ಅಮಿತ್ : ನಿನ್ನ ಹೆಂಡತಿ ನಿನ್ನನ್ನು ಬಿಟ್ಟು ಏಕೆ ಓಡಿ ಹೋದಳು?
ಅರುಣ್ : ಏನೋಪ್ಪ ಗೊತ್ತಿಲ್ಲ…. ನಾನು ಬಾತ್ ರೂಮಿಗೆ ಸ್ನಾನಕ್ಕೆಂದು ಹೋಗಿದ್ದೆ. ಬಂದು ನೋಡ್ತೀನಿ…. ಓಡಿ ಹೋಗಿಬಿಟ್ಟಿದ್ದಾಳೆ!
ಅಮಿತ್ : ಬಹಳ ದಿನಗಳಿಂದ ನೀನು ಸ್ನಾನಕ್ಕೆ ಹೋಗಲಿ ಅಂತ ಕಾಯ್ತಿದ್ದಳೋ ಏನೋ….ಅಲ್ವಾ…. ನೀನು ಸೋಮಾರಿ ಸೋಫಾ ಬಿಟ್ಟು ಮೇಲೆ ಏಳೋದೇ ಇಲ್ಲ.
ಅರುಣ್ : ಅದಕ್ಕೆ ಮತ್ತೆ…. ಶುಚಿತ್ವ, ಶುಭ್ರತೆ, ಹೈಜೀನ್ ಅಂತೆಲ್ಲ ತಲೆ ಕೆಡಿಸಿಕೊಳ್ಳಬಾರದು ಅಂತ ಅನ್ನೋದು!
ಇಬ್ಬರು ಸಿನಿಮಾ ನಟರ ಪತ್ನಿಯರು ಮಾತುಕಥೆಯಲ್ಲಿ ತೊಡಗಿದ್ದರು. ಒಬ್ಬಳು ಹೇಳಿದಳು, “ನನ್ನ ಪತಿ ಸತತ ಕೆಲಸ ಕಾರ್ಯಗಳಿಂದ ವಿಶ್ರಾಂತಿ ಒಂದು ತಿಂಗಳ ರಜೆ ಪಡೆದಿದ್ದಾರೆ. ನಾವು ವಿಶ್ವ ಪರ್ಯಟನೆಗೆ ಹೊರಟಿದ್ದೇವೆ!”
“ಹ್ಞೂಂ….. ಅದೇನೋ ಸರಿ. ನಾವು ಸಹ ರಜೆಯ ಮಜಾ ಪಡೆಯಬೇಕೆಂದು ಇದ್ದೇವೆ. ಆದರೆ ನಿಮ್ಮ ತರಹ ನಾವು ಒಂದೇ ಕಡೆ ವರ್ಲ್ಡ್ ಟೂರ್ ಅಂತ ಹೋಗೋಲ್ಲಪ್ಪ…? ಭಾರತವಿಡೀ ಬೇರೆ ಬೇರೆ ಊರುಗಳನ್ನು ಸುತ್ತಾಡಿ ಬರುತ್ತೇವೆ,” ಇನ್ನೊಬ್ಬಳು ಥಟ್ಟನೆ ಹೇಳಿದಳು.
ಪತಿ : ಈ ವಿಷಯ ನಂಬಲಾಗದ ಸತ್ಯವಾಗಿದೆ. ಇದರ ವಾಸ್ತವಿಕ ಸಂಗತಿಯನ್ನು ಅಲ್ಲಗಳೆಯಲು ಆಗುವುದಿಲ್ಲ. ಯೂರೋಪಿನ ಒಬ್ಬ ವಿದ್ವಾಂಸರು ಬರೆಯುತ್ತಾರೆ, “ಯಾವ ವ್ಯಕ್ತಿ ಮಹಾ ಕಡು ಮೂರ್ಖರಾಗಿರುತ್ತಾನೋ, ಅವನಿಗೆ ಅಷ್ಟೇ ಚೆಂದುಳ್ಳಿ ಚೆಲುವೆಯಾದ ಹೆಂಡತಿ ಸಿಗುತ್ತಾಳಂತೆ….”
ಪತ್ನಿ : ಅಯ್ಯೋ…. ಹೋಗ್ಲಿ ಬಿಡಿ ಅಂದ್ರೆ… ಸುಮ್ಮ ಸುಮ್ಮನೇ ನನ್ನನ್ನು ಹೊಗಳುತ್ತಿರುವುದು ಅಂದ್ರೆ ನಿಮಗೆ ತುಂಬಾ ಇಷ್ಟ ಅಂತ ನನಗೆ ಗೊತ್ತಿಲ್ಲವೇ….?
ಪ್ರಭಾ : ನನ್ನ 4 ವರ್ಷದ ಮಗ ಈ ದಿನ ವಜ್ರದ ಉಂಗುರ ನುಂಗಿಬಿಟ್ಟ. ಈಗ ಅವನ ಆಪರೇಷನ್ ಮಾಡಿಸಬೇಕಿದೆ. ಇಲ್ಲಿಗೆ ಹೊಸದಾಗಿ ಬಂದಿದ್ದಾರಲ್ಲ ಡಾ. ವಿನಯ್, ಅವರ ಕೈಗುಣ ಹೇಗಿದೆ?
ವಿಭಾ : ಕೈಗುಣದ ಬಗ್ಗೆ ಗೊತ್ತಿಲ್ಲ….. ಅವರಿಗೆ ತುಂಬಾ ಮರೆತಂತೆ, ಆಪರೇಷನ್ ಗೆ ಹೇಳಿದರೆ ಮಾತ್ರ, ಮೇಜಿನ ಮೇಲೆ ಇರಿಸಿದ್ದ ಕತ್ತಿ, ಚಾಕು ಸಂಖ್ಯೆ ಸರಿಯಾಗಿದೆ ತಾನೇ ಅಂತ ಚೆಕ್ ಮಾಡಿಕೊಳ್ಳಬೇಕಂತೆ. ಆಮೇಲೆ ರೋಗಿಗೆ ಹೊಟ್ಟೆನೋವು ಬಂದುಬಿಟ್ಟೆ?
ಮಹೇಂದ್ರ ತನ್ನ ಗೆಳೆಯ ಮಹೇಶನ ಮದುವೆಯ ವಾರ್ಷಿಕೋತ್ಸವಕ್ಕೆ 5,000/ ರೂ. ಬೆಲೆ ಬಾಳುವ ಒಂದು ಅದ್ಭುತವಾದ ಮಾತನಾಡು ಗಿಣಿಯನ್ನು ಉಡುಗೊರೆಯಾಗಿ ತಂದುಕೊಟ್ಟ. ಕೆಲವು ದಿನಗಳ ನಂತರ ಮಹೇಶನ ಮನೆಗೆ ಬಂದ ಮಹೇಂದ್ರ ಕೇಳಿದ, “ನಾನು ಕೊಟ್ಟ ಉಡುಗೊರೆ ಹಿಡಿಸಿತೇ?”
ಅದಕ್ಕೆ ಮಹೇಶ, “ಬಹಳ ಹಿಡಿಸಿತು… ಆದರೆ ಪೆದ್ದಿ, ನನ್ನ ಹೆಂಡತಿ ಸ್ವಲ್ಪ ಉಪ್ಪು ಹಾಕಿ ಹಾಕಿಬಿಟ್ಟಿದ್ದಳು!” ಮಹೇಂದ್ರ ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ!
ಸುರೇಶ : ಅಲ್ಲಯ್ಯ, ನಿನ್ನ ಕೈಗಳೇಕೆ ಇಷ್ಟೊಂದು ಕಪ್ಪಾಗಿವೆ….?
ರಾಜೇಶ : ತವರಿಗೆ ಹೊರಟು ನಿಂತಿದ್ದ ನನ್ನ ಹೆಂಡತಿಯನ್ನು ರೈಲು ಹತ್ತಿಸಿ ಈಗ ತಾನೇ ಸೀದಾ ಅಲ್ಲಿಂದಾನೇ ಬರ್ತಿದ್ದೀನಿ!
ಸುರೇಶ : ಅದಕ್ಕೂ ಇದಕ್ಕೂ ಏನಯ್ಯಾ ಸಂಬಂಧ?
ಮಹೇಶ : ರೈಲಿಗೆ ಅದೇನೋ ಸ್ಟಾರ್ಟಿಂಗ್ ಟ್ರಬ್ ಆಗಿ ಹೊರಡಲೇ ಇಲ್ಲ. ನನಗೆ ಒಂದು ವಾರವಾದರೂ ನೆಮ್ಮದಿ ಇರಲಿ ಅಂತ ಕಷ್ಟಪಟ್ಟು ಮಸಿಹಿಡಿದ ಎಂಜಿನ್ ನ್ನು ತಳ್ಳೀ ತಳ್ಳಿ ರೈಲನ್ನು ಸ್ಟಾರ್ಟ್ ಮಾಡಿಸಿದೆ ಕಣಯ್ಯ!
ನವ ವಿವಾಹಿತ ಪತಿ : ನಮ್ಮ ಮದುವೆ ಆಗಿ ಆಗಲೇ 24 ಗಂಟೆಗಳು ಆಗಿಹೋಗಿವೆ!
ನವ ವಿವಾಹಿತ ಪತ್ನಿ : ಹೌದಲ್ವೇ….? ನನಗಂತೂ ನಿನ್ನೆ ತಾನೇ ಮದುವೆ ಆದ ಹಾಗಿತ್ತು!
ಸೀಮಾ : ಈ ಅಂಚೆ ಕಛೇರಿಯವರು ಬಹಳ ಗಡಿಬಿಡಿ ಮಾಡಿಬಿಡುತ್ತಾರಮ್ಮ.
ರಮಾ : ಯಾಕೆ….? ಏನಾಯ್ತು…..?
ಸೀಮಾ : ಆಫೀಸ್ ಕೆಲಸದ ಮೇಲೆ ನನ್ನ ಪತಿ 1 ವಾರ ಮುಂಬೈಗೆ ಹೊರಟಿದ್ದರು. ಅಲ್ಲಿಂದಲೇ ನನ್ನ ಯೋಗಕ್ಷೇಮಕ್ಕಾಗಿ ಆಗಾಗ ಕಾಗದ ಬರೆಯುತ್ತಿರುತ್ತಾರೆ. ಆದರೆ ಈ ಅಂಚೆ ಕಛೇರಿಯವರು ತಮ್ಮ ಗಡಿಬಿಡಿಯಲ್ಲಿ ಅದಕ್ಕೆ ಚೆನ್ನೈ ನಗರದ ಮುದ್ರೆ ಒತ್ತಿಬಿಡುವುದೇ?
ಪ್ರಿಯಕರ : ಪ್ರಿಯೆ, ನಾನು ಬೆಳಗ್ಗೆ ಎದ್ದೊಡನೆ ಸದಾ ನಿನ್ನದೇ ಯೋಚನೆಯಲ್ಲಿ ಮುಳುಗಿರುತ್ತೇನೆ.
ಪ್ರೇಯಸಿ : ಹೌದು, ಎದುರಿನ ಮಹಡಿ ಮನೆ ಅನೂಪ್ ಸಹ ಇದನ್ನೇ ಹೇಳುತ್ತಿರುತ್ತಾನೆ.
ರತ್ನಾ ತನ್ನ 3 ವರ್ಷದ ಮಗುವನ್ನು ತಟ್ಟಿ ಮಲಗಿಸುತ್ತಿದ್ದಳು. ನಿದ್ದೆ ಮಾಡಲು ಅದು ಬಹಳ ಹಠ ಮಾಡುತ್ತಿತ್ತು. ಮಗುವನ್ನು ರಮಿಸುತ್ತಾ ರತ್ನಾ, “ಮಗು…. ಬೇಗ ನಿದ್ದೆ ಮಾಡಮ್ಮಾ… ಇಲ್ಲದಿದ್ದರೆ ಹಿತ್ತಲ ಬಾಗಿಲಿನಿಂದ ಕಳ್ಳ ಬಂದು ಬಿಡ್ತಾನೆ…. ಅಷ್ಟೇ….!”
ಅದಕ್ಕೆ ಮಗು ಸುಮ್ಮನಿರಬೇಕು ತಾನೇ? “ನನ್ನ ಬಳಿ ನೆಕ್ಲೇಸ್ ಇಲ್ಲ, ಹೋಗಲಿ ಅಂದ್ರೆ ಬಂಗಾರದ ಬಳೆಗಳೂ ಇಲ್ಲ. ಎದುರು ಮನೆ ಮಾಲತಿ ಹತ್ತಿರ ಅಲ್ಲೆಲ್ಲ ಧಂಡಿಯಾಗಿ ಇವೆ ಅಂತ ಅಪ್ಪನ ಹತ್ತಿರ ಸದಾ ಜಗಳ ಆಡ್ತೀಯಲ್ಲಮ್ಮ…. ಮತ್ತೇ ಕಳ್ಳ ನಮ್ಮ ಮನೆಗೆ ಹೇಗೆ ಬರ್ತಾನೆ? ಅವನು ಮಾಲತಿ ಆಂಟಿ ಮನೆಗೆ ಹೋಗ್ತಾನೆ ಬಿಡು!” ಅನ್ನುವುದೇ?
ವರದಿಗಾರ : ಮೇಡಂ…. ಹೊಸ ಸಿನಿಮಾದಲ್ಲಿ ನಿಮ್ಮ ನಟನೆ ಸೂಪರ್! ಇಷ್ಟು ಚಿತ್ರಗಳಲ್ಲಿ ನಟಿಸಿದ್ದೀರಿ… ಆದರೆ ತಾವೇಕೆ ಇನ್ನೂ ಮದುವೆ ಆಗಿಲ್ಲ…..?
ನಟೀಮಣಿ : ನಾನು ನನ್ನ ತಾಯಿಯ ನಟನೆಯನ್ನು ಮಾತ್ರವಲ್ಲದೆ, ಆಕೆಯ ಆದರ್ಶ ಜೀವನವನ್ನೂ ಸಹ ಕಾಯಾ ವಾಚಾ ಮನಸಾ ಪರಿಪಾಲಿಸುತ್ತಿದ್ದೇನೆ!
ಡಾಕ್ಟರ್‌ತಮ್ಮ ಕೊಠಡಿಯಿಂದ ಬಿರಬಿರನೆ ಹೊರಬಂದು ತಮ್ಮ ಸಹಾಯಕಿಯನ್ನು ಒಂದು ದೊಡ್ಡ ಸ್ಕ್ರೂ ಡ್ರೈವರ್ ಕೊಡುವಂತೆ ಕೇಳಿದರು. 10 ನಿಮಿಷ ಬಿಟ್ಟು ಮತ್ತೆ ಅಲ್ಲಿಂದ ಓಡಿ ಬಂದವರೇ, ಒಂದು ಉಳಿ…. ಸುತ್ತಿಗೆ ಕೊಡುವಂತೆ ಬಡಬಡಿಸಿದರು.
ಇದನ್ನೆಲ್ಲ ನೋಡುತ್ತಾ ಕ್ಲಿನಿಕ್ ನ ಹೊರ ಕೊಠಡಿಯಲ್ಲಿ ಕಾಯುತ್ತಿದ್ದ ನಾಣಿ ಗಾಬರಿಯಿಂದ ಅವರನ್ನು ವಿಚಾರಿಸಿಕೊಂಡ,” ಅಂದ್ರೆ…. ನನ್ನ ಹೆಂಡತಿಯ ಸ್ಥಿತಿ ಬಹಳ ಸೀರಿಯಸ್ ಅನ್ಸುತ್ತೆ…. ಅಲ್ಲವೇ ಸಾರ್?”
ಡಾಕ್ಟರ್ ತಮ್ಮ ಹಣೆಯ ಬೆವರನ್ನು ಒರೆಸಿಕೊಳ್ಳುತ್ತಾ ಹೇಳಿದರು, “ಇದುವರೆಗೂ ಇನ್ನೂ ಏನೂ ತಿಳಿಯಲಿಲ್ಲ. ಮೊದಲು ನಾನು ನನ್ನ ಬ್ರೀಫ್ ಕೇಸ್ ತೆರೆಯಬೇಕಲ್ಲ…..?”
ಒಡತಿ : ಯಾಕೆ ಕೆಂಪಿ, 10ನೇ ತಾರೀಕು ಬಂದರೂ ಈ ತಿಂಗಳ ಸಂಬಳದ ಹಣ ನೀನು ಕೇಲೇ ಇಲ್ಲವಲ್ಲ….?
ಕೆಂಪಿ : ಮರ್ವಾದಸ್ತ ಎಂಗ್ಸಾಗಿ ನಾನು ಅಂಗೆಲ್ಲ ಬೇರೋರ ತವಾ ಅಣ ಕೇಳಾಕಿಲ್ಲ ಬುಡಿ!
ಒಡತಿ : ಹಾಗೆಲ್ಲ ಕಣೆ, ನೀನು ಹೀಗೆ ಎಷ್ಟು ದಿನ ಆದ್ರೂ ಕೇಳದೆ ಇದ್ರೆ ಬೇರೆ ಮನೆ ಹೆಂಗಸರು ನಿನಗೆ ಸಂಬಳ ಕೊಡದೆ ಮರೆತೇ ಹೋಗ್ತಾರೆ, ಅಷ್ಟೆ!
ಕೆಂಪಿ : ರವಷ್ಟು ದಿನ ತಡ್ಕೊಂದು ನೋಡ್ತೀನಿ, ಆಮ್ಯಾಕೆ ಆ ಯಮ್ಮಂಗೆ ಮರ್ವಾದೆ ಇಲ್ಲ ಅಂತ ಬಾಯಿಬಿಟ್ಟು ಕೇಳ್ತಿವ್ನಿ, ಅಷ್ಟೇಯ!
ಕಮಲಮ್ಮ : ಏನ್ರಿ ವಿಮಲಾ, ಬಹಳ ಬೇಸರ ಮಾಡಿಕೊಂಡಿದ್ದೀರಿ, ಏನಾಯ್ತು…. ಏನು ಸಮಾಚಾರ?
ವಿಮಲಮ್ಮ : ನಮ್ಮ ಮನೆಯವರ ಅಡುಗೆ ಕೈ ರುಚಿಗೆ ಬಡ್ಕೊಂಡ್ರು…. ಮದುವೆಯಾಗಿ 15 ವರ್ಷ ಆಯ್ತು, ಏನೋ ಅವಸರದಲ್ಲಿ ಹಸಿಬಿಸಿಯಾಗಿ ಅಡುಗೆ ಮಾಡಿಟ್ಟು ಆಫೀಸಿಗೆ ಓಡುತ್ತಾರೆ, ಒಂದು ರುಚಿಯಿಲ್ಲ… ಪಚಿಯಿಲ್ಲ…. ಏನೂಂತ ತಿನ್ನುದೋ? ನಾನಾಗಿರೋ ಹೊತ್ತಿಗೆ ಇಂಥ ಅಡುಗೆ ಸಹಿಸಿಕೊಂಡು ಸುಮ್ಮನಿದ್ದೀನಿ, ಬೇರೆಯವಳಾಗಿದ್ರೆ ಯಾವತ್ತೊ ಇವರಿಗೆ ಸೋಡಾಚೀಟಿ ಕೊಟ್ಟಿರೋಳು!





