ಕಲಿಕೆ ಎಂಬುದನ್ನು ಒಂದು ತಪಸ್ಸಿನಂತೆ ಸಾಧಿಸಿ, ಸತತ ಪ್ರತಿ ಪರೀಕ್ಷೆಯಲ್ಲೂ ಅದ್ಭುತ ರಾಂಕ್ ಗಳಿಸಿರುವ ರಮ್ಯಶ್ರೀ ಪಾದೇಬೆಟ್ಟು ಇಂದಿನ ಯುವ ವಿದ್ಯಾರ್ಥಿಗಳಿಗೆ ಆದರ್ಶ ದಾರಿದೀಪ…..!
ಉಡುಪಿ ತಾಲ್ಲೂಕು ಪಡುಬಿದ್ರೆ ಸಮೀಪ ಪಾದೇಬೆಟ್ಟು ಎಂಬ ಪುಟ್ಟ ಗ್ರಾಮದಲ್ಲಿ ರಮೇಶ್ ರಾವ್ ಹಾಗೂ ಮೀರಾ ದಂಪತಿಯರ ಸುಪುತ್ರಿಯಾಗಿ ಜನಿಸಿದ ಕು. ರಮ್ಯಶ್ರೀ ತದನಂತರ ಸೂರತ್ಕಲ್ ಸಮೀಪ ಹೊಸಬೆಟ್ಟು ಗ್ರಾಮಕ್ಕೆ ಬಂದು ಮನೆ ಹತ್ತಿರವೇ ಇರುವ ಸೂರತ್ಕಲ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು.
ಪ್ರಾಥಮಿಕ ವಿದ್ಯಾಭ್ಯಾಸ
ತನ್ನ ಪ್ರೌಡ ಶಾಲಾ ವಿದ್ಯಾಭ್ಯಾಸವನ್ನು ಅದೇ ಶಾಲೆಯಲ್ಲಿ ಮುಗಿಸಿದರು. ಸುವರ್ಣ ಮಹೋತ್ಸವ ಆಚರಿಸುವ ವಿದ್ಯಾದಾಯಿನಿ ಸಂಘಕ್ಕೆ (2015-26 ವಿದ್ಯಾದಾಯಿನಿ ಸಂಘದ ಸುವರ್ಣ ಮಹೋತ್ಸವ ವರ್ಷ) ತನ್ನ ಕೊಡುಗೆ ನೀಡಬೇಕೆಂಬ ಛಲದೊಂದಿಗೆ ಹತ್ತನೇ ತರಗತಿಯ ಪರೀಕ್ಷೆ ಬರೆದ ಈ ಬಾಲಕಿ ರಾಜ್ಯದಲ್ಲಿ ತೃತೀಯ ರಾಂಕ್ ಹೋಲ್ಡರ್ ಆಗಿ ಹೊರಹೊಮ್ಮಿದರು. ಹತ್ತನೇ ತರಗತಿಯಲ್ಲಿ 625 ಅಂಕಗಳಲ್ಲಿ 623 ಅಂಕ ಗಳಿಸಿದರು. ಮಂಗಳೂರು ತಾಲ್ಲೂಕಿಗೆ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಹಾಗೂ ಕರ್ನಾಟಕ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿ, ತಾನು ಕಲಿತ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದರು.
ಯಾವುದೇ ಒಂದು ಟ್ಯೂಷನ್ ಸಂಸ್ಥೆಗೆ ಹೋಗದೆ ಇಷ್ಟು ಅಂಕ ಗಳಿಸಿದ್ದು ಪವಾಡವೇ ಸರಿ. ರಾಂಕ್ ಬರಲು ಮಂಗಳೂರು ಉಡುಪಿಯಂತಹ ದೊಡ್ಡ ನಗರಗಳ ಶಾಲೆಗೇ ಹೋಗಬೇಕು, ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಟ್ಯೂಷನ್ ಪಡೆದರೆ ಮಾತ್ರ ರಾಂಕ್ ಸಾಧ್ಯ ಎಂಬ ಮಾತು ಸುಳ್ಳು ಎನ್ನುವುದನ್ನು ಸಾಬೀತು ಪಡಿಸಿದರು. ಅವರ ಈ ಸಾಧನೆಗೆ ನಗರದ ಹಾಗೂ ಸುತ್ತಮುತ್ತಲಿನ ಹಲವಾರು ಸಂಘ ಸಂಸ್ಥೆಗಳು, ರೋಟರಿ, ಲಯನ್ಸ್ ನಂತಹ ಮಹಾನ್ ಸಂಸ್ಥೆಗಳು ತಮ್ಮಲ್ಲಿಗೆ ಕರೆಸಿ ಸನ್ಮಾನಿಸಿದರು. ಆಕಾಶವಾಣಿ ಮಂಗಳೂರು, ಟಿವಿ ಖಾಸಗಿ ಚಾನೆಲ್ ನವರು ಇವರನ್ನು ಸಂದರ್ಶಿಸಿದ್ದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ.
ಕಾಲೇಜಿನ ಸೋಪಾನ ಏರಿದಾಗ…..
ಎಸ್.ಎಸ್.ಎಲ್.ಸಿ. ನಂತರ ಮುಂದೇನು ಎನ್ನುವ ಪ್ರಶ್ನೆಗೆ ತಾನೇ ಉತ್ತರ ಹುಡುಕಿ ತನ್ನ ಇಚ್ಛೆಯಂತೆ ವಾಣಿಜ್ಯ ವಿಭಾಗವನ್ನು ಆರಿಸಿ ಮನೆ ಹತ್ತಿರವೇ ಇದ್ದ ಗೋವಿಂದದಾಸ ಪಿ.ಯು. ಕಾಲೇಜಿಗೆ ಸೇರಿದರು. ಅಲ್ಲಿಯೂ ಹಲವಾರು ಕಾಲೇಜು ಹಾಗೂ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದರು. ಅವರ ಹಲವಾರು ಲೇಖನಗಳು ಕಾಲೇಜಿನ ವಾರ್ಷಿಕ `ನವ್ಯ ದಿಗಂತ’ ಪುಸ್ತಕದಲ್ಲಿ ಪ್ರಕಟಗೊಂಡಿದೆ. ನಾಡಿನ ಹೆಸರಾಂತ ಕೆಲವು ವಾರಪತ್ರಿಕೆಗಳಲ್ಲೂ ಇವರ ಬರಹಗಳು ಪ್ರಕಟಗೊಂಡಿವೆ.
2017-18ರ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರಾಂಕ್ ಗಳಿಸಿ ಮತ್ತೊಮ್ಮೆ ತನ್ನ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದರು. ಪಿಯುಸಿ ಪರೀಕ್ಷೆಯ ಆರು ವಿಷಯಗಳಲ್ಲಿ ಇವರು ಐದರಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ಇಂಗ್ಲಿಷ್ ನಲ್ಲಿ 91 ಅಂಕ ಗಳಿಸಿ ಮತ್ತೊಮ್ಮೆ ಇವರು ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಸಿ.ಎ ಪರೀಕ್ಷೆಯಲ್ಲೂ ಅನನ್ಯ ಸಾಧನೆ
ತದನಂತರ ತನ್ನ ಆಸೆಯಂತೆ ತಾನು ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ) ಆಗಬೇಕು. ತನ್ನ ಅಮ್ಮನ ಆಸೆಯನ್ನು ನನಸು ಮಾಡಬೇಕು ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸುವ ಎಂಟ್ರೆನ್ಸ್ ಪರೀಕ್ಷೆಗೆ ಹಾಜರಾಗಿ, ಆ ಪರೀಕ್ಷೆಯಲ್ಲಿ ಒಳ್ಳೆ ಅಂಕ ಪಡೆದು ಉತ್ತೀರ್ಣರಾದರು. 200 ಅಂಕಗಳಲ್ಲಿ 169 ಅಂಕ ಗಳಿಸಿದರು. ನಂತರ ಮೇ 2019ರ ಸಿ.ಎ ಇಂಟರ್ ಪರೀಕ್ಷೆಯಲ್ಲಿ 800 ಅಂಕಗಳಿಗೆ 639 ಅಂಕ ಗಳಿಸಿ ಆಲ್ ಇಂಡಿಯಾದಲ್ಲಿ 16ನೇ ರಾಂಕ್ ಪಡೆದು ಹೊರಹೊಮ್ಮಿದರು. 16ನೇ ರಾಂಕ್ ಗಳಿಸಿ ತಾನು ಹ್ಯಾಟ್ರಿಕ್ ರಾಂಕ್ ವಿಜೇತೆ ಎಂಬ ಬಿರುದು ಪಡೆದರು.
ತದನಂತರ ತನ್ನ ಆರ್ಟಿಕಲ್ ಶಿಪ್ ನ್ನು ಮಂಗಳೂರಿನ ಹೆಸರಾಂತ ಕಾಮತ್‌ರಾವ್ ಸಂಸ್ಥೆಯಲ್ಲಿ ಎರಡು ವರ್ಷ ಪೂರೈಸಿ, ಅಲ್ಲೂ ಎಲ್ಲರ ಪ್ರೀತಿಗೆ ಪಾತ್ರರಾದರು. ನಂತರದ ಒಂದು ವರ್ಷ ಇಂಡಸ್ಟ್ರಿಯಲ್ ಟ್ರೇನಿಂಗ್ ನ್ನು ದೇಶದ ಹೆಸರಾಂತ ಕಂಪನಿ ಎಂ.ಆರ್.ಪಿ.ಎಲ್.ನಲ್ಲಿ ಪೂರೈಸಿದರು. ಅಲ್ಲೂ `ದಿ ಬೆಸ್ಟ್ ಟ್ರೈನಿ’ ಎಂದೆನಿಸಿಕೊಂಡರು.
ನವೆಂಬರ್ 2022ರಲ್ಲಿ ಜರುಗಿದ ಅಖಿಲ ಭಾರತ ಸಿ.ಎ. ಅಂತಿಮ ಪರೀಕ್ಷೆಯಲ್ಲಿ 617 ಅಂಕ ಗಳಿಸಿ ಆಲ್ ಇಂಡಿಯಾದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದರು. ಪ್ರಥಮ ರಾಂಕ್ ಹೋಲ್ಡರ್ ಗೆ 618 ಅಂಕ (ಅವರು ದೆಹಲಿಯವರು). ರಮ್ಯಶ್ರೀಗೆ 617 ಅಂಕ. ಅಂದರೆ ಕೇವಲ ಒಂದೇ ಒಂದು ಅಂಕದಿಂದ ಪ್ರಥಮ ಸ್ಥಾನದಿಂದ ವಂಚಿತರಾದರು.
ಸರಳತೆಯೇ ಸಾಕಾರ
ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ಈ ಸಾಧನೆಗೆ ಹೆತ್ತವರ ಆಶೀರ್ವಾದ, ಉಡುಪಿ ಶ್ರೀ ಕೃಷ್ಣನ ದಯೆ ಹಾಗೂ ತನ್ನ ಎರಡನೇ ತಾಯಿಯಂತಿರುವ ನನ್ನ ಅತ್ತೆಯ ಹಾರೈಕೆ ಹಾಗೂ ಸಹೋದರನ ಬೆಂಬಲವೇ ಕಾರಣ ಎನ್ನುವ ಈಕೆ, ನಿಜ ಜೀವನದಲ್ಲಿ ಸದಾ ಹಸನ್ಮುಖಿ, ನಿಗರ್ವಿ ಹಾಗೂ ಇತರರಂತೆ ಮಾಮೂಲಿ ಹೆಣ್ಣುಮಗಳು.
ಮತ್ತೊಂದು ಅತೀ ಪ್ರಮುಖ ಸಂಗತಿ ಏನೆಂದರೆ ಕು. ರಮ್ಯಶ್ರೀ ಸಿ.ಎ. ಅಂತಿಮ ಪರೀಕ್ಷೆಗೆ ಟ್ಯೂಶನ್ ಗೆ ಎಲ್ಲೂ ಹೋಗದೆ, ಮನೆಯಲ್ಲೇ ಕುಳಿತು, ಓದಿ, ದ್ವಿತೀಯ ರಾಂಕ್ ಗಳಿಸಿದ್ದು ನಿಜಕ್ಕೂ ವಿಸ್ಮಯ ಹಾಗೂ ಹೆಮ್ಮೆಯ ವಿಷಯ! ಚೆನ್ನೈ, ಮುಂಬೈ, ದೆಹಲಿ, ಬೆಂಗಳೂರಿನಲ್ಲಿ ಈಗ ಇದಕ್ಕಾಗಿ ಅಸಂಖ್ಯ ಕೋಚಿಂಗ್ ಸೆಂಟರ್ ಗಳಿವೆ.

ಸ್ವಪ್ರಯತ್ನದಲ್ಲಿ ನಂಬಿಕೆ
ಇವೆಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ವಪ್ರಯತ್ನದಲ್ಲಿ ನಂಬಿಕೆ ಇಟ್ಟು ಯಶಸ್ಸು ಗಳಿಸಿ, ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಹೊರಹೊಮ್ಮಿರುತ್ತಾರೆ. `ಸಾಧಿಸಿದರೆ ಸಂಬಳ ನುಂಗಬಹುದು’ ಎನ್ನುವ ಗಾದೆ ಮಾತು ಇವರಿಗೆ ಸೂಕ್ತವೆನಿಸುತ್ತದೆ. ಇಷ್ಟಕ್ಕೇ ತೃಪ್ತಳಾಗದೆ ಇಂದಿರಾಗಾಂಧಿ ಓಪನ್ ಯೂನಿವರ್ಸಿಟಿಯಿಂದ ಕರೆಸ್ಪಾಂಡೆನ್ಸ್ ಕೋರ್ಸ್ ನಲ್ಲಿ ಬಿ.ಕಾಂ ಪದವಿಯನ್ನೂ ಪಡೆದರು.
ಜನಸಾಮಾನ್ಯರಿಗೆ ಸಿ.ಎ ಅಂದರೆ ಕಬ್ಬಿಣದ ಕಡಲೆ ಎಂದೇ ಅರ್ಥ. ಅಂತಹದ್ದರಲ್ಲಿ ತನ್ನ 21ನೇ ವಯಸ್ಸಿನೊಳಗೆ ಪ್ರಪ್ರಥಮ ಪ್ರಯತ್ನದಲ್ಲಿಯೇ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಎ.ಐ.ಆರ್ 2 ಆಗಿ ಹೊರಹೊಮ್ಮಿ ಬಿ.ಕಾಂ ಡಿಗ್ರಿಯನ್ನೂ ಪೂರೈಸಿರುವರು. ಸಾಧಿಸುವ ಛಲವಿದ್ದರೆ ಏನೂ ಮಾಡಬಹುದು ಎಂಬುದಾಗಿ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ತೋರಿಸಿ, ದಾರಿದೀಪ ಆಗಿದ್ದಾರೆ.
ಆತ್ಮವಿಶ್ವಾಸವೇ ಮೂಲಾಧಾರ
ದಿ. ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್‌ಇಂಡಿಯಾ,’ ಇವರಿಂದ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಸಿದ `ಕಾನ್ವೊಕೇಶನ್’ನಲ್ಲಿ ಲೋಕಸಭೆಯ ಸ್ಪೀಕರ್ ಓಂ.ಬಿರ್ಲಾರರಿಂದ ಸಿ.ಎ. ರಾಂಕ್ ಸರ್ಟಿಫಿಕೇಟ್ ಪಡೆದುಕೊಂಡ ಆ ದಿನ, ತನ್ನ ಜೀವನದ ಮರೆಯಲಾಗದ ಮತ್ತೊಂದು ಸುವರ್ಣ ದಿನ ಎನ್ನುವ ರಮ್ಯಶ್ರೀ ಪ್ರಸ್ತುತ ನಮ್ಮ ದೇಶದ ವಾಣಿಜ್ಯ ನಗರ ಮುಂಬೈಯಲ್ಲಿ ಭಾರತದ ಹೆಸರಾಂತ ಗಣಿ ಕಂಪನಿಯಲ್ಲಿ ಒಂದಾದ `ವೇದಾಂತ’ ಕಂಪನಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮ ಕರ್ನಾಟಕ ರಾಜ್ಯದ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯ ಈ ಪ್ರತಿಭೆ ತನ್ನ ಮುಂದಿನ ಜೀವನದಲ್ಲೂ ಹೀಗೆಯೇ ಯಶಸ್ಸು ಗಳಿಸಿ, ಕೀರ್ತಿ ಮೆರೆಯಲಿ ಎಂಬುದೇ ಓದುಗರೆಲ್ಲರ ಪರವಾಗಿ ಗೃಹಶೋಭಾಳ ಹೃತ್ಪೂರ್ವಕ ಹಾರೈಕೆ!
– ಪಿ. ರಮೇಶ್ ರಾವ್





