ಹ್ಹಹ್ಹಹ್ಹಾ ನನ್ನೊಂದಿಗೆ ವಾದ ವಿವಾದ ಮಾಡಿ ಗೆದ್ದವರು ಇದುವರೆಗೂ ಜನ್ಮ ತಾಳಿಲ್ಲ…ಮಿಸ್ಟರ್ ರವೀಂದ್ರ ಅಂತ ಕುಹಕದ ನುಡಿಗಳನ್ನಾಡಿ ಸಂಭ್ರಮಿಸುತ್ತಿದ್ದ ದಾಮಿನಿಯನ್ನು ಕಂಡು ಮಾತು ಬಾರದ ಮೂಕನಂತಾಗಿದ್ದೆ.

ಹೆತ್ತವರೊಂದಿಗೆ ವಿಜಯದ ಗಾಂಭೀರ್ಯ ನಡೆಯಿಂದ ಮುನ್ನಡೆದ ದಾಮಿನಿ ತನ್ನ ಕಾರನ್ನು ವಾಯು ವೇಗದಲ್ಲಿ ಚಲಾಯಿಸಿಕೊಂಡು ನೋಡು ನೋಡುತ್ತಿದ್ದಂತೆಯೇ ಕಣ್ಮರೆಯಾದಳು. ಜೀವನೋತ್ಸಾಹವನ್ನೇ ಕಳೆದುಕೊಂಡು ಸೋತ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ತನ್ನ ಬೈಕ್ ಸ್ಟಾರ್ಟ್ ಮಾಡಿ ಮನೆಯತ್ತ ನಡೆದ ರವೀಂದ್ರ.

ಮನೆಯೆಲ್ಲಾ ಬಿಕೋ ಅಂತಿದೆ ನನ್ನಿಂದ ಸಾಧ್ಯವಾದಷ್ಟು ಹೊಂದಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದೇನಲ್ಲ.ದಾಮಿನಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದೇ ತಪ್ಪಾಯ್ತಾ…ಒಬ್ಬಳೇ ಮಗಳೂಂತ ಅತಿಯಾದ ಮುದ್ದಿನಿಂದ ಬೆಳೆಸಿದ ಕಾರಣದಿಂದ ಮೈಯಲ್ಲಿ ರಕ್ತದ ಬದಲು ಅಹಂಕಾರವೇ

ಹರಿಯುತ್ತಿತ್ತು ಅನ್ಸುತ್ತೆ.

young-indian-couple-sitting-back-260nw-2325816913

ಛೇ…ಅಮ್ಮ ನನ್ನನ್ನು ಯಾಕಮ್ಮ ಇಷ್ಟೊಂದು ಭಾವಜೀವಿ ಯಾಗಿ ಬೆಳಿಸಿದೆ ನೀನು…ನೋಡು ನಿನ್ನ ಈ ಗುಣದಿಂದಲೇ ಇವತ್ತು ನನ್ನ ಪರಿಸ್ಥಿತಿ ಈ ರೀತಿಯಲ್ಲಿ ಅತಂತ್ರವಾಗಿದೆ ಅಂತ ಅಮ್ಮನನ್ನು ನೆನೆದು ಬಿಕ್ಕುತ್ತಲೇ ಇದ್ದ ಅದ್ಯಾವಾಗ ಆಯಾಸದಿಂದ ನಿದ್ರೆಯಾವರಿಸಿತೋ ಅರಿಯದಾದ.

ಕೈ ತುಂಬಾ ಸಂಪಾದಿಸುವ ಕುಟುಂಬ ಪ್ರೀತಿಯಿರುವ ಯುವಕನಾಗಿರಬೇಕು ಅಂತ ವಧು ವರರ ಅಂಕಣದಲ್ಲಿ ನಮೂದಿಸಿದ ದಾಮಿನಿಯ ತಂದೆ ರಮೇಶ್ ಗೆ ರವೀಂದ್ರ ಮೊದಲ ನೋಟದಲ್ಲೇ ಒಪ್ಪಿಗೆಯಾಗಿದ್ದ. ತಮ್ಮ ಹಠಮಾರಿ ಮಗಳನ್ನು ವಿವೇಕಯುಕ್ತ ರವೀಂದ್ರ ಸರಿ ದಾರಿಗೆ ತರುತ್ತಾನೆ ಅಂತ ಅಪಾರ ನಂಬುಗೆ ಅವರ ಮನದಲ್ಲಿತ್ತು.

ಮದುವೆಯಾದ ಹೊಸತು ತನ್ನ ಹೆಂಡತಿ ಮಂದಾಕಿನಿ ಪ್ರತಿ ದಿನವೂ ದಾಮಿನಿಗೆ ಫೋನಾಯಿಸಿ  ಮಾತನಾಡುತ್ತಾ ಅಲ್ಲಿಯ

ವಿಷಯಗಳಿಗೆ ತನ್ನದೇ ಆದಂತಹ ತೀರ್ಪನ್ನು ನೀಡುತ್ತಾ ಅತಿಯಾಗಿ ಹಸ್ತಕ್ಷೇಪ ಮಾಡಿದ್ದರ ಪರಿಣಾಮವೇ ಇಂದು ದಾಮಿನಿ ಇಲ್ಲ ಸಲ್ಲದ ಆಪಾದನೆ ಹೊರಿಸಿ ವಿಚ್ಛೇದನ ದೊಂದಿಗೆ ಬಹು ದೊಡ್ಡ ಮೊತ್ತವನ್ನು ಪ್ರತಿ ತಿಂಗಳು ತನಗೆ ಜೀವನೋಪಾಯಕ್ಕೆ ಕೊಡಬೇಕೆಂದು ಕೋರ್ಟ್ ನೀಡಿದ ತೀರ್ಪಿಗೆ ರವೀಂದ್ರ ನೆಂಬ ಅಮಾಯಕನ ನಿಷ್ಕಲ್ಮಶ ಪ್ರೀತಿ ಬಲಿಯಾಗಿತ್ತು.

ಬದುಕಿನಲ್ಲಿ ನೋವುಗಳನ್ನೇ ಹಾಸಿ ಹೊದ್ದಿರುವ ರವೀಂದ್ರನ ತಾಯಿ ಮಗನಲ್ಲಿ ಅತಿಯಾದ ಪ್ರೀತಿ,ಕಾಳಜಿ, ವಿಶ್ವಾಸದ ನಡೆ ನುಡಿಯನ್ನು ಬೆಳೆಸಿ ಪೋಷಿಸಿ ಭಾವಜೀವಿಯನ್ನಾಗಿಸಿದ್ದಕ್ಕೆ ಇಂದು ರವೀಂದ್ರ ಇಂತಹ ದುಃಖಕ್ಕೆ ಗುರಿಯಾಗಿ ಕುಡಿತದ ದಾಸನಾಗಿ ಜೀವನದ ಮೇಲಿನ ಆಸಕ್ತಿಯನ್ನು ಕಳೆದುಕೊಂಡು ನಿಷ್ಕಲ್ಮಶ ಪ್ರೀತಿಗೆ ಸೋಲುಂಟೆ!? ಇಲ್ಲಾ ಖಂಡಿತ ಒಂದಿಲ್ಲಾ ಒಂದಿನ ನನ್ನ ದಾಮಿನಿಯ ಮನಃಪರಿವರ್ತನೆ ಯಾಗಿ ಮತ್ತೇ ನನ್ನ ಬದುಕಿಗೆ ಚೈತ್ರದ  ಗೆಲುವನ್ನು ತಂದು ಕೊಡುತ್ತಾಳೆಂಬ ಭ್ರಮೆಯಲ್ಲಿಯೇ ದಿನಗಳೆಣಿಸುತ್ತಿದ್ದಾನೆ….!

ಉಮಾ ಶೂರ್ಪಾಲಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ