ಸರಸ್ವತಿ*
ಕನ್ನಡ ಚಿತ್ರರಂಗಕ್ಕೆ ಬೆಲ್ ಬಾಟಮ್ ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ನಿರ್ಮಾಪಕ ಸಂತೋಷ್ ಕುಮಾರ್ ಕೆಸಿ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಏಳು ವರ್ಷಗಳ ಗ್ಯಾಪ್ ಬಳಿಕ ತಮ್ಮದೇ ಗೋಲ್ಡನ್ ಹಾರ್ಸ್ ಬ್ಯಾನರ್ ನಡಿ ಹುಬ್ಬಳ್ಳಿ ಹಂಟರ್ಸ್ ಎಂಬ ಚಿತ್ರ ನಿರ್ಮಾಣಕ್ಕೆ ಸಂತೋಷ್ ಇಳಿದಿದ್ದಾರೆ.
ಸಂತೋಷ್ ಕುಮಾರ್ ಅವರ ಹೊಸ ಸಿನಿಮಾಗೆ ಎಡಗೈ ಅಪಘಾತಕ್ಕೆ ಕಾರಣ ನಿರ್ದೇಶಕರು ಸಾಥ್ ಕೊಟ್ಟಿದ್ದಾರೆ. ಈ ಹಿಂದೆ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಮಾಡಿರುವ ಸಮರ್ಥ್ ಬಿ ಕಡ್ಕೋಲ್ ಹುಬ್ಬಳ್ಳಿ ಹಂಟರ್ಸ್ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ.

*ಹೀರೋ ಯಾರು?*
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ಪ್ರಮೋದ್ ಶೆಟ್ಟಿ ಹುಬ್ಬಳ್ಳಿ ಹಂಟರ್ಸ್ ಸಿನಿಮಾದ ನಾಯಕ. ಮಹಾನಟಿ ಖ್ಯಾತಿಯ ಧನ್ಯಶ್ರೀ ಸುಜಿತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಭಾರತದಾದ್ಯಂತ ಇರುವ ಖ್ಯಾತ ಕಂಟೆಂಟ್ ಕ್ರಿಯೇಟರ್ಸ್ ಈ ಚಿತ್ರದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ. ಸಿನಿಮಾದ ಟೈಟಲ್ ಹೇಳುವಂತೆ ಇದು ಉತ್ತರ ಕರ್ನಾಟಕ ಸೊಗಡಿನ ಕಥೆ. ಸಮರ್ಥ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಸಮರ್ಥ್ ಬಿ ಕಡ್ಕೋಲ್ ಸಂಭಾಷಣೆ ಜವಾಬ್ದಾರಿ ನಿಭಾಯಿಸಿದ್ದಾರೆ.

ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಪ್ರಸನ್ನ ಕೇಶವ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಹುಬ್ಬಳ್ಳಿ ಹಂಟರ್ಸ್ ಮೂಲಕ ಸಮರ್ಥ್ ಬಿ ಕಡ್ಕೋಳ್ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲು ಹೊರಟಿದ್ದಾರೆ. ಇದೇ ತಿಂಗಳ 26ರಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.





