ಮಾಲತಿಗೆ 19 ವರ್ಷವಿದ್ದಾಗಲೇ ಅವಳ ತಂದೆ ಮನೋಜ್‌ ಯಾದವ್ ತಮ್ಮ ವಿಲ್‌, ಪ್ರಾಪರ್ಟಿ ಡೀಟೇಲ್ಸ್ ರೆಡಿ ಮಾಡಿಸಿದ್ದರು. ಅದರಲ್ಲಿ ಅವರು ತಮ್ಮ ಆಸ್ತಿಯನ್ನು 2 ಭಾಗ ಮಾಡಿದ್ದರು. ಒಂದನ್ನು ಮಗ ಸುನೀಲ್ ‌ಗೆ, ಮತ್ತೊಂದನ್ನು ಮಾಲತಿಯ ಹೆಸರಿಗೆ ಮಾಡಿಸಿದ್ದರು.

ಈ ವಿಷಯ ತಿಳಿಯುವವರೆಗೂ ಸುನೀಲ್‌, ಇಡೀ ಆಸ್ತಿಗೆ ತಾನು ಒಬ್ಬನೇ ಮಾಲೀಕ ಎಂದು ನಂಬಿಕೊಂಡಿದ್ದ. ಆದರೆ ತಂದೆಯಿಂದ ಈ ವಿಷಯ ಖಚಿತವಾದಾಗ, ಅವನಿಗೆ ಸಹಜವಾಗಿಯೇ ತಂಗಿ ಮೇಲೆ ಕೆಂಡದಂಥ ಅಸೂಯೆ ಮೂಡಿತು. ತನ್ನಷ್ಟೇ ಅವಳಿಗೂ ಸಮಪಾಲು ಸಿಗುತ್ತಿರುವುದು ಅವನಿಗೆ ನುಂಗಲಾರದ ತುತ್ತಾಗಿತ್ತು. ತಂದೆ ತನ್ನ ತಂಗಿಯ ಮದುವೆಗಾಗಿ ಲಕ್ಷಾಂತರ ಖರ್ಚು ಮಾಡುವುದಲ್ಲದೆ, ಇಷ್ಟು ಕೋಟ್ಯಂತರ ಆಸ್ತಿಯನ್ನೂ ಕೊಡುತ್ತಿರುವುದು ಅವನಿಗೆ ಹಿಡಿಸದ ವಿಷಯವಾಯ್ತು.

ಆದರೆ ಸುಪ್ರೀಂ ಕೋರ್ಟ್‌ ಸಹ ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಪಾಲು ಎಂದು ಸಾರಿದ ಮೇಲೆ ಮಾಡುವುದೇನು? ಹೀಗಾಗಿ ಸುನೀಲ್ ‌ಏನೂ ಮಾಡುವ ಹಾಗಿರಲಿಲ್ಲ. ಮದುವೆ ಮುಗಿದ ನಂತರ ಮಾಲತಿಗೆ ತಂದೆಯ ಆಸ್ತಿಯಲ್ಲಿ ಅಣ್ಣನಷ್ಟೇ ಸಮಪಾಲು ಸಿಕ್ಕಿತು. ಇದಾದ ಮೇಲೆ ಸುನೀಲ್ ‌ಗೂ ಮದುವೆ ಆಯ್ತು. 9 ವರ್ಷಗಳೇ ಕಳೆದುಹೋದರೂ ತಂಗಿಯ ಜೊತೆ ಅವನ ಸಂಬಂಧ ಹಾರ್ದಿಕವಾಗಿ ಬದಲಾಗಲೇ ಇಲ್ಲ. ಇಬ್ಬರ ನಡುವಿನ ಮನಸ್ತಾಪ ಹಾಗೇ ಉಳಿಯಿತು.

ಇಂಥದ್ದೇ ಮತ್ತೊಂದು ಕಥೆ ಡಿಂಪಲ್ ಮತ್ತು ಮಯಾಂಕ್‌ ರದ್ದು. ಡಿಂಪಲ್ ಗೆ ತನ್ನ ಅತ್ತಿಗೆ ಯಾಮಿನಿ ಜೊತೆ ಎಂದೂ ಹೊಂದಾಣಿಕೆ ಆಗಲೇ ಇಲ್ಲ. ಸ್ವಂತ ಅಣ್ಣ ತಂಗಿಯರಾದ ಮಯಾಂಕ್‌ ಡಿಂಪಲ್ ನಡುವೆ ಮೊದಲಿನಿಂದ ಪ್ರೀತಿ ವಾತ್ಸಲ್ಯದ ಅನುಬಂಧವಿತ್ತು. ಮದುವೆಯಾದ ನಂತರ ಸಹಜವಾಗಿ ಪತ್ನಿಯತ್ತ ವಾಲಿದ ಮಯಾಂಕ್‌, ತವರಿಗೆ ಬರುತ್ತಿದ್ದ ತಂಗಿಗೆ ಅಪರೂಪವೇ ಆಗಿಹೋದ.

ಅಣ್ಣನ ಮದುವೆ ಆದಾಗಿನಿಂದ ತಮ್ಮಿಬ್ಬರ ನಡುವೆ ಅತ್ತಿಗೆ ಅಡ್ಡಗೋಡೆಯಾಗಿ ಬಂದಳು ಎಂದು ಡಿಂಪಲ್ ಸದಾ ಅವಳ ಮೇಲೆ ಕೆಂಡ ಕಾರುತ್ತಿದ್ದಳು. ಅಣ್ಣನೊಂದಿಗೆ ಹೇಗೋ ಪ್ಯಾಚ್‌ ಅಪ್‌ ಮಾಡಿಕೊಳ್ಳುತ್ತಿದ್ದಳಾದರೂ, ಅತ್ತಿಗೆ ಯಾಮಿನಿ ಜೊತೆ ಅವಳ ಮನಸ್ತಾಪ ಸರಿಹೋಗಲೇ ಇಲ್ಲ. ಈ ಕಾರಣದಿಂದಾಗಿ ಹಬ್ಬ ಹರಿದಿನಗಳಿಗೆ ತವರಿಗೆ ಹೋಗುವುದನ್ನೇ ಅವಳು ಬಿಟ್ಟಳು.

ಮನಸ್ತಾಪ ಹೊಸದೇನಲ್ಲ

ಅಭಿಷೇಕ್‌ ಹಾಗೂ ನಯನಾರ ಕಥೆ ಸಹ ಇಂಥದ್ದೇ ಮನಸ್ತಾಪಗಳಿಂದ ಕೂಡಿದೆ. ಅಂದಹಾಗೆ, ಅಣ್ಣ ತಂಗಿಯರ ನಡುವೆ ಮನಸ್ತಾಪ ಮೂಡುವುದು ಹೊಸ ವಿಷಯವೇನಲ್ಲ. ಆದರೆ ಇದು ಅತಿಯಾಗಿ ಸಂಬಂಧಗಳಿಗೆ ಒಂದು ಕೊನೆ ಹಾಡುವಂತೆ ಆಗಬಾರದು. ಇವರಿಬ್ಬರ ಮನಸ್ತಾಪಕ್ಕೆ ಕಾರಣವೆಂದರೆ, ನಯನಾಳ ಮದುವೆಯಲ್ಲಿ, ಯಾವುದೋ ಚಿಲ್ಲರೆ ವಿಷಯಕ್ಕೆ ಅವಳ ಮೈದುನನ ಜೊತೆ ವಾದವಿವಾದ ಆರಂಭಿಸಿದ ಅಭಿಷೇಕ್‌, ಕೈಕೈ ಮಿಲಾಯಿಸುವವರೆಗೂ ಜಗಳ ಮುಂದುವರಿಸಿದ್ದ.

`ನಿನ್ನಂಥವರ ಮನೆಗೆ ತನ್ನ ತಂಗಿಯನ್ನು ಕೊಡ್ತಿರೋದೇ ಹೆಚ್ಚು. ಯಾಕಾದರೂ ಈ ಸಂಬಂಧ ಕೂಡಿ ಬಂತೋ?’ ಎಂದು ಎಲ್ಲೆರೆದುರಿಗೆ ಹೇಳಿದಾಗ, ಇಬ್ಬರನ್ನೂ ಸಮಾಧಾನಪಡಿಸಲು ಹಿರಿಯರೆಲ್ಲ ಬರಬೇಕಾಯಿತು.

ಇದರಿಂದ ನಯನಾಳಿಗೆ ಬಹಳ ದುಃಖವಾಯಿತು. ಲಗ್ನಪತ್ರಿಕೆಯಿಂದ ಗಾಢ ಪ್ರೇಮಿಗಳಾಗಿದ್ದ ನಯನಾ ವಿವೇಕ್‌ ಈ ಮದುವೆ ಮುರಿಯಲು ಬಯಸಲಿಲ್ಲ. ಅಂತೂ ಇಂತೂ ಹಿರಿಯರ ಮಧ್ಯಸ್ಥಿಕೆಯಿಂದಾಗಿ ನಯನಾಳ ಮದುವೆ ಸುಸೂತ್ರವಾಗಿ ಮುಂದುವರಿಯಿತು.

ಆದರೆ ಅದಾದ ಮೇಲೆ ಸೊಸೆಯನ್ನು ತವರಿಗೆ ಕಳುಹಿಸಲು ಅವಳ ಅತ್ತೆ ಮನೆಯವರು ಒಪ್ಪಲೇ ಇಲ್ಲ. ತನ್ನ ಸನ್ನಡೆಯಿಂದ ನಯನಾ ಆ ಮನೆಯ ಹೊಸ ಸೊಸೆಯಾಗಿ ಎಲ್ಲರ ಮನ ಗೆದ್ದಿದ್ದರೂ, ತವರಿಗೆ ಹೋಗುವ ಅವಳ ಆಸೆ ಹಾಗೇ ಉಳಿದು ಹೋಯಿತು. ಅವಳ ಮದುವೆಯಾಗಿ 3 ವರ್ಷಗಳೇ ಕಳೆದರೂ, ಅಣ್ಣತಂಗಿ ಹಿಂದಿನ ಆ ವಾತ್ಸಲ್ಯದಿಂದ ಒಂದಾಗಲೇ ಇಲ್ಲ.

ಈ ರೀತಿ ಎಷ್ಟೋ ಸಂಬಂಧಗಳಲ್ಲಿ ಮನಸ್ತಾಪ ದೊಡ್ಡ ವಿಲನ್‌ ಆಗಿ, ಮಧುರ ಬಾಂಧವ್ಯವನ್ನು ಕೆಡಿಸುತ್ತದೆ. ಅದು ಅಕ್ಕ ತಂಗಿ, ಅಣ್ಣ ತಮ್ಮ, ಅಣ್ಣ ತಂಗಿ, ಅತ್ತಿಗೆ ನಾದಿನಿ, ಹಿರಿಕಿರಿ ಓರಗಿತ್ತಿಯರು….. ಹೀಗೆ ಯಾರನ್ನು ಬೇಕಾದರೂ ಅಗಲಿಸಿ ಬಿಡುತ್ತದೆ. ಏನೇ ಮನಸ್ತಾಪವಿರಲಿ, ನಮ್ಮ ಮೂಲ ಸಂಬಂಧಗಳನ್ನು ಬಿಟ್ಟುಕೊಡಬಾರದು. ಹಬ್ಬ ಹರಿದಿನಗಳ ಮಧ್ಯೆ ಈ ಮನಸ್ತಾಪವನ್ನು ದೊಡ್ಡದಾಗಿಸಬೇಡಿ. ಇದನ್ನು ಬದಿಗಿರಿಸಿ, ಎಂದಿನಂತೆ ಹಬ್ಬಗಳಲ್ಲಿ ಎಲ್ಲರೊಂದಿಗೆ ನಕ್ಕು ನಲಿಯಿರಿ, ಬೆರೆತು ಸಂಭ್ರಮದಿಂದ ಹಬ್ಬ ಆಚರಿಸಿ. ನಮ್ಮವರೊಂದಿಗೆ ಬೆರೆತು ನಾವು ಹಬ್ಬದ ಸಡಗರ ಅನುಭವಿಸದಿದ್ದರೆ, ನಮ್ಮ ನೆನಪುಗಳು ಸಿಹಿಯಾಗಿ ಉಳಿಯದೆ,  ಮನಸ್ತಾಪದ ಕಹಿಯೇ ದೊಡ್ಡದಾಗಿಬಿಡುತ್ತದೆ.

ಹಬ್ಬಗಳನ್ನು ಎಂಜಾಯ್ಮಾಡಿ

ನೀವು ನಿಮ್ಮ ಒಡಹುಟ್ಟಿದವರು ಅಥವಾ ಬೇಕಾದವರೊಂದಿಗೆ ಹೀಗೆ ಮನಸ್ತಾಪ ಮಾಡಿಕೊಂಡಿದ್ದರೆ, ನೀವಾಗಿಯೇ ಒಂದು ಹೆಜ್ಜೆ ಮುಂದಿಟ್ಟು ಆ ಕಹಿ ಅಳಿಸಲು ಮುಂದಾಗಿ. ಹಬ್ಬದ 1-2 ದಿನವಾದರೂ ಹಳೆಯದನ್ನೆಲ್ಲ ಮೆರತು, ಒಂದಾಗಿ ಕೂಡಿ ಹಬ್ಬ ಆಚರಿಸಿ. ನಿಮ್ಮ ಕಡೆಯಿಂದ ಶುರುವಾದ ಈ ಪ್ರಯತ್ನ ಕಂಡು, ನಿಮಗೆ ಬೇಕಾದವರು ನಿಮ್ಮನ್ನು ಎಂದೂ ಕಡೆಗಣಿಸುವುದಿಲ್ಲ. ಈ ರೀತಿ ಎರಡೂ ಕೈ ಸೇರಿ ಚಪ್ಪಾಳೆ ಆದಾಗ, ಹಿಂದಿನ ಕಹಿ ತಾನಾಗಿ ದೂರ ಸರಿಯುತ್ತದೆ. ಅವರೇ ಬಂದು ಆ ಪ್ರಯತ್ನ ಮಾಡಲಿ ಎಂದು ಕಾಯುತ್ತಾ, ನಿಮ್ಮ `ಅಹಂ’ ಪ್ರದರ್ಶಿಸಬೇಡಿ. ಇದು ಎರಡೂ ಪಕ್ಷಗಳಿಗೆ ಸಮನಾಗಿ ಅನ್ವಯಿಸುತ್ತದೆ.

ಅಂದಿನ ಆ ಕ್ಷಣದಲಿ ಏನೇ ಕೋಪ ತಾಪವಿರಲಿ, ಇಬ್ಬರ ನಡುವಿನ ಸಂಬಂಧ ಶಾಶ್ವತವಾದುದು ಎಂಬುದನ್ನು ಎಂದೂ ಮರೆಯಬಾರದು. ಫ್ರೆಂಡ್ಸ್ ಇಂದು ಇರುತ್ತಾರೆ, ನಾಳೆ ಬೇರೇನೋ ಕಾರಣಕ್ಕೆ ದೂರ ಆಗಬಹುದು. ಒಂದು ಹಂತದವರೆಗೆ ಆ ಸಲಿಗೆ, ಸ್ನೇಹ ಸರಿ. ಆದರೆ ಮನೆಯರ ಸಂಬಂಧ ಎಂದೆಂದೂ ಬಿಟ್ಟು ಹೋಗುವಂಥದ್ದಲ್ಲ. ಹೀಗಾಗಿ ಹಬ್ಬಗಳಲ್ಲಿ ನಿಮ್ಮ ನೆಂಟಸ್ತಿಕೆ ಬಿಟ್ಟು ಕೊಡಬೇಡಿ. ನಿಮ್ಮ ಅವರ ಸಂಬಂಧ ಗಟ್ಟಿಯಾಗಿ ಉಳಿಯುವಂಥ ಪ್ರಯತ್ನ ನಡೆಯುತ್ತಿರಲಿ.

ಇದರಿಂದ ನಿಮ್ಮ ಮುಂದಿನ ಪೀಳಿಗೆ ಸಹ ಅತ್ತೆ, ಸೋದರಮಾವ, ಕಸಿನ್ಸ್ ಎಂದು ಅದೇ ಆತ್ಮೀಯತೆ ಮುಂದುವರಿಸಿಕೊಂಡು ಹೋಗಲು ಸಾಧ್ಯ. ಇಂದಿನ ಮಕ್ಕಳಿಗೆ ಈ ರೀತಿ ಹಿರಿಯರ ಜೊತೆಗಿನ ಬಾಂಧವ್ಯ ಸದಾ ಉಳಿಯುವಂತೆ ನೋಡಿಕೊಳ್ಳಿ.

ಎಲ್ಲದಕ್ಕೂ ಮಕ್ಕಳನ್ನು ಸೇರಿಸಿಕೊಳ್ಳಿ

ಒಮ್ಮೊಮ್ಮೆ ಕೇವಲ ಔಪಚಾರಿಕತೆಗಾಗಿ ಹೀಗೆ ಸಂಬಂಧಗಳು ಉಳಿದಿವೆಯೇ ಹೊರತು, ಆತ್ಮೀಯತೆ ಇಲ್ಲ ಎನಿಸುವುದು ಸಹಜ. ಆಗ ಏನು ಮಾಡಿದರೆ ಈ ಮನಸ್ತಾಪ ಕೊನೆಗೊಂಡೀತು ಎಂದು ಎಲ್ಲಾ ವಿಧದಲ್ಲೂ ಯೋಚಿಸಿ. ಇದು ಟಿವಿ ಧಾರಾವಾಹಿಗಳ ತರಹ ನಾಟಕೀಯವಾಗಿ ಬೇಗ ಬೇಗನೇ ಸರಿಹೋಗುವಂಥದ್ದಲ್ಲ. ಮನಸ್ತಾಪ ಏನೇ ಇರಲಿ, ದೀಪಾಳಿ ದಸರಾದಂಥ ದೊಡ್ಡ ಹಬ್ಬಗಳಲ್ಲಿ ಬೇಕಾದವರೊಡನೆ ಬೆರೆತು, ಹೊಸ ಮಧುರ ನೆನಪುಗಳನ್ನು ಹುಟ್ಟು ಹಾಕಿದಾಗ ಮಾತ್ರ, ಮುಂದೆ ಆ ಬಾಂಧವ್ಯ ಸದೃಢಗೊಳ್ಳಲು ಸಾಧ್ಯ.

ಇಂಥ ಸಂದರ್ಭದಲ್ಲಿ ಅವರ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಬೆರೆತುಕೊಳ್ಳುವಂತೆ ಮಾಡಿ. ಆಗ ಹೊಸ ಪೀಳಿಗೆ ಮನದಲ್ಲಿ ಯಾವ ಕಲ್ಮಷಗಳಿಲ್ಲದೆ ಸಹಜವಾಗಿ ಬೇಗ ಹೊಂದಿಕೊಳ್ಳುತ್ತಾರೆ. ಅವರನ್ನು ನೋಡ ನೋಡುತ್ತಾ, ಹಿರಿಯರು ಸಹ ಹಳೆಯ ಮನಸ್ತಾಪ ಮರೆತು, ಸಹಜವಾಗಿ ಒಂದಾಗಲು ಸಾಧ್ಯ. ಈಗ ಎಲ್ಲೆಲ್ಲೂ ವಿಭಕ್ತ ಕುಟುಂಬಗಳೇ ತುಂಬಿ ಹೋಗಿ, ಪ್ರತಿ ಮನೆಯಲ್ಲೂ ಪತಿ, ಪತ್ನಿ, ಒಂದೇ ಮಗು ಮಾತ್ರ ಕಂಡು ಬರುತ್ತದೆ. ಹೀಗಾಗಿ ಹಿಂದಿನವರ ತರಹ ಇಂದಿನ ಕಾಲದ ಮಕ್ಕಳಿಗೆ ಸಂಬಂಧದ ಹಿರಿಮೆ ಗೊತ್ತಾಗುವುದೇ ಇಲ್ಲ. ಹಿರಿಯರು ಅವರನ್ನು ನೆಂಟರ ಮನೆಗಳಿಗೆ ಕರೆದುಕೊಡು ಹೋಗಿ ಬಂದು ಮಾಡಿದಾಗ ಮಾತ್ರ, ಮಕ್ಕಳು ಬಾಂಧವ್ಯದ ಹಿರಿಮೆ ಗುರುತಿಸಬಲ್ಲರು. ಚಿಕ್ಕಮ್ಮ, ಸೋದರತ್ತೆ, ಸೋದರ ಮಾವ, ದೊಡ್ಡಪ್ಪ, ದೊಡ್ಡಮ್ಮ ಈ ತರಹದ ಪದಗಳು ಅವರಿಗೆ ಗೊತ್ತಾಗಬೇಕೆಂದರೆ ಹಿರಿಯರು ಉತ್ತಮ ಬಾಂಧವ್ಯ ಹೊಂದಿರಲೇಬೇಕು.

ಜಿ. ಪ್ರಿಯಾಂಕಾ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ