ಕಥೆ ಸವಿತಾ ರಮೇಶ್

`ಮಾನವ ತಾನೊಂದು ಬಗೆದರೆ ದೈವ ಬೇರೊಂದು ಬಗೆಯಿತುಎಂಬಂತೆ, ಕೃಷ್ಣಸ್ವಾಮಿ ಇರುವ ಸೇವಾ ಭಾಗ್ಯವನ್ನು ಬಿಟ್ಟು, ಹೊರಗಿನಿಂದ ಇನ್ನಾರನ್ನೋ ಕರೆತಂದು ಅವರ ಸೇವೆಗೆ ನಿಂತುಬಿಟ್ಟ. ವಾಸ್ತವತೆ ಅರಿವಾಗುವಷ್ಟರಲ್ಲಿ ಮುಂದೆ ಏನಾಯಿತು…….?

ಅದೊಂದು ಪ್ರತಿಷ್ಠಿತ ಕಾರ್ಯಕ್ರಮ. ನಮ್ಮ ಸಮಾಜದಲ್ಲಿ ಸೇವೆ ಮಾಡುತ್ತಾ ತೆರೆಮರೆಯಲ್ಲೇ ಇರುವ ಜನರನ್ನು ವೇದಿಕೆಯ ಮೇಲೆ ಕರೆದು ಎಲ್ಲರಿಗೂ ಪರಿಚಯಿಸುವ ಹಾಗೂ ಗೌರವದಿಂದ ಸನ್ಮಾನ ಮಾಡುವ ಕಾರ್ಯಕ್ರಮ.

ನಿರೂಪಕರು ಮಾತನಾಡುತ್ತಿದ್ದರು……ನಮ್ಮ ಭಾರತದ ಎಷ್ಟೋ ಜನರು ವಿದೇಶದಲ್ಲಿ ವಾಸಿಸುತ್ತಿದ್ದರೂ, ಭಾರತದ ಜನರಿಗೋಸ್ಕರ ಸಾಕಷ್ಟು ಸಹಾಯ ಮಾಡಿರುತ್ತಾರೆ.

ಅವರುಗಳು ತಾವು ಮಾಡಿದ ಸಹಾಯ ಯಾರಿಗೂ ಹೇಳುವುದು ಬೇಡ ಎನ್ನುತ್ತಾರೆ. ಆದರೆ ನಾವು ಈ ತರಹದವರನ್ನು ಸನ್ಮಾನ ಮಾಡಿ ಎಲ್ಲರಿಗೂ ಪರಿಚಯಸಿದರೆ ಇನ್ನಷ್ಟು ಜನರಿಗೆ ಸಮಾಜ ಸೇವೆ ಮಾಡಲು ಸ್ಫೂರ್ತಿ ಬರುತ್ತದೆ ಅಲ್ಲವೇ…..?

ನಿರೂಪಕರು ಕಾರ್ಯಕ್ರಮದ ಶುರುವಿನಲ್ಲಿಯೇ ತಾವು ಈ ಕಾರ್ಯಕ್ರಮ ಮಾಡುವ ಉದ್ದೇಶದ ಬಗ್ಗೆ  ಹೇಳಿ ಒಬ್ಬೊಬ್ಬರನ್ನಾಗಿ ಪರಿಚಯಿಸಿದರು. ಅದರಲ್ಲಿ ಬಹಳ ಜನ ತಾವು ಓದಿದ ಶಾಲೆಗೆ ಹಣದ ಸಹಾಯ ಮಾಡಿದ್ದರು. ತಾವು ಬೆಳೆದ ಊರಿನಲ್ಲಿ ಕುಡಿಯುವ ನೀರು ಮತ್ತು ಸೋಲಾರ್‌ ದೀಪದ ವ್ಯವಸ್ಥೆ ಮಾಡಿದ್ದರು.

ಒಂದಿಬ್ಬರು ಅನಾಥಾಶ್ರಮದಿಂದ ಮಕ್ಕಳನ್ನು ದತ್ತು ಪಡೆದು ಅವರ ಖರ್ಚು ವೆಚ್ಚಗಳನ್ನು ನೋಡಿಕೊಂಡರು. ವೃದ್ಧಾಶ್ರಮಕ್ಕೆ ಮಂಚ ಹಾಗೂ ಫ್ಯಾನ್‌ ಗಳನ್ನು ಹಾಕಿಸಿದರು. ಹಾಗೆಯೇ ಪ್ರತಿ ವರ್ಷ ವೃದ್ಧಾಶ್ರಮದ ಒಂದು ತಿಂಗಳು ಊಟದ ಖರ್ಚು ಕೊಡುತ್ತಿದ್ದರು ಎಲ್ಲರೂ ಇದ್ದರು.

ಮಕ್ಕಳಿಲ್ಲದವರು ಇಲ್ಲಿಯ ಅನಾಥಾಶ್ರಮದಿಂದ ಮಗುವನ್ನು ದತ್ತು ತೆಗೆದುಕೊಂಡು ಆ ಮಗುವನ್ನು ಬೆಳೆಸುವುದಲ್ಲದೆ, ಪ್ರತಿ ವರ್ಷ ಆಶ್ರಮಕ್ಕೆ ಹಣ ಕೊಡುವವರು ಇದ್ದರು. ಪ್ರತಿ ವರ್ಷ ಬಡ ಮಕ್ಕಳಿಗೆ ಓದಿಗೆ ಸಹಾಯ ಮಾಡುವವರು ಇದ್ದರು. ಎಲ್ಲರನ್ನೂ ಪರಿಚಯಿಸಿ ಸನ್ಮಾನ ಮಾಡುತ್ತಾ ಬಂದರು. ಕೆಲವರು ವಿದೇಶದಲ್ಲಿ ಇದ್ದ ಕಾರಣ ಅವರುಗಳ ಉಪಸ್ಥಿತಿ ಇರಲಿಲ್ಲ. ಎಲ್ಲರನ್ನೂ ಪರಿಚಯಿಸಿದರು ಕೊನೆಯಲ್ಲಿ ಇವರಿಬ್ಬರು ಎಲ್ಲರಿಗಿಂತ ವಿಭಿನ್ನ ವ್ಯಕ್ತಿತ್ವದವರು ಎಂದರು.

“ಇವರು ಕೃಷ್ಣಸ್ವಾಮಿ ಅಂತ, ಕಳೆದ ಇಪ್ಪತ್ತು ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದಾರೆ. ತಮ್ಮ ಜೊತೆ ಕೆಲಸ ಮಾಡುವ ಸ್ಪೇನ್‌ ದೇಶದ ಹುಡುಗಿಯನ್ನು ಮದುವೆಯಾಗಿರುತ್ತಾರೆ. ಅವರಿಗೆ ಒಬ್ಬ ಗಂಡು ಮಗ ಇದ್ದರೂ ದಂಪತಿಗಳಿಬ್ಬರೂ ಸೇರಿ ಒಂದು ಹೆಣ್ಣು ಮಗು ಹಾಗೂ ಒಬ್ಬ ಹ್ಯಾಂಡಿಕ್ಯಾಪ್‌ ಮಗುವನ್ನು ದತ್ತು ತೆಗೆದುಕೊಂಡು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಬೆಳೆಸುತ್ತಿದ್ದಾರೆ. ಅಲ್ಲದೆ ನಮ್ಮ ಭಾರತದ ಅನಾಥಾಶ್ರಮಕ್ಕೆ ಪ್ರತಿ ವರ್ಷ ಹಣ ಡೊನೇಟ್‌ ಮಾಡುತ್ತಾರೆ. ಇವರು ಇಂದು ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದು ನಮ್ಮ ಪುಣ್ಯ,” ಎಂದು ಈ ದಂಪತಿಗಳನ್ನು ಹೊಗಳಿ ಸನ್ಮಾನ ಮಾಡಿದರು.

“ನಿನ್ನೆ ವಾಪಸ್‌ ಅಮೆರಿಕಾಗೆ ಹೋಗಬೇಕಿದ್ದ ಅವರು ನಮ್ಮ ಕಾರ್ಯಕ್ರಮಕ್ಕೋಸ್ಕರ ತಮ್ಮ ಪಯಣವನ್ನು ಮುಂದೂಡಿದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರಿಗೆ ಈ ಸನ್ಮಾನ ಏನೂ ಹೊಸದಲ್ಲ, ಅವರ ಈ ಕಾರ್ಯ ಶ್ಲಾಘಿಸಿ ಅಮೆರಿಕಾದಲ್ಲಿ ತುಂಬಾ ಕಡೆ ಸನ್ಮಾನ ಮಾಡಿದ್ದಾರೆ.

“ಆದರೆ ನಮ್ಮ ಆಹ್ವಾನ ಮನ್ನಿಸಿ ಕಾರ್ಯಕ್ರಮಕ್ಕೆ ಬಂದಿದ್ದು ನಮ್ಮೆಲ್ಲರ ಪುಣ್ಯ….. ಕೃಷ್ಣಸ್ವಾಮಿ ಸರ್‌ ನೀವು ಹೆಣ್ಣು ಮಗು ಹಾಗೂ ಹ್ಯಾಂಡಿಕ್ಯಾಪ್ಡ್ ಮಗುವನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ  ಏಕೆ ಮಾಡಿದಿರಿ…. ಸ್ವಲ್ಪ ನಮ್ಮ ಪ್ರೇಕ್ಷಕರಿಗೆ ಹೇಳುತ್ತೀರಾ…..?”

ಕೃಷ್ಣಸ್ವಾಮಿ ಎದ್ದು ಬಂದರು ಮೈಕ್‌ ಹಿಡಿದು ಮೊದಲು ಎಲ್ಲರಿಗೂ ನಮಸ್ಕಾರ ಹೇಳಿದರು. ನಂತರ, “ನೋಡಿ ನಾನು ಚಿಕ್ಕವನಿರುವಾಗ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ಬೆಲೆ ಇರಲಿಲ್ಲ. ಹೆಣ್ಣುಮಕ್ಕಳು ಹಾಗೂ ಹ್ಯಾಂಡಿಕ್ಯಾಪ್ಡ್ ಮಕ್ಕಳಾದರೆ ಎಷ್ಟೊಂದು ಜನ ಅನಾಥಾಶ್ರಮಕ್ಕೆ ಬಿಟ್ಟು ಬರುತ್ತಿದ್ದರು. ಈಗ ಕಾಲ ಬದಲಾಗಿರಬಹುದು. ಆದರೆ ನನ್ನ ಮನಸ್ಸಿನಲ್ಲಿ ಅದು ನೆಲೆ ನಿಂತಿರುವ ಕಾರಣ ನಾನು ಯೋಚಿಸಿದೆ.

“ನಮ್ಮದೇ ಮಗು ಇನ್ನೊಂದೆರೆಡು ಮಾಡಿಕೊಂಡು ಬೆಳೆಸುವುದರಲ್ಲಿ ಅರ್ಥವಿಲ್ಲ. ನಮ್ಮಿಂದ ಜನರಿಗೆ ಏನಾದರೂ ಉಪಯೋಗ ಆಗಬೇಕು ಎನ್ನುವುದು ನನ್ನ ಹಂಬಲವಾಗಿತ್ತು ಇದನ್ನು ನನ್ನ ಹೆಂಡತಿಗೆ ಹೇಳಿದೆ. ಅವಳು ದತ್ತು ತೆಗೆದುಕೊಳ್ಳಲು ಒಪ್ಪಿಕೊಂಡಳು.

“ಅದಕ್ಕಾಗಿಯೇ ನಾವು ಭಾರತಕ್ಕೆ ಬಂದು ಇಲ್ಲಿಯ ಮಗುವನ್ನೇ ದತ್ತು ತೆಗೆದುಕೊಂಡು ಹೋದೆ. ಆ ಎರಡು ಮಕ್ಕಳನ್ನು ನನ್ನ ಮಗನ ಜೊತೆಗೆ ಬೆಳೆಸುತ್ತಿದ್ದೇವೆ,” ಎಂದು ಕೃಷ್ಣಸ್ವಾಮಿ ಮಾತು ಮುಗಿಸುತ್ತಿದ್ದಂತೆ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು.

dobara-story-1

ನಿರೂಪಕರು ಮತ್ತೆ, “ನಮ್ಮ ಕೃಷ್ಣಸ್ವಾಮಿ ದಂಪತಿ ನಮ್ಮ ದೇಶದ ಹೆಮ್ಮೆ! ಅವರು ನಮ್ಮಗೆಲ್ಲಾ ಸ್ಛೂರ್ತಿ ಅವರಿಗೆ ಜೋರಾಗಿ ಚಪ್ಪಾಳೆ ಬರಲಿ,” ಎಂದರು.

“ನೆಕ್ಸ್ಟ್ ನಮ್ಮ ಶ್ರಮಣಕುಮಾರ್‌ ದಂಪತಿಯರು. ಇವರು ಕೃಷ್ಣಸ್ವಾಮಿಯವರಂತೇ 15 ವರ್ಷಗಳಿಂದ ಅಮೆರಿಕಾದಲ್ಲಿ ಇದ್ದು ಈಗ ತಮ್ಮ ಮಕ್ಕಳನ್ನು ಇಂಡಿಯಾ ಸಂಸ್ಕೃತಿಯಲ್ಲಿಯೇ ಬೆಳೆಸಬೇಕೆಂದು ವಾಪಸ್‌ ಇಂಡಿಯಾಗೆ ಬಂದು ಸೆಟ್‌ ಆಗಿದ್ದಾರೆ. ಎಲ್ಲರೂ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ಕೇಳಿದ್ದೇವೆ. ಆದರೆ ಇವರು ಅಪ್ಪ ಅಮ್ಮನನ್ನು ದತ್ತು ತೆಗೆದುಕೊಂಡಿದ್ದಾರೆ….. ಆ ವಿಷಯ ಅವರ ಬಾಯಿಂದಲೇ ಕೇಳೋಣವೇ…..?” ಎಂದು ಶ್ರವಣಕುಮಾರ್‌ ಕೈಗೆ ಮೈಕ್‌ ಕೊಟ್ಟರು.

ಎಲ್ಲರಿಗೂ ನಮಸ್ಕಾರ ತಿಳಿಸಿದ ಶ್ರವಣ್‌ ಕುಮಾರ್‌, “ನಿಜವಾಗಿಯೂ ಇವರು ಯಾಕೆ ನನ್ನನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲು ಕರೆದಿದ್ದಾರೋ ಗೊತ್ತಿಲ್ಲ, ನಾನೇನು ಅಂತಹ ದೊಡ್ಡ ಕೆಲಸ ಮಾಡಿಲ್ಲ. ನಮ್ಮ ಊರು ಹಳ್ಳಿಯಾದ ಕಾರಣ ಅಲ್ಲಿ ಒಳ್ಳೆಯ ಕಾಲೇಜು ಇರಲಿಲ್ಲ. ನಾನು ಪಿಯುಸಿ ಓದು ಸಮಯದಿಂದ ಮನೆಯಿಂದ ದೂರವಿದ್ದು ಹಾಸ್ಟೆಲ್ ‌ನಲ್ಲಿಯೇ ಓದುತ್ತಿದ್ದೆ. “ಎಂಜಿನಿಯರಿಂಗ್‌ ಮುಗಿದ ನಂತರ ಎಂಎಸ್‌ ಮಾಡಲು ಅಮೆರಿಕಾಗೆ ಹೋದೆ. ಅಲ್ಲೇ ಸ್ವಲ್ಪ ವರ್ಷ ಕೆಲಸ ಮಾಡಿದೆ. ಮದುವೆ, ಮಕ್ಕಳು ಆದವು. ಆದರೆ ಅಮ್ಮ ಅಪ್ಪ ಜೊತೆ ಇಲ್ಲದ ನೋವು ನನ್ನನ್ನು ತುಂಬಾ ಬಾಧಿಸುತ್ತಿತ್ತು.

“ಇನ್ನಾದರೂ ಇಂಡಿಯಾಗೆ ಹೋಗಿ ವಯಸ್ಸಾದ ಅಮ್ಮ ಅಪ್ಪನ ಜೊತೆ ಇರಬೇಕು ಎಂದುಕೊಂಡೆ. ನನ್ನ ಮಕ್ಕಳಿಗೂ ಅಜ್ಜ ಅಜ್ಜಿಯ ಪ್ರೀತಿ ಸಿಗಬೇಕು. ನಮ್ಮ ಭಾರತೀಯ ಸಂಸ್ಕೃತಿ ತಿಳಿಯಬೇಕು, ಇಂಡಿಯಾದಲ್ಲಿಯೇ ಓದಿಸೋಣ, ವಾಪಸ್‌ ಇಂಡಿಯಾಗೆ ಹೋಗೋಣ ಎಂದು ನನ್ನ ಹೆಂಡತಿಯ ಬಳಿ ಹೇಳಿದೆ. ಅವಳೂ ತಕ್ಷಣ ಒಪ್ಪಿಕೊಂಡಳು. ಮನೆಗೂ ಫೋನ್‌ ಮಾಡಿ ಅಮ್ಮ ಅಪ್ಪ, ಅಣ್ಣನಿಗೂ ಈ ವಿಷಯ ಹೇಳಿದೆ. ಇನ್ನು ಬಂದು ಬೆಂಗಳೂರಿನಲ್ಲಿ ಇರುತ್ತೇನೆ. ಇಲ್ಲಿ ಎಲ್ಲ ಸೆಟ್‌ ಮಾಡಿ ಬರಲು ಒಂದು ವರ್ಷವಾಗುತ್ತದೆ, ಬಂದ ನಂತರ ಅಮ್ಮ ಅಪ್ಪ ನನ್ನ ಜೊತೆಗೆ ಇರಬೇಕು ಎಂದಿದ್ದೆ.

“ಎಲ್ಲರೂ ಖುಷಿಯಿಂದ ಒಪ್ಪಿಕೊಂಡಿದ್ದರು. ನಾನು ಅಲ್ಲಿ ಎಲ್ಲಾ ಸೆಟ್‌ ಮಾಡಿ ಇಂಡಿಯಾಕ್ಕೆ ಬರುವಷ್ಟರಲ್ಲಿ ನನ್ನ ದುರಾದೃಷ್ಟ ಅಮ್ಮ ಅಪ್ಪ ಇಬ್ಬರನ್ನೂ ಒಂದೇ ಸಲ ಕಳೆದುಕೊಂಡೆ. ಈ ನೋವಿಗೆ ಪರಿಹಾರವಾಗಲಿ ಎಂದು ಹಿರಿಯ ದಂಪತಿಗಳನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ವೃದ್ಧಾಶ್ರಮಕ್ಕೆ ಹೋಗಿ ಅಪ್ಪ ಅಮ್ಮ ಇಬ್ಬರನ್ನೂ ದತ್ತು ತೆಗೆದುಕೊಳ್ಳಬೇಕು ಎಂದುಕೊಂಡೆ.

“ಅಲ್ಲಿಗೆ ಹೋದಾಗ ಒಂದು ದಂಪತಿಯರನ್ನು ನೋಡಿ ನಮಗೆ ಇಷ್ಟವಾಯಿತು. ಅವರು ಬಡವರೇನಲ್ಲ. ಅವರಲ್ಲಿ ಹಣಕ್ಕೆ ಕೊರತೆ ಇರಲಿಲ್ಲ. ಆದರೆ ಅವರು ಮಗ ಸೊಸೆ ಮೊಮ್ಮಕ್ಕಳ ಪ್ರೀತಿಗಾಗಿ ಕೊರಗುತ್ತಿದ್ದರು. `ಇದ್ದ ಒಬ್ಬ ಮಗ ಅಮೆರಿಕಾ ಸೇರಿದವು. ಅಲ್ಲಿಯ ಹುಡುಗಿಯನ್ನೇ ಮದುವೆ ಮಾಡಿಕೊಂಡ. ಮಗ ಸೊಸೆ ಮೊಮ್ಮಕ್ಕಳ ಜೊತೆ ಇರುವುದು ನಮ್ಮ ಕನಸು, ನಮಗೆ ಬೇಕಾದಷ್ಟು ಹಣ ಕಳುಹಿಸುತ್ತಾನೆ. ಆದರೆ ಅವರುಗಳ ಪ್ರೀತಿ ಮಾತ್ರ ಸಿಗುವುದಿಲ್ಲ…. ಈಗ ನಮಗಿಬ್ಬರಿಗೇ ಮನೆಯಲ್ಲಿ ಇರಲು ಬೇಸರವಾಗಿ ಈ ಆಶ್ರಮಕ್ಕೆ ಬಂದೆವು,’ ಎಂದು ನೊಂದುಕೊಂಡು ಹೇಳಿದರು.

“ಆಗ ನಾನು ನನ್ನ ಹೆಂಡತಿ ತೀರ್ಮಾನ ಮಾಡಿದೆ, ಇವರನ್ನೇ ದತ್ತು ತೆಗೆದುಕೊಳ್ಳೋಣ ಎಂದು ಅವರ ಬಳಿ ಮಾತಾಡಿದೆವು. ಅವರೂ ಒಪ್ಪಿಕೊಂಡರು. ಅವರ ಬಳಿ ಇದ್ದ ಆಸ್ತಿ ಹಣ ಎಲ್ಲವನ್ನೂ ವೃದ್ಧಾಶ್ರಮಕ್ಕೆ ಕೊಟ್ಟು ಇಬ್ಬರನ್ನು ಬರೀ ಕೈಯಲ್ಲಿ ನನ್ನ ಜೊತೆ ಕರೆದುಕೊಂಡು ಬಂದೆವು.

“ನಾನಂತೂ ಇದನ್ನು ನನ್ನ ಸ್ವಾರ್ಥಕ್ಕೆ ಮಾಡಿದ್ದು, ಈಗ ಅವರಿಬ್ಬರು ನಮಗೆ ಅಮ್ಮ ಅಪ್ಪನಂತೆಯೇ ಇದ್ದಾರೆ. ನಮ್ಮ ಮಕ್ಕಳಿಗೆ ಅಜ್ಜ ಅಜ್ಜಿ ಆಗಿದ್ದಾರೆ. `ವಯಸ್ಸಾದರು ಅವರಿಗೆ ಕಾಯಿಲೆ ಕಸಾಲೆ ಜಾಸ್ತಿ ಇರುತ್ತದೆ. ಅವರ ಸೇವೆ ಮಾಡಬೇಕಾಗುತ್ತೆ ಯೋಚಿಸಿ,’ ಎಂದು ನನ್ನ ಗೆಳೆಯರೆಲ್ಲ ಹೇಳಿದರು. ಆದರೆ ನನ್ನ ಹೆಂಡತಿ ಅವರನ್ನು ತನ್ನ ಸ್ವಂತ ಅತ್ತೆ ಮಾವನಂತೆ ನೋಡಿಕೊಳ್ಳುತ್ತಿದ್ದಾಳೆ. ಹುಷಾರಿಲ್ಲದಿದ್ದರೂ ಅವರ ಸೇವೆ ಮಾಡುತ್ತೇವೆ. ನಮಗೆ ಅದು ಆತ್ಮ ತೃಪ್ತಿ ನೀಡಿದೆ.

“ಅವರೂ ಅಷ್ಟೇ ತಮ್ಮ ಮಗನಿಗೆ `ನಮ್ಮನ್ನು ಒಬ್ಬರು ದತ್ತು ತೆಗೆದುಕೊಳ್ಳುತ್ತಾರೆ. ನಾವಿನ್ನೂ ಅವರ ಮನೆಯಲ್ಲೇ ಇರುತ್ತೇವೆ. ನೀನು ಇನ್ನು ಮೇಲೆ ನಮಗೆ ಹಣ ಕಳುಹಿಸುವುದು ಬೇಡ, ಫೋನ್‌ ಮಾಡಿ ಕಾಂಟ್ಯಾಕ್ಟ್ ನಲ್ಲಿ ಇರುವುದು ಬೇಡ,’ ಎಂದಾಗ ಅವರ ಮಗ ಸರಿ ಎಂದುಬಿಟ್ಟನಂತೆ. ಈಗ ಅವರು ಸ್ವಂತ ಮಗನನ್ನು ಮರೆತು ನಮ್ಮ ಜೊತೆ ಸಂತೋಷದಿಂದ ಇದ್ದಾರೆ. ನಾವು ತುಂಬಾ ಸುಖವಾಗಿ ಇದ್ದೇವೆ,” ಎಂದಾಗ ಎಲ್ಲರೂ ಜೋರಾಗಿ ಕ್ಲಾಪ್ಸ್ ಹಾಕಿದರು. ಇವರ ಮಾತುಗಳನ್ನು ಕೇಳುತ್ತಿದ್ದ ಕೃಷ್ಣಸ್ವಾಮಿಗೆ, `ಹಾಗಿದ್ದರೆ ತನ್ನ ಅಮ್ಮ ಅಪ್ಪನನ್ನು ದತ್ತು ತೆಗೆದುಕೊಂಡಿದ್ದು ಇವರೇನಾ…..? ಹೌದು ಅಮ್ಮ ಅಪ್ಪ ತನಗೆ ತುಂಬಾ ಸಲ ಹೇಳಿದ್ದರು.

`ಕೃಷ್ಣ, ಇನ್ನೂ ಆ ದೇಶ ಸಾಕು ಕಣೋ….!? ನಮ್ಮದಲ್ಲದ ದೇಶದಲ್ಲಿ ಎಷ್ಟು ವರ್ಷ ಇರಲು ಸಾಧ್ಯ….. ಹಣ ದುಡಿದಿದ್ದು ಸಾಕು ಕಣೋ….. ನೀನು ಇನ್ನು ನಮ್ಮ ಊರಿಗೆ ಬಂದು ಬಿಡು, ನಮ್ಮ ಜೊತೆಗೆ ಇರು…. ನಮಗೂ ಲೋನ್ಲಿನೆಸ್‌ ಕಾಡುತ್ತಿದೆ. ವಯಸ್ಸಾದ ಕಾಲದಲ್ಲಿ ಮಗ ಸೊಸೆ, ಮೊಮ್ಮಕ್ಕಳು ಬೇಕು ಅನಿಸುತ್ತಿದೆ…. ಇಲ್ಲಾ ನಾವೇ ನೀನಿರುವಲ್ಲಿಗೆ ಬರುತ್ತೇವೆ,’ ಎಂದಿದ್ದರು.

`ತಾನು ಅದಕ್ಕೆ, ಇಲ್ಲ ನಾನು ಅಲ್ಲಿಗೆ ಬರಲು ಸಾಧ್ಯವಿಲ್ಲ. ನೀವು ಇಲ್ಲಿ ಬಂದರೂ ಕಷ್ಟವಾಗುತ್ತದೆ. ನಿಮಗೆ ಇಬ್ಬರೇ ಇರುವುದು ಬೇಸರವಾದರೆ…. ಯಾವುದಾದರೂ ಹೈಟೆಕ್‌ ವೃದ್ಧಾಶ್ರಮಕ್ಕೆ ಸೇರಿಕೊಳ್ಳಿ…. ಅಲ್ಲಿಯ ಹಣವನ್ನು ನಾನು ಪೇ ಮಾಡುತ್ತೇನೆ,’ ಎಂದಿದ್ದೆ.

`ಆಗ ನನ್ನ ತಂದೆ ಕೋಪ ಮಾಡಿಕೊಂಡು, `ವೃದ್ಧಾಶ್ರಮಕ್ಕೆ ಸೇರಿಕೊಳ್ಳಲು ನೀನೇ ಬೇಕಾ…. ನಮಗೆ ಮಕ್ಕಳಿಲ್ಲ ಎಂದುಕೊಂಡು ಇರುತ್ತೇವೆ…..’ ಎಂದಿದ್ದರು. ಮತ್ತೆ ಒಂದು ವರ್ಷದಲ್ಲಿಯೇ ಇಬ್ಬರಿಗೂ ಆರೋಗ್ಯದ ಸಮಸ್ಯೆಯಾಗಿತ್ತು. ನೋಡಿಕೊಳ್ಳುವವರು ಯಾರೂ ಇಲ್ಲ,  ಆದ್ದರಿಂದ ವೃದ್ಧಾಶ್ರಮಕ್ಕೆ ಸೇರಿಕೊಳ್ಳುತ್ತೇವೆ,’ ಎಂದು ಫೋನ್‌ ಮಾಡಿದ್ದರು.

`ಮತ್ತೆ ಎರಡು ತಿಂಗಳಲ್ಲಿ, `ನಮ್ಮನ್ನು ಗಂಡಹೆಂಡತಿ ಮಕ್ಕಳಿರುವ ಒಂದು ಕುಟುಂಬ ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದಾರೆ. ನಾವು ಅವರ ಜೊತೆ ಅವರ ಮನೆಯಲ್ಲೇ ಇರುತ್ತೇವೆ. ಇನ್ನು ಮೇಲೆ ನಿನ್ನ ಜೊತೆ ಮಗನ ಸಂಬಂಧ ಕಡಿದುಕೊಂಡಿದ್ದೇವೆ. ಇನ್ನು ಏನಿದ್ದರೂ ನಾವು ಅವನವರಾಗುತ್ತೇವೆ. ಆದ್ದರಿಂದ ನಮ್ಮ ಹಣದಲ್ಲಿ ನಿನ್ನ ಅಕೌಂಟ್‌ ಗೆ ಅರ್ಧ ಟ್ರಾನ್ಸ್ ಫರ್‌ ಮಾಡಿದ್ದೇನೆ. ಉಳಿದ ಎಲ್ಲವನ್ನೂ ವೃದ್ಧಾಶ್ರಮಕ್ಕೆ ಕೊಟ್ಟಿದ್ದೇನೆ…. ಗುಡ್‌ ಬೈ,’ ಎಂದು ಫೋನ್‌ ಕಟ್‌ ಮಾಡಿದ್ದರು.

`ಇದೆಲ್ಲ ನಡೆದು ಆಗಲೇ ಎರಡು ವರ್ಷವಾಯಿತು. ತಾನು ಈ ಸಲ ಇಂಡಿಯಾಗೆ ಬಂದವನು ಅಮ್ಮ ಅಪ್ಪನನ್ನು ಒಮ್ಮೆ ಭೇಟಿಯಾಗೋಣ ಎಂದುಕೊಂಡಿದ್ದೆ. ಆದರೆ ಕೆಲಸದ ಒತ್ತಡದಲ್ಲಿ ವೃದ್ಧಾಶ್ರಮಕ್ಕೆ ಹೋಗಿ ವಿಚಾರಿಸಿ ಅವರನ್ನು ಹುಡುಕಲು ಸಾಧ್ಯವಾಗಲಿಲ್ಲ. ಓ…. ಬಹುಶಃ ಈ ಶ್ರವಣಕುಮಾರ್‌ ದತ್ತು ತೆಗೆದುಕೊಂಡಿದ್ದು ತನ್ನ ಅಮ್ಮ ಅಪ್ಪನೇ ಇರಬೇಕು. ಇವರಿಗೆ ಕೇಳಿ ಅವರ ಮನೆಗೆ ಹೋದರೆ ಸಿಗುತ್ತಾರೇನೋ…..’ ಎಂದು ಯೋಚಿಸಿದ.

ಕಾರ್ಯಕ್ರಮ ಮುಗಿದ ನಂತರ ಶ್ರವಣ್‌ ಕುಮಾರ್‌ ರನ್ನು ಭೇಟಿ ಮಾಡಿ ಕೃಷ್ಣಸ್ವಾಮಿ, ಅವರು ದತ್ತು ತೆಗೆದುಕೊಂಡ ಅಮ್ಮ ಅಪ್ಪನ ಡೀಟೇಲ್ಸ್ ಎಲ್ಲಾ ಕೇಳಿದ. ಅವರು ತನ್ನ ಅಮ್ಮ ಅಪ್ಪನೇ ಎನ್ನುವುದು ಕನ್ಛರ್ಮ್ ಆಗಿದ್ದರಿಂದ, ಅವರನ್ನು ಭೇಟಿಯಾಗಬೇಕು ಎಂದು ಕೇಳಿದ.

ಆದರೆ ಶ್ರವಣ್‌ ಕುಮಾರ್‌, “ಓ…. ಸಾರಿ ಸಾರಿ ಮಿಸ್ಟರ್‌ ಕೃಷ್ಣಸ್ವಾಮಿ, ಅವರು ಇನ್ನು ಒಂದು ತಿಂಗಳು ನಿಮಗೆ ಸಿಗುವುದಿಲ್ಲ. ನಿನ್ನೆಯಷ್ಟೇ ಅವರು ತಮ್ಮ ವಯಸ್ಸಿನವರ ಜೊತೆ ಒಂದೂ ಟ್ರೂಪ್‌ ಯಾತ್ರಾ ಸ್ಥಳಗಳಿಗೆ ಹೋಗಿದ್ದಾರೆ,” ಎಂದ.

ಅವರು ತನ್ನ ಅಮ್ಮ ಅಪ್ಪ ಎಂದರೆ ತನ್ನನ್ನು ಕೆಟ್ಟದಾಗಿ ನೋಡುತ್ತಾರೆ ಎಂದು ಯಾರ ಬಳಿಯೂ ಈ ವಿಷಯ ಹೇಳಲಿಲ್ಲ. ಶ್ರವಣ್ ಕುಮಾರ್‌ ಬಳಿಯೂ ಹೇಳಲಿಲ್ಲ. ಆದರೆ ಮನಸ್ಸು ಚುಚ್ಚುತ್ತಿತ್ತು. ತನ್ನ ಅಮ್ಮ ಅಪ್ಪನನ್ನು ತಾನು ದೂರ ಮಾಡಿ, ಮಕ್ಕಳನ್ನು ದತ್ತಕ್ಕೆ ತೆಗೆದುಕೊಂಡು ಎಲ್ಲರಿಂದಲೂ ಹಾಡಿ ಹೊಗಳಿಸಿಕೊಂಡೆ. ಸ್ವಂತ ಹೆತ್ತ ತಾಯಿ ತಂದೆಯನ್ನು ನೋಡಿಕೊಳ್ಳದ ಕೃತಘ್ನ ಮಗ ತಾನು….’ ಎಂದುಕೊಳ್ಳುತ್ತಸೇ ಕಣ್ಣಲ್ಲಿ ನೀರು ತುಂಬಿ ಬಂತು. ತನ್ನ ಅಂತರಂಗದ ಗುಟ್ಟು ತನ್ನಲ್ಲಿಯೇ ಬಚ್ಚಿಟ್ಟುಕೊಂಡಿದ್ದೇನೆ ಎನ್ನುವ ಭ್ರಮೆಯಲ್ಲಿ ಇದ್ದ. ಈ ವಿಷಯ ಹೆಂಡತಿಗೆ ಹೇಳಿದರೂ ಪ್ರಯೋಜವಿಲ್ಲ ಎಂದು ತಿಳಿದಿತ್ತು.

“ಓ… ಹೌದಾ… ನಾನು ನಿಮ್ಮ ಪೇರೆಂಟ್ಸ್ ನ್ನು ಭೇಟಿ ಮಾಡಬೇಕೆಂದಿದ್ದೆ. ನನ್ನದು ಬ್ಯಾಡ್‌ ಲಕ್‌ ಇನ್ನೊಮ್ಮೆ ಬಂದಾಗ ನೋಡೋಣ,” ಎಂದು ಶ್ರವಣ್‌ ಕುಮಾರ್‌ ಗೆ ಬೈ ಮಾಡಿದ.

ಆದರೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೋಡಿದ ಕೃಷ್ಣಸ್ವಾಮಿಯ ತಾಯಿ ತಂದೆ, ಶ್ರವಣ್‌ ಕುಮಾರ್‌ ಬಳಿ, “ಇವನು ನಮ್ಮ ಮಗ, ಖಂಡಿತ ಇವನಿಗೆ ನಾವಿರುವ ವಿಷಯ ಹೇಳಬಾರದು. ನಮಗೆ ಅವನನ್ನು ಭೇಟಿಯಾಗಲು ಸ್ವಲ್ಪವೂ ಇಷ್ಟವಿಲ್ಲ, ನಾವು ಈಗ ನಿನ್ನನ್ನೇ ಮಗ ಎಂದುಕೊಂಡಿದ್ದೇವೆ. ಅವನು ಮತ್ತೆ ನಮ್ಮ ಬಳಿ ಬರುವುದು ಬೇಡ,” ಎಂದು ಖಡಾಖಂಡಿತವಾಗಿ ಹೇಳಿದ್ದರು.

ಅದ್ದರಿಂದಲೇ ಶ್ರವಣ್‌ ಕುಮಾರ್‌ ತನ್ನ ದತ್ತು ತಾಯಿ ತಂದೆ ಯಾತ್ರೆಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಬೇಕಾಯಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ