– ರಾಘವೇಂದ್ರ ಅಡಿಗ ಎಚ್ಚೆನ್.
ಕಾಲಿವುಡ್ ಖ್ಯಾತ ನಟ ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಪತ್ನಿ ಸಂಗೀತಾ ಅವರು 27 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಚೆಂಗಲ್‌ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಫೆಬ್ರವರಿ 27ರಂದು ಸಂಗೀತಾ ಡಿವೋರ್ಸ್ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ವಿಜಯ್ ಅವರಿಗೆ ನಟಿಯೊಬ್ಬರೊಂದಿಗೆ ಅನೈತಿಕ ಸಂಬಂಧ ಇದೆ ಎಂದು ಅವರು ಆರೋಪಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನ್ಯಾಯಾಲಯದ ವಿಚಾರಣೆ ವೇಳೆ ಹೆಚ್ಚಿನ ವಿವರಗಳು ಹೊರಬರುವ ಸಾಧ್ಯತೆ ಇದೆ.
ಇದುವರೆಗೆ ವಿಜಯ್ ಮತ್ತು ಸಂಗೀತಾ ವೈಯಕ್ತಿಕ ಜೀವನ ಬಹುತೇಕ ಗೌಪ್ಯವಾಗಿಯೇ ಇತ್ತು. ಆದರೆ ಇತ್ತೀಚೆಗೆ ವಿಜಯ್ ಅವರೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ಪತ್ನಿಯೇ ಆರೋಪ ಮಾಡಿರುವ ಹಿನ್ನೆಲೆ, ಈ ವಿಷಯ ಚರ್ಚೆಗೆ ಕಾರಣವಾಗಿದೆ.
ಸಿನಿಮಾಗಿಂತ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ವಿಜಯ್, ತಮ್ಮ ಮುಂದಿನ ಹೆಜ್ಜೆ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಅವರ ಅಭಿನಯದ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿರುವ ಜನ ನಾಯಗನ್ ಇನ್ನೂ ಬಿಡುಗಡೆಯಾಗಬೇಕಿದೆ. ಆ ಚಿತ್ರ ಬಳಿಕ ಅವರು ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಆದರೆ ಈ ವಿಚ್ಛೇದನ ಹಾಗೂ ಅನೈತಿಕ ಸಂಬಂಧದ ಆರೋಪಗಳು ವಿಜಯ್ ಅವರ ರಾಜಕೀಯ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಕಾದು ನೋಡಬೇಕಿದೆ.





