ಪ್ರೇಮ ಎಂಬುದಕ್ಕೆ ಪ್ರತಿಯೊಬ್ಬರ ಮನದಲ್ಲೂ ತಮ್ಮದೇ ಆದ ವ್ಯಾಖ್ಯಾನವಿರುತ್ತದೆ. ಚರಿತಾಳನ್ನು ಮನಃಪೂರ್ವಕವಾಗಿ ಪ್ರೇಮಿಸಿ ಅದನ್ನು ಪವಿತ್ರವಾಗಿ ಉಳಿಸಿಕೊಳ್ಳಲು ಬಯಸಿದ ನವನೀತ್‌, ಮುಂದೆ ಸಂದಿಗ್ಧದಲ್ಲಿ ಸಿಲುಕಿದ್ದ ಚರಿತಾಳಿಗೆ ನೆರವಾಗಲು ಸಾಧ್ಯವಾಯಿತೇ…..?

ನವನೀತ್‌ ಅಂದು ಚರಿತಾಳನ್ನು ಭೇಟಿ ಮಾಡಲು ಬಂದಿದ್ದ. ಮಾಮೂಲಿನಂತೆ ವಾಕ್‌ ಮುಗಿಸಿ, ಕಾಮತ್‌ ರೆಸ್ಟೋರೆಂಟ್‌ ನಲ್ಲಿ ಭೇಲ್ ‌ಪುರಿ ಮತ್ತು ಕಾಫಿ ಸೇವನೆಯಾದರೇನೇ  ಭೇಟಿ ಸಾರ್ಥಕವಾಗುತ್ತಿತ್ತು.

ಇಂದೂ ಅದೇ ಆದದ್ದು. ವಾಕ್‌ ಮುಗಿಸಿ ಭೇಲ್ ‌ಪುರಿ ತಿನ್ನಲು ರೆಸ್ಟೋರೆಂಟ್‌ ಗೆ ಬಂದಿದ್ದರು. ರಶ್‌ ಕಡಿಮೆ ಇದ್ದುದರಿಂದ ಸ್ವಲ್ಪ ಮಾತು ಹೆಚ್ಚೇ ಆಯಿತು. ನಂತರ ಬಿಲ್ ‌ಪಾವತಿಸುವ ವಿಷಯದಲ್ಲಿ ಇಬ್ಬರಲ್ಲೂ ವಿವಾದವಾಗಿ ಚರಿತಾಳೇ ಗೆದ್ದು ಪೇ ಮಾಡಿದಳು. ಬಿಲ್ ನ್ನು ಮೊದಲು ಚರಿತಾಳೇ ಪಡೆದಿದ್ದರಿಂದ ನವನೀತ್‌ ಗೆ ಚರಿತಾಳ ಕೈ ಹಿಡಿದು ಎಳೆದಾಡುವುದು ಸರಿ ಎನಿಸದೆ ಸೋಲೊಪ್ಪಿಕೊಂಡ.

ಮೇಲಾಗಿ ನವನೀತ್‌ ಯಾವಾಗಲೂ ಚರಿತಾಳಿಗೆ ನೋವು ಮಾಡುವ ಜಾಯಮಾನದವನಲ್ಲ. ಬಿಲ್ ಕೊಡುವ ನೆಪದಲ್ಲಿ ಮೈ ಕೈ ಮುಟ್ಟಿದ ಎಂದು ಅನುಮಾನ ಪಟ್ಟರೆ ಎಂಬ ಯೋಚನೆಯಿಂದ ಸುಮ್ಮನಾದ. ತಟ್ಟೆಯಲ್ಲಿದ್ದ ಸೋಂಪನ್ನು ತಾನು ಬಾಯಿಗೆ ಹಾಕಿಕೊಂಡು, ನವನೀತ್‌ ನ ಮುಂದೆ ತಟ್ಟೆ ಹಿಡಿದಳು. ಬಿಲ್ ಜೊತೆ ನೂರು ರೂಪಾಯಿಯನ್ನು ಮಾಣಿಯ ಕೈಗಿರಿಸಿದಳು. ಮಾಣಿ ಚಿಲ್ಲರೆ ತಂದು ಕೊಡದಿದ್ದರಿಂದ ಕಾಯಬೇಕಾಯಿತು.

ಇದೇ ಸಮಯವೆಂದು ಚರಿತಾ, “ಒಂದು ಮಾತು ಕೇಳಲಾ ನವಿ,” ಎಂದು ಪೀಠಿಕೆ ಹಾಕಿದಳು.

`ಏನು ಕೇಳಬಹುದು….,’ ಎಂದು ಕ್ಷಣ ಊಹಿಸಲಾಗದಿದ್ದರೂ ಅವಳೇ ಕೇಳಲಿ ಎಂದು ಮೌನಿಯಾದ.

“ನೀನು ಯಾರನ್ನಾದರೂ ಪ್ರೀತಿಸಿದ್ದೀಯಾ….? ಪ್ರೀತಿಯನ್ನು ಹೇಗೆ ಪ್ರೀತಿಪಾತ್ರರಲ್ಲಿ ವ್ಯಕ್ತಪಡಿಸಿದೆ….?” ಒಮ್ಮೆಲೇ  ಜೇನುಗೂಡಿಗೆ ಕೈ ಹಾಕಿದಳು.

ಅವನು ಈ ಪ್ರಶ್ನೆಯನ್ನು ಖಂಡಿತಾ ಊಹಿಸಿರಲಿಲ್ಲ. ನಾಲ್ಕಾರು ವರ್ಷದ ಒಡನಾಡಿ, ಒಳ್ಳೆಯ ಸ್ನೇಹಿತೆ ಏಕಾಏಕಿ ಹೀಗೆ ಎದೆಗೆ ಪಾಯಿಂಟ್‌ ಬ್ಲಾಂಕ್‌ ಅಂತರದಲ್ಲಿ ಗುಂಡು ಹಾರಿಸಿದಂತೆ ಕೇಳಿದರೆ, ಎಂತಹ ಎದೆಗಾರನ ಗುಂಡಿಗೆಯೂ ನಡುಗದಿರುತ್ತದೆಯೇ? ಹಾಗಿತ್ತು ನವನೀತ್‌ ನ ಪರಿಸ್ಥಿತಿ. ಉತ್ತರಿಸಲು ಅವನಿಗೆ ಸ್ವಲ್ಪ ಸಮಯವೇ ಬೇಕಾಯಿತು.

ನಿಧಾನವಾಗಿ, “ಇಲ್ಲ….. ಇಲ್ಲ…. ನಾನು ಯಾರಿಗೂ ಹೇಳಿಲ್ಲ. ಹಾಗೇನಾದರೂ ಆಗಿದ್ದರೆ ಅದು ನಿನಗೆ ತಿಳಿದೇ ತಿಳಿದಿರುತ್ತಿತ್ತಲ್ಲ…..” ಎಂದು ಹೇಳಿದ.

`ಹೀಗೆ ಹೇಳಿದ್ದು ತಪ್ಪಾಯಿತಾ,’ ಎನಿಸದಿರಲಿಲ್ಲ.

“ನಾನು ರಮಣ್‌ ನನ್ನು ಪ್ರೀತಿಸುತ್ತಿದ್ದೇನೆ. ನನಗೆ ಅವನಲ್ಲಿ ಹೇಳಿಕೊಳ್ಳಲು ಆಗುತ್ತಿಲ್ಲ. ನೀನು ಅವನಿಗೆ ನನ್ನ ಪ್ರೀತಿಯ ಬಗ್ಗೆ ತಿಳಿಸಿ, ನಮ್ಮಿಬ್ಬರನ್ನು ಒಂದುಗೂಡಿಸು. ಇದು ನನ್ನ ಸವಿನಯ ಪ್ರಾರ್ಥನೆ. ನಿನ್ನ ಉಪಕಾರವನ್ನು ನಾನೆಂದೂ ಮರೆಯುವುದಿಲ್ಲ,” ಹೇಳುತ್ತಿದ್ದವಳ ಕಂಗಳು ತುಂಬಿ ಕೆನ್ನೆಯ ಮೇಲೆ ಇಳಿಯಿತು.

jaise-to-taisa-story2

`ಚರಿತಾ ತನ್ನನ್ನೇ ಪ್ರೀತಿಸುತ್ತಿದ್ದಾಳೆ,’ ಎಂದುಕೊಂಡಿದ್ದ ನವನೀತ್‌ ನ ಕಂಗಳಲ್ಲಿ ನೀರು ತುಂಬಿಕೊಂಡಿತು. ಅವಳನ್ನೇ ನೋಡುತ್ತಿದ್ದವನು ದೃಷ್ಟಿ ಬದಲಿಸಿ ಮುಖ ಬೇರೆಡೆ ತಿರುಗಿಸಿ ಕಣ್ಣೆವೆಗಳನ್ನು ಒರೆಸಿಕೊಂಡ. ತುಮಲಕ್ಕೊಳಗಾಗಿದ್ದ ತನ್ನ ಮನಸ್ಸನ್ನು ಹತೋಟಿಗೆ ತಂದುಕೊಂಡು ದೀರ್ಘವಾದ ನಿಟ್ಟುಸಿರುಬಿಟ್ಟು, “ಚರಿತಾ, ನೀನು ಪ್ರೀತಿಸುತ್ತಿದ್ದೇನೆ ಎಂದು ಹೇಳುವ ರಮಣ್‌ ನಿನ್ನನ್ನು ಪ್ರೀತಿಸುತಿದ್ದಾನೆ ಎಂದು ಖಾತ್ರಿ ಪಡಿಸಿಕೊಂಡಿದ್ದೀಯಾ? ಮೊದಲು ಅವನಲ್ಲಿ ನಿನ್ನ ಬಗ್ಗೆ ಇರುವ ಪ್ರೀತಿಯ ಬಗ್ಗೆ ಖಾತ್ರಿ ಪಡಿಸಿಕೋ,” ಎಂದು ಅವಳಿಗೆ ತಿಳಿ ಹೇಳಿದ.

ರಮಣ್‌ ದೊಡ್ಡ ಫ್ಲರ್ಟ್‌. ಅವನು ಹಲವಾರು ಹುಡುಗಿಯರ ಜೊತೆ ಮಾಲ್‌, ಹೋಟೆಲ್‌, ಸಿನಿಮಾಗಳಲ್ಲಿ ತಿರುಗುತ್ತಿದ್ದುದನ್ನು ಸ್ವತಃ ನವನೀತ್‌ ತಾನೇ ಕಣ್ಣಾರೆ ಕಂಡಿದ್ದ. ವಾರದ ಕೊನೆ ಬಂತೆಂದರೆ ಹುಡುಗಿಯರನ್ನು ನೋಡು ಕಾರ್ಯ ಇದ್ದೇ ಇರುತ್ತದೆ. ಅದರಲ್ಲಿ ವೀಕೆಂಡ್‌ ಮೊಜು ಮಸ್ತಿ. ಇಂತಹ ಜಾಲಿ ಗೋ ಗೋ ಪುಂಡರ ಪಟ್ಟಿಗೆ ಮನಸೋತಿದ್ದಾಳಲ್ಲಾ ಇವಳು ಎಂದು ಇವನ ಮನಸ್ಸಿಗೆ ಬೇಸರವಾಯಿತು.

“ರಮಣ್‌ ನನ್ನನ್ನು ಪ್ರೀತಿಸುತ್ತಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ ನವಿ, ಆದರೆ ನೀನು ಅವನಿಗೆ ನನ್ನ ಪ್ರೀತಿಯ ಬಗ್ಗೆ ಹೇಳಿ ನನ್ನನ್ನು ಪ್ರೀತಿಸುವಂತೆ ಮಾಡು. ಒಳ್ಳೆಯ ಸ್ನೇಹಿತನಾಗಿ ಇದೊಂದು ಉಪಕಾರ ಮಾಡು. ನಿನ್ನ ಉಪಕಾರವನ್ನು ಈ ಜನ್ಮದಲ್ಲಿ  ಮರೆಯುವುದಿಲ್ಲ,” ಎಂದು ರಚ್ಚೆ ಹಿಡಿದ ಮಗುವಿನಂತೆ ನವನೀತನ ಎರಡೂ ಕೈಗಳನ್ನು ಹಿಡಿದುಕೊಂಡು ಕೇಳಿದಳು.

“ಚರಿತಾ, ನೀನು ರಮಣ್‌ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ. ಆದ್ದರಿಂದ ನಿನ್ನ ನಿರ್ಮಲವಾದ ಪ್ರೀತಿಯನ್ನು ಅವನಿಗೆ ಅರ್ಪಿಸಲು ಹೊರಟಿದ್ದೀಯಾ. ನಿನ್ನ ಅತ್ಯಮೂಲ್ಯವಾದ ಪ್ರೀತಿ ಅಪಾತ್ರರಿಗೆ ದಾನವಾಗಬಾರದು. ಯೋಚಿಸಿ ನೋಡು,” ಎಂದು ಪರೋಕ್ಷವಾಗಿ ಅವನು ನಿನ್ನ ಪ್ರೀತಿಗೆ ಯೋಗ್ಯನಲ್ಲ. ಇನ್‌ ಫ್ಯಾಚುಯೇಷನ್‌ ನನ್ನು ನೀನು ಪ್ರೀತಿ ಎಂದುಕೊಳ್ಳುತ್ತಿದ್ದೀಯಾ. ರಮಣನ ಬಗ್ಗೆ ನಿನಗಿರುವುದು ಬರೀ ವ್ಯಾಮೋಹ. ವಿವೇಚನೆ ಇಲ್ಲದೆ ಬರೀ ಭಾವೋದ್ವೇಗದಿಂದ ಅವನ ವಿಷಯದಲ್ಲಿ ಭಾವಪರವಶಳಾಗಿದ್ದೀಯಾ. ಇದರಿಂದ ಹೊರಗೆ ಬಂದು ನೋಡು, ಪ್ರೀತಿ ಮತ್ತು ವ್ಯಾಮೋಹದಲ್ಲಿರುವ ವ್ಯಾತ್ಯಾಸ ನಿನಗೇ ಅರ್ಥವಾಗುತ್ತೆ ಎಂಬಂತೆ ಅವನು ಅವಳತ್ತ ನೋಡಿದ.

“ಮಹಾಭಾರತ ಯುದ್ಧದ ಸಂದರ್ಭದಲ್ಲಿ ದ್ರೋಣರಿಗಿದ್ದ ಮೋಹವನ್ನು ತಿಳಿಸಲು ಪ್ರೀತಿ ಮತ್ತು ಮೋಹಗಳ ಬಗ್ಗೆ ವ್ಯಾಖ್ಯಾನಿಸುತ್ತಾನೆ. ಪ್ರೀತಿಯಲ್ಲಿ ತ್ಯಾಗ, ಕಾಳಜಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮನಸ್ಸು ಇರುತ್ತದೆ. ಸದಾ ಒಬ್ಬರ ಒಳಿತಿಗಾಗಿ ಇನ್ನೊಬ್ಬರು ಚಿಂತಿಸುತ್ತಾರೆ. ಮೋಹದಲ್ಲಿ ಸ್ವಾರ್ಥಕ್ಕಾಗಿ ಮಾತ್ರ ದೃಷ್ಟಿ ನೆಟ್ಟಿರುತ್ತದೆ. ತಮಗೆ ಏನು ಬೇಕೋ ಅದನ್ನು ಮಾತ್ರ ಬಯಸುತ್ತದೆ. ಮೋಹದಲ್ಲಿ ಸ್ವಾರ್ಥ, ಅಹಂ ಮುಂಚೂಣಿಯಲ್ಲಿದ್ದು ಪ್ರೀತಿಗೆ ಅಡ್ಡವಾಗಿ ನಿಲ್ಲುತ್ತೆ. ಸ್ವಾರ್ಥ ಸಾಧನೆಯ ದಾರಿ ಹುಡುಕುತ್ತೆ.

“ಇಲ್ಲಿ ನೀನು ಮಾಡುತ್ತಿರುವುದೂ ಅದನ್ನೇ. ನಿನ್ನ ಸ್ವಾರ್ಥಕ್ಕಾಗಿ ರಮಣನ ಬಗ್ಗೆ ತಿಳಿದುಕೊಳ್ಳದೆ ಅವನ ಬಗೆಗೆ ನಿನಗಿರುವ ಬಾಹ್ಯ ಆಕರ್ಷಣೆಯಿಂದ ಹೀಗೆ ಮಾತನಾಡುತ್ತಿದ್ದೀಯಾ…. ನಿನಗೆ ನನ್ನ ಸ್ನೇಹ, ಕಾಳಜಿ, ನಿನ್ನನ್ನು ಅರ್ಥ ಮಾಡಿಕೊಂಡಿರುವ ಬಗ್ಗೆ ನಿನಗೆ ಅನುಮಾನ ಬೇಡ. ನಿನ್ನ ಒಳಿತಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ. ನಿರ್ಧಾರ ನಿನಗೆ ಬಿಟ್ಟಿದ್ದೇನೆ. ನೀನು ಹೇಳಿದ ಕೆಲಸ ಮಾಡಲು ನಾನು ಸಿದ್ಧ,” ಎಂದು ಹೇಳಿದ.

“ನವನೀತ್‌ ನೀನು ಸ್ವಾರ್ಥಿ! ನನ್ನನ್ನು ಮದುವೆ ಆಗಬೇಕೆಂದು ಈ ರೀತಿ ಹೇಳುತ್ತಿದ್ದೀಯಾ ಎಂದು ನನಗೆ ಗೊತ್ತು,” ಕೋಪಿಸಿಕೊಂಡಳು ಚರಿತಾ.

ನವನೀತನಿಗೆ ಬರಸಿಡಿಲು ಬಡಿದಂತಾಯಿತು. ಚರಿತಾಳನ್ನು ಆತ್ಮೀಯ ಗೆಳತಿ ಎಂದು ಭಾವಿಸಿದ್ದನೇ ವಿನಾ ಎಂದೂ ಅವಳನ್ನು ಪ್ರಿಯತಮೆ ಎಂಬ ದೃಷ್ಟಿಯಿಂದ ನೋಡಿರಲಿಲ್ಲ. ಅನಿರೀಕ್ಷಿತವಾಗಿ ಬಂದ ಮಾತು ಅವನಿಗೆ ಸಿಡಿಲು ಬಡಿದಂತಾಗಿತ್ತು. ಒಂದು ಕ್ಷಣ ಅವನಿಗೆ ಮಾತೇ ಹೊರಡಲಿಲ್ಲ. ಅರೆ ಕ್ಷಣ ಇಬ್ಬರಲ್ಲೂ ಸ್ಮಶಾನ ಮೌನ ಆವರಿಸಿತು.

ಮನಸ್ಸಿನಲ್ಲಾಗುತ್ತಿದ್ದ ಅಲ್ಲೋಲ ಕಲ್ಲೋಲವನ್ನು ತಹಬಂದಿಗೆ ತಂದುಕೊಳ್ಳುತ್ತಾ, “ಚರಿತಾ, ನೀನು ನನ್ನನ್ನು ಸರಿಯಾಗಿ ತಿಳಿದುಕೊಂಡಿಲ್ಲ. ವೃಥಾ ಅಪಾರ್ಥ ಮಾಡಿಕೊಂಡಿದ್ದೀಯಾ. ನನ್ನ ನಿನ್ನ ಜೊತೆಗಿನ ಇಷ್ಟು ವರ್ಷಗಳ ಒಡನಾಟದಲ್ಲಿ ಯಾವುದಾದರೂ ಒಂದು ಘಳಿಗೆ ನಾನು ಅಸಭ್ಯನಾಗಿ ವರ್ತಿಸಿದ್ದೇನೆಯೇ? ತಾಮಸಿಯಾಗಿ ಆಡಿದ್ದೇನೆಯೇ? ನಾನು ನಿನ್ನನ್ನು ನನ್ನ ಆಜೀವ ಗೆಳತಿ ಎಂದುಕೊಂಡಿದ್ದೇನೆ,” ಎಂದು ತಾಳ್ಮೆಯಿಂದ ಅವಳಿಗೆ ಹೇಳಿದ.

ಅವನ ನಿವೇದನೆ ಅವಳಿಗೆ ಅಸಂಬದ್ಧ ಪ್ರಲಾಪನೆ ಎನಿಸಿತು. “ನನ್ನ ಬಗ್ಗೆ ಬೇರೆ ಭಾವನೆಗಳಿಲ್ಲದೇ ಇದ್ದಲ್ಲಿ ನೀನು ನನಗೆ ಸಹಾಯ ಮಾಡು. ನಿನ್ನ ಸಹಾಯವನ್ನು ಎಂದೂ ಮರೆಯುವುದಿಲ್ಲ,” ಚರಿತಾಳ ಹಠ ಮುಂದುವರಿಯಿತು.

ಸಂದಿಗ್ಧಕ್ಕೆ ಸಿಕ್ಕಿಕೊಂಡ ನವನೀತ್‌. ಹಠಬಿಡದ ತ್ರಿವಿಕ್ರಮನಂತೆ ಆಡುವ ಚರಿತಾ. ನವನೀತನಿಗೋ ಅತ್ತ ಹುಲಿ, ಇತ್ತ ದರಿ ಯಾವ ಕಡೆಗೆ ಹೋದರೂ ಸಂಕಷ್ಟ ಎನ್ನುವಂತಾಗಿತ್ತು.

“ಚರಿತಾ, ನಿನ್ನ ಪರವಾಗಿ ರಮಣ್‌ ನನ್ನು ಭೇಟಿಯಾಗಿ ಮಾತನಾಡುತ್ತೇನೆ ಸರೀನಾ….?” ನವನೀತ್‌ ನ ಮಾತಿನಲ್ಲಿ ಆತ್ಮವಿಶ್ವಾಸ ತುಂಬಿರಲಿಲ್ಲ. ಚರಿತಾಳಿಗೆ ಅವನ ಮಾತಿನಲ್ಲಿ ನಂಬಿಕೆ ಇರಲಿಲ್ಲ. ಅನುಮಾನದ ಕಿಡಿ ಮನಸ್ಸಲ್ಲಿ ಹೊತ್ತಿತೆಂದರೆ ಬೆಂಕಿಯಾಗಿ ಭುಗಿಲೆದ್ದೇ ತೀರುತ್ತೆ. ಅದನ್ನು ಆರಿಸುವುದು ಬಲು ಕಷ್ಟದ ಕೆಲಸ. ಗೆಳತಿಯ ಒಳಿತಿಗಾಗಿ ಪ್ರಾಮಾಣಿಕ ಪ್ರಯತ್ನಕ್ಕೆ ಭಾರವಾದ ಮನಸ್ಸಿನಿಂದ ಮುಂದಾದ ನವನೀತ್‌.

“ನೀನು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಈ ಕೆಲಸ ಸರಿಯಾಗಿ ಮಾಡದಿದ್ದರೆ, ನನಗೆ ಬೇಕೆಂದೇ ಅನ್ಯಾಯ ಮಾಡಿದ್ದೀಯ ಎಂದು ತಿಳಿದುಕೊಳ್ತೀನಿ,” ಅವಳ ಮಾತಿನಲ್ಲಿ ಮೊನಚು ಬೆರೆತಿತ್ತು.

jaise-to-taisa-story1

“ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ  ಇಡು. ನನಗೆ ಒಂದು ವಾರ ಕಾಲಾವಕಾಶ ಕೊಡು,” ಎಂದು ಅವಳಿಗೆ ಹೇಳಿ ಅಲ್ಲಿಂದ ಹೊರಟ.

ಎರಡು ದಿನ ಕಳೆಯುವಷ್ಟರಲ್ಲಿ ಕೃಶನಾಗಿ ಕಾಯಿಲೆ ಬಂದವರಂತಾದ. ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ. ಸ್ನೇಹಿತೆಯ ಒಳಿತಿನ ಬಗ್ಗೆ ಚಿಂತಿಸಿ ದಾರಿ ಕಾಣದಾದ. ರಮಣ್‌, ಚರಿತಾಳನ್ನು ಸಂದರ್ಭದ ಕೂಸೆಂದು ದುರುಳತನದಿಂದ ದುರುಪಯೋಗಪಡಿಸಿಕೊಂಡರೆ ಎಂಬ ಅನುಮಾನದ ಕಾರ್ಮೋಡ ಮನದಾಕಾಶದಲ್ಲಿ ತೇಲಿತು. ಸ್ನೇಹಿತೆಯ ಆಸೆಯ ಬಿರುಗಾಳಿ, ತನ್ನಲ್ಲಿದ್ದ ಕಾರ್ಮೋಡವನ್ನು ಓಡಿಸಿ ಕಾರ್ಯೋನ್ಮುಖನಾಗಲು ಒತ್ತಾಯಿಸಿತು. ಒಲ್ಲದ ಮನಸ್ಸಿನಿಂದ ರಮಣ್‌ ನನ್ನು ಭೇಟಿಯಾದ. ರಮಣ್‌ ನವನೀತನನ್ನು ನೋಡಿ, “ಏನೋ ನವನೀತ್‌ ಮಜ್ನೂನಂತೆ ಕಾಡ್ತಿದ್ದೀಯಾ….? ನಿನ್ನ ಚರಿತಾ ಕೈ ಕೊಟ್ಟಳೇನು…..? ಬೇರೆ ಹುಡುಗನ ಹಿಂದೆ ಓಡಿದಳಾ ಇಲ್ಲಾ ಬೇರೆ ಗಂಡಿನೊಂದಿಗೆ ಮದುವೆ ಆಯಿತಾ…..?” ಕೊಂಕಿದ ರಮಣ್‌.

ಮತ್ತೇ ಅವನೇ ಮುಂದುವರಿದು, “ನವನೀತ್‌ ನೀನು ಬೇಸರದಲ್ಲಿ ಇರುವಂತೆ ಕಾಣುತ್ತೀಯಾ ಬಾ…. ನೀನು ದೇವದಾಸ ಆಗುವುದು ಬೇಡ. ನಿನಗೆ ಒಂದು ಒಳ್ಳೆಯ ಜಾಗ ತೋರಿಸುತ್ತೇನೆ. ಮೋಜು ಮಜಾ ಮಾಡಬಹುದು. ಜೇಬಲ್ಲಿ ಎಷ್ಟು ಕಾಸು ಇಟ್ಟಿದ್ದೀಯಾ ಇತ್ತ ತಾ…..” ರಮಣ್‌ ನ ಮಾತುಗಳಿಂದ ಅವನ ವರ್ತನೆ ಎಂಥದ್ದೆಂದು ನವನೀತನಿಗೆ ತಿಳಿದರೂ ಏನು ಮಾತಾಡಬೇಕೆಂದು ತೋಚಲಿಲ್ಲ.

ಅವನು ಏನೂ ಮಾತನಾಡದೇ ಇದ್ದದ್ದನ್ನು ನೋಡಿದ ರಮಣ್‌, “ಹೋಗಲಿ ಬಾರೋ ನನ್ನ ರೊಕ್ಕದಲ್ಲಿ ಮಸಾಲೆ ದೋಸೆ ಕೊಡಿಸ್ತೀನಿ.” ಎಂದು ಟಿಫನ್‌ ರೂಮ್ ಗೆ ಎಳೆದುಕೊಂಡು ಹೋದ.

ಮಸಾಲೆ ದೋಸೆ ತಿನ್ನುತ್ತಾ, ಮನದಾಳ ತೆರೆದಿಡಲು ಹುನ್ನಾರ ಮಾಡಿದ. ಪ್ರಯತ್ನಪಟ್ಟಷ್ಟೂ ಮಾತುಗಳು ಧ್ವನಿಯಾಗಿ ಹೊರಬರಲು ಸರ್ಕಸ್‌ ಮಾಡಿದ.

ಚದುರಂಗದ ಆಟದಲ್ಲಿ ನಿಪುಣರು ರಾಣಿ ನಡೆಸುವಂತೆ, ರಮಣ್‌ ತನ್ನ ವಿಲಾಸಿ ಆಟದ ಮುಂದಿನ ಕಾಯಿಗಳನ್ನು ನಡೆಸಲು ಸಿದ್ಧನಾಗಿದ್ದಂತೆ ಕಂಡ. ಆ ಆಟದಲ್ಲಿ ರಾಣಿಯನ್ನು ಹೇಗೆ ರಕ್ಷಿಸುವುದೆಂದು ನವನೀತ್‌ ಗೆ ಎಷ್ಟು ಯೋಚಿಸಿದರೂ ದಾರಿ ಮಾತ್ರ ಅಗೋಚರವಾಗಿತ್ತು. ಧೈರ್ಯ ತಂದುಕೊಂಡ ನವನೀತ್‌, “ರಮಣ್‌, ಚರಿತಾ ನಿನ್ನನ್ನು ಪ್ರೀತಿಸುತ್ತಿದ್ದಾಳಂತೆ. ಅದನ್ನು ನಿನಗೆ ನೇರವಾಗಿ ಹೇಳಿಕೊಳ್ಳಲು ಅವಳಿಗೆ ಸಾಧ್ಯವಾಗುತ್ತಿಲ್ಲವಂತೆ. ಎಷ್ಟಾದರೂ ಹೆಣ್ಣಲ್ಲೀ ಅವಳಿಗೆ ನಾಚಿಕೆಯಾಗಿರಬೇಕು. ಅದಕ್ಕಾಗಿ ಅವಳು ನನಗೆ ವಿಷಯ ತಿಳಿಸಿ ಇಬ್ಬರನ್ನೂ ಒಂದುಗೂಡಿಸು ಎಂದು ನನ್ನನ್ನು ಕಳುಹಿಸಿದ್ದಾಳೆ,” ಮುಂದಿನ ಮಾತು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಗಂಟಲಲ್ಲೇ ನಿಂತಿತು.

“ಲೋ ನವನೀತ್‌, ನೀನು ಯಾವಾಗ ಪಿಂಪ್‌ ಕೆಲಸ ಶುರು ಮಾಡಿಕೊಂಡೆ…..? ಊರೆಲ್ಲಾ ನಿನ್ನ ಮತ್ತು ಚರಿತಾಳ ಮಾತು ಕೇಳಿಬರುತ್ತಿದೆ. ಬಿಂದಾಸ್‌ ಜೋಡಿ ತಿರುಗಿದರೆ ಅವರಂತೆ ತಿರಗಬೇಕು ಎಂದು ಎಲ್ಲಾ ಪ್ರೇಮಿಗಳು ನಿಮ್ಮನ್ನು ಆದರ್ಶಪ್ರಾಯ ಆಗಿಸಿಕೊಂಡಿದ್ದಾರೆ. ನೀನು ನೋಡಿದರೆ ಪಿಂಪ್‌ ಕೆಲಸಕ್ಕೆ ಕೈ ಹಾಕಿದ್ದೀಯಾ….? ಏನು ನಿನ್ನ ಮಸಲತ್ತು…..? ಏನಾದರೂ ಪಾಪ ಕಾರ್ಯ ಮಾಡಿ ನನ್ನ ತಲೆಗೆ ಕಟ್ಟಲು ಪ್ರಯತ್ನಿಸುತ್ತಿರುವೆಯಾ…..? ” ರಮಣ್‌ ನ ಮಾತುಗಳು ಬಾಣದಂತೆ ಚುಚ್ಚಿದ.

“ಇಲ್ಲ ರಮಣ್‌, ನನ್ನಿಂದ ಯಾವ ಅಚಾತುರ್ಯ ನಡೆದಿಲ್ಲ. ಚರಿತಾಳ ಮನೋಭಿಲಾಷೆ ಇದಾಗಿದ್ದರಿಂದ ಮತ್ತವಳು ನಿನಗೆ ತಿಳಿಸಿ ಒಪ್ಪಿಸಲು ಹೇಳಿದ್ದರಿಂದ ನನ್ನ ಈ ಅಳಿಲು ಸೇವೆ….” ಮುಂದೆ ಮಾತನಾಡದಾದ ನವನೀತ್‌.

ರಮಣ್‌ ಬಿಲ್ ‌ಕೊಟ್ಟು ನವನೀತ್‌ ನನ್ನು ಕರೆದುಕೊಂಡು ಹೊರನಡೆದ. ರಮಣ್‌ ಅರೆ ಕ್ಷಣ ಯೋಚಿಸಿದ. `ಚರಿತಾ, ಸುಂದರ ಹುಡುಗಿ. ವಿದ್ಯಾವಂತೆ ಬೇರೆ. ಎಷ್ಟೋ ಹುಡುಗರು ಅವಳ ಹಿಂದೆ ಬಿದ್ದಿದ್ದರೂ ಅವಳು ನವನೀತ್‌ ನ ಜೊತೆ ಓಡಾಡುತ್ತಿದ್ದುದರಿಂದ ಸುಮ್ಮನಿದ್ದರು. ಆದರೆ ಅದೇ ನವನೀತ್‌ ಬಂದು ಚರಿತಾ ತನ್ನನ್ನು ಬಯಸುತ್ತಿದ್ದಾಳೆಂದರೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ,’ ಎಂದುಕೊಂಡ. ಬಯಸದೆ ಬಂದ ಭಾಗ್ಯಕ್ಕೆ ತನ್ನನ್ನು ತಾನೇ ಅಭಿನಂದಿಸಿಕೊಂಡ.

“ಭಾನುವಾರ ಚರಿತಾಳನ್ನು ಭೇಟಿ ಮಾಡಿ ಮಾತನಾಡು, ಅವಳನ್ನು ಭೇಟಿ ಮಾಡಲು ಎಲ್ಲಿ ಅನುಕೂಲ ಎಂದು ತಿಳಿಸಿದರೆ ಅವಳಿಗೆ ಹೇಳುತ್ತೇನೆ,” ಎಂದು ರಮಣ್‌ ನ ಬಳಿ ಹೇಳಿದ.

“ಏನೋ ಮದುವೆ ಮಾಡಿಸಲು ತಯಾರಿ ಮಾಡುತ್ತಿದ್ದೀಯಾ….? ನಿನಗೆ ನಾನೇನೂ ಕಮೀಷನ್‌ ಕೊಡುವುದಿಲ್ಲ ನೋಡು. ಅವಳೇನಾದರೂ ಕೊಡುತ್ತಾಳಾ….?” ಮಾತಿನಲ್ಲಿ ಕುಹಕ ಎದ್ದು ಕಾಣುತ್ತಿತ್ತು.

ಕ್ಷಣ ಹೊತ್ತು ಯೋಚಿಸಿದ ರಮಣ್‌, “ಭಾನುವಾರ ವಂಡರ್‌ ಲಾಗೆ ಕರೆದುಕೊಂಡು ಹೋಗ್ತೀನಿ,” ಎಂದು ಹೇಳಿ ಕಣ್ಣು ಮಿಟುಕಿಸಿದವನೆ, “ನೀನೇನೂ ಜೊತೆಗೆ ಬರುವುದು ಬೇಡ…. ಚರಿತಾ ಮಾತ್ರ ಬಂದರೆ ಸಾಕು. ಅವಳಿಗೆ ಮಲ್ಲಿಗೆ ಮಾಲ್ ‌ಹತ್ತಿರ ಬರಲು ಹೇಳು. ಅಲ್ಲಿಂದ ಅವಳನ್ನು ವಂಡರ್‌ ಲಾಗೆ ಕರೆದುಕೊಂಡು ಹೋಗ್ತೀನಿ,” ಎಂದ.

“ಥ್ಯಾಂಕ್ಸ್ ರಮಣ್‌,” ನವನೀತ್‌ ಹೇಳಿದ್ದಕ್ಕೆ ರಮಣ್‌ ಕಣ್ಣು ಮಿಟುಕಿಸಿ ನಕ್ಕ. ಆ ನಗುವಿನಲ್ಲಿ ತುಂಟತನವಿತ್ತೋ, ಮೋಹದ ಬಲೆಯಿತ್ತೋ ಎಂದು ನವನೀತನಿಗೆ ಶೃತಪಡಿಸಿಕೊಳ್ಳಲಾಗಲಿಲ್ಲ. ಕಾರ್ಯ ಯಶಸ್ವಿಯಾಗಿದ್ದನ್ನು ಗೆಳತಿ ಚರಿತಾಳಿಗೆ ಹೇಳಿ, “ನಿಮ್ಮ ಪ್ರೀತಿ ಪ್ರೇಮ ಪ್ರಣಯ ಯಶಸ್ವಿಯಾಗಲಿ,” ಎಂದು ನಿರ್ವಂಚನೆಯಿಂದ ಹಾರೈಸಿದ.

ಚರಿತಾಳೇ ರಮಣ್‌ ನನ್ನು ಭೇಟಿಯಾಗಿ ತಮ್ಮಿಬ್ಬರ ಮುಂದಿನ ಕಾರ್ಯಕ್ರಮಗಳನ್ನು ಬಾಳುವೆಯನ್ನು ರೂಪಿಸಿಕೊಳ್ಳಲು ಹೇಳಿ, ದೊಡ್ಡ ಜವಾಬ್ದಾರಿ ಇಳಿಸಿಕೊಂಡವನಂತೆ ನವನೀತ್‌ ದೀರ್ಘ ಉಸಿರೆಳೆದುಕೊಂಡ.

ಮುಂದೆ 3-4 ತಿಂಗಳು ಚರಿತಳಾಗಲಿ, ರಮಣನಾಗಲಿ ಯಾರ ಕಣ್ಣಿಗೂ ಗೋಚರಿಸಲಿಲ್ಲ. ನವನೀತನಂತೂ ಭಾರ ಕಳೆದುಕೊಂಡವನಂತೆ ಉಸಿರಾಡಿದ. ಒಮ್ಮೊಮ್ಮೆ ಚರಿತಾಳ ಪ್ರೀತಿಯ ಬಗ್ಗೆ ರಮಣ್‌ ಅವಳೊಂದಿಗೆ ಹೇಗೆ ವರ್ತಿಸುತ್ತಿದ್ದಾನೆಂದು ಚಿಂತಿತನಾದರೂ ಇಲ್ಲಿಯತನಕ ಯಾರೊಬ್ಬರೂ ಮುಖ ತೋರಿಸಿಲ್ಲವಾದ್ದರಿಂದ ಎಲ್ಲಾ ಸುಗಮವಾಗಿ ನಡೆಯುತ್ತಿರಬಹುದು ಎಂದು ಊಹಿಸಿಕೊಂಡು ಸುಮ್ಮನಾದ. ಹೊಸ ಜೋಡಿ ಪ್ರಣಯ ಪಕ್ಷಿಗಳು ಪ್ರೇಮಾಕಾಶದಲ್ಲಿ ಹಾರಾಡಿ ನಲಿಯಲಿ ಎಂದು ಮನಸ್ಸಿನಲ್ಲೆ ಮನೆ ದೇವರಿಗೆ ಹರಕೆ ಹೊತ್ತ.

ನಾಲ್ಕು ತಿಂಗಳು ಮುಗಿದ ನಂತರ ಚರಿತಾ ಒಂದು ದಿನ ಆಫೀಸ್‌ ಮುಗಿಯುವ ವೇಳೆಗೆ ನವನೀತ್‌ ನ ಮುಂದೆ ಹಾಜರ್‌. ಅವನಿಗೆ ಧಿಡೀರ್‌ ಪ್ರತ್ಯಕ್ಷಳಾದ ಸ್ನೇಹಿತೆಯನ್ನು ಕಂಡು ಸಂತಸವಾಯಿತು.

“ಚೆನ್ನಾಗೀದ್ದೀಯಾ ಚರಿತಾ, ಇಷ್ಟೊಂದು ದಿನ ಕಾಣಿಸಲೇ ಇಲ್ಲ….?” ಕುತೂಹಲದಿಂದ ಪ್ರಶ್ನಿಸಿದ.

“ನಾನು ಚೆನ್ನಾಗಿದ್ದೀನಿ, ನೀನು ಚೆನ್ನಾಗಿದ್ದೀಯಾ….? ನಾಳೆ ನೀನು ಫ್ರೀಯಾಗಿ ನನ್ನ ಜೊತೆ ಇರಲು ಸಾಧ್ಯನಾ…? ನೀನು ಇಲ್ಲ ಎನ್ನಬಾರದು,” ಮಾತಿನಲ್ಲಿ ಬೇಡಿಕೆ ಇತ್ತು.

`ಚರಿತಾ ಯಾವುದೋ ಸಂದಿಗ್ಧದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ,’ ಎನಿಸಿತವನಿಗೆ. ಆಫೀಸ್‌ ಮುಂದೆ ಮಾತನಾಡುವುದು ಸರಿಯಲ್ಲ ಎನಿಸಿ, “ಚರಿತಾ ಬಾ, ಕಾಮತ್‌ ರೆಸ್ಟೋರೆಂಟ್‌ ಗೆ ಹೋಗಿ ಭೇಲ್ ತಿನ್ನುತ್ತಾ ಮಾತಾಡೋಣ. ನೀನಿಲ್ಲದೆ ನಾನು ನಾಲ್ಕು ತಿಂಗಳಿಂದ ರೆಸ್ಟೋರೆಂಟ್‌ ಕಡೆ ತಲೆ ಹಾಕಿಲ್ಲ. ಭೇಲ್ ‌ಮತ್ತು ಕಾಫಿ ಮುಟ್ಟೇ ಇಲ್ಲ,” ಎಂದು ಅವಳನ್ನು ಹೋಟೆಲ್ ‌ಗೆ ಆಹ್ವಾನಿಸಿದ.

“ಈಗ ಬೇಡ ನವಿ, ನಾನು ಅಸರದಲ್ಲಿದ್ದೇನೆ. ಬೇರೆ ಕೆಲಸಗಳಿವೆ ಅವೆಲ್ಲವನ್ನೂ ಇಂದೇ ಮಾಡಿ ಮುಗಿಸಬೇಕು,” ಎಂದವಳ ಮಾತು ಮತ್ತು ನಡತೆಯಲ್ಲಿ ಅವಸರ ಕಾಣುತ್ತಿತ್ತು.

`ಚರಿತಾ ಈಗ ಇನ್ನೊಬ್ಬರ ಸೊತ್ತು. ನನ್ನ ಜೊತೆ ತಿರುಗಾಡಲು ಮುಜುಗರವಿರಬೇಕು. ಅದನ್ನು ಹಳೇ ಸ್ನೇಹಿತನ ಬಳಿ ಹೇಳಿಕೊಳ್ಳಲು ಸಂಕೋಚವಿರಬೇಕು,’ ಎಂದು ಚರಿತಾ ಹೇಳಿದ ಮಾತುಗಳನ್ನು ಅರ್ಥ ಮಾಡಿಕೊಂಡ.

estifa-story1

`ಅವಳ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲ. ಇನ್ನೊಬ್ಬರ ಮನಸ್ಸನ್ನು ಅರಿಯುವುದು ಅಸಾಧ್ಯದ ಕೆಲಸ. ಒಂದು ಜೀವಮಾನ ಕಳೆದರೂ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ,’ ಎಂದು ಅನುಭವಿಗಳು ಹೇಳಿದ್ದಾರೆ.

“ಏನು ಅಂತಹ ಕೆಲಸ….? ನಿನ್ನ ಗೆಳೆಯ ರಮಣ್‌ ಬರುವುದಿಲ್ಲವೇ…..?” ನವನೀತ್‌ ಕೇಳಿದ.

ಚರಿತಾಳ ಕಣ್ಣಲ್ಲಿ ಮತ್ತೆ ನೀರು ತುಳುಕಿತು. ಪರಿಸ್ಥಿತಿ ಏನೋ ಸರಿ ಇರಲಿಕ್ಕಿಲ್ಲ, ಜಗಳ ಮಾಡಿಕೊಂಡಿರಬಹುದು ಎಂದು ಊಹಿಸಿ ಮತ್ತೆ ಸಂಧಾನ ಮಾಡಬೇಕೇನೋ,’ ಎಂದುಕೊಂಡನು ನಾಳೆ ಎಲ್ಲಿಗೆ ಬರಬೇಕೆನ್ನುವ ವಿವರಗಳನ್ನು ಪಡೆದುಕೊಂಡು ಅಲ್ಲಿಂದ ಹೊರಟ.

ಮನೆಗೆ ಬಂದ ಮೇಲೆ ಚಿಂತಾಕ್ರಾಂತನಾದ. ಆಸ್ಪತ್ರೆಗೆ ಬರಲು ಹೇಳಿದ್ದಾಳೆ. ಏಕಿರಬಹುದು? ಆರೋಗ್ಯ ಸರಿ ಇಲ್ಲವೇ? ಹಾಗಿದ್ದರೆ ಅವರ ಮನೆಯವರು ಯಾರಾದರೂ ಬರಬಹುದಲ್ಲ…? ಇಲ್ಲ ಅವಳ ನೆಚ್ಚಿನ ರಮಣ್‌ ಬರಬಹುದಲ್ಲಾ….?’ ಅನೇಕ ಪ್ರಶ್ನೆಗಳು ಮನದಲ್ಲಿ ಉತ್ತರವಿಲ್ಲದೆ ಗಗನಕುಸುಮಗಳಾದವು.

ನವನೀತ್‌ ತೊಳಲಾಟದಲ್ಲಿ ಇಡೀ ರಾತ್ರಿ ಕಳೆದ. ಮರುದಿನ ಚರಿತಾ ಹೇಳಿದ ಅಕ್ಷಯ್‌ ಆಸ್ಪತ್ರೆಗೆ ಹೋದ. ಅದೊಂದು ಊರ ಹೊರವಲಯದಲ್ಲಿ ಸುಸಜ್ಜಿತ ಹೈಟೆಕ್‌ ಆಸ್ಪತ್ರೆ. ಆಸ್ಪತ್ರೆಯ ಮುಂದೆ ಚರಿತಾಳಿಗಾಗಿ ಕಾದ. ಸ್ವಲ್ಪ ಹೊತ್ತಿನಲ್ಲಿ ಆಟೋದಲ್ಲಿ ಬಂದಿಳಿದಳು. ಅವನ ಬಳಿ ಬಂದು, “ಬೇಗ ಬಂದಿದ್ದೀಯಾ….? ಸಾರಿ, ನನ್ನಿಂದ ಸ್ವಲ್ಪ ತಡವಾಯಿತು,” ಎನ್ನುತ್ತಾ ರಿಸೆಪ್ಷನ್‌ ಹಾಲ್ ಗೆ ಕರೆದುಕೊಂಡು ಹೋಗಿ ಯಾರೂ ಇಲ್ಲದ ಜಾಗ ಹುಡುಕಿ ಕುಳಿತುಕೊಂಡು, ನವನೀತ್‌ ಗೂ ಕುಳಿತುಕೊಳ್ಳಲು ಹೇಳಿದಳು.

ಅವಳ ನಡೆ ನುಡಿಯಲ್ಲಿ ಗಾಬರಿ ಮತ್ತು ಭಯ ತೋರುತ್ತಿತ್ತು. ನವನೀತ್‌ ನ ಕೈ ಹಿಡಿದು, “ನವಿ, ನಾನು ತಪ್ಪು ಮಾಡಿಬಿಟ್ಟೆ, ಮೋಸ ಹೋಗಿಬಿಟ್ಟೆ…. ಅಂದು ನಾನು ನಿನ್ನ ಮಾತು ಕೇಳಬೇಕಿತ್ತು. ನಿನ್ನ ಬುದ್ಧಿವಾದವನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳದೆ ನಿನ್ನಂತಹ ಸ್ನೇಹಿತನಿಗೆ ಅವಮಾನ ಮಾಡಿದೆ. ಈಗ ನನಗೆ ಅರ್ಥವಾಗಿದೆ. ಆದರೆ ಬಹಳ ಮುಂದೆ ಸಾಗಿಯಾಗಿದೆ. ಈಗ ರಮಣ್‌ ನಿಂದಾಗಿರುವ ಈ ಪಾಪದ ಪಿಂಡವನ್ನು ಇಳಿಸಿಕೊಳ್ಳಬೇಕಾಗಿದೆ. ಈ ಡಾಕ್ಟರ್‌ ನನ್ನ ಪಿಯುಸಿಯ ಕ್ಲಾಸ್‌ ಮೇಟ್‌. ಅವಳ ಬಳಿ ಗರ್ಭಪಾತ ಮಾಡಲು ಹೇಳಿದ್ದೇನೆ. ಬಹಳ ಕಷ್ಟದಿಂದ ಒಪ್ಪಿಕೊಂಡಿದ್ದಾಳೆ.

“ನನ್ನ ಮನೆಯಲ್ಲಿ ವಿಷಯ ತಿಳಿಸಿಲ್ಲ. ನೀನೇ ನನ್ನ ಸರ್ವಸ್ವವೆಂದು ನಿನ್ನನ್ನು ಕರೆತಂದಿದ್ದೇನೆ. ನೀನು ನನಗೆ ಸಹಾಯ ಮಾಡ್ತೀಯ ಎಂದು ನನಗೆ ನಿನ್ನ ಮೇಲೆ ಅಚಲವಾದ ನಂಬಿಕೆ ಇದೆ. ನೀನು ಕೆಲವು ಔಪಚಾರಿಕತೆಗಳನ್ನು ನೆರವೇರಿಸಬೇಕು. ನೀನು ಇಲ್ಲವೆನ್ನದೆ ಎಲ್ಲವನ್ನೂ ಮಾಡ್ತೀಯಾ ಎಂದು ನಂಬಿದ್ದೇನೆ. ನನ್ನ ಈ ಕೋರಿಕೆಯನ್ನು ಪೂರೈಸುತ್ತಿ ಎಂದು ನಂಬಿದ್ದೇನೆ. ಪ್ಲೀಸ್‌ ನವಿ,” ಎಂದು ಅವನ ಕೈ ಹಿಡಿದು ಗೋಗರೆದಳು ಚರಿತಾ.

“ಕಾನೂನಾತ್ಮಕವಾಗಿ ಒಂದು ಸ್ಟೇಟ್‌ ಮೆಂಟ್‌ ಕೊಡಬೇಕಂತೆ. ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಮತ್ತು ಮುಂದೆ ಮದುವೆಯಾಗಲಿದ್ದೇವೆ. ಆದರೆ ಈ ತಕ್ಷಣದ ಜವಾಬ್ದಾರಿಗಳ ಸಲುವಾಗಿ ಮಗು ಬೇಡ. ನಾವು ಲಿಂಗ ಪತ್ತೆ ಮಾಡಿಲ್ಲ. ಮದುವೆಯಾಗದ ಕಾರಣ ಈಗ ಈ ಮಗು ಬೇಡ. ಮದುವೆಯಾದ ನಂತರ ಮತ್ತೆ ಮಗುವನ್ನು ಪಡೆಯಲು ಇಚ್ಛಿಸುತ್ತೇವೆ ಎಂದು ಸ್ವಇಚ್ಛೆಯಿಂದ ಈ ನಿಚ್ಚಳಿಕೆಯನ್ನು ಬರೆದು ಕೊಡುತ್ತಿದ್ದೇವೆ ಎಂದು ಪೇಪರ್‌ ಗೆ ಸಹಿ ಮಾಡಬೇಕಂತೆ. ನಾನೊಬ್ಬಳು ಮಾಡಿದರೆ ಆಗದಂತೆ. ಅದಕ್ಕೆ ಸಮಪಾಲುದಾರನಾದ ಗಂಡನಾಗಬೇಕಾದವನು ಸಹಿ ಹಾಕಬೇಕಂತೆ. ಇಲ್ಲದೇ ಹೋದಲ್ಲಿ ಪೇರೆಂಟ್ಸ್ ಅಥವಾ ಗಾರ್ಡಿಯನ್‌ ಸಹಿ ಮಾಡಬೇಕೆಂತೆ. ಈಗ ನನಗೆ ಎಲ್ಲವೂ ನೀನೇ…..” ಎಂದು ಮಾತು ಮುಗಿಸಿ, ಭರ್ತಿ ಮಾಡಿದ ಫಾರಂ ಒಂದಕ್ಕೆ ಸಹಿ ಮಾಡುವಂತೆ ಅವನ ಮುಂದೆ ಹಿಡಿದಳು ಚರಿತಾ.

ಚರಿತಾಳ ಮಾತುಗಳನ್ನು ಕೇಳಿ ನವನೀತ್‌ಗೆ ಮೂರ್ಛೆ ಬಂದಂತಾಯಿತು. ಸಾವರಿಸಿಕೊಂಡ ಅವನು, `ಏನಿದು ಚರಿತಾ, ನೀನು ಮಾಡುತ್ತಿರುವುದು ಸರಿಯೇ? ನನ್ನನ್ನು ಬಲಿಪಶು ಮಾಡಲು ಹೊರಟಿದ್ದೀಯಾ…? ನಾನು ಮಾಡದ ತಪ್ಪಿಗೆ ಸಹಿ ಹಾಕಬೇಕೇ? ಇದು ನ್ಯಾಯವೇ….? ಹೇಳು ಚರಿತಾ,’ ಎಂದು ಕೂಗಾಡಬೇಕೆನಿಸಿದರೂ, `ಇದು ಆಸ್ಪತ್ರೆ ನಿಶ್ಶಬ್ದತೆಯಿಂದಿರಿ’ ಎಂಬ ಬೋರ್ಡ್‌ಎಚ್ಚರಿಸಿತು.

ಕಣ್ಣಲ್ಲಿ ನೀರು ತುಂಬಿಕೊಂಡು ಕೈ ಮುಗಿದು ಚರಿತಾ ನಿಂತಿದ್ದಳು. ಡಾಕ್ಟರ್‌ ಕೋಣೆಯಿಂದ ಕರೆ ಬಂದಿತು. ವಿಧಿಯಿಲ್ಲದೆ ಸಹಿ ಮಾಡಿದ. ಅವನನ್ನು ಕೈ ಹಿಡಿದು ಡಾಕ್ಟರ್‌ ರೂಮಿಗೆ ಕರೆದುಕೊಂಡು ಹೋದಳು.

ಒಳಗೆ ಹೋಗುತ್ತಿದ್ದಂತೆ, “ಡಾ. ರಶ್ಮಿ, ಇವರು ನನ್ನ ಖಾಸ ಸ್ನೇಹಿತ ನವನೀತ್‌,” ಎಂದು ಪರಿಚಯಿಸಿದಳು ಚರಿತಾ. ಡಾಕ್ಟರ್ ನವನೀತ್‌ ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು. ವಧಾ ಸ್ಥಾನದಲ್ಲಿ ನಿಂತಿರುವ ಕುರಿಯಂತೆ ಅವನಿದ್ದ.

“ಸಂಯಮವಿರಬೇಕು ನಿಮಗೆ. ನಿಮ್ಮ ಮೇಲೆ ನಿಮಗೆ ಕಂಟ್ರೋಲ್ ‌ಇಲ್ಲದಿದ್ದರೆ ಇಂತಹ ಅನಾಹುತಗಳನ್ನು ಮಾಡುತ್ತೀರಾ ಮತ್ತು ನನ್ನ ಸ್ನೇಹಿತೆಯಂತಹ ಅಮಾಯಕ ಹೆಣ್ಣುಗಳನ್ನು ಬಲಿಪಶು ಮಾಡುತ್ತೀರಾ…? ಒಂದು ಹೆಣ್ಣನ್ನು ನೋಡಿದಾಕ್ಷಣ ಅವಳ ಸೌಂದರ್ಯದ ಮೇಲೆ, ಅವಳ ದೇಹದ ಅಂಗಾಗಂಗಳ ಮೇಲೆ, ಅವಳ ಮೇಲೆ ಆಕರ್ಷಣೆಯುಂಟಾಗಿ ಅದು ಕ್ರಮೇಣ ವ್ಯಾಮೋಹಕ್ಕೆ ತಿರುಗುತ್ತದೆ. ಇದರಿಂದ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಪ್ರಬಲವಾದ ವ್ಯಾಮೋಹಕ್ಕೊಳಗಾಗಿ ಪ್ರೀತಿ, ಪ್ರಣಯವೆಂದು ಜಾರುತ್ತಾರೆ.  ತಮಗೆ ತಾವೇ ಗಂಡಾಂತರ ತಂದುಕೊಳ್ಳುತ್ತಾರೆ. ಮುಗ್ಧ ಹೆಣ್ಣುಗಳ ಬಾಳಿಗೆ ಕಂಟಕಪ್ರಾಯರಾಗುತ್ತಾರೆ.

“ನನ್ನ ಸ್ನೇಹಿತೆಗೆ ನೀವಿಷ್ಟು ತೊಂದರೆ ಕೊಟ್ಟಿದ್ದರೂ, ನೀವು ಒಳ್ಳೆಯವರು ನಿಮಗೆ ಏನೂ ಹೇಳಬಾರದೆಂದು ಇವಳು ನನ್ನ ಬಾಯಿ ಕಟ್ಟಿಹಾಕಿದ್ದಾಳೆ. ನಿಮ್ಮ ಅಕ್ಕ ತಂಗಿಯರಿಗೆ ಹೀಗಾದರೆ ನೀವು ಸುಮ್ಮನಿರುತ್ತೀರಾ….? ನಿಮ್ಮಂಥ ಗಂಡಸರಿಗೆ ಧಿಕ್ಕಾರ! ಮೇಲೆ ಬಿದ್ದು ಮೈ ಕೊಡವಿದರೆ ಸಾಲದು, ಮುಂದಾಗಬಹುದಾದ ಅನಾಹುತಗಳ ಬಗ್ಗೆ ಅರಿವಿರಬೇಕು. ಅದನ್ನರಿತು ನಡೆಯಬೇಕು, ಹೆಣ್ಣಿನ ಜೊತೆ ಸಂಯಮ ತೋರಬೇಕು.

“ಮಿ. ನವನೀತ್‌, ಈಗ ನನ್ನ ಸ್ನೇಹಿತೆ ಎಂತಹ ಕಷ್ಟ ಅನುಭವಿಸಬೇಕು. ಅವಳ ಮನೆಯಲ್ಲಿ ಏನು ಹೇಳಬೇಕು? ನಾನು, ಅವಳ ತಾಯಿ ತಂದೆಗೆ ಟ್ರಿಪ್‌ ಗೆ ಹೋಗುತ್ತಿದ್ದೇವೆ ಎಂದು ಹೇಳಿ ಎರಡು ದಿನ ಅವಳನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡು, ಆರೋಗ್ಯ ಸುಧಾರಿಸಿದ ಮೇಲೆ ಅವಳನ್ನು ಮನೆಗೆ ಕಳುಹಿಸಬೇಕಾಗಿದೆ. ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ಮುಂದೆಯಾದರೂ ಅವಳ ಕೈ ಬಿಡಬೇಡಿ. ಹಾಗೇನಾದರೂ ಮಾಡಿದರೆ ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ತಿಳಿಯಿತೆ!

“ನಾನು ಇಂತಹ ಕೆಲಸ ಮಾಡುವುದಿಲ್ಲ…. ನನ್ನ ಸ್ನೇಹಿತೆಗೋಸ್ಕರ ಈ ರಿಸ್ಕ್ ತೆಗೆದುಕೊಳ್ತಿದ್ದೀನಿ. ಮುಂದೆ ಇಂತಹ ಪರಿಸ್ಥಿತಿ ತಂದುಕೊಳ್ಳಬೇಡಿ,”  ಛೀಮಾರಿ ಹಾಕಿದರು ಡಾ. ರಶ್ಮಿ.

`ನಾನೂ ಸಹ ನನ್ನ ಸ್ನೇಹಿತೆಗೋಸ್ಕರ ಅವಳ ಮಾನ ಕಾಪಾಡಲು ಈ ರಿಸ್ಕ್ ತೆಗೆದುಕೊಳ್ತಿದ್ದೀನಿ ಡಾಕ್ಟರ್‌,’ ಮನಸ್ಸಿನಲ್ಲೇ ಹೇಳಿಕೊಂಡ ನವನೀತ್‌.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ