ಜಾನಪದಕ್ಕಾಗಿ ಜೀವನ ಮುಡುಪಿಟ್ಟ ಶಿಲ್ಪಾ ಮುಡುಬಿ, `ಸಂಸ್ಕೃತಿ ಸಂಗಮಕನಸು ಬೆನ್ನಟ್ಟಿದ ಕಂಚಿನ ಕಂಠದ ಕಲಾವಿದೆ. ಈಕೆ ರಾಜ್ಯಮಟ್ಟದಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಉತ್ತರ ಕರ್ನಾಟಕದ ಜಾನಪದ ಸೊಗಡನ್ನು ಹೇಗೆ ಹರಡುತ್ತಿದ್ದಾರೆ ಎಂದು ತಿಳಿಯೋಣವೇ….?

ಕಲಿಯುವ ಆಸಕ್ತಿ ಕಲೆಗೆ ನಾಂದಿ ಹಾಡುತ್ತದೆ. ಕರತಲಾಮಲಕವಾಗುವ ಆ ಕಲೆಯೇ ಸಾಧನೆಯ ಕಿರೀಟ ತಂದುಕೊಡುತ್ತದೆ. ಆ ಸಾಧನೆಯ ಹಾದಿಯಲ್ಲಿ ಸಾರ್ಥಕತೆಯ ಬದುಕು ರೂಪುಗೊಳ್ಳುತ್ತದೆ. ಅಂತಹ ಬದುಕಿನಲ್ಲಿ ಭವಿಷ್ಯದ ಭರವಸೆಯ ಬೆಳಕು ಕಾಣಿಸುತ್ತದೆ. ಆ ಬೆಳಕಿನ ಜೊತೆ ಜೊತೆಗೇ ಹಣವೆಂಬ ಹಪಾಹಪಿ ಬಿಟ್ಟು, ಅಳಿಸಿ ಹೋಗುತ್ತಿರುವ ಜನಪದ ಕಲೆಗೆ ಮರುಜೀವ ಕೊಡುವ ಕೆಲಸ ಒಂದು ಸಾಹಸವೇ ಸರಿ. ಅಂತಹ ಸಾಹಸದಲ್ಲೇ ಜೀವನೋತ್ಸಾಹ ಕಂಡುಕೊಳ್ಳುತ್ತಿರುವ ಮಹಿಳೆಯೊಬ್ಬರಿದ್ದಾರೆ, ಅವರೇ ಶಿಲ್ಪಾ ಮುಡುಬಿ.

ಖ್ಯಾತ ಜನಪದ ಗಾಯಕಿ, ಜಾನಪದ ಅಕಾಡೆಮಿ ಸದಸ್ಯೆಯೂ ಆಗಿರುವ ಶಿಲ್ಪಾ ಮುಡುಬಿಯವರ ಕನಸು, ಗುರಿಯ ವ್ಯಾಪ್ತಿ ಬಹಳ ದೊಡ್ಡದು. ಬರೆಯುತ್ತಾ ಹೋದರೆ ಪುಟಗಳು ಸಾಲವು. ಏಕೆಂದರೆ ಇವರು ಹೆತ್ತವರು ಅಂದುಕೊಂಡಿದ್ದು ಒಂದು, ಇವರು ಆಗಿದ್ದು ಇನ್ನೊಂದು. ಇವರ ತಂದೆ ನಿವೃತ್ತ ಐಎಎಸ್‌ ಅಧಿಕಾರಿ ಬಾಬುರಾವ್ ‌ಮುಡುಬಿ. ತಾಯಿ ತುಳಸಿ ಮುಡುಬಿ, ನಿವೃತ್ತ ಶಿಕ್ಷಕಿ. ಹಳ್ಳಿಯಲ್ಲಿ ಹುಟ್ಟಿ ಉನ್ನತ ಶಿಕ್ಷಣ ಪಡೆದು, ಉನ್ನತ ಉದ್ಯೋಗದಿಂದಾಗಿ ಬೆಂಗಳೂರು ಮಹಾನಗರದಲ್ಲೇ ಜೀವನ ಕಟ್ಟಿಕೊಂಡರು. ತಂದೆಯ ಹುಟ್ಟೂರು ಬೀದರ್‌ ನ ಮುಡುಬಿ ಆಗಿದ್ದರೂ, ಕೆಲಸ ಮತ್ತು ಮಕ್ಕಳ ಭವಿಷ್ಯದ ಉದ್ದೇಶದಿಂದ ಬೆಂಗಳೂರಿನಲ್ಲೇ ನೆಲೆಸಿದ್ದರು.

ದೊಡ್ಡ ಮಗಳು ಶಿಲ್ಪಾ ಕೂಡ ದೊಡ್ಡ ಅಧಿಕಾರಿ ಆಗಬೇಕು ಎಂದು ತಂದೆ ಕನಸು ಕಟ್ಟಿಕೊಂಡಿದ್ದರು. ಕೆಳವರ್ಗದ ಸಮುದಾಯವಾಗಿದ್ದರಿಂದ ಮತ್ತೆ ಹಳ್ಳಿ ಜೀವನ ಬೇಡ, ಮಗಳು ನಗರದಲ್ಲೇ ಇದ್ದು, ದೊಡ್ಡ ಕೆಲಸ ಮಾಡಲಿ ಎಂಬ ಆಸೆ ಹೊತ್ತಿದ್ದರು. ಅದಕ್ಕಾಗಿ ಪ್ರತಿಷ್ಠಿತ ಮೌಂಟ್‌ ಕಾರ್ಮೆಲ್ ‌ಕಾಲೇಜಿನಲ್ಲಿ ಓದಿಸಿದ್ದರು. ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ಪೂರೈಸಿದರು.

ದಿಕ್ಕು ಬದಲಿಸಿದ ಅಜ್ಜಿಯ ಹಾಡಿನಿಂದಾಗಿ ಸಿರಿವಂತಿಕೆ ತೊರೆದ ಶಿಲ್ಪಾ : ಬಾಲ್ಯದಿಂದಲೂ ಯಲ್ಲಮ್ಮನ ದೊಡ್ಡಾಟ, ಬಯಲಾಟ ನೋಡಿ ಬೆಳೆದಿದ್ದ ಶಿಲ್ಪಾ, ಸಿಡ್ನಿಯಲ್ಲಿ ಸಿನಿಮಾ ಮೇಕಿಂಗ್‌ ಕುರಿತು ಉನ್ನತ ಶಿಕ್ಷಣ ಪಡೆದರು. ಮೊದಲಿನಿಂದಲೂ ರಂಗಭೂಮಿ ಕುರಿತು ಆಸಕ್ತಿ ಇದ್ದುದರಿಂದ ಮಗಳ ಮನಸ್ಸು ತಂದೆಯ ಕನಸಿನ ದಾರಿಯಲ್ಲಿ ಸಾಗಲಿಲ್ಲ. ಅಜ್ಜಿ ಗುಂಡಮ್ಮ ಹಾಡುತ್ತಿದ್ದ ಜೋಗತಿ ಪದಗಳ ಸೆಳೆತ ಮಗಳ ಬದುಕಿನ ದಿಕ್ಕನ್ನೇ ಬದಲಿಸಿತು. ತನ್ನ ಮೂಲ ಯಾವುದು….? ಎಂಬ ಪ್ರಶ್ನೆ ಹುಟ್ಟಿದಾಗ ಅದಕ್ಕೆ ಸಿಗುವ ಉತ್ತರ ತಂದೆಯ ಹುಟ್ಟೂರು. ಜೊತೆಗೆ ತನ್ನ ಬಾಲ್ಯದ ನೆನಪು, ಅಜ್ಜಿ ಹಾಡುತ್ತಿದ್ದ ಕುಟ್ಟುವ, ಬೀಸುವ ಪದಗಳು, ಗೀಗಿ ಪದ, ಜೋಗುಳ ಪದ ನೆನಪಾಗುತ್ತವೆ. ಅಜ್ಜಿ ಗುಂಡಮ್ಮ, ಹಳ್ಳಿಯ ಅಜ್ಜಿ ಶರಣಮ್ಮ ಗುನುಗುತ್ತಿದ್ದ ದೇಸಿ ಪದಗಳು ಶಿಲ್ಪಾರ ಬಾಲ್ಯದಲ್ಲೇ ಜನಪದ ಸೊಗಡಿನ ಮೊಳಕೊಡೆಸಿತು. ಹಾಗಾಗಿ ಸಿರಿವಂತಿಕೆಯ ಜೀವನ ತೊರೆದ ಮಗಳು ಶಿಲ್ಪಾ ಕನ್ನಡ ನೆಲದ ಸೊಗಡಿನ ಸಿರಿವಂತಿಕೆಯ ಜಾನಪದಕ್ಕಾಗಿ ತಮ್ಮ ಬದುಕನ್ನೇ ಮೀಸಲಿಟ್ಟರು. ಅಜ್ಜಿ ಹಾಡುತ್ತಿದ್ದ ಜೋಗತಿ ಪದ ಹೊಸತನ್ನು ಹುಡುಕುವಂತೆ ಮಾಡಿತು. ತನ್ನ ಹಿರಿಕರ ಹಿನ್ನೆಲೆಯನ್ನು ಶೋಧಿಸುತ್ತಾ ಹೋದರು.

ತಿರುವು ಕೊಟ್ಟ ಮೊದಲ ನಾಟಕ

ಸಿಡ್ನಿಯಿಂಡ ಉನ್ನತ ವ್ಯಾಸಂಗ ಮುಗಿಸಿ ವಾಪಸ್ಸಾದ ಬಳಿಕ ಬೆಂಗಳೂರಿನಲ್ಲಿ ಯಲ್ಲಮ್ಮನ ಕುರಿತಾಗಿ ಒಂದು ಸಂಕ್ಷಿಪ್ತ ನಾಟಕ ಮಾಡಿದರು. ಅಲ್ಲಿ ಗಂಡು ಹೆಣ್ಣಿನ ಪಾತ್ರ, ಹೆಣ್ಣು ಗಂಡಿನ ಪಾತ್ರ ಮಾಡಿದ್ದರಿಂದ ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು. ಆ ಕ್ಷಣದಲ್ಲೇ ಯಲ್ಲಮ್ಮನ ಹಾಡು, ಜೋಗತಿ ಪದಗಳ ಮೇಲಿನ ಅತೀ ಆಸಕ್ತಿ ಶಿಲ್ಪಾರಲ್ಲಿ ಹುಟ್ಟಿಕೊಂಡಿತು.

ಅಂದಿನಿಂದಲೇ ಯಲ್ಲಮ್ಮನ ಹಾಡು, ಜೋಗತಿ ಪದ, ಚೌಡಕಿ ಪದಗಳನ್ನು ಕಾಪಾಡಿಕೊಂಡು ಬರುತ್ತಿರುವ ಜೋಗತಿಯರು, ದೇವದಾಸಿಯರ ಜೀವನ ಶೈಲಿ, ಸಂಸ್ಕೃತಿ, ಸಂಗೀತದ ಕುರಿತಾಗಿ ಅಧ್ಯಯನ ಶುರುವಾಯಿತು. ಇದು ಹಾವೇರಿಯ ಜನಪದ ವಿಶ್ವವಿದ್ಯಾಲಯದವರೆಗೂ ತೆಗೆದುಕೊಂಡು ಹೋಯಿತು.

ಚೌಡಕಿ ಪದಗಳ ಹಾಡುಗಾರ್ತಿ ರಾಧಾಭಾಯಿ, ಅಂದಿನ ಜಾನಪದ ಆಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿಯ ಪರಿಚಯವಾಯಿತು. ಇದರ ಮಧ್ಯೆ ಪಾಂಡಿಚೆರಿಯಲ್ಲಿ ಒಂದೆರಡು ವರ್ಷವಿದ್ದು ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದ ಶಿಲ್ಪಾಗೆ, ಪತಿ ಆದಿತ್ಯ ಕೊತಕೋಟ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಿದ್ದಾರೆ.

ಆದಿತ್ಯ ಜೊತೆ ಪ್ರೀತಿಯ ವಿವಾಹವಾದರೂ ಕೂಡ ಆರಂಭದಲ್ಲಿ ಶಿಲ್ಪಾ ಅಭಿರುಚಿಗೆ ಹೊಂದಿಕೊಳ್ಳುವುದು ಅವರಿಗೆ ಕಷ್ಟವಾಗಿತ್ತು. ಬಳಿಕ ಜನಪದ ಕಲೆಯ ಅನ್ವೇಷಣೆಯ ಗುರಿಯನ್ನು ಅರಿತ ಆದಿತ್ಯ ಶಿಲ್ಪಾರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪಾಂಡಿಚೆರಿಯಲ್ಲೊಮ್ಮೆ ಶ್ರೀಲಂಕಾ ಮತ್ತು ತಮಿಳರ ಬಿಕ್ಕಟ್ಟು ಕುರಿತು ನಾಟಕ ಮಾಡುವಾಗ ತನ್ನದೇ ಆದ ಕರುನಾಡಿನ ಜನಪದದ ಮೂಲ ಸೊಗಡಿನ ನೆನಪಾಯಿತು. ಕೂಡಲೇ ಅಲ್ಲಿಂದ ಬೆಂಗಳೂರಿಗೆ ಬಂದು ಜನಪದ ಸೊಗಡಿನ ಸತ್ಯಶೋಧನೆ ಶುರು ಮಾಡಿದರು.

`ಅರ್ಬನ್ಫೇಕ್ಪ್ರಾಜೆಕ್ಟ್ಕನಸು

ಸಂಸ್ಕೃತಿ, ಸಂಪ್ರದಾಯದ ಸಂಗಮ : ಹೀಗೆ ರೋಚಕ ಹೆಜ್ಜೆಗಳನ್ನಿಡುತ್ತಾ ಯಲ್ಲಮ್ಮನ ಪದಗಳು, ಚೌಡಕಿ ಪದಗಳು, ಜೋಗತಿ ಪದಗಳನ್ನು ಹಾಡುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಜಾನಪದ ಯುವ ಗಾಯಕಿ ಶಿಲ್ಪಾ ಮುಡುಬಿ 2017ರಲ್ಲಿ ಅರ್ಬನ್‌ ಪೇಕ್‌ ಪ್ರಾಜೆಕ್ಟ್ ಮೂಲಕ ಯಲ್ಲಮ್ಮನ ಪದ, ಜೋಗತಿ ಪದಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಯತ್ನಿಸುತ್ತಿದ್ದಾರೆ. ಅದರೊಂದಿಗೆ ಸ್ಥಳೀಯ ಜಾನಪದ ಸಂಸ್ಕೃತಿಯನ್ನು ಒಳಗೂಡಿಸಲು ಯತ್ನಿಸುತ್ತಿದ್ದಾರೆ. ಕಾಳಮ್ಮ, ಮಾರಮ್ಮ, ಹುಲಿಗೆಮ್ಮ ಮುಂತಾದ ಸ್ಥಳೀಯ ಗ್ರಾಮದೇವತೆಯರ ಸಂಸ್ಕೃತಿಯನ್ನು ತಮ್ಮ ಯೋಜನೆಯೊಂದಿಗೆ ಒಂದುಗೂಡಿಸಿಕೊಂಡಿದ್ದಾರೆ.

ಯಲ್ಲಮ್ಮನ ಹಾಡು, ಕೇವಲ ಜೋಗತಿ, ದೇವದಾಸಿಯರಿಗೆ ಸೀಮಿತವಾಗಬಾರದು ಎಂಬುದು ಇವರ ಹಂಬಲ. ಅದಕ್ಕಾಗಿ ವರ್ಷವಿಡೀ ತಂಡ ಕಟ್ಟಿಕೊಂಡು ತಿರುಗಾಡುತ್ತಾರೆ. ಉತ್ತರ ಕರ್ನಾಟಕದ ಹಳ್ಳಿಹಳ್ಳಿಯಲ್ಲೂ ದೇಸಿ ಸೊಗಡಿನ ಪ್ರತಿಯೊಂದು ಹಾಡು, ಪದಗಳನ್ನು ಸಂಗ್ರಹ ಮಾಡುತ್ತಾ ರಾಧಾಬಾಯಿ, ಶಂಕ್ರಪ್ಪನರಂತಹ ದೊಡ್ಡ ದೊಡ್ಡ ಕಲಾವಿದರನ್ನು ಭೇಟಿ ಮಾಡುತ್ತಿರುತ್ತಾರೆ. ಪತಿ ಆದಿತ್ಯ ಮೂಲತಃ ತೆಲುಗಿನವರಾದರೂ ಕನ್ನಡದ ಜಾನಪದಕ್ಕಾಗಿ ಪತ್ನಿಯ ಶ್ರಮಕ್ಕೆ ಹೆಗಲಾಗಿದ್ದಾರೆ.

ಜಾನಪದ ಲೋಕ ಅಥವಾ ಸಾಂಸ್ಕೃತಿಕ ಕೇಂದ್ರದ ಗುರಿ : ಸದ್ಯಕ್ಕೀಗ ಶಿಲ್ಪಾ ಮುಡುಬಿ, ಪತಿ ಆದಿತ್ಯ ಮತ್ತು ಎರಡೂವರೆ ವರ್ಷದ ಮಗು ರುದ್ರನ ಜೊತೆ ಕಲಬುರಗಿಯಲ್ಲಿ ವಾಸವಾಗಿದ್ದಾರೆ. ತಂದೆಯ ಶಾಲೆಯೊಂದರ ಜವಾಬ್ದಾರಿಯನ್ನೂ ತೆಗೆದುಕೊಂಡಿರುವ ಶಿಲ್ಪಾ ಅಲ್ಲೇ ಹೊರವಲಯದಲ್ಲಿ ತಮ್ಮದೇ ಆದ 10 ಎಕರೆಯಲ್ಲಿ ಒಂದು ದೊಡ್ಡ ಜಾನಪದ ಲೋಕವನ್ನು ಕಟ್ಟುವ ಆಲೋಚನೆ ಹೊಂದಿದ್ದಾರೆ. ಅಲ್ಲೊಂದು ಸುಂದರ ವನ ನಿರ್ಮಿಸುತ್ತಿದ್ದಾರೆ.

ಸಭಾಂಗಣ, ಯಲ್ಲಮ್ಮ, ಜೋಗತಿ, ಚೌಡಕಿ ಪದಗಳ ಸಂಗ್ರಹಾಲಯ, ಅಧ್ಯಯನ ಕೇಂದ್ರ ನಿರ್ಮಿಸುವ ತಾತನ ಕಾಲದಲ್ಲಿ ಕಾಣೆಯಾಗಿದ್ದ ಈ ಜಮೀನನ್ನು ಹರಸಾಹಸಪಟ್ಟು, ಅಧಿಕಾರಿಗಳಿಗೆ ಅಡ್ಡಬಿದ್ದು ಹುಡುಕಿ ಅದರಲ್ಲೀಗ ಒಂದಷ್ಟು ಜಾಗದಲ್ಲಿ ಬೋರ್ ವೆಲ್ ‌ಹಾಕಿಸಿದ್ದಾರೆ. ತಮ್ಮದೇ ಹೊಲ ಹುಡುಕಲು ಕೂಡಿಟ್ಟ ಹಣವನ್ನೆಲ್ಲಾ ಖರ್ಚು ಮಾಡಿ, ಮುಂದೆ ಮನೆ ಕಟ್ಟಲು ಹಣ ಹೊಂದಿಸುತ್ತಿದ್ದಾರೆ.

ಎಲ್ಲಾ ಕಲಾವಿದರೂ ಬಂದು ಸೇರುವ ಮನೆ ಬೇಕು : ಆದರೆ ಮನೆ ಕೇವಲ ಶಿಲ್ಪಾ ಮುಡುಬಿಯ ಮನೆ ಆಗಿರದೇ ಎಲ್ಲಾ ಕಲಾವಿದರು ಬಂದು ಸೇರುವ ಸಂಗಮವಾಗಬೇಕು. ಜನಪದ ಕಲೆಗೆ ಸಂಬಂಧಿಸಿದ ಪ್ರತಿ ಪ್ರಾಕಾರ ಕೂಡ ಅಲ್ಲೇ ಸಿಗುವಂತಾಗಬೇಕು. ಬಂದು ಉಳಿದುಕೊಳ್ಳುವ ಕಲಾವಿದರು ಸಾಂಸ್ಕೃತಿಕ ಹಬ್ಬ ಮಾಡುವಂತಿರಬೇಕು. ಅದು ಕಾಡಿನ ರೀತಿ ಇರಬೇಕು. ಅಲ್ಲಿನ ಸುತ್ತ ಇರುವ ಹಳ್ಳಿಗಳ ಹೆಣ್ಣುಮಕ್ಕಳಿಗೆ ಕೆಲಸ ಸಿಗುವಂತಾಗಬೇಕು. ಅಲ್ಲಿ ಎಲ್ಲಾ ರೀತಿಯ ಜನ ಬರಬೇಕು. ಸಂಸ್ಕೃತಿ ಅಲ್ಲಿಂದಲೇ ಸೃಷ್ಟಿಯಾಗುವಂತಹ ಸಾಂಸ್ಕೃತಿಕ ಕೇಂದ್ರವಾಗಿರಬೇಕು ಎಂಬುದರ ಶಿಲ್ಪಾರ ದೊಡ್ಡ ಮಹತ್ವಾಕಾಂಕ್ಷೆ ಆಗಿದೆ.

Shilpa-mudbi

ಶಿಲ್ಪಾರ ಮುಕ್ತ ಮಾತುಕತೆ

ಗೃಹಶೋಭಾ ಜೊತೆ ಮಾತನಾಡಿದ ಶಿಲ್ಪಾ ಮುಡುಬಿ, “ನನಗೊಂದ್‌ ಮನಿ ಬೇಕು. ಆದ್ರಾ, ಅದು ಸಂಜೆ ಆದ ತಕ್ಷಣ ವಾಚ್ ಮನ್‌ ಲಾಕ್‌ ಮಾಡಿ ಹೋಗುವಂತಿರಬಾರದು. ಆ ಮನೆಯೇ ಸಾಂಸ್ಕೃತಿಕ ಕೇಂದ್ರವಾಗಿರಬೇಕು. ದೊಡ್ಡ ಜಾಗ ಬೇಕು, ಮಂದಿ ಬಂದ್ರೆ ಒಲಿ ಹಚ್ಚಿ ಅಡಿಗಿ ಮಾಡಿ ಹಾಕಂಗಿರಬೇಕು. ಬರೋ ಆರ್ಟಿಸ್ಟ್ ಗಳು ಇಲ್ಲೊಂದ್‌ ಮನಿ ಅದಾ…. ಆ ಮನೀಲಿ ನಮ್ಮವರಿದ್ದಾರೆ ಅನ್ನೋವಂಗೀರಬೇಕು. ಕಾಡು ಬೆಳಸಬೇಕು….. ಮನಿ ಕಟ್ಟಬೇಕು…. ಅಕ್ಕಪಕ್ಕದ ಹಳ್ಳಿಗಳ ಹೆಣ್ಮಕ್ಕಳಿಗೆ ಒಂದು ಸ್ವಂತ ಕೆಲಸ ಕೊಡಬೇಕು. ಎಲ್ಲರೂ ಕೂಡಿ ಬಾಳಂಗಿರಬೇಕು.

“ಆ ಮನೀಲಿ ಜನರು ಬಂದು ಕುಂತ್‌ ಮಾತಾಡಬೇಕು. ಅದು ದೊಡ್ಡ ಸಂಸ್ಥೆಯಾಗಬೇಕು. ಜಾನಪದ ಕಲೆಗಳೆಲ್ಲದರ ಸಂಗಮವಾಗಬೇಕು. ಆಗಾಗ ಹಬ್ಬ ಮಾಡಿದಂಗೆ ಮಾಡಬೇಕು. ಈ ದೊಡ್ಡ ಕನಸು ನನಸಾಗೋದಕ್ಕೆ ಸಮಯ ಬೇಕು. ಆದ್ರೂ ಪ್ರಯತ್ನಪಡ್ತಿದೀನಿ,” ಅಂತ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.

“ಕನೆಕ್ಷನ್‌ ಅನ್ನೋದು, ಜನರ ಜೊತೆ ಇದ್ದಾಗ, ಯಾರ ಜೊತೆ ಕೆಲಸ ಮಾಡಲಕ್ಕತ್ತೀರೋ ಆ ಕೆಲಸ ನಿಮಗೆ ಒಂದು ಹೊಸ ದಾರಿ ತೋರಿಸಿಕೊಂಡು ಹೋಗ್ತಾ. ಆ ದಾರಿ ಯಾವಾಗಲೂ ಹಿಡಿದು ಇಟ್ಟುಕೊಳ್ಳೋದು ನಿಮ್ಮ ಜವಾಬ್ದಾರಿ.”

“ನಿಮಗೆ ಏನು ಖುಷಿ ಕೊಡ್ತದ…? ಒಳ್ಳೆ ಸಂಬಳ ಸಿಕ್ಕು, ಮನೆ ಚಲೋ ಅದ, ಸೋಫಾ ಚಲೋ ಅದ, ದೊಡ್ಡ ಟಿವಿ ಅದ ಅಂದ್ರೆ ಖುಷಿನಾ, ಇಲ್ಲೋ, ನಮ್ಮ ಅನ್ನ ಯಾರ ಬೆಳೆದ್ರು….? ಹ್ಯಾಂಗ ಬಂತು ಇದು….? ಎಷ್ಟು ದೂರದಿಂದ ಬಂದದ ಇದು….? ಎಷ್ಟು ತೊಂದರೆಯಾಗಿರಬೇಕು ತರಾಕ ಹಾಗೆ ಯೋಚನೆ ಮಾಡಕ ಹತ್ತಾಗ ನಮ್ಮದ ಆದ ಮನಿ ಮಾಡ್ಬೇಕು ಅಂತ ಯೋಚನೆ ನಮ್ಮ ತಲಿಯಾಗ ಮೊಳಕೆ ಒಡೆಯಾಕ ಶುರು ಆತು,” ಎನ್ನುತ್ತಾರೆ ಶಿಲ್ಪಾ.

ಶಿಲ್ಪಾರ ಅಗಾಧ ಪ್ರತಿಭೆ

ಹೀಗೆ ಪ್ರತಿ ಕ್ಷಣ ಹೊಸತನ್ನು ಹುಡುಕುವ ಶಿಲ್ಪಾ, ಕೇವಲ ದೇವದಾಸಿಯರಿಗಷ್ಟೇ ಸೀಮಿತವಾಗಿರುವ ಜಾನಪದ ಕಲೆಯನ್ನು ಸಮಾಜದ ಮುಖ್ಯವಾಹಿನಿಗೆ ತಲುಪಿಸುವ, ಜೋಗತಿಯವರ ಜೀವನ ಶೈಲಿಯನ್ನು ಸಾರ್ವತ್ರಿಕಗೊಳಿಸುವ ಪಣ ತೊಟ್ಟಿದ್ದಾರೆ. ವರ್ಷದಲ್ಲಿ ದೇಶಾದ್ಯಂತ ಐದಾರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವ ಶಿಲ್ಪಾರ ಕಂಚಿನ ಕಂಠಕ್ಕೆ ಮನಸೋಲದವರಿಲ್ಲ. ಶಿಲ್ಪಾ ಕೈಯಲ್ಲಿ ಚೌಡಿಕೆ ಇತ್ತೆಂದರೆ ಸಾಕು, ಕಂಚಿನ ಕಂಠದ ಜೊತೆ ಜನಪದ ಹಾಡು ಮನ ಮುಟ್ಟುವಂತಿರುತ್ತದೆ.

ಚೌಡಿಕೆ ಸದ್ದಿನ ಜೊತೆ ಸುತ್ತಿ ಮತ್ತು ತಾಳದ ಸದ್ದು ಮತ್ತಷ್ಟು ಇಂಪು ನೀಡುತ್ತದೆ. ಶಿಲ್ಪಾ ಹಾಡಿನ ಶೈಲಿಯ ಮತ್ತೊಂದು ವಿಶೇಷವೆಂದರೆ, ಕಥೆಯನ್ನು ಹೇಳುತ್ತಾ ನಡುವೆ ಹಾಡನ್ನು ಹಾಡುತ್ತಾ ಕೇಳುಗರಿಗೆ ನೈಜತೆಯ ದರ್ಶನ ಮಾಡಿಸುವುದು. ಅಷ್ಟೇ ಅಲ್ಲ, ಇಂಗ್ಲಿಷ್‌ ಭಾಷೆಯನ್ನು ಸರಾಗವಾಗಿ ಮಾತನಾಡಬಲ್ಲ ಶಿಲ್ಪಾ, ಹೊರ ರಾಜ್ಯಗಳಲ್ಲಿ ಇಂಗ್ಲಿಷ್‌ ನಲ್ಲೇ ಯಲ್ಲಮ್ಮನ ಕಥೆ ಹೇಳುವ ಪರಿಯೇ ವಿಭಿನ್ನ. ಹೀಗೆ ತಮ್ಮ ಕಲೆಯ ಮೂಲಕ ದೇಶದ ಮೂಲೆ ಮೂಲೆಗಳಲ್ಲೂ ಪ್ರವಾಸ ಮಾಡುವ ಶಿಲ್ಪಾ ಮುಡುಬಿ ಒಂದು ರೀತಿಯಲ್ಲಿ ಕನ್ನಡ ಸಿರಿವಂತಿಕೆಯ ಜನಪದ ಸೊಗಡನ್ನು ಪಸರಿಸುವ ರಾಯಭಾರಿ ಆಗಿದ್ದಾರೆ ಎಂದರೂ ಅತಿಶಯೋಕ್ತಿಯಲ್ಲ.

ಸುನೀತಾ ಬಿ.ಎಂ

ಮನದಾಳದ ಮಾತು

“ಈ ಥಿಯೇಟರ್‌ ನಾಗ ದೇವಿಗಳು, ದೇವತೆಗಳು, ರಾಮ, ಕೃಷ್ಣ ಎಲ್ಲಾ ಕಾಣಸ್ತಾರಾ…. ಆದ್ರೆ, ನಮ್ಮ ಕಲ್ಚರ್‌ ಕಾಣಸವಲ್ದು, ನಮ್ಮ ಭಾಷೆ ಕಾಣಿಸವಲ್ದು, ನಮ್ ರೇಣುಕಾ ಕಾಣಿಸಳ್ಳು, ಮಾತಂಗಿ ಕಾಣಿಸಳ್ಳು. ಅವರು ಚರ್ಚೆಗೂ ಒಳಗಾಗಳ್ರು ಅನ್ನೋ ಯೋಚನೆ ಮನದಾಗ ಬರಹತ್ತು. ನಮ್ಮ ಸಂಸ್ಕೃತಿ, ಕಲೆ ಮೂಲ ಉಳಿಸೋರು ಯಾರು ಅನ್ನೋ ಪ್ರಶ್ನೆ ಶುರುಹಚ್ತು. ಇದರ ಹುಡುಕಾಟನೇ ನಮ್ಮನ್ನು ಇಲ್ಲಿವರೆಗೂ ಕರಕಂಡು ಬಂದು ನಿಲ್ಲಿಸೈತಿ,” ಎನ್ನುತ್ತಾರೆ ಶಿಲ್ಪಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ