ಚಾಮರಾಜನಗರ ಜಿಲ್ಲೆಯ ಬಂಡೀಪುರ ಮತ್ತು ಮೈಸೂರು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಪುನಾರಂಭಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಸಫಾರಿ ಸ್ಥಗಿತದಿಂದ ಪ್ರವಾಸೋದ್ಯಮಕ್ಕೆ ತೊಂದರೆಯಾಗಿದೆ ಎಂಬ ರೆಸಾರ್ಟ್ ಹಾಗೂ ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ ನಿಯಂತ್ರಿತವಾಗಿ ಮತ್ತು ಹಂತ ಹಂತವಾಗಿ ಸಫಾರಿಯನ್ನು ಭಾನುವಾರ (ಫೆ.22) ದಿಂದ ಮತ್ತೆ ಆರಂಭಿಸಲಾಗಿದೆ.
ನಾಗರಹೊಳೆ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ, ನಾಣಚ್ಚಿಗೇಟ್, ದಮ್ಮನಕಟ್ಟೆ ಸಫಾರಿಯಲ್ಲಿ 125ಕ್ಕೂ ಹೆಚ್ಚು ವನ್ಯಪ್ರೇಮಿಗಳು ಮೊದಲ ದಿನ ಸಫಾರಿಯಲ್ಲಿ ಪಾಲ್ಗೊಂಡಿದ್ದರು.
ಅರಣ್ಯ ಇಲಾಖೆ ಅಲ್ಲದೆ ಜೆಎಲ್ಆರ್ ವಾಹನಗಳು ಸಹ ಸಫಾರಿ ಆರಂಭಿಸಿವೆ. ಸೋಮವಾರದಿಂದ ಆನ್ಲೈನ್ ಮೂಲಕ ಬುಕ್ಕಿಂಗ್ಗೆ ಅವಕಾಶ ಇರಲಿದೆ.
ವೀರನಹೊಸಳ್ಳಿ ಸಫಾರಿ ಕೇಂದ್ರದಲ್ಲಿ ಮಧ್ಯಾಹ್ನ 3ಕ್ಕೆ ಒಮ್ಮೆ ಮಾತ್ರ, ನಾಣಚ್ಚಿ ಗೇಟ್ ಹ ಆಗೂ ದಮ್ಮನಕಟ್ಟೆ ಸಫಾರಿ ಕೇಂದ್ರಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸಫಾರಿ ವ್ಯವಸ್ಥೆ ಇರಲಿದೆ ಎಂದು ಡಿಸಿಎಫ್ ಪಿ.ಎ.ಸೀಮಾ ತಿಳಿಸಿದ್ದಾರೆ.
ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಈ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಕಳೆದ ನವೆಂಬರ್ 7 ರಿಂದ ಸ್ಥಗಿತಗೊಳಿಸಲಾಗಿತ್ತು. ಪ್ರವಾಸೋದ್ಯಮದ ಅಗತ್ಯ ಪರಿಗಣಿಸಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ನೇತೃತ್ವದ ತಾಂತ್ರಿಕ ಸಮಿತಿಯ ಪ್ರಾಥಮಿಕ ವರದಿ ಆಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
”ಎಚ್.ಡಿ. ಕೋಟೆ ಭಾಗದಲ್ಲಿ ರೈತರೂ ಸೇರಿದಂತೆ ಸ್ಥಳೀಯರು ಹಾಗೂ ರೆಸಾರ್ಟ್ ಸಿಬ್ಬಂದಿ ಸಫಾರಿ ಸ್ಥಗಿತದಿಂದ ತಮ್ಮ ಜೀವನೋಪಾಯಕ್ಕೆ ಅಡ್ಡಿಯಾಗಿದ್ದು, ಪುನಾರಂಭಿಸಬೇಕು ಎಂದು ಪ್ರತಿಭಟಿಸಿದ್ದರು. ಸಫಾರಿ ಪುನಾರಂಭದ ಅಗತ್ಯವನ್ನು ರಾಷ್ಟ್ರ ಮಟ್ಟದ ಹಲವು ಮಾಧ್ಯಮಗಳು ಪ್ರತಿಪಾದಿಸಿದ್ದವು. ಹಾಗಾಗಿ ಜೀವವೂ ಉಳಿಯಬೇಕು ಮತ್ತು ಜೀವನೋಪಾಯವೂ ಇರಬೇಕು ಎಂಬ ಕಾರಣಕ್ಕೆ ಸಫಾರಿಯನ್ನು ಪುನಾರಂಭ ಮಾಡಲಾಗಿದೆ.
ಪ್ರವಾಸೋದ್ಯಮ ಧಾರಣಾ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ರಚಿಸಲಾಗಿದ್ದ ತಾಂತ್ರಿಕ ಸಮಿತಿ ವರದಿಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಂಡೀಪುರದಲ್ಲಿ ಈ ಹಿಂದೆ 8 ತಾಸುಗಳ ಕಾಲ ಸಫಾರಿ ನಡೆಯುತ್ತಿತ್ತು. ಈಗ 5 ಗಂಟೆಗೆ ತಗ್ಗಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿದೆ. ಸಮಯದ ಜತೆಗೆ ಟ್ರಿಪ್ ಮತ್ತು ವಾಹನ ಸಂಖ್ಯೆಯಲ್ಲಿ ಶೇ.50 ರಷ್ಟು ಕಡಿತ ಮಾಡಿ ಸಫಾರಿ ಪುನಾರಂಭಕ್ಕೆ ಸಮ್ಮತಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿ ಮೇಲುಕಾಮನಹಳ್ಳಿಯಿಂದ ಪುನರಾರಂಭವಾಯಿತು. ಅರಣ್ಯ ಇಲಾಖೆಯ 19, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ನ 12 ವಾಹನಗಳು ಬೆಳಗ್ಗೆ ಹಾಗೂ ಸಂಜೆ ಸಫಾರಿ ನಡೆಸಿದವು.





