ಡಾ. ಸಾಗರ್ ಸಿ, ಕನ್ಸಲ್ಟೆಂಟ್, ಪಲ್ಮನಾಲಜಿ, ನಾರಾಯಣ ಹೆಲ್ತ್ ಸಿಟಿ ಬೆಂಗಳೂರು

1947ನೇ ಇಸವಿ. ಸ್ಕಾಟ್ಲೆಂಡ್‌ ನಲ್ಲಿರುವ ನಿರ್ಜನ ಜುರಾ ದ್ವೀಪದ ಫಾರ್ಮ್‌ ಹೌಸ್ ಒಂದರಲ್ಲಿ ಜಾರ್ಜ್ ಆರ್ವೆಲ್ ಟೈಪ್ ರೈಟರ್ ಮುಂದೆ ಕುಳಿತು ತನ್ನ ಜೀವನ ಶ್ರೇಷ್ಠ ಕೃತಿ ‘1984’ ಅನ್ನು ಪೂರ್ಣಗೊಳಿಸಲು ಸಮಯದ ವಿರುದ್ಧ ತೀವ್ರ ಹೋರಾಟ ನಡೆಸುತ್ತಿದ್ದರು. ಯಾಕೆಂದರೆ ಆಗ ಒಂದು ‘ನಿಧಾನಗತಿಯ ಪ್ಲೇಗ್’ ಎಂದು ಕರೆಯಲ್ಪಡುವ ಕಾಯಿಲೆಯೊಂದು ಅವರ ಶ್ವಾಸಕೋಶವನ್ನು ತಿನ್ನುತ್ತಿತ್ತು. ಸ್ಪಷ್ಟವಾಗಿ ಹೇಳುವುದಾದರೆ, ಬಿಹಾರದ ಮೋತಿಹಾರಿಯಲ್ಲಿ ಜನಿಸಿದ ಜಾರ್ಜ್ ಆರ್ವೆಲ್ ಅವರು ಕ್ಷಯರೋಗದಿಂದ ಬಳಲುತ್ತಿದ್ದರು. ಅವರು ವಿಪರೀತ ಕೆಮ್ಮುತ್ತಿದ್ದರು ಮತ್ತು ಕೆಮ್ಮುವಾಗ ರಕ್ತ ಬರುತ್ತಿತ್ತು. ಜೊತೆಗೆ ವಿಪರೀತ ಸುಸ್ತಿನಿಂದ ಪದೇ ಪದೇ ಕುಸಿದು ಬೀಳುತ್ತಿದ್ದರು. ಆದರೂ ಅವರು ಟೈಪ್ ಮಾಡುವುದನ್ನು ನಿಲ್ಲಿಸಲಿಲ್ಲ. ಅವರು ಡಿಸೆಂಬರ್ 1948 ರಲ್ಲಿ ಈ ಕ್ಲಾಸಿಕ್ ಪುಸ್ತಕವನ್ನು ಪೂರ್ಣಗೊಳಿಸಿ, ಒಂದು ವರ್ಷದ ನಂತರ ನಿಧನರಾದರು.
ಆರ್ವೆಲ್ ಅವರ ಕಥೆಯು ಕ್ಷಯರೋಗವು ಯಾವಾಗಲೂ ವಲಸೆ ಹೋದವರ ಅಥವಾ ಅಸಹಾಯಕರ ಕಾಯಿಲೆಯಾಗಿದೆ ಎಂಬುದನ್ನು ಒಂದು ನೆನಪಿಸುವ ಕಥೆಯಾಗಿದೆ. ಈ ವರ್ಷದ ವಿಶ್ವ ಕ್ಷಯರೋಗ ದಿನ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಈ ಕಥೆಯನ್ನು ನೆನೆಯುವುದು ಅರ್ಥಪೂರ್ಣವಾಗಿದೆ.
ಈ ವರ್ಷದ ವಿಶ್ವ ಕ್ಷಯರೋಗ ದಿನವನ್ನು ‘ಹೌದು! ನಾವು ಕ್ಷಯರೋಗವನ್ನು ಕೊನೆಗಾಣಿಸಬಹುದು: ದೇಶಗಳ ನೇತೃತ್ವದಲ್ಲಿ, ಜನರ ಶಕ್ತಿಯಿಂದ’ ಎಂಬ ಆಶಯದೊಂದಿಗೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕ್ಷಯರೋಗ ನಿರ್ಮೂಲನೆಯ ಹಾದಿಯಲ್ಲಿರುವ ಸವಾಲುಗಳ ಕುರಿತು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.
ಪ್ರಸಿದ್ಧ ಲೇಖಕ ಜಾರ್ಜ್ ಆರ್ವೆಲ್ ಅವರ ಕಾಲದಲ್ಲಿ ಇಲ್ಲದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನಗಳು ಇಂದು ಲಭ್ಯವಿವೆ. ಆದರೆ, ದುರದೃಷ್ಟವಶಾತ್ ಜಾಗತಿಕ ಮಟ್ಟದ ನಿರ್ವಹಣಾ ವಿಧಾನಗಳು ಇನ್ನೂ ಹಳೆಯ ಪದ್ಧತಿಗಳಲ್ಲೇ ಸಿಲುಕಿಕೊಂಡಿವೆ. ಇಂದು ನಮ್ಮ ತಾಂತ್ರಿಕ ಸಾಮರ್ಥ್ಯವು ಕಾರ್ಯಾಚರಣೆಯ ಸಾಮರ್ಥ್ಯಕ್ಕಿಂತ ಬಹಳಷ್ಟು ಮುಂದಿದೆ. ಅಂದರೆ, ರೋಗವನ್ನು ಪತ್ತೆಹಚ್ಚುವ ಮತ್ತು ಗುಣಪಡಿಸುವ ಆಧುನಿಕ ಉಪಕರಣಗಳಿದ್ದರೂ, ಅವುಗಳನ್ನು ಜನರಿಗೆ ತಲುಪಿಸುವಲ್ಲಿ ವ್ಯವಸ್ಥೆಯು ವಿಫಲವಾಗುತ್ತಿದೆ.
ಈ ಮಾರಕ ಕಾಯಿಲೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಲು, ನಾವು ಕ್ಷಯರೋಗವನ್ನು ಕೇವಲ ಸಂಕುಚಿತ ವೈದ್ಯಕೀಯ ದೃಷ್ಟಿಕೋನದಿಂದ ನೋಡುವುದನ್ನು ನಿಲ್ಲಿಸಬೇಕು. ಕೇವಲ ಔಷಧ ನೀಡಿದರೆ ಸಾಲದು; ಬದಲಿಗೆ ಲಕ್ಷಾಂತರ ಜನರನ್ನು ಚಿಕಿತ್ಸೆಯ ಜಾಲದಿಂದ ಹೊರಗಿಡುತ್ತಿರುವ ವ್ಯವಸ್ಥಿತ ಅಸಮರ್ಥತೆಗಳನ್ನು ಮೊದಲು ಸರಿಪಡಿಸಬೇಕಿದೆ. ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ಚಿಕಿತ್ಸೆಯಿಂದ ವಂಚಿತರಾಗುತ್ತಿರುವವರನ್ನು ಗುರುತಿಸಿ, ಅವರಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತೆ ಮಾಡುವುದೇ ಇಂದಿನ ತುರ್ತು ಅಗತ್ಯವಾಗಿದೆ.
ವೈಜ್ಞಾನಿಕ ಕ್ರಾಂತಿ
ದಶಕಗಳ ಕಾಲ, ಔಷಧ-ನಿರೋಧಕ ಕ್ಷಯರೋಗದ (ಡಿಆರ್-ಟಿಬಿ) ರೋಗಪತ್ತೆಯಾದರೆ ಚಿಕಿತ್ಸೆ ನೀಡಿದ ನಂತರವೂ ಸಾವು ಹತ್ತಿರದಲ್ಲಿದೆ ಎಂದೇ ಅರ್ಥೈಸಿಕೊಳ್ಳಲಾಗುತ್ತಿತ್ತು. ರೋಗಿಗಳು ಸಾವಿರಾರು ಮಾತ್ರೆಗಳು ಮತ್ತು ಪ್ರತಿದಿನ ನೋವಿನ ಇಂಜೆಕ್ಷನ್‌ ಗಳನ್ನು ಒಳಗೊಂಡ 18 ರಿಂದ 24 ತಿಂಗಳ ಸುದೀರ್ಘ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗಿತ್ತು. ಇದರಿಂದ ಸಾಮಾನ್ಯವಾಗಿ ಕಿವುಡುತನದಂತಹ ಶಾಶ್ವತ ಅಡ್ಡಪರಿಣಾಮಗಳು ಉಂಟಾಗುತ್ತಿದ್ದವು.
ಔಷಧ-ನಿರೋಧಕ ಕ್ಷಯರೋಗದ (ಡಿಆರ್-ಟಿಬಿ) ವಿರುದ್ಧದ ಹೋರಾಟದಲ್ಲಿ ‘ಬಿಪಿಎಎಲ್ಎಂ’ ಚಿಕಿತ್ಸಾ ಕ್ರಮವು ಹೊಸ ಆಶಾದಾಯಕ ಬೆಳವಣಿಗೆಯಾಗಿ ಹೊರಹೊಮ್ಮಿದೆ. ಬೆಡಾಕ್ವಿಲಿನ್, ಪ್ರೆಟೋಮನಿಡ್, ಲಿನೆಜೋಲಿಡ್ ಮತ್ತು ಮೊಕ್ಸಿಫ್ಲೋಕ್ಸಾಸಿನ್ ಎಂಬ ನಾಲ್ಕು ಔಷಧಿಗಳ ಈ ಸಂಯೋಜನೆಯು ವೈದ್ಯಕೀಯ ಲೋಕದಲ್ಲಿ ಒಂದು ‘ಪವಾಡ’ ಎಂದೇ ಬಿಂಬಿತವಾಗುತ್ತಿದೆ. ಈ ಚಿಕಿತ್ಸೆಯ ಪ್ರಮುಖ ವಿಶೇಷತೆಯೆಂದರೆ, ಇದು ಕೇವಲ ಮಾತ್ರೆಗಳ ಮೂಲಕ ನೀಡಲಾಗುವ ಚಿಕಿತ್ಸೆಯಾಗಿದ್ದು, ಗುಣಮುಖವಾಗುವ ಅವಧಿಯನ್ನು ಕೇವಲ ಆರು ತಿಂಗಳಿಗೆ ಇಳಿಸಿದೆ. ಈ ಹಿಂದೆ ರೋಗಿಗಳು ದೀರ್ಘಕಾಲದವರೆಗೆ ಕಠಿಣ ಚಿಕಿತ್ಸೆ ಪಡೆಯಬೇಕಿತ್ತು, ಆದರೆ ಈಗ ಈ ಹೊಸ ವಿಧಾನವು ಆ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಆದರೆ, ಕೇವಲ ‘ಮಾಯಾ ಮಾತ್ರೆ’ಗಳಿಂದ ಮಾತ್ರವೇ ವ್ಯವಸ್ಥೆಯ ದೋಷಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕಿದೆ. ನಾವು ಕೇವಲ ‘ವೈದ್ಯಕೀಯ ಯಶಸ್ಸು’ ಮತ್ತು ‘ಸಾಮಾಜಿಕ ಯಶಸ್ಸಿನ’ ನಡುವಿನ ವ್ಯತ್ಯಾಸವನ್ನು ಗಮನಿಸಬೇಕಿದೆ. ಒಬ್ಬ ರೋಗಿಯು ವೈದ್ಯಕೀಯವಾಗಿ ಬ್ಯಾಕ್ಟೀರಿಯಾದಿಂದ ಮುಕ್ತನಾಗಬಹುದು, ಆದರೆ ಆ ಆರು ತಿಂಗಳ ಚಿಕಿತ್ಸೆಯ ಅವಧಿಯಲ್ಲಿ ಆತ ತನ್ನ ಕೆಲಸವನ್ನು ಕಳೆದುಕೊಂಡರೆ ಅಥವಾ ಸಾಮಾಜಿಕ ಒತ್ತಡಕ್ಕೆ ಒಳಗಾದರೆ, ಅದು ವ್ಯವಸ್ಥೆಯ ವೈಫಲ್ಯವನ್ನೇ ಎತ್ತಿ ತೋರಿಸುತ್ತದೆ. ಆದ್ದರಿಂದ, ಕ್ಷಯರೋಗ ನಿರ್ಮೂಲನೆಯಲ್ಲಿ ಕೇವಲ ಔಷಧೋಪಚಾರವಷ್ಟೇ ಅಲ್ಲದೆ, ರೋಗಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಗೌರವಯುತ ಬದುಕು ನೀಡುವ ವ್ಯವಸ್ಥಿತ ಬದಲಾವಣೆಯೂ ಅಷ್ಟೇ ಅಗತ್ಯವಾಗಿದೆ.
ಪುರುಷರು ಏಕೆ ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆ?
ಅಂಕಿಅಂಶಗಳ ಪ್ರಕಾರ, ಕ್ಷಯರೋಗದಿಂದ ಅತಿ ಹೆಚ್ಚು ತೊಂದರೆಗೊಳಗಾಗುವುದು ಪುರುಷರು. ಆದರೆ ಅವರನ್ನು ಚಿಕಿತ್ಸಾ ಜಾಲಕ್ಕೆ ತರುವುದು ಅತ್ಯಂತ ಕಷ್ಟಕರ ಕೆಲಸವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಒಟ್ಟು ಕ್ಷಯರೋಗ ಪ್ರಕರಣಗಳಲ್ಲಿ ಪುರುಷರ ಪಾಲು ಸರಿಸುಮಾರು ಶೇ. 55 ರಷ್ಟಿದ್ದು, ಮಹಿಳೆಯರ ಪಾಲು ಶೇ. 33 ಮತ್ತು ಮಕ್ಕಳ ಪಾಲು ಶೇ. 12 ರಷ್ಟಿದೆ.
ಇದು ಕೇವಲ ಜೈವಿಕ ಆಕಸ್ಮಿಕವಲ್ಲ; ಇದೊಂದು ರಚನಾತ್ಮಕ ವೈಫಲ್ಯವೆಂಬುದೇ ಸರಿ. ಪುರುಷರಿಗೆ ಸಂಬಂಧಿಸಿದ ಸಾಮಾಜಿಕ ನಿಯಮಗಳು ಕಾಯಿಲೆ ಉಲ್ಬಣಗೊಳ್ಳುವವರೆಗೆ ಅವರು ಚಿಕಿತ್ಸೆ ಪಡೆಯದಂತೆ ತಡೆಯುತ್ತವೆ. ಕುಟುಂಬದ ಪ್ರದಾನ ದುಡಿಯುವವರಾದ ಕಾರಣ, ರೋಗಪತ್ತೆಯಾದರೆ ಎಲ್ಲಿ ವೇತನ ಅಥವಾ ಸಂಬಳ ಕಳೆದುಕೊಳ್ಳುತ್ತೇವೋ ಎಂಬ ಭಯ ಮತ್ತು ಸಾಮಾಜಿಕ ಒತ್ತಡ ಅವರನ್ನು ಕ್ಲಿನಿಕ್‌ ಗೆ ಭೇಟಿ ನೀಡದಂತೆ ತಡೆಯುತ್ತವೆ. ನಿಜವಾಗಿಯೂ ಜನಕೇಂದ್ರಿತವಾಗಿ ಕೆಲಸ ಮಾಡಲು, ನಾವು ನಿಗದಿತ ಕ್ಲಿನಿಕ್ ಸಮಯದಿಂದ ಆಚೆ ಪುರುಷರು ಕೆಲಸ ಮಾಡುವ ಸ್ಥಳಗಳಲ್ಲೇ ಅವರನ್ನು ತಲುಪಿ ರೋಗ ಪತ್ತೆ ಮಾಡಿ ಸೂಕ್ತ ಸಮುದಾಯ ಆಧಾರಿತ ಚಿಕಿತ್ಸೆ ಒದಗಿಸುವ ಕಡೆಗೆ ಮನಸ್ಸು ಮಾಡಬೇಕಿದೆ.
ಸೈಲೋ ಸಿಸ್ಟಮ್ ಮತ್ತು ಆರ್ಥಿಕ ವಾಸ್ತವ
ಕ್ಷಯರೋಗವನ್ನು ಪ್ರತ್ಯೇಕವಾಗಿ ನೋಡಿ ಚಿಕಿತ್ಸೆ ನೀಡುವುದು ಹಳೆಯ ತಂತ್ರವಾಗಿದೆ. ರೋಗಿಗಳು ಇಂದು ಎರಡು ರೀತಿಯ ಹೊರೆಯನ್ನು ಅನುಭವಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ, ಏಕೆಂದರೆ ಕ್ಷಯರೋಗವು ಸಾಮಾನ್ಯವಾಗಿ ಮಧುಮೇಹ, ಅಪೌಷ್ಟಿಕತೆ ಅಥವಾ ಎಚ್‌ಐವಿ ಜೊತೆಗೂಡಿ ಬರುವ ಸಾಧ್ಯತೆಯೂ ಇರುತ್ತದೆ.
ಮಧುಮೇಹ: ಇದು ಕ್ಷಯರೋಗದ ಅಪಾಯವನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸುತ್ತದೆ.
ಎಚ್‌ಐವಿ: ಎಚ್‌ಐವಿ ಪೀಡಿತರು ಕ್ಷಯರೋಗಕ್ಕೆ ತುತ್ತಾಗುವ ಸಾಧ್ಯತೆ 16 ಪಟ್ಟು ಹೆಚ್ಚು.
ಇಷ್ಟಾದರೂ, ನಮ್ಮ ವೈದ್ಯಕೀಯ ವ್ಯವಸ್ಥೆಗಳು ಇಂದಿಗೂ ಹಳೆಯ ಪದ್ಧತಿಯಲ್ಲೇ ಉಳಿದಿವೆ. ಒಬ್ಬ ರೋಗಿಯು ಪರಸ್ಪರ ಸಂವಹನವೇ ಇಲ್ಲದ ಹರಿದು ಹಂಚಿಹೋಗಿರುವ ಚಿಕಿತ್ಸಾ ಕೇಂದ್ರಗಳ ನಡುವೆ ಅಲೆದಾಡುವಂತಾಗಿದೆ. ನಾವು ಕೇವಲ ರೋಗಾಣುವಿಗೆ ಮಾತ್ರವಲ್ಲದೆ, ಇಡೀ ವ್ಯಕ್ತಿಗೆ ಸಮಗ್ರವಾಗಿ ಚಿಕಿತ್ಸೆ ನೀಡಬೇಕೆಂದರೆ ಎಲ್ಲಾ ಆರೋಗ್ಯ ಸೇವೆಗಳ ಸಮನ್ವಯವೊಂದೇ ಏಕೈಕ ಮಾರ್ಗ.
ದುಬಾರಿ ಚಿಕಿತ್ಸೆ ವೆಚ್ಚ
ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದರೆ ನಾವು ಕೇವಲ ರೋಗಿಯ ಶ್ವಾಸಕೋಶದ ಕಡೆಗೆ ಗಮನಹರಿಸಿದರೆ ಸಾಲದು, ಬದಲಿಗೆ ಆ ರೋಗದಿಂದ ಬಾಧಿತರಾದವರ ಒಟ್ಟಾರೆ ಜೀವನದ ಕಡೆಗೆ ದೃಷ್ಟಿ ಹರಿಸಬೇಕಿದೆ. ಈ ರೋಗದ ಅಂತ್ಯವು ಕೇವಲ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವಲ್ಲ, ಇದು ವಿಜ್ಞಾನದ ಬೆಳವಣಿಗೆಯನ್ನು ಜನರ ಬಳಿಗೆ ತಲುಪದಂತೆ ತಡೆಹಿಡಿದಿರುವ ಹಳೆಯ ವ್ಯವಸ್ಥೆಗಳನ್ನು ಸರಿಪಡಿಸುವ ನಾಯಕತ್ವ ಮತ್ತು ಧೈರ್ಯದ ಪ್ರಶ್ನೆಯಾಗಿದೆ. ವಿಶ್ವ ಕ್ಷಯರೋಗ ದಿನದ ಈ ಸಂದರ್ಭದಲ್ಲಿ ನಾವು ಕೇವಲ ನಮ್ಮ ಬದ್ಧತೆಗಳನ್ನು ಕಾಗದದ ಮೇಲೆ ನವೀಕರಿಸಿದರೆ ಸಾಲದು. ಬದಲಿಗೆ, ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡುವ ಅಗತ್ಯವಿದೆ. ಇಂದು ಕ್ಷಯರೋಗ ಚಿಕಿತ್ಸೆಯ ‘ಮಾನವ ವೆಚ್ಚ’ ವಿಪರೀತವಾಗಿರಲು ಕಾರಣ ಔಷಧಗಳಲ್ಲ, ಬದಲಿಗೆ ಆ ಔಷಧಗಳನ್ನು ವಿತರಿಸಲಾಗುತ್ತಿರುವ ಈ ಜಗತ್ತಿನ ಹದಗೆಟ್ಟ ವ್ಯವಸ್ಥೆಗಳೇ ಕಾರಣ ಎಂಬುದು ಕಹಿ ಸತ್ಯ.
ಗುಣಪಡಿಸಬಹುದಾದ ಕಾಯಿಲೆಯಿಂದ ಬದುಕುಳಿಯುವುದು ಅಥವಾ ತಮ್ಮ ಜೀವನದ ಮಹತ್ವದ ಕೆಲಸವನ್ನು ಪೂರ್ಣಗೊಳಿಸುವುದು – ಈ ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವ ಅನಿವಾರ್ಯತೆ ಯಾರಿಗೂ ಬರಬಾರದು. ಕ್ಷಯರೋಗವನ್ನು ಹೇಗೆ ಗುಣಪಡಿಸಬೇಕು ಎಂಬುದು ಇಂದು ಕೇವಲ ವೈದ್ಯಕೀಯ ರಹಸ್ಯವಾಗಿ ಉಳಿದಿಲ್ಲ, ಅದು ಲಭ್ಯವಿದ್ದರೂ ಜನರಿಗೆ ಸರಿಯಾಗಿ ಸಿಗದಂತೆ ಮಾಡುತ್ತಿರುವ ನಮ್ಮ ವ್ಯವಸ್ಥೆಗೆ ಒಡ್ಡಿದ ದೊಡ್ಡ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ನಾವು ಗೆಲ್ಲಬೇಕಾದರೆ ವ್ಯವಸ್ಥಿತ ಬದಲಾವಣೆಯೊಂದೇ ದಾರಿಯಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ