ಸರಸ್ವತಿ*
MDM ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಮ್ಯ ಮುಖ್ಯಪಾತ್ರದಲ್ಲಿ ನಟಿಸಿರುವ “ರಕ್ತ ಕಾಶ್ಮೀರ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಾರ್ಸ್ ಸುರೇಶ್ ಅವರು ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.
ಶೀರ್ಷಿಕೆಯೇ ತಿಳಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಕಥಾಹಂದರ ಹೊಂದಿದೆ. ಪಾಕ್ ಆಕ್ರಮಿತ ಉಗ್ರಗಾಮಿಗಳು ಕಾಶ್ಮೀರದಲ್ಲಷ್ಟೇ ಅಲ್ಲ. ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲೂ ದಾಳಿ ನಡೆಸಿ ಸಾವಿರಾರು ಅಮಾಯಕರನ್ನು ಹತ್ಯೆ ಮಾಡಿರುತ್ತಾರೆ. ಇದರಿಂದ ನೊಂದ ಚಿತ್ರದ ನಾಯಕ ಹಾಗೂ ನಾಯಕಿ ಬೆಂಗಳೂರಿನಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಅಲ್ಲಿರುವ ಉಗ್ರರನ್ನು ಮಟ್ಟಹಾಕುವ ಸನ್ನಿವೇವನ್ನು ಈ ಚಿತ್ರದಲ್ಲಿ ಚಿತ್ರಿಸಿಕೊಳ್ಳಲಾಗಿದೆ. ಕಾಶ್ಮೀರದಲ್ಲೇ ಸುಮಾರು ಒಂದು ತಿಂಗಳಿಗೂ ಅಧಿಕ ಚಿತ್ರೀಕರಣ ಮಾಡಲಾಗಿದೆ. ಸಾಕಷ್ಟು ಮಕ್ಕಳು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ದೇಶಪ್ರೇಮ ಸಾರುವ ಈ ಚಿತ್ರವನ್ನು ಕುಟುಂಬ ಸಮೇತ ನೋಡಬೇಕು. ಇನ್ನೂ ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಹದಿನೆಂಟು ನಿಮಿಷಗಳ ಒಂದು ವಿಶೇಷ ಗೀತೆ ಇದೆ. ಈ ಹಾಡಿನಲ್ಲಿ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ ಸೇರಿದಂತೆ ಕನ್ನಡದ ದಿಗ್ಗಜ ನಾಯಕರು ಅಭಿನಯಿಸಿದ್ದಾರೆ. ಇದು ಈವರೆಗೂ ಯಾರು ಮಾಡಿರದ ದಾಖಲೆ ಎನ್ನತ್ತಾರೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು.

ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರೆ “ರಕ್ತ ಕಾಶ್ಮೀರ” ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ಎಂ.ಎಸ್ ರಮೇಶ್ ಅವರದು. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ರಮ್ಯ, ಮುಖೇಶ್ ರಿಶಿ, ದೊಡ್ಡಣ್ಣ, ಓಂಪ್ರಕಾಶ್ ರಾವ್, ಅನಿಲ(ತೆಲುಗು ನಟಿ), ಕುರಿ ಪ್ರತಾಪ್ ಮುಂತಾದವರಿದ್ದಾರೆ.





