ನಮ್ಮ ಜೀವನದ ಎಂತಹುದೇ ಪರಿಸ್ಥಿತಿಯಲ್ಲಿ ನಮ್ಮ ಮನಸ್ಥಿತಿಯನ್ನು ನಾವು ಕಾಪಾಡಿಕೊಂಡು ಮುನ್ನಡೆಯಬೇಕು ಅಂತ ಅಮ್ಮ ಹೇಳುತ್ತಿದ್ದ ಮಾತು ನಿಜಕ್ಕೂ ಅಕ್ಷರಶಃ ಸತ್ಯವೆಂದರಿತು ಹೊಸ ಬಾಳಿನ ಹೊಸ್ತಿಲಲಿ ಅಶುತೋಷ್ ನ ಮಡದಿಯಾಗಿ ಮನೆಗೆ ಬಂದಳು ಭಾವಿಕಾ.
ಮದುವೆ ಮನೆ ಅಂದ ಮೇಲೆ ಕೇಳಬೇಕೆ!? ಮನೆ ತುಂಬಾ ನೆಂಟರಿಷ್ಟರೆಲ್ಲ ಹಾಡು, ಹರಟೆ ಮುಂತಾದ ಕೆಲಸ ಕಾರ್ಯದಲ್ಲಿ ಮಗ್ನರಾಗಿದ್ದರು. ಅದೇ ಸಮಯದಲ್ಲಿ ಅಣ್ಣನ ಮದುವೆಗೆಂದು ಬಂದು ತಿಂಗಳ ಮೇಲಾಯ್ತು...! ಮಕ್ಕಳ ರಜೆ ಕೂಡ ಮುಗೀತಾ ಬಂತು, ಇನ್ನು ತಾನು ಹೊರಡಬೇಕೂಂತ ಅಪ್ಪ ಅಮ್ಮನಿಗೆ ನಮಸ್ಕಾರ ಮಾಡಲು ಮಗಳು ದೀಪಿಕಾ ಅವರನ್ನು ಹುಡುಕುತ್ತಾ ನಡುಮನೆಗೆ ಬಂದಳು.

ಕೇಶವರಾವ್ ಮತ್ತು ರಾಧಮ್ಮ ಮಗಳಿಗೆ ಸಂತೋಷದಿಂದ ಶುಭಾಶೀರ್ವಾದಿಸುತ್ತ ನಿಮ್ಮ ಜೀವನದ ಬಗ್ಗೆ ಕಾಳಜಿ ತಗೋ ಅಳಿಯಂದಿರ ಅನವಶ್ಯಕ ಖರ್ಚು ವೆಚ್ಚಗಳನ್ನೆಲ್ಲ ಕಡಿತಗೊಳಿಸು ಮುಖ್ಯವಾಗಿ ಪದೇ ಪದೇ ಕುಂಟು ನೆಪ ಮಾಡಿ ತವರುಮನೆಗೆ ಹಾಜರಾಗುವ ನಿನ್ನ ನಾದಿನಿ ಮತ್ತು ಅವಳ ಮಕ್ಕಳಿಗೋಸ್ಕರ ತನ್ನ ಸಂಬಳದ ಮುಕ್ಕಾಲು ಭಾಗ ವ್ಯಯಿಸುವುದನ್ನು ಬಿಟ್ಟು, ಇನ್ನು ಮುಂದೆ ನಿಮ್ಮ ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ನಿಗಾ ವಹಿಸಿ ಅಂತ ಮಗಳಿಗೆ ಬುದ್ಧಿ ಮಾತು ಹೇಳಿದ್ದಕ್ಕೆ ರಾಧಮ್ಮ ಕೂಡ ಹೌದು ಹೌದೂಂತ ದನಿಗೂಡಿಸುತ್ತಲೇ ಆಕಸ್ಮಿಕವೆಂಬಂತೆ ಅಲ್ಲಿ ಎಲ್ಲರಿಗೂ ತಾನು ಮಾಡಿದ ಚಹಾ ತೆಗೆದುಕೊಂಡು ಬಂದ ಮುಗ್ಧ ನವವಧು ಭಾವಿಕಾ ಧನ್ಯತೆಯಿಂದ ಮಾವನವರಿಗೆ ಚಹಾ ಕೊಡುತ್ತ ಮಾವ ದೀಪಿಕಾ ಅತ್ತಿಗೆಗೆ ನೀವು ಹೇಳಿದ ಮಾತು ಎಷ್ಟೊಂದು ಅರ್ಥಪೂರ್ಣ ಸಂದೇಶ ನಿಜಕ್ಕೂ ತುಂಬಾ ಖುಷಿಯಾಯ್ತು...! ನಿಮ್ಮಂತಹ ಅತ್ತೆ ಮಾವನವರನ್ನು ಪಡೆದ ನಾನು ಪುಣ್ಯವಂತೆ... ಖಂಡಿತ ಇನ್ನು ಮುಂದೆ ನಾನು ಕೂಡ ಈ ನಿಮ್ಮ ಹಿತನುಡಿಯನ್ನು ಶಿರಸಾವಹಿಸಿ ಪಾಲಿಸುತ್ತೇನೆ ಅಂತ ಹೆಮ್ಮೆಯಿಂದ ಹೇಳಿದಾಗ ಕೇಶವರಾಯರು ಮತ್ತು ರಾಧಮ್ಮನವರ ಪರಿಸ್ಥಿತಿ "ಅತ್ತ ದರಿ ಇತ್ತ ಪುಲಿ" ಎಂಬಂತಾಗಿತ್ತು...!
-ಉಮಾ ಶೂರ್ಪಾಲಿ.





