ಟ್ರೆಂಡ್‌ ಬದಲಾಗುತ್ತಿರುವ ಆಧುನಿಕ ಕಾಲಮಾನಕ್ಕೆ ತಕ್ಕಂತೆ ಜನರ ಪ್ಯಾಶನ್‌ ಲೈಫ್‌ ಸ್ಟೈಲ್ ‌ನಲ್ಲೂ ಸಹ ಬದಲಾವಣೆಗಳು ಮೂಡತೊಡಗಿವೆ. ಈ ಪರಿವರ್ತನೆಯನ್ನು ಇದೀಗ ಲವ್ ರಿಲೇಶನ್‌ ಶಿಪ್‌ ನಲ್ಲೂ ಗಮನಿಸಬಹುದಾಗಿದೆ. ನಮ್ಮ ಇಂದಿನ ಯುವಜನತೆ ಎಲ್ಲಾ ನಿಟ್ಟಿನಿಂದಲೂ ಬಲು ಮುಂದಿದ್ದಾರೆ. ಅವರ ಯೋಚನಾಧಾಟಿ, ಸ್ಟೈಲ್, ಡ್ರೆಸ್‌, ರೀತಿನೀತಿ ಎಲ್ಲದರಲ್ಲೂ ಲೇಟೆಸ್ಟ್ ಆಧುನಿಕತೆ ಇಣುಕುತ್ತಿದೆ. ವಿಷಾದದ ಸಂಗತಿ ಎಂದರೆ ಅವರು ತಮ್ಮ ಪ್ರೀತಿಪ್ರೇಮದ ರಿಲೇಶನ್‌ ಶಿಪ್‌ ನಲ್ಲೂ ಅತಿಯಾದ ಬದಲಾವಣೆ ಬಯಸುತ್ತಿದ್ದಾರೆ.

10-20 ವರ್ಷಗಳ ಹಿಂದಿನವರೆಗೂ ಆಧುನಿಕ ಜನತೆ ಮಧ್ಯೆ ಪ್ರೀತಿ ಪ್ರೇಮದ ವ್ಯಾಖ್ಯಾನ ಬೇರೆ ರೀತಿಯಲ್ಲಿತ್ತು. ಸಂಬಂಧದ ಆರಂಭ ಸಂಭಾಷಣೆಯಿಂದ ಮೊದಲಿಡುತ್ತಿತ್ತು. ಅದಾದ ನಂತರ ಸ್ನೇಹ, ಪರಸ್ಪರರತ್ತ ಆಕರ್ಷಣೆ, ಭಾವನೆಗಳ ಕೊಡುಕೊಳ್ಳುವಿಕೆ, ಡೇಟಿಂಗ್‌, ನಂತರ ಪ್ರೇಮಲೋಕದಲ್ಲಿ ಮುಳುಗುವುದು…. ಅದು ಮದುವೆಯಲ್ಲಿ ಮುಗಿಯುವುದು ಮಾಮೂಲಾಗಿತ್ತು. ಇದೆಲ್ಲ ಬಲು ಸಹಜವಾಗಿ, ಭಾವನಾತ್ಮಕವಾಗಿ ನಡೆಯುತ್ತಿತ್ತು. ಮದುವೆಗೆ ಮುಂಚೆ ಮಾಡಿದ ವಾಗ್ದಾನಗಳನ್ನು ಎಷ್ಟೇ ಕಷ್ಟ ಬಂದರೂ, ಯಾರದ್ದೇ ವಿರೋಧವಿದ್ದರೂ ಜೀವನವಿಡೀ ನಿಭಾಯಿಸುತ್ತಿದ್ದುದು. ಪ್ರೇಮಿಯನ್ನು ತಮ್ಮ ಹೆತ್ತವರಿಗೆ ಪರಿಚಯಿಸಿ, ಅವರ ಆಶೀರ್ವಾದದಿಂದಲೇ ಮುಂದೆ ಮದುವೆಯ ತಯಾರಿ ನಡೆಯುತ್ತಿತ್ತು. ಕೆಲವೊಮ್ಮೆ ಅವರನ್ನು ಎದುರು ಹಾಕಿಕೊಂಡರೂ, ಮುಂದೆ ಮೊಮ್ಮಕ್ಕಳಾದ ಮೇಲೆ ಎಲ್ಲವೂ ಸುಖಾಂತದಲ್ಲಿ ಮುಗಿಯುತ್ತಿತ್ತು.

ಆದರೆ ಇಂದಿನ ಅತ್ಯಾಧುನಿಕ ಡಿಜಿಟಲ್ ಯುಗದಲ್ಲಿ ಎಲ್ಲವೂ ಅತಿ ವೇಗವಾಗಿ ಬದಲಾಗುತ್ತಿದೆ. ಈ ಅತಿಯಾದ ಸ್ಪೀಡ್‌ ನಮ್ಮ ಮಾಡ್‌ ಯಂಗ್‌ ಸ್ಟರ್ಸ್‌ ನ್ನು ಪ್ರತಿ ವಿಷಯನ್ನೂ ಮನಬಂದಂತೆ ಬದಲಾಯಿಸಲು ಪ್ರೇರೇಪಿಸುತ್ತಿದೆ. ಅತಿಯಾದ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯೇ ಇದಕ್ಕೆ ಪ್ರಬಲ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಪ್ರತಿಯೊಂದರಲ್ಲೂ ಜೆಟ್‌ ಫಾಸ್ಟ್, ಎಲ್ಲವೂ ಹೊಚ್ಚ ಹೊಸದೇ ಆಗಿರಬೇಕು ಎಂಬ ಹಂಬಲ. ಇಂದು ಬಲು ಉತ್ಸಾಹದಿಂದ ಹೊಸದಾಗಿ ಖರೀದಿಸಿದ ಮೊಬೈಲ್ ‌ಒಂದೇ ವರ್ಷದಲ್ಲಿ ಮಾಸಲು, ಹಳತು ಎಂದು ರೋಸಿಹೋಗುತ್ತದೆ. ಇದನ್ನು ಬದಿಗೆಸೆದು ಮಾಡ್‌ ಫೀಚರ್ಸ್‌ ಇರುವ ಮತ್ತೊಂದು ಹೊಸ ಮೊಬೈಲ್ ‌ಗೆ ಧಾವಿಸುತ್ತಾರೆ.

ಇದು ಕೇವಲ ಭೌತಿಕ ವಸ್ತುಗಳಿಗಷ್ಟೇ ಸೀಮಿತವಲ್ಲ, ಮಾನವ ಸಂಬಂಧಗಳೂ ಇವರ ದೃಷ್ಟಿಯಲ್ಲಿ ಬಲು ಬೇಗ ಹಳಸತೊಡಗುತ್ತದೆ. ಒಂದೇ ಸಂಬಂಧವನ್ನು ಇಡೀ ಜೀವನಪೂರ್ತಿ ಯಾರು ಭರಿಸುತ್ತಾರೆ….. ಎಂಬಂಥ ನಿರ್ಲಕ್ಷ್ಯ ಮಾಮೂಲಿ ಆಗಿಹೋಗಿದೆ. `ಅಮೆರಿಕಾ… ಅಮೆರಿಕಾ’ ಕನ್ನಡ ಚಿತ್ರದಲ್ಲಿ ವಿದೇಶಿ ಮಹಿಳೆಯೊಬ್ಬಳ ಮಾತು `ಒನ್‌ ಹಸ್‌ ಬೆಂಡ್‌ ಫಾರ್‌ ದಿ ಹೋಲ್ ಲೈಫ್‌…. ಸೋ ಬೋರಿಂಗ್‌!’ ಎಂಬುದು ಇಲ್ಲಿ ಬಲು ಪ್ರಸ್ತುತ. 3 ದಶಕಗಳ ಹಿಂದೆ ಈ ಚಿತ್ರ ಬಂದಿತ್ತು.

ಆ ನಿಟ್ಟಿನಲ್ಲಿ ಇಂಥ ಮಾಡರ್ನ್‌ ಸಂಬಂಧದಲ್ಲಿ ಏನೆಲ್ಲ ಬದಲಾವಣೆ ಆಗಿರಬಹುದು ಎಂದು ನೀವೇ ಊಹಿಸಿ. ಈ ಸಂಗಾತಿಯನ್ನು ಮೆಚ್ಚಿ ವರ್ಷದ ಮೇಲಾಯಿತು, ಮುಂದಿನ ದಿನಗಳಲ್ಲಿ ಮತ್ತಷ್ಟು ಆಕರ್ಷಕವಾದ ಆಸಕ್ತಿದಾಯಕ ಸಂಗಾತಿ ದೊರಕಿದರೆ ಯಾಕೆ ಟ್ರೈ ಮಾಡಬಾರದು? ಇದು ಇಂದಿನ ಆಧುನಿಕ ಗಂಡು/ಹೆಣ್ಣು ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ. ಮೋರ್‌ ಕೂಲ್‌, ಮೋರ್ ರಿಚ್‌ಸ್ಮಾರ್ಟ್‌/ಸೆಕ್ಸೀ ಆಗಿರುವವರು ಸಿಕ್ಕರೆ ಏಕೆ ಬೇಡ? ಇಂಥ ಅತಿ ಆಸೆಗಳ ಗುಂಗಿನಲ್ಲಿ ಇವರುಗಳು ಯಾವ ಸಂಬಂಧದಲ್ಲೂ ಕಮಿಟ್‌ ಮೆಂಟ್‌ ಉಳಿಸಿಕೊಳ್ಳಲು ಬಯಸುವುದಿಲ್ಲ.

IB127031_127031202421410_SM405947

ರೋಮಾಂಚಕಾರಿ ಅನುಭವ

ಇಂದಿನ ಆಧುನಿಕ ಯುವಜನತೆಗೆ ಎಲ್ಲ ಫಟಾಫಟ್‌, ಫಾಸ್ಟ್ ಫುಡ್‌ ನಂತೆ ಆಗಿಹೋಗಬೇಕು. ಆ ವಿಷಯದಲ್ಲಿ ಮನಸ್ಸು ತುಂಬಿತು ಎನಿಸಿದಾಕ್ಷಣ ಬೇಸರ ತಲೆದೋರಿ, ಅದನ್ನು ಮರೆತು ಮುನ್ನುಗ್ಗುತ್ತಾರೆ. ಡಿಜಿಟಲ್ ಯುಗವಾದ ಕಾರಣ ಇಂದು ಒಂದಲ್ಲ, ನೂರಾರು ಆಯ್ಕೆಗಳು ಸುಲಭ ಲಭ್ಯ, ಜಸ್ಟ್ ಎ ಟಚ್‌ ಆಫ್‌ ಬಟನ್‌! ಹೀಗಾಗಿ ಒಂದಕ್ಕೇ ಅಂಟಿಕೊಂಡು ಉಳಿಯುವುದಿಲ್ಲ. ಈ ಕಾರಣದಿಂದಲೇ ಇಂದು ಸಂಬಂಧಗಳಲ್ಲಿ ಆ ಹಿಂದಿನ ಸಾಂಪ್ರದಾಯಕತೆ ಉಳಿದಿಲ್ಲ, ಬೇಕಾದಷ್ಟು ಬದಲಾಗಿದೆ. ಇಂದಿನ ಯುವಜನತೆಯ ರಿಲೇಶನ್‌ ಶಿಪ್‌ ನಲ್ಲಿ ಯಾವುದೇ ಕಮಿಟ್‌ ಮೆಂಟ್‌, ಜವಾಬ್ದಾರಿಯ ಮಾತೇ ಇಲ್ಲ! ಏನಿದ್ದರೂ ಅವರು ಸಿಚುಯೇಶನ್‌ ಶಿಪ್‌ (ಸಂದರ್ಭಕ್ಕೆ ತಕ್ಕಂತೆ) ಕಾನ್ಸೆಪ್ಟ್ ಫಾಲೋ ಮಾಡುತ್ತಾರಷ್ಟೆ. ಹಿಂದೆ 2011ರಲ್ಲಿ ಒಂದು ಆಂಗ್ಲ ಚಿತ್ರ `ಫ್ರೆಂಡ್ಸ್ ವಿತ್‌ ಬೆನಿಫಿಟ್ಸ್’ ಬಂದಿತ್ತು. ಈ ಚಿತ್ರ ನಮ್ಮ ದೇಶದ ಯುವಜನತೆಗೆ ಹುಚ್ಚು ಹಿಡಿಸಿ, ಅದರಲ್ಲಿ ಇದ್ದಂತೆ ತಮ್ಮ ರಿಲೇಶನ್‌ ಶಿಪ್‌ ಸಹ ಹೊಸ ರೀತಿಯಲ್ಲಿ ಇರಬೇಕು ಎಂದು ನಿರ್ಧರಿಸಿದರು. ಅದೇ ವರ್ಷ ಪ್ರಸಿದ್ಧ ಸೆಲೆಬ್ರಿಟಿಗಳಾದ ಆ್ಯಶ್ಟನ್‌ ಕಚರ್‌ ನತಾಲಿ ಪೋರ್ಟ್‌ ಮ್ಯಾನ್‌, ಯುವಜನತೆಗೆ ನಾನ್‌ ಕಮಿಟ್‌ ರಿಲೇಶನ್‌ ಶಿಪ್‌ ನ ರುಚಿ ತೋರಿಸಿಕೊಟ್ಟರು. ಅಂದ್ರೆ ಯಾವುದೇ ಟೆನ್ಶನ್ ಇಲ್ಲದೆ, ಎಮೋಶನಲ್ ರೊಮಾನ್ಸ್ ನ್ನು ಮುಂದುವರಿಸುವ, ಪ್ರೇಮ ಬಂಧನದಲ್ಲಿ ಇರುವಂತ ಹೊಸ ಕಾನ್ಸೆಪ್ಟ್ ನ್ನು ಎಲ್ಲರೂ ಫಾಲೋ ಮಾಡುವಂತಾಯಿತು.

ಇದೊಂದು ಹೊಚ್ಚ ಹೊಸ ರೋಮಾಂಚಕಾರಿ ಅನುಭವ ಎನಿಸತೊಡಗಿತು. ಸಾರ್ವಜನಿಕವಾಗಿ ತಾವು ಒಂದು ಜೋಡಿ ಎಂದು ತೋರಿಸಿಕೊಳ್ಳುವ ಅಗತ್ಯವಿಲ್ಲದೆ, ದೊಡ್ಡ ದೊಡ್ಡ ರೊಮ್ಯಾಂಟಿಕ್‌ ಮಾತುಗಳನ್ನಾಡದೆ, ನಾ ನಿನ್ನ ಮರೆಯಲಾರೆ/ಬಿಟ್ಟಿರಲಾರೆ ಎಂದೆಲ್ಲಾ ಆಣೆಪ್ರಮಾಣ ಮಾಡಿಕೊಳ್ಳದೆ, ತೀರಾ ಎಮೋಶನಲಿ ಅಂಟಿಕೊಳ್ಳದೆ, ಅಂಟೂ ಅಂಟದಂತೆ ಯಾವ ಜವಾಬ್ದಾರಿಯೂ ಇಲ್ಲದೆ ಹಾಯಾಗಿ ಪ್ರೇಮಲೋಕದಲ್ಲಿ ತೇಲಾಡುತ್ತಾ ಇದ್ದುಬಿಡುವ ಮಜಾ ಕಂಡುಕೊಂಡವರು.

ಈ ನಾನ್‌ ಕಮಿಟ್‌ ರಿಲೇಶನ್‌ ಶಿಪ್‌ ನ ಒಂದು ಹೊಸ ರೂಪ ಎಲ್ಲೆಡೆ ರಾರಾಜಿಸತೊಡಗಿತು. ಝೆನ್‌ ಜೇಡ್‌ಮಿಲೇನಿಯನ್ಸ್ ತಮ್ಮ ರೊಮ್ಯಾಂಟಿಕ್‌ ಸಂಬಂಧವನ್ನು ವ್ಯಾಖ್ಯಾನಿಸಲು, ಹಲವು ಭ್ರಾಮಕ ಪದಗಳನ್ನು ಬಳಸಿಕೊಂಡು ಕಾಯಿನ್‌ ಮಾಡಿದಂಥ ಹೊಸ ಪದಪ್ರಯೋಗವೇ `ಸಿಚುಯೇಶನ್‌ ಶಿಪ್‌.’ ಈ ಪದ 2019ರ ವೇಳೆಗೆ ಬಲು ಜನಪ್ರಿಯವಾಯಿತು. ರಿಯಾಲಿಟಿ ಟಿವಿ ಶೋ ಲವ್ ಐಲೆಂಡ್‌ ನ ಸ್ಪರ್ಧಿಗಳಾದ ಅನಾನಾ ಮಾರಿಸನ್‌ ತನ್ನ ಡೇಟಿಂಗ್‌ ಹಿಸ್ಟರಿ ಬಗ್ಗೆ ಹೇಳುವಾಗ ಈ `ಸಿಚುಯೇಶನ್‌ ಶಿಪ್‌’ನ ಪದಪ್ರಯೋಗ ಮತ್ತೆ ಮತ್ತೆ ಮಾಡಿದ್ದಾಳೆ.

ಒಂದು ಹೊಸ ಟ್ರೆಂಡ್

ಈ ಕಾರಣದಿಂದಲೇ ಯುವಜನತೆ ಮಧ್ಯೆ ರಿಲೇಶನ್‌ ಶಿಪ್‌ ನ ಒಂದು ಹೊಸ ಟ್ರೆಂಡ್‌ ಬಲು ಬೇಗ ಪಾಪ್ಯುಲರ್‌ ಆಗತೊಡಗಿತು, ಅದುವೇ ಸಿಚುಯೇಶನ್‌ ಶಿಪ್‌. ಈ ರಿಲೇಶನ್‌ ಶಿಪ್‌ ನಲ್ಲಿ ಕಂಡುಬರುವಂಥ ಯಾವುದೇ ಗಾಢ ಅನುಬಂಧದ ಪ್ರಸಕ್ತಿಯೇ ಇಲ್ಲ. ಎಲ್ಲಕ್ಕೂ ವಿಶೇಷವಾಗಿ ಕಮಿಟ್‌ ಮೆಂಟ್‌ ಯಾ ಜವಾಬ್ದಾರಿ, ಬದ್ಧತೆಗಳು! ಇಬ್ಬರಿಗೂ ಎಲ್ಲವೂ ಸರಿ ಇದೆ ಎನಿಸುವವರೆಗೆ ಮಾತ್ರ, ಆ ಸಂಬಂಧ ಉಳಿಯುತ್ತದೆ, ಇಲ್ಲದಿದ್ದರೆ ಇಲ್ಲ.

ಇಂದು ಗಂಡಸರಿಗೆ ಮಾತ್ರವಲ್ಲದೆ, ಹೆಂಗಸರಿಗೂ ಸಹ ಬೇಕಾದಷ್ಟು ಡೇಟಿಂಗ್‌ ಆ್ಯಪ್ಸ್ ಬಂದಿವೆ. ಜನ ಸಿಂಗಲ್ ಆಗಿರುವುದೇ ಚೆಂದ ಎಂದು ನಿರ್ಧರಿಸುತ್ತಿದ್ದಾರೆ. ಏನೋ ಪರಿಸ್ಥಿತಿಯಲ್ಲಿ ಮದುವೆ ಆಗಿಯೇ ಹೋಗಿದ್ದರೂ, ಇಬ್ಬರಿಗೂ ಯಾವುದೇ ಕಾರಣಕ್ಕೆ ಹೊಂದಾಣಿಕೆ ಸರಿ ಹೋಗದಿದ್ದರೆ, ತಕ್ಷಣ ವಿಚ್ಛೇದನ ಪಡೆಯುತ್ತಾರೆ. ಅಂದ್ರೆ ಎಲ್ಲ ಕ್ಲಿಯರ್‌ ಕಟ್‌. ಇಂಥದ್ದೇ ಹೊಸ ಹೊಸ ಟ್ರೆಂಡ್ಸ್ ನಲ್ಲಿ ಮತ್ತೊಂದು ಹೊಸ ಶಬ್ದ ಹುಟ್ಟಿಕೊಂಡಿದೆ, ಅದುವೇ ಸಿಚುಯೇಶನ್‌ ಶಿಪ್‌!

ಸಿಚುಯೇಶನ್‌ ಶಿಪ್‌ ಮೂಲ ಆಂಗ್ಲ ಪದಗಳಾದ `ಸಿಚುಯೇಶನ್‌’  `ರಿಲೇಶನ್‌ ಶಿಪ್‌’ ಬೆರೆತು ಈ ಹೊಸ ಪದ ಹುಟ್ಟಿಕೊಂಡಿದೆ. ಇದರ ಪ್ರಕಾರ ಎಲ್ಲ ಆಯಾ ಸಂದರ್ಭಕ್ಕೆ ಸಂಬಂಧಿಸಿದ್ದಾಗಿರುತ್ತದೆ. ರೊಮಾನ್ಸ್, ಫಿಸಿಕಲ್ ಅಗತ್ಯಗಳನ್ನು ಪೂರೈಸಲು ಈ ಇಬ್ಬರು ವ್ಯಕ್ತಿಗಳು ಜೊತೆ ಜೊತೆಯಲ್ಲಿ ವಾಸಿಸಬಹುದು. ಇಬ್ಬರೂ ಒಟ್ಟೊಟ್ಟಿಗೆ ಆಹಾರ, ವಿಹಾರ ಎಲ್ಲಕ್ಕೂ ತಿರುಗಾಡಬಹುದು. ಈ ಸಂಬಂಧಕ್ಕೆ ಯಾವುದೇ ಹೆಸರಿಲ್ಲ. ಈ ನಿಟ್ಟಿನಲ್ಲಿ ಜನ ಕೇವಲ ಟೈಂಪಾಸಿಗಾಗಿ ಸಹ ಜೊತೆಗಿರಲು ಬಯಸುತ್ತಾರೆ. ಇಲ್ಲಿ ಯಾರಿಗೆ ಯಾವಾಗ ಬೇಸರ ಬಂದರೂ ಈ ಸಂಬಂಧ ಅಲ್ಲಿಗೇ ಮುಗಿಯಿತು. ಮತ್ತೆ ಹೊಸದರ ಹುಡುಕಾಟ. ಜೀವನವಿಡೀ ಹೀಗೇ ಅವರ ಬಿಟ್ಟು, ಇವರ ಬಿಟ್ಟು ಇನ್ಯಾರು ಎಂದು ಹುಡುಕಾಡುವುದರಲ್ಲಿ ಕಳೆದು ಹೋಗುತ್ತದೆ.

ಸರಳ ಮಾತುಗಳಲ್ಲಿ ಹೇಳುವುದಾದರೆ, ಸಿಚುಯೇಶನ್‌ ಶಿಪ್‌ ಒಂದು ವ್ಯಾಖ್ಯಾನಿಸಲಾಗದ ಸಂಬಂಧ. ಇಲ್ಲಿ ಜನ ಎಲ್ಲಾ ವಿಧದಲ್ಲೂ `ಅತಿ ನಿಕಟ’ರಾಗುತ್ತಾರೆ. ಆದರೆ ಅದೇ ವ್ಯಕ್ತಿ ಜೊತೆ ಸದಾ ಅಂಟಿಕೊಂಡಿರಲು ಬಯಸುವುದಿಲ್ಲ. ಅಂಥ ಬಂಧನ ಅವರಿಗೆ ಬೇಕಿಲ್ಲ. ಅಂದ್ರೆ ಸಿಚುಯೇಶನ್‌ ಶಿಪ್‌ ಒಂದು ಬಗೆಯ ಡೇಟಿಂಗ್‌, ಇದರಲ್ಲಿ ಇಬ್ಬರು ವ್ಯಕ್ತಿಗಳು ಯಾವುದೇ ಆಣೆ ಪ್ರಮಾಣ ಮಾಡದೆ, ಯಾವುದೇ ಕಮೀಟ್‌ ಮೆಂಟ್‌ ಗೆ ಒಳಗಾಗದೆ, ಒಟ್ಟಿಗೆ ಮಜವಾಗಿ ಕಾಲ ಕಳೆಯಲು ಬಯಸುತ್ತಾರೆ. ಈ ಸಂಗತಿಯನ್ನು ಅವರು ಯಾರ ಬಳಿಯೂ ಹೇಳಿಕೊಳ್ಳಲು ಯಾ ಇದಕ್ಕೊಂದು ಹೆಸರು ಕೊಡಲು ಬಯಸುವುದಿಲ್ಲ.

ಇಬ್ಬರು ವ್ಯಕ್ತಿಗಳು ಪರಸ್ಪರರ ಎಲ್ಲಾ ಅವಶ್ಯಕತೆಗಳನ್ನೂ ಪೂರೈಸಲು ಇಂಥ ಸಂಬಂಧ ಹೊಂದುತ್ತಾರೆ. ಸಿಚುಯೇಶನ್‌ ಶಿಪ್‌ ನಲ್ಲಿ ಯಾವುದಕ್ಕೂ ವ್ಯಾಖ್ಯಾನವಿಲ್ಲ, ಅಂದ್ರೆ ಗೋಯಿಂಗ್‌ ವಿತ್‌ ಪ್ಲೇ ಎಂದರ್ಥ. ಮನಸ್ಸಿಗೆ ಸಾಕು ಎನಿಸಿದಾಗ, ಕೈ ಕೊಡವಿ ಬಿಟ್ಟುಹೋಗಬಹುದು. ಬೇಕೆನಿಸಿದ ಮತ್ತೊಂದು ಸಂಗಾತಿ ಹುಡುಕಿಕೊಂಡರಾಯಿತು. ಇಷ್ಟೇ ಈ ಸಂದರ್ಭದ ಅರ್ಥ. ಇದು ಒಂದು ಹಂತಕ್ಕೆ ಸರಿ, ಮತ್ತೊಂದು ಹಂತಕ್ಕೆ ಮಹಾ ತಪ್ಪು!

ಯುವಜನತೆಗೆ ಇದೇಕೆ ಬೇಕು?

ಇಂದಿನ ಆಧುನಿಕ ಯುವಜನತೆ ಯಾವುದೇ ಸಂದರ್ಭದಲ್ಲೂ ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳಲು ಬಯಸುವುದಿಲ್ಲ. ಮನಸ್ಸಿಗೆ ಬಂದಂತೆ ಹುಚ್ಚುಚ್ಚಾಗಿ ವರ್ತಿಸುವುದೇ ಯೌವನದ ನಿಜವಾದ ಮಜಾ ಎಂದು ಭಾವಿಸುತ್ತಾರೆ. ಈ ರೀತಿ ತಮ್ಮನ್ನು ತಾವು ಸದಾ ಸ್ವತಂತ್ರರು ಎಂದು ಭಾವಿಸುತ್ತಾರೆ. ಅದೇ ಮದುವೆಯ ವಿಷಯವಾದರೆ, ಅಲ್ಲಿ ಎಲ್ಲಾ ವಿಚಾರಕ್ಕೂ ಸಂಗಾತಿಯ ಪ್ರಸ್ತಾಪ ಅತ್ಯಗತ್ಯ. ಇದರಿಂದ ಆ ಕಟ್ಟುಪಾಡು ಬಂಧನ ಎನಿಸುತ್ತದೆ, ತಮ್ಮತನ ಕಳೆದುಕೊಂಡಂತೆ ಎನಿಸುತ್ತದೆ. ಜೊತೆಗೆ ವೈವಾಹಿಕ ಜೀವನದಲ್ಲಿ ಅತ್ಯಧಿಕ ಜವಾಬ್ದಾರಿಗಳಿವೆ. ಇದಾವುದರ ಗೊಡವೆ ಇಲ್ಲದೆ ಹಾಯಾಗಿ ಇದ್ದುಬಿಡುವುದೇ ಸಿಚುಯೇಶನ್‌ ಶಿಪ್‌! ಹೀಗಾಗಿ ಯಾರಿಗೆ ಕಮಿಟ್‌ ಮೆಂಟ್‌/ಜವಾಬ್ದಾರಿ ಬೇಕಿಲ್ಲವೇ, ಅಂಥವರು ಹೀಗೆ ಬಾಳಲು ಬಯಸುತ್ತಾರೆ. ಏಕೆಂದರೆ ಇಲ್ಲಿ ಸಂಗಾತಿ ಬಳಿ ಯಾವ ಆಣೆ ಪ್ರಮಾಣ ಮಾಡಬೇಕಿಲ್ಲ, ಸಂಸಾರದ ಜಂಜಾಟವಿಲ್ಲ, ಮಕ್ಕಳು ಮರಿಯ ಗೋಜು ಮೊದಲೇ ಇಲ್ಲ. ಇಲ್ಲಿ ಇಬ್ಬರು ವ್ಯಕ್ತಿಗಳು ಕೇವಲ ಪ್ರೇಮಕಾಮಗಳ ಲಾಭಕ್ಕಾಗಿ ಪರಸ್ಪರ, ಇಷ್ಟಬಂದಷ್ಟು ದಿನ ಒಟ್ಟಿಗಿರಲು ಬಯಸುತ್ತಾರೆ.

ಯಾವ ವ್ಯಕ್ತಿಗೆ ತನ್ನ ಮೊದಲ ಪ್ರೀತಿ ಪ್ರೇಮದಿಂದ ನೆಮ್ಮದಿ ಸಿಗಲಿಲ್ಲವೋ, ಅದರಲ್ಲಿ ಮೋಸ ಹೋಗಿದ್ದರೋ, ಕೇವಲ ಎಂಜಾಯ್‌ ಮಾಡುವುದಕ್ಕಾಗಿ ಇಂಥ ಸಿಚುಯೇಶನ್‌ ಶಿಪ್‌ ಬಯಸುತ್ತಾರೆ.

ಸಿಚುಯೇಶನ್ಶಿಪ್V/S  ರಿಲೇಶನ್ಶಿಪ್

ಇಬ್ಬರು ವ್ಯಕ್ತಿಗಳ ನಡುವೆ ಆಳವಾದ ಪ್ರೀತಿಪ್ರೇಮ ಏರ್ಪಟ್ಟಾಗ ಅವರು ರಿಲೇಶನ್‌ ಶಿಪ್‌ಬಯಸುತ್ತಾರೆ. ಅಂದ್ರೆ ಇಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧಕ್ಕೆ ಪ್ರೀತಿ ಪ್ರೇಮದ ಹೆಸರು ಇರುತ್ತದೆ. ಇಂಥ ಸಂಬಂಧ ಇದ್ದ ಮೇಲೆ, ತಮ್ಮ ಸಂಗಾತಿಯನ್ನು ಮನೆಯವರು, ಆಪ್ತೇಷ್ಟರಿಗೆ ತೋರಿಸಿಕೊಳ್ಳಲು ಬಯಸುತ್ತಾರೆ. ಪರಸ್ಪರ ಬಾಯ್ ಫ್ರೆಂಡ್/ ಗರ್ಲ್ ಫ್ರೆಂಡ್ ಎಂದು ಪರಿಚಯಿಸುತ್ತಾರೆ. ಇಲ್ಲಿ ಇಬ್ಬರು ವಕ್ತಿಗಳ ನಡುವೆ ಪ್ರೀತಿ ಪ್ರೇಮ, ಜವಾಬ್ದಾರಿ ಇದ್ದು ಮುಂದೆ ಉತ್ತಮ ಭವಿಷ್ಯಕ್ಕಾಗಿ ಮದುವೆ ಆಗುತ್ತಾರೆ.

ಪರಸ್ಪರರ ಜೊತೆ ಸದಾ ಕಾಲ ಇರಲು ಬಯಸುತ್ತಾರೆ, ನಿಧಾನವಾಗಿ ಈ ಸಂಬಂಧ ಮದುವೆಯಲ್ಲಿ ಸುಖಾಂತ್ಯ ಕಾಣುತ್ತದೆ. ಇಲ್ಲಿ ಇಬ್ಬರೂ ಪರಸ್ಪರರ ಬಾಂಧವ್ಯಕ್ಕೆ ಬದ್ಧರಾಗಿರುತ್ತಾರೆ, ಅವರ ಪ್ರಶ್ನೆಗೆ ಇವರು ಉತ್ತರಿಸಬೇಕಾದ ಹೊಣೆಗಾರಿಕೆ ಇರುತ್ತದೆ. ಪರಸ್ಪರರ ಅಗತ್ಯಗಳ ಪೂರೈಕೆ, ಜವಾಬ್ದಾರಿಗಳ ನಿರ್ವಹಣೆ ಇಲ್ಲಿ ಅನಿವಾರ್ಯ ಅದೇ ಇಂದಿನ ಡಿಜಿಟಲ್ ಯುಗದಲ್ಲಿ `ಸಿಚುಯೇಶನ್‌ ಶಿಪ್‌’ ಶಬ್ದ ಬಹಳ ಟ್ರೆಂಡ್‌ ನಲ್ಲಿದೆ. ಇದರ ಸ್ಪಷ್ಟ ಅರ್ಥ ಯಾವುದೋ ಸಂದರ್ಭಕ್ಕೆ ಕಟ್ಟುಬಿದ್ದು, ಇಬ್ಬರು ವ್ಯಕ್ತಿಗಳು ಪರಸ್ಪರ ಜೊತೆಗಿರುವ ಸುಖ ಕಾಣುತ್ತಾರೆ. ಇಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಸಹ ಜೊತೆಗೂಡಬಹುದು. ಇಲ್ಲಿನ ಅತಿ ದೊಡ್ಡ ವಿಭಿನ್ನತೆ ಎಂದರೆ, ಇಲ್ಲಿ ಯಾವುದೇ ಪ್ರಾಮಿಸ್‌ ಮಾಡಬೇಕಿಲ್ಲ, ಅಂಥವನ್ನು ನಿಭಾಯಿಸಬೇಕಿಲ್ಲ. ಇಲ್ಲಿ ಇಬ್ಬರೂ ಪರಸ್ಪರರ ಪರ್ಸನಲ್ ವಿಷಯಗಳ ಕುರಿತು ಮಾತನಾಡುವ ಹಾಗೇ ಇಲ್ಲ.

ಯಾವುದೇ ಷರತ್ತುಗಳಿಲ್ಲದೆ, ಖರ್ಚನ್ನು ಹಂಚಿಕೊಳ್ಳುತ್ತಾ ಇಲ್ಲಿ ಇಬ್ಬರೂ ಕಾಲ ಕಳೆಯುತ್ತಾರೆ. ರಿಲೇಶನ್‌ ಶಿಪ್‌ ನಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿಪ್ರೇಮದ ಕಾರಣ ಒಟ್ಟಿಗಿರುತ್ತಾರೆ, ಆದರೆ ಸಿಚುಯೇಶನ್‌ ಶಿಪ್‌ ನಲ್ಲಿ ಇವರು ಕೇವಲ ತಮ್ಮ ಅಗತ್ಯಗಳ ಪೂರೈಕೆಗಾಗಿ ಜೊತೆಗೂಡುತ್ತಾರೆ. ಇಲ್ಲಿ ಇಬ್ಬರೂ ನಾಳಿನ ಭವಿಷ್ಯದ ಬಗ್ಗೆ ಮಾತನಾಡಲು ಹೋಗುವುದೇ ಇಲ್ಲ. ಎಂದೂ ಯಾವತ್ತೂ ನಾಳಿನ ಬಗ್ಗೆ, ತಮ್ಮ  ಕನಸುಗಳ ಬಗ್ಗೆ ಚರ್ಚಿಸುವುದಿಲ್ಲ. ಈ ಸಂಬಂಧ ಎಷ್ಟು ದಿನ ಉಳಿಯಲಿದೆ ಎಂಬುದು ಇಬ್ಬರಿಗೂ ಖಂಡಿತಾ ಗೊತ್ತಿರುವುದಿಲ್ಲ. ಇಲ್ಲಿ ಭಾವನಾತ್ಮಕ ಮತ್ತು ಇಂಟಿಮೆಸಿ ಇರುತ್ತದೆ, ಆದರೆ ಇದು ವೈವಾಹಿಕ ಜೀವನದಂಥ ಆಳಕ್ಕೆ ಎಂದೂ ಇಳಿಯಲಾರದು.

ಇದರ ಲಾಭ ನಷ್ಟಗಳು

ಫ್ಲೆಕ್ಸಿಬಿಲಿಟಿ : ಇಲ್ಲಿ ಫ್ಲೆಕ್ಸಿಬಿಲಿಟಿ ಎಲ್ಲಕ್ಕಿಂತ ಮುಖ್ಯ ಅಂದ್ರೆ ಯಾವ ಆಣೆ, ಪ್ರಮಾಣ, ಬಂಧನದ ಮಾತಿಲ್ಲ. `ನಿನಗಿಷ್ಟ ಬಂದಂತೆ ನೀನಿರು, ನನಗಿಷ್ಟ ಬಂದಂತೆ ನಾನಿರುವೆ,’ ಎನ್ನುವ ಧೋರಣೆಯಷ್ಟೇ ಮುಖ್ಯ. ಯಾರೂ ಯಾವುದರ ಬಗ್ಗೆಯೂ ಪ್ರಶ್ನಿಸುವಂತಿಲ್ಲ, ಅದೆಲ್ಲ ಅವರವರ ಪರ್ಸನಲ್. ಕೆಲವು ದಿನ ಇವೆಲ್ಲ ಬಹಳ ಚೆಂದ ಎನಿಸುತ್ತದೆ. ನಿಮ್ಮ ಮನಸ್ಸಿನ ಪ್ರಕಾರ ಇಲ್ಲಿ ಸಂಬಂಧವನ್ನು ಉಳಿಸಿಕೊಳ್ಳಬಹುದು. ಕಮಿಟ್‌ ಮೆಂಟ್‌ ಇಲ್ಲದೆ ಕನೆಕ್ಷನ್‌ ಉಳಿಸಿಕೊಳ್ಳಲು ಯತ್ನಿಸುತ್ತಾರೆ.

ಒತ್ತಡ ಇಲ್ಲವೇ ಇಲ್ಲ : ಸಿಚುಯೇಶನ್‌ ಶಿಪ್‌ ನಲ್ಲಿ ನಿಮಗೆ ಯಾವುದೇ ಬಗೆಯ ಜವಾಬ್ದಾರಿ ಇಲ್ಲ. ಇಲ್ಲಿ ಹೀಗೆಯೇ ಮಾಡಬೇಕೆಂಬ ಅನಿವಾರ್ಯತೆ ಇಲ್ಲ, ಈ ರೀತಿಯಲ್ಲೇ ಸಂಬಂಧ ಕಾಯ್ದುಕೊಳ್ಳಬೇಕು ಎಂಬ ಅನಿವಾರ್ಯತೆ ಇಲ್ಲ. ಹೀಗಾಗಿ ಇಬ್ಬರಿಗೂ ಯಾವುದೇ ಒತ್ತಡವಿಲ್ಲ. ಮನಸ್ಸಿದ್ದರೆ ಬೇಯಿಸಿ ಊಟ ಮಾಡು, ಇಲ್ಲವೇ ತರಿಸಿ ತಿಂದರೂ ಆಯ್ತು. ಮನಸ್ಸು ಬಂದಂತೆ ಇಲ್ಲಿ ಖುಷಿ ಖುಷಿಯಾಗಿ ಇರಬಹುದು. ಯಾವಾಗ ಸಾಕಾಯ್ತೋ, ಸೋ ಕಾಲ್ಡ್ ಸಂಗಾತಿಗೆ ಹೇಳಿ, ಸೂಟ್‌ ಕೇಸ್‌ ಎತ್ತಿಕೊಂಡು ಹೊರಡಬಹುದು. ತಮ್ಮದೇ ಆದ ವೈಯಕ್ತಿಕ ಪ್ರಾಥಮಿಕತೆಗಳನ್ನು ಇಟ್ಟುಕೊಂಡು, ಬೇರೆಯವರ ಬಳಿ ಅದನ್ನು ಚರ್ಚಿಸಲು ಬಯಸದವರಿಗೆ ಇದು ಸರಿ. ಯಾರು ತಮ್ಮ ಕೆರಿಯರ್‌ ಯಾವ ಲೈಫ್‌ ಸ್ಟೈಲ್ ‌ಜೊತೆ ಕಾಂಪ್ರಮೈಸ್‌ ಆಗಬಯಸುವುದಿಲ್ಲವೋ, ಬೇರೆಯವರಿಗಾಗಿ ತಮ್ಮ ಜೀವನಶೈಲಿ, ಉದ್ದೇಶ ಬದಲಿಸಲು ಇಷ್ಟವಿಲ್ಲವೋ ಅಂಥವರಿಗೆ ಮಾತ್ರ ಇದು ಸರಿ.

ನಷ್ಟ : ಯಾವ ಜವಾಬ್ದಾರಿಗಳ ಜಂಜಾಟ ಇರದ ಕಾರಣ, ಈ ಸ್ಥಿತಿ ಸುಖದ ಪರಾಕಾಷ್ಠೆ ಎನಿಸಬಹುದಾದರೂ, ಇದು ಅಷ್ಟೇ ಅತಂತ್ರ, ಕಠಿಣಕರ ದಾರಿ ಆಗಿದೆ. ಇದರಲ್ಲಿ ಅಡಿಗಡಿಗೂ ಎಚ್ಚರಿಕೆಯ ಹೆಜ್ಜೆ ಇಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಲ್ಲಿ ಎಲ್ಲಕ್ಕಿಂತ ಕಷ್ಟಕರ ಸ್ಥಿತಿ ಎಂದರೆ, ಸಂಗಾತಿಗಳಲ್ಲಿ ಒಬ್ಬರು, ಇದ್ದಕ್ಕಿದ್ದಂತೆ ಸೀರಿಯಸ್‌ ಆಗಿ, ಮದುವೆ ಆಗಲೇಬೇಕು ಎಂದು ಬಯಸುವ ಸಂದರ್ಭ.

ಜಿ. ಪಂಕಜಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ