ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಬರುವಂತಹ ಹೆತ್ತವರ ನಿಷ್ಕಲ್ಮಶ ಪ್ರೀತಿ ಮತ್ತು ಕಾಳಜಿಯಿಂದ ಕೂಡಿದಂತಹ ಚೆಂದದ ಬಾಲ್ಯ, ಅತ್ಯುತ್ತಮ ಮಟ್ಟದ ವಿದ್ಯಾಭ್ಯಾಸ, ಕನಸಿನ ಕಲ್ಪನಾ ಲೋಕದಲ್ಲಿಯೇ ವಿಹರಿಸುವಂತಹ ಯೌವನಾವಸ್ಥೆಯ ನಂತರ ಉದ್ಯೋಗದ ಅನ್ವೇಷಣೆ ಮುಂತಾದ ಬಹುಮುಖ್ಯ ಘಟ್ಟಗಳಲ್ಲಿ ಮದುವೆಯೂ ತನ್ನದೇ ಆದ ವಿಶೇಷ ಸ್ಥಾನ ಮಾನವನ್ನು ಪಡೆದಿದೆ ಅಲ್ವಾ…!?
ಹೆತ್ತವರ ಕನಸು, ಮನೆಮಂದಿಗೆ,ಹಿತೈಷಿಗಳಿಗೆ ಮತ್ತು ಸ್ನೇಹಿತರಿಗೆ ಈ “ಮದುವೆ” ಯೆಂಬುದು ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುವ ಅವಿಸ್ಮರಣೀಯ ಕ್ಷಣವಾದರೆ…! ಮದುವೆಯಾಗುವ ಜೋಡಿಗೆ ಪರಸ್ಪರ ಜೀವನ ಸಂಗಾತಿಯಾಗಿ ಬಾಳ ಪಯಣಕೆ ಮುನ್ನುಡಿ ಬರೆಯುವ ಸುದಿನ. ಇವರಿಬ್ಬರಲ್ಲೂ ಮುಖ್ಯವಾಗಿ ಮೂಡಲೇಬೇಕಾದ್ದು ಒಲವು. ಪ್ರೀತಿಯೇ ಜೀವಾಳವಾಗಿ ಒಬ್ಬರಿಗೊಬ್ಬರು ಪರಸ್ಪರ ಅಭಿರುಚಿ,ಆಸೆ ಮತ್ತು ಆಸಕ್ತಿಗಳನ್ನು ಅರಿತು ಅದನ್ನು ಗೌರವಿಸುವುದರ ಮೂಲಕ ಸಮರ್ಪಣಾಭಾವದಿಂದ ಒಂದಾದಾಗ ಮಾತ್ರ ದಾಂಪತ್ಯದಲ್ಲಿ ಅಡಗಿರುವ ಅಪರಿಮಿತ ಸುಖವನ್ನು ಅನುಭವಿಸಲು ಸಾಧ್ಯ. ಈ ಹೊಂದಾಣಿಕೆ ಯೆಂಬುದು ಕೇವಲ ಹೆಣ್ಣಿಗೆ ಅಥವಾ ಗಂಡಿಗೆ ಮಾತ್ರ ಅನ್ವಯಿಸುವಂಥದ್ದಲ್ಲ…ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ. ಇಬ್ಬರೂ ಹಾಲು ಜೇನಿನಂತೆ, ಹೃದಯ ಮತ್ತದರ ಬಡಿತದಂತೆ ನಿತ್ಯ ನಿರಂತರವಾಗಿ ಒಬ್ಬರು ಇನ್ನೊಬ್ಬರಿಗಾಗಿ ಮಿಡಿಯುತ್ತ ಒಂದಾಗಿ ನಡೆದಾಗ ಸ್ವರ್ಗವೇ ಧರೆಗಿಳಿದಂತೆ…!
ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎನ್ನುವಂತೆ ಯಾವುದೇ ಒಂದು ವಿಷಯದಲ್ಲಿ ಇವರಿಬ್ಬರ ಅನಿಸಿಕೆ ಮತ್ತು ಅಭಿಪ್ರಾಯಗಳು ಬೇರೆ ಬೇರೆಯಾಗಿರುವುದು ಸ್ವಾಭಾವಿಕ.ಇದು ಅವರವರು ಬೆಳೆದು ಬಂದ ಪರಿಸರದಂತೆ ಸ್ವಲ್ಪ ಭಿನ್ನವೇ ಆಗಿರುತ್ತೆ ನಿಜ. ಇದನ್ನು ಪರಸ್ಪರ ಕುಳಿತು ಮಾತನಾಡಿ ಕೂಲಂಕುಷವಾಗಿ ಪರಿಶೀಲಿಸಿ ನೋಡಿದಾಗ… ಸರಿ ತಪ್ಪುಗಳನ್ನು ಕಾಣಲು ಸಾಧ್ಯ. ಆಗ ಆ ತಪ್ಪನ್ನು ತಿದ್ದಿಕೊಂಡು ಅತ್ಯುತ್ತಮವಾದುದನ್ನು ಅಳವಡಿಸಿಕೊಳ್ಳುವತ್ತ ಇಬ್ಬರೂ ಕೂಡಿ ಒಮ್ಮತದಿಂದ ಒಂದು ನಿರ್ಧಾರಕ್ಕೆ ಬರಬೇಕು.ಅಂದಾಗ ಮಾತ್ರ ದಾಂಪತ್ಯದಲ್ಲಿ ಸಮರಸವನ್ನು ಕಾಯ್ದಿರಿಸಲು ಸಾಧ್ಯವಾಗುತ್ತೆ. ಇದನ್ನು ನಾನು ಬಾಯಿ ಮಾತಿಗೆ ಅಥವಾ ಥೀಮ್ ಗೆ ಅನ್ವಯಿಸುತ್ತದೆ ಅನ್ನುವುದಕ್ಕಾಗಲಿ ಹೇಳುತ್ತಿಲ್ಲ.

ನನ್ನ ವೈವಾಹಿಕ ಜೀವನದಲ್ಲಿ ಈ ನಡೆನುಡಿಯಿಂದಲೇ ಇಂದಿಗೂ ನಮ್ಮಿಬ್ಬರಲ್ಲಿ ಸತಿ ಪತಿ ಬಾಂಧವ್ಯ ಇನ್ನಷ್ಟು ಮತ್ತಷ್ಟು ಗಟ್ಟಿಯಾಗಿದ್ದು.ಮೊದಲಿನಿಂದಲೂ ಸಿಟ್ಟು ಮಾಡಿಕೊಳ್ಳೋದು/ಮಾತು ಬಿಡೋದು ಇಂಥಾದ್ದಕ್ಕೆಲ್ಲ ನಾವು ಅವಕಾಶವನ್ನೇ ಕೊಟ್ಟಿಲ್ಲ. ಮನಸ್ಸಿನಲ್ಲಿರೋದನ್ನು ನೇರವಾಗಿಯೇ ಹೇಳೋದು.ಮೊದ ಮೊದಲು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವೆನಿಸಿದರೂ ಕ್ರಮೇಣ ನಾವಿಬ್ಬರೇ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ . ಈಗ ಮಕ್ಕಳೂ ದೊಡ್ಡವರಾಗಿದ್ದರಿಂದ ಯಾವುದೇ ವಿಷಯದ ಬಗ್ಗೆಯಾದರೂ ಮುಖ್ಯ ತೀರ್ಮಾನ ತೆಗೆದುಕೊಳ್ಳುವ ಮುಂಚೆ ನಾವಿಬ್ಬರೂ ಮಕ್ಕಳೊಂದಿಗೆ ಕುಳಿತು ಚರ್ಚಿಸಿ ಆಮೇಲೆ ನಿರ್ಧರಿಸುತ್ತೇವೆ. ನಮ್ಮ ನಾಲ್ವರಲ್ಲಿ ಒಬ್ಬೊಬ್ಬರ ಅನಿಸಿಕೆ ಅಭಿಪ್ರಾಯ ಎಷ್ಟೇ ಬೇರೆ ಬೇರೆಯಿದ್ದರೂ… ಎಲ್ಲರೂ ಕೂಡಿ ಆರೋಗ್ಯಕರ ಚರ್ಚೆ ಮಾಡಿಯೇ ಮುಂದುವರೆಯುತ್ತೇವೆ. ಈ ನಡೆನುಡಿಯೇ ನಮ್ಮೆಲ್ಲರ ನಡುವೆ ಇರುವ ಭದ್ರ ಬುನಾದಿ.
ಬಾಳ ಸಂಗಾತಿಯಾಗಿ ನನ್ನಾಸೆ ಆಕಾಂಕ್ಷೆಗಳಿಗೆ ನನ್ನವರು ನಿರಂತರ ಪ್ರೋತ್ಸಾಹದ ನೀರುಣಿಸುತ್ತ ಬೆಳೆಸಿದರೆ… ನಾನೂ ಕೂಡ ಜೀವನದ ಏರಿಳಿತಗಳೆರಡರಲ್ಲೂ ಅವರ ಬಾಳ ದಾರಿಗೆ ದೀವಿಗೆಯಾಗಿ ಅಂದಿನಿಂದ ಇಂದಿನವರೆಗೂ ಅಷ್ಟೇ ಪ್ರೀತಿ ಮತ್ತು ಕಾಳಜಿಯಿಂದ ನಮ್ಮದೇ ಆದ ಪುಟ್ಟ ಸುಖೀ ಪ್ರಪಂಚವನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದು ಅಂತ ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತೆ.ಈ ನಡೆನುಡಿಯನ್ನು ಅಳವಡಿಸಿಕೊಳ್ಳಲು ಮೊದ ಮೊದಲು ಸ್ವಲ್ಪ ಕಷ್ಟ… ಅಸಾಧ್ಯವೆನಿಸಿದರೂ…ಪರಸ್ಪರ ರ ಮೇಲಿರುವ ಅಪಾರವಾದ ಪ್ರೀತಿ ಮತ್ತುಗೌರವದಿಂದ ಇದನ್ನು ಸಾಧ್ಯವಾಗಿಸಬಹುದು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಇದು ನನ್ನ ವೈವಾಹಿಕ ಜೀವನದ ಇಪ್ಪತ್ತಾರು ವರ್ಷಗಳ ಸ್ವಾನುಭವವೂ ಹೌದು.
ಹಿಂದಿನ ಕಾಲದಲ್ಲಿ ಹೆಣ್ಣು ಮದುವೆಯಾದ ಮೇಲೆ ಪ್ರತಿಯೊಂದನ್ನು ಮೌನವಾಗಿ ಸಹಿಸುತ್ತಾ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಗಾಣದೆತ್ತಿನಂತೆ ಗಂಡ,ಮನೆ, ಮಕ್ಕಳು ಅಂತ ಜೀವನಪೂರ್ತಿ ಇವರ ಸೇವೆಗೈಯುವಲ್ಲಿಯೇ ಕಳೆಯಬೇಕಿತ್ತು. ಗಂಡನ ಪ್ರೀತಿ, ಸಾಂತ್ವನದ ಎರಡು ಮಾತುಗಳು ಕೂಡ ಆಕೆಗೆ ಲಭ್ಯವಿರಲಿಲ್ಲ. ಆದರೆ ಈಗ ಕಾಲ ಬದಲಾದಂತೆ ಅದನ್ನು ಒಪ್ಪಿ ಅಪ್ಪಿಕೊಂಡು ಹೆಣ್ಣು/ಗಂಡು ಎರಡೂ ಮಕ್ಕಳನ್ನು ಸರಿ ಸಮಾನವಾಗಿ ಬೆಳೆಸುತ್ತ ಅವರೆಲ್ಲ ಆಸೆ ಆಕಾಂಕ್ಷೆಗಳಿಗೆ ಒತ್ತಾಸೆಯಾಗಿ ನಿಲ್ಲುವ ಹೆತ್ತವರಿಂದ ಹೆಣ್ಣು ಮಕ್ಕಳು ಹಿಂದಿನ ಕಾಲದ ಇಂತಹ ಕಷ್ಟದಿಂದ ಹೊರಬರುವಂತೆ ಆಗಿದ್ದು ನಿಜಕ್ಕೂ ಪ್ರಶಂಸನೀಯ ನಡೆ.

“ಬಾಳ ದಾರಿಗೆ ಸಂಗಾತಿಯೇ ದೀವಿಗೆ” ನಿಜ ಅದೆಷ್ಟೊಂದು ಅರ್ಥಪೂರ್ಣ ಈ ನಡೆನುಡಿ. ಸತಿ /ಪತಿಗಳಿಬ್ಬರೂ ಪರಸ್ಪರ ಬಾಳ ಸಂಗಾತಿಗಳಾಗಿ ಬಾಳ ಪಯಣದ ದಾರಿಯುದ್ದಕೂ ಪರಸ್ಪರ ಪೂರಕವಾಗಿ ದೀವಿಗೆಯಾಗಿ ಮುನ್ನಡೆದಾಗ ಮಾತ್ರ ಸಾರ್ಥಕ ದಾಂಪತ್ಯ ಜೀವನ. ಶಿವಶಿವೆಯರಂತೆ ಇಬ್ಬರೂ ಅರ್ಧನಾರೀಶ್ವರರ ರೂಪದಲ್ಲಿ ನಡೆದರೆ ಮಾತ್ರ ಸಂಸಾರದಲ್ಲಿ ಸಾರ ತುಂಬಿ ತುಳುಕುವಂತಿರುತ್ತದೆ. ಬಹುಶಃ ಈ ಕಾರಣದಿಂದಲೇ ಮದುವೆಯ ದಿನ ವಧುವಿನ ಕೈಯಿಂದ ಗೌರಿ ಪೂಜೆ ಮಾಡಿಸುತ್ತಾರೆ.
ಶಿವ ಪಾರ್ವತಿ ಯರ ಜೋಡಿಯಂತೆ ಸುಖವಾಗಿರಿ ಎಂಬುದು ಎಲ್ಲ ಹಿರಿಯರ ಶುಭಾಶೀರ್ವಾದವೂ ಆಗಿರುತ್ತೆ.ಇದಕ್ಕೆ ಅತ್ಯುತ್ತಮ ಉದಾಹರಣೆ ನಮ್ಮೆಲ್ಲರ ಮೆಚ್ಚಿನ ಸುಧಾ ನಾರಾಯಣ ಮೂರ್ತಿ ದಂಪತಿಗಳು.
ಇತ್ತೀಚಿನ ದಿನಗಳಲ್ಲಿ ಈ ಹೊಂದಾಣಿಕೆಯೆಂಬುದು ಹೆಣ್ಣು ಗಂಡು ಇಬ್ಬರಲ್ಲೂ ಕಡಿಮೆಯಾಗ್ತಿದೆ…ಅದಕ್ಕೆ ಕಾರಣವೇನೇ ಇರಲಿ,ಯಾರೇ ಇರಲಿ ಒಂದು ಮಾತನ್ನು ಪ್ರಮುಖವಾಗಿ ಅರಿತಿರಬೇಕು. ಬಾಳ ಬಂಡಿಯು ಸುಗಮವಾಗಿ ಮುನ್ನಡೆಯಲು ಎರಡೂ ಗಾಲಿಗಳು ಸಮಾನವಾಗಿ ಭಾರವನ್ನು ಹೊತ್ತು ನಡೆಯಬೇಕು. ಅದನ್ನು ಬಿಟ್ಟು ಒಂದೇ ಗಾಲಿಯ ಮೇಲೆ ಎಲ್ಲ ಭಾರವನ್ನೂ ಹಾಕಿದರೆ ಆ ಗಾಲಿಯು ಎಷ್ಟೂಂತ ಸಹಿಸಿಕೊಂಡು ಮುನ್ನಡೆಸಲು ಸಾಧ್ಯ…!? ದಿನ ಕಳೆದಂತೆ ಶಕ್ತಿಯೆಲ್ಲ ಕುಂದಿದಂತಾಗಿ ಜೀವನೋತ್ಸಾಹವೇ ಇಲ್ಲದಂತೆ ಕುಸಿದು ಕುಳಿತಾಗ ಬೇರೆ ಯಾವ ದಾರಿ ಕಾಣಿಸುತ್ತೆ.ತಾಳ್ಮೆಗೂ ಒಂದು ಇತಿಮಿತಿ ಅಂತ ಇರುತ್ತೆ ಅಲ್ವಾ…!
ನಾವೆಲ್ಲರೂ ಸಾಧಾರಣ ಮನುಷ್ಯರೇ… ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಸಹಿಸುವುದು ತುಂಬಾ ಕಷ್ಟ.ಆಗ ನಮಗೇ ಗೊತ್ತಿಲ್ಲದಂತೆ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆದಂತೆಯೇ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಪ್ರಾರಂಭವಾಗುತ್ತೆ.ಹೀಗೇ
ಏನಾದರೂ ದಾಂಪತ್ಯದಲ್ಲಿ ಬಿರುಕು ಕಂಡು ಬಂದಲ್ಲಿ ದಂಪತಿಗಳಿಬ್ಬರೂ ತಮ್ಮ ತಮ್ಮ ಸ್ವಾಭಿಮಾನವನ್ನು ಪಕ್ಕಕ್ಕಿಟ್ಟು ಪರಸ್ಪರ ಕುಳಿತು ಮಾತನಾಡಿ ತಮ್ಮ ತಮ್ಮ ಮನದಾಳದ ನೋವನ್ನು ಮನಸ್ಸು ಬಿಚ್ಚಿ ಹಂಚಿಕೊಂಡಾಗ ಮಾತ್ರ ಈ ಸಂಬಂಧದ ಕೊಂಡಿಯು ಗಟ್ಟಿಯಾಗಿ ಬೆಸೆಯುತ್ತದೆ. ಅಷ್ಟೇ ಅಲ್ಲ ಸಾಧ್ಯವಾದಷ್ಟು ತಮ್ಮ ತಮ್ಮ ತಪ್ಪನ್ನು ಒಪ್ಪಿಕೊಂಡು ಮುಂದೆ ಹಾಗಾಗದಿರುವಂತೆ ತಾವು ತಾವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು
ಇಬ್ಬರೂ ಮನಃಪೂರ್ವಕವಾಗಿ ಮಾಡಬೇಕು ಅಥವಾ ಹಿರಿಯರ ಮಧ್ಯಸ್ಥಿಕೆಯಿಂದಾದರೂ ಅರಿತು ಮುನ್ನಡೆಯಬೇಕು.
ಪ್ರತಿಯೊಬ್ಬ ಮನುಷ್ಯ ನೂ ನಿಷ್ಕಲ್ಮಶ ಪ್ರೀತಿ ಮತ್ತು ಕಾಳಜಿಯನ್ನು ಬಹುಮುಖ್ಯವಾಗಿ ಬಯಸುತ್ತಾನೆ.
“ಬಾಳ ದಾರಿಗೆ ಸಂಗಾತಿಯೇ ದೀವಿಗೆ”ಎಂಬುದು ಮದುವೆಗಷ್ಟೇ ಸೀಮಿತವಾಗಿಲ್ಲ,ಪರಿಶುದ್ಧ ಪ್ರೀತಿಯು ಎಲ್ಲಕ್ಕಿಂತ ಮಿಗಿಲು ಎನ್ನುವುದಕ್ಕೆ ಉದಾಹರಣೆಯಾಗಿ… ನಮ್ಮೆಲ್ಲರ ಅಚ್ಚುಮೆಚ್ಚಿನ ಭಾರತದ ಕೋಗಿಲೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ. ಹದಿಹರೆಯದ ದಿನಗಳಲ್ಲಿ ಲತಾ ಅವರಿಗೆ ಮೂಡಿದ ಒಲವು ಕಾರಣಾಂತರಗಳಿಂದ ಮನೆಯವರ ಸಹಮತಿ ಸಿಗದೇ ಕೈಗೂಡಲಿಲ್ಲವಾದರೂ ಇಬ್ಬರೂ ತಮ್ಮ ಉಸಿರಿನ ಕೊನೆಯ ಕ್ಷಣದವರೆಗೂ ಎದೆಯ ಗೂಡಲ್ಲಿ ಪ್ರೀತಿಯನ್ನು ಮಾತ್ರ ಹಚ್ಚ ಹಸಿರಾಗಿಸಿಕೊಂಡು ಬಾಳ ದಾರಿಯುದ್ದಕೂ ದೀವಿಗೆಯಾಗಿದ್ದು ನಿಜಕ್ಕೂ ಅವಿಸ್ಮರಣೀಯ.
ಇಂತಹ ನಿಷ್ಕಲ್ಮಶ ಪ್ರೀತಿಗೆ ಮತ್ತೊಂದು ಉದಾಹರಣೆಯೆಂದರೆ ಖ್ಯಾತ ಉದ್ಯಮಿ ರತನ್ ಟಾಟಾ ಅವರು.ರತನ್ ಜೀ ಅವರಿಗೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಯವರೇ ಆಗಿದ್ದ ಸಹೋದ್ಯೋಗಿ ಯೊಬ್ಬರ ಮೇಲೆ ಮೂಡಿದ ಒಲವು ಕೈ ಗೂಡದಿರಲು ಮುಖ್ಯ ಕಾರಣ, ಇವರ ಭಾರತಕ್ಕೆ ಮರಳುವ ಉತ್ಕಟ ಇಚ್ಛೆಯೊಂದೇ…! ಆಕೆಗೆ ಭಾರತಕ್ಕೆ ಬರುವುದು ಇಷ್ಟವಿರಲಿಲ್ಲ. ಹೀಗೇ ತಾವು ಬಯಸಿದ ಒಲವು ತಮಗೆ ಸಿಗದಿದ್ದರೂ ಕೂಡ ಜೀವನ್ಮುಖಿಯಾಗಿ ಜೀವನಪೂರ್ತಿ ಆ ಭಾವದೊಲವನ್ನೇ ಸ್ಪೂರ್ತಿಯಾಗಿ…! “ಬಾಳ ದಾರಿಗೆ
ಆತ್ಮ ಸಂಗಾತಿಯಂತೆ ದೀವಿಗೆ”ಯಾಗಿಸಿಕೊಂಡಿದ್ದಷ್ಟೇ ಅಲ್ಲ ಆ ಪ್ರೀತಿಯ ಪರಿಚಯವನ್ನೂ ಕೂಡ ಕೊನೆವರೆಗೂ ಪುಟ್ಟ ಹೃದಯದಲ್ಲಿ ಬಚ್ಚಿಟ್ಟುಕೊಂಡಿದ್ದು ವಿಶೇಷ…!
ವಾಹ್!!! ನಿಜಕ್ಕೂ ಪ್ರಶಂಸನೀಯ. ಅದೆಂತಹ ಮೇರು ವ್ಯಕ್ತಿತ್ವ.ಇಂತಹ ನಿಷ್ಕಲ್ಮಶ ಪ್ರೀತಿ ಹುಟ್ಟುವುದು ಅಪರೂಪದಲ್ಲಿ ಅಪರೂಪ ಇಂದಿನ ದಿನಮಾನಗಳಲ್ಲಿ ಅಲ್ವಾ…!
ನೀವೆಲ್ಲಾ ಗಮನಿಸಿದಂತೆ ಒಂದೇ ತರಹದ ಆಸಕ್ತಿ,ಅಭಿರುಚಿ ಹೊಂದಿರುವ ಸಮಾನ ಮನಸ್ಕರು ಒಬ್ಬರು ಮತ್ತೊಬ್ಬರಿಗೆ ಪರಸ್ಪರ ಪ್ರೋತ್ಸಾಹ ನೀಡುವ ಮೂಲಕ ಸ್ಪೂರ್ತಿಯ ಚಿಲುಮೆಯಂತಾಗಿ ಬಾಳ ದಾರಿಗೆ ದೀವಿಗೆ/ಪ್ರೇರಣೆ/ ಮಾರ್ಗದರ್ಶಿಯಾದವರೂ ಕೂಡ ನಮ್ಮ ನಿಮ್ಮ ನಡುವೆ ಎಷ್ಟೋ ಜನರಿರುತ್ತಾರೆ. ಇಂತಹ ನಿಸ್ವಾರ್ಥದಿಂದ ಕೂಡಿದ ಸ್ನೇಹವನ್ನು ಸಂಪಾದಿಸುವುದು ಕೂಡ ಪೂರ್ವ ಜನ್ಮದ ಸುಕೃತವೇ ಸರಿ…!
ಎಲ್ಲರಿಗೂ ಇರುವುದೊಂದೇ ಜೀವನ. ನಿಷ್ಕಲ್ಮಶ ಪ್ರೀತಿ ಮತ್ತು ಕಾಳಜಿ ಪಡೆಯಬೇಕೆಂಬುದು ಎಲ್ಲರ ಸುಪ್ತ ಮನದಾಸೆ…!ಬಾಳ ಸಂಗಾತಿಗಳು ಸಾಧ್ಯವಾದಷ್ಟು ಈ ಸೂಕ್ಷ್ಮವಾದ ಸಂವೇದನೆಯ ಆಳವನ್ನು ಅರಿತು ಬೆರೆತು ಮುಂದೆ ನಡೆಯಬೇಕು. ನಾನು/ನೀನು ಎಂಬುದನ್ನು ಹೋಗಲಾಡಿಸಿ
ನಾವು
ಅಂತಾದಾಗ ಮಾತ್ರ ಒಬ್ಬರಿಗೊಬ್ಬರು ತಮ್ಮಲ್ಲಿರುವ ಸಣ್ಣ ಪುಟ್ಟ ದೋಷಗಳನ್ನು ಹೋಗಲಾಡಿಸುತ್ತ ಮೈನಸ್ ಇನ್ಟೂ ಮೈನಸ್ ಇಸ್ ಇಕ್ವಲ್ಸ್ ಟು ಪ್ಲಸ್ (-X-=+) ಆಗಿ ಬದಲಾಯಿಸಿಕೊಂಡು ಸಕಾರಾತ್ಮಕವಾಗಿ ಮುನ್ನಡೆಯುವ ದೊಡ್ಡ ಮನಸ್ಸನ್ನು ಹೊಂದಬೇಕು ಆಗ ನೋಡಿ ಮನಸೇ ಮಹದೇವ ಎಂಬಂತೆ…!
“ಬಾಳ ದಾರಿಗೆ ಸಂಗಾತಿಯೇ ದೀವಿಗೆ”ಯಾಗಿ ಬಾಳು ಬೆಳಗುವುದರಲ್ಲಿ ಎಳ್ಳಷ್ಟು ಸಂದೇಹವೇ ಇಲ್ಲ ಎನ್ನುವುದು ನನ್ನ ಬಲವಾದ ನಂಬಿಕೆ…!
“ಎಲ್ಲರದೂ ಆಗಿರಲಿ ಇದೇ ತತ್ವ
ವಿಶಾಲವಾಗಿರಲಿ ಮನುಷ್ಯತ್ವ
ಬಾಳ ಸಂಗಾತಿಗಳ ವ್ಯಕ್ತಿತ್ವ
ಎಂದಿಗೂ ಕಡಿಮೆಗೊಳಿಸದಿರಲಿ ಪರಸ್ಪರ ರ ಅಸ್ತಿತ್ವ…!” ಅಂತ ಮನದಾಳದಿಂದ ಆಶಿಸೋಣವೇ!?.
ಉಮಾ ಶೂರ್ಪಾಲಿ.





