ಬಾಲಿವುಡ್ನಲ್ಲಿ ಕೆರಿಯರ್ಹುಡುಕುತ್ತಿರುವ ಶರ್ಲಿ

24 ವರ್ಷದ ಶರ್ಲಿ ಸೇತಿಯಾಳ ತವರೂರು ನ್ಯೂಝಿಲೆಂಡ್‌. ಈಕೆ ಗಾಯಕಿ ಮಾತ್ರವಲ್ಲ, ಉತ್ತಮ ನಟಿಯೂ ಹೌದು. ಈಕೆ ಹಿಂದಿಯಲ್ಲಿ `ಜೆಂಟಲ್ ಮ್ಯಾನ್‌, ಮಸ್ಕಾ, ಛತ್ರೀವಾಲಿ’ ಹಾಗೂ ತೆಲುಗಿನ `ಕೃಷ್ಣ ವೃಂದ ವಿಹಾರಿ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಸದ್ಯಕ್ಕಂತೂ ಯಾವುದೇ ದೊಡ್ಡ ಪ್ರಾಜೆಕ್ಟ್ ಇರದ ಶರ್ಲಿ, ಇನ್‌ ಸ್ಟಾಗ್ರಾಮ್ ನಲ್ಲಿ ತನ್ನ ರೀಲ್ಸ್ ಪೋಸ್ಟ್ ಮಾಡುತ್ತಿದ್ದಾಳೆ. ಇವಳ ನಟನೆಯತ್ತ ಕಣ್ಣು ಹಾಯಿಸದ ಬಾಲಿವುಡ್‌ ಪ್ರಿಯರು, ಇವಳನ್ನು ಕೇವಲ ಬಿಚ್ಚಮ್ಮಳಾಗಿ ಐಟಂ ಸಾಂಗ್ಸ್ ನಲ್ಲಿ ನೋಡಬಯಸುತ್ತಾರೆ. ಇದನ್ನರಿಯದ ಶರ್ಲಿ, ಸಿಕ್ಕಿದ ಅವಕಾಶ ಬಳಸಿಕೊಳ್ಳುತ್ತಾ ಕುಣಿಯುತ್ತಿದ್ದಾಳೆ. ಆ್ಯಲೀ ಆ್ಯರಾಮ್, ಜ್ಯಾಕ್‌ ಲೀನ್‌ ಫರ್ನಾಂಡೀಸ್‌ ಮುಂತಾದವರು ಈಗಾಗಲೇ ಈ ಪಟ್ಟಿಗೆ ಸೇರಿದ್ದಾಯ್ತು. ಸಿಕ್ಕಿದ ಅಲ್ಪ ಐಟಂಗಳಲ್ಲೇ ತೃಪ್ತಿಪಡುತ್ತಾ, ಕೆರಿಯರ್‌ ಕಾಣದೇ ಅವರು ಕಂಗಾಲಾಗಿದ್ದಾರೆ. ಅಂದಹಾಗೆ ನೋರಾ ಪಥೇಹಿಯ ಕೆರಿಯರ್‌ ಸಹ ತೀರ ಕಾಣದ ದೋಣಿಯಾಗಿದೆ. ಇದರ ಬದಲು ಈಕೆ ತವರೂರಿಗೆ ಮರಳಿ ಯಾವುದಾದರೂ ಉತ್ತಮ ಪ್ರಾಜೆಕ್ಟ್ ಕೈಗೊಳ್ಳುವುದು ಮೇಲು!

Ehsash-Channa

ಸ್ಟೈಲಿಶ್ಆದಳು ಎಹಸಾಸ್

`ಮೈ ಫ್ರೆಂಡ್‌ ಗಣೇಶ’ ಚಿತ್ರದ ಬಾಲನಟಿ ನಿಮಗೆ ನೆನಪಿದ್ದಾಳಾ? ಹೌದು, ಅದೇ ಎಹಸಾಸ್‌ ಚನ್ನಾ ಇದೀಗ ಹಿರಿಯ ನಟಿಯಾಗಿ ಮಿಂಚಲು ಬರುತ್ತಿದ್ದಾಳೆ. `ಕೋಟಾ ಫ್ಯಾಕ್ಟ್ರಿ, ಹಾಸ್ಟೆಲ್ ಡೇಸ್‌’ನಂಥ ದೊಡ್ಡ ಚಿತ್ರಗಳಲ್ಲಿ ಸಣ್ಣ ಪಾತ್ರದಲ್ಲಿ ಬಂದು ಹೋಗಿದ್ದಾಳೆ. ಇಷ್ಟು ಮಾತ್ರವಲ್ಲ, ಎಹಸಾಸ್‌ ಇದೀಗ ಬಲು ಸ್ಟೈಲಿಶ್‌ಗ್ಲಾಮರಸ್‌ ಎನಿಸಿದ್ದಾಳೆ! ಇವಳ ಸೋಶಿಯಲ್ ಮೀಡಿಯಾ ಗ್ಲಾಮರಸ್‌ಫೋಟೋಗಳಿಂದ ತುಂಬಿ ತುಳುಕುತ್ತಿದೆ. ಹುಡುಗರಿರಲಿ, ಹುಡುಗಿಯರೂ ಇವಳ ಅಭಿಮಾನಿಗಳಿಗಾಗಿ FB ‌ಫಾಲೋ ಮಾಡ್ತಿದ್ದಾರೆ. ತನ್ನ ಈ ಅತ್ಯಾಧುನಿಕ ವೈಯಾರದಿಂದಾಗಿ, ಈಕೆ ಎಲ್ಲಾ ಬಾಲಿವುಡ್‌ ನ ಪ್ರಮುಖ ಇವೆಂಟ್ಸ್ ಗಳಲ್ಲೂ ಮಿಂಚಿಂಗೋ ಮಿಂಚಿಂಗು! ಇದೇನಿದು? ಬೇಬಿ ಶ್ಯಾಮಿಲಿ ತರಹ ಚೋಟುದ್ದ ಇದ್ದ ಈ ಬಾಲಪ್ರತಿಭೆ ಅದ್ಯಾವಾಗ ಇಷ್ಟೆತ್ತರಕ್ಕೆ ಬೆಳೆದುಬಿಟ್ಟಿದೆ? ಎಂದು ಬಾಲಿವುಡ್‌ ಮಂದಿ ಕಣ್‌ ಕಣ್‌ ಬಿಡುತ್ತಿದ್ದಾರೆ.

banita-sandhu

ಪ್ರತಿಭೆ ಏನೋ ಇದೆ, ಕೆಲಸ ಮಾತ್ರ ಇಲ್ಲ

ವನಿತಾ ಸಂಧೂಳ ಕೆಲಸವನ್ನು `ಅಕ್ಟೋಬರ್‌’ ಚಿತ್ರದಲ್ಲಿ ಎಲ್ಲರೂ ಮೆಚ್ಚಿಕೊಂಡರು. `ಸರ್ದಾರ್‌ ಉದಮ್ ಸಿಂಗ್‌, ಆದಿತ್ಯ ವರ್ಮ’ ಚಿತ್ರಗಳಲ್ಲೂ ಈಕೆಯ ನಟನೆಯ ಕುರಿತಾಗಿ ಒಳ್ಳೆಯ ಮಾತುಗಳು ಕೇಳಿಬಂದವು. ಇಷ್ಟು ಮಾತ್ರವಲ್ಲದೆ, ಈಕೆ ಬ್ರಿಟಿಷ್ ಡಾರ್ಕ್‌ ಕಾಮಿಡಿ `ಎಟರ್ನ್‌ ಬ್ಯೂಟಿ’ ಚಿತ್ರದಲ್ಲೂ ಮಿಂಚಿದಳು. ಇಷ್ಟೆಲ್ಲ ಅಖಂಡ ಪ್ರತಿಭೆ ಇದ್ದರೂ, ಈಗ ಇವಳ ಬಳಿ ಯಾವ ಬಾಲಿವುಡ್‌ ಚಿತ್ರ ಇಲ್ಲ. ಸದ್ಯಕ್ಕೆ ಈಕೆಯ ಬಳಿ ಒಂದೇ ಒಂದು ತೆಲುಗು ಚಿತ್ರ `ಝೀ-2′ ಮಾತ್ರ ಇದೆ. ಬಾಲಿವುಡ್‌ ನ ಹುಚ್ಚು ಖೋಡಿ ನಿರ್ಮಾಪಕರು ಮುದಿ ಸ್ಟಾರ್‌ ಗಳತ್ತಲೇ ಹಣದ ಹೊಳೆ ಹರಿಸುತ್ತಿದ್ದಾರೆಯೇ ಹೊರತು ಇಂಥ ಅಪ್ಪಟ ಪ್ರತಿಭೆಗಳತ್ತ ಗಮನಹರಿಸುತ್ತಿಲ್ಲ. ಹೀಗಾಗಿಯೇ ಬಾಲಿವುಡ್‌ ನ ಚಿತ್ರಗಳೆಲ್ಲ ಸಾಲಾಗಿ ಮಖಾಡೆ ಮಲಗುತ್ತಿವೆ. ಬಾಲಿವುಡ್‌ ಒಂದೇ ಅಲ್ಲಮ್ಮ, ದಕ್ಷಿಣದ ಚಿತ್ರಗಳಲ್ಲಿ ಗಟ್ಟಿ ನಿರ್ದೇಶಕರನ್ನು ಭೇಟಿಯಾಗು ಎಂದು ಹಿತೈಷಿಗಳು ಸಲಹೆ ನೀಡುತ್ತಿದ್ದಾರೆ.

Sai-palabi

ಪಿಆರ್  ಮಾತ್ರ ಪರಾಕ್ಹೇಳುವುದಲ್ಲ!

ತೆಲುಗು, ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಖ್ಯಾತಿವೆತ್ತ ಹೆಸರು ಸಾಯಿಪಲ್ಲವಿ! `ಮಾರಿ-2, ಕಾಳಿ’ ಇತ್ಯಾದಿ ಗಜ ಗಾತ್ರದ ಚಿತ್ರಗಳಲ್ಲಿ ಹೆಸರು ಗಳಿಸಿದ್ದಾಳೆ. ದಕ್ಷಿಣದ ಚಿತ್ರಗಳು ಮಾತ್ರವಲ್ಲದೆ ಬಾಲಿವುಡ್‌ ಪ್ರೇಕ್ಷಕರು ಸಹ ಈಕೆಗೆ ಫಿದಾ ಆಗುತ್ತಿದ್ದಾರೆ. ಆದರೆ ಇಲ್ಲಿ ಗಮನಿಸತಕ್ಕ ಅಂಶವೆಂದರೆ, ತನ್ನ ಸಾಸುವೆಯ ಕೆಲಸವನ್ನು ಸಾಗರದಷ್ಟು ವರ್ಣಿಸುವ ಯಾವ ಪಿಆರ್ ಓ  ಸಿಬ್ಬಂದಿಯನ್ನೂ ಈಕೆ ನೇಮಿಸಿಕೊಂಡಿಲ್ಲ. ಇತ್ತೀಚೆಗೆ ಒಂದು ಇವೆಂಟ್‌ ನಲ್ಲಿ ಈಕೆಯನ್ನು ಈ ಕುರಿತು ವಿಚಾರಿಸಿದಾಗ, ಈ ಪಿಆರ್ ಓ ಗಳ ಗೊಡವೆಯೇ ತನಗೆ ಬೇಡ ಎನ್ನುತ್ತಾಳೆ. ತನ್ನ ಚಿತ್ರ ಬಿಡುಗಡೆಯಾದ ನಂತರ ಪ್ರೇಕ್ಷಕರಿಗೆ ಅದು ಇಷ್ಟವಾದರೆ, ಅವರು ಖುದ್ದಾಗಿ ತನ್ನನ್ನು ಮೆಚ್ಚಿ ಮತ್ತೊಂದು ಚಿತ್ರ ಹುಡುಕಿಕೊಂಡು ಬರುತ್ತಾರೆ. ಅಂಥದರಲ್ಲಿ ಡಂಗೂರ ಸಾರುವ ಪಿಆರ್ ಓ ಪರಾಕ್‌ ಏಕೆ ಬೇಕು? ಎನ್ನುತ್ತಾಳೆ. ಅಯ್ಯೋ ಪಾಪ, ಪಿಆರ್ ಓ ಗಳ ನೌಕರಿಗೆ ರಾಹು ಬಡಿಯಿತಲ್ಲ…..?

mirjapur

ಇದು ಫಿಲ್ಮೀ ಭಯೋತ್ಪಾದನೆ!

ಹಿಂದೆಲ್ಲ ಸೆನ್ಸಾರ್‌ ಬೋರ್ಡ್‌ ನವರ ತೀಕ್ಷ್ಣ ಕಣ್ಣಿಗೆ ಬಿದ್ದ ಮರಾಮಾರಿ, ಲಾಂಗ್‌ ಬೀಸುವಿಕೆ ದೃಶ್ಯಗಳಿಗೆ ಧಾರಾಳ ಕತ್ತರಿ ಬೀಳುತ್ತಿತ್ತು. ಬಾಲಿವುಡ್‌ ನ ಎವರ್‌ ಗ್ರೀನ್‌ `ಶೋಲೆ’ ಚಿತ್ರದಲ್ಲಿ ವಿಲನ್‌ ಗಬ್ಬರ್‌ ಸಿಂಗ್‌ ನ್ನು ಕಾಲಲ್ಲಿ ತುಳಿದು ಸಾಯಿಸುವ ದೃಶ್ಯಕ್ಕೇ ಅಪಾರ ವಿರೋಧ ವ್ಯಕ್ತವಾಗಿತ್ತು. ಈಗಿನ ಜನ `ಅನಿಮಲ್’ನಂಥ ಕ್ರೂರಾತ್ಮಕ ಕ್ರೂರ ಚಿತ್ರ ಕಂಡ ಮೇಲೂ ತೆಪ್ಪಗಿರುವುದು ಏಕೆ? OTT ಸರಣಿಯಲ್ಲಂತೂ ರಕ್ತದೋಕುಳಿ ಕೇಳುವುದೇ ಬೇಡ. ಅವರಿಗೆ ಎಲ್ಲ ಫ್ರೀ ಲೈಸೆನ್ಸ್. `ಮಿರ್ಜಾಪುರ್‌, ಅನ್‌ ದೇಖಿ, ಸಿಟಾಡೆಲ್ ‌ಹನೀ ಬನೀ’ ಚಿತ್ರಗಳವರೆಗೂ ಹಿಂಸಾಕಾಂಡ ಧಾರಾಳ ತುಂಬಿ ತುಳುಕುತ್ತಿದೆ. `ಸಿಟಾಡೆಲ್‌’ ನಲ್ಲಿ ಜಾಕಿ ಶ್ರಾಫ್‌ ನಂಥ ಹಿರಿಯ ನಟ ಲಾಂಗ್‌ ನಿಂದ ಕೊಚ್ಚಿ ಕೊಲ್ಲುತ್ತಾ ರಕ್ತ ಹರಿಸುವ ದೃಶ್ಯ ನೋಡಲಾಗದು. ಈ ಮೂಲಕ ಇಂಥ ನಿರ್ಮಾಪಕರು ಸಮಾಜಕ್ಕೆ ಎಂಥ ಸಂದೇಶ ನೀಡುತ್ತಿದ್ದಾರೆ? ಹಿಂಸೆಯ ವೈಭವೀಕರಣವೇ ಎಲ್ಲಾ ಸಮಸ್ಯೆಗಳಿಗೆ ದಿ ಎಂಡ್‌ಅಂತಾನಾ? ಇದನ್ನು ಫಿಲ್ಮೀ ಭಯೋತ್ಪಾದನೆ ಅಲ್ಲದೆ ಮತ್ತೇನೆನ್ನಬೇಕು?

pani

ಅಂತೂ ಕೆಲವರು ಸೀರಿಯಸ್ಆದರು

ಬಾಲಿವುಡ್‌ ನ ನಿರ್ಮಾಪಕರಂತೂ ತಲೆ ಬಾಲ ಇಲ್ಲ ಚಿತ್ರ ತಯಾರಿಯಲ್ಲೇ ಕಾಲ ಕಳೆಯುವುದಾಗಿದೆ. ಅತ್ತ ದಕ್ಷಿಣದವರು ಮೆಗಾ ಬಜೆಟ್ ಡ್ರಾಮಾ ನಡೆಸುವುದೇ ಆಗಿದೆ. ಇವೆರಡರ ಮಧ್ಯೆ ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳು ಕಣ್ಮರೆ ಆದದ್ದೆಲ್ಲಿ? ಎಷ್ಟೋ ವರ್ಷಗಳ ನಂತರ ಮರಾಠಿ ನಿರ್ದೇಶಕ ಆದಿನಾಥ್‌ ಕೊಠಾರೆ ಬರಗಾಲದ ಕುರಿತಾದ (ಎಂ.ಎಸ್‌. ಸತ್ಯು ಅವರ ಕನ್ನಡ `ಬರ’ ನೆನಪಾಗುತ್ತಿದೆಯೇ?) `ಪಾನಿ’ ಚಿತ್ರ ನಿರ್ಮಿಸಿ, ಒಂದು ಸಂದೇಶ ನೀಡಲು ಯತ್ನಿಸಿದ್ದಾರೆ. ಈ ಚಿತ್ರ ಆರ್ಟ್‌ ಫಿಲ್ಮ್ ಎಂದು ಸೈಡಿಗೆ ಒತ್ತರಿಸಲ್ಪಡದೆ, ಬಾಕ್ಸ್ ಆಫೀಸಿನಲ್ಲೂ ಉತ್ತಮ ಗಳಿಕೆ ಕಾಣುತ್ತಿದೆ. ಇದರಲ್ಲಿ ಯಾವ ಮೆಗಾ ಸ್ಟಾರ್‌, ಸೂಪರ್‌ ಸ್ಟಾರೂ ಇಲ್ಲ. ದೊಡ್ಡ ಬ್ಯಾನರ್‌ ನಡಿ ಈ ಚಿತ್ರ ತಯಾರಾಗಿದೆ ಎಂಬುದಂತೂ ನಿಜ. ಈ ಚಿತ್ರವನ್ನು ಪರ್ಪಲ್ ಪೆಬ್‌ ಪಿಕ್ಚರ್ಸ್‌ ಬ್ಯಾನರ್‌ ನಡಿ ತಯಾರಿಸಲಾಗಿದ್ದು, ಇದು ಪ್ರಿಯಾಂಕಾ ಚೋಪ್ರಾ, ಆಕೆಯ ತಾಯಿ ಮಧು ಚೋಪ್ರಾರಿಗೆ ಸಂಬಂಧಿಸಿದ್ದು. ಆದಿನಾಥ್‌ ಹಾಗೂ ರುಚೀ ವೈದ್ಯಾರ ಪಾತ್ರ ಪೋಷಣೆ ಅದ್ಭುತವಾಗಿದೆ. ಒಟ್ಟಾರೆ ಈ ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದ್ದು, ಪ್ರೇಕ್ಷಕರು ಕೈ ಹಿಡಿದು ಮುನ್ನಡೆಸಬೇಕಷ್ಟೆ.

tripti-Dimari

ಕಿಯಾರಾಳ ಬದಲಿಗೆ ತೃಪ್ತೀ ಬಂದಳೇ?

`ಭಾಭಿ ನಂ.2′ ಚಿತ್ರದಿಂದ ಸ್ಟಾರ್‌ ಆದ ತೃಪ್ತೀ ಡಿಮ್ರಿ ಇತ್ತೀಚಿನ ಬಹುತೇಕ ಬಾಲಿವುಡ್‌ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾಳೆ. ಆದರೆ ಇಲ್ಲಿನ ವಿಶಿಷ್ಟ ಸಂಗತಿ ಎಂದರೆ, ಯಾವ ಚಿತ್ರದ 2ನೇ, 3ನೇ ಭಾಗಗಳಲ್ಲಿ ಈಕೆ ನಟಿಸುತ್ತಿದ್ದಾಳೋ, ಅದರ ಎಲ್ಲಾ ಮೊದಲ ಭಾಗಗಳಲ್ಲೂ ಕಿಯಾರಾ ನಾಯಕಿ ಆಗಿರುತ್ತಾಳೆ! `ಬ್ಯಾಡ್‌ ನ್ಯೂಸ್‌’ ಚಿತ್ರದ ನಂತರ `ಭೂಲ್ ‌ಭುಲೈಯಾ-3′ ಚಿತ್ರದಲ್ಲಿನ ಈಕೆಯ ಎಂಟ್ರಿ ಇದನ್ನೇ ನಿರೂಪಿಸುತ್ತಿದೆ. ಪಾಪ, ತೃಪ್ತೀ ಮುಂದೆ ಕಿಯಾರಾ ಯಾಕೋ ಮಂಕಾಗುತ್ತಿದ್ದಾಳೆ. ಅಂದಹಾಗೆ ಮದುವೆ ನಂತರ ಕಿಯಾರಾ ಕೆಲವೇ ಚಿತ್ರಗಳಲ್ಲಿ ಮಾತ್ರ ಕಂಡುಬಂದಳು. ತೃಪ್ತೀ ಮಾತ್ರ ಕಿಯಾರಾಳನ್ನು ಬದಿಗೊತ್ತರಿಸಿದ್ದಲ್ಲದೆ, ಜಾಹ್ನವಿ ಕಪೂರ್‌ ಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾಳೆ! `ಧಡಕ್‌’ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಜೊತೆ ತೃಪ್ತೀ ರೀಲ್ ‌ರೊಮಾನ್ಸ್ ನಡೆಸುತ್ತಿದ್ದಾಳೆ. ಆದ್ದರಿಂದಲೇ ಆಧುನಿಕ ಬಾಲಿವುಡ್‌ ಹೀರೋಯಿನ್ಸ್ ಈ `ಭಾಭಿ ನಂ.2′ ಯಾವಾಗ `ಹೀರೋಯಿನ್‌ ನಂ.!’ ಆದಳೋ ತಿಳಿಯದೆ ಕಕ್ಕಾಬಿಕ್ಕಿ ಆಗುತ್ತಿದ್ದಾರೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ