ಹಬ್ಬ ಅಂದ್ರೆ ಎಲ್ಲೆಲ್ಲೂ ಉಲ್ಲಾಸ, ಉತ್ಸಾಹ, ಸಡಗರ, ಸಂಭ್ರಮಗಳ ಆಚರಣೆ! ಒಡಹುಟ್ಟಿದವರು, ಆಪ್ತರು, ಇಷ್ಟರು, ಮಿತ್ರರು ಸೇರಿ ಆಚರಿಸುವ ಹಬ್ಬಗಳ ಸಂದರ್ಭದಲ್ಲಿ ಎಲ್ಲರೂ ಮನ ತೆರೆದು ಈ ಸಂತೋಷ ಹಂಚಿಕೊಳ್ಳೋಣ......!
ಅಂದು ಮೀರಾ ಲೈಟ್ ಬ್ಲೂ ಬಣ್ಣದ ಬ್ಯೂಟಿಫುಲ್ ಡಿಸೈನರ್ ಸೂಟ್ ಧರಿಸಿದ್ದಳು, ಹಲವಾರು ಅಂಗಡಿಗಳನ್ನು ಹತ್ತಿಳಿದು ಕೊನೆಗೂ ತನಗೆ ಅತಿ ಆಪ್ತವಾದ ಈ ಡ್ರೆಸ್ ಆರಿಸಿದ್ದಳು. ಇದಕ್ಕಾಗಿ ಅವಳ ಬಜೆಟ್ ಕೇವಲ 2 ಸಾವಿರ ಆಗಿತ್ತು. ಹೀಗಾಗಿ ಅವಳು ಬಹಳ ಚೌಕಾಸಿ ಮಾಡಿ, ಕೊನೆಗೂ 1800ಕ್ಕೆ ಆ ಡ್ರೆಸ್ ಕೊಂಡಿದ್ದಳು. ಉಳಿದ ಹಣದಲ್ಲಿ ಮ್ಯಾಚಿಂಗ್ ಸ್ಯಾಂಡಲ್ಸ್ ಖರೀದಿಸಿದಳು.
ಅವಳು ಇದನ್ನೆಲ್ಲ ಧರಿಸಿ, ತನ್ನ ಗೆಳತಿ ಮಾಲತಿಯ ಮನೆಗೆಂದು ನವರಾತ್ರಿಯ ಗೊಂಬೆ ನೋಡಲೆಂದು ಸಂಭ್ರಮದಿಂದ ಹೊರಟಳು. ಇವಳ ಎದುರು ಅಲ್ಲಿ ಬಂದಿದ್ದ ಉಳಿದ ಗೆಳತಿಯರಾದ ಅನುಪಮಾ, ವಿಶಾಖಾರ ಕಣ್ಣು ಕೋರೈಸುವ ಗ್ಲಾಮರಸ್ ಡ್ರೆಸ್ ಇನ್ನಷ್ಟು ಮಿರಿಮಿರಿ ಮಿಂಚುತ್ತಿತ್ತು!
ಅನುಪಮಾ ಬ್ಲ್ಯಾಕ್ ಕಲರ್ ನ ಸಿಂಗಲ್ ಶೋಲ್ಡರ್ಡ್ ಮಿಡಿ ಧರಿಸಿದ್ದರೆ, ಅದರಲ್ಲಿನ ಸಿಲ್ವರ್ ಕಸೂತಿ ಕಣ್ಸೆಳೆಯುವಂತಿತ್ತು. ಅತ್ತ ವಿಶಾಖಾ ಗೋಲ್ಡನ್ ವರ್ಕ್ ನ ಮೆರೂನ್ ಬಣ್ಣದ ಡಿಸೈನರ್ ಗೌನಿನಲ್ಲಿ ಬಹಳ ಬ್ಯೂಟಿಫುಲ್ ಎನಿಸಿದ್ದಳು. ಅವರ ಉಡುಗೆಗಳನ್ನು ಕಂಡ ಮೀರಾಳಿಗೆ ತನ್ನ ಡ್ರೆಸ್ ಬಲು ಸಿಂಪಲ್ ಓಲ್ಡ್ ಫ್ಯಾಷನ್ ದು ಎನಿಸಿತು. ಅವಳಿಗೆ ಅವರಿಬ್ಬರ ವೈಭವ ಕಂಡು ಮನದಲ್ಲೇ ಮತ್ಸರ ಮೂಡಿತು. ಅವರಿಬ್ಬರ ಗಂಡಂದಿರು ಶ್ರೀಮಂತ ಮನೆತನಕ್ಕೆ ಸೇರಿದರು. ಅವರ ಬಳಿ ದುಡ್ಡುಕಾಸಿಗೆ ಏನೇನೂ ಕೊರತೆ ಇರಲಿಲ್ಲ. ಅದೆಲ್ಲ ದೌಲತ್ತು ಅವರ ಉಡುಗೆತೊಡಗೆ, ಹಾವಭಾವಗಳಲ್ಲಿ ಇಣುಕುತ್ತಿತ್ತು. ಇದರಿಂದ ಮೀರಾಳ ಮುಖದಲ್ಲಿದ್ದ ಹಬ್ಬದ ಖುಷಿ ಅಲ್ಲೇ ನೆಲಸಮ ಆಯ್ತು. ಅವಳು ಕಾರಣವಿಲ್ಲದೆ ಸಿಡುಕುತ್ತಾ ಅಸಹನೆ ಪ್ರದರ್ಶಿಸುವಂತಾದಳು.
ಶಾಲಿನಿ ಅಂದು ಬೆಳಗ್ಗಿನಿಂದ ನಾದಿನಿ ನಿರ್ಮಲಾಳ ಫೋನ್ ಕಾಲ್ ಗಾಗಿ ಕಾಯುತ್ತಿದ್ದಳು. 2 ತಿಂಗಳ ಹಿಂದೆಯೇ ನಿರ್ಮಲಾ ಅತ್ತಿಗೆಗೆ ಫೋನ್ ಮಾಡಿ, ತವರಿನ ಮನೆಯವರೆಲ್ಲರೂ ಈ ಸಲದ ಆಯುಧಪೂಜೆ, ವಿಶಯದಶಮಿ ಹಬ್ಬಗಳನ್ನು ತಮ್ಮ ಮನೆಯಲ್ಲೇ ಆಚರಿಸಬೇಕಾಗಿ ಆಹ್ವಾನಿಸಿದ್ದಳು. ಹಾಗಾಗಿ ಈ ಸಲದ ದಸರಾ ಹಬ್ಬ ಬಲು ಗ್ರಾಂಡಾಗಿ ಜರುಗಲಿದೆ ಎಂದು ಶಾಲಿನಿ ಉತ್ಸಾಹದಿಂದ ಕಾಯುತ್ತಿದ್ದಳು. ಶಾಲಿನಿಯ ಗಂಡನಿಗೆ ಇಬ್ಬರು ತಮ್ಮಂದಿರು, ಒಬ್ಬಳೇ ತಂಗಿ ನಿರ್ಮಲಾ. ಹಾಗಾಗಿ ನಿರ್ಮಲಾ ಎಲ್ಲರನ್ನೂ ಬೆಂಗಳೂರಿನ ತಮ್ಮ ಮನೆಗೆ ಬರಲೆಂದು ಬಯಸಿದ್ದಳು. ಶಾಲಿನಿಯ ಮನೆ, ಮೈದುನರದೂ ಕೂಡಿ ಎಲ್ಲರೂ ಮೈಸೂರಲ್ಲೇ ಇದ್ದರು. ಆ ಕುರಿತಾಗಿ ನಿರ್ಮಲಾ ಕಾಲ್ ಮಾಡಿ ಹಬ್ಬಕ್ಕೆ ಬರಲು ವಿಷಯ ಕನ್ಫರ್ಮ್ ಮಾಡಬಹುದು, ವಿಜಯದಶಮಿಗೆ ಕೇವಲ 4 ದಿನ ಮಾತ್ರ ಉಳಿದಿದೆ ಎಂದು ಶಾಲಿನಿ ಕಾಯತೊಡಗಿದಳು.
ಅಂತೂ ಸಂಜೆ ಹೊತ್ತಿಗೆ ನಿರ್ಮಲಾ, ಶಾಲಿನಿಗೆ ಮೆಸೇಜ್ ಮಾಡಿ ಹಬ್ಬಕ್ಕೆ ಎಲ್ಲರೂ ಬೆಂಗಳೂರಿಗೆ ಬರಬೇಕೆಂದು ಖಾತ್ರಿಪಡಿಸಿದಳು. ಸರಸ್ವತಿ ಸಪ್ತಮಿ, ದುರ್ಗಾಷ್ಟಮಿ, ಮುಗಿಸಿ ಅಂದು ಸಂಜೆ ಎಲ್ಲರೂ ಬೆಂಗಳೂರಿಗೆ ಹೊರಡುವುದೆಂದು ಶಾಲಿನಿ ತಯಾರಿ ನಡೆಸತೊಡಗಿದಳು. ಅತ್ತಿಗೆಯಾದ ತನಗೆ ನೇರವಾಗಿ ಕಾಲ್ ಮಾಡಿ ಕರೆಯದೆ, ನಾದಿನಿ ಕೇವಲ ಮೆಸೇಜ್ ಮಾಡಿದ್ದು ಯಾಕೋ ಶಾಲಿನಿಗೆ ಹೆಚ್ಚಿನ ಇರಿಸುಮುರಿಸು ತರಿಸಿತ್ತು.





