ಮಣ್ಣಿನಲ್ಲಿ ಏನಿದೆ ಮಹಾ! ಎಂದು ಹಂಗಿಸುವವರಿಗೆ, ಅದರಲ್ಲಿ ಎಂಥ ಅದ್ಭುತ ಆಭರಣಗಳನ್ನು ರೂಪಿಸಬಹುದು ಎಂದು ತಿಳಿಸಿಕೊಟ್ಟಿರುವ ಮಣ್ಣಿನ ಮಗಳು ನೀಲಿ ರೋಹಿತ್ ರ ಕುರಿತು ಪರಿಚಯ ಪಡೆಯೋಣವೇ…..?
ತನ್ನದೆಲ್ಲವನ್ನೂ ಕಳೆದುಕೊಂಡು ಇನ್ನು ಬದುಕು ಸಾಕು ಎನ್ನುವಂತಾದಾಗ, ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದು, ಬದುಕು ಕಟ್ಟಿ ಅನೇಕರಿಗೆ ಜೀವನಸ್ಛೂರ್ತಿಯನ್ನು ತುಂಬಿದ ಹೆಮ್ಮೆಯ ಕನ್ನಡತಿ, ಮೈಸೂರಿನ ದಿಟ್ಟ ಹೆಣ್ಣುಮಗಳೊಬ್ಬಳ ಬಾಳ ಪಯಣವಿದು.
ಹೆಣ್ಣುಮಗು ಹುಟ್ಟಿತೆಂಬ ಕಾರಣದಿಂದ ಹೆತ್ತವರ ನಿರ್ಲಕ್ಷ್ಯಕ್ಕೆ ಒಳಗಾಗಿ, ಅಜ್ಜ ಅಜ್ಜಿಯರ ನೆರಳಿನಲ್ಲೇ ಬೆಳೆದು, ಸುತ್ತಲಿನ ಅನೇಕರ ಹಂಗಿನ ಮಾತುಗಳನ್ನು ಕೇಳಿಕೊಂಡು, ಪದೇ ಪದೇ ಗಾಯಗೊಂಡ ಮನಸ್ಸಿನ ನೋವನ್ನು ನುಂಗಿ ಬೆಳೆದವರಿವರು. ಮದುವೆ ಎಂಬ ಬಂಧನಕ್ಕೆ ಬಿದ್ದು ಅಲ್ಲೂ ನಕರವನ್ನು ಅನುಭವಿಸಿ, ಪುಟ್ಟ ಹೆಣ್ಣುಮಗುವಿನ ಜೊತೆ ಒಂಟಿಯಾಗಿ ನಿಂತ ನೀಲಿಗೆ ಆಶಾಕಿರಣಾಗಿದ್ದು ರೋಹಿತ್.
ಬರೀ ಕಷ್ಟಗಳನ್ನು ನುಂಗಿಕೊಂಡು, ಪ್ರೀತಿಗಾಗಿ ಸದಾ ಹಂಬಲಿಸಿದ ಮಂಜುಳಾ ಎಂಬ ಮುಗ್ಧೆ, `ನೀಲಿ’ಯಾಗಿ ತನ್ನನ್ನು ಇಷ್ಟಪಟ್ಟು ಮದುವೆಯಾದರ ಜೊತೆ ಮತ್ತೆ ಬದುಕು ಕಟ್ಟಿಕೊಳ್ಳುವಷ್ಟರಲ್ಲಿ ವಿಧಿ ಮತ್ತೆ ಮೋಸ ಮಾಡಿತ್ತು. ಕೊರೋನಾ ಎಂಬ ರಕ್ಕಸ `ಕೊರೋನಾ ವಾರಿಯರ್’ ಆಗಿದ್ದ ಅವರ ಪತಿಯನ್ನು ಕಸಿದುಕೊಂಡು ಮತ್ತೆ ಮೇಲೇಳಾಗದಂತಹ ಪೆಟ್ಟು ಕೊಟ್ಟಿತ್ತು.
ಹೊರಗಿನ ಪ್ರಪಂಚವನ್ನೇ ಅರಿಯದ, ತನ್ನ ಪುಟ್ಟ ಮಗಳ ಜೊತೆ ಒಂಟಿಯಾಗಿ ನಿಂತ ಇವರ ಕಷ್ಟಕ್ಕೆ ಮನೆಯವರೇ ಹೆಗಲಾಗಲಿಲ್ಲ. ಬದಲಿಗೆ ಇವರ ಮೇಲಿನ ಅನೇಕ ಆರೋಪಗಳಿಗೆ ಕೋರ್ಟ್ ಕಛೇರಿಗಳಿಗೆ ಅಲೆಯಬೇಕಾದ ಸಂದರ್ಭಗಳು ಎದುರಾದವು. ವಿಧಿಯ ಅಟ್ಟಹಾಸದೊಂದಿಗೆ ಸಮಾಜ ಕೊಟ್ಟ ತಿರಸ್ಕಾರದ ನೋವು ಸೇರಿ ಬಳಲಿದ ಇವರು ಅಳುತ್ತಾ ಸುಮ್ಮನೆ ಕೂರುವಂತೆಯೂ ಇರಲಿಲ್ಲ.
ಮಗಳ ಭವಿಷ್ಯ ಕಣ್ಣೆದುರಿಗೆ ಇರುವಾಗ, ಗುರುವಾಗಿ ಪತಿ ರೋಹಿತ್ ಕಲಿಸಿದ್ದ ಮಣ್ಣಿನ ಆಭರಣಗಳ ತಯಾರಿಕೆಯೊಂದೇ ನೀಲಿಯವರ ಮುಂದಿನ ಗುರಿಯಾಯಿತು.
ಮಣ್ಣಿನ ವಿವಿಧ ಆಭರಣಗಳು
ಮಣ್ಣನ್ನು ನಂಬಿದವರಿಗೆ ಅದು ಯಾವತ್ತೂ ಮೋಸ ಮಾಡುವುದಿಲ್ಲ ಎನ್ನುವ ಮಾತಿದೆ. ದಿನನಿತ್ಯ ಉಪಯೋಗಿಸುವ ವಸ್ತುಗಳಾದ ಪೆನ್ನಿನ ಭಾಗಗಳು, ರೀಫಿಲ್, ಚಾಕು, ವಿವಿಧ ಅಳತೆಯ ಮುಚ್ಚಳಗಳು ಇತ್ಯಾದಿಗಳನ್ನಷ್ಟೇ ಉಪಯೋಗಿಸಿಕೊಂಡು ತಯಾರಿಸಬಹುದಾದ ಮಣ್ಣಿನ ಆಭರಣಗಳಿಗೆ ಬಂಡವಾಳ ಕಡಿಮೆ. ನಮ್ಮ ಸುತ್ತಮುತ್ತ ಸಿಗುವ ಮಣ್ಣನ್ನು ದಿನಗಟ್ಟಲೆ ನೆನೆಸಿ, ಸೋಸಿ ಒಂದು ಹದಕ್ಕೆ ಬಂದ ಮೇಲೆ ಆ ಮಣ್ಣಿನಲ್ಲಿ ಒಡವೆಗಳನ್ನು ತಯಾರಿಸಿ, ಅವುಗಳನ್ನು ಒಣಗಿಸಿ, ನಂತರ ಬೆಂಕಿಯಲ್ಲಿ ಬೇಯಿಸಿದರೆ ಒಂದು ಹಂತದ ಕೆಲಸ ಮುಗಿಯಿತು.
ಆಮೇಲೆ ಬರುವುದೇ ಬಣ್ಣಗಳ ಕೈಚಳಕ. ವಿಷಕಾರಿಯಲ್ಲದ ಬಣ್ಣಗಳನ್ನು ಹಚ್ಚಿ ಸಿದ್ಧ ಮಾಡಿದ ಆಭರಣಗಳನ್ನು ತಮ್ಮ ಬಟ್ಟೆಗಳ ಬಣ್ಣಕ್ಕೆ ಹೊಂದಿಸಿ ಧರಿಸಿದ ಹೆಣ್ಣನ್ನು ನೋಡಲು ಎರಡು ಕಣ್ಣು ಸಾಲದು! ಇಷ್ಟೆಲ್ಲಾ ಕೆಲಸ ಬಯಸುವ ಈ ಮಣ್ಣಿನ ಒಡವೆಗಳ ತಯಾರಿಕೆಗೆ ಮುಖ್ಯವಾಗಿ ಬೇಕಾದದ್ದು ತಾಳ್ಮೆ ಎನ್ನುತ್ತಾರೆ ನೀಲಿ ರೋಹಿತ್.
ಕೆಲವೊಂದು ಪದಕಗಳು ಸಂಪೂರ್ಣವಾಗಿ ಒಣಗಲು ಹತ್ತು ಹದಿನೈದು ದಿನಗಳಾದರೂ ಬೇಕು. ಆಭರಣಗಳನ್ನು ಬೆಂಕಿಯಲ್ಲಿ ಸುಡುವಾಗ ಎಷ್ಟೋ ಸಲ ಒಡೆದು ಹೋಗುವುದೂ ಇದೆ. ಹಾಗಾಗಿ ತಾಳ್ಮೆ ಕಳೆದುಕೊಂಡು, ಇಂದು ಒಡವೆಗಳನ್ನು ಮಾಡಿ ನಾಳೆಯೇ ಧರಿಸಬೇಕೆಂದರೆ ಸಾಧ್ಯವಿಲ್ಲ.
ಆಧುನಿಕ ಫ್ಯಾಷನ್ ಗೆ ತಕ್ಕಂತೆ
ಹಲವರಿಗೆ ಕೈಗೆಟುಕದಿರುವ ಚಿನ್ನದ ಆಭರಣಗಳಿಗೆ ಸಡ್ಡು ಹೊಡೆಯುವಂತಿರುವ ಈ ಮಣ್ಣಿನ ಆಭರಣಗಳು ಫ್ಯಾಷನ್ ಯುಗದಲ್ಲಿ ಕ್ರಾಂತಿಯನ್ನೇ ಮಾಡಿವೆ ಎಂದರೆ ತಪ್ಪಾಗಲಾರದು. ಸಾಂಪ್ರದಾಯಿಕ ಆಭರಣಗಳಾದ ಕಾಸಿನ ಸರ, ರುದ್ರಾಕ್ಷಿ ಮಾಲೆ, ಮುತ್ತಿನ ಆಭರಣಗಳು, ಡೋಲ್ಕಿ ಸರ ಇತ್ಯಾದಿ ಅನೇಕ ವೈವಿಧ್ಯಗಳಿವೆ.
ಇಷ್ಟೇ ಅಲ್ಲದೆ, ನವನವೀನ ಮಾದರಿಯ, ಪಾಶ್ಚಾತ್ಯ ಶೈಲಿಯ ದಿರಿಸಿನ ಮೇಲೆ ಚೆನ್ನಾಗಿ ಹೊಂದುವ ಕಂಟೆಂಪರರಿ ಆಭರಣಗಳನ್ನು ಮಣ್ಣಿನಲ್ಲೇ ತಯಾರಿಸುವಲ್ಲಿ ಇವರು ನುರಿತವರು. ಅವರದೇ ಆದ `ನೀಲಿಕಾ ಕ್ರಿಯೇಷನ್ಸ್’ ಎಂಬ ಹೆಸರಿನಡಿಯಲ್ಲಿ ಅವರು ಮಣ್ಣಿನ ಆಭರಣಗಳ ತಯಾರಿ ಮತ್ತು ಮಾರ್ಕೆಟಿಂಗ್ ನಡೆಸುತ್ತಿದ್ದಾರೆ.
ಜನ ಸಾಮಾನ್ಯರ ಕೈಗೆ ಎಟುಕುವ ಬೆಲೆಯಲ್ಲಿ ಈ ಮಣ್ಣಿನ ಆಭರಣಗಳು ಸಿಗುವುದರಿಂದಲೂ, ನೋಡಲು ಒರಿಜಿನಲ್ ಒಡವೆಗಳ ಲುಕ್ ಹೊಂದಿರುವುದರಿಂದಲೂ, ಎಲ್ಲಾ ಹೆಂಗಳೆಯರೂ ತಮ್ಮ ಚಿನ್ನದ ಒಡವೆಗಳನ್ನು ಮರೆತು ಮಣ್ಣಿನ ಒಡವೆಗಳನ್ನು ಧರಿಸಲು ಬಯಸುತ್ತಿದ್ದಾರೆ. ಭಾರತದಲ್ಲಷ್ಟೇ ಅಲ್ಲದೇ ಹೊರ ದೇಶಗಳಿಂದಲೂ ನೀಲಿಯವರ ಮಣ್ಣಿನ ಆಭರಣಗಳಿಗೆ ವಿಶೇಷ ಬೇಡಿಕೆ ಇದೆ.
ಮತ್ತೆ ಬದುಕು ಕಟ್ಟಿಕೊಂಡರು
ತನ್ನ ಪತಿ ಹೇಳಿಕೊಟ್ಟ ವಿದ್ಯೆಯಿಂದ ಮತ್ತೆ ಬದುಕು ಕಟ್ಟಿಕೊಂಡ ನೀಲಿ ರೋಹಿತ್ ಅಷ್ಟಕ್ಕೇ ಸುಮ್ಮನಾಗದೆ, ತನ್ನಂತೆ ಬದುಕು ಕಟ್ಟಲು ಹೆಣಗುವ ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಣ್ಣಿನ ಆಭರಣಗಳನ್ನು ತಯಾರಿಸುವ ತರಬೇತಿಯನ್ನು ಅನ್ ಲೈನ್ ನಲ್ಲಿ ನಡೆಸಿಕೊಂಡು ಬಂದಿದ್ದು, ಮೂವತ್ತಕ್ಕೂ ಹೆಚ್ಚಿನ ಬ್ಯಾಚ್ ಗಳನ್ನು ನಡೆಸಿದ ಹೆಮ್ಮೆ ಅವರದ್ದು. ಈ ಕಲಿಕಾ ಪಯಣದಲ್ಲಿ ಭಾಗವಹಿಸಿ ತಮ್ಮದೇ ಸ್ವಂತ ಉದ್ಯಮವನ್ನು ಕಟ್ಟಿಕೊಂಡರೆಷ್ಟೋ ಮಂದಿ. ಮಹಿಳಾ ಕ್ಷೇಮಾಭಿವೃದ್ಧಿಗೆ ಸಂಬಂಧಪಟ್ಟ ಅನೇಕ ಸಂಸ್ಥೆಗಳು ನೀಲಿ ರೋಹಿತ್ ರ ಸಾಧನೆಯನ್ನು ಮೆಚ್ಚಿ ಅವರನ್ನು ಸನ್ಮಾನಿಸಿವೆ. ಅಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹೆಣ್ಣುಮಕ್ಕಳ ಸ್ವಾವಲಂಬಿ ಬದುಕಿಗೆ, ಅನುಭವದಿಂದ ಗಳಿಸಿದ್ದನ್ನು ಮಾತಾಗಿಸಿದ ಪುಣ್ಯ ನನ್ನದು ಎನ್ನುತ್ತಾರೆ ನೀಲಿ.
`ಮಣ್ಣು ಕಣಾ! ಬದುಕಿನ ಕಣಕಣ’ ಎಂಬ ಮಂತ್ರವನ್ನು ಸದಾ ಜಪಿಸುತ್ತಾ ತಮ್ಮ ಉದ್ಯಮದಲ್ಲಿ ಒಂದೊಂದೇ ಹೆಜ್ಜೆ ಮುಂದಡಿ ಇಡುತ್ತಿರುವ ಅವರ ಜೀವನ ನಮ್ಮೆಲ್ಲ ಹೆಣ್ಣುಮಕ್ಕಳಿಗೂ ಮಾದರಿಯಾಗಿದೆ.
– ವಿದ್ಯಾ ಎಸ್. ನಾಯಕ್





