ಮಿನಿ ಕಥೆ ಉಮಾ ಶೂರ್ಪಾಲಿ

ಮದುವೆ ಎಂದರೆ ಅದು ಬಂಧನ ಮಾತ್ರವಲ್ಲದೆ, ಹೆಣ್ಣಿನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕುತ್ತು ಎಂದೇ ಭಾವಿಸಿದ್ದ ಶರಧಿ, ತನ್ನ ತಪ್ಪನ್ನು ಅರಿತು ಅನುರಾಗದ ಅನುಬಂಧವನ್ನು ಮತ್ತೆ ಒಪ್ಪಿದ್ದು ಹೇಗೆ……?

`ಮದುವೆಯ ಈ ಬಂಧ ಅನುರಾಗದ ಅನುಬಂಧ…. ಏಳೇಳು ಜನುಮದಲೂ ತೀರದ ಸಂಬಂಧ….’ ಎಂದು ರೇಡಿಯೋದಲ್ಲಿ ತೇಲಿ ಬರುತ್ತಿದ್ದ ಹಾಡನ್ನು ತನ್ಮಯಳಾಗಿ ಕೇಳುತ್ತಿದ್ದ ಶರಧಿ ತನಗಾದ ದುಃಖವನ್ನು ತಡೆಯಲಾಗದೆ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಯುವ ವ್ಯರ್ಥ ಪ್ರಯತ್ನ ಮಾಡುತ್ತಲೇ ನಿದ್ರೆಗೆ ಜಾರಿದಳು.

`ಅಭಿ, ನನ್ನನ್ನು ಕ್ಷಮಿಸಿಬಿಡು ಪ್ಲೀಸ್‌…. ಪ್ಲೀಸ್‌….! ಇನ್ನೆಂದೂ ನಿನ್ನ ಮನಸ್ಸನ್ನು ನೋಯಿಸಲ್ಲ ಕಣೋ,’ ಎಂದು ಕನವರಿಸುತ್ತಿದ್ದಳು.

ಮಗಳ ಈ ಪರಿಸ್ಥಿತಿಯನ್ನು ನೋಡಿ ಕನಿಕರದಿಂದ ಅವಳ ತಲೆ ನೇವರಿಸುತ್ತಲೇ ಅಭಿಗೆ ಕಾಲ್ ‌ಮಾಡಲು ಮುಂದಾದಳು ಗೌರಿ. “ಹಲೇ ಅಭಿ….. ಹಲೇ ಕೇಳಿಸ್ತಾ ಇದ್ಯಾ…..?”

“ಹಲೋ ಅತ್ತೆ…. ಹ್ಞಾಂ ಕೇಳಿಸ್ತಿದೆ ಅತ್ತೆ… ಶರಧಿ ಈಗ ಹೇಗಿದ್ದಾಳೆ….?”

“ಈಗಷ್ಟೇ ಮಲಗಿದ್ದಾಳಪ್ಪ…. ನಿದ್ದೆಯಲ್ಲೂ `ಕ್ಷಮಿಸಿಬಿಡು ಅಭಿ….’ ಅಂತ ಕನವರಿಸ್ತಿದ್ದಾಳೆ ಕಣೋ…..!”

“ಅತ್ತೆ….!?”

“ಹೌದು ಅಭಿ ನೀವಿಬ್ಬರೂ ನನ್ನೆರಡು ಕಣ್ಣುಗಳಿದ್ದಂತೆ. ಯಾವ ಕಣ್ಣಿಗೆ ನೋವಾದರೂ ನನಗೆ ಸಹಿಸೋಕಾಗಲ್ಲ. ನೀನು ಒಂದು ಸಲ ಬಂದು ಅವಳನ್ನು ಪ್ರೀತಿಯಿಂದ ಮಾತನಾಡಿಸಿ ಹೋಗಪ್ಪ…..”

“ಅತ್ತೆ…..!?”

“ಹೌದು ಅಭಿ, ಏನೋ ಸ್ನೇಹಿತರ ಸಹವಾಸದಲ್ಲಿ ಬಿದ್ದು ಮದುವೆ ಎಂದರೆ ಬಂಧನವೆಂದು ತಿಳಿದು ಲಂಗು ಲಗಾಮಿಲ್ಲದೇ, ತನ್ನ ಜೀವನ ತನಗಿಷ್ಟ ಬಂದಂತೆ ಬದುಕುವೆ, ಸ್ವಾವಲಂಬಿ ತಾನು ದುಡಿದದ್ದು ತನ್ನಿಷ್ಟದಂತೆ ವ್ಯಯಿಸುವ ಅಧಿಕಾರವಿದೆ ಎಂದೆಲ್ಲಾ ಅವಳು ನಡೆದುಕೊಂಡ ರೀತಿಗೆ ತುಂಬಾನೇ ದುಃಖಿಸುತ್ತಿದ್ದಾಳೆ,” ಎಂದಳು ಗೌರಿ.

“ಸರಿ ಅತ್ತೇ ನನಗೂ ಶರಧಿ ಅಂದ್ರೆ ಪ್ರಾಣ. ಅವಳನ್ನು ಅರೆಕ್ಷಣ ಬಿಟ್ಟು ಇರೋಕಾಗ್ತಿಲ್ಲ….! ಆದರೆ ನನ್ನ ಅತಿಯಾದ ಪ್ರೀತಿ, ಕಾಳಜಿಯೇ ಅವಳಿಗೆ ಬೇಡವಾಗಿ ಈ ಬಂಧನದಿಂದ ಮುಕ್ತಳಾಗಬೇಕು ಎಂದು ಬಯಸಿದ್ದು ವಿಪರ್ಯಾಸ ಅತ್ತೆ…. ನಾನು ನಾಳೆ ಬೆಳಗ್ಗೆನೇ ಬರ್ತೀನಿ. ಗುಡ್‌ ನೈಟ್‌…” ಹೇಳಿ ಫೋನಿಟ್ಟ.

ಮರುದಿನ ಗೌರಿ ಮುದ್ದಿನ ಅಳಿಯನಿಗಾಗಿ ಗರಿ ಗರಿಯಾದ ಮಸಾಲದೋಸೆ, ರುಚಿಕರ ಗಜ್ಜರಿ ಹಲ್ವಾ ತಯಾರಿಸಿ, ಮನೆಯನ್ನು ಒಪ್ಪ ಓರಣವಾಗಿ ಜೋಡಿಸಿಟ್ಟು ಪ್ರೀತಿಯಿಂದ ಶರಧಿಯನ್ನು ಎಬ್ಬಿಸಿದಳು.

ಕಾಲಿಂಗ್‌ ಬೆಲ್ ‌ಕೇಳಿಸುತ್ತಲೇ, “ಬೇಗ ಸ್ನಾನ ಮುಗಿಸಿ ಬಾ ಕಂದ…. ತಿಂಡಿ ರೆಡಿ ಮಾಡ್ತೀನಿ,” ಎನ್ನುತ್ತಾ ಬಾಗಿಲು ತೆರೆದಳು. ಎದುರಿಗೆ ಮನ್ಮಥನಂತೆ ಮಿನುಗುವ ಕಂಗಳ ಸುರಸುಂದರಾಂಗ ಅಭಿಯನ್ನು ನೋಡಿ ಖುಷಿಯಿಂದ, “ಬಾ ಅಭಿ…. ಒಳಗೆ ಬಾ….!” ಎಂದು ಬೇಕೆಂದೇ ಜೋರಾಗಿ ಹೇಳಿದಳು.

ಅಭಿ ಎಂಬ ಹೆಸರನ್ನು ಕೇಳಿ ಶರಧಿಯ ಮನದಲ್ಲಿ ಪ್ರೇಮದಲೆಗಳು ಉಕ್ಕಿ ಬಂದವು. ಒಳಗಿನಿಂದಲೇ ಇಣುಕಿ ನೋಡಿ ಅವನನ್ನು ಕಣ್ತುಂಬಿಕೊಳ್ಳುತ್ತಾ ಅವನಿಗಿಷ್ಟವಾದ ಗಾಢ ನೀಲಿ ಬಣ್ಣದ ಸೀರೆಯುಟ್ಟು ಬಂದಳು.

ಒಂದು ಕ್ಷಣ ಇಬ್ಬರ ಕಣ್ನೋಟಗಳೂ ಒಂದಾದಾಗ ಇಹಪರದ ಅರಿವು ಇರದಂತೆ ಆನಂದಬಾಷ್ಪ ಮಿನುಗಿತು.

“ಅಭಿ, ಶರಧಿ ಇಬ್ರೂ ಬನ್ನಿ ತಿಂಡಿ ರೆಡಿಯಾಗಿದೆ ತಿನ್ನುವಿರಂತೆ. ನನಗೆ ತೋಟದಲ್ಲಿ ಸ್ವಲ್ಪ ಕೆಲಸವಿದೆ. ಅಲ್ಲಿಯವರೆಗೂ ನೀವಿಬ್ಬರೂ ಮಾತಾಡ್ತಿರಿ,” ಎನ್ನುತ್ತಾ ಗೌರಿ ದೋಸೆ ತಿಂದ ಶಾಸ್ತ್ರ ಮಾಡಿ ಎದ್ದು ಹೋದಳು.

ಇದೇ ಸಮಯಕ್ಕೆ ಕಾಯುತ್ತಿದ್ದ ಶರಧಿ ಅಭಿಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಬಿಗಿದಪ್ಪಿಕೊಂಡು, “ಅಭಿ ಪ್ಲೀಸ್‌…. ನನ್ನ ಕ್ಷಮಿಸಿಬಿಡು ಪ್ಲೀಸ್‌…. ಪ್ಲೀಸ್‌ ಅಭಿ…..” ಎಂದಳು.

“ಅಮ್ಮ ಹೇಳಿದಂತೆ ಶಾಸ್ತ್ರೋಕ್ತವಾಗಿ ನಡೆದ ಮದುವೆ ಎನ್ನುವ ಈ ಮಧುರ ಬಾಂಧವ್ಯದ ಅರಿವು ನನಗಾಗಿದೆ. ನೀನು ತೋರಿದ ಪ್ರೀತಿ ಮತ್ತು ಕಾಳಜಿಯನ್ನು ನನ್ನ ಕೈಗೆ ತೊಡಿಸಿದ ಬಂಧವೆಂದು ಅಪಾರ್ಥ ಮಾಡಿಕೊಂಡು ಸ್ವೇಚ್ಛೆಯಾಗಿ ಬದುಕುವುದೇ ಹೆಣ್ಣಿನ ಪಾಲಿಗೆ ಸ್ವಾತಂತ್ರ್ಯವೆಂದು ಭಾವಿಸಿದ್ದೆ. ನಿನ್ನ ಮಾತನ್ನು ಮೀರಿ ನಾನಂದು ಸ್ನೇಹಿತರ ಜೊತೆಗೆ ಪಾರ್ಟಿಗೆ ಹೋದೆ. ಅಲ್ಲಿ  ತಿಳಿಯದೇ ಕೋಲ್ಡ್ ಡ್ರಿಂಕ್ಸ್ ನೆಪದಲ್ಲಿ ಮದ್ಯಪಾನ ಮಾಡಿ ಸ್ಥಿಮಿತ ಕಳೆದುಕೊಂಡು ಬಿದ್ದಿದ್ದೆ. ನನ್ನ ಪರಿಸ್ಥಿತಿಯ ದುರ್ಲಾಭ ಪಡೆಯಲೆತ್ನಿಸಿದ ಇತರರನ್ನು ನೀನು ಸದೆಬಡಿದು ನನ್ನನ್ನು ರಕ್ಷಿಸಿದ್ದನ್ನು ನೆನೆದರೆ ಈಗಲೂ ಮೈ ಜುಮ್ ಎನ್ನುತ್ತೆ,” ಎಂದು ಜೋರಾಗಿ ಅಳುತ್ತಲೇ ಅಭಿಯ ಎದೆಗೊರಗಿದಳು.

“ಶರಧಿ ಆದದ್ದಾಯ್ತು, ಈಗ್ಯಾಕೆ ಆ ದುರ್ಘಟನೆಯನ್ನು ಮತ್ತೇ ನೆನೆಪು ಮಾಡ್ಕೋತೀಯಾ….? ಅದನ್ನೆಲ್ಲ ಒಂದು ಕೆಟ್ಟ ಕನಸು ಅಂತ ಮರೆತುಬಿಡು,” ಎಂದು ಪ್ರೀತಿಯಿಂದ ಅಂಗೈಯಲ್ಲಿ ಅವಳ ಮುಖವನ್ನು ಹಿಡಿದುಕೊಂಡು ಹಣೆಗೆ ಹೂ ಮುತ್ತನ್ನಿಟ್ಟಾಗ ಕವಿದ ಇಬ್ಬನಿಯೆಲ್ಲ ಕರಗಿ ನೀರಾಯ್ತು.

ಈಗ ಹಿಂದಿನಿಂದಲೇ ಬಂದ ಗೌರಿ ಸಂತೋಷದಿಂದ ಮಗಳು ಅಳಿಯನಿಗೆ, “ಮದುವೆ ಎನ್ನುವುದು ಬಂಧನವಲ್ಲ, ಜೀವ ಭಾವಗಳ ಬೆಸುಗೆ. ಅನುರೂಪ ದಾಂಪತ್ಯ ಎಂಬುದು ಪರಸ್ಪರ ಅವಿನಾಭಾವ ಸಂಬಂಧದಿಂದ ಕೂಡಿದ ಸುಮಧುರ ಒಲುಮೆಯ ಪಯಣ. ಗಂಡನ ಪ್ರೀತಿಪೂರ್ವಕ ಜವಾಬ್ದರಿ ಮತ್ತು ಹೆಂಡತಿಯ ವಾತ್ಸಲ್ಯಭರಿತ ಕಾಳಜಿಯಿಂದ ಮಾತ್ರ ಅನುರಾಗದ ಅನುಬಂಧವನ್ನು ಸೃಷ್ಟಿಸಿ ಸುಭದ್ರವಾಗಿ ಇರಿಸಿಕೊಳ್ಳಬಹುದು,” ಎಂದು ಇಬ್ಬರನ್ನೂ ನೂರಾರು ಕಾಲ ಸುಖವಾಗಿರಿ ಎಂದು ಶುಭಾಶೀರ್ದಿಸಿದಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ