಯತೆ ಏನು ಎಂಬುದನ್ನು ತಿಳಿಸಿಕೊಡುತ್ತದೆ. ಬೇರೆಯವರೊಂದಿಗೆ ಕಲೆತು ಜೀವನದ ಸಣ್ಣಪುಟ್ಟ ಖುಷಿ ಹಂಚಿಕೊಳ್ಳುವುದು ಹೇಗೆ ಎಂಬುದನ್ನು ಹಬ್ಬ ನಮಗೆ ಪ್ರಾಕ್ಟಿಕಲ್ ಆಗಿ ತಿಳಿಸುತ್ತದೆ.

ಹಬ್ಬಗಳು ತರುವ ಖುಷಿ

ನಾವು ಈ ಯಾಂತ್ರಿಕ ಜೀವನದ ಜಂಜಾಟದಿಂದ ಬೇಸತ್ತು ಹೋಗುತ್ತೇವೆ. ನಮ್ಮಲ್ಲಿ ಆಂತರಿಕವಾಗಿ ನೆಗೆಟಿವ್ ‌ಎನರ್ಜಿ ಜಮೆಗೊಳ್ಳುತ್ತದೆ. ಇದರ ಪರಿಣಾಮವಾಗಿ, ನಮ್ಮಲ್ಲಿನ ಪ್ರೀತಿಪ್ರೇಮ, ಮನಸ್ಸಿನ ಖುಷಿ ಕಡಿಮೆ ಆಗುತ್ತದೆ. ಆಗ ನಾವು ಸಹಜವಾಗಿ ಸ್ವಾರ್ಥಿಗಳಾಗಿ ಎಲ್ಲವು ನಮಗೇ ಬೇಕು ಎಂದು ಯೋಚಿಸುತ್ತೇವೆ! ನಾವಾಯಿತು, ನಮ್ಮ ಕೆಲಸವಾಯಿತು ಎಂದು ಯಾರ ಬಗ್ಗೆಯೂ ಕಾಳಜಿ ವಹಿಸದೆ ಇದ್ದುಬಿಡುತ್ತೇವೆ. ಹೀಗಾದಾಗ ಹಬ್ಬಗಳು ಮಾತ್ರವೇ ನಮ್ಮ ಮನದ ನೆಗೆಟಿವಿಟಿ ದೂರ ಮಾಡಬಲ್ಲವು. ಮನಸ್ಸಿನ ಅಂಧಕಾರ ಕಳೆದು, ಹೊಸ ಬೆಳಕನ್ನು ತೋರಬಲ್ಲವು. ಹಬ್ಬ ನಮ್ಮಲ್ಲಿ ಸಕಾರಾತ್ಮಕತೆ ತುಂಬುತ್ತದೆ. ಹಬ್ಬಗಳ ನೆಪದಲ್ಲಿ ಜನರೊಂದಿಗೆ ಬೆರೆತಾಗ, ಸಡಗರಸಂಭ್ರಮ ಹಂಚಿಕೊಂಡಾಗ, ನಮ್ಮ ಒಂಟಿತನ ದೂರವಾಗುತ್ತದೆ. ದ್ವೇಷ ಕಡಿಮೆಯಾಗಿ ನಮ್ಮ ಬದುಕಲ್ಲಿ ಹೊಸ ಆಶಾಕಿರಣ ಮೂಡುತ್ತದೆ.

ಸಾಮಾನ್ಯವಾಗಿ ನಮ್ಮ ದೈನಂದಿನ ಜೀವನದಲ್ಲಿ ಸತತ ಪ್ರೆಶರ್‌, ಟೆನ್ಶನ್‌ ಗಳು ಕಾಡುತ್ತಲೇ ಇರುತ್ತವೆ. ನಮ್ಮ ಯಾಂತ್ರಿಕ ಜೀವನದ ಅತಿ ವೇಗದ ಓಡಾಟಗಳ ನಡುವೆ, ನಮ್ಮ ಮಾನಸಿಕ ಒತ್ತಡ 100 ಪಟ್ಟು ಹೆಚ್ಚುತ್ತದೆ. ಪ್ರತಿದಿನ ಒಂದಿಲ್ಲೊಂದು ತಾಪತ್ರಯ ಇದ್ದದ್ದೇ! ಒಂದು ಸಮಸ್ಯೆ ಬಗೆಹರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಧುತ್ತೆಂದು ಹಾಜರ್‌! ಒಮ್ಮೆ ನಮ್ಮ ಚಿಂತೆಗಳು ಅಧಿಕವಾಗಿ ಕಾಡಿದರೆ, ಮತ್ತೊಮ್ಮೆ ನಮ್ಮವರಿಗಾಗಿ ನಾವು ದುಃಖಿಸುವುದೇ ಆಗಿಹೋಗುತ್ತದೆ. ಅವಶ್ಯಕತೆಗಳು, ಬೇಡಿಕೆಗಳು, ಅವುಗಳ ಪೂರೈಕೆಯಲ್ಲಿ ಮುಳುಗಿಹೋಗಿ ನಮ್ಮ ಇಡೀ ಜೀವನ ಒಂದು ವಿಸ್ಛೋಟದ ಪಾಯಿಂಟ್‌ ತಲುಪಿ ಬಿಡುತ್ತದೆ. ಇಂಥ ಗಾಡಾಂಧಕಾರದ ಮಧ್ಯೆ ಹಬ್ಬಗಳು ಮಾತ್ರವೇ ನಮ್ಮ ಮನಸ್ಸಿಗೆ ಒಂದಿಷ್ಟು ಸಂತಸ, ತೃಪ್ತಿ, ನೆಮ್ಮದಿ ನೀಡಬಲ್ಲವು. ಹಬ್ಬದ  ಗಡಿಬಿಡಿ ಏನೇ ಇರಲಿ, ದೈನಂದಿನ ಟೆನ್ಶನ್‌ ಅದರಿಂದ ಎಷ್ಟೋ ತಗ್ಗುತ್ತದೆ, ಒಂದಿಷ್ಟು ಜೀವನೋತ್ಸಾಹ ಹೆಚ್ಚುತ್ತದೆ.

ಎಲ್ಲಾ ಜಂಜಾಟ, ಒತ್ತಡಗಳನ್ನು ಮರೆತು ನಾವು ಹಬ್ಬದ ತಯಾರಿಗೆ ತೊಡಗುತ್ತೇವೆ. ಹಬ್ಬಗಳು ನಮ್ಮ ಮನಸ್ಸಿನ ತಪ್ಪಿದ ಸಮತೋಲನವನ್ನು ತುಸು ತಹಬಂದಿಗೆ ತರುತ್ತವೆ. ಹಬ್ಬಗಳಿಂದ ನಮ್ಮ ಜೀವನದ ಉತ್ಸಾಹ, ಉಲ್ಲಾಸ ಹೆಚ್ಚುತ್ತದೆ. ಒಂದು ಹಂತಕ್ಕೆ ನಮ್ಮ ಜಡತೆ ನೀಗಿ ಹೊಸ ಹುಮ್ಮಸ್ಸು ತುಂಬಿಸುತ್ತದೆ. ಹಬ್ಬಗಳ ನೆಪದಲ್ಲಿ ಒಂದಿಷ್ಟು ಹೊಸತನ, ಲವಲವಿಕೆ ಮೈಗೂಡುತ್ತದೆ. ನಮ್ಮ ಜೀವನದಲ್ಲಿ ಆನಂದದ ಅಲೆಗಳು ತಾನಾಗಿ ಹೊಮ್ಮಿ ಬರುತ್ತದೆ. ಈ ರೀತಿ ನಾವು ಟೆನ್ಶನ್‌ ಗಳಿಂದ ಮುಕ್ತಿ ಹೊಂದಬಹುದು.

ಓದು, ಕಲಿಕೆ, ಆಫೀಸ್‌ ಕೆಲಸ, ಬಿಸ್‌ ನೆಸ್‌ ಟೆನ್ಶನ್‌, ಮನೆಯ ದೈನಂದಿನ ಜಂಜಾಟಗಳು, ರೋಗ ರುಜಿನಗಳ ಕುರಿತಾಗಿ ಆಸ್ಪತ್ರೆ ಅಲೆದಾಟ ಇತ್ಯಾದಿಗಳಿಂದ ಬೇಸತ್ತಿರುವಾಗ ನಡುನಡುವೆ ಬರುವ ಇಂಥ ಹಬ್ಬಗಳು ನಮ್ಮ ಮನಸ್ಸಿಗೆ ಆಹ್ಲಾದಕತೆ ಉಂಟು ಮಾಡುತ್ತವೆ. ಮನಸ್ಸಿಗೆ ಮುದ ಸಿಕ್ಕಿದಾಗ ಮಾತ್ರ ನಾವು ಏನಾದರೂ ಸಕಾರಾತ್ಮಕವಾಗಿ ಸಾಧಿಸಬಹುದಾಗಿದೆ. ಮನೆಮಂದಿಯೆಲ್ಲ ಕೂಡಿ ಒಟ್ಟಾಗಿ ಹಬ್ಬ ಆಚರಿಸುವುದು, ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸಲು, ಜೀವನದ ಒಳ್ಳೆಯ ಭಾಗ ಕಾಣಲು ಒಂದು ದಾರಿಯಾಗಿದೆ. ನಮ್ಮ ದೇಶ ಇಡೀ ವಿಶ್ವದಲ್ಲೇ 7ನೇ ಅತಿ ದೊಡ್ಡ ದೇಶ ಎನಿಸಿದೆ. ಹೀಗಾಗಿ ಇಲ್ಲಿನ ವಿಭಿನ್ನ ಸಂಸ್ಕೃತಿ, ಧರ್ಮ, ಭಾಷೆ, ಸಂಪ್ರದಾಯಗಳ ಆಚರಣೆ, ರೀತಿ ರಿವಾಜುಗಳಿಂದ ಇದನ್ನು ಧಾರಾಳವಾಗಿ `ಉಪಖಂಡ’ ಎಂದೇ ಕರೆಯಬಹುದು!

ಹೀಗಾಗಿ ಇಡೀ ದೇಶದಲ್ಲಿ ಒಂದೇ ಹಬ್ಬ ಬೇರೆ ಬೇರೆ ವಿಧದಲ್ಲಿ, ಸಾಂಪ್ರದಾಯಿಕವಾಗಿ ವಿಭಿನ್ನ ದೃಷ್ಟಿಕೋನ ಹೊಂದಿರುತ್ತದೆ. ಇದು ನಿಮ್ಮಲ್ಲಿ ಅದ್ಭುತ ಪಾಸಿಟಿವ್ ವೈಬ್ಸ್ ತುಂಬುತ್ತದೆ. ಹಬ್ಬದ ಹಿಂದಿನ ಭಾವನೆ ಇಡೀ ಅಖಂಡ ಭಾರತಕ್ಕೆ ಒಂದೇ ಆದರೂ, ಅದರ ಅಭಿವ್ಯಕ್ತಿ ಮಾತ್ರ ಬೇರೆ ಬೇರೆಯೇ ಆಗಿರುತ್ತದೆ. ಅದರಿಂದಾಗಿ ಚಿಂತೆಗಳನ್ನು ಮರೆತು ನಾವು ಹಬ್ಬದ ಸಡಗರ ಸಂಭ್ರಮಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

ಹಬ್ಬಗಳು ನಮ್ಮ ಕುಟುಂಬ, ನೆಂಟರಿಷ್ಟರು, ಫ್ರೆಂಡ್ಸ್ ಎಲ್ಲರನ್ನೂ ಒಟ್ಟುಗೂಡಿಸುತ್ತದೆ. ಇದರಿಂದ ಎಂದೂ ಮುಗಿಯದ ನಮ್ಮ  ದೈನಂದಿನ ಕಾಟಗಳಿಂದ ಕೆಲವು ಕಾಲವಾದರೂ ಮುಕ್ತಿ ಸಿಗುತ್ತದೆ. ಹಬ್ಬಗಳ ನೆಪದಲ್ಲಿ ಹಲವಾರು ಬಗೆಬಗೆಯ ಬಣ್ಣ, ಬಟ್ಟೆಬರೆ, ಒಡವೆವಸ್ತ್ರ, ಪರಿಪರಿಯ ಪಕ್ವಾನ್ನಗಳು ಬಾಯಿರುಚಿ ಹೆಚ್ಚಿಸಿ ನಮ್ಮಲ್ಲಿ ಹೆಚ್ಚಿನ ಸಕಾರಾತ್ಮಕತೆ ತುಂಬುತ್ತದೆ.

ನೀರಸ ದಿನಚರ್ಯೆಗಳಿಂದ ಮುಕ್ತಿ

ಹಬ್ಬಗಳಿಂದಾಗಿ ನಾವು ಕುಟುಂಬದವರೆಲ್ಲ ಒಂದೇ ಸೂರಿನಡಿ ಒಟ್ಟುಗೂಡಲು (ಅದು ನಮ್ಮ ಮನೆ ಆಗಿರಬಹುದು, ಇನ್ನೊಮ್ಮೆ ಅಣ್ಣತಮ್ಮನ ಮನೆ, ಅಕ್ಕತಂಗಿ ಮನೆ… ಒಟ್ಟಾರೆ ಒಂದುಗೂಡುವುದೇ ಮುಖ್ಯ) ಸದಕಾಶ ನೀಡುತ್ತದೆ. ದೈನಂದಿನ ನೀರಸ ಯಾಂತ್ರಿಕ ಕ್ರಿಯೆಗಳಿಂದ ದೂರವಾಗಿ, ಒಂದಿಷ್ಟು ಉಲ್ಲಾಸದ ಮಾತು, ಹರಟೆ, ರೋಚಕ ಕ್ಷಣಗಳನ್ನು ಒಟ್ಟಿಗೆ ಕಳೆಯುವಂತಾಗುತ್ತದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಇದು ಅತ್ಯಂತ ಅನಿವಾರ್ಯ ಸಹ. ಪ್ರತಿಯೊಬ್ಬರೂ ತಂತಮ್ಮ ಕೆಲಸ ಕಾರ್ಯಗಳಲ್ಲಿ ಸದಾ ಬಿಝಿ ಆಗಿ ಮುಳುಗಿ ಹೋಗಿರುತ್ತಾರೆ. ಹಾಗಾಗಿಯೇ ಈ ಹಬ್ಬಗಳು ನಮ್ಮನ್ನು ಒಂದುಗೂಡಿಸುವಲ್ಲಿ ಯಶಸ್ವಿ ಆಗಿವೆ. ಎಲ್ಲೆಲ್ಲೂ ಖುಷಿ, ಸಂತೋಷದ ಅಲೆಗಳು, ಉತ್ಸಾಹ, ಉಲ್ಲಾಸ, ಸಡಗರ ಸಂಭ್ರಮ ಹೆಚ್ಚಿಸಲು ಕಾರಣವಾಗಿವೆ. ಇದು ನಮ್ಮ ಮಾನಸಿಕ ಸ್ವಾಸ್ಥ್ಯ ಸಂವರ್ಧನೆಗೆ ಬಲು ಪೂರಕ. ಎಲ್ಲರೂ ಒಟ್ಟಾಗಿ ಆನಂದದಿಂದ ಹಬ್ಬ ಆಚರಿಸಿದರೆ, ಅದಕ್ಕಿಂತ ಮಿಗಿಲಾದುದು ಇನ್ನೇನಿದೆ? ಹ್ಯಾಪಿ ಫೆಸ್ಟಿವ್ಸ್!

ಓದುಗರೆಲ್ಲರಿಗೂ ಗೃಹಶೋಭಾ ಪರವಾಗಿ ಮುಂದೆ ಬರಲಿರುವ ನವರಾತ್ರಿ ದೀಪಾವಳಿ ಹಬ್ಬದ ಮುಂಗಡ ಶುಭಾಶಯಗಳು!

ಸಿ. ಪದ್ಮಜಾ ಪ್ರಸಾದ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ