ಕಥೆ –  ಶುಭಾ ಶ್ರೀನಾಥ್

ಮಧ್ಯಮ ವರ್ಗದ ಗೃಹಿಣಿಗೆ ಮನೆಯಲ್ಲಿ ತುಸು ಏರುಪೇರಾದರೂ, ಬದುಕಿನ ಸಿಹಿ ಕಹಿ ಎಲ್ಲದರ ಬಗ್ಗೆ ಆತಂಕ ಶುರುವಾಗುತ್ತದೆ. ಇದನ್ನು ಸಹಜವಾಗಿ ಸ್ವೀಕರಿಸಿ ಮುಂದೆ ನಡೆಯಬೇಕಾದ್ದೇ ಜೀವನ ಅಲ್ಲವೇ…..?

ಯಾಕೋ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಜಲಬಾಧೆಗೆ ಅವಸರವಾಗಿತ್ತು, ಎದ್ದು ಬಚ್ಚಲಿಗೆ ಹೋಗಿ ಬಂದು ಮತ್ತೆ ಮಲಗಿದೆ. ಸಾಯಂಕಾಲ ಮಳೆ ಬಂದ ಕಾರಣ ಸ್ವಲ್ಪ ಚಳಿ ಇತ್ತು. ಹಾಗಾಗಿ ಹೊದಿಕೆಯನ್ನು ತುಂಬಾ ಹೊದ್ದು ಮಲಗಿದೆ. ಆದರೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಪಕ್ಕದಲ್ಲಿ ಮಲಗಿದ್ದ ಯಜಮಾನರು ಯಾವ ಯೋಚನೆ ತಾಪತ್ರಯ ಇಲ್ಲದೆ ಆರಾಮವಾಗಿ ಗೊರಕೆ ಹೊಡೆಯುತ್ತಾ ಮಲಗಿದ್ದಾರೆ. ದಿನ ಅಷ್ಟೇ ಮಲಗಿದ ಕೂಡಲೇ ಎರಡೇ ನಿಮಿಷಕ್ಕೆ ಗೊರಕೆ ಹೊಡೆಯುತ್ತಾರೆ. ಇಷ್ಟು ವರ್ಷ ನಾನು ಹೀಗೆಯೇ ಮಲಗಿದ ಒಂದೈದು ನಿಮಿಷದಲ್ಲಿ ನಿದ್ದೆಗೆ ಜಾರುತ್ತಿದ್ದೆ. ಮತ್ತೆ ಏಳುತ್ತಿದ್ದುದು ಬೆಳಗ್ಗೆ ಐದೂವರೆಗೆ, ಒಳ್ಳೆಯ ನಿದ್ದೆ ಆಗುತ್ತಿತ್ತು. ಮಾರನೆಯ ದಿನ ಲವಲವಿಕೆಯಿಂದ ಕೂಡಿರುತ್ತಿದ್ದೆ. ಆದರೆ ಕಳೆದ ಒಂದು ವಾರದಿಂದ ಯಾಕೋ ಹೀಗೇ ಹೊತ್ತಲ್ಲದ ಹೊತ್ತಿನಲ್ಲಿ ಜಲಬಾಧೆ ಅಂತ ಎಚ್ಚರಾಗುತ್ತೆ. ಆಮೇಲೆ ನಿದ್ದೆ ಹತ್ತಿರ ಬರುವುದು ಕಷ್ಟ. ಮಗನ ರೂಮ್ ಲೈಟ್‌ ಉರಿಯುತ್ತಿತ್ತು, ಎದ್ದು ಹೋಗಿ, “ಯಾಕೋ ಇನ್ನೂ ಮಲಗಿಲ್ಲ….? ಮಲಗಿಕೋ,” ಎಂದು ಅವನ ಹಣೆಯ ಮೇಲೆ ಬಂದಿದ್ದ ಕೂದಲನ್ನು ಹಿಂದೆ ಸರಿಸಿ ಅಕ್ಕರೆಯಿಂದ ಹೇಳಿದೆ.

“ಸ್ವಲ್ಪ ಕೆಲಸ ಇತ್ತು, ಮಾಡುತ್ತಿದ್ದೆ. ಇನ್ನೂ ಸ್ವಲ್ಪ ಹೊತ್ತು ಅಷ್ಟೇ. ಮುಗಿಸಿ ಮಲಗಿಕೊಳ್ತೀನಿ,” ಎಂದು ಲ್ಯಾಪ್‌ ಟಾಪ್‌ ನಿಂದ ತಲೆಯೆತ್ತಿ ನನ್ನನ್ನು ನೋಡಿ ಹೇಳಿ, ಮತ್ತೆ ಅದರಲ್ಲಿಯೇ ಹುದುಗಿಕೊಂಡ.

ನಾನಿನ್ನೂ ಅಲ್ಲೇ ಕುಳಿತಿದ್ದನ್ನು ಕಂಡು, “ಅಮ್ಮಾ…. ನೀನು ಯಾಕೆ ಎದ್ದೀದಿಯಾ….? ಮಲಕ್ಕೋ ಹೋಗು,” ಎಂದ.

“ಆಯ್ತು ಮಲಕ್ಕೊಳ್ತೀನಿ. ನೀನು ಮಲಕ್ಕೋ ಕಂದ. ನಿದ್ದೆಗೆಡಬೇಡ, ಆರೋಗ್ಯ ಹಾಳಾಗುತ್ತೆ.”

“ಇನ್ನೊಂದು ಅರ್ಧ ಗಂಟೆ ಅಷ್ಟೇ ಮಲಗಿಕೊಳ್ತೀನಿ,” ಎಂದು ಅವನ ಕೈ ನನ್ನ ಕೈಯಲ್ಲಿಟ್ಟು ಹೇಳಿದ. ಮೆಲ್ಲನೆ ಅವನ ಕೈ ಅದುಮಿ, ಒಮ್ಮೆ ಅವನ ಬೆನ್ನು ಸರಿ, ಗುಡ್‌ ನೈಟ್‌ ಹೇಳಿ ಬಂದು ಹಾಸಿಗೆಗೆ ಉರುಳಿದೆ. ನನ್ನ ಈ ಅಶಾಂತಿಗೆ ಮತ್ತು ನಿದ್ದೆ ಬಾರದೇ ಇರುವಿಕೆಗೆ ಕಾರಣ ಇಲ್ಲದೇ ಇಲ್ಲ. ಒಂದು ವಾರದ ಕೆಳಗೆ ಖಾಸಗಿ ನ್ಯೂಸ್‌ ಚಾನೆಲ್ ‌ನಲ್ಲಿ ಹಲವಾರು ಪ್ರತಿಷ್ಠಿತ ಖಾಸಗಿ ಕಂಪನಿಗಳು ತಮಗೆ ಅಷ್ಟೊಂದು ವರ್ಕರ್ಸ್‌ ಅಗತ್ಯವಿಲ್ಲವೆಂದು ಅನೇಕರನ್ನು ಮನೆಗೆ ಕಳುಹಿಸುತ್ತಿದ್ದೇವೆ, ಎಂದು ಹೇಳಿದ್ದರು. ಯಾಕೋ ಭಯವಾಯಿತು. ನಿದ್ದೆ ಹತ್ತಿರ ಸುಳಿಯದಾಯಿತು. ಆಮೇಲೆ ಎಷ್ಟು ಹೊತ್ತಿಗೆ ನಿದ್ದೆ ಹತ್ತಿತೋ ಗೊತ್ತಿಲ್ಲ. ಬೆಳಗ್ಗೆ ಎದ್ದಾಗ ಆಗಲೇ ಆರು ಗಂಟೆ. `ಅಯ್ಯೋ ತಡವಾಯಿತು,’ ಎಂದು ಗಡಬಡಿಸಿ ಎದ್ದೆವು. ಯಜಮಾನರು ಎದ್ದು ಕಾಫಿ ಮಾಡಿಕೊಳ್ಳುತ್ತಿದ್ದರು.

“ನೀವೇ ಯಾಕೆ ಕಾಫಿ ಮಾಡಿಕೊಳ್ಳೋಕೆ ಹೋದ್ರಿ……? ನನ್ನನ್ನು ಎಬ್ಬಿಸಬಾರದಿತ್ತೆ…?”

“ಏನೋ ಇವತ್ತು ಮಲಗಿಕೊಂಡಿದ್ದೀಯ. ಮಲಗಿಕೊಳ್ಳಲಿ ಅಂತ ನಾನೇ ಎದ್ದು ಕಾಫಿ ಮಾಡಿಕೊಂಡೆ. ತಗೋ ನೀನು ಕಾಫಿ ಕುಡಿ. ಆಮೇಲೆ ಮುಂದಿನ ಕೆಲಸ ನೋಡುವೆಯಂತೆ…..“

“ಕಾಫಿ ಚೆನ್ನಾಗಿ ಮಾಡಿದ್ದೀರಿ,” ಮೆಚ್ಚುಗೆಯ ನಗೆ ಸೂಸಿದೆ.

“ಥ್ಯಾಂಕ್ಸ್. ಯಾಕೆ ಹೀಗಿದ್ದೀಯ….? ಹುಷಾರಿಲ್ಲವೇ…..?” ಕಳಕಳಿಯಿಂದ ಹಣೆ ಮುಟ್ಟಿ ನೋಡಿದರು.

“ನನಗೇನಾಗಿದೆ…? ಚೆನ್ನಾಗಿ ಇದ್ದೀನಿ,” ನನ್ನ ಮನದ ಆತಂಕವನ್ನು ಹೇಳಿಕೊಳ್ಳಲು ಆಗದೆ ಸುಮ್ಮನೆ ಮಾತು ತೇಲಿಸಿದೆ.

“ಇಲ್ಲ…. ಈಗ ಸ್ವಲ್ಪ ದಿನಗಳಿಂದ ನೀನು ಏನೋ ಒಂದು ರೀತಿ ಆಗಿದ್ದೀಯಾ…. ಯಾಕೆ ಹೀಗೆ ಇದ್ದೀಯಾ…..?”

“ನನಗೇನೂ ಆಗಿಲ್ಲ. ಇವತ್ತು ತಿಂಡಿ ಉಪ್ಪಿಟ್ಟು ಮಾಡಲೇ….?”

“ಏನೋ ಒಂದು ಮಾಡು. ಏನು ಮಾಡಿದರೂ ಓ.ಕೆ.”

ಕಾಫಿ ಕುಡಿದು ಲೋಟ ಸಿಂಕಿನಲ್ಲಿ ಹಾಕಿ, ಸ್ನಾನಕ್ಕೆ ಟವೆಲ್ ತೆಗೆದುಕೊಂಡು ಹೋದರು. ಉಪ್ಪಿಟ್ಟಿಗೆ ರೆಡಿ ಮಾಡಿಕೊಂಡು, ಎಸರಿಟ್ಟೆ. ಅದು ಕೊತಕೊತ ಕುದಿಯುವಾಗ ನನ್ನ ಮನಸ್ಸು ಕೂಡಾ ಹಾಗೆ ಕುದಿಯುತ್ತಾ ಇತ್ತು. ಮನದ ತುಂಬಾ ಆತಂಕ ಮಡುಗಟ್ಟಿತ್ತು.

ಮದುವೆಯಾಗಿ ಇಪ್ಪತೈದು ವರ್ಷಗಳಾದವು. ಅತ್ತೆ, ಮಾವ, ನಾದಿನಿ, ಮೈದುನ ಅಂತ ತುಂಬಿದ ಸಂಸಾರ ನಮ್ಮದು. ನಮ್ಮವರೇ ಹಿರಿ ಮಗ. ಅವರನ್ನೆಲ್ಲ ಒಂದು ಹಂತಕ್ಕೆ ತರುವಲ್ಲಿ ನಮ್ಮವರ ಪಾತ್ರ ದೊಡ್ಡದು. ಇನ್ನು ಇವರ ಕೈ ಹಿಡಿದ ಸಹಧರ್ಮಿಣಿ ನಾನು. ಎಲ್ಲಾ ಕಷ್ಟಸುಖಗಳಲ್ಲಿಯೂ ಸಮಪಾಲು ಹಂಚಿಕೊಂಡಳು. ಈ ತುಟ್ಟಿ ಕಾಲದಲ್ಲಿ ಒಂದೇ ಮಗು ಸಾಕು ಎನ್ನುವ ನಿರ್ಧಾರ ಮಾಡಿ, ಒಂದು ಮಗುವಿಗೆ ಸಾಕು ಮಾಡಿಕೊಂಡೆ.

ಇದ್ದ ಒಬ್ಬ ಮಗನನ್ನು ನಮ್ಮ ಲೆವೆಲ್ ‌ಗೆ ಸರಿ ಹೋಗುವ ಶಾಲೆಗೆ ಸೇರಿಸಿದೆ. ಎಲ್ಲರೂ ಇದ್ದರೆ ಇಂತಹ ಮಗ ಇರಬೇಕು ಎನ್ನುವಂತೆ ಬಹಳ ಚೆನ್ನಾಗಿ ಓದುತ್ತಿದ್ದ. ಆರಕ್ಕೇರಿಲ್ಲ ಮೂರಕ್ಕೆ ಇಳಿದಿಲ್ಲ ಎನ್ನುವಂತೆ ಸಂಸಾರ ಸಾಗುತ್ತಿತ್ತು. ಮಗ ಪ್ರತಿ ತರಗತಿಯಲ್ಲಿ ಕೂಡಾ ಫಸ್ಟ್. ಎಂಜಿನಿಯರಿಂಗ್‌ ಮುಗಿಸಿದ ಕೂಡಲೇ ಕ್ಯಾಂಪಸ್‌ ಸೆಲೆಕ್ಷನ್‌ ನಲ್ಲಿ ಒಳ್ಳೆಯ ಕಂಪನಿಯಲ್ಲಿ ಆರಂಕಿಯ ಸಂಬಳದ ಕೆಲಸ ಕೂಡಾ ಸಿಕ್ಕಿತು. ನಮ್ಮ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಈ ರೀತಿಯ ಒಂದು ಸಮಾಚಾರ ನನಗೆ ಬಹಳ ಆತಂಕವನ್ನು ಉಂಟು ಮಾಡಿತ್ತು. ಮಗನ ಹತ್ತಿರ ವಿಷಯ ಕೇಳಲು ಏನೋ ಒಂದು ಹಿಂಜರಿಕೆ. ಮಕ್ಕಳು ಒಂದು ಹಂತಕ್ಕೆ ಬಂದ ಮೇಲೆ ಅವರ ಹತ್ತಿರ ಮಾತನಾಡುವಾಗ ಬಹಳ ಹುಷಾರಾಗಿರಬೇಕು. ಅದರಲ್ಲಿಯೂ ಗಂಡು ಮಕ್ಕಳು ಇನ್ನೂ ಸೂಕ್ಷ್ಮ. ಉದ್ಯೋಗದಂತಹ ವಿಚಾರಗಳನ್ನು ಬಹಳ ಯೋಚಿಸಿ ಕೇಳಬೇಕು. ಮೊದಲೇ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ. ನಾನೇನಾದರೂ ಅವನ ಆಫೀಸ್‌ ಕೆಲಸದ ಪರಿಸ್ಥಿತಿಯ ಬಗ್ಗೆ ಕೇಳಿದರೆ ಮನಸ್ಸಿಗೆ ನೋವು ಉಂಟಾಗಬಹುದು. ಸುಮ್ಮನೆ ಏನೂ ಕೇಳುವುದು ಬೇಡ ಎಂದು ಅಂದುಕೊಂಡೆ. ಇನ್ನು ಯಜಮಾನರಿಗೆ ಅವರದೇ ಕೆಲಸದ ನೂರೆಂಟು ತಾಪತ್ರಯಗಳು ಇರುತ್ತವೆ. ಇದನ್ನು ಹೇಳಿ ಮತ್ತೆ ಅವರಿಗೂ ಯಾಕೆ ಯೋಚನೆ ಹತ್ತಿಸಬೇಕು ಅಂದುಕೊಂಡೆ.

ಯಜಮಾನರು ತಿಂಡಿ ತಿಂದು, ಊಟದ ಡಬ್ಬಿ ತೆಗೆದುಕೊಂಡು, “ಯಾಕೋ ಬಹಳ ಸುಸ್ತಾಗಿದ್ದಂತೆ ಕಾಣ್ತಾ ಇದೀಯ, ತಿಂಡಿ ತಿಂದು ರೆಸ್ಟ್ ತಗೋ,” ಎಂದು ಕೆನ್ನೆ ಸರಿ ಹೇಳಿಹೋದರು.

ಯಾಕೋ ಬಾಯಿ ಒಣಗಿದಂತೆ ಆಗಿ, ತಲೆ ಸುತ್ತು ಬಂದಂತೆ ಆಯಿತು. ಅಡುಗೆ ಮನೆಗೆ ಹೋಗಿ ಒಂದು ಲೋಟ ನೀರು ಕುಡಿದು ಅಲ್ಲಿಯೇ ಇದ್ದ ಸ್ಟೂಲ್ ‌ಮೇಲೆ ಕುಳಿತುಕೊಂಡೆ. ಹೌದಲ್ಲ, ಇತ್ತೀಚೆಗೆ ಬಹಳ ತಲೆ ಸುತ್ತು ಬಂದಂತೆ ಆಗುವುದು, ಬಾಯಾರಿಕೆ ಜಾಸ್ತಿ ಆಗುತ್ತಿದೆ. ಹೌದು ಜಲಬಾಧೆಗೆ ಕೂಡಾ ಮತ್ತೆ ಮತ್ತೆ ಹೋಗ್ತಾ ಇದ್ದೀನಿ. ನನಗೇನಾದರೂ ಶುಗರ್‌ ಬಂದಿದೆಯೇ ಅಂತ ಇನ್ನೊಂದು ಆತಂಕ ಶುರುವಾಯಿತು.

“ಅಮ್ಮಾ….. ಯಾಕೆ ಹೀಗೆ ಕುಳಿತಿದ್ದೀಯಾ? ಏನಾಯ್ತು……?” ಮಗ ಹತ್ತಿರ ಬಂದು ಮೈ ಅಲುಗಾಡಿಸಿ ಕೇಳಿದಾಗ, “ಏನಿಲ್ಲ ಕಣೋ, ಯಾಕೋ ಕಣ್ಣು ಕತ್ತಿ ಇಟ್ಟ ಹಾಗಾಯಿತು,” ಅಂತ ಹೇಳಿದೆ.

“ಇತ್ತೀಚೆಗೆ ಯಾಕೋ ನೀನು ಹೀಗೆ ಕಣ್ಣು ಕತ್ತಲೆ ಬಂತು, ತಲೆ ಸುತ್ತು ಅಂತ ಹೇಳ್ತಾನೇ ಇದೀಯ. ಆಸ್ಪತ್ರೆಗೆ ಹೋಗಿ ಬರೋಣವೇ….?” ಎಂದು ತುಸು ಆತಂಕದಿಂದ ಕೇಳಿದ.

“ಏನೂ ಆಗಿಲ್ಲ. ಬೇಡ ಕಣೋ….. ಸ್ವಲ್ಪ ಹೊತ್ತು ಮಲಗಿಕೊಳ್ತೀನಿ,” ಎಂದು ಎದ್ದು ಹೋಗಿ ಹಾಸಿಗೆಯಲ್ಲಿ ಉರುಳಿಕೊಂಡೆ. ಆಗ ಯೋಚನೆಯೊಂದು ತಲೆಯಲ್ಲಿ ಬಂದಿತು. ಮಗ ಮೊನ್ನೆ ಯಾವುದೋ ರೆರ್ಡ್‌ ಪಾಯಿಂಟ್ಸ್ ಇದೆ ಅಂತ ಗ್ಲುಕಾಮೀಟರ್‌ ನಿಂದ ದೇಹದ ಸಕ್ಕರೆ ಪ್ರಮಾಣವನ್ನು ಅಳೆಯುವ ಪುಟ್ಟ ಮೆಷೀನ್‌ ತರಿಸಿದ್ದ. ನನ್ನ ಗೆಳತಿಯರು ಹೀಗೆ ಅದರಿಂದ ರಕ್ತ ಪರೀಕ್ಷೆ ಮಾಡಿಕೊಳ್ಳುವುದನ್ನು ನೋಡಿದ್ದೆ. ಸರಿ ಆ ಮೆಷೀನ್‌ ಹೊರಗೆ ತೆಗೆದು ಅದರಲ್ಲಿ ಬರೆದಿದ್ದ ಉಪಯೋಗಿಸುವ ವಿಧಾನವನ್ನು ಓದಿಕೊಂಡೆ. ಸರಿ ನನ್ನ ಎಡಗೈ ಬೆರಳಿಗೆ ಮೆಲ್ಲನೆ ಸೂಜಿ ಚುಚ್ಚಿಕೊಂಡು ಸ್ಟ್ರಿಪ್‌ ಮೇಲೆ ಒಂದು ಹನಿ ರಕ್ತ ಹಾಕಿ ಗ್ಲುಕಾಮೀಟರ್‌ ನಲ್ಲಿ ಇರಿಸಿದೆ. ಅದರಲ್ಲಿ ಬಂದ ಫಲಿತಾಂಶವನ್ನು ನೋಡಿ ನಿಜಕ್ಕೂ ಭಯವಾಯಿತು. 150 ರೀಡಿಂಗ್‌ ಇತ್ತು. ಗೂಗಲ್ ಗುರು ತೆಗೆದು ಸಕ್ಕರೆಯ ಪ್ರಮಾಣ ಎಷ್ಟೆಷ್ಟು ಇರಬೇಕು ಎಂದು ಚೆಕ್‌ ಮಾಡಿದೆ. `ಅರೆ, 150 ಅಂದರೆ ಜಾಸ್ತಿ ಇದೆ. ಹಾಗಾದರೆ ನನಗೆ ಶುಗರ್‌ ಬಂದಿದೆ,’ ಎಂದು ಭಯವಾಯಿತು. ಸರಿ ಶುಗರ್‌ ಇದ್ದರೆ ಏನೇನು ಪಥ್ಯ ಮಾಡಬೇಕು ಎಂದು ಮತ್ತೆ ಗೂಗಲ್ ನಲ್ಲಿ ಹುಡುಕಿದೆ. ಇವತ್ತಿನಿಂದಲೇ ಪಥ್ಯ ಶುರು ಮಾಡೋಣ ಎಂದು ರಾತ್ರಿಯ ಊಟಕ್ಕೆ ಚಪಾತಿ, ಹಾಗಲಕಾಯಿ ಪಲ್ಯ ಮಾಡಿದೆ.

“ಇದೇನಮ್ಮ ಇವತ್ತು ಹಾಗಲಕಾಯಿ ಮಾಡಿದೀಯ?” ಎಂದು ಮಗ ಕೇಳಿದ.

“ಜೀವನದಲ್ಲಿ ಕಹಿ ತಿಂದರೆ ಸಿಹಿಯ ಬೆಲೆ ಗೊತ್ತಾಗುವುದು,” ಎಂದು ನಗುತ್ತಾ ಹೇಳಿದ.

“ಏನೋ, ನೀನು ಮಾಡಿ ಬಡಿಸಿದ್ದು ನಮಗೆ ಅಮೃತ. ಹಾಗಲ ಕಾಯಿಯೋ, ಬೇವಿನ ಕಾಯಿಯೋ…..” ಯಜಮಾನರು ನಕ್ಕರು.

ಊಟವಾದ ಮೇಲೆ ನಮ್ಮವರಿಗೆ ಬೆಳಗ್ಗೆ ನಡೆದ ಎಲ್ಲಾ ವಿಚಾರವನ್ನು ಹೇಳಿದೆ.

“ಶುಗರ್‌ ಇದ್ದರೂ ಇರಬಹುದು. ನಿನಗೂ ವಯಸ್ಸು 45 ಆಯಿತಲ್ಲ,” ಎಂದಾಗ ಅಳು ಬಂದಿತು.

“ಅಯ್ಯೋ…. ನಾನಿನ್ನೂ ಏನೇನೋ ಸಿಹಿ ತಿಂಡಿಗಳನ್ನು ತಿನ್ನಬೇಕು ಅಂದುಕೊಂಡಿದ್ದೆ. ಹೀಗಾಯಿತು,” ಎಂದು ಕಣ್ಣೀರು ಧಾರಾಕಾರವಾಗಿ ಹರಿಯಿತು. ನನ್ನ ಅಳು ಕೇಳಿ ಕೆಲಸ ಮಾಡಿಕೊಳ್ಳುತ್ತಿದ್ದ ಮಗ ಅವನ ಕೋಣೆಯಿಂದ ಓಡಿ ಬಂದ. ಯಜಮಾನರು ಅವನಿಗೆ ವಿಷಯವನ್ನು ಹೇಳಿದರು.

“ಅಮ್ಮಾ…. ಸುಮ್ಮನಿರು ಅಳಬೇಡ. ಒಂದೆರಡು ದಿನಗಳಲ್ಲಿ ನಾನು ಮಾಡುತ್ತಿರುವ ಪ್ರಾಜೆಕ್ಟ್ ಮುಗಿಯುತ್ತೆ. ಒಳ್ಳೆಯ ಡಾಕ್ಟರ್ ಬಳಿ ನಿನ್ನನ್ನು ಕರೆದುಕೊಂಡು ಹೋಗ್ತೀನಿ,” ಎಂದು ಮಗ ಸಮಾಧಾನಿಸಿದ.

“ಶುಗರ್‌ ಬಂದರೆ ಏನು ಭಯಪಡಬೇಕಿಲ್ಲ ಕಣೇ…. ಈಗೆಲ್ಲ ಚಿಕ್ಕ ವಯಸ್ಸಿನವರಿಗೆ ಶುಗರ್‌ ಬರುತ್ತದೆ. ಸುಮ್ಮನೆ ಯೋಚನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡ. ನನಗೂ ಆಫೀಸಿನಲ್ಲಿ ಸಿಕ್ಕಾಪಟ್ಟೆ ಕೆಲಸ ಇದೆ. ಆಡಿಟ್‌ ನಡೀತಾ ಇದೆ. ಇಲ್ಲದಿದ್ದರೆ ನಾಳೇನೇ ನಿನ್ನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆ. ಏನೂ ಆಗೋದಿಲ್ಲ, ಭಯಪಡಬೇಡ. ನಾನು, ನಿನ್ನ ಮಗ ಇಬ್ಬರೂ ಇದೀವಿ ಧೈರ್ಯವಾಗಿ ಇರು. ನಿನ್ನನ್ನು ಒಳ್ಳೆಯ ಆಸ್ಪತ್ರೆಗೆ ತೋರಿಸ್ತೀವಿ,” ಎಂದು ಧೈರ್ಯ ಹೇಳಿದರು.

ರಾತ್ರಿ ಮಲಗಿದರೆ ನಿದ್ದೆ ಬರುತ್ತಲೇ ಇಲ್ಲ. ನಾಲ್ಕೈದು ಬಾರಿ ಬಚ್ಚಲಿಗೆ ಹೋಗಿ ಬಂದು, ಒಂದು ಬಾಟಲ್ ನೀರು ಕುಡಿದು ಖಾಲಿ ಮಾಡಿದೆ. ಈಗಂತೂ ಸ್ಟ್ರಿಕ್ಟ್ ಆಗಿ ಬೆಳಗ್ಗೆ ಮೆಂತ್ಯೆ ಪೌಡರ್‌, ತಿಂಡಿಗೆ ಉಪ್ಪಿಟ್ಟು, ಗೋಧಿ ಪೊಂಗಲ್, ಮಧ್ಯಾಹ್ನ ರಾಗಿ ಮುದ್ದೆ, ರಾತ್ರಿಗೆ ಚಪಾತಿ ಮಾಡತೊಡಗಿದೆ. ಜೊತೆಗೆ ಒಂದಿಷ್ಟು ಗೂಗಲ್ ನಲ್ಲಿ ಹುಡುಕಿ ಬೇವಿನ ಎಲೆ, ಮೆಂತ್ಯೆ ಸೊಪ್ಪು, ಹಾಗಲಕಾಯಿ, ಸೋರೇಕಾಯಿ ಇಂಥವನ್ನು ಹೆಚ್ಚಾಗಿ ತಿನ್ನ ತೊಡಗಿದೆ. ಜೊತೆಗೆ ಮೊಳಕೆಕಾಳು, ಹಸಿ ತರಕಾರಿ ನನ್ನ ಊಟ ತಿಂಡಿಯಲ್ಲಿ ಸೇರಿದ.

ಮೂರು ದಿನಗಳಲ್ಲಿ ಇವೆಲ್ಲ ತಿಂದು ತಿಂದು ಬಾಯಿ ಜಡ್ಡುಗಟ್ಟಿ ಹೋಗಿತ್ತು. ತಿನ್ನಲು ಆಗದೆ ಇಡಲೂ ಆಗದೆ ಒದ್ದಾಡುತ್ತಾ ತಿನ್ನುತ್ತಿದ್ದೆ. ಜೊತೆಗೆ ಮಗನ ಕೆಲಸದ ಯೋಚನೆಯೂ ಸೇರಿತ್ತು. `ಛೇ…. ನನಗೆ ಇಷ್ಟು ಬೇಗ ಶುಗರ್‌ ಬರಬೇಕೇ…..? ಇನ್ನು ಮಗನ ಮದುವೆ ಮಾಡಬೇಕು. ಮೊಮ್ಮಕ್ಕಳನ್ನು ಎತ್ತಿ ಆಡಿಸಬೇಕು. ಎಷ್ಟೊಂದು ಇದೆ ನನ್ನ ಜೀವನ….. ಶುಗರ್‌ ಬಂದರೆ ಅದಕ್ಕೆ ಬೋನಸ್‌ ಆಗಿ ಬಿಪಿ ಬರುತ್ತದೆ. ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು, ಹೀಗೆ ಇನ್ನೂ ಏನೇನೋ ಬರುತ್ತಿಯಂತೆ. ಎಲ್ಲೆಲ್ಲೂ ಯಾರ್ಯಾರೋ ಮಾತಾಡುತ್ತಾ ಇದ್ದಿದ್ದು ನೆನಪಿಗೆ ಬರುತ್ತಿತ್ತು. ಕುಳಿತರೂ ನಿಂತರೂ ಎರಡೇ ಯೋಚನೆಗಳು. ಅಂತೂ ಯೋಚನೆಗಳ ಮಹಾಪೂರದಲ್ಲಿ ಕಹಿ ಪಥ್ಯದ ಜೊತೆಗೆ ಕಳೆದುಬಿಟ್ಟಿತು.

“ಅಮ್ಮಾ….. ಇವತ್ತು ನನ್ನ ಕೆಲಸವೆಲ್ಲ ಮುಗಿಯಿತು. ನನಗೆ ಪರಿಚಯ ಇವರು ಡಾಕ್ಟರ್‌ ಹತ್ತಿರ ಮಾತನಾಡಿದೆ. ಕೆಲವು ಟೆಸ್ಟ್ ಹೇಳಿದ್ದಾರೆ. ನಾಳೆ ಆಸ್ಪತ್ರೆಗೆ ಹೋಗಿ ನಿನಗೆ ಶುಗರ್‌ ಟೆಸ್ಟ್ ಮಾಡಿಸೋಣ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾ,” ಮಗ ಹೇಳಿದ.

ಮಾರನೇಯ ದಿನ ಬೆಳಗ್ಗೆ ಬೇಗ ಎದ್ದು ಹೊರಟೆ.

“ಮನೇಲಿ ಅಡುಗೆ ತಿಂಡಿ ಅಂತ ಏನೂ ಹಚ್ಚಿಕೊಳ್ಳಬೇಡ. ಆಸ್ಪತ್ರೆಗೆ ಬೇಗ ಹೋಗು.  ನಾನು ಒಂದು ದಿನ ಕ್ಯಾಂಟೀನ್‌ ನಲ್ಲಿ ಊಟ ತಿಂಡಿ ಮಾಡ್ಕೊತೀನಿ,” ಯಜಮಾನರು ಹೇಳಿದಾಗ ಆಯಿತೆಂದು ಮಗನ ಜೊತೆ ಹೊರಟೆ.

ಮೊದಲು ಖಾಲಿ ಹೊಟ್ಟೆಯಲ್ಲಿ ರಕ್ತ ಪರೀಕ್ಷೆ. ನಂತರ ಹೋಟೆಲ್ ನಲ್ಲಿ ತಿಂಡಿ ತಿಂದೆ. ಆಮೇಲೆ ಎರಡು ಗಂಟೆ ಬಿಟ್ಟು ಮತ್ತೆ ರಕ್ತ ಪರೀಕ್ಷೆ ಮಾಡಿಸಿದೆ.

ಸಾಯಂಕಾಲ ರಕ್ತದ ಪರೀಕ್ಷೆಯ ರಿಪೋರ್ಟ್‌ ತೆಗೆದುಕೊಂಡು ಡಾಕ್ಟರ್‌ ಹತ್ತಿರ ಹೋದೆ. ಡಾಕ್ಟರ್‌ ಏನಾದರೂ ಹೇಳು ಮೊದಲೇ ನಾನು ನನ್ನ ಆತಂಕವನ್ನು ಒದರಿಬಿಟ್ಟೆ. ನನ್ನ ಕಥೆಯನ್ನು ಕೇಳಿ ರಿಪೋರ್ಟ್‌ ನೋಡಿ, ಡಾಕ್ಟರ್‌ ಜೋರಾಗಿ ನಕ್ಕರು.

“ನಿಮಗೆ ಯಾವ ಶುಗರ್‌ ಇಲ್ಲ, ಎಂತಹದೂ ಇಲ್ಲ. ಬಹುಶಃ ಗ್ಲುಕಾಮೀಟರ್‌ ಕೆಲವೊಮ್ಮೆ ಹೆಚ್ಚು ಕಡಿಮೆ ತೋರಿಸುತ್ತೆ. ನೀವು ಟೆಸ್ಟ್ ಮಾಡಿಕೊಂಡಾಗ, ಖಾಲಿ ಹೊಟ್ಟೆಯಲ್ಲಿ ಮಾಡಿಕೊಂಡ್ರಾ ಅಥವಾ ಏನಾದ್ರೂ ತಿಂದ್ದಿದ್ರಾ….?”

“ಇಲ್ಲ ಡಾಕ್ಟರ್‌, ಕಾಫಿ ಕುಡಿದಿದ್ದೆ ಅಷ್ಟೆ. ಅದು ಬಿಟ್ಟು ಬೇರೇನೂ ತಿಂದಿರಲಿಲ್ಲ,” ಪ್ರಾಮಾಣಿಕವಾಗಿ ಉತ್ತರಿಸಿದೆ.

“ಸಕ್ಕರೆ ಹಾಕಿದ ಕಾಫಿ….?”

“ಹೌದು ಸಾರ್‌.”

”ಹಿಂದಿನ ದಿನ ಸಿಹಿ ತಿಂಡಿ ಏನಾದ್ರೂ ತಿಂದ್ದಿದ್ರಾ……?”

ಒಮ್ಮೆ ಯೋಚನೆ ಮಾಡಿ, “ಹ್ಞೂಂ ಸರ್‌. ದೇವರ ಪ್ರಸಾದನ ಚೆಲ್ಲಬಾರದು ಎಂದು ಎರಡು ಲಾಡು ತಿಂದಿದ್ದೆ,” ಎಂದು ಪೆಚ್ಚು ಪೆಚ್ಚಾಗಿ ಹೇಳಿದೆ.

“ಮತ್ತೆ ಅದಕ್ಕೆ ಶುಗರ್‌ ಲೆವೆಲ್ ‌ಜಾಸ್ತಿಯಾಗಿದೆ ಅಷ್ಟೆ. ನೋಡಿ ಖಾಲಿ ಹೊಟ್ಟೆ, ತಿಂಡಿಯ ನಂತರ ಮತ್ತೆ ಮೂರು ತಿಂಗಳ ಸರಾಸರಿ ಎಲ್ಲಾ ಕಡೆ ಕೂಡಾ ಸಕ್ಕರೆಯ ಲೆವೆಲ್ ‌ಸರಿಯಾಗಿದೆ. ನೀವೇನೂ ಆತಂಕ ಪಟ್ಟುಕೊಳ್ಳಬೇಡಿ. ನಿಮಗೆ ಯಾವ ಕಾಯಿಲೆಯೂ ಇಲ್ಲ.

“ಈ ವಯಸ್ಸಿನಲ್ಲಿ ಹೆಂಗಸರಿಗೆ ಹಾರ್ಮೋನ್‌ ಗಳ ವ್ಯತ್ಯಾಸ ಆಗ್ತಾ ಇರುತ್ತೆ. ಅದಕ್ಕೆ ನಿಮಗೆ ಸ್ವಲ್ಪ ತಲೆ ಸುತ್ತು ಬಂದಿರಬೇಕು ಅಷ್ಟೆ, ಅದೆಲ್ಲ ಸಹಜ. ಮನೆಗೆ ಹೋಗಿ ಹೋಳಿಗೆ ಮಾಡಿ, ಯುಗಾದಿ ಹಬ್ಬ ಗ್ರಾಂಡಾಗಿ ಮಾಡಿ. ಅಷ್ಟಕ್ಕೂ ಶುಗರ್‌ ಬಂದರೆ ಹೆದರಬೇಕಿಲ್ಲ. ವೇಳೆಗೆ ಸರಿಯಾಗಿ ಊಟ ತಿಂಡಿ, ನಿದ್ದೆ, ವ್ಯಾಯಾಮ ಮಾಡಿ. ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡು ಔಷಧಿ ಸೇವಿಸಿದರಿ, ನೀವು ಶುಗರ್‌ ನ್ನು ಕಂಟ್ರೋಲ್ ‌ನಲ್ಲಿ ಇಟ್ಟುಕೊಳ್ಳಬಹುದು,” ಎಂದು ನಕ್ಕರು.

ಆಯಿತು ಎಂದು ತಲೆ ಆಡಿಸಿದೆ. ಆತಂಕ ದೂರವಾಗಿ ಮನಸ್ಸಿಗೆ ಒಂಚೂರು ಶಾಂತಿ ಎನಿಸಿತು. ಮನೆಗೆ ಬಂದ ಮೇಲೆ ಮಗ, “ಅಮ್ಮಾ….. ಇದನ್ನು ಬಿಟ್ಟು ಮನಸ್ಸಿನಲ್ಲಿ ಬೇರೆ ಏನಾದರೂ ಯೋಚನೆ ಇಟ್ಟುಕೊಂಡಿದ್ದೀಯಾ? ಯಾಕೆ ಇತ್ತೀಚೆಗೆ ಸಪ್ಪಗೆ ಇರ್ತೀಯಾ….?” ಎಂದು ಕೇಳಿದ.

“ನೀನು ಹಗಲು ರಾತ್ರಿ ಕೆಲಸ ಮಾಡ್ತಾ ಇರ್ತೀಯ. ಅದಕ್ಕೆ ಯೋಚನೆ ಆಗಿದೆ ಕಣೋ…..”

“ಅಮ್ಮಾ….. ಚೆನ್ನಾಗಿ ಸಂಬಳ ಕೊಡ್ತಾರೆ ಅಂದ್ರೆ, ಕೆಲಸ ಕೂಡ ಹಾಗೆ ತೆಗೆಯುತ್ತಾರೆ. ಅದಕ್ಕೆ ಯೋಚನೆ ಯಾಕೆ ಮಾಡಬೇಕು….?”

“ಆದರೆ…..”

“ಆದರೆ ಏನು ಹೇಳಮ್ಮಾ…….?”

“ನಿನ್ನನ್ನು ಕೆಲಸದಿಂದ ತೆಗೆದು ಹಾಕುತ್ತಾರೆ ಅಂತ ಭಯ ಕಣೋ ನನಗೆ. ಮೊನ್ನೆ ಎಲ್ಲಾ ಯಾವ್ಯಾಯಾವುದೋ ದೊಡ್ಡ ದೊಡ್ಡ ಕಂಪನಿಗಳಲ್ಲಿ ಎಷ್ಟೊಂದು ಜನರನ್ನು ಕೆಲಸದಿಂದ ತೆಗೆದು ಹಾಕ್ತಾ ಇದ್ದಾರೆ ಅಂತ ಹೇಳಿದ್ರು ಕಣೋ, ಅದಕ್ಕೆ ಭಯ. ಹಾಗೇನಾದರೂ ಆದರೆ ಏನು ಮಾಡುವುದು ಅಂತ ನಿಮ್ಮ ಅಪ್ಪನಿಗೆ ಸರ್ವೀಸ್‌ ಬೇರೆ ಕಡಿಮೆ ಇದೆ. ಮುಂದೆ ಹೇಗೆ ಅಂತ…..”

“ಅಮ್ಮಾ….. ಏನೇನೋ ಯೋಚನೆ ಮಾಡ್ತಿದ್ದೀಯಾ…..? ಅಮ್ಮಾ….. ಕೆಲವು ಕಂಪನಿಗಳಲ್ಲಿ ಕೆಲಸಗಾರರನ್ನು ತೆಗೆದು ಹಾಕ್ತಾ ಇದ್ದಾರೆ ನಿಜ. ಆದರೆ ಅದಕ್ಕೆ ಹೆದರಿಕೊಳ್ಳಬಾರದು. ಇದೊಂದೇ ಕೆಲಸ, ಇದೊಂದೇ ಕಂಪನಿ ಅಲ್ಲ. ಬೇರೆ ಕಡೆ ಹೋಗಿ ಕೆಲಸ ಮಾಡಲು ಗೊತ್ತಿರಬೇಕು. ಕಡಿಮೆ ಸಂಬಳ, ಜಾಸ್ತಿ ಸಂಬಳ ಅಥವಾ ಚಿಕ್ಕ ಹುದ್ದೆ, ದೊಡ್ಡ ಹುದ್ದೆ ಯಾವುದು ಸಿಕ್ಕರೂ ಕೆಲಸ ಮಾಡುವ ಮನೋಭಾವ ಇರಬೇಕು. ಎಲ್ಲಿಯೂ ಕೆಲಸ ಸಿಗದೇ ಹೋದರೆ ಸ್ವಂತ ಕೆಲಸ ಮಾಡಲು ಕೂಡ ಬುದ್ಧಿವಂತಿಕೆ ಇರಬೇಕು. ಅಮ್ಮಾ….. ಯಾವುದೂ ಶಾಶ್ವತ ಅಲ್ಲ. ನಿನ್ನ ಮಗ ಹೇಗೆ ಇದ್ದರೂ ಹೊಂದಿಕೊಂಡು ಕೆಲಸ ಮಾಡುತ್ತಾನೆ. ಅಷ್ಟು ಜಾಣತನ ಇದೆ. ಆ ಧೈರ್ಯ ಮತ್ತು ಭರವಸೆ ನನಗಿದೆಯಮ್ಮ…..” ಎಂದು ಅಮ್ಮನಿಗೆ ಧೈರ್ಯ ಹೇಳಿದ.

“ನಿಜ ಕಣೋ, ಇಷ್ಟು ಚಿಕ್ಕನಾದರೂ ಎಷ್ಟು ಚೆನ್ನಾಗಿ  ಅರ್ಥ ಮಾಡಿಕೊಂಡಿದ್ದೀಯ, ಜಾಣ ನೀನು!”

“ಇದೇ ವಿಚಾರಕ್ಕೆ ನೀನು ಇಷ್ಟು ಕೊರಗುತ್ತಾ ಇದೀಯಾ……?” ಆಫೀಸಿನಿಂದ ಬಂದ ಯಜಮಾನರು ಎಲ್ಲವನ್ನೂ ಕೇಳಿಸಿಕೊಂಡು ಪ್ರಶ್ನಿಸಿದರು.

`ಹ್ಞೂಂ…..’ ಎನ್ನುವಂತೆ ತಲೆ ಆಡಿಸಿದೆ.

“ಏನು ಯೋಚನೆ ಮಾಡಬೇಡ. ಆಗಲೇ ಆಸ್ಪತ್ರೆಯಿಂದ ಬಂದ ಕೂಡಲೇ ಮಗ ಫೋನ್‌ ಮಾಡಿದ್ದ. ನಿನಗೆ ಏನು ತೊಂದರೆ ಇಲ್ಲ ಅಂತ. ಅಲ್ಲದೆ, ನಾವಿಬ್ಬರೂ ಅಪ್ಪಮಗ ದುಡಿಯುತ್ತಾ ಇದೀವಿ. ಅಂತಹುದರಲ್ಲಿ  ಹೀಗೇಕೆ ಯೋಚನೆ? ನಮ್ಮ ಮಗ ಬುದ್ಧಿವಂತ ಕಣೇ. ಎಲ್ಲಿ ಅಥವಾ ಯಾವ ಕೆಲಸ ಕೊಟ್ಟರೂ ಚೆನ್ನಾಗಿ ಮಾಡುತ್ತಾನೆ. ನೋಡು, ಸಂತೋಷಕ್ಕೆ ಇವತ್ತು ಮಲ್ಲಿಗೆ ಹೂ ತೆಗೆದುಕೊಂಡು ಬಂದಿದ್ದೀನಿ. ಮುಡಿದುಕೋ,” ಎಂದು ಹೂವನ್ನು ನನ್ನ ಕೈಗೆ ಕೊಟ್ಟರು.

ಸ್ವಲ್ಪ ಮಲ್ಲಿಗೆಯನ್ನು ದೇವರಿಗೆ ಇಟ್ಟು, ನಮಸ್ಕಾರ ಮಾಡಿದೆ. ದೇವರಲ್ಲಿ ಪ್ರಾರ್ಥಿಸಲು ಏನೂ ಇರಲಿಲ್ಲ. ನನ್ನ ಮುಡಿಗೆ ಮಲ್ಲಿಗೆ ಮುಡಿದುಕೊಂಡು, ಸಕ್ಕರೆ ಹಾಕಿದ ಕಾಫಿ ಮಾಡಿ ತಂದು ಅಪ್ಪ ಮಗನಿಗೆ ಕೊಟ್ಟು ನಾನೂ ಕುಡಿದೆ.

ವರ್ಷದ ಮೊದಲ ಹಬ್ಬ ಯುಗಾದಿ ಬಂದೇ ಬಿಟ್ಟಿತು. ಯುಗಾದಿ ಹಬ್ಬದ ದಿನ ಎಲ್ಲರೂ ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಪೂಜೆ ಮಾಡಿ. ಬೇವು ಬೆಲ್ಲ ತಿಂದು ಹೋಳಿಗೆ ಪಾಯಸದ ಅಡುಗೆ ಮಾಡಿ ಊಟಕ್ಕೆ ಕುಳಿತೆ.

“ಅಮ್ಮಾ….. ಅಪ್ಪಾ…. ನಿಮಗೆ ಒಂದು ಶುಭ ಸಮಾಚಾರ. ನಾನು ಮಾಡುತ್ತಿದ್ದ ಪ್ರಾಜೆಕ್ಟ್ ನಿಂದ ನಮ್ಮ ಕಂಪನಿಗೆ ಬಹಳ ಲಾಭವಾಗಿದೆ. ಅದರಿಂದ ನನಗೆ ಪ್ರಮೋಶನ್‌ ಜೊತೆಗೆ ಸಂಬಳ ಕೂಡ ಜಾಸ್ತಿ ಮಾಡಿದ್ದಾರೆ!” ಎಂದು ಖುಷಿಯಿಂದ ಹೇಳಿದ ಮಗ.

ಬೇವಿನ ಕಹಿ ಹೋಗಿ ಬೆಲ್ಲದ ಸಿಹಿ ಹೋಳಿಗೆ ಬಾಯಿ ಮನಸ್ಸನ್ನು ಸಿಹಿ ಮಾಡಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ