ರಾಘವೇಂದ್ರ ಅಡಿಗ ಎಚ್ಚೆನ್.

ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಪ್ರಸಿದ್ಧ ಗಗನಯಾತ್ರಿ, ಬಾಹ್ಯಾಕಾಶದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಭಾರತದ ಹೆಮ್ಮೆಯ ಪುತ್ರಿ ಸುನೀತಾ ವಿಲಿಯಮ್ಸ್ ನಾಸಾದಿಂದ ನಿವೃತ್ತರಾಗುವ ಮೂಲಕ ಬಾಹ್ಯಾಕಾಶ ಪರಿಶೋಧನೆಯ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ಹೆಸರುಗಳಲ್ಲಿ ತಮ್ಮನ್ನು ತಾವು ಸೇರಿಸಿಕೊಂಡ ಐತಿಹಾಸಿಕ 27 ವರ್ಷಗಳ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ.  ನಾಸಾ, ಡಿಸೆಂಬರ್ 27, 2025 ರಿಂದ ಜಾರಿಗೆ ಬರುವಂತೆ ಹೆಸರಾಂತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ನಿವೃತ್ತಿಯನ್ನು ಘೋಷಿಸಿದೆ. ಜನವರಿ 20(ಮಂಗಳವಾರ), 2026 ರಂದು ಬಿಡುಗಡೆಯಾದ ಮಾಹಿತಿಯಲ್ಲಿ ಈ ಬಗ್ಗೆ ತಿಳಿದುಬಂದಿದೆ.
ನನಗೆ ಬಾಹ್ಯಾಕಾಶವೇ ನೆಚ್ಚಿನ ತಾಣ ಅನ್ನೋದು ನನ್ನನ್ನು ಅರಿತುಕೊಂಡವರಿಗೆ ಗೊತ್ತು. ನಾಸಾದಲ್ಲಿ ಕಳೆದ 27 ವರ್ಷಗಳ ವೃತ್ತಿಜೀವನ ಅದ್ಭುತ ಅಮೋಘವಾಗಿತ್ತು. ಇದಕ್ಕೆ ಕಾರಣ ನನ್ನ ಸಹೋದ್ಯೋಗಿಗಳ ಪ್ರೀತಿ ಮತ್ತು ಬೆಂಬಲ. ಮುಂದಿನ ದಿನಗಳಲ್ಲಿ ನಾಸಾ ಚಂದ್ರ ಮತ್ತು ಮಂಗಳನ ಮೇಲೆ ಇತಿಹಾಸ ಸೃಷ್ಟಿಸುವುದನ್ನು ನೋಡಲು ನಾನು ಕಾತುರಳಾಗಿದ್ದೇನೆ ಎಂದು ಸುನೀತಾ ವಿಲಿಯಮ್ಸ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

williams

ಈ ಕುರಿತು ಮಾತನಾಡಿರುವ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, ಸುನಿತಾ ವಿಲಿಯಮ್ಸ್‌ ಅವರನ್ನ ಮಾನವ ಬಾಹ್ಯಾಕಾಶ ಹಾರಾಟದ ಪ್ರವರ್ತಕಿ ಎಂದು ಬಣ್ಣಿಸಿದರು. ವಿಜ್ಞಾನ ಮತ್ತು ತಂತ್ರಜ್ಞನಕ್ಕೆ ಸುನಿತಾ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಯೋಜನೆಗಳು ಚಂದ್ರ ಮತ್ತು ಮಂಗಳ ಗ್ರಹದತ್ತ ತೆರಳುವ ನಮ್ಮ ಪ್ರಯತ್ನಗಳಿಗೆ ಭದ್ರ ಅಡಿಪಾಯವಾಗಿದೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆ. ನಾಸಾ ಮತ್ತು ನಮ್ಮ ರಾಷ್ಟ್ರಕ್ಕೆ ಸುನಿತಾ ಅವರು ನೀಡಿದ ಗಣನೀಯ ಸೇವೆಗೆ ಧನ್ಯವಾದಗಳು ಎಂದು ಶ್ಲಾಘಿಸಿದರು.
ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೆಲಸದ ನಿಮಿತ್ತ ಹೋಗಿದ್ದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್, ಯಾರೂ ನಿರೀಕ್ಷೆ ಮಾಡದಂತೆ ಅಲ್ಲಿಯೇ ಸಿಲುಕಬೇಕಾಯಿತು. ಹೋಗಿದ್ದು ಕೇವಲ ಒಂದು ವಾರದ ಕೆಲಸಕ್ಕಾಗಿ ಆದರೆ, ಒಂದೇ ಒಂದು ಮಿಸ್ಟೇಕ್ ಅವರಿಬ್ಬರನ್ನು 9 ತಿಂಗಳು ಅಲ್ಲಿಯೇ ಸಿಲುಕಿಸಿತ್ತು.  ತಾಂತ್ರಿಕ ಸಮಸ್ಯೆಗಳಿಂದಾಗಿ, ಅವರು 286 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಇರಬೇಕಾಯಿತು.  ಅವರು ಹೋಗಿದ್ದ ಸ್ಟಾರ್ಲೈನರ್ ಕ್ಯಾಪ್ಸುಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಾಪಸ್ ಬರಲು ಸಾಧ್ಯವಾಗಲಿಲ್ಲ. ಸಾಕಷ್ಟು ಬಾರಿ ಪ್ರಯತ್ನಿಸಿದ್ರೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇತ್ತು. ಇತ್ತ ಭೂಮಿಗೆ ಬರುವ ಆಸೆ ಅನೇಕ ಬಾರಿ ನಿರಾಸೆಯಾಗಿ, ಗಗನಯಾತ್ರಿಗಳ ನಿರೀಕ್ಷೆ ಹೆಚ್ಚಾಗುತ್ತಲೇ ಇತ್ತು. ಕೊನೆಗೂ ಭೂಮಿಗೆ ಬಂದಿಳಿದಿದ್ದರು. ಇದೀಗ ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ.

williams 1

ಸುನೀತಾ ವಿಲಿಯಮ್ಸ್ ಭಾರತೀಯ ಮೂಲದ ಒಬ್ಬ ಅಮೆರಿಕನ್ ಗಗನಯಾತ್ರಿ, ಸುನಿತಾ ಅವರ ಪೂರ್ವಜರು ಗುಜರಾತ್‌ನ ಮೆಹಸಾನಾ ಜಿಲ್ಲೆಯ ಜುಲಾಸನ್ ಗ್ರಾಮದವರು.  ಅವರು ಬಾಹ್ಯಾಕಾಶ ಪ್ರಯಾಣದಲ್ಲಿ ತಮ್ಮ ಹೊಸ ಸಾಧನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸೆಪ್ಟೆಂಬರ್ 19, 1965 ರಂದು ಓಹಿಯೋದ ಯೂಕ್ಲಿಡ್‌ನಲ್ಲಿ ಭಾರತದ ಗುಜರಾತ್‌ನ ನರಶಸ್ತ್ರಚಿಕಿತ್ಸಕ ದೀಪಕ್ ಪಾಂಡ್ಯ ಮತ್ತು ಉರ್ಸುಲಿನ್ ಬೋನಿ ಪಾಂಡ್ಯ ದಂಪತಿಗಳಿಗೆ ಜನಿಸಿದರು. ಅವರು ಮ್ಯಾಸಚೂಸೆಟ್ಸ್‌ನ ನೀಡ್‌ಹ್ಯಾಮ್‌ನಲ್ಲಿ ಬೆಳೆದರು ಮತ್ತು ನೀಡ್‌ಹ್ಯಾಮ್ ಅನ್ನು ತಮ್ಮ ಮನೆಯಾಗಿ ನೋಡುತ್ತಾರೆ. ಅವರು ನೀಡ್‌ಹ್ಯಾಮ್ ಹೈಸ್ಕೂಲ್‌ನಲ್ಲಿ ತಮ್ಮ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಮಾಡಿದರು ಮತ್ತು 1983 ರಲ್ಲಿ ಅಲ್ಲಿಂದ ಪದವಿ ಪಡೆದರು. ಅವರು 1987 ರಲ್ಲಿ ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಯಿಂದ ಭೌತ ವಿಜ್ಞಾನದಲ್ಲಿ ವಿಜ್ಞಾನ ಪದವಿ ಪಡೆದರು. 1995 ರಲ್ಲಿ, ಅವರು ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಯುಎಸ್ ನೌಕಾಪಡೆಯ ಅಧಿಕಾರಿಯಾಗಿ ತಮ್ಮ ಕೆಲಸವನ್ನು ಆರಂಭಿಸಿದರು, 1987 ರಲ್ಲಿ ನಿಯೋಜನೆಗೊಂಡರು. ಅವರು 1989 ರ ಹೊತ್ತಿಗೆ ಹೆಲಿಕಾಪ್ಟರ್ ಪೈಲಟ್ ಆದರು ಮತ್ತು 1992 ರಲ್ಲಿ ಚಂಡಮಾರುತ ಆಂಡ್ರ್ಯೂ ನಂತರ ವಿಪತ್ತು ಪರಿಹಾರ ಕಾರ್ಯಾಚರಣೆಗಳಂತಹ ವಿವಿಧ ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಅವರು 30 ವರ್ಷಗಳ ವೃತ್ತಿಜೀವನದಲ್ಲಿ 30ಕ್ಕೂ ಹೆಚ್ಚು ವಿವಿಧ ರೀತಿಯ ವಿಮಾನಗಳಲ್ಲಿ 3,000 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ಪೈಲಟ್ ಆಗಿ ವ್ಯಾಪಕ ಅನುಭವ ಹೊಂದಿದ್ದಾರೆ. ನೌಕಾಪಡೆಯಿಂದ ನಿವೃತ್ತರಾದ ನಂತರ, ಸುನೀತಾ 1998 ಜೂನ್ ತಿಂಗಳಲ್ಲಿ ನಾಸಾ ಗಗನಯಾತ್ರಿಯಾಗಿ ಆಯ್ಕೆಯಾದರು. 1998 ರಲ್ಲಿ ನಾಸಾಗೆ ಸೇರಿದರು, ದೀರ್ಘ ಮತ್ತು ವಿಶಿಷ್ಟ ಗಗನಯಾತ್ರಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2006 ರಲ್ಲಿ ತಮ್ಮ ಮೊದಲ ಬಾಹ್ಯಾಕಾಶ ನಡಿಗೆಯನ್ನು ನಡೆಸಿದ ಎಕ್ಸ್‌ಪೆಡಿಶನ್ಸ್ 14 ಮತ್ತು 15 ಸೇರಿದಂತೆ ಕೆಲವು ಹೆಗ್ಗುರುತು ಕಾರ್ಯಾಚರಣೆಗಳಲ್ಲಿ ಅವಿಭಾಜ್ಯ ಅಂಗವಾಗಿದ್ದಾರೆ. ಮುಖ್ಯವಾಗಿ, ಏಪ್ರಿಲ್ 16, 2007 ರಂದು ಅವರು ಬಾಹ್ಯಾಕಾಶದಲ್ಲಿ ಮ್ಯಾರಥಾನ್ ಓಡಿದ ಮೊದಲಿಗರು, ಐಎಸ್‌ಎಸ್ ಟ್ರೆಡ್‌ಮಿಲ್‌ನಲ್ಲಿ 4 ಗಂಟೆ 24 ನಿಮಿಷಗಳಲ್ಲಿ ಬೋಸ್ಟನ್ ಮ್ಯಾರಥಾನ್ ಅನ್ನು ಓಡಿದರು.
ಅವರು ಒಟ್ಟು ಒಂಬತ್ತು ಬಾಹ್ಯಾಕಾಶ ನಡಿಗೆಗಳನ್ನು ಪೂರ್ಣಗೊಳಿಸಿದ್ದು, 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ನಡೆಸಿದ್ದಾರೆ. ಬಾಹ್ಯಾಕಾಶದಲ್ಲೇ ಮ್ಯಾರಥಾನ್ ಓಡಿದ ಮೊದಲಿಗರು ಆಗಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ