ತನಗೊಂದು ನ್ಯಾಯ, ಪರರಿಗೊಂದು ನ್ಯಾಯ ಎಂಬುದು ಸರಿಯೇ? ಮಗಳು ಮಾಡಿದ್ದೆಲ್ಲಾ ಸರಿ ಎನಿಸಿದಾಗ, ಸೊಸೆ ಮಾಡಿದ್ದು ಮಾತ್ರ ಯಾಕೆ ತಪ್ಪು? ಇದನ್ನು ಅರಿತ ಜೀವಗಳು ಸರಿದಾರಿಗೆ ಬಂದವೇ…..?

ಎಲ್ಲ ಮಕ್ಕಳ ಮನೆಯ ತಾಯಿ ತಂದೆಯರಂತೆ ಆ ತಾಯಿ ತಂದೆಯರು ಸಹ ತಮ್ಮ ಮುದ್ದಿನ ಮಗಳಿಗೆ, ತಮ್ಮದೇ ಆದ ಬೇಕು ಬೇಡಗಳ ಮಾನದಂಡಗಳನ್ನು ಇಟ್ಟುಕೊಂಡು, ಮಗಳಿಗೆ ವರಾನ್ವೇಷಣೆಯಲ್ಲಿ ತೊಡಗಿದ್ದರು.

ತಮ್ಮ ಮಗಳಿಗೆ ಗಂಡು ಹುಡುಕುತ್ತಿದ್ದು, ಅಂದ ಚೆಂದದ ವಿದ್ಯಾವಂತ, ಒಳ್ಳೆಯ ನೌಕರಿಯಲ್ಲಿ ಇರುವ ವರನಿಗೆ, ಹಿಂದೆ ಮುಂದೆ ಯಾರೂ ಇಲ್ಲದೆ ಒಬ್ಬನೇ ಮಗನಾದರೆ ಒಳ್ಳೆಯದು ಎಂದು ಮಹದಾಸೆ ಇಟ್ಟುಕೊಂಡಿದ್ದರು. ಜಗತ್ತಿನಲ್ಲಿನ ಸ್ವಾರ್ಥಿ ತಂದೆ ತಾಯಿಯರಂತೆ. ಅವರ ಬಯಕೆ ಸಹಜವಾದದ್ದು ಮತ್ತು ಪ್ರಸ್ತುತ ಜಗತ್ತಿಗೆ ಹಿಡಿದ ಜ್ವಲಂತ ಕನ್ನಡಿಯಾಗಿತ್ತು.

ಮನದಾಸೆ ಹಾಗಿದ್ದರೂ ಬಾಯಲ್ಲಿ ಮಾತ್ರ ಆದರ್ಶದ ಮಾತು ಮುತ್ತುಗಳಾಗಿ ಉದುರುತ್ತಿದ್ದವು. `ಒಳ್ಳೆಯ ಕುಟುಂಬದ ಹುಡುಗ ಬೇಕು,’ ಎಂದು ತಮ್ಮ ಮುದ್ದಿನ ಮಗಳಿಗೆ ವರ ಹುಡುಕುತ್ತಾ ಅಳೆದು ತೂಗಿ ತಮ್ಮ ಒಳ ಮನದ ಆಸೆಗೆ ಒತ್ತು ಕೊಟ್ಟು ಒಬ್ಬ ಹುಡುಗನನ್ನು ನಿರ್ಧರಿಸಿದರು.

ಆ ಹುಡುಗ ಬಡ ತಾಯಿ ತಂದೆಯರ ಮಗನಾಗಿದ್ದು, ಹಳ್ಳಿಯ ಮನೆಯಲ್ಲಿ ಬಾಲ್ಯ ಕಳೆಯುತ್ತಾ ಬೆಳೆದು ವಿದ್ಯಾವಂತ ಬುದ್ಧಿವಂತನಾದನು. ಜೊತೆಗೆ ಅವನು ಪಟ್ಟಣದಿಂದ ಬಹುದೂರದ ಹಳ್ಳಿಯವನು. ಓದಲೆಂದು ಕೆಲವು ವರ್ಷಗಳ ಹಿಂದೆ ಪಟ್ಟಣಕ್ಕೆ ಬಂದನು, ಪಾರ್ಟ್‌ ಟೈಮ್ ಕೆಲಸ ಮಾಡುತ್ತಾ, ತನ್ನ ಓದಿಗೆ ಸ್ವಸಹಾಯ ಮಾಡಿಕೊಂಡನು. ಅವನಿಗೆ ಪಟ್ಟಣದಲ್ಲಿ ನೌಕರಿ, ಅಲ್ಲಿ ಅವನೊಬ್ಬನೇ ವಾಸಿಸುತ್ತಿದ್ದ. ಹೊಟ್ಟೆ ಬಟ್ಟೆ ಕಟ್ಟಿ, ಒಂದು ಹೊತ್ತು ಉಪವಾಸ ಇದ್ದು ಓದಿಕೊಂಡು ನೌಕರಿ ಗಿಟ್ಟಿಸಿಕೊಂಡನು, ಈಗ ಕೈ ತುಂಬಾ ಸಂಬಳ ಪಡೆಯುತ್ತಿದ್ದ.

ಅದೊಂದು ಕುಗ್ರಾಸ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದ ಅವನಿಗೆ, ಗ್ರಾಮದಲ್ಲಿ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವೆಂದು ಅವನ ತಾಯಿ ತಂದಿ, “ನಮ್ಮ ಕಾಲದಲ್ಲೇ ಮಳೆ ಬೆಳೆ ಮಕಾಡೆ ಮಡಿಚಿಕೊಂಡಿರುವಾಗ, ನೀನು ವಯಸ್ಸಿಗೆ ಬಂದಾಗ ಏನು ಪರಿಸ್ಥಿತಿಯೋ ಕಂಡವರಾರು…? ಮಗನೇ, ನೀನು ಓದಿ ಪಟ್ಟಣದಲ್ಲಿ ನೌಕರಿ ಹಿಡಿದು ಅಲ್ಲಿ ಬದುಕು ಕಟ್ಟಿಕೋ. ಎರಡು ಹೊತ್ತಿನ ಗಂಜಿಗಾದರೂ ದಾರಿಯಾದೀತು. ಗ್ರಾಮೀಣ ಬದುಕು ಗಂಜಿಗೂ ಗತಿ ಇಲ್ಲದ್ದು,” ಎಂದು ಬಹಳ ಹಿಂದೆಯೇ ಅವನು ಸಣ್ಣವನಾಗಿದ್ದಾಗ ಕಣ್ಣೀರಿಟ್ಟಿದ್ದರು.

ಅವರದ್ದೊ ಎಲ್ಲಾ ಬಡ ತಂದೆ ತಾಯಿಯರ ಮಗನ ಬಗೆಗಿನ ಕಾಳಜಿಯ ಹಳೇ ಕಹಾನಿ. ಇಲ್ಲೂ ಒಂದು ಒಳ ಸುಳಿವಿದೆ. ಅದೇನೆಂದರೆ ದೊಡ್ಡವನಾದಗ ಮಗ ತಮ್ಮನ್ನು ಕಡೆಗಣಿಸಲಾರ, ತಮ್ಮನ್ನು ನೋಡಿಕೊಳ್ಳಬಹುದು ಎಂಬುದೇ ಆ ಒಳ ಸುಳಿವು.

ತಾಯಿ ತಂದೆಯರು ಹೇಳಿದ್ದು ಯಾಕೋ ಸರಿ ಅನಿಸದೆ, “ಇಲ್ಲೇ ಹೊಲ ಗದ್ದೆಗಳಲ್ಲಿ ಕೆಲಸ ಮಾಡಿ ದುಡಿದು ನಿಮ್ಮನ್ನು ಸಾಕುತ್ತೇನೆ,” ಎಂದ ಮಗ. ಎಷ್ಟೇ ಆಗಲಿ ಕರುಳ ಕುಡಿಯಲ್ಲವೇ? ತಾಯಿ ತಂದೆಯರನ್ನು ತೊರೆದು ಹೋಗಲು ಇಷ್ಟಪಡಲಿಲ್ಲ. “ನೀನು ಕ್ಷಣ ಕ್ಷಣ ಬಿಸಿಲಲ್ಲಿ ಬೆವರಿಳಿಸಿ ಬವಣೆ ಪಡುವುದು ಬೇಡ. ಈ ಹಳ್ಳಿ, ಬಡತನ ನಮ್ಮ ಪಾಲಿಗೆ ಬಂದದ್ದು, ನಮ್ಮ ಜೊತೆಯಲ್ಲೇ ಸಾಯಲಿ. ನೀನು ಉತ್ತಮ ಬದುಕು ಕಟ್ಟಿಕೊ, ಮುಂದೆ ನಿನ್ನ ಮಕ್ಕಳು ಸುಖವಾಗಿ ಬೆಳೆಯಲು ದಾರಿ ಮಾಡಿಕೋ,” ಭವಿಷ್ಯದ ಬಗ್ಗೆ ಕಳಕಳಿ ಮತ್ತು ಮಗನಿಗೆ ಮುಂದಾಗಬಹುದಾದ ಮಕ್ಕಳ ಹಾಗೂ ತಮ್ಮ ಮೊಮ್ಮಕ್ಕಳ ಬಗ್ಗೆ ಅವರ ಮಾತಿನಲ್ಲಿ ಕಾಳಜಿಯ ಮಹಾಪೂರವೇ ಹರಿದಿತ್ತು .ಆಗ ಅವನಿಗೆ ಅಪ್ಪ ಅಮ್ಮ ತನ್ನನ್ನು ಅವರಿಂದ ದೂರ ಮಾಡುತ್ತಿದ್ದಾರೆ ಎಂದೆನಿಸಿ ಖೇದವಾಯಿತು. ಅವರು ಹೇಳಿದ ಮಾತುಗಳನ್ನು ಅಳೆದು ತೂಗಿ ನೋಡಿದಾಗ ತಾಯಿ ತಂದೆಯರು ತನ್ನ ಒಳ್ಳೆಯದಕ್ಕೇ ಮುಂದಾಲೋಚನೆಯಿಂದ ಹೀಗೆ ಹೇಳುತ್ತಿದ್ದಾರೆ ಎನಿಸಿತು ಒಳ ಮನಸ್ಸಿಗೆ. ಸರಿ ಎಂದು ಒಲ್ಲದ ಮನಸ್ಸಿನಿಂದಲೇ ಪಟ್ಟಣ ಸೇರಿದ್ದ.

ಗಾರ್ಡನ್‌ ಸಿಟಿ, ಸಿಲಿಕಾನ್‌ ಸಿಟಿ, ಪಬ್‌ ಕ್ಯಾಪಿಟಲ್, ರಾಕ್‌ ರಾಜಧಾನಿ ಎಂದು ಹೆಸರುವಾಸಿ ಆಗಿರುವ ಪಟ್ಟಣ ಎಲ್ಲರನ್ನೂ ತನ್ನ ಒಡಲಿಗೆ ಸೇರಿಸಿಕೊಳ್ಳುವಂತೆ ಇವನನ್ನು ಒಡಲಿಗೆ ಹಾಕಿಕೊಳ್ಳಲು ಯಾವ ಹಿಂದು ಮುಂದು ನೋಡಲಿಲ್ಲ. ನಗರದ ನಕ್ಷತ್ರಗಳ ಲಿಸ್ಟ್ ಗೆ ಇನೂ ಸೇರ್ಪಡೆಯಾಗಿ ಮಿಂಚತೊಡಗಿದ. ಮೊಟ್ಟೆಯಿಂದ ಚಿಟ್ಟೆಯಾದಂತೆ ಏಳಿಗೆ ಹೊಂದಿದ. ಚಿಟ್ಟೆಯ ಜೀವನ ಚಕ್ರ ನಾಲ್ಕು ಹಂತಗಳನ್ನು ಹೊಂದಿದೆ. ಮೊಟ್ಟೆ, ಲಾರ್ವಾ, ಪೊರೆ ಮತ್ತು ವಯಸ್ಕ ಮೊಟ್ಟೆಯಿಂದ ಹೊರಬರುವ ಲಾರ್ವಾ ಅಥವಾ ಕ್ಯಾಟರ್‌ ಪಿಲ್ಲರ್‌ ಜೀವನ ಚಕ್ರದಲ್ಲಿ ಎರಡನೇ ಹಂತವಾಗಿದೆ. ಮರಿ ಹುಳುಗಳು ಸಾಮಾನ್ಯವಾಗಿ ಆದರೆ ಯಾವಾಗಲೂ ಅಲ್ಲ, ಹಲವಾರು ಜೋಡಿ ಸುಳ್ಳು ಕಾಲುಗಳು ಅಥವಾ ಪ್ರಿಯೋಗ್‌ ಗಳೊಂದಿಗೆ ಹಲವಾರು ಜೋಡಿ ಕಾಲುಗಳನ್ನು ಹೊಂದಿರುತ್ತವೆ.

ಹಾಗೆಯೇ ಇವನೂ ಚಿಟ್ಟೆಯ ಜೀವನ ಚಕ್ರದಂತೆ ನಾಲ್ಕು ಹಂತ ದಾಟಿದವು. ಓದಿದ, ಬೆಳೆದ, ದೊಡ್ಡವನಾದ, ಉತ್ತಮ ನೌಕರಿ ಹಿಡಿದ. ಸುಂದರ ಚಿಟ್ಟೆಯಾಗಿ ರೂಪುಗೊಂಡು ಆಕರ್ಷಕವಾಗಿ ನೋಡುವವರ ಕಣ್ಣಿಗೆ ಒತ್ತುವಂತಾದವು. ಮದುವೆಗೆ ಸಿದ್ಧನಾಗಿದ್ದವನು ಮದುವೆಯಾದ. ಮದುವೆಗಳನ್ನು ಸ್ವರ್ಗದಲ್ಲಿ ಮಾಡಲಾಗುತ್ತದೆ ಮತ್ತು ಭೂಮಿಯ ಮೇಲೆ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಜನಪ್ರಿಯ ನಂಬಿಕೆಯು ಅನೇಕರ ಮಟ್ಟಿಗೆ ನಿಜವಾಗಿದೆ, ಏಕೆಂದರೆ ಇದು ಎರಡು ಜೀವಗಳ ನಡುವಿನ ವಿಶೇಷ ಬಂಧವಾಗಿದೆ.

ಗಂಡು ಹೆಣ್ಣು ಅವರ ಜೀವಿತಾವಧಿಯಲ್ಲಿ ಒಟ್ಟಿಗೆ ಜೀವಿಸುವುದಾಗಿ ಭರವಸೆ ನೀಡಿದ ನಂತರ ಮದುವೆಯ ನಂಟು ಕಟ್ಟಿಕೊಳ್ಳುತ್ತಾರೆ. ಇದು ಎರಡು ಹೃದಯಗಳ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಐಕ್ಯವಾಗಿದೆ. ಇದು ಮಾನವ ಸಂಬಂಧಗಳಿಗೆ ಗಮನಾರ್ಹ ಸ್ಥಿರತೆ ಮತ್ತು ಹೊಂದಾಣಿಕೆಯನ್ನು ತರುತ್ತದೆ, ಇಲ್ಲದಿದ್ದರೆ ಅದು ಅಪೂರ್ಣವಾಗಿದೆ. ಸಂಸ್ಕೃತಿ, ಜೀವನಕಲೆ ಮತ್ತು ನಾಗರಿಕತೆಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾಯಿಸುವಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಇದರಿಂದ ಗಂಡು ಹೆಣ್ಣು ಸಮೃದ್ಧಿ ಬದುಕು ಕಟ್ಟಿಕೊಳ್ಳುತ್ತಾರೆ.

ಮದುವೆ ಒಬ್ಬರ ಜೀವನದಲ್ಲಿ ಒಂದು ಪ್ರಮುಖ ತಿರುವು ಎಂದು ಸಾಬೀತುಪಡಿಸುತ್ತದೆ. ಸಮಾಜದಲ್ಲಿ ಇಬ್ಬರು ವ್ಯಕ್ತಿಗಳು ಒಟ್ಟಿಗೆ ವಾಸಿಸಲು ಪರವಾನಗಿ ಆಗಿದೆ. ಯಶಸ್ವೀ ದಾಂಪತ್ಯದ ಕೀಲಿಯು ಪ್ರೀತಿ, ತಿಳಿವಳಿಕೆ, ಪರಸ್ಪರ ಗೌರವ, ನಂಬಿಕೆ, ಬದ್ಧತೆ ಮತ್ತು ಒಗ್ಗಟ್ಟಿನದಾಗಿರುತ್ತದೆ. ಅನೇಕ ದಂಪತಿಗಳು ತಮ್ಮ ವೈವಾಹಿಕ ಸಂಬಂಧಗಳಲ್ಲಿ ಎಲ್ಲಾ ಪ್ರಮುಖ ಅಂಶಗಳನ್ನು ಕಂಡುಕೊಳ್ಳಲು ಸಮರ್ಥರಾಗಿದ್ದಾರೆ. ಇತರರು ತಮ್ಮ ಬಂಧನದಲ್ಲಿ ಒಂದು ಅಂಶ ಅಥವಾ ಹೆಚ್ಚಿನ ಕೊರತೆಯನ್ನು ಕಂಡುಕೊಳ್ಳುತ್ತಾರೆ.

ಎಲ್ಲರೂ ತಿಳಿದಿರುವಂತೆ ಜೀವನ ಸುಖದ ಸುಪ್ಪತ್ತಿಗೆ ಅಲ್ಲ, ಸಮಯ ಸಂದರ್ಭಗಳು ನಾವು ಅಂದುಕೊಂಡಂತೆ ನಡೆಯದೆ ಆಶ್ಚರ್ಯಕರ ತಿರುವುಗಳನ್ನು ತಂದೊಡ್ಡುತ್ತವೆ. ಅಂತಹ ಸಮಯದಲ್ಲಿ ಬದಲು ಮಾರ್ಗಗಳು, ಹೊಂದಾಣಿಕೆಗಳು ಮತ್ತು ಒಮ್ಮತದ ಪರಿಹಾರ ಹುಡುಕಿ ಮುಂದುವರಿಯಬೇಕಾಗುತ್ತದೆ. ಹಠವಾದಿ ಮನಸ್ಥಿತಿ ಮದುವೆಯ ಪವಿತ್ರ ಬಂಧಕ್ಕೆ ಚ್ಯುತಿ ತರುತ್ತವೆ. ಇವು ಸಾಮಾನ್ಯವಾಗಿ ಮದುವೆ ಸಂದರ್ಭಗಳಲ್ಲಿ ಪ್ರಕಟಗೊಳ್ಳುತ್ತವೆ.

ಇಲ್ಲೂ ಹಾಗೆ ಮದುವೆಯ ಸಮಯದಲ್ಲಿ ಹುಡುಗನನ್ನು ಮತ್ತು ಬೆರಳೆಣಿಕೆಯ ಅವನ ಕಡೆಯವರನ್ನು ಮತ್ತು ಅವರ ಬಂಧು ಬಳಗದವರನ್ನು ಕೀಳಾಗಿ ನೋಡಲಾಯಿತು. ಅವನ ತಾಯಿ ತಂದೆಯರು ಮನನೊಂದು, ಭಾರವಾದ ಮನಸ್ಸಿನಿಂದ ಹಳ್ಳಿ ಸೇರಿದರು. ಹುಡುಗನ ಕಡೆಯವರು ಎಂದಲ್ಲದಿದ್ದರೂ ಬಂಧುಗಳೆಂದು ಕನಿಷ್ಠ ಮರ್ಯಾದೆಯನ್ನೂ ತೋರಿಸಲಿಲ್ಲ. ಹುಡುಗಿಯ ಕಡೆಯವರು ಮದುವೆ ಸಮಾರಂಭದಲ್ಲಿ ಸಂಭ್ರಮದಿಂದ ನಲಿಯಬೇಕಾದ ದಿನ ಹುಡುಗ ಮತ್ತವನ ತಾಯಿ ತಂದೆಗೆ ನೋವಾಯಿತು. ಅವನು ಆಘಾತಕ್ಕೆ ಒಳಗಾದರೂ ಸಾವರಿಸಿಕೊಂಡು ತನ್ನನ್ನು ತಾನು ಸಂಭಾಳಿಸಿಕೊಂಡ.

working-husband-story2

ಮದುವೆಯಾಗಿ ಬಂದ ಹುಡುಗಿ, ಹುಡುಗನ ಹಳ್ಳಿ ಮನೆಗೆ ಕಾಲಿಡದೆ ಪಟ್ಟಣ ಸೇರಿ ಹುಡುಗನ ಜೊತೆ ಜೀವನ ಆರಂಭಿಸಿದಳು. ಮೊದ ಮೊದಲು ಮಧು, ಮಧುಚಂದ್ರ ಸವಿಯಾದ ಮಾತು, ಸಿಹಿಯಾದ ಊಟ ಸ್ವರ್ಗವೇ ಧರೆಗೆ ಇಳಿದಂತೆ ಎನಿಸಿತ್ತು. ನವ ಜೋಡಿಗೆ, ಒಬ್ಬರೊಬ್ಬರ ಮೋಡಿಗೆ ಆಕರ್ಷಣೆಗೆ ಸಮಯ ಕಳೆದಂತೆ, ರಾತ್ರಿ ಊಟ ಬೆಳಗ್ಗೆಗೆ ಹಳಸಿದಂತೆ, ತಂಗಳನ್ನಕ್ಕೆ ಒಗ್ಗರಣೆ ಹಾಕಿ ಹೊಸ ಅಡುಗೆಗೆ ಚಿತ್ರಾನ್ನ ಎಂದು ಕರೆದಂತೆ. ರಾತ್ರಿಯ ಮಧುರತೆ ಬೆಳಗಾಗಲು ಚಿತ್ರಾನ್ನವಾಗುತ್ತಿತ್ತು. ಬರುಬರುತ್ತಾ ಚಿತ್ರಾನ್ನ ಹೋಗಿ ರಾತ್ರಿ ಅನ್ನಕ್ಕೆ ಮೊಸರು ಕಲಸಿ ಮೊಸರನ್ನವಾಗತೊಡಗಿತು.

ಒಂಟಿಯಾಗಿದ್ದ ಹುಡುಗನಿಗೆ ಬದುಕಿನ ಅನಿವಾರ್ಯತೆ ಮತ್ತು ಗಂಡು ಹೆಣ್ಣು ವಿಷಮ ಪರಿಸ್ಥಿತಿಯಲ್ಲಿ ಕೂಡಿ ಬಾಳಬೇಕಾದ ಸಂಕೀರ್ಣತೆ ಅರ್ಥವಾಗತೊಡಗಿದವು. ದೂರದೂರಿನ ಅಪ್ಪ ಅಮ್ಮನಿಗೆ ತಿಂಗಳಿಗೊಂದು ಪತ್ರ, ಒಂದು ಮನಿ ಆರ್ಡರ್‌ ಬಿಟ್ಟರೆ ಸಂಪರ್ಕ ವಿರಳವಾಗತೊಡಗಿತು. ಕೈ ಹಿಡಿದ ಬದುಕುವ ತುಸು ಭಾರ ಎನಿಸತೊಡಗಿತು. ಹಿಡುಕೊಂಡ ಇನ್ನೊಂದು ಆಕ್ಟೋಪಸ್ ಹಿಡಿತನ್ನು ಭದ್ರವಾಗಿಸತೊಡಗಿತು. ಹುಡುಗ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡ. ಉಸಿರು ಕಟ್ಟಿಸುವ ಜಿಗುಟು ಹಿಡಿತ ಅದು. ಕೆಲವೊಂದು ಹೇಳದೇ ಅರ್ಥ ಮಾಡಿಕೊಳ್ಳಬೇಕು. ಇನ್ನೂ ಕೆಲವೊಂದು ಅರ್ಥ ಮಾಡಿಕೊಂಡು ಹೇಳಬೇಕು ಎನ್ನುವ ಹಾಗೆ ಆಯಿತು ಅವನ ಪರಿಸ್ಥಿತಿ.

ಹುಡುಗಿ ಹೇಳದೆ ಅರ್ಥಮಾಡಿಕೊಳ್ಳುತ್ತಿದ್ದ. ಏನಾದರೂ ಹೇಳಬೇಕೆಂದಾಗ ಮೊದಲು ಅರ್ಥ ಮಾಡಿಕೊಂಡು ನಂತರ ಹೇಳುತ್ತಿದ್ದ. ಒಟ್ಟಿನಲ್ಲಿ ಡಿವಿಜಿಯವರು ಹೇಳಿದ ಅರ್ಥದಲ್ಲಿ ಬದುಕು ಜಟಕಾ ಬಂಡಿಯಂತೆ ಸಾಗಿತು. ಅವನ ಅಮ್ಮ ಅಪ್ಪ ಅವನ ಮನೆಗೆ ಬರದಂತೆ ನೋಡಿಕೊಂಡರು ಹುಡುಗ ಹುಡುಗಿ. ಹಲವು ವಿಷಯಗಳನ್ನು ಹುಡುಗಿ ಹೇಳದೇ ಅರ್ಥ ಮಾಡಿಸಿದಳು. ಹುಡುಗ ಹೇಳಿಸಿಕೊಳ್ಳದೆ ಅರ್ಥ ಮಾಡಿಕೊಂಡ.

ಪಟ್ಟಣದಲ್ಲಿ ಇಬ್ಬರ ಬದುಕು ಚೆನ್ನಾಗಿ ನಡೆಯುತ್ತಿತ್ತು. ಹುಡುಗ ಹುಡುಗಿಯ ಬೇಕು ಬೇಡಗಳಿಗೆ ಬದ್ಧನಾಗಿದ್ದ. ತಾಯಿ ತಂದೆಯರಿಗೆ ತಿಂಗಳಿಗೊಮ್ಮೆ ಪತ್ರ ಮತ್ತು ಮನಿ ಆರ್ಡರ್‌ ಕಳುಹಿಸುವುದರಲ್ಲಿ ವಿಧೇಯನಾಗಿದ್ದ. ಹುಡುಗ ತನ್ನ ಮೂಲ ಬೇರುಗಳನ್ನು ಬಿಡಿಸಿಕೊಳ್ಳಲು ಸುತಾರಾಮ್ ಬಯಸಲಿಲ್ಲ. ಮಗನ ಹೊಸ ವೈವಾಹಿಕ ಬದುಕಿನ ಒಡನಾಟದಿಂದ ಹೆತ್ತವರು ತಿಳಿದುಕೊಂಡಿದ್ದು ಇಷ್ಟು, ಹುಡುಗ ಸದಾ ಪಟ್ಟಣದಲ್ಲಿರುತ್ತಾನೆ. ಹುಡುಗಿ ಹಳ್ಳಿಗೆ ಹೋಗಿ ಬಾಳುವೆ ಮಾಡುವಂಥದ್ದೇನೂ ಇಲ್ಲ.

ಹುಡುಗ ಅವನ ಅಪ್ಪ ಅಮ್ಮನಿಗೆ ಅಲ್ಪಸ್ವಲ್ಪ ಹಣ ಕಳುಹಿಸಿದರೆ ಅವರ ಪಾಡಿಗೆ ಅವರು ಸುಮ್ಮನಿರುತ್ತಾರೆ. ಹಣವನ್ನೇ ಕಾಣದ ಅವರು ತಿಂಗಳಿಗೊಮ್ಮೆ ಹಣ ದೊರಕಿತೆಂದರೆ ಹುಡುಗನ ತಂಟೆಗೆ ಬರುವುದಿಲ್ಲವೆಂದು ನಂಬಿದ್ದರು ಹುಡುಗಿಯ ತಾಯಿ ತಂದೆ. ಅದರಂತೆ ಹುಡುಗಿಯೇ ತಿಂಗಳಿಗೆ ಸರಿಯಾಗಿ ಹಣ ಪಡೆದು ತಾನೇ ಎಂ.ಓ. ಮಾಡಿ ಗಂಡನಿಂದ ಭೇಷ್‌ ಎನಿಸಿಕೊಂಡಳು. ಗಂಡನಿಗೆ ಇದೆಲ್ಲಾ ಅರ್ಥವಾದರೂ ದಿವ್ಯ ಮೌನ ತಾಳಿದ್ದ. ಏಕೆಂದರೆ ಅವನ ಅಪ್ಪ ಅಮ್ಮನಿಗೆ ಅವನಿಗೆ, “ನಾವು ಬೀಳುವ ಮರಗಳು ಒಣಗಿದ ತೊಗಟೆಗಳು. ಬಾಗಿ ಬೀಳುವ ರೆಂಬೆಗಳು. ಭೂತಾಯಿಯ ಒಡಲಲ್ಲಿ ಸೇರಬೇಕಾದರು. ಇಂದು ಇಲ್ಲಾ ಜಾಸ್ತಿ ಎಂದರೆ ನಾಳೆಯೋ! ವ್ಯತ್ಯಾಸವೇನು? ಒಂದು ದಿನ ಹೆಚ್ಚಿಗೆ ಕೂಳು. ತಿಂದರೂ ಆಯಿತು ತಿನ್ನದಿದ್ದರೂ ಆಯಿತು. ಸ್ವಲ್ಪದರಲ್ಲಿ ಧೂಳಿನಲ್ಲಿ ಧೂಳಾಗುವರು. ನೀನು ನಮ್ಮ ಬಗ್ಗೆ ಚಿಂತಿಸಬೇಡ. ನಿನ್ನ ಮುಂದಿನ ಬದುಕು ಹಸನಾಗಲಿ,” ಎಂದು ನಿರ್ವಿಕಾರ ಮನೋಭಾವದಿಂದ ಹರಸಿದರು.

ಮೂವರ ಕಣ್ಣಿನಲ್ಲಿ ಜಲಪಾತ ದುಮುಕಿದವು. ಮಾಡಿಕೊಂಡ ಹುಣ್ಣು ಕೆರೆದು ಹೆಚ್ಚು ಮಾಡಿಕೊಳ್ಳುವುದರಲ್ಲಿ ಏನಿದೆ? ಬರೀ ಹುಚ್ಚುತನವಾದೀತು. ಸುಮ್ಮನಿದ್ದರೆ ಅದೇ ಒಣಗುತ್ತದೆ. ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬಂತೆ ಉದಾಸೀನ ಮೈಗೂಡಿಸಿಕೊಂಡರು. ಅಂದಿನಿಂದ ಅವನು ಸ್ಥಾಯಿಸ್ಥಿತಿ ತಲುಪಿದ. ಅವನಿಗೆ `ಕ್ವೀನ್‌ ಆಫ್‌ ಮೆಲೋಡಿ’ ಲತಾ ಮಂಗೇಶ್ಕರ್ ಉದ್ಗರಿಸಿದ ಅವರ ಅಂತಿಮ ದಿನಗಳ ಮಾತುಗಳು ನೆನಪಾದವು.

`ನನ್ನ ಗ್ಯಾರೇಜ್‌ ನಲ್ಲಿ ವಿಶ್ವದ ಅತ್ಯಂತ ದುಬಾರಿ ಬ್ರಾಂಡ್‌ ಕಾರು ನಿಂತಿದೆ. ಆದರೆ ನಾನು ವೀಲ್ ಚೇರ್‌ ಮೇಲೆ ಕೂತಿದ್ದೇನೆ! ಈ ಜಗತ್ತಿನಲ್ಲಿ ಎಲ್ಲಾ ರೀತಿಯ ವಿನ್ಯಾಸಗಳು ಮತ್ತು ಬಣ್ಣಗಳು, ದುಬಾರಿಯ ಬಟ್ಟೆಗಳು, ದುಬಾರಿ ಶೂಗಳು, ದುಬಾರಿ ಪರಿಕರಗಳು ಎಲ್ಲವೂ ನನ್ನ ಮನೆಯಲ್ಲಿವೆ. ಆದರೆ ಆಸ್ಪತ್ರೆಯವರು ಕೊಟ್ಟ ಚಿಕ್ಕ ಗೌನ್‌ನಲ್ಲಿ ನಾನಿದ್ದೇನೆ! ನನ್ನ ಬ್ಯಾಂಕ್‌ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಪ್ರಯೋಜನವಾಗಿಲ್ಲ. ನನ್ನ ಮನೆ ನನಗೆ ಅರಮನೆಯಂತಿದೆ. ಆದರೆ ನಾನು ಆಸ್ಪತ್ರೆಯಲ್ಲಿ ಸಣ್ಣ ಹಾಸಿಗೆಯ ಮೇಲೆ ಮಲಗಿದ್ದೇನೆ. ನಾನು ಈ ಜಗತ್ತಿನಲ್ಲಿ ಪಂಚತಾರಾ ಹೋಟೆಲ್ ‌ಗಳಲ್ಲಿ ಚಲಿಸುತ್ತಿದ್ದೆ. ಆದರೆ ಈಗ ನಾನು ಆಸ್ಪತ್ರೆಗೆ ಹೋಗಬೇಕಿದೆ,’ ಖ್ಯಾತಿವೆತ್ತ ಮಹಾನ್‌ ಗಾಯಕಿಯೊಬ್ಬರು ಬದುಕಿನ ಘೋರ ಸತ್ಯವನ್ನು ಹೀಗೆ ಬಿಚ್ಚಿಟ್ಟಿದ್ದಾರೆ. ದುಡ್ಡೇ ಸರ್ವಸ್ವ ಎನ್ನುವವರಿಗೆ ಇದೊಂದು ಬದುಕಿನ ವಿರಾಟ ದರ್ಶನ.

ಹುಡುಗ ಅರ್ಥ ಮಾಡಿಕೊಂಡಿದ್ದ ನೋವು ನಲಿವುಗಳನ್ನು, ಸುಖ ದುಃಖಗಳನ್ನು, ಆಚಾರ ವಿಚಾರಗಳನ್ನು. ಬುದ್ಧಿ ಆದ ಬೋಧಿ ವೃಕ್ಷದ ಕೆಳಗಿನ ಬುದ್ಧ, ಗೌತಮ ಬುದ್ಧನಾಗಿದ್ದ. ಲೌಕಿಕ ವಸ್ತುಗಳು ಅವನಿಗೆ ಆಕರ್ಷಕ ಎನಿಸಲಿಲ್ಲ. ಅಗತ್ಯಕ್ಕೆ ಬೇಕಾದನ್ನು ಮಾತ್ರ ಅವನು ಬಳಸಲು ಆರಂಭಿಸಿದ. ಅದರಂತೆಯೇ ಜೀವಿಸಲೂ ಆರಂಭಿಸಿದ.

ಕಾಲ ಹೀಗೇ ಇರುವುದಿಲ್ಲವಲ್ಲ….. ಹುಡುಗಿಯ ಅಪ್ಪ ಅಮ್ಮ ಒಂದು ದಿನ ತಮ್ಮ ಮಗಳ ಮನೆಗೆ ಬಂದರು. ತಾಯಿ ತಂದೆಯರನ್ನು ನೋಡಿ ಮಗಳಿಗೆ ಹಿಗ್ಗೋ ಹಿಗ್ಗು. ಸಮಯ ಮಾಡಿಕೊಂಡು ಅತ್ತೆ ಮಾವ ತನ್ನ ಮನೆಗೆ ಬಂದಿದ್ದಕ್ಕೆ ಅಳಿಯನಿಗೂ ಸಂತಸವಾಯಿತು. ಹಿರಿಯರ ಉಪಚಾರಕ್ಕೆ ಯಾವ ಚ್ಯುತಿಯೂ ಬಾರದಂತೆ ನಡೆದುಕೊಂಡರು ಮಗಳು ಅಳಿಯ. ಅತ್ತೆ ಮತ್ತು ಮಾವನ ಮುಖದಲ್ಲಿ ಮ್ಲಾನವತೆ ಮನೆ ಮಾಡಿರುವುದನ್ನು ಅಳಿಯ ಗುರುತಿಸಿದ. ನೇರವಾಗಿ ಕೇಳಲು ಮನಸ್ಸಾಗಲಿಲ್ಲ ಅವನಿಗೆ, ಸೂಕ್ಷ್ಮವಾಗಿ ಹೆಂಡತಿಯಲ್ಲಿ ವಿಚಾರಿಸಿದ. ಅವನು ಹೆಂಡತಿಯ ಜೊತೆಗಿನ ಸಹಬಾಳ್ವೆಯಿಂದ ಬೇರೆಯವರು ಹೇಳದೇ ಅರ್ಥ ಮಾಡಿಕೊಳ್ಳುವುದನ್ನು ಅರ್ಥೈಸಿಕೊಂಡಿದ್ದ.

ತಂದೆ ಮನೆಯ ಗುಟ್ಟು ರಟ್ಟಾಗುವುದಲ್ಲ ಎಂಬ ಶಂಕೆಯಿಂದ ಬಾಯಿತೆರೆಯಲು ಅವಳು ಅನುಮಾನಿಸಿದಳು. ಇದನ್ನರಿತ ಅಳಿಯ ಮನೆಯ ಹತ್ತಿರವೇ ಒಂದು ಸುಂದರವಾದ ಪಾರ್ಕ್‌ ನ್ನು ಹೊಸದಾಗಿ ನಿರ್ಮಿಸಿದ್ದಾರೆ. ಹೋಗಿ ಬರೋಣ ಎಂದು ಅತ್ತೆ ಮಾವ ಮತ್ತು ಹೆಂಡತಿಯನ್ನು ಹೊರಡಿಸಿದ.

ಅತ್ತೆ ಮಾವರಿಗೆ ಹೊಸ ಪಾರ್ಕ್‌ ನೋಡಿ ಆನಂದವಾಯಿತು. ಎಲ್ಲರ ಮುಖದಲ್ಲಿ ನಗು ಅರಳಿ, ನವಚೈತನ್ಯ ಮೂಡಿತು. ಸ್ವಲ್ಪ ಹೊತ್ತು  ಪಾರ್ಕ್‌ ನಲ್ಲಿ ವಿಹರಿಸಿದ ನಂತರ ಅಲ್ಲೇ ಹತ್ತಿರವಿದ್ದ ಚಾಟ್ಸ್ ಅಂಗಡಿಯಲ್ಲಿ ಚಾಟ್ಸ್ ತಿಂದು ಮನೆಗೆ ಹಿಂದಿರುಗಿದರು. ಮನೆಗೆ ಬಂದ ಮೇಲೆ ಸುವಾಸನಾ ಭರಿತ ಲಾಘ್‌ ಬಕ್ರಿ ಚಹಾ ಸೇವನೆಯಾಯಿತು.

ಚಹಾ ಕುಡಿಯುವ ಸಮಯದಲ್ಲಿ ಮಾವ ಮಾತು ತೆಗೆದರು. ನನಗೀಗ ಮನೆಯಲ್ಲಿ ಬಹಳ ಬೇಸರವಾಗುತ್ತದೆ. ಮಗ ಸೊಸೆ ನನ್ನನ್ನು ಸರಿಯಾಗಿ ನೋಡಿಕೊಳ್ಳದಿದ್ದರೂ ಬೇಡ, ನನ್ನ ಹೆಂಡತಿಯನ್ನೂ ಸಹ ಸರಿಯಾಗಿ ನೋಡಿಕೊಳ್ಳುವುದಿಲ್ಲ. ತುಂಬಾ ಬೇಸರ ತರಿಸುತ್ತಾರೆ, ಎದುರಿಗೆ ಬಹಳ ನಾಜೂಕವಾಗಿ ವರ್ತಿಸುತ್ತಾರೆ. ಸೊಸೆ ಹಿಂದಿನಿಂದಲೇ ಎಲ್ಲಾ ಕರಾಮತ್ತು ಮಾಡುತ್ತಾಳೆ. ಮಗ ಅವಳಿಗೆ ಹಿಮ್ಮೇಳ ಹಾಡುತ್ತಾನೆ. ಮಾವ ತಮ್ಮ ಮನದಲ್ಲಿ ಹೆಪ್ಪುಗಟ್ಟಿ ಲಾವವಾಗಿದ್ದ ಸಿಟ್ಟನ್ನು ಹೊರಹಾಕಿದರು. ಜ್ವಾಲಾಮುಖಿ ಸ್ಛೋಟಗೊಂಡು ಉಗುಳಲಾರಂಭಿಸಿತು. ಈ ಮಾತುಗಳನ್ನು ಆಡುವಾಗ ಅವರು ನಿಜವಾಗಲೂ ನಿಗಿನಿಗಿಸುವ ಕೆಂಡದಂತೆ ಕಂಡರು.

ಸೊಸೆ ಮತ್ತು ಮಗನ ಬೇಸರ ತರಿಸುವ ನಡವಳಿಕೆಯ ಬಗ್ಗೆ ಮಾವನ ಕೋಪ ಭುಗಿಲೆದ್ದಿತು. ಅಳಿಯ ಸಮಾಧಾನ ಮಾಡಿದ. ಅವರ ಕೋಪ ಇಳಿಯಲು ಸ್ವಲ್ಪ ಸಮಯವೇ ಬೇಕಾಯಿತು. ಕಾಲ ಬದಲಾಗಿದೆ, ಅದಕ್ಕೆ ತಕ್ಕಂತೆ ನಮ್ಮ ಅಗತ್ಯಗಳು ಮತ್ತು ಆಸೆಗಳು ಬದಲಾಗಿವೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ನಾವು ಬದಲಾಗಬೇಕು, ನಮ್ಮ ನಡೆ ನುಡಿ ಹರಿಯುವ ನೀರಿನಂತೆ ಇರಬೇಕು. ಅದು ಹಳ್ಳ ದಿಣ್ಣೆಯಿಂದ ಹರಿದು ಜಲಪಾತವಾಗಿ ದುಮುಕಿ ಸಾಗುವಂತಿರಬೇಕು ಎಂದರು.

“ನೀವು ತಿಳಿದವರು ನಿಮಗೆ ಹೇಳುವಷ್ಟು ತಿಳಿವಳಿಕೆಯನ್ನು ದೇವರು ನನಗೆ ಕೊಟ್ಟಿಲ್ಲ, ನನ್ನನ್ನು ಕ್ಷಮಿಸಿ,” ಎಂದು ಅಳಿಯ ವಿನಮ್ರವಾಗಿ ಹೇಳಿದ.

“ನಾವು ಅವರನ್ನು ಮನೆ ಬಿಟ್ಟು ಬೇರೆ ಕಳುಹಿಸುತ್ತೇವೆ. ನಮಗೆ ಅವರ ಜೊತೆ ಏಗಿ ಸಾಕಾಗಿದೆ. ಅವರ ಪಾಡಿಗೆ ಅವರಿರಲಿ, ನಮ್ಮ ಪಾಡಿಗೆ ನಾವಿರುತ್ತೇವೆ,” ಅತ್ತೆ ದನಿಗೂಡಿಸಿದರು. ಅವರ ಮಾತಿನಲ್ಲೂ ಅಸಮಾಧಾನ ಉಕ್ಕಿ ಹರಿಯಿತು. ಎಲ್ಲವನ್ನೂ ಚಿಕ್ಕವರ ಮುಂದೆ ಹೇಳಿಕೊಳ್ಳಲು ಆಗುವುದಿಲ್ಲ ಎಂಬ ಸಂಕೋಚ ಅವರ ಮುಖದಲ್ಲಿ ಅಡಗಿತ್ತು.

“ನಿಮ್ಮ ವಯಸ್ಸಿಗೆ ಯಾರದಾದರೂ ಸಹಾಯ ಬೇಕೆಬೇಕು. ನಿಮಗೆ ಕೆಲವು ಸಂದರ್ಭಗಳಲ್ಲಿ ಸಹಾಯದ ಅವಶ್ಯಕತೆ ಇದೆ.  ಬದುಕಿನ ಸಂಧ್ಯಾಕಾಲದಲ್ಲಿ ಇನ್ನೊಬ್ಬರ ಆಸರೆ ಇಲ್ಲದೆ ಜೀವಿಸುವುದು ಕಠಿಣ. ಸಂಜೆಯ ಸೂರ್ಯನನ್ನು ನೋಡಿದಾಗ ಸೋತ ಹತಾಶ ಭಾವ ಕಾಣುತ್ತದೆ ಅಲ್ಲವೇ? ಭೂಮಿ, ಸೂರ್ಯ ಒಂದೇ ಆದರೂ ಸಮಯ ಸಂದರ್ಭಕ್ಕೆ ಅನುಗುಣವಾಗಿ ಭಾವನೆಗಳು ಬದಲಾಗುತ್ತದ್ದಲ್ಲವೇ? ನಾವು ಹಾಗೆ ಬದಲಾಗಬೇಕು.

“ಅಗತ್ಯಕ್ಕೆ ಅನುಗುಣವಾಗಿ ವೇಷ ಮತ್ತು ಭಾವಗಳನ್ನು ಬದಲಿಸಬೇಕು. ಬದಲಾವಣೆ ಜಗದ ನಿಯಮ, ಬದುಕಲ್ಲಿ ಬದಲಾವಣೆಯೊಂದೇ ಶಾಶ್ವತ ಮಾರ್ಗ. ನೀವು ವಯಸ್ಸಾದವರು ಮೇಲಾಗಿ ಮಧುಮೇಹಿಗಳು, ಅತ್ತೆ ಬಿ.ಪಿ ಪೇಶೆಂಟ್‌. ಜೀವ ಕಾಡುವ ಸಮಸ್ಯೆಗಳನ್ನು ಇಟ್ಟುಕೊಂಡು ಬೇರೆ ಇರುವುದು ನೋವಿನ ಸಂಗತಿ. ಮೇಲಾಗಿ ತಂದೆ ಮಕ್ಕಳು ಬೇರೆಯಾಗಿ ಬದುಕುವುದು ಕಷ್ಟಕರ. ಊರಲ್ಲಿ ಒಳ್ಳೆಯ ಹೆಸರು ಮಾಡಿದ ನೀವು ಮಗನನ್ನು ಬಿಟ್ಟು ಬೇರೆ ಇರುವುದು ಜನರಿಗೆ ತಿಳಿದರೆ ಇಷ್ಟುದಿನ ಕಷ್ಟಪಟ್ಟು ಗಳಿಸಿದ ಹೆಸರಿಗೆ ಕಳಂಕ ಬರುತ್ತದೆ.

“ದಯ ಮಾಡಿ ಬೇರೆ ಇರುವ ನಿಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಿ. ಮಗ ಸಣ್ಣವನಿದ್ದಾಗ, ಅವನಿಗೆ ಒಳ್ಳೆಯದಾಗಲೆಂದು ದೇವರಿಗೆ ಹರಕೆ ಹೊತ್ತು ಹಗಲಿರುಳು ದುಡಿದು ದೊಡ್ಡವರನ್ನಾಗಿ ಮಾಡಿದಿರಲ್ಲವೇ….? ಅವನು ಹೆಂಡತಿಯ ಜೊತೆ ಸಂತಸವಾಗಿರಲಿ ಬಿಡಿ. `ಹಳಬರನ್ನು ಹೊಸಬರಿಂದ ಪ್ರತ್ಯೇಕಿಸುವ ಗುಣಗಳೆಂದರೆ ಅವರಲ್ಲಿರುವ ಅನುಭವ ಮತ್ತು ತಾಳ್ಮೆ ,’ ಎಂದು ಸುಧಾ ಮೂರ್ತಿ ಹೇಳಿರುವಂತೆ  ನೀವು ನಿಮ್ಮ ಅನುಭವ ಮತ್ತು ತಾಳ್ಮೆಯನ್ನು ಬಳಸಿ ಅವರೊಟ್ಟಿಗೆ ಇರಿ. ಇದು ನನ್ನ ಅಭಿಲಾಷೆ,” ಅಳಿಯ ಮುಂದೆ ಮಾತಾಡದೆ ಮೌನವಾದ.

ಸ್ವಲ್ಪ ಹೊತ್ತು ಮನೆಯಲ್ಲಿ ಬರೀ ಮೌನವೇ ಮಾತಾಯಿತು. ಅಪನಂಬಿಕೆಯ ಕಾರ್ಮೋಡ ಚದುರಿತು. ಸ್ವಲ್ಪ ಸಮಯದ ನಂತರ ಅವನ ಹೆಂಡತಿ ರಾತ್ರಿಯ ಅಡುಗೆ ಮಾಡಿ ಬಡಿಸಿದಳು. ಬಿಸಿ ಬಿಸಿ ಊಟ ರುಚಿ ಎನಿಸಿತು.

“ನಾವು ಬೆಳಗ್ಗೆ ನಮ್ಮ ಊರಿಗೆ ಹೋಗುತ್ತೇವೆ. ಮಗ ಸೊಸೆಯನ್ನು ಬಿಟ್ಟು ಬಂದು ಬಹಳ ದಿನವಾಯಿತು. ಪಾಪ ಅವರಿಗೂ ನಮ್ಮ ಸಹಾಯ ಬೇಕೆನಿಸಬಹುದು. ಬೆಳಗ್ಗೆ ಪೂಜೆಗೆ ಹೂವು ಕೊಯ್ಯುವುದು, ಹಾಲು ತರುವುದು, ಸೊಸೆಗೆ ಅಡುಗೆಗೆ ಸಹಾಯ ಇಲ್ಲದೆ ಅವಳು ಕಷ್ಟಪಡುತ್ತಿರಬಹುದು,” ಮಾತಿನಲ್ಲಿ ಯಾವ ಕೃತ್ರಿಮತೆ ಇಲ್ಲದೆ ಹೃದಯಂಗಮವಾಗಿತ್ತು.

ರಾತ್ರಿ ಮಲಗುವಾಗ, ಅವನ ಹೆಂಡತಿ, “ರೀ, ನಾವು ಈ ಭಾನುವಾರ ನಿಮ್ಮ ಊರಿಗೆ ಹೋಗಿ ನಿಮ್ಮ ಅಪ್ಪ ಅಮ್ಮನನ್ನು ಕರೆದುಕೊಂಡು ಬರೋಣ. ಅವರಿಗೂ ವಯಸ್ಸಾಗಿದೆ. ಇಲ್ಲಿ ಬಂದು ನಮ್ಮ ಜೊತೆ ಸುಖವಾಗಿರಲಿ. ಅವರು ಬೇರೆ ಇರುವುದು ಬೇಡ,” ಎಂದು ಹೇಳಿ ಅವನ ತೋಳ ತೆಕ್ಕೆಗೆ ಜಾರಿದಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ