ಹದಿಮೂರು ವರ್ಷಗಳ ಕೋಮಾಗೆ ಮುಕ್ತಿ
ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದಿಂದ ಅಧಿಕೃತವಾಗಿ ನಿಷ್ಕ್ರಯ ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ, ಮಂಗಳವಾರ (ಮಾರ್ಚ್ 24) ನಿಧನರಾಗಿದ್ದಾರೆ. ಹದಿಮೂರು ವರ್ಷಗಳ ಕೋಮಾದ ನರಕಯಾತನೆ ಅನುಭವಿಸಿದ್ದ ಹರೀಶ್ ರಾಣಾ, ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಹದಿಮೂರು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಭಾರತದಲ್ಲಿ ದಯಾಮರಣಕ್ಕೆ (ಪ್ಯಾಸಿವ್ ಯುಥೆನೇಷಿಯಾ – ಸಾವು ಬರಲು ವೈದ್ಯಕೀಯ ನೆರವನ್ನು ಸ್ಥಗಿತಗೊಳಿಸುವುದು) ಅನುಮತಿ ಪಡೆದಿದ್ದ ಮೊದಲ ವ್ಯಕ್ತಿ ಹರೀಶ್ ರಾಣಾ.
ಹರೀಶ್ ರಾಣಾ ಅವರ ಕುಟುಂಬದ ಮನವಿಯನ್ನು ಪುರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯ, ಎರಡು ವಾರಗಳ ಹಿಂದೆ ಜೀವ ರಕ್ಷಕ ವ್ಯವಸ್ಥೆಯನ್ನು ನಿಲ್ಲಿಸಲು ಅನುಮತಿ ನೀಡಿತ್ತು. ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಇದಾಗಿತ್ತು. ಮಾರ್ಚ್ ಹದಿನಾಲ್ಕರಂದು, 31 ವರ್ಷದ ಹರೀಶ್ ರಾಣಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಂಗಾಂಗ ದಾನ ಮಾಡಿದ ಹರೀಶ್ ರಾಣಾ ಕುಟುಂಬ
ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ, ಜೀವ ರಕ್ಷಕವನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಏಮ್ಸ್ ಆರಂಭಿಸಿತ್ತು. ಇದಾದ ನಂತರ, ಹನ್ನೊಂದು ದಿನಗಳ ನಂತರ ಹರೀಶ್ ರಾಣಾ, ನಿಧನರಾಗಿದ್ದಾರೆ. ಹದಿಮೂರು ವರ್ಷಗಳ ನರಕಯಾತನೆ ಇವರು ಅನುಭವಿಸಿದ್ದರು. ಕುಟುಂಬದವರ ಇಚ್ಚೆಯ ಪ್ರಕಾರ, ಹರೀಶ್ ರಾಣಾ ಅವರ ಪ್ರಮುಖ ಅಂಗಾಂಗಳನ್ನು ದಾನ ಮಾಡಲಾಗಿದೆ. ಇದರಲ್ಲಿ ಕಾರ್ನಿಯಾ, ಹೃದಯದ ಕವಾಟು ಸೇರಿವೆ ಎಂದು ಮೂಲಗಳು ತಿಳಿಸಿವೆ.
ಮೆದುಳಿನ ಗಾಯದಿಂದ ಕೋಮಾ ಸ್ಥಿತಿಗೆ: ಹರೀಶ್ ರಾಣಾ ಅಪಘಾತ ಸಂಭವಿಸಿದ ನಂತರ ಸುಮಾರು ಹದಿಮೂರು ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದರು. 2013ರಲ್ಲಿ, ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಇವರು, ಪೇಯಿಂಗ್ ಗೆಸ್ಟ್ ವಸತಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದಿದ್ದರು. ಆವೇಳೆ, ಮೆದುಳಿಗೆ ಗಂಭೀರವಾದ ಗಾಯಗಳಾಗಿದ್ದವು. ಆಸ್ಪತ್ರೆಗೆ ದಾಖಲಿಸಿದರೂ, ಮೆದುಳಿಗೆ ಪೆಟ್ಟಾಗಿರುವ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಮೆದುಳಿನ ಗಾಯದಿಂದ ಅವರು ಕೋಮಾ ಸ್ಥಿತಿಗೆ ತಲುಪಿದ್ದರು.
ದೇಶದ ಮೊದಲ ಪ್ಯಾಸಿವ್ ಯುಥೆನೇಷಿಯಾ ಕೇಸ್
ವರ್ಷಗಳು ಆಗುತ್ತಿದ್ದಂತೆಯೇ ಹರೀಶ್ ರಾಣಾ ಅವರ ಚೇತರಿಕೆಯ ಯಾವ ಭರವಸೆ ಉಳಿದಿರಲಿಲ್ಲ. ಅಂತಿಮವಾಗಿ ಪೋಷಕರು, ಪ್ಯಾಸಿವ್ ಯುಥೆನೇಷಿಯಾಕ್ಕೆ ಅನುಮತಿ ಕೋರಿ, ನ್ಯಾಯಾಲಯದ ಮೊರೆ ಹೋಗಿದ್ದರು. ಮಾರ್ಚ್ 11ರಂದು, ಸುಪ್ರೀಂಕೋರ್ಟ್ ಅವರಿಗೆ ಗೌರವಯುತವಾಗಿ ಸಾಯುವ ಹಕ್ಕನ್ನು ನೀಡಿತ್ತು, ಇದು ದೇಶದ ಮೊದಲ ಕಾನೂನುಬದ್ದವಾದ ದಯಾಮರಣ ಪ್ರಕರಣವಾಗಿದೆ. ವೈದ್ಯಕೀಯ ವರದಿಯು ಯಾವುದೇ ಸುಧಾರಣೆಯಾಗುತ್ತಿಲ್ಲ ಎಂದು ಹೇಳಿರುವ ಹಿನ್ನಲೆಯಲ್ಲಿ ಇಂತಹ ತೀರ್ಪನ್ನು ನೀಡಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.
ವೈದ್ಯರ ವಿಶೇಷ ತಂಡ ರಚಿಸಿದ್ದ ಏಮ್ಸ್
ಸರ್ವೋಚ್ಚ ನಾಯಾಯಲದ ಈ ಐತಿಹಾಸಿಕ ತೀರ್ಪಿನ ನಂತರ, ರಾಣಾ ಅವರನ್ನು ಗಾಜಿಯಾಬಾದ್’ನಲ್ಲಿರುವ ಮನೆಯಿಂದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರನ್ನು ಪಾಲಿಯೇಟಿವ್ ಕೇರ್ ಯುನಿಟ್ ನಲ್ಲಿ ಭರ್ತಿ ಮಾಡಲಾಗಿತ್ತು. ವೈದ್ಯಕೀಯ ಚಿಕಿತ್ಸೆ ನಿಲ್ಲಿಸುವ ವೇಳೆ, ಗೌರವಕ್ಕೆ ಧಕ್ಕೆ ಬರದಂತೆ ಯೋಜನೆಯನ್ನು ರೂಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ಈ ಹಿನ್ನಲೆಯಲ್ಲಿ ವೈದ್ಯರ ವಿಶೇಷ ತಂಡವನ್ನು ಏಮ್ಸ್ ರಚಿಸಿತ್ತು.





