ಕಥೆ – ಸ್ನೇಹಾ ಆನಂದ್
ತಾಯಿ ತಂದೆಯರ ಒಬ್ಬಳೇ ಮುದ್ದಿನ ಮಗಳಾಗಿದ್ದ ಶ್ರಾವಣಿಗೆ ಜೀವನದಲ್ಲಿ ಎಲ್ಲವೂ ಸುಲಭವಾಗಿ ಸಿಕ್ಕಿಬಿಟ್ಟಿತ್ತು. ಯೌವನದ ಹುಚ್ಚು ಹೊಳೆಯಲ್ಲಿ ಸಿಲುಕಿದ ಅವಳಿಗೆ ಮುಂದೆ ತಾನೇನು ಮಾಡುತ್ತಿದ್ದೇನೆ ಎಂದು ತಿಳಿಯದೆ ಎಡಹುದರಲ್ಲಿದ್ದಳು. ಮುಂದೆ…..?
ಮಾಣಿಕ್ಯ ರಾಯರು ಮತ್ತು ಯಮುನಾರಿಗೆ ಒಬ್ಬಳೇ ಮಗಳು ಶ್ರಾವಣಿ. ಮುದ್ದು ಮಗಳನ್ನು ಅತಿ ಮುದ್ದು ಮಾಡಿ ಬೆಳೆಸಿದ್ದರು.
ಈ ದಂಪತಿಗೆ ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗದ ಕಾರಣ ಆತಂಕಕ್ಕೆ ಒಳಗಾದರು. ದಂಪತಿ ವೈದ್ಯರ ಬಳಿಗೆ ಹೋದರು. `ನಿಮ್ಮ ಗರ್ಭಕೋಶದಲ್ಲಿ ತೊಂದರೆ ಇದೆ. ಮಕ್ಕಳಾಗುವ ಸಾಧ್ಯತೆಯೇ ಇಲ್ಲ,’ ಎಂದು ವೈದ್ಯರು ಪರೀಕ್ಷಿಸಿ ಹೇಳಿದರು.
ಯಮುನಾ ಧರೆಗಿಳಿದು ಹೋದಳು. ಅದೇ ಕೊರಗಿನಲ್ಲಿ ಊಟ ನಿದ್ದೆ ಬಿಟ್ಟು ನಿಶ್ಶಕ್ತಿಗೆ ಒಳಗಾದಳು. ಆ ಸಮಯದಲ್ಲಿ ದೇವರಂತೆ ಬಂದಿದ್ದು ಮಾಣಿಕ್ಯ ರಾಯರ ಗೆಳೆಯ ತಾರಾನಾಥರು. ಅವರು ಒಂದು ಅನಾಥ ಮಗುವನ್ನು ತಂದು ಮಾಣಿಕ್ಯ ರಾಯರ ಕೈಯಲ್ಲಿಟ್ಟರು. ಜೊತೆಗೆ ಅವರನ್ನು ತಮ್ಮೊಂದಿಗೆ ಶಿವಮೊಗ್ಗಕ್ಕೆ ಬರುವಂತೆ ಒತ್ತಾಯ ಮಾಡಿ, ಮೈಸೂರಿನಿಂದ ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ದರು. ಹೀಗಾಗಿ ಯಾರಿಗೂ ಶ್ರಾವಣಿ ದತ್ತು ಮಗಳೆಂದು ಗೊತ್ತಾಗಲಿಲ್ಲ. ತಮಗೆ ಸಿಕ್ಕಿದ ಪುಟ್ಟ ಹಸು ಕಂದನನ್ನು ಸ್ವಂತ ಮಗಳಂತೆಯೇ ಅತಿ ಪ್ರೀತಿಯಿಂದ ಬೆಳೆಸಿದರು. ತುಂಬಾ ಮೃದು ಸ್ವಭಾದ ಶ್ರಾವಣಿ ತಾಯಿ ತಂದೆಯರ ಕಣ್ಮಣಿಯಾಗಿ ಬೆಳೆದಳು. ಮಾಣಿಕ್ಯ ರಾಯರಿಗೆ ತಮ್ಮ ಮುದ್ದಿನ ಮಗಳ ಬಗ್ಗೆ ತುಂಬಾ ಅಭಿಮಾನ. ಶಾಲೆಯ ಬಸ್ಸು ಬರುತ್ತಿದ್ದರೂ ಕೂಡ ಮಗಳನ್ನು ಶಾಲೆಗೆ ಕಳುಹಿಸಲು ತಾವೇ ಹೋಗುತ್ತಿದ್ದರು.
ಆಟಕ್ಕೆ ಹೋದ ಶ್ರಾವಣಿ ಮನೆಗೆ ಬರಲು ಸ್ವಲ್ಪ ತಡವಾದರೂ, ಯಮುನಾ ಬಾಗಿಲ ಬಳಿ ಕಾಯುತ್ತಾ ನಿಲ್ಲುತ್ತಿದ್ದರು. ಅವಳಿಗೆ ಆಟ ಆಡುವಾಗ ಸ್ವಲ್ಪ ಪೆಟ್ಟಾದರೂ ಅದರ ನೋವನ್ನು ಮಾಣಿಕ್ಯ ರಾಯರು ಅನುಭವಿಸುತ್ತಿದ್ದರು. ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿದ್ದ ಪುಟ್ಟ ಮಗಳು ಕಾಲೇಜಿಗೆ ಹೋಗಲು ಶುರು ಮಾಡಿ ಕೊನೆಯ ವರ್ಷದಲ್ಲಿರುವುದು ಆಶ್ಚರ್ಯ ತಂದಿತ್ತು ಮಾಣಿಕ್ಯ ರಾಯರು ಮತ್ತು ಯಮುನಾ ದಂಪತಿಗೆ.
ಯಾರಾದರೂ ಮಗಳ ಜಾತಕವನ್ನು ಕೇಳಿ ಮದುವೆ ಮಾಡ್ತೀರಾ ಮಗಳಿಗೆ ಎಂದು ಕೇಳಿದಾಗ, ತಮಗೆ ಮಕ್ಕಳಾಗದ ಸಮಯದಲ್ಲಿ ಅನುಭವಿಸಿದ ನೋವು ಮರಳಿ ಬಂದಂತೆ ಭಾಸವಾಗತೊಡಗಿತು.
ದಿನಗಳು ಹೇಗೆ ಓಡಿದ. ಕಣ್ಣು ಮುಚ್ಚಿ ತೆಗೆಯುವುದರೊಳಗೆ ಮಗಳು ಇಷ್ಟು ಬೇಗ ದೊಡ್ಡವಳಾಗಿಬಿಟ್ಟಳು. ಸರಿಯಾದ ಸಮಯಕ್ಕೆ ಮಗಳಿಗೆ ಮದುವೆ ಮಾಡಲೇ ಬೇಕಾದುದು ಅನಿವಾರ್ಯವಾಗಿದ್ದರಿಂದ ಪ್ರೀತಿಯ ಮಗಳಿಗಾಗಿ ಒಳ್ಳೆಯ ವರನನ್ನು ನೋಡತೊಡಗಿದರು. ಶ್ರಾವಣಿ ವಯಸ್ಸಿಗೆ ತಕ್ಕಂತೆ ಸುಂದರವಾಗಿ ಹೂವಿನಂತೆ ಅರಳಿದಳು. ತಾಯಿ ತಂದೆಯರ ಮಾತಿನಂತೆ ನಡೆಯುತ್ತಿದ್ದ ಶ್ರಾವಣಿ ಯಾವತ್ತೂ ಅವರ ಮಾತಿಗೆ ಎದುರಾಡುತ್ತಿರಲಿಲ್ಲ.
ಆದರೆ ವಯಸ್ಸಿಗೆ ತಕ್ಕಂತೆ ಕನಸುಗಳು ಅವಳನ್ನು ಸುತ್ತಿದ. ತನ್ನ ಕಾಲೇಜಿನಲ್ಲಿಯೇ ಓದುತ್ತಿದ್ದ ಮಹೇಂದ್ರನ ಕಡೆಗೆ ಆಕರ್ಷಣೆಗೆ ಒಳಗಾದಳು. ಮಹೇಂದ್ರನೂ ಇವಳನ್ನು ಪ್ರೀತಿಸತೊಡಗಿದ. ಇಬ್ಬರ ಕಣ್ಣುಗಳು ಒಂದಾದಾಗ ಶ್ರಾವಣಿಯ ಮನಸ್ಸು ಆಕಾಶಕ್ಕೆ ಹಾರಿತು. ಮನೆಯಲ್ಲಿ ಈ ವಿಷಯ ತಿಳಿಸುವ ಬಗ್ಗೆ ಧೈರ್ಯವಿಲ್ಲದೆ ಚಡಪಡಿಸಿದಳು ಶ್ರಾವಣಿ.
ಹದಿಹರೆಯದ ಹುಡುಗಿ ಶ್ರಾವಣಿ ಈಗ ಪ್ರೀತಿಯ ಸುಳಿಯಲ್ಲಿ ಸಿಲುಕಿ ಮಹೇಂದ್ರನ ಕಡೆಗೆ ವಾಲಿದಳು. ತನ್ನ ತಾಯಿ ತಂದೆಗೆ ತಾನೊಬ್ಬಳೇ ಮಗಳು, ತಾನಿಲ್ಲದೆ ಅವರ ಜೀವನ ಹೇಗೆ ನಡೆಯುತ್ತದೋ ಎಂದು ಶ್ರಾವಣಿ ಯೋಚಿಸುತ್ತಿದ್ದಳು.
“ನಿನ್ನ ತಾಯಿ ತಂದೆ ನಮ್ಮ ಪ್ರೀತಿಗೆ ಒಪ್ಪುವ ವಿಷಯದಲ್ಲಿ ನನಗೆ ತುಂಬಾ ಅನುಮಾನ. ಯಾರಿಗೂ ಹೇಳದೇ ಇಲ್ಲಿಂದ ಹೊರಟು ಹೋಗಿ ಒಂದು ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳೋಣ. ನಿನಗಾದಷ್ಟು ಒಡವೆ, ದುಡ್ಡು ನೀನು ತೆಗೆದುಕೊಂಡು ಬಾ, ನಾನು ಪ್ರಯತ್ನಿಸಿ ಆದಷ್ಟೂ ದುಡ್ಡು ಹೊಂದಿಸಿ ತರುತ್ತೇನೆ,” ಎಂದು ಮಹೇಂದ್ರ ಹೇಳಿದ.
ಶ್ರಾವಣಿ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದಳು. ಅದಾದ ಮುಂದಿನ ವಾರ ತುಮಕೂರಿನಲ್ಲಿ ತನ್ನ ಗೆಳತಿಯ ಮದುವೆ ಇದೆ, ನಾನು ಹೋಗಿ ಬರುವೆ ಎಂದು ತನ್ನ ಅಪ್ಪನ ಬಳಿ ಕೇಳಿದಳು. ಮಾಣಿಕ್ಯ ರಾಯರು ಮಗಳಿಗೆ ಪ್ರೀತಿಯಿಂದ ಸಮ್ಮತಿಸಿದರು.
ತಾಯಿ ತಂದೆಗೆ ನಂಬಿಕೆ ದ್ರೋಹ ಮಾಡುತ್ತಿರುವ ತನ್ನ ಬಗ್ಗೆ ಅವಳಿಗೆ ಬೇಸರವೆನಿಸಿ ಕಣ್ಣಲ್ಲಿ ನೀರು ಬಂದಿತು. ಮಗಳು ತಮ್ಮನ್ನು ಎರಡು ದಿನ ಬಿಟ್ಟಿರಲು ಆಗದೆ ಅಳುತ್ತಿದ್ದಾಳೆ ಎಂದುಕೊಂಡ ಯಮುನಾ, “ಹುಚ್ಚು ಹುಡುಗಿ ನೀನು, ಈಗ ಹೀಗೆ ಅತ್ತರೆ ಹೇಗೆ? ನಾಳೆ ಮದುವೆಯಾಗಿ ಗಂಡನ ಮನೆಗೆ ಹೋದಾಗ ಏನು ಮಾಡ್ತೀಯಾ?” ಎಂದು ಪ್ರೀತಿಯಿಂದ ಅವಳ ತಲೆ ನೇವರಿಸಿದರು. ಶ್ರಾವಣಿ ತಾಯಿಯ ಮಡಿಲಲ್ಲಿ ತಲೆಯಿಟ್ಟಳು, ಇದೇ ಅವರ ಕೊನೆಯ ಅಶೀರ್ವಾದ ಎಂದುಕೊಂಡಳು.
ನಂತರ ಶ್ರಾವಣಿ ಸಿದ್ಧವಾಗತೊಡಗಿದಳು. ತನ್ನ ಮದುವೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಜೋಡಿಸಿಕೊಂಡಳು. ಆದರೆ ಯಮುನಾರಿಗೆ ಯಾವುದೇ ಅನುಮಾನ ಬರಲಿಲ್ಲ. ತನ್ನ ಗೆಳತಿಯ ಮದುವೆಗೆ ಹೊರಟಿದ್ದಾಳೆ. ವಯಸ್ಸಿಗೆ ತಕ್ಕಂತೆ ಮಗಳು ಅಲಂಕರಿಸಿಕೊಂಡು ಓಡಾಡಲಿ ಎಂಬ ಆಸೆ ಯಮುನಾರಿಗೂ ಇತ್ತು.
ಅಂದು ಬೆಳಗ್ಗೆ ಶ್ರಾವಣಿ ಹೊರಡುವ ದಿನ. ಮಾಣಿಕ್ಯರಾಯರು, “ರಾತ್ರಿ, ನಾನು ಬಂದು ನಿನ್ನ ಬಸ್ಸು ಹತ್ತಿಸುತ್ತೇನೆ,” ಎಂದರು.
“ಬೇಡ ಅಪ್ಪಾ, ಮಧ್ಯಾಹ್ನ ನನ್ನ ಗೆಳತಿಯ ಮನೆಗೆ ಹೋಗುತ್ತೇನೆ. ಎಲ್ಲಾ ಗೆಳತಿಯರೂ ಸೇರಿ ಅಲ್ಲಿಂದಲೇ ಹೊರಡುತ್ತೇವೆ. ನೀವು ಆಫೀಸಿಗೆ ಹೊರಡಿ ತಡವಾಗುತ್ತದೆ,” ಎಂದು ಅಸರಿಸಿದಳು.
ಮಾಣಿಕ್ಯ ರಾಯರಿಗೆ ಶ್ರಾವಣಿ ನಮಸ್ಕರಿಸಿದಾಗ, “ಬೇಗ ಬಂದುಬಿಡು ಕಂದಾ,” ಎಂದಾಗ ಅವಳು ತಂದೆಯನ್ನು ಅಪ್ಪಿಕೊಂಡು ಅತ್ತಳು.
“ಛೇ…ಛೇ…. ನಾನು ಸುಮ್ಮನೆ ಹೇಳಿದೆ. ಎರಡು ದಿನ ಹೀಗೆ ಬರುತ್ತೆ. ನಿನಗಂತೂ ಮದುವೆಯ ಸಂಭ್ರಮದಲ್ಲಿ ಗೊತ್ತಾಗುವುದೇ ಇಲ್ಲ,” ಎಂದು ಸಮಾಧಾನಪಡಿಸುತ್ತಾ, “ಹೀಗೆ ಅತ್ತರೆ ಹೇಗೆ….? ಮದುವೆಯಾಗುವ ಹುಡುಗಿ ನೀನು,” ಎಂದರು ಅಕ್ಕರೆಯಿಂದ.
ಅವರ ಮಾತಿಗೆ ಒಂದು ಕ್ಷಣ ಶ್ರಾವಣಿ ಗಾಬರಿಗೊಂಡಳು. ನಂತರ ಸ್ವಲ್ಪ ಸುಧಾರಿಸಿಕೊಂಡು ಅವರಿಗೆ ಅತ್ಯಂತ ಆಸ್ಥೆಯಿಂದ ನಮಸ್ಕರಿಸಿದಳು. ತಂದೆ ಆಫೀಸಿಗೆ ಹೊರಟ ನಂತರ, ತನ್ನ ಬಟ್ಟೆಯನ್ನೆಲ್ಲಾ ಸರಿಯಾಗಿ ಜೋಡಿಸಿಕೊಂಡು ಊಟ ಮಾಡಿ ಹೊರಟು ನಿಂತಾಗ ಯಮುನಾರಿಗೆ ಏನೋ ಹೇಳಲಾರದ ಸಂಕಟ. ಆದರೂ ಅದನ್ನು ತೋರಿಸಿಕೊಳ್ಳದೇ ಮಗಳಿಗೆ ತಯಾರಿಯಲ್ಲಿ ಸಹಕರಿಸಿದ್ದರು.
“ಅಮ್ಮಾ, ಮದುವೆಗೆ ಉಡಲು ನಿನ್ನ ಸೀರೆ ಕೊಡು, ನನ್ನ ಜೊತೆ ನೀನು ಇದ್ದ ಹಾಗೆ ಅನಿಸುತ್ತೆ ನನಗೆ,” ಎಂದು ಶ್ರಾವಣಿ ಕೇಳಿದಳು.

ಅವರು ಖುಷಿಯಿಂದ ಮಗಳಿಗೆ, ತಮ್ಮ ಕೆಂದಾವರೆ ಬಣ್ಣದ ರೇಷ್ಮೆ ಸೀರೆಯನ್ನು ಪ್ರೀತಿಯಿಂದ ಕೊಟ್ಟರು. ಶ್ರಾವಣಿ ಅದಕ್ಕೆ ತಕ್ಕಂತೆ ಎಲ್ಲಾ ಒಡವೆಗಳನ್ನು ಹೊಂದಿಸಿಕೊಂಡಳು.
“ಒಡವೆ ಜೋಪಾನ,” ಎಂದರು ಯಮುನಾ ಮತ್ತೊಮ್ಮೆ.
“ಹ್ಞೂಂ…. ಅಮ್ಮಾ….” ಎಂದಳು ಕ್ಷೀಣ ಧ್ವನಿಯಲ್ಲಿ.
ಶ್ರಾವಣಿ ಹೊರಟು ನಿಂತಾಗ ಯಮುನಾ ಮಗಳನ್ನು ಅಪ್ಪಿಕೊಂಡರು. ತಾಯಿಯ ಹಿತವಾದ ಅಪ್ಪುಗೆಯಲ್ಲಿ ಶ್ರಾವಣಿ ಕಣ್ಣಿಂದ ನೀರು ಕೆನ್ನೆಯ ಮೇಲೆ ಜಾರಿತು. ಯಮುನಾರಿಗೂ ಅದೇ ಸ್ಥಿತಿ. ಹೇಳಲಾರದೆ ಮೌನ ವಹಿಸಿದರು. ಕೇವಲ ಎರಡು ದಿನ ಮಾತ್ರ ತಾನೇ ಎಂದು ತಮ್ಮಲ್ಲೇ ಸಮಧಾನ ಪಟ್ಟುಕೊಂಡರು.
ಸಂಜೆ 5 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದು ನಿಂತ ಶ್ರಾವಣಿ ಮಹೇಂದ್ರನಿಗೆ ಫೋನ್ ಮಾಡಿದಳು. 15 ನಿಮಿಷದಲ್ಲಿ ಬರುತ್ತೇನೆ ಎಂದ. ಆದರೆ ಅರ್ಧ ಗಂಟೆ ಕಳೆದರೂ ಬರಲಿಲ್ಲ. ಮತ್ತೇ ಅವಳೇ ಫೋನ್ ಮಾಡಿದಾಗ ಈಗಲೇ ಬಂದೆ ಎಂದ.
ಅಷ್ಟರಲ್ಲಿ ಅಲ್ಲಿಗೆ ತಂದೆಯ ಗೆಳೆಯ ತಾರಾನಾಥರು ಬಂದರು. ಇವಳನ್ನು ನೋಡಿ, “ಏನು ಶ್ರಾವಣಿ ಈ ಹೊತ್ತಿನಲ್ಲಿ ನೀನಿಲ್ಲಿ ನಿಂತಿದ್ದೀಯಾ….. ?” ಎಂದು ಆಶ್ಚರ್ಯದಿಂದ ಕೇಳಿದರು.
“ತುಮಕೂರಿನಲ್ಲಿ ನನ್ನ ಆತ್ಮೀಯ ಗೆಳತಿಯ ಮದುವೆ ಇದೆ ಅಂಕಲ್. ಗೆಳತಿಯರ ಜೊತೆ ಹೊರಟಿದ್ದೇನೆ. ಅವರೆಲ್ಲರೂ ಈಗ ಬರಬಹುದು,” ಎಂದು ತಡವರಿಸಿದಳು.
“ಹೌದಾ ಸರಿ. ಅವರು ಬರುವವರೆಗೂ ನೀನು ಇಲ್ಲಿ ಒಬ್ಬಳೇ ನಿಲ್ಲುವುದು ಸರಿಯಿಲ್ಲ. ಅವರು ಬರುವವರೆಗೂ ನಾನು ನಿನ್ನ ಜೊತೆ ಇರ್ತೀನಿ,” ಎಂದು ಹೇಳಿ ತಾವು ಅಲ್ಲಿಯೇ ನಿಂತರು.
ಶ್ರಾವಣಿಗೆ ಈಗ ಇಬ್ಬಂದಿಯ ಪರಿಸ್ಥಿತಿ. `ಇನ್ನೂ ಮಹೇಂದ್ರನ ಸುಳಿವಿಲ್ಲ. ಎಷ್ಟು ಸಲ ಕೇಳಿದರೂ ಈಗ ಬಂದೆ ಅಂತಾನೇ ಹೊರತು ಬರುತ್ತಿಲ್ಲವಲ್ಲ,’ ಎಂದು ಕೈ ಹೊಸಕಿಕೊಂಡಳು.
ಅವಳ ಆತಂಕ, ತಲ್ಲಣ ನೋಡಿ ತಾರಾನಾಥರಿಗೆ ಅನುಮಾನ ಶುರುವಾಯಿತು. ಕತ್ತಲಾದರೂ ಇನ್ನೂ ಮಹೇಂದ್ರನ ಸುಳಿವಿರಲಿಲ್ಲ. ಶ್ರಾವಣಿಗೆ ಅವನನ್ನು ನಂಬಿ ತಪ್ಪು ಮಾಡಿದೆನೇನೋ ಎನ್ನುವ ಭಯ ಕಾಡಲಾರಂಭಿಸಿತು.
ತಾರಾನಾಥರು ನೇರವಾಗಿ, “ ಶ್ರಾವಣಿ ನಿಜ ಹೇಳಮ್ಮಾ….. ನೀನು ಯಾರಿಗಾಗಿ ಕಾಯುತ್ತಿರುವೆ? ತಾಯಿ ತಂದೆಯನ್ನು ತೊರೆದು ಯಾರ ಜೊತೆಗಾದರೂ ಹೋಗುವ ನಿರ್ಧಾರ ಮಾಡಿದ್ದೀಯೇನು….? ನಿನ್ನ ಮುಖದ ಭಾವ ನನಗೆ ಹಾಗೇ ಹೇಳ್ತಿದೆ,” ಎಂದು ಆತಂಕದಿಂದ ಕೇಳಿದರು.
ಶ್ರಾವಣಿಗೆ ನಿಜಕ್ಕೂ ಗಾಬರಿಯಾಗಿತ್ತು. ತಾನು ಮಹೇಂದ್ರನಿಗಾಗಿ ಕಾಯುತ್ತಿರುವುದಾಗಿ ನಡುಗು ಧ್ವನಿಯಲ್ಲಿ ಹೇಳಿ ಅಳಲಾರಂಭಿಸಿದಳು. ಬೆಚ್ಚಿಬಿದ್ದ ತಾರಾನಾಥರು, ತಕ್ಷಣವೇ ಅಳ ಕೈ ಹಿಡಿದುಕೊಂಡು ಅಲ್ಲಿಂದ ಹೊರಟರು. ಅಲ್ಲಿಯೇ ಹತ್ತಿರದಲ್ಲಿ ಇದ್ದ ದೇವಸ್ಥಾನದ ಬಳಿ ಅವಳನ್ನು ಕುಳ್ಳರಿಸಿಕೊಂಡು, ಅವಳ ಹಿಂದಿನ ಜೀವನದ ಬಗ್ಗೆ ಎಲ್ಲವನ್ನೂ ತಿಳಿಸಿದರು.
“ನಿನ್ನ ತಾಯಿ ತಂದೆ ಇತ್ತಿವನರೆಗೂ ಸ್ವಲ್ಪ ಕೂಡ ನಿನಗೆ ಈ ಬಗ್ಗೆ ಸುಳಿವು ನೀಡದಂತೆ ಎಷ್ಟು ಅಕ್ಕರೆ, ಕಾಳಜಿಯಿಂದ ಜೋಪಾನ ಮಾಡಿದ್ದಾರೆ. ನೀನು ಅವರಿಗೆ ಹೀಗೆ ಮಾಡಬಹುದಾ….? ಇದು ನ್ಯಾಯವಾ…?” ಎಂದು ಕೇಳಿದರು.
ಶ್ರಾವಣಿ ಪಶ್ಚಾತ್ತಾಪದಿಂದ ನೊಂದಳು. ಅವಳಿಗೆ ತನ್ನ ತಪ್ಪಿನ ಅರಿವಾಗಿತ್ತು. ಇಷ್ಟು ಹೊತ್ತಾದರೂ ಬಾರದೆ, ತಾನಾಗೇ ಒಂದು ಕರೆಯನ್ನೂ ಮಾಡದಿರುವ ಮಹೇಂದ್ರನನ್ನು ನಂಬಿ ಬಂದು ತಾನು ಮೋಸ ಹೋದೆ. ತನ್ನನ್ನು ಸಾಕಿದ ತಾಯಿ ತಂದೆಗೆ ದ್ರೋಹ ಮಾಡಿದೆ ಎನಿಸಿದಾಗ ಅವಳಿಗೆ ದುಃಖ ತಡೆಯಲಾಗದೆ ಜೋರಾಗಿ ಅತ್ತಳು. ತಾರಾನಾಥರ ಬಳಿ, ಕ್ಷಮೆ ಕೇಳಿಕೊಂಡು, ಅವರಿಗೆ ಧನ್ಯವಾದ ಹೇಳಿದಳು.
ಇತ್ತ ಅದೇ ತಾನೇ ರಾತ್ರಿಯ ಊಟ ಮುಗಿಸಿ ಎಲೆ ಅಡಿಕೆ ಹಾಕಿಕೊಳ್ಳುತ್ತಾ, ಮಾಣಿಕ್ಯ ರಾಯರು ಮತ್ತು ಯಮುನಾ ದಂಪತಿ ತಮ್ಮ ಪ್ರೀತಿಯ ಮಗಳ ವಿಷಯ ಮಾತನಾಡುತ್ತಾ ಕುಳಿತಿದ್ದರು. ಇದ್ದಕ್ಕಿದ್ದಂತೆ ಅವರ ಆತ್ಮೀಯ ಗೆಳೆಯ ತಾರಾನಾಥರ ಜೊತೆಗೆ ಮಗಳು ಶ್ರಾವಣಿ ಬಂದದ್ದನ್ನು ನೋಡಿ ಅವರಿಗೆ ಗಾಬರಿಯಾಯಿತು.
ಆಗ ತಾರಾನಾಥರು, “ಹೆದರಬೇಡ ಮಾಣಿಕ್ಯ, ತುಮಕೂರಿನಲ್ಲಿ ಮಳೆಯ ಆರ್ಭಟ ಜಾಸ್ತಿ ಆಗಿದೆಯಂತೆ. ಹೀಗಾಗಿ ಅಲ್ಲಿಗೆ ಹೋಗುವ ಬಸ್ಸುಗಳನ್ನೆಲ್ಲಾ ತಡೆಹಿಡಿಯಲಾಗಿದೆ. ನಾನು ಯಾವುದೋ ಕೆಲಸದ ನಿಮಿತ್ತ ತುಮಕೂರಿಗೆ ಹೊರಟಿದ್ದೆ. ನಿನ್ನ ಮಗಳು ಕೂಡ ಬಸ್ ನಿಲ್ದಾಣದಲ್ಲಿ ಗೆಳತಿಯರ ಜೊತೆ ಇದ್ದಳು. ಈ ಸರಿ ಹೊತ್ತಿನಲ್ಲಿ ಮನೆಗೆ ಒಬ್ಬಳೇ ಹೋಗುವುದು ಬೇಡವೆಂದು ನಾನೇ ಕರೆದುಕೊಂಡು ಬಂದೆ,” ಎಂದು ಹೇಳಿದರು.
ಮಾಣಿಕ್ಯ ಗೆಳೆಯನಿಗೆ, “ನೀನು ಯಾವಾಗಲೂ ನನಗೆ ಆಪದ್ಭಾಂದವನಂತೆ ಬರುತ್ತೀಯಾ…,” ಎಂದು ಗೆಳೆಯನ ಕೈ ಹಿಡಿದುಕೊಂಡು ಆತ್ಮೀಯತೆಯಿಂದ ಒತ್ತಿ ಹೃತ್ಪೂರ್ಕ ಧನ್ಯವಾದ ಹೇಳಿದರು.
ಶ್ರಾವಣಿ ತಂದೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಮನದಲ್ಲೇ ಅವರಲ್ಲಿ ಕ್ಷಮೆ ಕೇಳುತ್ತಾ, ತಾರಾನಾಥರಿಗೆ ಕಣ್ಣಲ್ಲೇ ವಂದನೆ ತಿಳಿಸಿದಳು.





