ಮೊದಲಿನಿಂದಲೂ ನೃತ್ಯಾಭ್ಯಾಸಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ದೇಶ ವಿದೇಶಗಳಲ್ಲಿ ಖ್ಯಾತ ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಪ್ರತಿಭಾವಂತೆ ಹರ್ಷಿತಾರ ಬಗ್ಗೆ ವಿವರವಾಗಿ ತಿಳಿಯೋಣವೇ…..?

ಮೈಸೂರಿನ ಹೆಸರಾಂತ ಭರತನಾಟ್ಯ ಕಲಾವಿದೆ ಹರ್ಷಿತಾ ಮೈಸೂರಿನಲ್ಲಿ ವಾಸವಿರುವ ಅರುಣ್‌ ಮತ್ತು ಸುನೀತಾರವರ ಸುಪುತ್ರಿ. ಹರ್ಷಿತಾ ಕಳೆದ 2016ರಲ್ಲಿ ಲಿಂಗೇಶ್‌ ರೊಂದಿಗೆ ವೈವಾಹಿಕ ಜೀವನ ಆರಂಭಿಸಿದ್ದು, ಇದೀಗ ಎರಡು ಮುದ್ದಾದ ಮಕ್ಕಳೊಂದಿಗೆ ತಮ್ಮ ಜೀವನ ನಡೆಸುತ್ತಿದ್ದಾರೆ.

ಹರ್ಷಿತಾ ಪಂದನಲ್ಲೂರು ಶೈಲಿಯ ಭರತನಾಟ್ಯ ಕಲಾವಿದೆ. ಇವರ ಗುರುಗಳು ವಿದುಷಿ ಮಿತ್ರಾ ನವೀನ್‌ ಹಾಗೂ ಸಂಗೀತ ಗುರುಗಳು ವಿದ್ವಾನ್‌ ಎಂ.ಎಸ್‌. ನವೀನ್‌. ಇವರು ನಾದ ವಿದ್ಯಾಲಯ ಎಂಬ ನೃತ್ಯಾಲಯದಲ್ಲಿ ಬೆಳೆದು ಬಂದ ಗುರುಗಳ ಪ್ರೀತಿಯ ಶಿಷ್ಯೆ. ಇರು ಕಳೆದ 18 ವರ್ಷಗಳಿಂದ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. 2014ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಹಲವಾರು ವಿದ್ವನ್ಮಣಿಗಳ ಮುಂದೆ ತಮ್ಮ ರಂಗಪ್ರವೇಶವನ್ನು ಮಾಡಿದ್ದಾರೆ.

44671ea3-cf94-4783-a27d-95e9b2e985f7

ವಿದ್ಯಾಭ್ಯಾಸ

ಹರ್ಷಿತಾ ಬಿ.ಕಾಂ ಪದವಿಯನ್ನು ಸರ್ಕಾರಿ ಮಹಿಳಾ ಕಾಲೇಜು, ವಿಜಯನಗರ ಹಾಗೂ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ಪರೀಕ್ಷೆಗಳಾದ ಜೂನಿಯರ್‌, ಸೀನಿಯರ್‌, ವಿದ್ವತ್‌ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

ಭರತನಾಟ್ಯ ಕ್ಷೇತ್ರದಲ್ಲಿ ಹರ್ಷಿತಾ ವಿಶೇಷ ಸಾಧನೆ ಮಾಡಿದ್ದು, ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರಮುಖ ಕಾರ್ಯಕ್ರಮಗಳು ಮೈಸೂರು ದಸರಾ ಮಹೋತ್ಸವದಲ್ಲಿ ಅಂಬಾವಿಲಾಸ ಅರಮನೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮ, 2022ರಲ್ಲಿ ನಡೆದ 75ನೇ ಅದ್ಭುತ ಭಾರತಿಗೆ ಕನ್ನಡದಾರತಿ ಅಭಿಯಾನ ಕಾರ್ಯಕ್ರಮ, ಹಂಪಿಯಲ್ಲಿ ನಡೆದ ಹಂಪಿ ಉತ್ಸವ, ಮೈಸೂರಿನ ಕಲಾ ಮಂದಿರದಲ್ಲಿ ನಡೆದ 75ನೇ ಅಮೃತ ಮಹೋತ್ಸವ ಕಾರ್ಯಕ್ರಮ.

ಮೈಸೂರಿನ ಬೋಗಾದಿಯ ಭೋಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆದ ನೃತ್ಯ ಕಾರ್ಯಕ್ರಮ, ಮೈಸೂರಿನ ಟಿ. ನರಸೀಪುರದಲ್ಲಿ ನಡೆದ ಕುಂಭಮೇಳ ಸಂದರ್ಭದಲ್ಲಿನ ಜನಪದ ಸಾಂಸ್ಕೃತಿಕ ಉತ್ಸವ.

b21368fe-faa2-4608-915c-a397c463f310

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ನವರಾತ್ರಿ ಹಾಗೂ ಆಷಾಢ ಮಾಸದ ಕಾರ್ಯಕ್ರಮ, ಇದರ ಜೊತೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಶಿವರಾತ್ರಿ ಮಹೋತ್ಸವ.

ಮೈಸೂರಿನ ಹುಣಸೂರಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮ, ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಕಾರ್ಯಕ್ರಮ, ಮಂಗಳೂರಿನ ಊರ್ ಬಳಿ ನಡೆದ ಬಸವ ಜಯಂತಿ ಕಾರ್ಯಕ್ರಮ.

1ac444fe-b69c-40ff-875e-8cf65cad687d

ವೈವಿಧ್ಯಮಯ ಪ್ರದರ್ಶನಗಳು

ಹೀಗೆ ಹಲವು ಏಕವ್ಯಕ್ತಿ ಪ್ರದರ್ಶನ, ಸಮೂಹ ನೃತ್ಯ ಪ್ರದರ್ಶನ ಹಾಗೂ ನೃತ್ಯ ರೂಪಕಗಳಾದ ಶ್ರೀ ಕೃಷ್ಣ ವಿಲಾಸ, ಧರ್ಮ ವಿಜಯಂ, ಶ್ರೀ ಮಹದೇಶ್ವರ ನೃತ್ಯರೂಪಕ, ದೇವಿ ವೈಭವ, ಶ್ರೀಪುರಂದರ ದಾಸಾಮೃತ ಹೀಗೆ ಹಲವಾರು ನೃತ್ಯ ರೂಪಕಗಳಲ್ಲಿ ಭಾಗವಹಿಸಿದ್ದಾರೆ. ಕಂಸಾಳೆ, ಕೋಲಾಟ, ಡೊಳ್ಳು ಕುಣಿತ, ಸುಗ್ಗಿ ಕುಣಿತ, ಪೂಜಾ ಕುಣಿತ ಮುಂತಾದ ಜಾನಪದ ನೃತ್ಯಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಹಲವಾರು ನೃತ್ಯ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

b68ed804-da5c-4971-bdd0-28eb94eb3aee

ವೃತ್ತಿ ಜೀವನ

ಮೊದಲ ವೃತ್ತಿ ಜೀವನವನ್ನು ಈಸ್ಟ್ ವೆಸ್ಟ್ ಇಂಟರ್‌ ನ್ಯಾಷನಲ್ ಸ್ಕೂಲ್‌, ಹೂಟಗಳ್ಳಿ ಇಲ್ಲಿ 2 ವರ್ಷ ನೃತ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಶ್ರೀ ಪರಮಹಂಸ ವಿದ್ಯಾನಿಕೇತನ, ಹೆಬ್ಬಾಳ್‌, ಭಾರತೀಯ ವಿದ್ಯಾಭವನದಲ್ಲಿ ಒಂದು ವರ್ಷ ನೃತ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಗುರುಗಳೊಂದಿಗೆ ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿಯಲ್ಲಿಯೂ ಸಹ ನೃತ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಜೊತೆಗೆ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ. ಪ್ರಸ್ತುತ ಎಸ್‌.ಎಸ್‌. ಪಬ್ಲಿಕ್‌ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದ ನೃತ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

500ff0c1-5ae0-4607-8d74-3b32610336d9

ಆದರ್ಶ ನೃತ್ಯ ಶಿಕ್ಷಕಿ

ಕಾಯಕವೇ ಕೈಲಾಸ ಎಂಬ ವಚನಕಾರರ ನುಡಿಯಂತೆ ತಮ್ಮ ಕಲೆಯಲ್ಲಿಯೇ ಕೈಲಾಸ ಕಾಣುವುದೇ ಇವರ ಕಾರ್ಯವಾಗಿದೆ. ನಾಟ್ಯಾಮೃತ ಎಂಬ ನೃತ್ಯ ಶಾಲೆಯನ್ನು ಕಳೆದ 3 ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ.

ಹಲವಾರು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡುತ್ತಾ ಕಲಾ ಪ್ರಪಂಚಕ್ಕೆ ಕೊಡುಗೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಪೋಷಕರು, ಗುರುಗಳು ಮತ್ತು ಮನೆಯವರ ಸಹಕಾರ ಅತಿ ಪ್ರಮುಖವಾಗಿದೆ.

ಮದುವೆಯಾದ ನಂತರ ಹೆಣ್ಣು ತನ್ನ ವಿದ್ಯಾಭ್ಯಾಸವನ್ನು ಕೆಲವೊಮ್ಮೆ ಅರ್ಧಕ್ಕೆ ಮೊಟಕುಗೊಳಿಸಿ, ಸಾಂಸಾರಿಕ ಜೀವನ ನಡೆಸುತ್ತಾ ತನ್ನ ಕಲೆಯನ್ನು ಮರೆತುಬಿಡುತ್ತಾಳೆ. ಪತಿಯ ಸಹಕಾರ ಆದರೆ ಹರ್ಷಿತಾ ಮದುವೆಯಾದ ಮೇಲೂ ಸಹ ತಮ್ಮ ಪತಿಯ ಸಹಕಾರದಿಂದ ಹಲವಾರು ಕಾರ್ಯಕ್ರಮಗಳು, ನೃತ್ಯ ತರಗತಿಗಳನ್ನು ನಡೆಸಲು ಅವಕಾಶವಾಯಿತು ಎಂದು ಹೇಳಲು ಹರ್ಷಿಸುತ್ತಾರೆ.

e206d14a-d4a3-4b3e-b56c-58542b4d4d4c

ಹರ್ಷಿತಾ ನೃತ್ಯ ಮಾತ್ರವಲ್ಲದೆ, ಬೇರೆ ವಿಷಯಗಳಲ್ಲಿಯೂ ಸಹ ಆಸಕ್ತಿ ಹೊಂದಿದ್ದು, ಸಂಗೀತದಲ್ಲಿ ಜೂನಿಯರ್‌ ನ್ನು ತಮ್ಮ ಗುರುಗಳಾದ ವಿದ್ವಾನ್‌ ನವೀನ್‌ ರ ಮಾರ್ಗದರ್ಶನದಲ್ಲಿ ತೇರ್ಗಡೆ ಹೊಂದಿದ್ದಾರೆ. ತಮ್ಮ ಶಾಲಾ ವಿದ್ಯಾಭ್ಯಾಸದಲ್ಲಿ ಶಿಕ್ಷಣದ ಜೊತೆ ಜೊತೆಗೆ ಭಗವದ್ಗೀತೆಯನ್ನು ಸಹ ದಿನಮಣಿ ಶ್ರೀನಿವಾಸ್‌ ರ ಬಳಿ ಕಲಿಯುತ್ತಿದ್ದರು. ಭಗವದ್ಗೀತೆಯಲ್ಲಿ ಹದಿನಾರು ಅಧ್ಯಾಯಗಳ ಕಂಠಪಾಠ ಸ್ಪರ್ಧೆಯಲ್ಲಿಯೂ ಸಹ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.

ಇಷ್ಟೇ ಅಲ್ಲದೆ, ತಮ್ಮ ಕಾಲೇಜು ದಿನಗಳಲ್ಲಿ ಮೈಸೂರು ದಸರಾದ ಪಂಜಿನ ಕವಾಯಿತು ಮೈದಾನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಡೆಯಿಂದ ಪರೇಡ್‌ ನಲ್ಲಿ ಭಾಗವಹಿಸಿದ್ದಾರೆ. ಇದೀಗ ಶಾಲೆಯಲ್ಲಿ ಗೈಡ್ಸ್ ಕ್ಯಾಪ್ಟನ್‌ ಆಗಿಯೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿ. ಬಸವರಾಜು

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ